Wednesday, 4th December 2024

Vishwavani Editorial: ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದಕ್ಕೆ ಸುಣ್ಣವೇ?


ಜನ್ಮ ತಳೆದಾರಭ್ಯ ಏನಾದರೊಂದು ವಿವಾದಕ್ಕೆ, ಆರೋಪಕ್ಕೆ ಗುರಿಯಾಗುತ್ತಲೇ ಬಂದಿರುವಂಥದ್ದು ‘ಜಿಎಸ್‌ಟಿ’ ಎಂಬ ತೆರಿಗೆ ವ್ಯವಸ್ಥೆ. ಇದರ ಸ್ವರೂಪ ಮತ್ತು ಆಶಯದಲ್ಲಿ ನ್ಯೂನತೆ ಇಲ್ಲದಿದ್ದರೂ ಅನುಷ್ಠಾನದಲ್ಲಿ ಮಾತ್ರ ‘ರಾಜಕೀಯ’ ಇಣುಕು ಹಾಕುತ್ತಿರುವುದರಿಂದಾಗಿ ಸಹಜ ಫಲಾನುಭವಿಗಳಿಂದ ಆಗಿಂದಾಗ್ಗೆ ಅಸಮಾಧಾನದ ದನಿಗಳು ಏಳುತ್ತಲೇ ಇವೆ.

28 ರಾಜ್ಯಗಳಿಗೆ ಕೇಂದ್ರವು ಅನುದಾನ ಬಿಡುಗಡೆ ಮಾಡಿದ ಸಂದರ್ಭದಲ್ಲಿ ಸ್ಪಷ್ಟವಾಗಿ ಕಂಡುಬಂದಿರುವ ತಾರತಮ್ಯವು ಈ ದನಿಗೆ ಮತ್ತಷ್ಟು ಬಲ ತುಂಬಿದೆ ಎನ್ನಬೇಕು. ಇದಕ್ಕೊಂದು ಉದಾಹರಣೆ ನೀಡುವುದಾದರೆ, ರಾಜ್ಯಗಳಿಂದ ಸಂಗ್ರಹಿಸುವ ತೆರಿಗೆ ಹಣದಲ್ಲಿ ಮಧ್ಯಪ್ರದೇಶ ಮತ್ತು ರಾಜಸ್ಥಾನ ರಾಜ್ಯಗಳಿಗೆ ಕ್ರಮವಾಗಿ ಶೇ.7.5 ಹಾಗೂ ಶೇ.6.02ರಷ್ಟು ಪಾಲು ದಕ್ಕಿದ್ದರೆ, ಕರ್ನಾಟಕಕ್ಕೆ ಸಿಕ್ಕಿರುವುದು ಶೇ.3.64ರ ಪಾಲಷ್ಟೇ. ಮಾತ್ರವಲ್ಲ, ತುಲನಾ ತ್ಮಕವಾಗಿ ಹೆಚ್ಚು ಜಿಎಸ್‌ಟಿಯನ್ನು ಪಾವತಿಸುತ್ತಿರುವ ಕರ್ನಾಟಕವನ್ನು ಬದಿಗೆ ಸರಿಸಿ, ಆಂಧ್ರಪ್ರದೇಶಕ್ಕೆ ಹೆಚ್ಚು ಹಣ ನೀಡಿರುವ ಕೇಂದ್ರದ ನಡೆಯನ್ನು ಒಪ್ಪಲಾದೀತೇ? ಹೀಗಾಗಿ, ‘ಅಭಿವೃದ್ಧಿಶೀಲ ರಾಜ್ಯಕ್ಕೆ ಹೀಗೆ ವಿನಾಕಾರಣ ನೀಡಲಾಗುತ್ತಿರುವ ಪೆಟ್ಟನ್ನು ಸಹಿಸಲಾಗದು’ ಎಂದಿರುವ ರಾಜ್ಯದ ಆಳುಗ ವ್ಯವಸ್ಥೆಯು ‘ತೆರಿಗೆ ಹಂಚಿಕೆ ಗಿರುವ ಮಾನದಂಡವನ್ನೇ ಬದಲಾಯಿಸಬೇಕು’ ಎಂದು ಆಗ್ರಹಿಸಿರುವುದು ಸಹಜವಾಗೇ ಇದೆ.

ಏಕೆಂದರೆ, ಹೇಳಿ ಕೇಳಿ ನಮ್ಮದು ಒಕ್ಕೂಟ ವ್ಯವಸ್ಥೆ. ಇದರ ಒಂದೊಂದು ಸಹಭಾಗಿ ರಾಜ್ಯವನ್ನೂ ಸಮಾನ ದೃಷ್ಟಿಕೋನದಿಂದ ನೋಡಬೇಕು; ಅದನ್ನು ಬಿಟ್ಟು ಅನುದಾನದಲ್ಲಿ ಹೀಗೆ ತಾರತಮ್ಯ ಮಾಡಿದರೆ ‘ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದಕ್ಕೆ ಸುಣ್ಣ’ ಎಂಬ ಆಕ್ಷೇಪಣೆಗೆ ಅದು ಪುಷ್ಟಿ ನೀಡುವುದಿಲ್ಲವೇ? ಕೇಂದ್ರ ಮತ್ತು ರಾಜ್ಯದಲ್ಲಿರುವ ಆಳುಗ ವ್ಯವಸ್ಥೆಗಳನ್ನು ನಿರ್ವಹಿಸುತ್ತಿರುವವರು ಬೇರೆ ಬೇರೆ ರಾಜಕೀಯ ಪಕ್ಷ ಅಥವಾ ಮೈತ್ರಿಕೂಟಕ್ಕೆ ಸೇರಿದವರೇ ಇರಬಹುದು; ಅವುಗಳ ನೇಪಥ್ಯದಲ್ಲಿ ರಾಜಕೀಯದ ಇಷ್ಟಾನಿಷ್ಟಗಳು ಗುಪ್ತಗಾಮಿನಿಯಾಗಿ ಹರಿಯುತ್ತಿರಬಹುದು.

ಹಾಗೆಂದ ಮಾತ್ರಕ್ಕೆ ‘ಜನಹಿತ’ದ ವಿಷಯದಲ್ಲೂ ರಾಜಕೀಯ ಮಾಡಿದರೆ ಹೇಗೆ? ಕೇಂದ್ರದ ಇಂಥ ಅನಪೇಕ್ಷಿತ ನಡೆಯಿಂದಾಗಿಯೇ ‘ನಮ್ಮ ತೆರಿಗೆ-ನಮ್ಮ ಹಕ್ಕು’ ಎಂದು ರಾಜ್ಯದವರು ಆಗ್ರಹಿಸುವಂತಾಗುತ್ತದೆ. ಈ ಅಪ್ರಿಯ ಸತ್ಯವನ್ನು ಕೇಂದ್ರ ಸರಕಾರ ಮರೆಯಬಾರದು.

ಇದನ್ನೂ ಓದಿ: New GST: ರಾಜ್ಯದಲ್ಲಿ ಹೊಸ ಜಿಎಸ್‌ಟಿ ಜಟಾಪಟಿ ಶುರು