Thursday, 12th December 2024

Vishwavani Editorial: ಇವರಿಗೆ ಬುದ್ಧಿ ಹೇಳೋರ‍್ಯಾರು?

ಭ್ರಷ್ಟ ಅಧಿಕಾರಿಗಳ ವಿರುದ್ಧದ ಲೋಕಾಯುಕ್ತ ಕಾರ್ಯಾಚರಣೆಯು ಚುರುಕುಗೊಂಡಿರುವುದು ಶ್ಲಾಘನೀಯ ಬೆಳವಣಿಗೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ರಾಯಚೂರು, ಕಲಬುರ್ಗಿ, ಚಿತ್ರ ದುರ್ಗ, ಕೊಪ್ಪಳ ಜಿಲ್ಲೆಗಳಲ್ಲಿ ವಿವಿಧ ಸ್ತರದ ಅಧಿಕಾರಿಗಳ ಮನೆಗಳ ಮೇಲೆ ಮಂಗಳವಾರ ಏಕಕಾಲಿಕವಾಗಿ ಲೋಕಾಯುಕ್ತ ಅಧಿಕಾರಿಗಳ ದಾಳಿಯಾದ ಸುದ್ದಿಯನ್ನು ಈಗಾಗಲೇ ನೀವು ಓದಿದ್ದೀರಿ.

ಹೀಗೆ ನಡೆದ ದಾಳಿ ಮತ್ತು ಪರಿಶೀಲನೆಯ ಸಂದರ್ಭದಲ್ಲಿ ಅಪಾರ ನಗದು ಮತ್ತು ಮಹತ್ವದ ದಾಖಲೆಗಳು, ಚಿನ್ನ ಮತ್ತು ಬೆಳ್ಳಿಯ ಆಭರಣಗಳು ಪತ್ತೆಯಾಗಿರುವುದು ವರದಿಯಾಗಿದೆ. ಹೀಗೆ ದಾಳಿಗೊಳಗಾದ ಅಧಿಕಾರಿಗಳ ಪೈಕಿ ಒಬ್ಬರು ಬೆಳಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ಲೋಕಾಯುಕ್ತ ಅಧಿಕಾರಿಗಳಿಗೆ ಮನೆಯ ಬಾಗಿಲು ತೆರೆಯದೆ ಸತಾಯಿಸಿರುವುದೂ ತಿಳಿದುಬಂದಿದೆ.

ಇವೆಲ್ಲ ಏನನ್ನು ಹೇಳುತ್ತವೆ ಎಂಬುದು ಸ್ಪಷ್ಟಗೋಚರ. ಭ್ರಷ್ಟಾಚಾರ, ಲಂಚಗುಳಿತನ, ಅಕ್ರಮ ವ್ಯವಹಾರ ಹೀಗೆ ನಮ್ಮ ಅಧಿಕಾರಿಶಾಹಿಯನ್ನು ಅಮರಿಕೊಂಡಿರುವ ವ್ಯಾಧಿಗಳು ಒಂದೆರಡಲ್ಲ. ಇವುಗಳ ನಿವಾರಣೆಯಾಗದ
ಹೊರತು ವ್ಯವಸ್ಥೆ ಆರೋಗ್ಯದಿಂದ ನಳನಳಿಸದು. ಆದಾಯಕ್ಕೆ ಮೀರಿದ ಆಸ್ತಿ, ಹಣ, ಸಂಪತ್ತನ್ನು ಹೊಂದಿದ್ದು ಅದು ಲೋಕಾಯುಕ್ತ ಅಧಿಕಾರಿಗಳಿಗೆ ಗೊತ್ತಾದರೆ ಸಂಕಷ್ಟ ತಪ್ಪಿದ್ದಲ್ಲ ಹಾಗೂ ತರುವಾಯದ ಬೆಳವಣಿಗೆಗಳಿಂದ ಮರ್ಯಾದೆ ಮಣ್ಣುಪಾಲಾಗುತ್ತದೆ ಎಂಬ ಕಹಿವಾಸ್ತವವನ್ನು ಅರಿತಿದ್ದರೂ, ಕೆಲವರು ಭ್ರಷ್ಟಾಚಾರಕ್ಕೆ ಮತ್ತು ಲಂಚಗುಳಿತನಕ್ಕೆ ಒಡ್ಡಿಕೊಳ್ಳುವುದೇಕೋ ಗೊತ್ತಾಗುತ್ತಿಲ್ಲ.

ಪ್ರಾಮಾಣಿಕವಾಗಿ ಮತ್ತು ಪರಿಶ್ರಮದಿಂದ ದುಡಿದ ಹಣ ಮಾತ್ರವೇ ಕೈಯಲ್ಲಿ ಉಳಿಯುವುದು; ಮಿಕ್ಕದ್ದೆಲ್ಲಾ ಯಾವತ್ತಾದರೂ ಒಂದು ದಿನ ಕೈಬಿಟ್ಟು ಹೋಗುವಂಥದ್ದೇ ಎಂಬ ಸರಳ ಸತ್ಯವನ್ನು ಕೆಲವರು ಅರ್ಥ ಮಾಡಿ ಕೊಳ್ಳುವವರೆಗೆ ಇಂಥ ದಾಳಿಗಳು ನಡೆಯುತ್ತಲೇ ಇರಬೇಕಾಗುತ್ತದೆ ಎನಿಸುತ್ತದೆ. ‘ಕಂಡವರ ಕಾಸು ಅಥವಾ ಅಕ್ರಮ ಸಂಪಾದನೆ ಅಮೇಧ್ಯಕ್ಕೆ ಸಮ’ ಎಂಬ ಮಾತನ್ನು ನಮ್ಮ ಮನೆಗಳಲ್ಲಿ ಹಳೆಯ ತಲೆಗಳು ಈಗಲೂ ಹೇಳುವುದನ್ನು ನೀವು ಕೇಳಿರಬಹುದು. ಆದರೆ ಭ್ರಷ್ಟ ಅಧಿಕಾರಿಗಳಿಗೆ ಅಕ್ರಮ ಸಂಪಾದನೆಯೇ ರುಚಿ ಹತ್ತಿಸಿದೆ ಎನಿಸುತ್ತದೆ. ಇವರಿಗೆ ಬುದ್ಧಿ ಹೇಳೋರ‍್ಯಾರು?

ಇದನ್ನೂ ಓದಿ: Vishwavani Editorial: ಗತವೈಭವಕ್ಕೆ ಮರಳಲಿ ಚಂದನವನ