Sunday, 15th December 2024

ಸಂಕಷ್ಟದ ಸಮಯದಲ್ಲಿ ಕಾಯುವಿಕೆ ಬೇಡ

ಕರ್ನಾಟಕದಲ್ಲಿ ಕಳೆದ 15 ದಿನ ಹಿಂದಿರುವ ಕರೋನಾ ಪರಿಸ್ಥಿತಿ ಇಂದಿಲ್ಲ. ಕರೋನಾ ಸೋಂಕಿತರ ಸಂಖ್ಯೆ ದುಪ್ಪಟ್ಟು ಆಗುವ ಸಂಖ್ಯೆ, ಈ ತಿಂಗಳ ಅಂತ್ಯಕ್ಕೆ ಬರಲಿದೆ ಎನ್ನುವ ತಜ್ಞರ ವರದಿಯನ್ನು ಮೀರಿ, ಈಗಲೇ 14 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಸತತ ಎರಡು ದಿನಗಳ ಕಾಲ ಬಂದಿದೆ.

ರಾಜ್ಯದಲ್ಲಿ ಎರಡನೇ ಅಲೆ ಕರೋನಾ ಮೊದಲ ಅಲೆಗಿಂತಲೂ ವೇಗವಾಗಿ ಹಬ್ಬುತ್ತಿದೆ. ಆದರೆ ಮೊದಲ ಅಲೆ ಕಾಣಿಸಿಕೊಂಡಾಗ
ಸರಕಾರಗಳು ಕೈಗೊಂಡ ನಿರ್ಧಾರಗಳು ಈಗ ತಗೆದುಕೊಳ್ಳಲು ಹಿಂದೇಟು ಹಾಕುತ್ತಿವೆ. ಈ ರೀತಿ ಹಿಂದೇಟು ಹಾಕುವುದಕ್ಕೆ ಪ್ರಮುಖ ವಾಗಿ, ಕಳೆದ ಬಾರಿಯಿದ್ದ ಆರ್ಥಿಕ ಪರಿಸ್ಥಿತಿ ಈಗಿಲ್ಲ. ಕಳೆದ ಬಾರಿಯಂತೆ ಈ ಬಾರಿ ಸಂಪೂರ್ಣ ಲಾಕ್‌ಡೌನ್ ಮಾಡಿದರೆ ಅದನ್ನು ತಡೆದುಕೊಳ್ಳುವ ಶಕ್ತಿ ಅನೇಕ ಕೈಗಾರಿಕೆಗಳಿಗಿಲ್ಲ.

ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಅವರು ಹೇಳಿದಂತೆ, ‘ಕರೋನಾಕ್ಕಿಂತ ಕರೋನಾದಿಂದ ಆಗುವ ಆರ್ಥಿಕ
ಸಮಸ್ಯೆಗೆ ಹಸಿವಿನಿಂದ ಸಾಯುವವರು ಹೆಚ್ಚಾಗಲಿದ್ದಾರೆ’ ಎನ್ನುವುದು ಸತ್ಯ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಕರೋನಾ ಹಬ್ಬುತ್ತಿರುವ ಸೋಂಕಿನ ಸರಪಳಿಗೆ ಬ್ರೇಕ್ ಹಾಕುವುದಕ್ಕೆ ಲಾಕ್‌ಡೌನ್, ಸೆಮಿ ಲಾಕ್‌ಡೌನ್ ಅಥವಾ ಇನ್ಯಾವುದಾದರೂ ದಾರಿ ಅನಿವಾರ್ಯ. ರಾಜ್ಯ ಸರಕಾರ ಈಗಾಗಲೇ ಕರೋನಾ ಕರ್ಫ್ಯೂ (ನೈಟ್ ಕರ್ಫ್ಯೂ) ಜಾರಿಗೊಳಿಸಿದೆ. ಆದರೆ ಇದರಿಂದ
ಕರೋನಾ ಜಾಗೃತಿ ಸಾಧ್ಯವೇ ಹೊರತು, ನಿಯಂತ್ರಣ ಸಾಧ್ಯವಿಲ್ಲ.

ಆದ್ದರಿಂದ ಸರಕಾರ ಇದೀಗ ಯಾವ ರೀತಿಯ ನಿರ್ಧಾರ ಕೈಗೊಳ್ಳಬೇಕು ಎನ್ನುವುದನ್ನು ಶೀಘ್ರವೇ ಸ್ಪಷ್ಟಪಡಿಸಬೇಕು. ಅದನ್ನು ಹೊರತುಪಡಿಸಿ, ಸರ್ವಪಕ್ಷ ಸಭೆ ಬಳಿಕ ಅಥವಾ ಏ.20ರ ಬಳಿಕ ಕರೋನಾ ನಿಯಂತ್ರಣಕ್ಕೆ ಕ್ರಮವಹಿಸುತ್ತೇವೆ ಎನ್ನುವ ಸರಕಾರದ ನಿಲುವಿನಿಂದ ಪ್ರಕರಣದ ಸಂಖ್ಯೆ ಸೋಂಕಿತರ ಸಂಖ್ಯೆ ಇನ್ನಷ್ಟು ಹೆಚ್ಚಳವಾಗುವುದರಲ್ಲಿ ಅನುಮಾನವಿಲ್ಲ.
ಆದ್ದರಿಂದ ಸರಕಾರ ಕರೋನಾ ನಿಯಂತ್ರಣಕ್ಕೆ ಕಠಿಣ ಕ್ರಮ ವಿಧಿಸುವ ವೇಳೆ ನಿಧಾನ ಮಾಡದೇ ಶೀಘ್ರ ನಿರ್ಣಯ ತಗೆದು ಕೊಳ್ಳುವುದು ಸೂಕ್ತ.