ದೇಶದಲ್ಲಿ ೧೦೦ಕ್ಕೂ ಹೆಚ್ಚು ಲೋಕಸಭೆ ಕ್ಷೇತ್ರಗಳಲ್ಲಿ ಮಹಿಳಾ ಮತದಾರರೇ ಹೆಚ್ಚಿದ್ದಾರೆ. ಅನೇಕ ಕ್ಷೇತ್ರಗಳಲ್ಲಿ ಮಹಿಳಾ
ಅಭ್ಯರ್ಥಿಗಳೇ ಪುರುಷ ಅಭ್ಯರ್ಥಿಗಳಿಗೂ ಠಕ್ಕರ್ ಕೊಡುತ್ತಿದ್ದಾರೆ.
ರಾಜಕೀಯ ಪಕ್ಷಗಳು ಕೂಡ ಮಹಿಳೆಯರ ಮತಗಳನ್ನೇ ಪಡೆಯಲು ಇನ್ನಿಲ್ಲದ ಕಸರತ್ತು ನಡೆಸಿವೆ. ಆದರೆ ಕೆಲ ರಾಜಕಾರಣಿ ಗಳಿಂದ ಮಹಿಳೆಯರ ಕುರಿತು ಕೀಳುಮಟ್ಟದ ಹೇಳಿಕೆಗಳು ಮಾತ್ರ ನಿಲ್ಲುತ್ತಿಲ್ಲ. ಚುನಾವಣೆಯ ಪ್ರಚಾರದ ಭರದಲ್ಲಿ ಬಿಜೆಪಿಯ ಮುಖಂಡ ದಿಲೀಪ್ ಘೋಷ್ ಅವರು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಉದ್ದೇಶಿಸಿ ತೀರಾ ಆಕ್ಷೇಪಾರ್ಹವಾದ ಮಾತುಗಳನ್ನು ಆಡಿದ್ದಾರೆ. ಕಾಂಗ್ರೆಸ್ ಹಿರಿಯ ಮುಖಂಡ ಶಾಮನೂರು ಶಿವಶಂಕರಪ್ಪ ಅವರು ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ವರದಿಯಾಗಿದೆ.
ಎರಡೂ ರಾಷ್ಟ್ರೀಯ ಪಕ್ಷಗಳ ಪ್ರತಿನಿಽಗಳು ಮಹಿಳೆಯರ ಬಗ್ಗೆ ಆಡಿದ ನಿಂದನಾತ್ಮಕ ಮಾತುಗಳು ರಾಷ್ಟ್ರದ ಗಮನ ಸೆಳೆದಿವೆ. ಎರಡೂ ಹೇಳಿಕೆಗಳು ತೀರಾ ಕೆಳಮಟ್ಟದವು. ಸಮಾಜದಲ್ಲಿ ಇರುವ ಪುರುಷಪ್ರಧಾನ ಮನಃಸ್ಥಿತಿ ಇಂತಹ ಮಾತುಗಳಿಗೆ ಕಾರಣ.
ಇಂತಹ ಮಾತುಗಳು ರಾಜಕಾರಣದಲ್ಲಿ ಮಹಿಳೆಯರ ಪ್ರಾತಿನಿಧ್ಯವನ್ನು ಅಗೌರವದಿಂದ ಕಾಣಲು ಯತ್ನಿಸುತ್ತವೆ. ತಮ್ಮ ಮಾತು ಗಳು ವಿವಾದಕ್ಕೆ ತಿರುಗಿದಾಗ ಅಥವಾ ಅವುಗಳಿಗೆ ಪ್ರತಿರೋಧ ಎದುರಾದಾಗ ಹೊಣೆಯಿಂದ ನುಣುಚಿಕೊಳ್ಳಲು ‘ನನ್ನ ಹೇಳಿಕೆ ಯನ್ನು ತಿರುಚಲಾಗಿದೆ’ ಎಂಬ ಹೇಳಿಕೆ ಕೊಡುವುದು ಸಾಮಾನ್ಯವಾಗಿದೆ.
ಅಸಭ್ಯವಾಗಿ ಮಾತನಾಡಿದ ನಿದರ್ಶನಗಳನ್ನು ರಾಜಕೀಯ ಪಕ್ಷಗಳು ಗಂಭೀರವಾಗಿ ಪರಿಗಣಿಸಿ, ಅಂತಹ ಮಾತುಗಳಿಂದ ಅಂತರ ಕಾಯ್ದುಕೊಳ್ಳಬೇಕು ಹಾಗೂ ಅಂತಹ ಮಾತು ಆಡಿದವರ ವಿರುದ್ಧ ಕ್ರಮ ಜರುಗಿಸಬೇಕು. ಮಹಿಳೆಯರ ಘನತೆಗೆ ಕುಂದು ಬಾರ ದಂತೆ ನೋಡಿಕೊಳ್ಳುವ ಕೆಲಸವು ರಾಜಕಾರಣದಲ್ಲಿ ಆಗಬೇಕು. ಮರ್ಯಾದೆ ಕೊಡದವರ ವಿರುದ್ಧ ಕ್ರಮ ಕೈಗೊಳ್ಳಲು ಪಕ್ಷಗಳು ವಿಫಲವಾದರೆ, ಅಂಥವರಿಗೆ ಪಾಠ ಕಲಿಸುವ ಕೆಲಸವನ್ನು ಮತದಾರರು ಮಾಡಬೇಕು.