Wednesday, 18th December 2024

Vishwavani Editorial: ಮಾತಿಗೆ ತಪ್ಪದಿರಲಿ ದ್ವೀಪರಾಷ್ಟ್ರ

ಶ್ರೀಲಂಕಾದ ನೆಲವನ್ನು ಭಾರತದ ವಿರುದ್ಧ ಬಳಸುವುದಕ್ಕೆ ಬಿಡುವುದಿಲ್ಲ ಎಂಬುದಾಗಿ ಅಲ್ಲಿನ ಅಧ್ಯಕ್ಷ ಅನುರಾ ದಿಸಾನಾಯಕೆ ಅವರು ಭಾರತದ ಪ್ರಧಾನಮಂತ್ರಿ ಮೋದಿಯವರಿಗೆ ಭರವಸೆ ನೀಡಿದ್ದಾರೆ. ಈ ಮಾತಿಗೆ ಅವರು ಅನುಗಾಲವೂ ಬದ್ಧರಾಗಿರಲಿ ಎಂಬುದು ಭಾರತೀಯರ ಸಹಜ ನಿರೀಕ್ಷೆ ಮತ್ತು ಆಶಯ. ಏಕೆಂದರೆ, ದೇಶವೊಂದರ ಆಯಕಟ್ಟಿನ ಸ್ಥಾನವನ್ನು ಅಲಂಕರಿಸಿದವರು ಬದಲಾಗುತ್ತಾ ಹೋದಂತೆ, ನೆರೆಹೊರೆಯ ದೇಶದೆಡೆಗಿನ ಅದರ ಒಲವು-ನಿಲುವುಗಳೂ ಕೆಲವೊಮ್ಮೆ ಬದಲಾಗುವುದಿದೆ.

ಅದರಲ್ಲೂ ನಿರ್ದಿಷ್ಟವಾಗಿ ದಶಕಗಳಿಂದಲೂ ನಮ್ಮ ವಿರುದ್ಧ ಕತ್ತಿ ಮಸೆಯುತ್ತಲೇ ಬಂದಿರುವ ಚೀನಾ ಎಂಬ ‘ಮಗ್ಗುಲುಮುಳ್ಳು’ ರಾಷ್ಟ್ರವು, ಭಾರತವನ್ನು ಸುತ್ತುವರಿದಿರುವ ಸಣ್ಣಪುಟ್ಟ ರಾಷ್ಟ್ರಗಳಲ್ಲಿ ಕೆಲವನ್ನು ‘ಸ್ಟ್ರಿಂಗ್ ಆಫ್ ಪರ್ಲ್ಸ್’ ಹಣೆಪಟ್ಟಿಯ ತನ್ನ ಭೂರಾಜಕೀಯ ಸಿದ್ಧಾಂತದ ಜಾಲದಲ್ಲಿ ಸಿಲುಕಿಸಿ, ಅಲ್ಲೆಲ್ಲ ತನ್ನ ಮಿಲಿಟರಿ ನೆಲೆ ಗಳನ್ನು ಸ್ಥಾಪಿಸಲು‌ ಮುಂದಾಗಿದ್ದಿದೆ. ಹೊಂಚುಹಾಕಿ ಭಾರತದ ಮೇಲೆ ಮುರಕೊಂಡು ಬೀಳುವುದೇ ಚೀನಾದ ಈ ಉಪಕ್ರಮದ ಹಿಂದಿನ ಸಂಚು ಎಂಬುದು ಜಗಜ್ಜಾಹೀರಾಗಿರುವ ಸತ್ಯ.

ಶ್ರೀಲಂಕಾದ ಹಂಬನ್‌ಟೋಟಾ ಅಂತಾರಾಷ್ಟ್ರೀಯ ಬಂದರನ್ನು 99 ವರ್ಷಗಳ ಗುತ್ತಿಗೆಗೆ ಹಿಡಿದಿದೆ ಚೀನಾ; ಅದರ ಸಾಲದ ಶೂಲದಲ್ಲಿ ಸಿಲುಕಿ ಒದ್ದಾಡುತ್ತಿರುವ ಶ್ರೀಲಂಕಾ, ಸಹಜವಾಗಿಯೇ ಚೀನಾದ ಇಶಾರೆಗೆ ತಕ್ಕಂತೆ ನರ್ತಿಸ ಬೇಕಾಗಿ ಬರುತ್ತದೆ ಎಂಬುದು ಸಹಜ ಸಮೀಕರಣ. ಹೀಗಿರುವಾಗ, ಭಾರತವು ನಿಶ್ಚಿಂತೆಯಿಂದ ಇರುವುದು ಕೊಂಚ ಕಷ್ಟವೇ. ಚೀನಾದ ಕಪಿಮುಷ್ಟಿಯಿಂದ ಬಿಡಿಸಿಕೊಂಡ ನಂತರವಷ್ಟೇ ಶ್ರೀಲಂಕಾದ ಇಂಥ ಭರವಸೆಯ ಮಾತು ಗಳನ್ನು ಭಾರತ ಸಂಪೂರ್ಣವಾಗಿ ನಂಬಲು ಸಾಧ್ಯ.

ವಿದೇಶಾಂಗ ನೀತಿಯಲ್ಲಿ ಹಾಗೂ ನೆರೆರಾಷ್ಟ್ರಗಳನ್ನು ನಿಭಾಯಿಸುವ ವಿಷಯದಲ್ಲಿ ಸಾಕಷ್ಟು ಪಳಗಿರುವ ಪ್ರಧಾನಿ ಮೋದಿ ಮತ್ತು ವಿದೇಶಾಂಗ ಖಾತೆಯ ಸಚಿವ ಎಸ್.ಜೈಶಂಕರ್ ಅವರಿಗೆ ಇದು ಗೊತ್ತಿರದ ಸಂಗತಿಯೇನಲ್ಲ. ಬಾಂಗ್ಲಾ ದೇಶವು ಭಾರತದ ವಿರುದ್ಧ ತೊಡೆ ತಟ್ಟಿರುವುದು, ಕೆಲ ತಿಂಗಳ ಹಿಂದೆ ಮಾಲ್ಡೀವ್ಸ್ ಕೂಡ ಇಂಥ ಕಿತಾಪತಿಗೆ ಮುಂದಾಗಿ ತರುವಾಯದಲ್ಲಿ ಬಾಲಸುಟ್ಟ ಬೆಕ್ಕಿನಂತಾದದ್ದು ಗೊತ್ತಿರುವ ಸಂಗತಿಯೇ. ಅದೇನೇ ಇರಲಿ, ತಾನಿತ್ತ ಮಾತಿಗೆ ಶ್ರೀಲಂಕಾ ತಪ್ಪದಿರಲಿ ಎಂದಷ್ಟೇ ಸದ್ಯಕ್ಕೆ ಆಶಿಸೋಣ.

ಇದನ್ನೂ ಓದಿ: Vishwavani Editorial: ಚದುರಂಗ ಬಲದ ಚತುರ