Saturday, 14th December 2024

ಗೊಂದಲ ಪರಿಹರಿಸುವವರಾರು ?

ಇದೊಂದು ರೀತಿಯಲ್ಲಿ, ‘ನೀವು ಹೇಳಿದ್ದರಲ್ಲಿ ಸ್ವಲ್ಪವೂ ಸರಿಯಿಲ್ಲ, ಆದರೆ ನಾವು ಹೇಳುತ್ತಿರುವುದರಲ್ಲಿ ಕೊಂಚವೂ ತಪ್ಪಿಲ್ಲ’ ಎಂಬ ಮಾತನ್ನು ನೆನಪಿಸುವ ವಿದ್ಯಮಾನ. ಈ ಅಭಿಪ್ರಾಯಕ್ಕೆ ಕಾರಣವಾಗಿರುವುದು, ಜಿಎಸ್‌ಟಿ ಹಂಚಿಕೆಯಲ್ಲಿ ಕರ್ನಾಟಕ ರಾಜ್ಯಕ್ಕೆ ಅನ್ಯಾಯವಾಗಿದೆ ಎಂಬ ವಿಷಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯ ಕೆಲ ನಾಯಕರು ಮಂಡಿಸುತ್ತಿರುವ ವಾದಗಳು, ನೀಡುತ್ತಿರುವ ಸಮರ್ಥನೆಗಳು.

‘ಕೇಂದ್ರದಿಂದ ರಾಜ್ಯಕ್ಕೆ ಬರಬೇಕಿರುವ ಅನುದಾನದಲ್ಲಿ ಮೋಸವಾಗಿರುವುದು ಸ್ಪಷ್ಟ; ಕಳೆದ ಸೆಪ್ಟೆಂಬರ್‌ನಲ್ಲೇ ಬರವನ್ನು ಘೋಷಿಸಿದ್ದರೂ ಕೇಂದ್ರದಿಂದ ಪರಿಹಾರ ದಕ್ಕಿಲ್ಲ. ರಾಜ್ಯದ ನೀರಾವರಿ ಯೋಜನೆಗಳಿಗೂ ಕೇಂದ್ರವು ಅನುದಾನ ನೀಡುತ್ತಿಲ್ಲ’ ಎಂದು ಆರೋಪಿಸಿದ್ದಾರೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು.

ಮತ್ತೊಂದೆಡೆ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ‘ತೆರಿಗೆ ಹಂಚಿಕೆಯಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ ಎಂಬ ಕಾಂಗ್ರೆಸ್ಸಿಗರ ಆರೋಪದಲ್ಲಿ ಹುರುಳಿಲ್ಲ. ತೆರಿಗೆ ಹಂಚಿಕೆ ಮತ್ತು ಜಿಎಸ್‌ಟಿ ವಿಚಾರದಲ್ಲಿ ಕರ್ನಾಟಕದಿಂದ ಮಾತ್ರವೇ ಇಂಥ ಆರೋಪ ಕೇಳಿಬರುತ್ತಿದೆ. ಬರ ಪರಿಹಾರದ ವಿಳಂಬಕ್ಕೆ ಕೇಂದ್ರ ಸರಕಾರ ಕಾರಣವಲ್ಲ’ ಎಂದಿದ್ದಾರೆ. ಈ ಎರಡು ವಾದಗಳ ಪೈಕಿ ಯಾರದ್ದು ಸತ್ಯ, ಯಾರದ್ದು ಮಿಥ್ಯ ಎಂಬುದನ್ನು ಕ್ಷೇತ್ರತಜ್ಞರಷ್ಟೇ ವಿಶದೀಕರಿಸಲು ಸಾಧ್ಯ. ಆದರೆ ಇವರಿಬ್ಬರ ಜಗಳದಲ್ಲಿ ಹೈರಾಣಾಗುತ್ತಿರುವುದು ಮಾತ್ರ ಶ್ರೀಸಾಮಾನ್ಯರು ಎಂಬುದು ಅಪ್ಪಟ ಹದಿನಾರಾಣೆ ಸತ್ಯ. ಕ್ಷಾಮದ ಹೊಡೆತಕ್ಕೆ ಸಿಕ್ಕಿ ನಲುಗಿರು ವವರು ಅಷ್ಟೋ ಇಷ್ಟೋ ಪರಿಹಾರ ಸಿಕ್ಕರೆ ಸಾಕು ಎಂಬ ನಿರೀಕ್ಷೆಯಲ್ಲಿರುತ್ತಾರೆಯೇ ವಿನಾ, ಇಂಥ ವಾದಗಳು ಮತ್ತು ಸಮರ್ಥನೆ ಗಳ ಹಿಂದೆ ಅಡಗಿರುವ ತಾಂತ್ರಿಕ ಸೂಕ್ಷ್ಮಗಳು ಮತ್ತು ರಾಜಕೀಯ ಲೆಕ್ಕಾಚಾರಗಳು ಅವರಿಗೆ ಬೇಡದ ಸಂಗತಿ ಯಾಗಿರುತ್ತವೆ.

ಬಿಸಿಲಲ್ಲಿ ಬಸವಳಿದು ಬಾಯಾರಿ ಬಂದವನಿಗೆ ಆ ಕ್ಷಣಕ್ಕೆ ಒಂದು ಲೋಟ ನೀರಿನ ಅಗತ್ಯವಿರುವಾಗ, ‘ಇನ್ನೊಂದು ಸ್ವಲ್ಪ ದಿನ ಕಾದಿದ್ದರೆ, ಒಂದು ಹಂಡೆಯಷ್ಟು ನೀರನ್ನು ಉಣಿಸುತ್ತೇನೆ’ ಎಂದು ಹೇಳಿದರೆ ಆತನಿಗೆ ಹೇಗನ್ನಿಸಬಹುದು? ಈ ಮಾತು ಸಮಸ್ಯೆಗೆ
ಪರಿಹಾರವಾದೀತೇ? ನಮ್ಮ ರಾಜಕೀಯ ಪಕ್ಷಗಳು ಜನರ ಕಣ್ಣೊರೆಸುವ ಬಾಬತ್ತಲ್ಲೂ ‘ರಾಜಕೀಯ’ ಮಾಡಿದರೆ ಹೇಗೆ?