ಕಲಬುರಗಿಯಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಸಂಬಂಧ ಹಲವು ಯೋಜನೆಗಳನ್ನು ಪ್ರಕಟಿಸಲಾಗಿದೆ. ಸುಮಾರು 46 ಯೋಜನೆಗಳಿಗೆ 11770 ಕೋಟಿ ರೂ. ಅನುದಾನ ನೀಡಲು ಸಂಪುಟ ಒಪ್ಪಿಗೆ ನೀಡಿದೆ. ಬೀದರ್ ಮತ್ತು ರಾಯಚೂರು ಪಟ್ಟಣ ಗಳನ್ನು ನಗರಪಾಲಿಕೆಯಾಗಿ ಪರಿವರ್ತಿಸುವ, ಬೀದರ್ ಮತ್ತು ಕಲಬುರಗಿ ವ್ಯಾಪ್ತಿಯ ಹಳ್ಳಿಗಳಿಗೆ ಕುಡಿಯುವ ನೀರಿಗಾಗಿ 7200 ಕೋಟಿ ರು. ಯೋಜನೆಗೂ ಸಂಪುಟ ಅನುಮತಿಸಿದೆ.
ಇವೆಲ್ಲವೂ ಅಂದುಕೊಂಡಂತೆ ನಡೆದರೆ ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಹೊಸ ವೇಗ ಪಡೆಯುವುದರಲ್ಲಿ
ಸಂಶಯವಿಲ್ಲ. ಈ ಭಾಗದ ಅಭಿವೃದ್ಧಿ ಹೆಸರಿನಲ್ಲಿ ಈ ಹಿಂದೆಯೂ ಸಾಕಷ್ಟು ಯೋಜನೆಗಳನ್ನು ಘೋಷಿಸಲಾಗಿದೆ. ಆದರೆ ಹಲವು ಯೋಜನೆಗಳು ಇನ್ನೂ ಸಾಕಾರಗೊಂಡಿಲ್ಲ. ಮುಖ್ಯವಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ
ಅವರು ಕೇಂದ್ರ ರೈಲ್ವೆ ಸಚಿವರಾಗಿದ್ದಾಗ ಘೋಷಿಸಿದ ಹಲವು ಯೋಜನೆಗಳು ಇನ್ನೂ ಸಾಕಾರಗೊಂಡಿಲ್ಲ, ಕಲಬುರ್ಗಿ ವಿಭಾಗಕ್ಕೆ ಪ್ರತ್ಯೇಕ ರೈಲ್ವೆ ಮಂಡಳಿ ರಚಿಸುವ ಪ್ರಸ್ತಾಪಕ್ಕೂ ಕೇಂದ್ರದ ಅನುಮೋದನೆ ದೊರೆತಿಲ್ಲ.
ರಾಜ್ಯ ಸರಕಾರ ಪ್ರತಿ ವರ್ಷ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿ ಹೆಸರಿನಲ್ಲಿ ಹೆಚ್ಚುವರಿ ಅನುದಾನ ಘೋಷಿ ಸುತ್ತಾ ಬಂದಿದೆ. ಇದರ ಫಲಶ್ರುತಿ ಈ ಭಾಗದ ಜಿಲ್ಲೆಗಳಲ್ಲಿ ಕಾಣಿಸಬೇಕಿತ್ತು. ಆದರೆ ಉದ್ಯೋಗ ಅರಸಿ ಕಲ್ಯಾಣ ಕರ್ನಾಟಕದಿಂದ ಬೆಂಗಳೂರು, ಮುಂಬಯಿ ಮತ್ತು ರಾಜ್ಯ ದಕ್ಷಿಣ ಜಿಲ್ಲೆಗಳಿಗೆ ಗುಳೆ ಹೋಗುವವರ ಸಂಖ್ಯೆ ಕಡಿಮೆ ಆಗಿಲ್ಲ.
೨೦೧೨ರಲ್ಲಿ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ವೇಳೆ ಸಂವಿಧಾನ ತಿದ್ದುಪಡಿ ತಂದು 371ಜೆಯಡಿ ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಲಾಗಿತ್ತು. ಇದಾಗಿ 12 ವರ್ಷಗಳು ಕಳೆದರೂ ಕೇಂದ್ರದಿಂದ ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಅನುದಾನವೇನೂ ದೊರೆತಿಲ್ಲ. ರಾಜ್ಯದಲ್ಲಿ ಪ್ರಾದೇಶಕ ಅಸಮತೋಲನ ನಿವಾರಣೆ ಕುರಿತಂತೆ ನಂಜುಂಡಪ್ಪ ಸಮಿತಿ ವರದಿ ನೀಡಿ 22 ವರ್ಷಗಳು ಕಳೆದಿವೆ. ಈಗ ಈ ಭಾಗದ ತಾಲ್ಲೂಕುಗಳ ಸ್ಥಿತಿಗತಿಯ ಪರಿಶೀಲನೆ ನಡೆಸಲು ಡಾ.ಗೋವಿಂದ ರಾವ್ ಅವರ ಅಧ್ಯಕ್ಷತೆಯಲ್ಲಿ ಮತ್ತೊಂದು ಸಮಿತಿ ರಚಿಸಲಾಗಿದೆ. ಸಮಿತಿ, ವರದಿ, ಘೋಷಣೆಗಳು, ಭರವಸೆಗಳು ಕಾರ‍್ಯರೂಪಕ್ಕೆ ಬರಬೇಕಾದ ಸಮಯವಿದು. ಇದಕ್ಕಾಗಿ ಇಲ್ಲಿನ ಹಿರಿಯ ರಾಜಕೀಯ ನಾಯಕರು ಹೆಚ್ಚಿನ ಕಾಳಜಿ ವಹಿಸಬೇಕಾಗಿದೆ.
ಇದನ್ನೂ ಓದಿ: CM Siddaramaiah: ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಕಾಂಗ್ರೆಸ್ ಸರಕಾರ ಬದ್ಧ: ಸಿಎಂ ಸಿದ್ದರಾಮಯ್ಯ