Sunday, 15th December 2024

ರಾಜಧಾನಿ ‘ವಿಷನ್’ ಮಹತ್ವದ ಯೋಜನೆ

ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಪ್ರಗತಿಯಿಂದಾಗಿ ದೇಶದ ಗಮನ ಸೆಳೆದಿರುವ ಬೆಂಗಳೂರು, ಮತ್ತಷ್ಟು ಅಭಿವೃದ್ಧಿ ಸಾಧಿಸುವ ಪ್ರಯತ್ನದಲ್ಲಿದೆ. ಮುಂದಿನ 20 ವರ್ಷಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ರೂಪಿಸಲಾಗಿರುವ ‘ಮಿಷನ್ ಬೆಂಗಳೂರು – 2022’ ರೂಪಿಸಲಾಗಿದ್ದು, ಇದರ ಅನುಷ್ಠಾನದಿಂದ ಬೆಂಗಳೂರಿನ ಚಿತ್ರಣವೇ ಬದಲಾಗುವ ನಿರೀಕ್ಷೆಗಳು ವ್ಯಕ್ತ ವಾಗುತ್ತಿದೆ.

ಈ ಯೋಜನೆಯಿಂದ ಬೆಂಗಳೂರು ಸುಂದರ ನಗರವಾಗಿ ರೂಪುಗೊಳ್ಳುವುದು ಮಾತ್ರವಲ್ಲದೆ, ಉದ್ಯಮಸ್ನೇಹಿಯಾಗಿ ಬದಲಾಗಲು ಸಹ ಸಹಕಾರಿಯಾಗಲಿದೆ. ಈ ಯೋಜನೆಯ ಬಗ್ಗೆ ನೀಲನಕ್ಷೆ ತಯಾರಾಗಿದ್ದು, ಇನ್ನೆರಡು ವರ್ಷಗಳಲ್ಲಿ ಯೋಜನೆ ಅನುಷ್ಠಾನವಾಗಲಿದೆ. ಈ ಯೋಜನೆಯ ಅನುಷ್ಠಾನದಿಂದ ಬೆಂಗಳೂರು ವಿಶ್ವದರ್ಜೆಯ ನಗರವಾಗಿ ರೂಪುಗೊಳ್ಳಲಿದೆ.

ಈ ಯೋಜನೆಯಲ್ಲಿ ಸ್ವಚ್ಛತೆ, ಸುಗಮ ಸಂಚಾರ, ತ್ಯಾಜ್ಯ ನಿರ್ವಹನೆಗೆ ಆದ್ಯತೆ ನೀಡಿರುವುದರಿಂದ ಇದೊಂದು ಮಹತ್ವದ ಯೋಜನೆಯಾಗಿದೆ. ಪ್ರಧಾನಿ ಮೋದಿಯವರ ಮಾತುಗಳಿಂದ ಪ್ರೇರಿತರಾಗಿ ಈ ಯೋಜನೆಯನ್ನು ರಚಿಸಿರುವುದಾಗಿ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಿಸಿದ್ದಾರೆ.

ಈಗಾಗಲೇ ಉದ್ಯಮಶೀಲತೆ – ತಂತ್ರಜ್ಞಾನದ ಕಾರಣದಿಂದ ಮಾತ್ರವಲ್ಲದೆ ಗಾರ್ಡನ್ ಸಿಟಿ ಎಂಬ ಹೆಗ್ಗಳಿಕೆಗೂ ಪಾತ್ರವಾಗಿರುವ ಬೆಂಗಳೂರು ಇತ್ತೀಚಿನ ದಿನಗಳಲ್ಲಿ ಮಾಲಿನ್ಯದ ಸಮಸ್ಯೆಯನ್ನು ಅನುಭವಿಸಿತ್ತು. ಲಾಕ್‌ಡೌನ್ ಸಮಯದಲ್ಲಿ ಶೇ.50 ಪ್ರಮಾಣದ ವಾಯು ಮಾಲಿನ್ಯ ಕುಸಿತಕಂಡಿದ್ದು, ಇದೀಗ ಮತ್ತು ಏರಿಕೆಯತ್ತ ಸಾಗುತ್ತಿದೆ.

ಆದ್ದರಿಂದ ಈ ಹಿಂದೆ ಗಾರ್ಡನ್ ಸಿಟಿ ಎಂಬ ಪಾತ್ರವಾಗಿದ್ದ ಹೆಗ್ಗಳಿಕೆಯನ್ನು ಉಳಿಸಿಕೊಳ್ಳುವುದರ ಜತೆಗೆ ಮಾಲಿನ್ಯ ನಿಯಂತ್ರಣ, ಹಸಿರೀಕರಣಕ್ಕೂ ಆದ್ಯತೆ ನೀಡಬೇಕಿದೆ. ರಾಜ್ಯದ ಅಭಿವೃದ್ಧಿ ನಿಟ್ಟಿನಲ್ಲಿ ರಾಜಧಾನಿಯನ್ನು ಸುಂದರಗೊಳಿಸುವ ‘ಮಿಷನ್ ಬೆಂಗಳೂರು’ ಯೋಜನೆ ಮಹತ್ವದ್ದಾಗಿದೆ.