Sunday, 19th May 2024

ವಿದೇಶ ಮತ್ತು ವಿಮಾನ ಪ್ರಯಾಣದ ಆ ಸುಖ, ಮೋಹಕ ದಿನಗಳನ್ನು ನೆನೆಯುತ್ತಾ.. !

ವಿಶ್ವೇಶ್ವರ ಭಟ್

Put me on a plane, fly me anywhere!

ಕಳೆದ ಎಂಟು ವರ್ಷಗಳಿಂದ ನಾನು ವಿದೇಶಗಳಿಗೆ ಹೋಗುವಾಗಲೆಲ್ಲ ಹೊತ್ತೊಯ್ಯುವ ಬ್ಯಾಗಿಗೆ ಲಗತ್ತಿಸಿದ ಸ್ಟಿಕ್ಕರ್ ಮೇಲೆ ಬರೆದ ಈ ಒಂದು ಸಾಲು ಪದೇ ಪದೆ ನೆನಪಾಗುತ್ತಿದೆ. ಇನ್ನು ಮುಂದೆ ವಿದೇಶ ಪ್ರವಾಸ ಮೊದಲಿನಂತಿರುವುದಿಲ್ಲ. ವಿಮಾನಯಾನ ಸಹ ಮೊದಲಿನಂತಿರುವುದಿಲ್ಲ. ನಾನು ಭೇಟಿ ನೀಡಿದ ದೇಶಗಳೆಲ್ಲ ಬರೀ ಆಲ್ಬಮ್ಮಿನ ಹಾಳೆಗಳಂತೆ ಭಾಸವಾಗುತ್ತಿದೆ. ಒಂದು ವೇಳೆ ವಿಮಾನಯಾನ ಸಾಧ್ಯವಾದರೂ ಅದು ಇನ್ನು ಮುಂದೆ ಮೊದಲಿನಂತೆ ಇರುವುದಿಲ್ಲ. ಅಷ್ಟಕ್ಕೂ ಮೊದಲಿನ ಆಕರ್ಷಣೆ, ಮಜಾ ಬರೀ ನೆನಪಷ್ಟೇ.

ಏನೇ ಅನ್ನಿ, ಅಂತಾರಾಷ್ಟೀಯಯ ವಿಮಾನ ಪ್ರವಾಸದ ಅನುಭವ ಅನೂಹ್ಯವಾದುದು. ನೀರಸವಾದ ದೇಶ ಹೇಗೆ ಇಲ್ಲವೋ ನೀರಸವಾದ ವಿಮಾನಯಾನ ಎಂಬುದೂ ಇಲ್ಲ. ಪ್ರತಿ ಅಂತಾರಾಷ್ಟ್ರೀಯ ವಿಮಾನಯಾನವೂ ಒಂದು ರೋಚಕ ಅನುಭವವೇ. ಅದಕ್ಕಿಂತ ಮುಖ್ಯವಾಗಿ ಪ್ರತಿ ವಿಮಾನ ನಿಲ್ದಾಣವೂ ಒಂದು ಪುಟ್ಟ ಪ್ರಪಂಚವೇ. ದುಬೈ, ಸಿಂಗಾಪುರ, ಹಾಂಗ್ ಕಾಂಗ್, ನ್ಯೂಯಾರ್ಕ್, ಲಂಡನ್, ಪ್ಯಾರಿಸ್, ದೋಹಾ, ವಾಷಿಂಗ್ಟನ್, ಲಾಸ್ ಏಂಜಲೀಸ್, ಫ್ರಾಂಕಫರ್ಟ್, ಬೀಜಿಂಗ್ ಮುಂತಾದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳೇ ಆಕರ್ಷಣೀಯ ತಾಣಗಳು. ನಾನು ಕೆಲವು ವರ್ಷಗಳ ಹಿಂದೆ ಇಥಿಯೋಪಿಯಾದ ಅಡಿಸ್ ಅಬಾಬ ವಿಮಾನ ನಿಲ್ದಾಣದಲ್ಲಿದ್ದೆ. ಅಲ್ಲಿ ಆರು ತಾಸು ಕಳೆಯುವುದು ಪರಮ ಶಿಕ್ಷೆ ಎಂದು ಆರಂಭದಲ್ಲಿ ಅನಿಸಿತು. ಆದರೆ ಆ ವಿಮಾನ ನಿಲ್ದಾಣದಲ್ಲಿ ಹೋಗಿ ಬರುವ ಪ್ರಯಾಣಿಕರನ್ನು ಸುಮ್ಮನೆ ನೋಡುತ್ತಾ ಕುಳಿತೆ. ಸಮಯ ಹೋಗಿದ್ದೇ ಗೊತ್ತಾಗಲಿಲ್ಲ. ವಿಮಾನ ನಿಲ್ದಾಣದಂಥ ಅದ್ಭುತ ತಾಣ ಮತ್ತೊಂದಿಲ್ಲ.

ಉಗಾಂಡದ ಎಂಟೆಬ್ಬೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಒಂದು ಬೋರ್ಡ್ ನೋಡಿದ್ದೆ. ಈಗಲೂ ಅದು ನನ್ನ ಮನಸ್ಸಿನಲ್ಲಿ ಕುಳಿತುಬಿಟ್ಟಿದೆ – There is truly no other place bearing so much love as airports ಎಂಬ ಈ ಸಾಲನ್ನು ಯಾರೂ ಅಲ್ಲಗಳೆಯಲಾರರು. ನಿಜವಾದ ವಿದಾಯದ ಕಣ್ಣೀರು, ಪ್ರೀತಿಯ ಅಪ್ಪುಗೆ, ಆತ್ಮೀಯ ಸ್ವಾಗತದ ಅರ್ಥವನ್ನು ಕಣ್ಣಾರೆ ನೋಡಬೇಕೆಂದರೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಿಗೆ ಹೋಗಬೇಕಂತೆ. ಅದು ಎಲ್ಲಾ ಭಾವಗಳ ಸಂಗಮ. ವಿಮಾನ ನಿಲ್ದಾಣದಲ್ಲಿ ಹಣ ಕಳೆದುಕೊಂಡವರನ್ನು ಕಾಣಬಹುದು, ಆದರೆ ಬಡವರನ್ನು ಕಾಣಲು ಸಾಧ್ಯವಿಲ್ಲ ಎಂಬ ಮಾತು ಸಹ ಚಿಂತನೆಗೆ ಹಚ್ಚುವಂಥದ್ದೇ.

ಒಬ್ಬ ಇಂಗ್ಲಿಷ್ ಲೇಖಕ (ಪ್ರಾಯಶಃ ಡಗ್ಲಾಸ್ ಆಡಮ್ಸ್ ) ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳ ಬಗ್ಗೆ ಒಂದು ಸುಂದರ ಮಾತನ್ನು ಹೇಳಿದ್ದಾನೆ – ‘It can hardly be a coincidence that no language on earth has ever produced the expression, ‘As pretty as an airport.’ ನೀವು ಯಾವುದೇ ದೇಶಕ್ಕೆ ಹೋಗಿ, ಅಲ್ಲಿನ ವಿಮಾನ ನಿಲ್ದಾಣದಲ್ಲಿ ಕನಿಷ್ಠ ಎರಡು ತಾಸು ಕಳೆಯಲಿಲ್ಲ ಅಂದರೆ ನನ್ನ ದೃಷ್ಟಿಯಲ್ಲಿ ಅದೊಂದು ಅಪೂರ್ಣವೇ. ವಿಮಾನ ನಿಲ್ದಾಣವೆಂದರೆ (ಬಸ್ ನಿಲ್ದಾಣದಂತೆ) ಬರೀ ವಿಮಾನಗಳು ನಿಲ್ಲುವ ತಾಣವಲ್ಲ. ಅದೊಂದು ಪ್ರತ್ಯೇಕ ಪ್ರಪಂಚ. ಜೀವನವನ್ನು ವಿಮಾನ ನಿಲ್ದಾಣಕ್ಕೆ ಹೋಲಿಸುವುದುಂಟು – Life is like an airport. It’s where every hello and goodbye take place. ‘ನಾನು ಕಳೆದ ಮೂವತ್ತಾರು ವರ್ಷಗಳನ್ನು ಒಂದೇ ವಿಮಾನ ನಿಲ್ದಾಣದಲ್ಲಿ ಕಳೆದಿದ್ದೇನೆ. ನನ್ನ ಜೀವನದಲ್ಲಿ ಒಂದೇ ಒಂದು ನೀರಸವಾದ ದಿನವೇ ಇರಲಿಲ್ಲ. ಒಮ್ಮೆಯೂ ನನಗೆ ನನ್ನ ಉದ್ಯೋಗ ಬೇಸರ ತರಿಸಲಿಲ್ಲ’ ಎಂಬ ವಿಮಾನ ನಿಲ್ದಾಣ ಡ್ಯೂಟಿ ಮ್ಯಾನೇಜರ್ ನ ಆತ್ಮಕಥೆಯ ಪುಟಗಳೇ ಸಾಕ್ಷಿ.

ನಾನು ಅತಿ ಹೆಚ್ಚು ಖುಷಿಪಟ್ಟಿದ್ದು ವಿಮಾನಯಾನದಲ್ಲಿ. ನಾನು ಏನಿಲ್ಲವೆಂದರೂ ಎಂಬತ್ತೊಂದು ಬೇರೆ ಬೇರೆ ದೇಶಗಳಿಗೆ ಮುನ್ನೂರ ಇಪ್ಪತ್ತೈದಕ್ಕೂ ಹೆಚ್ಚು ಸಲ ವಿದೇಶ ಪ್ರಯಾಣ ಮಾಡಿದ್ದೇನೆ. ಐದು ಪಾಸ್ ಪೋರ್ಟ್ ಪುಸ್ತಕಗಳು ಖಾಲಿಯಾಗಿವೆ. ಪ್ರತಿ ವಿಮಾನಯಾನವೂ ರೋಚಕ ಅನುಭವವೇ. ನಾನು ರಾಷ್ಟ್ರಪತಿ ಡಾ.ಅಬ್ದುಲ್ ಕಲಾಂ ಅವರ ಜತೆ ನಾಲ್ಕು ದೇಶಗಳಿಗೆ ಹದಿನಾರು ದಿನ ಪ್ರಯಾಣಿಸುವ ಸಂದರ್ಭದಲ್ಲಿ ಮುಂಬೈನ ಹಿರಿಯ ಪತ್ರಕರ್ತ ಖಾಲೀದ್ ಅನ್ಸಾರಿ ಅವರ ಒಡನಾಟವನ್ನು ಮರೆಯುವಂತಿಲ್ಲ. ಅವರು ನೂರೈವತ್ತಕ್ಕೂ ಹೆಚ್ಚು ದೇಶಗಳನ್ನು, ಸುಮಾರು ಆರು ನೂರು ಸಲ ವಿದೇಶ ಪ್ರಯಾಣ ಮಾಡಿದವರು. ಅವರು ನನಗೆ ಹೇಳಿದ ಮಾತುಗಳನ್ನು ನಾನು ನನ್ನ ಜೀವನದಲ್ಲಿ ಅಳವಡಿಸಿಕೊಂಡಿದ್ದೇನೆ. ಅವರ ಭೇಟಿಯ ನಂತರ, ವಿಮಾನ ಪ್ರಯಾಣದ ನನ್ನ ಕಲ್ಪನೆಯೇ ಬದಲಾಯಿತು.

ಖಾಲೀದ್ ಅನ್ಸಾರಿ ಹೇಳುತ್ತಿದ್ದರು – * ವಿಮಾನ ಹತ್ತಿದ ನಂತರ ಎಂದೂ ಮಲಗಬಾರದು. ಸುತ್ತಲೂ ಕಣ್ಣಾಡಿಸಿ, ನಿಮ್ಮ ವಿಮಾನದಲ್ಲಿ ಕನಿಷ್ಠ ಒಬ್ಬನಾದರೂ ಗಣ್ಯವ್ಯಕ್ತಿ, ನೀವು ಜೀವನದಲ್ಲಿ ಭೇಟಿಯಾಗಲೇಬೇಕು ಎಂದುಕೊಂಡ ವ್ಯಕ್ತಿ ಇದ್ದೇ ಇರುತ್ತಾರೆ. ಅವರನ್ನು ಮಾತಾಡಿಸಿ. ಅವರೂ ಒಬ್ಬನ ಕಂಪನಿ ಬಯಸುತ್ತಿರಬಹುದು. * ವಿಮಾನದಲ್ಲಿ ಪ್ರಯಾಣಿಸುವವರು ನಿಷ್ಪ್ರಯೋಜಕ ವ್ಯಕ್ತಿಯಂತೂ ಆಗಿರಲು ಸಾಧ್ಯವಿಲ್ಲ. ನಿಮ್ಮ ಹಾಗೆ ಏನೋ ಒಬ್ಬ ಅಪರೂಪದ ವ್ಯಕ್ತಿ ಆಗಿರುತ್ತಾನೆ. ಒಂದಷ್ಟು ಸಾಧನೆ ಮಾಡಿರುತ್ತಾನೆ. ಇಲ್ಲದಿದ್ದರೆ ಆತ ಆ ವಿಮಾನದಲ್ಲಿ ಇರುತ್ತಿರಲಿಲ್ಲ ಎಂಬುದು ಗೊತ್ತಿರಲಿ. * ನಿಮ್ಮ ಪ್ರಯಾಣದಲ್ಲಿ ನೀವು ಕನಿಷ್ಠ ಒಬ್ಬನ ಪರಿಚಯ ಮಾಡಿಕೊಳ್ಳದಿದ್ದರೆ, ಒಂದಷ್ಟು ಹರಟೆ ಹೊಡೆಯದಿದ್ದರೆ ನಿರರ್ಥಕ. * ಪ್ರತಿ ವ್ಯಕ್ತಿಯ ವೇಷ-ಭಾಷಣ, ಆಭರಣ, ಪೋಷಾಕು, ವಾಚು, ಗಡ್ಡ, ಕೋಟು, ಬ್ಯಾಗ್, ಹೇರ್ ಸ್ಟೈಲ್, ಹಾವ-ಭಾವ, ನಡೆವಳಿಕೆ, ಭಾಷೆ… ಗಮನಿಸಿ. ಪ್ರತಿಯೊಬ್ಬರೂ ನಿಮಗೆ ಏನಾದರೂ ಹೊಸ ವಿಷಯ ತಿಳಿಸಿಕೊಡುತ್ತಾರೆ. * ಯಾರಿಗೂ ನಿಮ್ಮ ಜತೆ ಮಾತಾಡಲು ಇಷ್ಟವಿಲ್ಲ ಎಂದು ಭಾವಿಸಬೇಡಿ. ನೀವಾಗಿಯೇ ಮಾತಾಡಿಸಲಿ ಎಂದುಕೊಳ್ಳುತ್ತಾರೆ. ಮಾತಾಡಿಸಿ, ತಪ್ಪೇನಿಲ್ಲ. * ವಿಮಾನದಲ್ಲಿ ನೀವು ಭೇಟಿ ಮಾಡಬಹುದಾದ, ಮಾಡಲೇಬೇಕಾದ ಅದ್ಭುತ ವ್ಯಕ್ತಿಗಳೆಂದರೆ ಫ್ಲೈಟ್ ಅಟೆಂಡೆಂಟುಗಳು ಅರ್ಥಾತ್ ಗಗನಸಖಿ ಹಾಗೂ ಗಗನಸಖರು. ಎಲ್ಲರಿಗೂ ಊಟೋಪಚಾರಗಳನ್ನು ಮಾಡಿದ ನಂತರ ಅವರನ್ನು ಮಾತಿಗೆ ಕರೆಯಬೇಕು. ಅವರ ಪೈಕಿ ಬಹುತೇಕರು ನಡೆದಾಡುವ ವಿಶ್ವಕೋಶ. ಇಂದು ಒಂದು ದೇಶದಲ್ಲಿ ಇದ್ದಾರೆ ನಾಳೆ ಮತ್ತೊಂದು ದೇಶದಲ್ಲಿರುತ್ತಾರೆ. ಪ್ರತಿದಿನ ನೂರಾರು ಹೊಸ ಹೊಸ ಜನರನ್ನು ಭೇಟಿ ಮಾಡುತ್ತಾರೆ. ಎಷ್ಟೇ ಕಿರಿಕಿರಿಯಾದರೂ ಯಾರೊಂದಿಗೂ ಜಗಳ ಆಡುವಂತಿಲ್ಲ. ಜನರ ಜತೆ ಹೇಗೆ ಬೆರೆಯಬೇಕು, ವ್ಯವಹರಿಸಬೇಕು ಎಂಬುದು ಅವರ ವೃತ್ತಿಯೇ ಅವರಿಗೆ ಚೆನ್ನಾಗಿ ಕಲಿಸಿರುತ್ತದೆ. ಅವರು ಭೇಟಿ ಮಾಡುವ ಪ್ರತಿ ವ್ಯಕ್ತಿಯೂ ಭಿನ್ನ. ಹೀಗಾಗಿ ಅವರ ಜತೆ ಹರಟೆ ಹೊಡೆದರೆ ನಿಮಗೆ ಒಳ್ಳೊಳ್ಳೆಯ ಕಥೆಗಳು ಸಿಗುತ್ತವೆ. ನೀವು ಅವರನ್ನು ಮಾತಿಗೆ ಕರೆದರೆ ಅವರು ಮುಕ್ತವಾಗಿ ಮಾತಾಡುತ್ತಾರೆ. ವಿಮಾನ ಪ್ರಯಾಣದ ತಮ್ಮ ಅನುಭವಗಳನ್ನು ಹೇಳುತ್ತಾರೆ. ಇದು ಹತ್ತು ಪುಸ್ತಕಗಳ ಓದಿಗೆ ಸಮ. * ಎಲ್ಲಾ ಪ್ರಯಾಣಿಕರು ಇಷ್ಟಪಡುವ ಆ ಪ್ರಯಾಣಿಕ ನೀವಾಗಬೇಕು. ಆ ಪ್ರಯಾಣಿಕ ಹೇಗಿರಬೇಕು ಎಂಬುದು ಅನೇಕರಿಗೆ ಗೊತ್ತಿರುತ್ತದೆ. ಆದರೆ ಕೆಲವರು ಮಾತ್ರ ಹಾಗಾಗುತ್ತಾರೆ. * ವಿಮಾನವೇರುತ್ತಿದ್ದಂತೆ ನೀವು ನಿದ್ದೆ ಮಾಡಿದರೆ, ಪ್ರಯಾಣದ ಅನುಭವವನ್ನು ತಪ್ಪಿಸಿಕೊಳ್ಳುತ್ತೀರಿ. * ಅಂತಾರಾಷ್ಟ್ರೀಯಯ ವಿಮಾನ ಎಂಬುದು ಹಾರುವ ಒಂದು ಪಂಚತಾರಾ ಹೋಟೆಲ್ ಇದ್ದಂತೆ. ನೀವು ಕೇಳುವ ಎಲ್ಲಾ ಅನುಕೂಲಗಳೂ ಅಲ್ಲಿ ಲಭ್ಯ. ನೀವು ಗಗನಸಖಿಯರ ಜತೆ ಉತ್ತಮವಾಗಿ, ಆತ್ಮೀಯವಾಗಿ ವ್ಯವಹರಿಸಿ ಅವರ ಜತೆ ಸಣ್ಣ ಸ್ನೇಹ ಕುದುರಿಸಿಕೊಂಡರೆ, ನಿಮ್ಮ ಅತ್ತೆ ಥರಾ ಸೇವೆ ಮಾಡುತ್ತಾರೆ. * ಎಲ್ಲಾ ಅಂತಾರಾಷ್ಟ್ರೀಯ ವಿಮಾನಗಳಲ್ಲಿ ದೇಶ-ವಿದೇಶಗಳ ಪತ್ರಿಕೆ, ನಿಯತಕಾಲಿಕಗಳು ಇರುತ್ತವೆ. ಕೆಲವು ಏರ್ ಲೈನ್ಸ್ ಗಳು ಪುಟ್ಟ ಲೈಬ್ರರಿ(ಬಿಜಿನೆಸ್ ಕ್ಲಾಸ್ ಪ್ರಯಾಣಿಕರಿಗೆ)ಯನ್ನು ಇಟ್ಟಿರುತ್ತವೆ. ನೀವು ಇದನ್ನು ತಪ್ಪಿಸಿಕೊಳ್ಳಬಾರದು * ಅಂತಾರಾಷ್ಟ್ರೀಯ ವಿಮಾನಗಳಲ್ಲಿ In -flight entertainment ಬಹಳ ಚೆನ್ನಾಗಿರುತ್ತದೆ. ಅದರ ಪ್ರಯೋಜನ ಪಡೆಯಲೇಬೇಕು. ಇಷ್ಟೆಲ್ಲಾ ಇದ್ದರೂ ಕೆಲವರು ಮಲಗಿಬಿಡುತ್ತಾರೆ. ಇಂಥವರಿಗೆ ಊರು ತಲುಪಬೇಕು, ಆದರೆ ಅವರಿಗೆ ಊರು ತಲುಪುವ ಅನುಭವ ಬೇಕಾಗಿಲ್ಲ.

ಅನ್ಸಾರಿ ಅವರ ಈ ಮಾತುಗಳನ್ನು ನಾನು ಕಳೆದ ಹದಿನೈದು ವರ್ಷಗಳಿಂದ ಅಕ್ಷರಶಃ ಪಾಲಿಸುತ್ತಿದ್ದೇನೆ. ನಾನು ಅವರ ಉಪದೇಶದ ಅಮೃತಾನುಭವವನ್ನು ಪಡೆದಿದ್ದೇನೆ. ಮಧ್ಯರಾತ್ರಿಯ ವಿಮಾನ ಪ್ರಯಾಣ ಬಿಟ್ಟರೆ, ಮತ್ತೆ ಯಾವತ್ತೂ ವಿಮಾನದಲ್ಲಿ ಮಲಗಿದ್ದು ಅಪರೂಪ. ವಿಮಾನದಲ್ಲಿ ನಿದ್ದೆ ಮಾಡುವುದೆಂದರೆ, ಬಯಲಾಟ ನೋಡಲು ಹೋದವ ಮುಂದಿನ ಸಾಲಿನಲ್ಲಿ ಕುಳಿತು ತೂಕಡಿಸಿದಂತೆ. ಮತ್ತೇನೂ ಅಲ್ಲದಿದ್ದರೂ, ನೀವು ಭೇಟಿ ನೀಡುವ ದೇಶದ ಕುರಿತಾದ ಮಾಹಿತಿ ಓದಿದರೂ ಸಾಕು. ಅನ್ಸಾರಿ ಹೇಳಿದಂತೆ, ನಾನೂ ಸಹ ನನ್ನ ಪ್ರಯಾಣದಲ್ಲಿ ಜಗತ್ತಿನ ಅಪರೂಪದ ವ್ಯಕ್ತಿಗಳನ್ನು ವಿಮಾನದಲ್ಲಿ ಭೇಟಿ ಮಾಡಿದ್ದೇನೆ. ದೇಶ, ಭಾಷೆ, ಆಚಾರ ಗೊತ್ತಿಲ್ಲದ ಸಾವಿರಾರು ಜನರು ಸ್ನೇಹಿತರಾಗಿದ್ದಾರೆ. ಕೆಲವರ ಜತೆ ಈ ಸ್ನೇಹ, ಒಡನಾಟಕ್ಕೆ ತಿರುಗುವಷ್ಟು ಗಾಢವಾಗಿದೆ. ನಿಜಕ್ಕೂ ವಿಮಾನ, ಮಾನವೀಯ ಸಂಬಂಧ ಅರಳುವ ಒಂದು ವಿಶಾಲವಾದ ಅಂತಾರಾಷ್ಟ್ರೀಯ ವೇದಿಕೆ. ಈ ವೇದಿಕೆಯಲ್ಲಿ ನಮ್ಮ ಜತೆ ಇರುವ ವ್ಯಕ್ತಿ ಎಷ್ಟೇ ದೊಡ್ಡ ವನಾಗಿರಲಿ, ಆತ ನಮ್ಮ ಸಹಪ್ರಯಾಣಿಕನೇ. ಈ ಲಾಭವನ್ನು ಪಡೆಯುವವನೇ ನಿಜವಾದ ಪ್ರಯಾಣಿಕ. ಪ್ರತಿ ವಿಮಾನ ಪ್ರಯಾಣ ಮುಗಿಸಿದ ನಂತರವೂ ಅನುಭವದಲ್ಲಿ ಮೂವತ್ತೈದು ಸಾವಿರ ಅಡಿ ಎತ್ತರಕ್ಕೆ ಹೋಗಿ, ನಂತರ ಭೂಮಿಗಿಳಿದು ಅದನ್ನು ವಾಸ್ತವಕ್ಕೆ ಸಮೀಕರಿಸಿಕೊಳ್ಳಬೇಕೆಂಬ ಅನುಭವಿಗಳ ಮಾತು ಮನನೀಯ.

ನನಗೆ ಆತ್ಮೀಯರಾದ ಶ್ರೀಮಂತ ಉದ್ಯಮಿಯ ಪತ್ನಿಯೊಬ್ಬರು ಒಮ್ಮೆ ನನಗೆ ಹೇಳಿದ ತಮ್ಮ ಅನುಭವ ನೆನಪಾಗುತ್ತಿದೆ. ಅವರು ತಮ್ಮ ಪತಿಯೊಂದಿಗೆ ಚೀನಾ ರಾಜಧಾನಿ ಬೀಜಿಂಗಿಗೆ ಹೋಗುತ್ತಿದ್ದರಂತೆ. ಬೀಜಿಂಗ್ ತಲುಪುವ ಸ್ವಲ್ಪ ಹೊತ್ತಿನ ಮುಂಚೆ, ವಿಮಾನ ಕೆಳಮಟ್ಟದಲ್ಲಿ ವಿಶ್ವದ ಅಚ್ಚರಿಗಳಲ್ಲೊಂದಾದ ಚೀನಾದ ಮಹಾಗೋಡೆಯ ಮೇಲೆ ಹಾರುತ್ತಿತ್ತಂತೆ. ಆಗ ಪತ್ನಿ ತಮ್ಮ ಪತಿಯನ್ನು ಎಬ್ಬಿಸುತ್ತಾ, ‘ನೋಡಿ, ನೋಡಿ, ಕೆಳಗೆ ಚೀನಾದ ಮಹಾಗೋಡೆ ಕಾಣಿಸುತ್ತಿದೆ. ಎಂಥ ಅದ್ಭುತ ದೃಶ್ಯ, ಇಷ್ಟೊಂದು ಉದ್ದವಿರಬಹುದು ಅಂದುಕೊಂಡಿರಲಿಲ್ಲ, ಅಬ್ಬಾ …ಗ್ರೇಟ್… ನೋಡ್ರಿ ..ನೋಡ್ರಿ’ ಎಂದು ಗೊರಕೆ ಹೊಡೆಯುತ್ತಿದ್ದ ಪತಿರಾಯನನ್ನು ಎಬ್ಬಿಸಿದರಂತೆ. ನಿದ್ರಾಭಂಗವಾದ ಕೋಪದಿಂದ ಅರ್ಧ ಕಣ್ಣು ತೆರೆದು, ‘ಸುಮ್ಮನೆ ಮಲಗು, ತೊಂದರೆ ಕೊಡಬೇಡ. ಹೇಗಿದ್ದರೂ ನಾಡಿದ್ದು ಅಲ್ಲಿಗೆ ಹೋಗುತ್ತಿದ್ದೆವಲ್ಲ. ಯಾಕೆ ಅವಸರ ಮಾಡ್ತೀಯ?’ ಎಂದವರೇ ನಿದ್ದೆಗೆ ಜಾರಿದರಂತೆ. ಚೀನಾ ಮಾಹಾಗೋಡೆಯನ್ನು ಅಲ್ಲಿಗೇ ಹೋಗಿ ನೋಡುವುದಕ್ಕೂ. ವಿಮಾನದಿಂದ ನೋಡುವುದಕ್ಕೂ ಅಜಗಜಾಂತರ ವ್ಯತ್ಯಾಸವಿದೆ ಎಂಬುದು ಅವರಿಗೆ ಗೊತ್ತಿರಲಿಲ್ಲ ಮತ್ತು ಮೊದಲ ಬಾರಿಗೆ ನೋಡುವ ತವಕ, ಪುಳಕ ಸಹ ಅವರಲ್ಲಿ ಇರಲಿಲ್ಲ.

ವಿಮಾನ ಪ್ರಯಾಣದಂಥ ಸುರಕ್ಷಿತ ಪ್ರಯಾಣ ಮತ್ತೊಂದಿಲ್ಲ. (ಲಕ್ಷಕ್ಕೊಂದು ವಿಮಾನ ಅಪಘಾತಕ್ಕೊಳಗಾಗಬಹುದು. ಆದರೆ ನಾವು ಹತ್ತಿದ ವಿಮಾನವೇ ಒಂದು ಲಕ್ಷದ್ದಾಗಿರಬಾರದಷ್ಟೇ.) ವೇಗ ಮತ್ತು ಸುರಕ್ಷತೆಯೇ ವಿಮಾನ ಪ್ರಯಾಣದ ಆಕರ್ಷಣೆಗಳು. ಆದರೂ ವಿಮಾನ ಎಂದರೆ ಅನೇಕರಿಗೆ ಭಯ. ಈ ಭಯ ವಿಮಾನ ಲ್ಯಾಂಡ್ ಆಗಿ ನಿಲ್ಲುವ ತನಕವೂ ಇರುತ್ತದೆ. ಇದು ಪ್ರತಿಯೊಬ್ಬರಿಗೂ ಜೀವನ, ಮರಣ, ದೇವರು, ಅಸ್ತಿತ್ವ, ಕರ್ಮ… ಇವೆಲ್ಲವುಗಳ ಸಾಕ್ಷಾತ್ ದರ್ಶನ ಮಾಡಿಸುತ್ತದೆ.
ಪ್ರತಿ ಸಲ ವಿದೇಶ ಪ್ರಯಾಣ ಮುಗಿಸಿ ಬಂದಾಗಲೂ ದೇವರ ಅಸ್ತಿತ್ವದ ಬಗ್ಗೆ ನಂಬಿಕೆ ಬರುತ್ತದೆ. ಅಷ್ಟರಮಟ್ಟಿಗೆ ವಿಮಾನ ಆಸ್ತಿಕ. ಈ ಎಲ್ಲಾ ಕಾರಣಗಳಿಂದ ವಿಮಾನ ಪ್ರಯಾಣವೆಂಬುದು ರೋಚಕ ಅನುಭವಗಳ ಜಾಥಾ, ಎಂದೂ ಮುಗಿಯದ ನೆನಪಿನ ಇರುವೆ ಸಾಲು !

ಯಾವಾಗ ಅಮೆರಿಕದ ಅವಳಿ ಕಟ್ಟಡಗಳು ಭಯೋತ್ಪಾದಕ ಕೃತ್ಯಗಳಿಂದ ನೆಲಸಮವಾಯಿತೋ, ಅಂದಿನಿಂದ ಜಗತ್ತಿನಾದ್ಯಂತ ವಿಮಾನ ಪ್ರಯಾಣ, ವಿಮಾನ ನಿಲ್ದಾಣಗಳ ಶಿಷ್ಟಾಚಾರಗಳೆಲ್ಲ ಬದಲಾಗಿ ಹೋದವು. ಪ್ರತಿ ಪ್ರಯಾಣಿಕನೂ, ಭದ್ರತಾ ಸಿಬ್ಬಂದಿ ದೃಷ್ಟಿಯಲ್ಲಿ ಭಯೋತ್ಪಾದಕನೇ. ತನ್ನ ತಾಯಿಯೇ ಬಂದರೂ ಆತ ಸಂದೇಹದಿಂದಲೇ ನೋಡುವಂತಾಯಿತು. ತಾಯಿಯನ್ನೂ ಪರೀಕ್ಷಿಸದೇ ಬಿಡದ ಸ್ಥಿತಿ ಸಾಮಾನ್ಯವಾಯಿತು. ಭಯೋತ್ಪಾದಕರಿಗೆ ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ವಿಮಾನವೆಂಬುದು ಹಾರಾಡುವ, ಜೀವಂತ ಬಾಂಬ್ ಆಯಿತು. ಹೀಗಾಗಿ ವಿಮಾನ ನಿಲ್ದಾಣಗಳು ಭದ್ರಕೋಟೆಗಳಾದವು. ಇದರಿಂದ ಪ್ರಯಾಣಿಕರಿಗೆ ನಿತ್ಯ ನರಕವಾಯಿತು. ಸೆಕ್ಯೂರಿಟಿ ಚೆಕ್ ಅನ್ನುವುದು ಅನುದಿನದ, ಅನುಕ್ಷಣದ ಮಂತ್ರವಾಯಿತು. ಇದು ತೀವ್ರ ಕಿರಿಕಿರಿಯುಂಟು ಮಾಡಿದರೂ ದೂಸರಾ ಮಾತಾಡುವಂತಿರಲಿಲ್ಲ. ಅಷ್ಟಕ್ಕೂ ಅವನ್ನೆಲ್ಲಾ ಮಾಡುವುದು ನಮ್ಮ ಸುರಕ್ಷತೆಗೆ ತಾನೇ ಎಂದು ಜನ ಗೊಣಗಿಕೊಂಡು ಸುಮ್ಮನಾಗುತ್ತಿದ್ದರು.

ಆದರೆ ಈಗ ಕರೋನಾವೈರಸ್ ಸೋಂಕು ಭಯ ವಿಮಾನ ಪ್ರಯಾಣದ ಲಕ್ಷಣಗಳನ್ನೇ ಬದಲಿಸಲು ಹೊರಟಿದೆ. ಕಳೆದ ಎರಡೂವರೆ ತಿಂಗಳಿನಿಂದ ವಿಶ್ವದ ಬಹುತೇಕ ವಿಮಾನಯಾನ ಸಂಸ್ಥೆಗಳು ಇನ್ನಿಲ್ಲದ ನಷ್ಟ ಅನುಭವಿಸುತ್ತಿವೆ. ಹದಿನಾರು ಸಾವಿರಕ್ಕಿಂತ ಹೆಚ್ಚು ವಿಮಾನಗಳು ನೆಲಕಚ್ಚಿ ನಿಂತಿವೆ. ಎಲ್ಲಾ ವಿಮಾನ ನಿಲ್ದಾಣಗಳಲ್ಲೂ ಇದೇ ದೃಶ್ಯ. ಕೆಲವು ಏರ್ ಪೋರ್ಟುಗಳಲ್ಲಿ ನಿಲ್ಲಿಸಲು ಜಾಗವಿಲ್ಲದೇ ಹೊಲ-ಗದ್ದೆಗಳಲ್ಲಿ, ಬಯಲಿನಲ್ಲಿ ನಿಲ್ಲಿಸಿದ್ದಾರೆ. ಬಹುತೇಕ ಏರ್ ಲೈನ್ ಗಳು ತಾವು ದಿವಾಳಿ ಎದ್ದಿರುವುದಾಗಿ ಘೋಷಿಸಿವೆ. ವಿಮಾನವನ್ನು ಮಾರಾಟಕ್ಕಿಟ್ಟಿವೆ. ಸಿಬ್ಬಂದಿಯನ್ನು ವಜಾ ಮಾಡುತ್ತಿವೆ. ಕಂತು ಕಟ್ಟಲು ಆಗದೇ ಕೈಎತ್ತಿವೆ. ವಿಮಾನಯಾನ ಪುನಾರಂಭಕ್ಕೆ ಇಂಧನಕ್ಕೂ ಹಣ ಇಲ್ಲ ಎಂದು ಕೆಲವು ಏರ್ ಲೈನ್ಸ್ ಗಳು ಹೇಳಿವೆ. ಜಗತ್ತಿನಾದ್ಯಂತ ಸುಮಾರು ತೊಂಬತ್ತು ಸಾವಿರ ಪೈಲಟ್ ಗಳು ಕೆಲಸ ಕಳೆದುಕೊಂಡು ನಿರುದ್ಯೋಗಿಗಳಾಗಲಿದ್ದಾರೆ. ಏರ್ ಬಸ್ ವಿಮಾನ ಸಿದ್ಧಪಡಿಸಿದ ಅರವತ್ತು ವಿಮಾನಗಳನ್ನು ಖರೀದಿಸಲು ಯಾರೂ ಮುಂದೆ ಬರುತ್ತಿಲ್ಲ. ಆರ್ಡರ್ ಕೊಟ್ಟವರು ತಮಗೆ ಹೊಸ ವಿಮಾನ ಬೇಡ ಎಂದು ರದ್ದು ಮಾಡುತ್ತಿದ್ದಾರೆ.

ಸೆಪ್ಟೆಂಬರ್ ಹೊತ್ತಿಗೆ ಏನಿಲ್ಲವೆಂದರೂ ಎಂಟು ಸಾವಿರ ವಿಮಾನಗಳು ಶಾಶ್ವತವಾಗಿ ಗ್ರೌಂಡ್ ಆಗಲಿವೆ. ಅಂದರೆ ವಿಮಾನಯಾನ ಉದ್ಯಮ ಹಿಂದೆಂದೂ ಅನುಭವಿಸದ ಅತ್ಯಂತ ದರಿದ್ರ, ದಾರುಣ ಸ್ಥಿತಿಯನ್ನು ಎದುರಿಸಬೇಕಾಗಿ ಬಂದಿದೆ. ಈ ಉದ್ಯಮವನ್ನೇ ನಂಬಿದ ಹತ್ತಾರು ಕೋಟಿ ಮಂದಿಗೂ ಇದರ ಬಿಸಿ ತಟ್ಟಲಿದೆ. ಬಜೆಟ್ ಅರ ಲೈನ್ಸ್ ಎಂಬುದು ಕನಸಿನ ಮಾತು. ಮೊದಲಾಗಿದ್ದರೆ, ವಿಮಾನ ನಿಲ್ದಾಣಕ್ಕೆ ಒಂದು ಗಂಟೆ ಮೊದಲು ಹೋಗಬೇಕಿತ್ತು. ಇನ್ನು ಮುಂದೆ ಕನಿಷ್ಠ ಮೂರು ಗಂಟೆ ಮುನ್ನ ಹಾಜರಿರಬೇಕು. ಸಾಮಾಜಿಕ ಅಂತರ ಕಾಪಾಡಲು ಕನಿಷ್ಠ ಎರಡು ಗಂಟೆ ಕ್ಯೂದಲ್ಲಿ ನಿಲ್ಲಬೇಕು. ಪಾಸ್ ಪೋರ್ಟ್ ಜತೆಗೆ ನಮ್ಮ ನಮ್ಮ ‘ಆರೋಗ್ಯ ಪಾಸ್ ಪೋರ್ಟ್’ನ್ನು ನೀಡಬೇಕು. ಬೋರ್ಡಿಂಗ್ ಪಾಸ್ ತೆಗೆದುಕೊಳ್ಳುವ ಮುನ್ನ ವೈದ್ಯಕೀಯ ತಪಾಸಣೆಗೆ ಒಳಗಾಗಬೇಕು. ನಮ್ಮ ಪ್ರಯಾಣದ ವಿವರ, ಊರು ತಲುಪಿದ ನಂತರ ವಾಸಿಸುವ ಜಾಗ, ವಿಳಾಸ, ಮೊಬೈಲ್ ನಂಬರ್ … ಹೀಗೆ ಹತ್ತಾರು ವಿವರಗಳನ್ನು ನೀಡಬೇಕು.

ಅಷ್ಟಾಗಿ ವಿಮಾನವೇರಿದ ನಂತರ, ಸಾಮಾಜಿಕ ಅಂತರ ಕಾಪಾಡಲು ದೂರ ದೂರ ಕುಳಿತುಕೊಳ್ಳಬೇಕು. ಮಾಸ್ಕ್ ಧರಿಸಿರಲೇಬೇಕು. ಅಕ್ಕ-ಪಕ್ಕದವರ ಜತೆ ಮಾತಾಡಬಾರದು. ಪದೇ ಪದೆ ಗಗನಸಖಿಯನ್ನು ಕರೆಯುವಂತಿಲ್ಲ. ಟಾಯ್ಲೆಟ್ ಗೆ ಹೋಗುವಾಗ ಕೈಯೆತ್ತಬೇಕು, ಸರತಿಗಾಗಿ ಕಾಯಬೇಕು. ಟಾಯ್ಲೆಟ್ ಬಾಗಿಲ ಹತ್ತಿರ ನಿಂತು ಕಾಯುವಂತಿಲ್ಲ. ವಿಮಾನದಲ್ಲಿ ಕಾಲಕಾಲಕ್ಕೆ ನೀಡುವ ಆಹಾರದಲ್ಲೂ ಕಡಿತ. ನಾಲ್ಕು ಗಂಟೆಗಿಂತ ಕಡಿಮೆ ವಿಮಾನ ಪ್ರಯಾಣದಲ್ಲಿ ಊಟ-ತಿಂಡಿ ನೀಡುವುದಿಲ್ಲ. ಸೋಷಿಯಲ್-ಡಿಸ್ಟನ್ಸ್- ಫ್ರೆಂಡ್ಲಿ ಕ್ಲಾಸ್ ಎಂಬ ಹೊಸ ಕ್ಲಾಸ್ ಆರಂಭವಾಗಬಹುದು. ಅದಕ್ಕೆ ಮೂರು ಪಟ್ಟು ಹೆಚ್ಚು ಹಣ ನೀಡಬೇಕು. ವಿಮಾನದಲ್ಲಿನ ರೋಬೋಟುಗಳು ಎಲ್ಲಾ ಪ್ರಯಾಣಿಕರು ಸೋಂಕುರಹಿತ ಎಂದು ಘೋಷಿಸುವವರೆಗೆ ವಿಮಾನ ಟೇಕಾಫ್ ಆಗುವುದಿಲ್ಲ. ನಿಮ್ಮ ಬ್ಯಾಗುಗಳನ್ನೂ ಸ್ಯಾನಿಟೈಸ್ ಮಾಡಬೇಕಾಗುವುದು. ಮುನ್ನೂರು ಜನ ಪ್ರಯಾಣಿಸುವ ವಿಮಾನದಲ್ಲಿ ಎಂಬತ್ತು ಜನ ಪ್ರಯಾಣಿಸಬೇಕಿರುವುದರಿಂದ ಉಳಿದ ಪ್ರಯಾಣಿಕರ ವೆಚ್ಚವನ್ನು ಏರ್ ಲೈನ್ಸ್ ಗಳು ನಿಮ್ಮಿಂದಲೇ ವಸೂಲು ಮಾಡುವುದು ಅನಿವಾರ್ಯವಾಗಲಿದೆ. ಅಂದರೆ ವಿಮಾನ ಪ್ರಯಾಣ (ಅದು ಎಕಾನಮಿ ಕ್ಲಾಸ್ ಇರಬಹುದು) ಮೂರು ಪಟ್ಟು ಜಾಸ್ತಿ ಆಗಲಿದೆ. ಅಂದರೆ ಮೊದಲಿನ ಫಸ್ಟ್ ಕ್ಲಾಸ್ ಟಿಕೆಟ್ ಬೆಲೆಗೆ ಎಕಾನಮಿ ಕ್ಲಾಸಿನಲ್ಲಿ ಪ್ರಯಾಣಿಸಬೇಕಾಗುತ್ತದೆ. ವಿಮಾನದಲ್ಲಿ ಪ್ರಯಾಣಿಸುವುದೆಂದರೆ ಘೋರ ಶಿಕ್ಷೆ, ನರಕಯಾತನೆ ಎಂದು ಅನಿಸಿಕೊಳ್ಳಲಿದೆ.

ಇಷ್ಟೆಲ್ಲಾ ಹಿಂಸೆ ಅನುಭವಿಸಿ ಯಾರು ವಿದೇಶಕ್ಕೆ ಹೋಗಲು ಬಯಸುತ್ತಾರೆ ಹೇಳಿ. ಅನಿವಾರ್ಯ ಪ್ರಸಂಗಗಳಲ್ಲಿ ಮಾತ್ರ ವಿದೇಶ ಪ್ರಯಾಣ ಮಾಡುವ ಪ್ರಸಂಗ ಬರಬಹುದು.

ಅಲ್ಲಿಗೆ ವಿದೇಶ ಮತ್ತು ವಿಮಾನ ಪ್ರಯಾಣ ಎಕ್ಕುಟ್ಟಿಹೋದಂತೆ!

(ನೂರೆಂಟು ವಿಶ್ವ ಅಂಕಣ)

Leave a Reply

Your email address will not be published. Required fields are marked *

error: Content is protected !!