Saturday, 14th December 2024

ದಾಖಲೆಯ ದಂಡ ಉಪಯೋಗವೇನು?

ಕರೋನಾ ಸಮಸ್ಯೆಗೆ ನಾನಾ ರೂಪಗಳಿವೆ. ಪ್ರಸ್ತುತ ಶೀಘ್ರವಾಗಿ ಲಸಿಕೆ ಲಭ್ಯವಾಗಲಿದೆ ಎಂಬ ಭರವಸೆ ಒಂದೆಡೆಯಾದರೆ, ಮಾಸ್ಕ್ ಕಡ್ಡಾಯಕ್ಕೆ ವಿರೋಧಗಳು ಸಹ ವ್ಯಕ್ತವಾಗಲಾರಂಭಿಸಿವೆ. ಯಾವುದೇ ರೋಗಕ್ಕೆ ಔಷಧ ಅಭಿವೃದ್ಧಿಗೆ ಬಹಳಷ್ಟು ಸಮಯ ಹಿಡಿ ಯುತ್ತದೆ. ಆದರೆ ಕರೋನಾ ನಿರ್ಮೂಲನೆಗಾಗಿ 8-10 ತಿಂಗಳಿನಲ್ಲಿಯೇ ಲಸಿಕೆ ಮೂರನೇ ಹಂತದ ಟ್ರಯಲ್‌ಗಳನ್ನು ತಲುಪಿರು ವುದು ಅತ್ಯಂತ ವೇಗದ ಬೆಳವಣಿಗೆ.

ಆದರೂ ಇನ್ನೂ ಲಸಿಕೆಗಳ ಪ್ರಯೋಗ ಸಂಪೂರ್ಣ ಬಗೆಹರಿಯದಿರುವುದರಿಂದ ಸದ್ಯದ ಸ್ಥಿತಿಯಲ್ಲಿ ಕರೋನಾ ಹರಡದಂತೆ
ತಡೆಯಲು ಇರುವ ಮಾರ್ಗ ಎಂದರೆ ಮಾಸ್ಕ್ ಧರಿಸುವುದು. ಆರಂಭಿಕ ಹಂತದಲ್ಲಿ ಅನಿವಾರ್ಯವಾಗಿ ಮಾಸ್ಕ್ ಧರಿಸುತ್ತಿದ್ದ ಜನತೆಯಿಂದ ಇದೀಗ ಅಪಸ್ವರಗಳು ಕೇಳಿಬರಲಾರಂಭಿಸಿವೆ. ಕಾರು ಹಾಗೂ ದ್ವಿಚಕ್ರ ವಾಹನಗಳಲ್ಲಿ ಒಬ್ಬರೆ ಸಂಚರಿಸುವ ವೇಳೆ ಯಲ್ಲಿಯೂ ಮಾಸ್ಕ್ ಧರಿಸುವ ಪ್ರಕ್ರಿಯೆಗೆ ವಿರೋಧ ವ್ಯಕ್ತವಾಗುತ್ತಿವೆ.

ಕಾರಿನಲ್ಲಿ ಸಂಚರಿಸುವಾಗ ಗ್ಲಾಸ್ ಮುಚ್ಚಿರುತ್ತದೆ, ಹಾಗೆಯೇ ದ್ವಿಚಕ್ರ ವಾಹನದ ಸಂಚಾರದ ವೇಳೆ ಹೆಲ್ಮೆಟ್ ಇರುವಾಗ ಮಾಸ್ಕ್ ಏಕೆ ಎಂಬುದು ವಾಹನಸವಾರರ ಆಕ್ರೋಶ. ಕಾರಿನಲ್ಲಿ ಒಬ್ಬರೆ ಪ್ರಯಾಣಿಸುವ ವೇಳೆ ಮಾಸ್ಕ್ ಕಡ್ಡಾಯವನ್ನು ಹಿಂಪಡೆ ಯುವ ಪ್ರಕ್ರಿಯೆ ಸಹ ಆರಂಭಗೊಂಡಿದೆ. ಆದರೆ ಈ ಆರೋಪ – ಪ್ರತ್ಯಾರೋಪಗಳ ನಡುವೆಯೇ ಮಾಸ್ಕ್ ಧರಿಸದವರಿಂದ ದಾಖಲೆ ಪ್ರಮಾಣದ ದಂಡ ವಸೂಲಾತಿ ನಡೆದಿದೆ. ದಂಡ ವಸೂಲಾತಿಯಲ್ಲಿ ಬಿಬಿಎಂಪಿ ದಾಖಲೆ ಮಟ್ಟದಲ್ಲಿದೆ.

ಮಾರ್ಷಲಗಳು 4 ಕೋಟಿ ದಂಡ ಸಂಗ್ರಹಿಸಿ ದಾಖಲೆ ಮಾಡಿದ್ದಾರೆ. ಜುಲೈ 19ರ ನಂತರ 2 ಲಕ್ಷ ಮಂದಿಗೆ ದಂಡ ಹಾಕಲಾಗಿದೆ. ಐಟಿ ಸಿಟಿಯಲ್ಲಿ ಒಟ್ಟಾರೆಯಾಗಿ 4 ಕೋಟಿ ಬೃಹತ್ ಮೊತ್ತವನ್ನು ದಂಡವನ್ನಾಗಿ ಸಂಗ್ರಹಿಸಲಾಗಿದೆ. ಮಾಸ್ಕ್ ಧರಿಸುವುದು ಸಾಮಾಜಿಕ ಪ್ರಜ್ಞೆಯಾಗಿ ರೂಪುಗೊಳ್ಳಬೇಕೆ ಹೊರತು, ದಂಡ ಪಾವತಿಯೇ ಪರಿಹಾರವಲ್ಲ.