ಮಾತಿನ ಮಹತ್ವದ ಬಗ್ಗೆ ಅನೇಕ ಗಾದೆಗಳು ಪ್ರಚಲಿತದಲ್ಲಿವೆ. ಅನೇಕರು ತಮ್ಮ ಮಾತಿನ ಮೂಲಕವೇ ಅನೇಕ ಅವಕಾಶಗಳನ್ನು ಗಿಟ್ಟಿಸಿಕೊಂಡರೆ, ಮತ್ತೆ ಕೆಲವರು ಮಾತಿನ ಮೂಲಕವೇ ಎಡವಟ್ಟಿಗೆ ಸಿಲುಕುತ್ತಾರೆ. ಇಂಥದೊಂದು ಮಾತಿಗೆ ಇದೀಗ ಉದಾಹರಣೆ ಯಾಗಿರುವುದು ಉತ್ತರ ಪ್ರದೇಶದ ಮಹಿಳಾ ಆಯೋಗದ ಸದಸ್ಯೆ.
ಮಹಿಳಾ ಆಯೋಗದ ಸದಸ್ಯೆಯೇ ಮಹಿಳೆಯರ ಆಕ್ರೋಶಕ್ಕೆ ಕಾರಣವಾಗುವಂಥ ಹೇಳಿಕೆ ನೀಡಿರುವುದು ಮಾತಿನ ಮಹತ್ವವನ್ನು
ಸೂಚಿಸುತ್ತದೆ. ಹೆಣ್ಣಿನ ದೌರ್ಜನ್ಯ ತಡೆ ಹಾಗೂ ಸುರಕ್ಷತೆ ದೃಷ್ಟಿಯಿಂದ ಸ್ಥಾಪನೆಗೊಂಡಿರುವ ಆಯೋಗದ ಸದಸ್ಯೆಯೇ ಮಹಿಳಾ ವಿರೋಧಿ ಹೇಳಿಕೆ ನೀಡಿರುವುದು ಅಚ್ಚರಿಯ ಜತೆಗೆ ವಿವಾದ ಉಂಟುಮಾಡಿದೆ. ಅಲಿಗಢ ಜಿಲ್ಲೆಯಲ್ಲಿ ಆಯೋಜಿಸಿದ್ದ ಸಂವಾದ ದಲ್ಲಿ ಉತ್ತರ ಪ್ರದೇಶದಲ್ಲಿ ಅತ್ಯಾಚಾರಗಳು ಹೆಚ್ಚುತ್ತಿದ್ದು, ಇದಕ್ಕೆ ಕಾರಣವೇನು ಎಂದು ಮಹಿಳಾ ಆಯೋಗದ ಸದಸ್ಯೆ ಮೀನಾ ಕುಮಾರಿಯವರನ್ನು ಪ್ರಶ್ನಿಸಲಾಗಿದೆ.
ಇದಕ್ಕೆ ಉತ್ತರಿಸಿರುವ ಮೀನಾ ಕುಮಾರಿ, ಹೆಣ್ಣುಮಕ್ಕಳು ಮೊಬೈಲ್ ಬಳಸುವುದರಿಂದಾಗಿಯೇ ಅತ್ಯಾಚಾರಗಳು ಹೆಚ್ಚಾಗಿವೆ ಎಂಬ ವಿವಾದಿತ ಹೇಳಿಕೆ ನೀಡಿದ್ದಾರೆ. ಮೊಬೈಲ್‌ನಿಂದಾಗಿ ಯುವತಿಯರು ಬೇಗ ಯುವಕರ ಸಂಪರ್ಕಕ್ಕೆ ದೊರೆಯುತ್ತಾರೆ. ನಂತರ ಅವರೊಂದಿಗೆ ಓಡಿಹೋಗುವ ಪ್ರಯತ್ನಗಳು ನಡೆಯುವುದರಿಂದ ಅತ್ಯಾಚಾರಗಳು ಸಂಭವಿಸುತ್ತವೆ.
ಇದಕ್ಕೆ ಮುಖ್ಯವಾಗಿ ಹೆಣ್ಣುಮಕ್ಕಳಿಗೆ ಮೊಬೈಲ್ ಕೊಡಿಸುವ ಪೋಷಕರೆ ಕಾರಣ ಎಂದು ನುಡಿದ್ದಾರೆ. ಮೊಬೈಲ್ ಬಳಕೆಯಿಂದ ಅನುಕೂಲ ಇರುವಷ್ಟೇ, ದುರ್ಬಳಕೆಯೂ ಇದೆ. ಆದರೆ ಹೆಣ್ಣುಮಕ್ಕಳು ಮೊಬೈಲ್ ಬಳಸುವುದರಿಂದಾಗಿಯೇ ಅತ್ಯಾಚಾರಗಳು ನಡೆಯುತ್ತವೆ ಎಂಬ ಹೇಳಿಕೆ ಬೇಜವಾಬ್ದಾರಿತನದ ಹೇಳಿಕೆ. ಮಹತ್ವದ ಸ್ಥಾನದಲ್ಲಿ ಕುಳಿತು ಈ ಹೇಳಿಕೆಗಳನ್ನು ನೀಡುವುದು ಮಹಿಳಾ ಆಯೋಗದ ಸದಸ್ಯ ಸ್ಥಾನಕ್ಕೆ ಮಾಡಿದ ಅಪಮಾನ.