Wednesday, 30th October 2024

Vishwavani Editorial: ‘ತೋಳ ಬಂತು ತೋಳ’ ಆಗದಿರಲಿ

ಹುಸಿ ಬೆದರಿಕೆ ಒಡ್ಡುವವರು ಸಾಕಷ್ಟು ಚಿಗಿತುಕೊಂಡಂತಿದೆ. ಕಾರಣ, ಬಹುತೇಕರಿಗೆ ಗೊತ್ತಿರುವಂತೆ ಏರ್ ಇಂಡಿಯಾ, ಇಂಡಿಗೋ, ವಿಸ್ತಾರಾ ಹೀಗೆ ದೇಶದ ವಿವಿಧ ವಾಯುಯಾನ ಸಂಸ್ಥೆಗಳಿಗೆ ಸೇರಿದ ೫೦ಕ್ಕೂ ಹೆಚ್ಚು ವಿಮಾನಗಳಿಗೆ ಮೊನ್ನೆ ಸೋಮವಾರ ಬಾಂಬ್ ಬೆದರಿಕೆಗಳು ಬಂದಿವೆ.

ಕಳೆದ ಸುಮಾರು ೧೫ ದಿನಗಳಿಂದ ನಡೆಯುತ್ತಿರುವ ಈ ನೌಟಂಕಿಯನ್ನು ಅವಲೋಕಿಸಿದಾಗ, 410ಕ್ಕೂ ಹೆಚ್ಚು ಇಂಥ ಹುಸಿಬಾಂಬ್ ಬೆದರಿಕೆ ಕರೆಗಳು ಬಂದಂತಾಗಿದೆ. ಇಂಥ ಬೆದರಿಕೆ ಸಂದೇಶಗಳು ಬಂದಾಗಲೆಲ್ಲಾ ಆಯಾ ವಾಯುಯಾನ ಸಂಸ್ಥೆಗಳು ಅಗತ್ಯ ಭದ್ರತಾ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳುತ್ತಿವೆಯಾದರೂ, ಆಗ ತಲೆದೋರುವ ಅಸ್ತವ್ಯಸ್ತತೆ- ಅಸಹಾಯಕತೆಗಳು ಅಸಹನೀಯವಾಗಿರುತ್ತವೆ.

ಅಷ್ಟೇ ಅಲ್ಲ, ಭೀತಿ, ತಲ್ಲಣ, ಅಸುರಕ್ಷತೆಯ ಭಾವನೆಗಳು ಪ್ರಯಾಣಿಕ ಸಮುದಾಯವನ್ನೂ ತೀವ್ರವಾಗಿ ಕಾಡುತ್ತವೆ ಎಂಬುದರಲ್ಲಿ ಎರಡು ಮಾತಿಲ್ಲ. ಆಂಧ್ರಪ್ರದೇಶದ ತಿರುಪತಿಯಲ್ಲಿರುವ ಇಸ್ಕಾನ್ ದೇಗುಲಕ್ಕೂ ಸೋಮವಾರ ಮತ್ತೊಮ್ಮೆ ಬಾಂಬ್ ಬೆದರಿಕೆಯ ಸಂದೇಶ ಬಂದಿದೆ. 3 ದಿನಗಳ ಅಂತರದಲ್ಲಿ ಇದು 4ನೇ ಬೆದರಿಕೆ ಸಂದೇಶವಾಗಿ ರುವುದರಿಂದ ದೇಗುಲದಲ್ಲಿ ಭದ್ರತೆಯನ್ನು ಹೆಚ್ಚಿಸಬೇಕಾಗಿ ಬಂದಿದೆ.

ಇವು ಸುಲಭಕ್ಕೆ ತಳ್ಳಿಹಾಕುವಂಥ ಸಂಗತಿಗಳಲ್ಲ. ಏಕೆಂದರೆ, ಶುರುವಿನಲ್ಲಿ ಹೀಗೆ ಬಾರಿಬಾರಿಗೆ ಹುಸಿ ಬೆದರಿಕೆಗಳನ್ನು ಒಡ್ಡಿದವರು, ಕೆಲ ಕಾಲದ ನಂತರ ‘ತೋಳ ಬಂತು ತೋಳ’ ಕಥೆಯ ರೀತಿಯಲ್ಲಿ ನಿಜವಾಗಿಯೂ ತೀವ್ರದಾಳಿಗೆ ಮುಂದಾಗಬಹುದು. ಜನದಟ್ಟಣೆ ಇರುವ ಪ್ರದೇಶಗಳಲ್ಲೇ ಇಂಥ ದಾಳಿಗಳಾಗುವ ಸಾಧ್ಯತೆ ಜಾಸ್ತಿಯಿರುತ್ತದೆ.
ಆದ್ದರಿಂದ, ಭದ್ರತೆಯ ಹೊಣೆ ಹೊತ್ತವರು ಮೈಯೆಲ್ಲಾ ಕಣ್ಣಾಗಿರಬೇಕಾದ ಅನಿವಾರ್ಯತೆ ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಪಾಕಿಸ್ತಾನ ಮೂಲದ ಐಎಸ್‌ಐ ಉಗ್ರರು ಸೇರಿದಂತೆ, ಭಾರತದ ಏಕತೆ, ಭದ್ರತೆ, ಅಖಂಡತೆ ಮತ್ತು
ಸಾರ್ವಭೌಮತೆಗಳನ್ನು ಪುಡಿಗಟ್ಟಲು ಸೂಕ್ತ ಸಮಯಕ್ಕಾಗಿ ಹೊಂಚುಹಾಕುತ್ತಿರುವ ಕುತ್ಸಿತ ಶಕ್ತಿಗಳು ಸಾಕಷ್ಟಿರ ಬಹುದು.

ಅದರಲ್ಲೂ, ಕಳೆದೊಂದು ದಶಕದಲ್ಲಿ ಭಾರತವು ವಿಶ್ವ ಭೂಪಟದಲ್ಲಿ ಢಾಳಾಗಿ ಕಾಣಿಸಿಕೊಳ್ಳತೊಡಗಿದಾಗಿನಿಂದ ಇಂಥವರ ಹೊಟ್ಟೆಯುರಿ ಜಾಸ್ತಿಯೇ ಆಗಿದೆ ಎನ್ನಬೇಕು. ಒಟ್ಟಿನಲ್ಲಿ, ನಮ್ಮ ಹುಷಾರಿನಲ್ಲಿ ನಾವಿರೋಣ, ಅಷ್ಟೇ.

ಇದನ್ನೂ ಓದಿ: Hoax Bomb Threat : ವಿಮಾನಗಳಿಗೆ ಹುಸಿ ಬಾಂಬ್ ಬೆದರಿಕೆ; ನಾಗ್ಪುರ ಮೂಲದ ವ್ಯಕ್ತಿಯ ಪತ್ತೆ ಹಚ್ಚಿದ ಪೊಲೀಸರು