Saturday, 14th December 2024

Vishwavani Editorial: ಗುಕೇಶ್ ಗೆಲುವು ಭಾರತದ ಪಾಲಿಗೆ ಸುವರ್ಣ ವರ್ಷ

ಭಾರತದ ಗ್ರ್ಯಾಂಡ್‌ಮಾಸ್ಟರ್ ಗುಕೇಶ್ ದೊಮ್ಮರಾಜು ಅವರು 18 ವರ್ಷ ವಯಸ್ಸಿನ ವಿಶ್ವ ಚೆಸ್ ಚಾಂಪಿಯನ್ ಪಟ್ಟಕ್ಕೆ ಏರಿ ಇತಿಹಾಸ ಸೃಷ್ಟಿಸಿದ್ದಾರೆ. ಅತಿ ಕಿರಿಯ ವಿಶ್ವ ಚಾಂಪಿಯನ್ ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ. ಕ್ರಿಕೆಟ್ ಜನಪ್ರಿಯವಾಗಿರುವ ದೇಶದಲ್ಲಿ ಚೆಸ್ ಕ್ರಾಂತಿಗೆ ನಾಂದಿ ಹಾಡಿದ ವಿಶ್ವನಾಥನ್ ಆನಂದ್ ಈ ಹಿಂದೆ ಐದು
ಬಾರಿ ವಿಶ್ವ ಚಾಂಪಿಯನ್ ಆಗಿದ್ದರು.

ಈಗ ಗುಕೇಶ್, ವಿಶ್ವ ಚಾಂಪಿಯನ್ ಆದ ಭಾರತದ ಎರಡನೇ ಆಟಗಾರ ಎನಿಸಿದ್ದಾರೆ. ಚೀನಾದ ಡಿಂಗ್ ಲಿರೆನ್ ವಿರುದ್ಧ ವಿಶ್ವ ಚಾಂಪಿಯನ್‌ಶಿಪ್‌ನ 14 ಪಂದ್ಯಗಳ ಫೈನಲ್ ಅನ್ನು 7.5-6.5 ರಿಂದ ಗೆದ್ದು ಬಾಲ್ಯದ ಕನಸನ್ನು ನನಸಾಗಿಸಿಕೊಂಡಿದ್ದಾರೆ. ಗುಕೇಶ್ ಸಾಕಷ್ಟು ಪೂರ್ವತಯಾರಿಯೊಂದಿಗೆ ಆಟವಾಡಿದರು. ಹೀಗಾಗಿ ಅದ್ಭುತ ಆಟದ ಮೂಲಕ ಗೆಲುವು ತಮ್ಮದಾಗಿಸಿಕೊಂಡರು.

ಅವರ ವಿಜಯದ ಕಿರೀಟವು ಭಾರತದ ಪಾಲಿಗೆ ಸುವರ್ಣ ವರ್ಷ ಎಂದೇ ಹೇಳಬಹುದು. ವಿಶ್ವ ಚಾಂಪಿಯನ್‌ಶಿಪ್ ಆಡುವುದು ಪ್ರತಿಯೊಬ್ಬ ಚೆಸ್ ಆಟಗಾರನ ಕನಸು. ಆದರೆ ದೀರ್ಘ ಅವಧಿಯ ಫೈನಲ್ ಆಟ ಆಡಲು ಬಹಳಷ್ಟು ಸಿದ್ಧತೆಯ ಜತೆಗೆ ಗಟ್ಟಿ ಮನೋಬಲ ಬೇಕು. ಗುಕೇಶ್ ಅವರ ಕಠಿಣ ಪರಿಶ್ರಮ, ಕಂಡಿದ್ದ ಕನಸು, ಅದಕ್ಕೆ ನೀರೆರೆ ಯಲು ಪೋಷಕರ ತ್ಯಾಗ ಮತ್ತು ಫೈನಲ್‌ನಲ್ಲಿ ಅವರ ತಂಡದ ಸಿದ್ಧತೆ ಎಲ್ಲವೂ ಫಲ ನೀಡಿವೆ.

ಆಟದಲ್ಲಿ ಅಪೂರ್ವ ಏಕಾಗ್ರತೆ, ಬೋರ್ಡ್‌ನಲ್ಲಿ ಪ್ರತಿ ನಡೆಗೆ ಮೊದಲು ಆಳವಾದ ಲೆಕ್ಕಾಚಾರ, ಪಂದ್ಯ ಡ್ರಾ ಸ್ಥಿತಿಯಲ್ಲಿದ್ದರೂ ಕೊನೆಯ ಹಂತದವರೆಗೂ ಅವಕಾಶ ಅರಸುವ ಸಕಾರಾತ್ಮಕ ಮನೋಭಾವ- ಇವೆ ಗುಣಗಳು ಅವರಿಗೆ ಅನುಭವಿ ಎದುರಾಳಿಯ ವಿರುದ್ಧ ಸೆಣಸಾಡುವಲ್ಲಿ ಧೈರ್ಯ ಮೂಡಿಸಿವೆ.

ಗುಕೇಶ್ ಅವರ ಈಗಿನ ಸಾಧನೆಯು ದೇಶದಲ್ಲಿ ಚೆಸ್ ಬೆಳವಣಿಗೆಗೆ ಇನ್ನಷ್ಟು ಶಕ್ತಿ ತುಂಬುವುದರಲ್ಲಿ ಅನುಮಾನ ವಿಲ್ಲ. ಭಾರತ ಎಂಬುದು ಅದ್ಭುತ ಪ್ರತಿಭೆಗಳಿರುವ ರಾಷ್ಟ್ರ. ಇಲ್ಲಿ ಚೆಸ್‌ಗೆ ಮಾತ್ರವಲ್ಲ ಎಲ್ಲ ಕ್ಷೇತ್ರಗಳಲ್ಲೂ ಭವಿಷ್ಯ ಉಜ್ವಲವಾಗಿದೆ. ಹೊಸ ಸಾಧನೆಗಳು ಹಾಗೂ ದಾಖಲೆಗಳು ನಿರ್ಮಾಣವಾಗಬೇಕಿವೆ.

ಇದನ್ನೂ ಓದಿ: Vishwavani Editorial: ಗತವೈಭವಕ್ಕೆ ಮರಳಲಿ ಚಂದನವನ