Tuesday, 17th December 2024

Vishwavani Editorial: ಯುವಪೀಳಿಗೆ ಎತ್ತ ಸಾಗುತ್ತಿದೆ?

ಇದು ನಿಜಕ್ಕೂ ಆಘಾತಕಾರಿ ಬೆಳವಣಿಗೆ. ತಾವು ನೆಲೆಸಿರುವ ಪ್ರದೇಶದಲ್ಲಿ ತಮ್ಮದೇ ಆದ ‘ಹವಾ’ ಸೃಷ್ಟಿಸಿ ತಮಗಿರುವ ‘ಗತ್ತು-ಗೈರತ್ತು’ ಗಳನ್ನು ತೋರಿಸಲೆಂದು ಕಲಬುರಗಿಯ ಕೆಲ ಯುವಕರು ತೀಕ್ಷ್ಣವಾದ ತಲ್ವಾರ್ ಹಿಡಿದುಕೊಂಡು ವಿಡಿಯೋ ಮಾಡಿಸಿಕೊಂಡ ಘಟನೆ ವರದಿಯಾಗಿದೆ.

ಇವರು ಜನಸಾಮಾನ್ಯರನ್ನು ಬೆದರಿಸಿ ಭಯದ ವಾತಾವರಣವನ್ನು ಸೃಷ್ಟಿಸಿದ್ದರು ಎನ್ನಲಾಗಿದೆ. ಜತೆಗೆ ಚಿತ್ರೀಕೃತ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಡುವ ಧಾರ್ಷ್ಟ್ಯವನ್ನೂ ಇವರು ಮೆರೆದಿದ್ದಾರಂತೆ. ಇವರ ಪೈಕಿ ಸದ್ಯಕ್ಕೆ ನಾಲ್ವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುವುದು ಸಮಾಧಾನಕರ ಸಂಗತಿ. ‘ಸ್ವಾತಂತ್ರ್ಯ’ ಎಂಬ ಪರಿಕಲ್ಪನೆಯನ್ನು ‘ಸ್ವೇಚ್ಛೆ’ ಎಂದು ತಪ್ಪಾಗಿ ಗ್ರಹಿಸಿಬಿಟ್ಟರೆ ಸಂಭವಿಸುವ ಹತ್ತು ಹಲವು ಅನರ್ಥಗಳಲ್ಲಿ ಇದೂ ಒಂದು.

ಯುವಜನರು ತಮ್ಮ ಓದಿನಿಂದಲೋ, ಕ್ರೀಡಾ ಚಟುವಟಿಕೆ, ಉದ್ಯೋಗ ಅಥವಾ ಆಯ್ದುಕೊಂಡ ವ್ಯಾಪಾರ- ವ್ಯವಹಾರವೇ ಮುಂತಾದ ವಲಯದಲ್ಲಿನ ಅನನ್ಯ ಸಾಧನೆಯಿಂದಲೋ ಆಯಾ ಕುಟುಂಬದ-ಸಮಾಜದ-ಊರಿನ ಹೆಮ್ಮೆಗೆ ಕಾರಣರಾಗಬೇಕು ಎಂಬುದು ಸಹಜ ನಿರೀಕ್ಷೆ ಮತ್ತು ಆಶಯ. ಆದರೆ ಇಂದಿನ ಯುವಜನರಲ್ಲಿ ಕೆಲವರು ಹೀಗೆ ವಾಮಮಾರ್ಗವನ್ನು ತುಳಿಯುತ್ತಿರುವುದು ಖೇದದ ಸಂಗತಿ.

ಇಂಥ ಅತಿರೇಕಕ್ಕೆ ಕಾರಣವಾಗಿರುವ ಅಂಶವಾದರೂ ಯಾವುದು ಎಂಬುದನ್ನು ಇಂಥವರ ಮನೆಯವರು ಮೊದಲಿಗೆ ಕಂಡುಕೊಳ್ಳಬೇಕಷ್ಟೇ. ಮಕ್ಕಳು ಅಡ್ಡದಾರಿ ಹಿಡಿದಿರುವ ಲವಲೇಶದಷ್ಟು ಸುಳಿವು ಸಿಕ್ಕರೂ, ಬಡಿದು ಬುದ್ಧಿ ಹೇಳಿ ತಿದ್ದುವ ಹೊಣೆಗಾರಿಕೆ ಹೆತ್ತವರದ್ದು, ಮನೆಯ ಆಸುಪಾಸಿನ ಹಿರೀಕರದ್ದು. ಅಂಥ ಹೆಜ್ಜೆಯಿಡದಿದ್ದರೆ, ‘ಸೆರಗಿನ ಕೆಂಡ’ದಂಥ ಇಂಥ ಮಕ್ಕಳೇ ಮುಂದೊಮ್ಮೆ ದೊಡ್ಡ ಮಟ್ಟದಲ್ಲಿ ಸಮಾಜಘಾತುಕ ಶಕ್ತಿಗಳಾಗಿ ಬೆಳೆಯುವ ಸಾಧ್ಯತೆಯನ್ನು ತಳ್ಳಿಹಾಕಲಾಗದು.

ಶಾಲಾ ಪಠ್ಯಗಳಲ್ಲಿ ‘ಸನ್ನಡತೆಯ ನೀತಿಪಾಠ’ಕ್ಕೆ ಒತ್ತುನೀಡಬೇಕು ಎಂದು ಶಿಕ್ಷಣ ತಜ್ಞರು ಪದೇಪದೆ ಹೇಳುತ್ತಾ ಬಂದಿರುವುದು ಈ ಕಾರಣಕ್ಕಾಗಿಯೇ. ಸರಕಾರಗಳು ಈ ನಿಟ್ಟಿನಲ್ಲಿ ಆದ್ಯಗಮನವನ್ನು ಹರಿಸಬೇಕು. ಇಲ್ಲದಿದ್ದರೆ, ದೇಶದ ಭವಿಷ್ಯವನ್ನು ರೂಪಿಸಬೇಕಾದವರೇ, ಅದರ ಸದೃಢ ತಳಹದಿಗೆ ಸ್ವತಃ ಕೊಡಲಿಯೇಟು ಹಾಕುವಂಥ ಬೆಳವಣಿಗೆಗೂ ನಾವು ಸಾಕ್ಷಿಯಾಗಬೇಕಾದೀತು. ಹಾಗಾಗದಿರಲಿ…

ಇದನ್ನೂ ಓದಿ: Vishwavani Editorial: ಚದುರಂಗ ಬಲದ ಚತುರ