ಇದು ನಿಜಕ್ಕೂ ಆಘಾತಕಾರಿ ವಿದ್ಯಮಾನ. ಅಕ್ಷರಶಃ ವಿಷಗಾಳಿಯ ಗೂಡಾಗಿರುವ ದೆಹಲಿಯಲ್ಲಿ ಗಾಳಿಯ ಗುಣಮಟ್ಟವು ಅತ್ಯಂತ ಅಪಾಯ ಕಾರಿ ಎನ್ನುವಂಥ ಮಟ್ಟವನ್ನು ಮುಟ್ಟಿದೆ. ವಾಯುಮಾಲಿನ್ಯದಿಂದಾಗಿ, ಅದರಲ್ಲೂ ನಿರ್ದಿಷ್ಟವಾಗಿ ಗಾಳಿಯಲ್ಲಿ ತೇಲಾಡುವ ವಿಷಕಾರಿ ಸಣ್ಣಕಣ ಗಳಿಂದಾಗಿ ದೆಹಲಿಯಲ್ಲಿ ಹಗಲಿನ ವೇಳೆಯೂ ಸಂಜೆಗತ್ತಲಿನ ವಾತಾವರಣ ರೂಪುಗೊಳ್ಳುತ್ತಿರುವುದು ನಿರ್ಲಕ್ಷಿಸುವಂಥ ಸಂಗತಿಯಲ್ಲ.
ಕೆಲವೇ ಮೀಟರುಗಳಷ್ಟು ಎದುರಿಗಿರುವ ಜಾಗವಾಗಲೀ, ಎದುರಿನ ರಸ್ತೆಯಾಗಲೀ ಗೋಚರಿಸುತ್ತಿಲ್ಲ ಎಂದರೆ ದೆಹಲಿಯಲ್ಲಿನ ವಾಯುಮಾಲಿನ್ಯ ಅದೆಷ್ಟು ತಾರಕಕ್ಕೆ ಏರಿರಬೇಕು ಎಂಬುದನ್ನು ಒಮ್ಮೆ ಊಹಿಸಿಕೊಳ್ಳಿ. ವಿಷಕಾರಿ ಹೊಗೆಯನ್ನು ಉಗುಳುವ ಕಾರ್ಖಾನೆಗಳು, ವಾಹನಗಳು ಹಾಗೂ ದೆಹಲಿಯ ಹೊರವಲಯದಲ್ಲಿ ಕಾಂಡ, ಸೋಗೆ ಮಂತಾದ ಬೆಳೆಯ ಉಳಿಕೆಗಳನ್ನು ಕೃಷಿಕರು ಸುಡುವಿಕೆ, ಕಟ್ಟಡ ಮತ್ತಿತರ ನಿರ್ಮಾಣ ಕಾಮಗಾರಿಗಳಿಂದಾಗಿ ವಿಪರೀತ ಧೂಳು ಹೊಮ್ಮುವಿಕೆ ಇವೇ ಮುಂತಾದ ಕಾರಣಗಳಿಂದಾಗಿ ರಾಜಧಾನಿ ಪ್ರದೇಶವು ಹೀಗೆ ಉಸಿರುಗಟ್ಟಿಸಿ ಕೊಳ್ಳುವುದು ಪ್ರತಿ ವರ್ಷವೂ ಕಾಣಬರುವ ವಿದ್ಯಮಾನ. ಇದು ಗೊತ್ತಿದ್ದೂ, ಈ ಸಮಸ್ಯೆಗೆ ಪರಿಣಾಮಕಾರಿಯಾಗಿ ಮದ್ದು ಅರೆಯುವುದಕ್ಕೆ ಆಳುಗರ ಕೈಕಟ್ಟಿಹಾಕಿರುವ ಅಂಶ ಯಾವುದು ಎಂಬುದು ಗೊತ್ತಾಗುತ್ತಿಲ್ಲ.
ಅಧಿಕಾರಿಶಾಹಿಯ ನಿರ್ಲಕ್ಷ್ಯ, ರಾಜಕೀಯ ಇಚ್ಛಾಶಕ್ತಿಯ ಕೊರತೆ ಸೇರಿದಂತೆ ಇದಕ್ಕೆ ಹಲವು ಕಾರಣಗಳಿರಬಹುದು. ಅವನ್ನು ಯಥೋಚಿತವಾಗಿ ತಹಬಂದಿಗೆ ತರದಿದ್ದರೆ ಮುಂಬರುವ ದಿನಗಳು ಮತ್ತಷ್ಟು ಆತಂಕಕಾರಿಯಾಗಲಿವೆ ಎಂಬುದರಲ್ಲಿ ಎರಡು ಮಾತಿಲ್ಲ. ಇಲ್ಲಿ ದೆಹಲಿಯ ನಿದರ್ಶನ ವನ್ನು ಪ್ರಾಸಂಗಿಕವಾಗಿ ಉಲ್ಲೇಖಿಸಲಾಗಿದೆಯಷ್ಟೇ. ಬೆಂಗಳೂರು ಸೇರಿದಂತೆ ರಾಷ್ಟ್ರದ ಬಹುತೇಕ ನಗರ-ಮಹಾನಗರಗಳು ದೆಹಲಿಯ ಮೇಲ್ಪಂಕ್ತಿಯನ್ನೇ ಅನುಸರಿಸುವ ಲಕ್ಷಣಗಳಿವೆ. ದೆಹಲಿಗೆ ಹೋಲಿಸಿದಾಗ ಅಲ್ಲೆಲ್ಲ ಪರಿಸ್ಥಿತಿ ಅತಿರೇಕಕ್ಕೆ ಹೋಗದಿರಬಹುದು; ಹಾಗಂತ
ನಿರ್ಲಕ್ಷಿಸಿದರೆ ದೆಹಲಿಯ ಗತಿಯೇ ಮಿಕ್ಕ ನಗರಗಳಿಗೂ ಒದಗುವುದರಲ್ಲಿ ಸಂದೇಹವಿಲ್ಲ.
ನಮ್ಮ ಸುತ್ತಮುತ್ತಲ ಪರಿಸರವು ನಿರ್ಮಲವಾಗಿದ್ದರೆ ಮಾತ್ರವೇ ನಾವು ಆರೋಗ್ಯವಂತರಾಗಿರಲು ಸಾಧ್ಯ. ಕುಡಿಯುವ ನೀರು ಮತ್ತು ಉಸಿರಾಡುವ ಗಾಳಿ ಪರಿಶುದ್ಧವಾಗಿರಬೇಕಾದ್ದು ಆರೋಗ್ಯ ಪಾಲನೆಯ ಆದ್ಯತಾ ನಿಯಮಗಳಲ್ಲೊಂದು. ಆದರೆ, ಆ ನಿಯಮವೇ
ಸಾರಾ ಸಗಟಾಗಿ ಉಲ್ಲಂಘನೆಯಾಗುವಂತಾದರೆ, ಉಸಿರಾಡುವುದೇ ದುಸ್ತರವಾದರೆ ಜೈವಿಕ ಅಸ್ತಿತ್ವಕ್ಕೆ ಅರ್ಥವಿದೆಯೇ?
ಇದನ್ನೂ ಓದಿ: #editorial