ಬೆಂಗಳೂರು ಮಹಾನಗರಿಯ ಬಾಬುಸಾಪಾಳ್ಯ ಬಡಾವಣೆಯಲ್ಲಿ ಕಟ್ಟಡ ಕುಸಿತ ಸಂಭವಿಸಿ ಸಾಕಷ್ಟು ಮಂದಿ ಪ್ರಾಣ ಕಳೆದುಕೊಂಡಿದ್ದು ನಿಜಕ್ಕೂ ದುಃಖದ ಸಂಗತಿ. ಈ ದುರಂತ ಸಂಭವಿಸಿದ ತರುವಾಯದಲ್ಲಿ ಅಕ್ರಮ ಕಟ್ಟಡಗಳಿಗೆ ಸಂಬಂಧಿಸಿದ ಚರ್ಚೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.
ಅಕ್ರಮ ಕಟ್ಟಡಗಳಿಗೆ ಲಗಾಮು ಹಾಕಲು ಪ್ರತ್ಯೇಕ ನೀತಿ-ನಿಯಮಗಳನ್ನು ರೂಪಿಸಲು ಸರಕಾರ ಸಜ್ಜಾಗಿದೆ ಎಂಬ ಮಾಹಿತಿಯೂ ಲಭ್ಯವಾಗಿದೆ. ಆದರೆ, ಅಕ್ರಮವೊಂದು ರಾಜಮಾರ್ಗದಲ್ಲೇ ರಾಜಾರೋಷವಾಗಿ ಜರುಗುತ್ತಿರುವುದರ ಬಗೆಗಿನ ಸುದ್ದಿಯೂ ಜತೆಯಲ್ಲೇ ಹರಿದಾಡುತ್ತಿದೆ. ಅದು, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದೆಡೆಗೆ ಸಾಗುವ ಹೆದ್ದಾರಿಯಲ್ಲೇ 6 ಅಂತಸ್ತಿನ ಕಟ್ಟಡವೊಂದು ರೂಪುಗೊಳ್ಳುತ್ತಿದ್ದರೂ ಅಧಿಕಾರಿಗಳು ಗೊತ್ತಿಲ್ಲದವರಂತೆ ನಟಿಸುತ್ತಿದ್ದಾರೆ ಎಂಬ ಸುದ್ದಿ.
ಸದರಿ ಕಟ್ಟಡ ನಿರ್ಮಾಣದಿಂದಾಗಿ ಸಾವಿರಾರು ಸ್ಥಳೀಯ ಕುಟುಂಬಗಳಿಗೆ ತೊಂದರೆ ಯಾಗುತ್ತಿದೆ ಎಂದು ನಾಗರಿಕ ರೊಬ್ಬರು ಸಂಬಂಧಿತ ಪಿಡಿಒಗೆ ದೂರು ನೀಡಿ, ಈ ಸಂಬಂಧ ಕ್ರಮ ಕೈಗೊಳ್ಳುವಂತೆ ಮೇಲಧಿಕಾರಿಗಳು ಸೂಚಿಸಿ ದ್ದರೂ, ಸ್ಥಳೀಯ ಮಟ್ಟದ ಅಧಿಕಾರಿಗಳು ಅದಕ್ಕೆ ಜಗ್ಗದೆ ಕಟ್ಟಡ ನಿರ್ಮಾತೃವಿಗೇ ಅನುಕೂಲವಾಗುವಂತೆ ಕ್ರಮ ಕೈಗೊಳ್ಳುತ್ತಿದ್ದಾರೆ ಎನ್ನಲಾಗಿದೆ.
ಒಂದೊಮ್ಮೆ ಇದು ನಿಜವೇ ಆಗಿದ್ದಲ್ಲಿ ಅದು ಗಂಭೀರವಾಗಿ ಪರಿಗಣಿಸಬೇಕಾದ ಸಂಗತಿಯೇ. ಜತೆಗೆ, ರಾಜ್ಯದ ಉದ್ದ ಗಲಕ್ಕೂ ಇಂಥ ಅಕ್ರಮ ಕಟ್ಟಡಗಳು ಅದಿನ್ಯಾವ ಪರಿಯಲ್ಲಿ ಮೈದಳೆಯುತ್ತಿರಬಹುದು ಎಂಬುದನ್ನು ಊಹಿಸುವು ದಕ್ಕೂ ಅದು ಇಂಬುಕೊಡಬಲ್ಲದು. ಮೇಲಿನ ನಿದರ್ಶನದಲ್ಲಿ, ನಾಗರಿಕರೊಬ್ಬರು ನೀಡಿದ ದೂರಿಗೆ ಸ್ಪಂದಿಸಿದ ಮೇಲಧಿಕಾರಿಗಳು ಸೂಕ್ತಕ್ರಮ ಕೈಗೊಳ್ಳಲು ಸೂಚಿಸಿದ್ದರೂ ಅದನ್ನು ನಿರ್ಲಕ್ಷಿಸುವಷ್ಟು ಧಾರ್ಷ್ಟ್ಯವನ್ನು ಕೆಳಹಂತದ ಅಧಿಕಾರಿಗಳು ತೋರಿದ್ದಾದರೂ ಹೇಗೆ? ಅದಕ್ಕೆ ಅವರಿಗೆ ಬಲ ನೀಡಿರುವ ಶಕ್ತಿಯಾದರೂ ಯಾವುದು? ಎಂಬುದಿಲ್ಲಿ ಪ್ರಶ್ನೆ.
ಕಾನೂನಿನ ದೃಷ್ಟಿಯಲ್ಲಿ ಎಲ್ಲರೂ ಸಮಾನರು ಎಂಬುದು ಲೋಕಾರೂಢಿಯ ಮಾತು. ಆದರೆ, 100 ರುಪಾಯಿ ಲಂಚ ತೆಗೆದುಕೊಂಡವನನ್ನು ಮುಲಾಜಿಲ್ಲದೆ ಸೇವೆಯಿಂದ ತೆಗೆದುಹಾಕುವ ‘ಮೇಲಿನವರು’ ಇಂಥ ಧಾರ್ಷ್ಟ್ಯ ವನ್ನು, ಗಜಗಾತ್ರದ ಅಕ್ರಮಗಳನ್ನು ನಿರ್ಲಕ್ಷಿಸುವ ಮೂಲಕ ‘ಒಂದು ಕಣ್ಣಿಗೆ ಸುಣ್ಣ, ಮತ್ತೊಂದಕ್ಕೆ ಬೆಣ್ಣೆ’ ಎಂಬ ಧೋರಣೆಯನ್ನು ಅನುಸರಿಸುತ್ತಿದ್ದಾರೆಯೇ ಎಂಬ ಅನುಮಾನ ಕಾಡುತ್ತದೆ.
ಇದನ್ನೂ ಓದಿ: Vishwavani Editorial: ಜನಪ್ರತಿನಿಧಿಗಳ ಆಡಳಿತ ಅಗತ್ಯ