ಇನ್ನೇನು ಕೆಲವೇ ದಿನಗಳಲ್ಲಿ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಚುನಾವಣೆ ಹತ್ತಿರವಾಗುತ್ತಿರು ವಂತೆ ರಾಜಕೀಯ ನಾಯಕರ ಉಚಿತ ಕೊಡುಗೆಗಳು ಜೋರಾಗಿವೆ. ಎಲ್ಲ ಪಕ್ಷಗಳ ನಾಯಕರೂ ಜನರನ್ನು ಸೆಳೆಯಲು ಒಂದಲ್ಲ ಒಂದು ರೀತಿಯ ಆಮಿಷಗಳನ್ನು ಒಡ್ಡುತ್ತಿದ್ದಾರೆ. ಸೀರೆ, ಕುಕ್ಕರ್ ವಿತರಣೆ, ಕೆಲವು ಕಾರ್ಯ ಕರ್ತರಿಗೆ ವಿದೇಶಿ ಕರೆನ್ಸಿ ವಿತರಣೆಯಂತಹವುಗಳ ಭರಾಟೆ ಜೋರಾಗಿದೆ. ಜನರು ನಾಮುಂದು ತಾಮುಂದು ಎಂದು ಮುಗಿಬಿದ್ದು ಕೊಡುಗೆಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಇದನ್ನು ನೋಡಿದರೆ, ದುಡ್ಡು ಉಳ್ಳವನೇ ಮುಂದಿನ ವಿಧಾನಸಭೆಯಲ್ಲಿ ಕೂರುವ ಎಲ್ಲ ಲಕ್ಷಣಗಳು ಕಾಣುತ್ತಿವೆ.
ಜನಪರ ಕಾರ್ಯಗಳನ್ನು ಮಾಡದ ಜನಪ್ರತಿನಿಧಿಯನ್ನು ಮನೆಗೆ ಕಳಿಸುವುದು, ಜನಪರ ಕೆಲಸಗಳನ್ನು ಮಾಡಿ ರುವ ಜನಪ್ರತಿನಿಧಿಗಳನ್ನು ಮತ್ತೆ ವಿಧಾನಸಭೆಗೆ ಕಳುಹಿಸಲು ಜನರಿಗೆ ಬರುವ ಏಕೈಕ ಅವಕಾಶ ಐದು ವರ್ಷ ಗಳಿಗೊಮ್ಮೆ ಬರುತ್ತದೆ. ಆದರೆ ಜನರು ಈಗ ದುಡ್ಡು, ಕುಕ್ಕರ್, ಸೀರೆಯಂತಹ ಉಡುಗೊರೆಗಳಿಗೆ ಮುಗಿ ಬೀಳುತ್ತಿರುವುದರನ್ನು ನೋಡಿದರೆ, ಮುಂದಿನ ವಿಧಾನಸಭೆಗೆ ಎಂತಹ ಜನಪ್ರತಿನಿಧಿಗಳು ಆಯ್ಕೆಯಾಗುತ್ತಾರೆ ಎಂಬುದನ್ನು ಯಾರಾ ದರೂ ಉಹಿಸಬಹುದಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತ ಹಕ್ಕು ಅತ್ಯಂತ ಪವಿತ್ರ ವಾದುದು.
ಪ್ರಜಾಪ್ರಭುತ್ವದ ಬುನಾದಿ ಗಟ್ಟಿಗೊಳಿಸಲು ಅದು ಬಳಕೆಯಾಗಬೇಕು. ಜನರು ಆಮಿಷಗಳಿಗೆ ಒಳಗಾಗದೆ ಮತ ಚಲಾಯಿಸಬೇಕು. ಮತದಾನ ಮಾಡುವುದು ಎಷ್ಟು ಮುಖ್ಯವೋ ಸರಿಯಾದ ವ್ಯಕ್ತಿಗಳನ್ನು ಆಯ್ಕೆ ಮಾಡುವುದೂ ಅಷ್ಟೇ ಮುಖ್ಯ. ಇಲ್ಲವಾದರೆ ಅವಿವೇಕಿ ರಾಜಕಾರಣಿಗಳನ್ನು ಚುನಾಯಿಸಿದ ತಪ್ಪಿಗೆ ನಾವೆಲ್ಲರೂ ದಂಡ ತೆತ್ತು ಬುದ್ಧಿ ಕಲಿಯಬೇಕಾಗುತ್ತದೆ. ಚುನಾವಣೆಗಳಲ್ಲಿ ಹಣ, ಹೆಂಡ, ಇತರ ಆಮಿಷಗಳಿಗೆ ಮತ ಮಾರಿ ಕೊಳ್ಳುವುದಿಲ್ಲ ಎಂದು ಪ್ರತಿ ಪ್ರಜೆಯೂ ಅಭಿಯಾನ ಆರಂಭಿಸಿ, ಶ್ರೇಷ್ಠ ಪ್ರಜಾಸತ್ತಾತ್ಮಕ ಸಂಸದೀಯ ವ್ಯವಸ್ಥೆಯನ್ನು ರಕ್ಷಿಸಬೇಕಿದೆ. ಹಣದ ಆಮಿಷ, ಜಾತಿ, ಉಪ ಜಾತಿ, ತೋಳ್ಬಲಕ್ಕೆ ನಮ್ಮ ಮತಗಳು ಮಾರಾಟವಾಗುತ್ತಿರುವುದು ಅಪಾಯದ ಸಂಕೇತ.
ಅನೇಕ ಮಹನೀಯರ ಕೊಡುಗೆಯಿಂದ ಜಗತ್ತಿಗೆ ಮಾದರಿಯಾದ ಪ್ರಜಾಪ್ರಭುತ್ವ ಸಂಸದೀಯ ವ್ಯವಸ್ಥೆ ಹೊಂದಿದ್ದೇವೆ. ಆದರ್ಶ ಸಂಸದೀಯ ವ್ಯವಸ್ಥೆ ಯನ್ನು ರಕ್ಷಿಸಿ, ಇನ್ನಷ್ಟು ಶಕ್ತಿಯಾಲಿಯಾಗಿ ಬೆಳೆಸಬೇಕಿದ್ದರೆ ಜನಸಮೂಹ ಜವಾಬ್ದಾರಿ ಅರಿತು ಪ್ರಜಾಪ್ರಭುತ್ವದ ಕಾವಲುಗಾರರಾಗಿ ಕೆಲಸ ಮಾಡಬೇಕು. ನಮಗೆಲ್ಲ ರಾಷ್ಟ್ರ ಮೊದಲು ಅನ್ನುವ ಭಾವನೆ ಬಾರದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ.