Sunday, 15th December 2024

ಮತ‘ಭಿಕ್ಷೆ’ ಬೇಡುವ ಕುಬೇರರು

ರಾಜ್ಯ ಚುನಾವಣೆಗೆ ನಾನಾ ಪಕ್ಷಗಳ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಭರದಿಂದ ಸಾಗಿದೆ. ನಾಮಪತ್ರ ಸಲ್ಲಿಕೆಗೆ ಇನ್ನು ಎರಡು ದಿನ ಮಾತ್ರ ಬಾಕಿ ಉಳಿದಿದ್ದು, ಸಹಜವಾಗಿ ಹುರಿಯಾಳುಗಳು ತಮ್ಮ ಸ್ಪರ್ಧೆಯ ನಿರ್ಧಾರವನ್ನು ಖಚಿತ ಗೊಳಿಸುತ್ತಿದ್ದಾರೆ. ಇದೇನೂ ಹೊಸತಲ್ಲ. ಆದರೆ, ಈ ಹಂತದಲ್ಲಿ ನಾಮಪತ್ರದ ಜತೆಗೇ ಸಲ್ಲಿಸಬೇಕಾದ ಪ್ರಮಾಣಪತ್ರದೊಂದಿಗೆ ಅಭ್ಯರ್ಥಿ ತನ್ನ ಆಸ್ತಿ ಮತ್ತು ಬಾಧ್ಯತೆಗಳನ್ನು ಘೋಷಣೆಯಲ್ಲಿ ಬಹಿರಂಗಗೊಳ್ಳುತ್ತಿರುವ ಸಂಗತಿಗಳು ನಿಜಕ್ಕೂ ಅಚ್ಚರಿ ಮತ್ತು ಆತಂಕ ವನ್ನು ಹುಟ್ಟಿಸುತ್ತಿವೆ.

ಒಬ್ಬೊಬ್ಬ ಅಭ್ಯರ್ಥಿಗಳೂ ಮರಿ ಕುಬೇರರೇ! ಸಾವಿರಾರು ಕೋಟಿ ರುಪಾಯಿಗಳವರೆಗಿನ ಆಸ್ತಿ ಹೊಂದಿರುವುದು ಒಂದೆಡೆ ಯಾದರೆ, ವರ್ಷದಿಂದ ವರ್ಷಕ್ಕೆ ಅವರ ಆಸ್ತಿ ಪ್ರಮಾಣ ವೃದ್ಧಿಯಾಗುತ್ತಲೇ ಸಾಗಿದೆ. ಒಬ್ಬ ಅಭ್ಯರ್ಥಿಯ ಆಸ್ತಿ ಮೌಲ್ಯವೂ ಲಕ್ಷಗಳಲ್ಲಿ ಇಲ್ಲ. ಇದಕ್ಕಿಂತ ಮುಖ್ಯವಾದ ಸಂಗತಿಯೆಂದರೆ, ಘೋಷಿಸಿಕೊಂಡ ಆಸ್ತಿಯೇ ಇಷ್ಟಿದ್ದ ಮೇಲೆ, ಘೋಷಿಸಿಕೊಳ್ಳದ, ಕಾನೂನು ಕಣ್ಣಿಗೆ ಮಣ್ಣೆರಚಿ, ಹೆಂಡತಿ-ಮಕ್ಕಳು, ಸಂಬಂಧಿಕರು, ಗೆಳೆಯರು, ಹಿಂಬಾಲಕರ ಹೆಸರಿನಲ್ಲಿ ಬೇನಾಮಿಯಾಗಿ ಕೂಡಿಟ್ಟ ಸಂಪತ್ತಿನ ಪ್ರಮಾಣ ಇನ್ನೆಷ್ಟಿರಬಹುದು? ಹೀಗೆ ಸಾವಿರಾರು ಕೋಟಿಗಳ ಲೆಕ್ಕದಲ್ಲಿ ಆಸ್ತಿ ಘೋಷಿಸಿಕೊಂಡ ಯಾರೊಬ್ಬರೂ ಸಂಪೂರ್ಣ ಪಾರದರ್ಶಕವಾಗಿ, ಎಲ್ಲವನ್ನೂ ಬಹಿರಂಗಗೊಳಿಸಿರಲು ಸಾಧ್ಯವೇ ಇಲ್ಲ ಎಂಬುದು ಎಂಥವರಿ ಗಾದರೂ ಅರಿವಿನಲ್ಲಿರುವ ಸಂಗತಿಯೇ.

ಇಂಥವುಗಳ ನಿಗ್ರಹಕ್ಕೆ ಎಂಥದ್ದೇ ಬಿಗಿಯಾದ ಕಾನೂನು ಬಂದರೂ, ಇವರು ಬರಿ ರಂಗೋಲಿಯಲ್ಲ, ನೆಲದೊಳಕ್ಕೇ ನುಸುಳಿ ತಪ್ಪಿಸಿಕೊಳ್ಳುವುದರಲ್ಲಿ ನಿಸ್ಸೀಮರು. ಈ ಪ್ರಮಾಣದ ಸಂಪತ್ತು ಹೀಗೆ ಅವರಲ್ಲಿ ಸಂಗ್ರಹಗೊಂಡ ಬಗೆಯಾದರೂ ಹೇಗೆ ಎಂಬ ಪ್ರಶ್ನೆ ಹುಟ್ಟದಿರದು. ಜನಸೇವೆಗಾಗಿಯೇ ‘ಬದುಕನ್ನು ಮುಡಿಪಾಗಿಟ್ಟ’ ನಮ್ಮ ನಾಯಕರುಗಳಿಗೆ ಸರಕಾರದಿಂದ ಬರುವ
ಕೇವಲ ವೇತನದಿಂದ ಇಷ್ಟೆಲ್ಲ ಸಂಪತ್ತು ಗಳಿಕೆಯಂತೂ ಸಾಧ್ಯವಿಲ್ಲ.

ಹಾಗೆಂದು ಎಲ್ಲರೂ ಫುಲ್‌ಟೈಮ್ ರಾಜಕಾರಣಿಗಳೇ. ರಾಜಕಾರಣಕ್ಕೆ ಬಂದ ನಂತರ ಶಯಕ್ಷಣಿಕ ಸಂಸ್ಥೆಗಳನ್ನೋ, ಉದ್ದಿಮೆ ಗಳನ್ನೋ ಆರಂಭಿಸಿಕೊಂಡಿದ್ದನ್ನು ಬಿಟ್ಟರೆ,ಅಪ್ಪ-ಅಜ್ಜಂದಿರಿಂದ ಬಳುವಳಿಯಾಗಿ ಶ್ರೀಮಂತಿಕೆಯನ್ನು ಪಡೆದವರು ಕೆಲವೇ ಮಂದಿ ಮಾತ್ರ. ಹಾಗಿದ್ದರೆ ಇಂಥ ಆದಾಯದ ಮೂಲವಾದರೂ ಏನು? ತೆರಿಗೆ, ಐಡಿ ದಾಳಿಗಳಿಂದ ತಪ್ಪಿಸಿಕೊಂಡು ತಮ್ಮನ್ನು ತಾವೇ ‘ಚಾಲಾಕಿ’ಗಳೆಂದು ಬೀಗುವ ಈ ಮಂದಿ ಪ್ರಾಮಾಣಿಕವಾಗೇನೂ ರಾಜಕಾರಣವನ್ನು ಮಾಡಿಲ್ಲ ಎಂಬು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತಿದೆ.

ಮಾತೆತ್ತಿದರೆ ‘ಭ್ರಷ್ಟಾಚಾರ ನಿರ್ಮೂಲನೆ’ ಬಗೆಗೆ, ಸೈದ್ಧಾಂತಿಕ ರಾಜಕಾರಣದ ಬಗ್ಗೆ ಎಲ್ಲರೂ ಮಾತನಾಡುವವರೇ. ವಿರೋಧಿಗಳ ವಿರುದ್ಧ ಆರೋಪ ಮಾಡಿ, ತಮ್ಮನ್ನು ತಾವು ಸುಭಗರೆಂದು ಬಿಂಬಿಸಿಕೊಳ್ಳುವ ಮಂದಿಯ ಅಸಲೀಯತ್ತು ಅವರು ಘೋಷಿಸಿ ಕೊಳ್ಳುತ್ತಿರುವ ಸಂಪತ್ತಿನ ಅಗಾಧತೆ ಗಮನಿಸಿದರೆ ಸ್ಪಷ್ಟವಾಗುತ್ತದೆ. ಇದೇ ನೆಲದಲ್ಲಿ ರಾಜಕಾರಣ ಮಾಡಿದ ಲಾಲ್‌ಬಹದ್ದೂರ್
ಶಾಸೀಜಿ, ಜಾರ್ಜ್ -ರ್ನಾಂಡಿಸ್, ಜ್ಯೋತಿ ಬಸು, ಎ.ಕೆ. ಆಂಟನಿ, ಮನೋಹರ ಪರಿಕ್ಕರ್, ಪ್ರತಾಪ್‌ಚಂದ್ರ ಸಾರಂಗಿಯಂಥ ನಾಯಕರನ್ನು ಮತ್ತೆ ಕಾಣಲು ಸಾಧ್ಯವಿಲ್ಲವೇ?