Monday, 28th October 2024

Vishwavani Editorial: ಆತ್ಮಾವಲೋಕನಕ್ಕಿದು ಸಕಾಲ

ಫಿಲಿಪೈನ್ಸ್‌ನಲ್ಲಿ ಟ್ರಾಮಿ ಚಂಡಮಾರುತದ ಹಾವಳಿಯಿಂದಾಗಿ ಭಾರಿ ಮಳೆಯಾಗುತ್ತಿದ್ದು, ಪ್ರವಾಹ ಮತ್ತು ಭೂಕುಸಿತ ಪ್ರಕರಣಗಳಲ್ಲಿ ಸತ್ತವರ ಸಂಖ್ಯೆಯು 100ನ್ನು ದಾಟಿರುವುದು ಕಳವಳಕಾರಿ ಸಂಗತಿ.

ಮತ್ತೊಂದೆಡೆ, ಡಾನಾ ಚಂಡಮಾರುತದ ರುದ್ರನರ್ತನದಿಂದಾಗಿ ಪಶ್ಚಿಮ ಬಂಗಾಳದಲ್ಲಿ ಸತ್ತವರ ಸಂಖ್ಯೆ 4ಕ್ಕೆ ಮುಟ್ಟಿದೆ. ಸಾಲದೆಂಬಂತೆ ಒಡಿಶಾ ರಾಜ್ಯದಲ್ಲಿ 1.75 ಲಕ್ಷ ಎಕರೆಗಳಷ್ಟು ಬೆಳೆ ನಾಶವಾಗಿದೆ ಮತ್ತು 2.80ಲಕ್ಷ
ಎಕರೆಗಳಷ್ಟು ಕೃಷಿಭೂಮಿ ನೀರಿನಲ್ಲಿ ಮುಳುಗಿ ಭಾರಿ ಪ್ರಮಾಣದಲ್ಲಿ ಹಾನಿಯಾಗಿದೆ. ಇದು ಪ್ರಕೃತಿ ವಿಕೋಪದ ಕಥೆಯಾಯಿತು. ಇನ್ನು ಮಾನವ ನಿರ್ಮಿತ ಎಡವಟ್ಟುಗಳ ಕಡೆಗೆ ಗಮನ ಹರಿಸೋಣ.

ಗಾಜಾಪಟ್ಟಿ, ಲೆಬನಾನ್, ಸಿರಿಯಾಗಳ ಮೇಲೆ ಯುದ್ಧದ ನೆಪದಲ್ಲಿ ಕೆಂಡದುಂಡೆಗಳನ್ನು ಉಗುಳಿದ ಇಸ್ರೇಲ್ ಈಗ ಇರಾನ್ ಮೇಲೆ ದಾಳಿಗಿಳಿದಿದೆ. ಇಸ್ರೇಲ್‌ನ 100ಕ್ಕೂ ಹೆಚ್ಚು ಯುದ್ಧವಿಮಾನಗಳು ಮೊನ್ನೆ ಶನಿವಾರ ಬೆಳ್ಳಂ ಬೆಳಗ್ಗೆಯೇ ಆಕ್ರಮಣಕ್ಕೆ ಮುಂದಾಗಿ ಇರಾನ್‌ನ 20ಕ್ಕೂ ಹೆಚ್ಚು ಸೇನಾನೆಲೆಗಳ ಮೇಲೆ ತೀವ್ರದಾಳಿ ನಡೆಸಿ, ಅಲ್ಲಿನ ಶಸಾಸ ಸಂಗ್ರಹವನ್ನು ಹುಡಿಗಟ್ಟಿವೆ. ಅಕ್ಟೋಬರ್ 1ರಂದು ಇಸ್ರೇಲ್ ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಿಗಳ ದಾಳಿ ನಡೆಸಿದ್ದಕ್ಕೆ ಇದು ಪ್ರತೀಕಾರವಂತೆ.

ಇದರಿಂದ ಕೆರಳಿರುವ ಇರಾನ್ ಆಡಳಿತವು, ಇಸ್ರೇಲ್ ವಿರುದ್ಧ ಇನ್ನಷ್ಟು ದೊಡ್ಡ ಪ್ರಮಾಣದ ಆಕ್ರಮಣವನ್ನು ಸಂಘಟಿಸುವುದಾಗಿ ಘೋಷಿಸಿದೆ. ಒಟ್ಟಿನಲ್ಲಿ, ‘ನನ್ನ ಒಂದು ಕಣ್ಣು ಹೋದರೂ ಪರವಾಗಿಲ್ಲ, ಶತ್ರುವಿನ ಎರಡೂ ಕಣ್ಣು ನಾಶವಾಗಬೇಕು’ ಎಂಬ ಪಿಪಾಸುತನ ಇಲ್ಲಿ ಮಡುಗಟ್ಟಿರುವುದು ಸ್ಪಷ್ಟವಾಗಿದೆ.

ಅದು ಪ್ರಕೃತಿ ವಿಕೋಪವೇ ಇರಲಿ, ಮಾನವರ ಸ್ವಯಂಕೃತಾಪರಾಧದ ಫಲವಾಗಿ ನಡೆಯುವ ಇಂಥ ಯುದ್ಧಗಳು-ರಕ್ತಪಾತಗಳೇ ಆಗಿರಲಿ, ಜೀವಹಾನಿ ಮತ್ತು ಸ್ವತ್ತು ನಷ್ಟಗಳು ಅಂತಿಮ ಫಲಶ್ರುತಿ ಎನಿಸಿಕೊಳ್ಳುತ್ತವೆ. ಪ್ರಕೃತಿ ವಿಕೋಪವನ್ನು ತಡೆಯುವುದು ನಮ್ಮ ಕೈಯಲ್ಲಿಲ್ಲ; ಆದರೆ ಮಾನವನಿರ್ಮಿತ ಎಡವಟ್ಟುಗಳಿಗೆ ಕಡಿವಾಣ ಹಾಕಲು, ತನ್ಮೂಲಕ ಈ ಭೂಮಿಯನ್ನು ಶಾಂತಿ-ನೆಮ್ಮದಿಗಳ ಗೂಡಾಗಿ ಪರಿವರ್ತಿಸಲು ಸಾಧ್ಯವಿದೆ.

ಭಾರಿ ಪ್ರಮಾಣದ ಮಾನವ ಪರಿಶ್ರಮ ಮತ್ತು ಹಣಕಾಸು ವೆಚ್ಚವನ್ನು ಅಪೇಕ್ಷಿಸುವ ಯುದ್ಧಗಳೆಂಬ ಪೆಡಂಭೂತ ಗಳನ್ನು ಅಪ್ಪಲು ಮುಂದಾಗುವವರು ಇದನ್ನರಿತು, ಇನ್ನಾದರೂ ಆತ್ಮಾವಲೋಕನ ಮಾಡಿಕೊಳ್ಳಲಿ.

ಇದನ್ನೂ ಓದಿ: Vishwavani Editorial: ಹದ್ದಿನ ಕಣ್ಣುಗಳು ಮಂಜಾಗಿದ್ದೇಕೆ?