ಸಾಯೋ ತನಕ ಶನಿಕಾಟವಾದರೆ ಬಾಳೋದ್ಯಾವಾಗ? ಎಂಬ ಮಾತನ್ನು ಕೇಳದಿರುವವರು ಅಪರೂಪ. ದೈನಂದಿನ ಜೀವನದ ಬಹುಭಾಗವನ್ನು ಕಿರಿಕಿರಿಯ ನಡುವೆಯೇ ಕಳೆಯಬೇಕಾಗಿ ಬರುವವರಿಂದ ಅಪ್ರಯತ್ನವಾಗಿ ಹೊಮ್ಮುವ ಮಾತಿದು. ನಮ್ಮ ಗಡಿಭಾಗದಲ್ಲಿ ಸಕ್ರಿಯವಾಗಿರುವ ರಾಜಕೀಯ ಪಕ್ಷವೊಂದರ ಕಿರಿಕಿರಿ ಮತ್ತು ಆಟಾಟೋಪವನ್ನು
ನೋಡಿದಾಗೆಲ್ಲ ಈ ಮಾತು ನೆನಪಾಗುತ್ತದೆ. ಆ ಪಕ್ಷದ ಹೆಸರು ‘ಮಹಾರಾಷ್ಟ್ರ ಏಕೀಕರಣ ಸಮಿತಿ’, ಸಂಕ್ಷಿಪ್ತವಾಗಿ ‘ಎಂಇಎಸ್’.
ವಿಪರ್ಯಾಸವೆಂದರೆ, ಇದು ಏಕೀಕರಣಕ್ಕೆ ಅಥವಾ ಒಗ್ಗಟ್ಟಿಗೆ ವಿರುದ್ಧವಾಗಿರುವ ಕೆಲಸಗಳಲ್ಲೇ ಕೆಲವೊಮ್ಮೆ ತೊಡಗಿಸಿಕೊಳ್ಳುವುದಿದೆ! ಅದರಲ್ಲೂ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸುವ ನವೆಂಬರ್ 1ರ ದಿನ ಬಂದಾ ಗಲೆಲ್ಲ ಎಂಇಎಸ್‌ನವರಲ್ಲಿ ಅದೇನೋ ವಿಲಕ್ಷಣ ತುಡಿತ ಶುರುವಾಗಿಬಿಡುತ್ತದೆ. ಈ ವರ್ಷವೂ ಇದಕ್ಕೆ ಹೊರತಾಗಿಲ್ಲ ಎನಿಸುತ್ತದೆ.
ಕಾರಣ, “ನವೆಂಬರ್ ೧ರಂದು ಜಿಲ್ಲಾಡಳಿತವು ಕರಾಳ ದಿನಾಚರಣೆಗೆ ಅನುಮತಿ ಕೊಡಲಿ ಬಿಡಲಿ, ಕರಾಳ ದಿನಾಚರಣೆಗೆ ಎಲ್ಲರೂ ಸಿದ್ಧತೆ ಮಾಡಿಕೊಂಡು ಸೈಕಲ್ ರ‍್ಯಾಲಿಯಲ್ಲಿ ಭಾಗವಹಿಸಬೇಕು” ಎಂಬುದಾಗಿ ಎಂಇಎಸ್‌ನ ತಥಾಕಥಿತ ಮುಖಂಡರೊಬ್ಬರು ಬೆಳಗಾವಿಯಲ್ಲಿ ಫರ್ಮಾನು ಹೊರಡಿಸಿದ್ದಾರೆ. ತನ್ಮೂಲಕ ಎಂಇಎಸ್‌ನ ಹಳೆ ಚಾಳಿಯ ಮುಂದುವರಿಕೆಗೆ ತಿದಿಯೊತ್ತಿದ್ದಾರೆ.
ಬೆಳಗಾವಿಯು ಕರ್ನಾಟಕದ ಅವಿಭಾಜ್ಯ ಅಂಗ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ಅಲ್ಲಿ ಠಿಕಾಣಿ ಹೂಡಿರುವ
ಎಂಇಎಸ್‌ನವರು ಹೀಗೆ ಕರ್ನಾಟಕ ವಿರೋಧಿ ಮತ್ತು ಕನ್ನಡ ವಿರೋಧಿ ಧೋರಣೆಗಳನ್ನು ತಳೆಯುವುದು, ತನ್ಮೂಲಕ ಕನ್ನಡಿಗರನ್ನು ವಿನಾಕಾರಣ ಕೆರಳಿಸುವುದು ಸಮಾಜದ ಶಾಂತಿ-ನೆಮ್ಮದಿಗೆ ಸಂಚಕಾರ ತರುವ
ಯತ್ನವಲ್ಲದೆ ಇನ್ನೇನು? ಕರ್ನಾಟಕ ಮತ್ತು ಮಹಾರಾಷ್ಟ್ರದ ನಡುವೆ ಇರುವ ಗಡಿವಿವಾದವನ್ನು ಬಗೆಹರಿಸುವು ದಕ್ಕೆಂದೇ ಪ್ರತ್ಯೇಕ ವೇದಿಕೆಯಿದೆ, ಸಂದರ್ಭವಿದೆ, ವ್ಯವಸ್ಥೆಗಳಿವೆ. ಆ ಸಂಬಂಧದ ಮಾತುಕತೆಗೆ, ಚರ್ಚೆಗಳಿಗೆ ಅದರದ್ದೇ ಆದ ಸಂಭಾವಿತ ರೀತಿಯಿದೆ, ಯಥೋಚಿತ ಶಿಷ್ಟಾಚಾರಗಳಿವೆ.
‘ಬೆಂಕಿ ಉಗುಳುವ ಮಾತು’ಗಳಿಂದ ಸಮಸ್ಯೆಯು ಉಲ್ಬಣವಾಗುವುದೇ ವಿನಾ ಇತ್ಯರ್ಥವಾಗುವುದಿಲ್ಲ. ಹೀಗಾಗಿ ಎಂಇಎಸ್‌ನ ನಾಯಕರೆನಿಸಿಕೊಂಡವರು ಸೂಕ್ಷ್ಮ ವಿಷಯಗಳ ಕುರಿತು ಮಾತಾಡುವಾಗ ಸಂಯಮವನ್ನು
ಕಾಯ್ದುಕೊಳ್ಳಬೇಕು. ಕನ್ನಡಿಗರ ಸಹಜ ಸ್ವಭಾವವಾದ ಸೌಜನ್ಯವನ್ನು ಅವರು ದೌರ್ಬಲ್ಯವೆಂದು ಪರಿಗಣಿಸಬಾರದು.
ಇದನ್ನೂ ಓದಿ: Vishwavani Editorial: ಬಿಷ್ಣೋಯಿ ಗ್ಯಾಂಗ್ ದೇಶಕ್ಕೆ ಕಂಟಕವಾದೀತು