ಈ ಬಾರಿಯ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಮೈಸೂರಿನಲ್ಲಿ ದೊಡ್ಡ ಪ್ರಮಾಣದಲ್ಲಿ ಹಮ್ಮಿಕೊಂಡಿರುವುದು ಶ್ಲಾಘನೀಯ. ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಬರುತ್ತಿರುವುದು ಹೆಮ್ಮೆಯ ಸಂಗತಿ.
ಪ್ರಧಾನಿ ಅವರ ಆಗಮನದಿಂದ ಈಗಾಗಲೇ ಮೈಸೂರಿನಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳು ನಡೆದಿವೆ. ಅಲ್ಲಿನ ರಸ್ತೆಗಳು, ಚರಂಡಿಗಳು ದುರಸ್ತಿಯಾಗಿವೆ. ದಸರಾ ಸಂದರ್ಭದಲ್ಲಿ ಸಿಂಗಾರಗೊಳ್ಳುತ್ತಿದ್ದ ಮೈಸೂರು ಇದೀಗ ಪ್ರಧಾನಿ ನರೇಂದ್ರ ಮೋದಿ ಅವರ ಆಗಮನದ ಕಾರಣದಿಂದಾಗ ಮತ್ತೊಮ್ಮೆ ಸಿಂಗಾರಗೊಂಡಿದೆ. ಕರೋನಾ ಕಾರಣದಿಂದ ನಷ್ಟದಲ್ಲಿರುವ ಪ್ರವಾಸೋದ್ಯಮವು ಮತ್ತಷ್ಟು ಚುರುಕಾಗಿದೆ.
ಇದಕ್ಕೆ ಪ್ರಧಾನಿ ಭೇಟಿಯಿಂದ ಪುಷ್ಟಿ ಸಿಕ್ಕಂತೆ ಆಗುತ್ತದೆ. ಆದರೆ ಈ ಕಾರ್ಯಕ್ರಮದ ಕ್ರೆಡಿಟ್ ಪಡೆಯಲು ಮೈಸೂರು ಜಿಲ್ಲೆಯ ರಾಜಕಾರಣಿಗಳು ಸ್ಪರ್ಧೆಗಿಳಿದಿದ್ದಾರೆ.
ಪರಸ್ಪರ ವಾಗ್ದಾಳಿ ಮಾಡಿಕೊಂಡು ಸಾರ್ವಜನಿಕರ ಎದುರು ಮುಜುಗರ ಅನುಭವಿಸು ತ್ತಿದ್ದಾರೆ. ಇದು ಬಿಜೆಪಿ ಪಕ್ಷದ ಕಾರ್ಯಕ್ರಮವೆಂಬಂತೆ ಅನೇಕ ಕಡೆ ಪಕ್ಷದ ಬಾವುಟ ಗಳನ್ನು ತೂಗು ಹಾಕಿದ್ದಾರೆ. ಯೋಗ ದಿನಾಚರಣೆಯನ್ನು ಒಂದು ಪಕ್ಷದ ಕಾರ್ಯಕ್ರಮ ಎಂಬಂತೆ ಪರಿಗಣಿಸಿ ಆಯೋಜಿಸಿದರೆ, ವಿಶ್ವಮಟ್ಟದಲ್ಲಿ ಮುಜುಗರಕ್ಕೆ ಈಡಾಗಬೇಕಾಗುತ್ತದೆ.
ಅಂತಾರಾಷ್ಟ್ರೀಯ ಮನ್ನಣೆ ಇರುವ ಯೋಗ ದಿನಾಚರಣೆ ಯಾವುದೇ ಪಕ್ಷದ ಕಾರ್ಯಕ್ರಮ ಆಗಬಾರದು. ಎಲ್ಲ ಪಕ್ಷದವರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ವಿಶ್ವ ಯೋಗ ದಿನ ಆಚರಿಸಿದರೆ ಇತಿಹಾಸದಲ್ಲಿ ಈ ಕಾರ್ಯಕ್ರಮ ಶಾಶ್ವತವಾಗಿ ಉಳಿಯುತ್ತದೆ. ಅಲ್ಲದೆ, ಪ್ರಧಾನಿ ಮೋದಿ ಅವರ ಜತೆ ವೇದಿಕೆಯಲ್ಲಿ ಯಾರ್ಯಾರಿರಬೇಕು ಎಂಬ ಬಗ್ಗೆ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ.
ರಾಜ್ಯದ ಪ್ರಮುಖ ರಾಜಕಾರಣಿಗಳು ಈ ವೇದಿಕೆ ಏರಲು ತೆರೆಮರೆಯಲ್ಲಿ ಪ್ರಯತ್ನಿಸುತ್ತಿದ್ದಾರೆ. ಕೇಂದ್ರ ಸರಕಾರದ ಶಿಷ್ಟಾಚಾರದ
ಪ್ರಕಾರ ವೇದಿಕೆ ಸಿದ್ಧಗೊಳ್ಳಲಿದ್ದು, ಆ ಪ್ರಕಾರವೇ ವೇದಿಕೆ ಮೇಲಿನ ಗಣ್ಯರ ಕುರಿತೂ ನಿರ್ಣಯವಾಗಲಿ. ಆದರೆ, ಶತಮಾನಗಳಿಂದಲೂ ರಾಜಮನೆತನದವರನ್ನು ಬಿಟ್ಟು ಮೈಸೂರಿನಲ್ಲಿ ಯಾವುದೇ ಕಾರ್ಯಕ್ರಮಗಳು ಆಯೋಜನೆಯಾಗಿಲ್ಲ. ಹೀಗಾಗಿ ಪ್ರಧಾನಿ ಅವರು ಭಾಗವಹಿಸುವ ಈ ಕಾರ್ಯಕ್ರಮದಲ್ಲಿ ರಾಜವಂಶಸ್ಥರ ಕುಟುಂಬಕ್ಕೆ ಸ್ಥಾನ ಮೀಸಲಿಡುವ ಮೂಲಕ ಕರ್ನಾಟಕಕ್ಕೆ, ಮೈಸೂರಿಗೆ, ಮೈಸೂರು ಜನತೆಗೆ ಗೌರವ ಸಲ್ಲಿಸಬೇಕಿದೆ.