Thursday, 20th June 2024

ಸರಕಾರದ ಅನ್ನಭಾಗ್ಯ ವೈಜ್ಞಾನಿಕವಾಗಲಿ

ಸ್ವಾಸ್ಥ್ಯ ಸಂಪದ

Yoganna55@gmail.com

ಸರಕಾರ ಈ ವೈಜ್ಞಾನಿಕ ಅಂಶವನ್ನು ಮನಗಂಡು ತಜ್ಞರ ಸಮಿತಿ ನೇಮಿಸಿ ಅಕ್ಕಿಯನ್ನು ಕನಿಷ್ಠಗೊಳಿಸಿ ಅದರೊಡನೆ ಇನ್ನಿತರ ಆಹಾರ ಪದಾರ್ಥಗಳಾದ ರಾಗಿ, ಗೋಧಿ, ಜೋಳ, ಕಾಳುಗಳು, ಸಿರಿಧಾನ್ಯಗಳನ್ನು ಒಳಗೊಂಡ ಸಮತೋ ಲನ ಆಹಾರವನ್ನು ನೀಡಿದರೆ ಮಾತ್ರ ಅನ್ನಭಾಗ್ಯ ವೈಜ್ಞಾನಿಕವಾಗುತ್ತದೆ.

ಊಟ ಬಲ್ಲವನಿಗೆ ರೋಗವಿಲ್ಲ, ಹಸಿದ ಹೊಟ್ಟೆಗೆ ಧರ್ಮ ಬೋಧಿಸಿ ಪ್ರಯೋಜನವಿಲ್ಲ ಎಂಬ ನಾಣ್ಣುಡಿ ಮತ್ತು ವಿವೇಕಾನಂದರ ಮಾತುಗಳು ಮನುಷ್ಯನಿಗೆ ಆಹಾರ, ಅರಿವು ಮತ್ತು ಅಕ್ಷರಗಳಿಗಿಂತಲೂ ಅತ್ಯವಶ್ಯಕವೆಂಬುದನ್ನು ಪ್ರತಿಪಾದಿಸುತ್ತವೆ. ದೇಶದಲ್ಲಿ ಬಡತನದಿಂದಾಗಿ ಆಹಾರವೂ ಸಿಗದ ಮಂದಿ ಅಸಂಖ್ಯಾತ. ಹಸಿದ ಹೊಟ್ಟೆಗೆ ಆಹಾರ ನೀಡುವುದು ಸರಕಾರಗಳ ಪ್ರಥಮ ಆದ್ಯತೆಯ ಕರ್ತವ್ಯ. ಸರಕಾರದ ಅನ್ನ ಭಾಗ್ಯ ಯೋಜನೆ ಸ್ವಾಗತಾರ್ಹ.

ಆದರೆ ಅನ್ನಭಾಗ್ಯ ಯೋಜನೆಯಲ್ಲಿ ನೀಡುತ್ತಿರುವ ಅಕ್ಕಿಯೊಂದೇ ದೇಹಕ್ಕೆ ಅವಶ್ಯಕತೆ ಇರುವ ಪೌಷ್ಠಿಕಾಂಶಗಳೆಲ್ಲವನ್ನು ಒದಗಿಸುತ್ತದೆಯೇ? ಅಕ್ಕಿಯಲ್ಲಿರುವ ಪೌಷ್ಠಿಕಾಂಶ ಗಳೇನು? ಗ್ರಾಮೀಣ ಪ್ರದೇಶದ ಬಡವರಲ್ಲೂ ಅಧಿಕವಾಗುತ್ತಿರುವ ಸಕ್ಕರೆ ಕಾಯಿಲೆ ಯವರಿಗೆ ಇದು ಸಮಂಜಸವೇ? ಈ ಯೋಜನೆಯಲ್ಲಿ ಸಮತೋಲನ ಆಹಾರ ಪದಾರ್ಥಗಳನ್ನು ನೀಡಿ ಪೌಷ್ಠಿಕಾಂಶಗಳ ಕೊರತೆಯನ್ನು ಸರಿದೂಗಿಸಿ ಸದೃಢ ದೇಹದ ಬೆಳವಣಿಗೆಗೆ ಪೂರಕವಾಗಲು ಸಾಧ್ಯವೇ? ಈ ಯೋಜನೆಯಲ್ಲಿರುವ ಲೋಪದೋಷ ಗಳೇನು? ಪರಿಹಾರ ಮಾರ್ಗೋಪಾಯಗಳೇನು? ಎಂಬುವುಗಳ ಬಗ್ಗೆ ಬೆಳಕು ಚೆಲ್ಲುವ ಲೇಖನವಿದು.

ಮನುಷ್ಯನ ದೇಹ ಜೈವಿಕ ಯಂತ್ರ (ಬಯೋ ಇಂಜಿನ್) ಇದ್ದಂತೆ. ದೇಹದ ಜೈವಿಕ ಯಂತ್ರ ಹುಟ್ಟಿನಿಂದ ಹಿಡಿದು ಅಂತ್ಯದ ವರೆವಿಗೂ ನಿರಂತರವಾಗಿ ಚಾಚೂ ತಪ್ಪದೆ ಕಾರ್ಯ ನಿರ್ವಹಿಸುತ್ತದೆ. ದೇಹದ ಜೈವಿಕ ಯಂತ್ರ ಸುಸೂತ್ರವಾಗಿ ಕಾರ್ಯ ನಿರ್ವಹಿ
ಸಲು ಅದಕ್ಕೆ ಶಕ್ತಿ ಮತ್ತಿತರ ಪೌಷ್ಠಿಕಾಂಶಗಳನ್ನು ಒದಗಿಸುವ ಸಮತೋಲನದ ಆಹಾರವನ್ನು ಪ್ರತಿ ನಿತ್ಯ ಸೇವಿಸಬೇಕು.

ಇಲ್ಲದಿದ್ದಲ್ಲಿ ಜೈವಿಕ ಯಂತ್ರದ ಕಾರ್ಯಗಳು ಅಸ್ತವ್ಯಸ್ತಗೊಂಡು ಕಾಯಿಲೆಗೀಡಾಗಿ ನೋವುಗಳನ್ನು ಅನುಭವಿಸುವುದಲ್ಲದೆ
ಜೀವಾವಧಿಯೂ ಸಹ ಕುಂಠಿತವಾಗುತ್ತದೆ.

ಸಮತೋಲನ ಆಹಾರ ಎಂದರೇನು? : ಯಂತ್ರವೊಂದು ಸುಸೂತ್ರವಾಗಿ ಕಾರ್ಯ ನಿರ್ವಹಿಸಲು ಅದಕ್ಕೆ ಅವಶ್ಯಕತೆ ಇರುವ ಎಲ್ಲ ಕಚ್ಛಾವಸ್ತುಗಳನ್ನು ಒದಗಿಸುವಂತೆ ದೇಹದ ಜೈವಿಕ ಯಂತ್ರಕ್ಕೂ ಸೇವಿಸುವ ಆಹಾರದಲ್ಲಿ ಅದಕ್ಕೆ ಅವಶ್ಯಕವಿರುವ ಎಲ್ಲ ಪೌಷ್ಠಿಕಾಂಶಗಳನ್ನೊಳ ಗೊಂಡ ಆಹಾರವನ್ನು ಪ್ರತಿನಿತ್ಯ ಒದಗಿಸಬೇಕು. ಇದನ್ನೇ ‘ಸಮತೋಲನ ಆಹಾರ’ ಎನ್ನುವುದು.
ಪ್ರತಿನಿತ್ಯ ಸೇವಿಸುವ ಸಮತೋಲನ ಆಹಾರದಲ್ಲಿ ಅವರವರ ವಯಸ್ಸು, ಕೈಗೊಳ್ಳುವ ದೈಹಿಕ ಶ್ರಮ, ತೂಕಗಳಿಗನುಗುಣವಾಗಿ ಅವಶ್ಯಕವಿರುವ ಶಕ್ತಿಯ ಪ್ರಮಾಣ(ಕ್ಯಾಲೊರಿ), ಪ್ರೋಟೀನ್‌ಗಳು, ಜಿಡ್ಡುಗಳು, ವಿಟಮಿನ್‌ಗಳು, ಲವಣಗಳು ಮತ್ತು
ನಾರಿನಾಂಶಗಳಿರಬೇಕು.

ಕಾರ್ಬೋಹೈಡ್ರೇಟ್ ಗಳು ದೇಹಕ್ಕೆ ಶಕ್ತಿಯನ್ನೊದಗಿಸುತ್ತವೆ. ಅಕ್ಕಿ, ರಾಗಿ, ಗೋಧಿ, ಸಕ್ಕರೆ, ಬೆಲ್ಲ, ಸಿರಿಧಾನ್ಯಗಳು ಕಾರ್ಬೊ
ಹೈಡ್ರೇಟ್‌ಗಳನ್ನು ಒದಗಿಸುವ ಪ್ರಮುಖ ಆಹಾರ ಪದಾರ್ಥಗಳು. ಇವುಗಳನ್ನು ಒಂದು ವಾರದಲ್ಲಿ ಒಂದೊಂದನ್ನಾದರೂ ಶಕ್ತಿಗಾಗಿ ಸೇವಿಸಬೇಕು. ಕಾಳುಗಳು, ಬೀಜಗಳು, ಬೇಳೆ ಕಾಳುಗಳು, ತೊಗರಿ ಕಾಳು, ಹಾಲು, ಮೊಟ್ಟೆ, ಮಾಂಸಾಹಾರ ಇವು ಪ್ರೋಟೀನ್ ಒದಗಿಸುವ ಆಹಾರ ಪದಾರ್ಥ ಗಳು. ಇವುಗಳನ್ನು ವಾರದಲ್ಲಿ ಒಂದೊಂದು ದಿನ ಒಂದೊಂದನ್ನು ಸೇವಿಸಬೇಕು.

ಹಣ್ಣು, ತರಕಾರಿ ಗಳು, ಸೊಪ್ಪು ಇವು ವಿಟಮಿನ್‌ಗಳು, ಲವಣಗಳು ಮತ್ತು ನಾರನ್ನು ಒದಗಿಸುವ ಆಹಾರ ಪದಾರ್ಥಗಳಾಗಿದ್ದು, ಇವುಗಳನ್ನು ಪ್ರತಿನಿತ್ಯ ಸೇವಿಸಬೇಕು. ಸೇವಿಸುವ ಆಹಾರ ಪ್ರತಿನಿತ್ಯ ವಿಭಿನ್ನ ಆಹಾರ ಪದಾರ್ಥಗಳನ್ನು ಒಳಗೊಂಡಿದ್ದಲ್ಲಿ ಮಾತ್ರ ಅವಶ್ಯಕವಿರುವ ಎಲ್ಲ ಪೌಷ್ಠಿಕಾಂಶಗಳು ದೇಹದ ಜೈವಿಕ ಯಂತ್ರಕ್ಕೆ ಲಭಿಸುತ್ತದೆ. ಪ್ರತಿನಿತ್ಯ ಅಕ್ಕಿ ಇತ್ಯಾದಿ ಒಂದೇ ಆಹಾರ ಪದಾರ್ಥವನ್ನು ಸೇವಿಸುವುದು ದೇಹಕ್ಕೆ ಹಾನಿಕಾರಕ.

ಒಂದು ಪೌಷ್ಠಿಕಾಂಶ ಕಡಿಮೆಯಾದರೂ ಜೈವಿಕ ಯಂತ್ರದ ಕಾರ್ಯ ನಿರ್ವಹಣೆಯಲ್ಲಿ ಅಸ್ತವ್ಯಸ್ತತೆ ಗಳು ಉಂಟಾಗುತ್ತವೆ. ಕೊರತೆ ದೀರ್ಘಾವಧಿಯಲ್ಲಾದಲ್ಲಿ ಕ್ರಮೇಣ ದೇಹ ದುರ್ಬಲವಾಗುತ್ತದೆ, ಶಕ್ತಿಹೀನವಾಗುತ್ತದೆ. ಆಹಾರ ಅತಿಯಾದರೂ
ಬೊಜ್ಜುಂಟಾಗಿ ಸಕ್ಕರೆಕಾಯಿಲೆ, ಹೃದಯಾಘಾತ, ಏರು ರಕ್ತ ಒತ್ತಡ, ಕ್ಯಾನ್ಸರ್ ಇತ್ಯಾದಿ ಕಾಯಿಲೆಗಳಿಗೆ ನಾಂದಿಯಾಗುತ್ತದೆ. ಆದುದರಿಂದ ಪ್ರತಿಯೊಬ್ಬರು ಅವರವರ ದೇಹಕ್ಕೆ ಅವಶ್ಯಕತೆ ಇರುವ ಸಮತೋಲನ ಆಹಾರವನ್ನು ನಿರ್ಧರಿಸಿಕೊಂಡು
ಅದಕ್ಕನುಗುಣವಾಗಿ ವಿಭಿನ್ನ ಬಗೆಯ ಆಹಾರ ಪದಾರ್ಥವನ್ನು ಸೇವಿಸಬೇಕು.

ಯಾವುದೇ ಬಗೆಯ ಆಹಾರ ಸೇವಿಸಿದರೂ ಹೊಟ್ಟೆ ತುಂಬಿಕೊಂಡು ಹಸಿವು ನೀಗುತ್ತದೆಯಾದರೂ ಅದರಿಂದ ದೇಹಕ್ಕೆ ಎಲ್ಲ ಪೌಷ್ಠಿಕಾಂಶಗಳು ಲಭಿಸಿವೆ ಎಂದಲ್ಲ, ಸಮತೋಲನ ಆಹಾರ ಸೇವನೆಯಿಂದ ಹಸಿವನ್ನು ನೀಗಿಸಿಕೊಂಡಲ್ಲಿ ಮಾತ್ರ ದೇಹದ ಜೈವಿಕ ಯಂತ್ರ ಸುಸೂತ್ರವಾಗಿ ಕಾರ್ಯ ನಿರ್ವಹಿಸುತ್ತದೆ. ದೇಹದ ಜೈವಿಕ ಯಂತ್ರ ಇನ್ನಿತರ ಕೃತಕ ಯಂತ್ರಗಳಂತಲ್ಲ, ಕೃತಕ ಯಂತ್ರಗಳು ಕಚ್ಛಾ ವಸ್ತುಗಳ ಪೂರೈಕೆಯಲ್ಲಿ ಅಲ್ಪ ಸ್ವಲ್ಪ ವ್ಯತ್ಯಾಸವಾದರೂ ತಕ್ಷಣ ಕಾರ್ಯಹೀನವಾಗುತ್ತವೆ.

ಆದರೆ ದೇಹದ ಜೈವಿಕ ಯಂತ್ರ ಕೊರತೆಗಳನ್ನು ಸಹಿಸಿಕೊಂಡು ಕೆಲಕಾಲ ಸಹಜವಾಗಿಯೇ ಕಾರ್ಯನಿರ್ವಹಿಸಿ ದೀರ್ಘ
ಕಾಲದಲ್ಲಿ ಕೊರತೆಯುಂಟಾದಲ್ಲಿ ಮಾತ್ರ ರೋಗ ಗ್ರಸ್ತವಾಗುತ್ತದೆ. ಇದೆಂತಹ ಅದ್ಭುತ ಸೃಷ್ಟಿ! ಈ ಕಾರಣದಿಂದಾಗಿ ಪೌಷ್ಠಿ ಕಾಂಶಗಳ ಕೊರತೆಯ ತೊಂದರೆಗಳು ತಕ್ಷಣ ಅರಿವಿಗೇ ಬರುವುದಿಲ್ಲ. ಈ ಕಾರಣದಿಂದಾಗಿ ಪ್ರತಿಯೊಬ್ಬರೂ ಕೊರತೆಗಳು
ಉಂಟಾಗುವವರೆಗೆ ಕಾಯದೆ ಪೂರ್ವಭಾವಿಯಾಗಿಯೇ ಅವರವರಿಗೆ ಅವಶ್ಯಕವಿರುವ ಪೌಷ್ಠಿಕಾಂಶಗಳನ್ನು ನಿರ್ಧರಿಸಿಕೊಂಡು ಪ್ರತಿನಿತ್ಯ ಸಮತೋಲನ ಆಹಾರವನ್ನು ಸೇವಿಸುವ ಅರಿವನ್ನು ಜನಸಮುದಾಯದಲ್ಲಿ ಮೂಡಿಸುವುದು ಸರಕಾರದ ಕರ್ತವ್ಯ ವಾಗಬೇಕು.

ಅನ್ನಭಾಗ್ಯ (ಅಕ್ಕಿ) ವೈಜ್ಞಾನಿಕವಲ್ಲ: ಕರ್ನಾಟಕದಲ್ಲಿ ಮೊಟ್ಟ ಮೊದಲ ಬಾರಿಗೆ ಬಡವರಿಗೆ ೧ ರುಗೆ ೧ ಕೆಜಿಯಂತೆ ಅಕ್ಕಿ ಕೊಡುವ ಕಾರ್ಯ ಕ್ರಮವನ್ನು ರಾಮಕೃಷ್ಣ ಹೆಗಡೆಯವರ ಸರಕಾರ ಪ್ರಾರಂಭಿಸಿದ್ದು, ಅನಂತರ ರಾಷ್ಟ್ರಮಟ್ಟದಲ್ಲಿ
ದೇವೇ ಗೌಡರು ಪ್ರಧಾನಿಯಾಗಿದ್ದಾಗ ರಾಷ್ಟ್ರಮಟ್ಟದಲ್ಲಿ ಇದನ್ನು ಅನುಷ್ಠಾನಗೊಳಿಸಲಾಯಿತು. ಸಿದ್ದರಾಮಯ್ಯನವರ ಸರಕಾರ ಪುಕ್ಕಟೆಯಾಗಿ ನೀಡುವ ಯೋಜನೆಯನ್ನು ಜಾರಿಗೆ ತಂದಿತು.

ಸರಕಾರದ ಅನ್ನಭಾಗ್ಯ ಯೋಜನೆಯಲ್ಲಿ ಕುಟುಂಬದ ಪ್ರತಿ ವ್ಯಕ್ತಿಗೆ ೧೦ ಕೆಜಿ ಅಕ್ಕಿಯನ್ನು ಕೊಡಲು ಉದ್ದೇಶಿಸಿರುವುದು ಮೇಲ್ಕಂಡ ಅಂಶಗಳ ಹಿನ್ನೆಲೆಯಲ್ಲಿ ವೈಜ್ಞಾನಿಕವೇ ಎಂಬುದನ್ನು ಸರಕಾರ ಪರಾಮರ್ಶಿಸಬೇಕು. ಇಂದು ಕುಟುಂಬದಲ್ಲಿ
ಕನಿಷ್ಠ ೪ ಮಂದಿ ಇದ್ದು, ಪ್ರತಿ ಕುಟುಂಬಕ್ಕೂ ಪ್ರತಿ ತಿಂಗಳು ೪೦ ಕೆಜಿ ಅಕ್ಕಿ ಸಿಗುವುದರಿಂದ ಪ್ರತಿನಿತ್ಯ ಇದನ್ನೇ ಆಹಾರ ವನ್ನಾಗಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿದ್ದು, ಆಹಾರದಲ್ಲಿ ಅಸಮತೋಲನ ಉಂಟಾಗಿ ಹಲವಾರು ಕಾಯಿಲೆಗಳಿಗೆ ನಾಂದಿ
ಯಾಗಿ, ಭಾಗ್ಯದ ಬದಲು ಬವಣೆಗಳೇ ಉಂಟಾಗುವ ಸಂಭವ ಹೆಚ್ಚು.

ಅಕ್ಕಿ ಸೇವನೆ ಕ್ರಿ.ಪೂ. ೪ ಸಾವಿರ ವರ್ಷಗಳ ಹಿಂದಿನಿಂದಲೂ ಮನುಷ್ಯನಲ್ಲಿ ಚಾಲ್ತಿಯಲ್ಲಿದ್ದು, ದಕ್ಷಿಣ ಭಾರತದಲ್ಲಿ ಅದರಲ್ಲೂ ಆಂಧ್ರದಲ್ಲಿ ಇದನ್ನು ಯಥೇಚ್ಛವಾಗಿ ಬೆಳೆಯಲಾಗುತ್ತದೆ. ಅಕ್ಕಿಯಲ್ಲಿ ಬಣ್ಣವನ್ನಾಧರಿಸಿ ಕೆಂಪು ಅಕ್ಕಿ, ಬಿಳಿ ಅಕ್ಕಿ, ಮಾಸಲು ಅಕ್ಕಿ, ಕಪ್ಪು ಅಕ್ಕಿ ಮತ್ತು ಉದ್ದ, ದಪ್ಪವನ್ನಾಧರಿಸಿ ದಪ್ಪ ಅಕ್ಕಿ ಮತ್ತು ಸಣ್ಣ ಅಕ್ಕಿ, ಬಾಸುಮತಿ ಅಕ್ಕಿ ಎಂಬ ಹಲವಾರು ವಿಧಗಳಿದ್ದು, ಇವುಗಳಲ್ಲಿರುವ ಪೌಷ್ಠಿಕಾಂಶಗಳು ವಿಭಿನ್ನವಾಗಿವೆ.

ಎಲ್ಲಾ ಅಕ್ಕಿಗಳಲ್ಲಿ ಶಕ್ತಿಯನ್ನು ಒದಗಿಸುವ ಕಾರ್ಬೋಹೈಡ್ರೇಟ್, ಪೊಟ್ಯಾಷಿಯಂ, ವಿಟಮಿನ್ ಸಿ, ಬಿ ವಿಟಮಿನ್‌ಗಳು, ಮೆಗ್ನೀಷಿಯಂ, ಸೆಲೆನಿಯಂ ಮತ್ತು ನಾರಿನಾಂಶಗಳಿದ್ದು, ಕೆಂಪು, ಮಾಸಲು ಮತ್ತು ಬಾಸುಮತಿ ಅಕ್ಕಿಗಳಲ್ಲಿ ಇವು ಅಧಿಕ ಪ್ರಮಾಣದಲ್ಲಿದ್ದು, ಬಿಳಿ ಅಕ್ಕಿಯಲ್ಲಿ ಇವು ಅತ್ಯಲ್ಪ ಪ್ರಮಾಣದಲ್ಲಿವೆ. ಆರೋಗ್ಯದ ದೃಷ್ಟಿಯಿಂದ ಬಿಳಿ ಅಕ್ಕಿ ಕೆಂಪು ಮತ್ತು ಮಾಸಲು ಅಕ್ಕಿಗಳಿಗಿಂತ ಒಳ್ಳೆಯದಲ್ಲ.

ಭತ್ತದ ಹೊರ ಹೊದಿಕೆಯನ್ನು ಮಾತ್ರ ತೆಗೆದು ಪಾಲಿಷ್ ಮಾಡದ ಮಾಸಲು ಮತ್ತು ಕೆಂಪು ಅಕ್ಕಿ ಎಲ್ಲ ಪೌಷ್ಠಿಕಾಂಶಗಳನ್ನು ಅಧಿಕ ಪ್ರಮಾಣದಲ್ಲಿ ಒಳಗೊಂಡಿರುತ್ತದೆ ಮತ್ತು ದೇಹಕ್ಕೆ ನಿಧಾನವಾಗಿ ಗ್ಲುಕೋಸ್ ಅನ್ನು ಬಿಡುಗಡೆ ಮಾಡುವುದರಿಂದ
ಸಕ್ಕರೆ ಕಾಯಿಲೆ ಬರದಂತಾಗಿಸಲು ಮತ್ತು ಇರುವವರಲ್ಲಿ ನಿಯಂತ್ರಿಸಲು ಇದು ಸಹಕಾರಿ.

ಅಕ್ಕಿಯನ್ನು ಪಾಲಿಷ್ ಮಾಡುವುದರಿಂದ ಅದರ ಹೊರ ಹೊದಿಕೆಯಲ್ಲಿರುವ ಪೌಷ್ಠಿಕಾಂಶಗಳು ನಷ್ಟವಾಗಿ ಬಿಳಿ ಅಕ್ಕಿಯಾಗು ತ್ತದೆ. ಬಿಳಿ ಅಕ್ಕಿ ಬಹುಬೇಗ ರಕ್ತ ಗ್ಲುಕೋಸನ್ನು ಹೆಚ್ಚಿಸುವುದರಿಂದ ಸಕ್ಕರೆಕಾಯಿಲೆ ಬರುವ ಮತ್ತು ಸಕ್ಕರೆಕಾಯಿಲೆ ಇರುವವ ರಲ್ಲಿ ನಿಯಂತ್ರಣಕ್ಕೆ ಬಾರದಿರುವ ಸಾಧ್ಯತೆ ಹೆಚ್ಚು. ಅಧಿಕವಾಗುತ್ತಿರುವ ಸಕ್ಕರೆ ಕಾಯಿಲೆಗೆ ವ್ಯಾಪಕವಾಗಿ ಸೇವಿಸುತ್ತಿರುವ ಅಕ್ಕಿ ಸೇವನೆಯೇ ಪ್ರಮುಖ ಕಾರಣವಾಗಿರಬಹುದು.

ಆದುದರಿಂದ ಪ್ರತಿನಿತ್ಯ ಅಕ್ಕಿ ಸೇವನೆ ಆರೋಗ್ಯಕ್ಕೆ ಹಿತವಲ್ಲ. ಅನ್ನ ಮತ್ತು ಸಾಂಬಾರ್ ಮಾಡುವುದು ಇನ್ನಿತರ ಆಹಾರ ತಯಾರಿಕೆಗಿಂತ ಸುಲಭವಾದುದರಿಂದ ಅಕ್ಕಿಯನ್ನು ಪ್ರತಿನಿತ್ಯ ಪ್ರಧಾನ ಆಹಾರವಾಗಿ ಸೇವಿಸುವ ಅವೈಜ್ಞಾನಿಕ ಪದ್ಧತಿ
ರೂಢಿಯಲ್ಲಿದೆ. ನಮ್ಮ ಕುಟುಂಬಗಳಲ್ಲಿ ಪ್ರತಿನಿತ್ಯ ಸೇವಿಸುವ ಶೇ. ೯೦ ರಷ್ಟು ಆಹಾರ ಅಕ್ಕಿಯ ಮೂಲದಿಂದಾಗಿದ್ದು, ಇದು ಹಲವಾರು ಕಾಯಿಲೆಗಳ ಉಗಮಕ್ಕೆ ನಾಂದಿಯಾಗಿದೆ. ಸರಕಾರ ಈ ವೈಜ್ಞಾನಿಕ ಅಂಶವನ್ನು ಮನಗಂಡು ತಜ್ಞರ ಸಮಿತಿ ನೇಮಿಸಿ ಅಕ್ಕಿಯನ್ನು ಕನಿಷ್ಠಗೊಳಿಸಿ ಅದರೊಡನೆ ಇನ್ನಿತರ ಆಹಾರ ಪದಾರ್ಥಗಳಾದ ರಾಗಿ, ಗೋಧಿ, ಜೋಳ, ಕಾಳುಗಳು, ಸಿರಿಧಾನ್ಯಗಳನ್ನು ಒಳಗೊಂಡ ಸಮತೋಲನ ಆಹಾರವನ್ನು ನೀಡಿದರೆ ಮಾತ್ರ ಅನ್ನಭಾಗ್ಯ ವೈಜ್ಞಾನಿಕವಾಗುತ್ತದೆ.

ಇಲ್ಲವಾದಲ್ಲಿ ಅನ್ನಭಾಗ್ಯ ಯೋಜನೆಯೇ ಅನಾರೋಗ್ಯಕ್ಕೆ ನಾಂದಿಯಾಗಬಹುದು. ವಚನಕಾರರು ಬಹಳ ಹಿಂದೆಯೇ ಈ ವೈಜ್ಞಾನಿಕ ಅಂಶವನ್ನು ಮನಗಂಡಿದ್ದನ್ನು ಸರ್ವಜ್ಞನ ಈ ವಚನಗಳಲ್ಲಿ ಗುರುತಿಸಬಹುದು. ಅಕ್ಕಿಯನು ತಿಂದವನು ಹಕ್ಕಿ ಯಂತಾಗುವನು (ಸಕ್ಕರೆಕಾಯಿಲೆಯಿಂದ)/ ರಾಗಿಯನು ತಿಂದವನು ನಿರೋಗಿಯೆಂದೆನಿಸುವನು/ ಜೋಳವನು ತಿಂದವನು ತೋಳದಂತಾಗುವನು. ಶಾಲಾ ಮಕ್ಕಳಿಗೆ ನೀಡುತ್ತಿರುವ ಬಿಸಿಯೂಟ ಯೋಜನೆಯೂ ಸಹ ಸಮತೋಲನ ಆಹಾರದಿಂದ ಕೂಡಿರದಿರುವುದನ್ನು ಸರಕಾರ ಮನಗಾಣಬೇಕು.

ಅನ್ನಭಾಗ್ಯದ ದುರುಪಯೋಗ : ಅನ್ನಭಾಗ್ಯದಲ್ಲಿ ನೀಡುತ್ತಿರುವ ಅಕ್ಕಿಯ ದುರುಪಯೋಗ ಹಲವಾರು ವಿಧಗಳಲ್ಲಾಗುತ್ತಿದೆ.
-ಲಾನುಭವಿಗಳಿಂದ ಈ ಅಕ್ಕಿಯನ್ನು ೧೨-೧೩ ರುಪಾಯಿಗಳಿಗೆ ಪಡೆದು ಅದನ್ನು ಬಿಳಿ ಅಕ್ಕಿಯನ್ನಾಗಿಸಿ ೪೦-೫೦ ರುಪಾಯಿಗಳಿಗೆ
ಮಾರಾಟ ಮಾಡುವ ದಂಧೆ ವ್ಯಾಪಕವಾಗಿ ನಡೆಯುತ್ತಿರುವುದು ಸರಕಾರದ ಗಮನಕ್ಕೆ ಬಂದಿಲ್ಲವೇನು? ಫಲಾನುಭವಿಗಳು ಈ
ಅಕ್ಕಿಯನ್ನು ಹೋಟೆಲ್‌ಗಳಿಗೆ ಮಾರಿಕೊಳ್ಳುತ್ತಿರುವ ಹಲವಾರು ಪ್ರಸಂಗಗಳನ್ನು ನಾನೇ ಕಣ್ಣಾರೆ ಕಂಡಿದ್ದೇನೆ. ದುರ್ಬಲ ವರ್ಗದವರು ಈ ಅಕ್ಕಿಯನ್ನು ಮಾರಿ ಬಂದ ಹಣದಿಂದ ಮದ್ಯವ್ಯಸನಿಗಳಾಗುತ್ತಿದ್ದಾರೆ.

ನನ್ನ ವೈದ್ಯಕೀಯ ವೃತ್ತಿಯಲ್ಲಿ ದುರ್ಬಲ ವರ್ಗದ ಮದ್ಯ ವ್ಯಸನಿ ರೋಗಿಗಳನ್ನು ಮದ್ಯಪಾನಕ್ಕೆ ಹಣದ ಮೂಲವನ್ನು ಪ್ರಶ್ನಿಸಿದಾಗ ಹಲವಾರು ಪ್ರಸಂಗಗಳಲ್ಲಿ ಈ ರಹಸ್ಯ ಬಹಿರಂಗಗೊಂಡಿದೆ. ಈ ದುರುಪಯೋಗಗಳನ್ನು ತಡೆಗಟ್ಟುವುದು ಅತ್ಯವಶ್ಯಕ. ದುಡಿಯಲು ಶಕ್ತಿ ಇಲ್ಲದ ವೃದ್ಧರು, ಅಂಗವಿಕಲರು, ಕೆಲಸ ಸಿಗದೆ ಹಸಿವಿನಿಂದ ನರಳುತ್ತಿರುವ ಕಡುಬಡವರು ಮಾತ್ರ ಅನ್ನಭಾಗ್ಯಕ್ಕೆ ಅರ್ಹರಾಗಬೇಕೇ ವಿನಃ ದುಡಿಯುವ ಶಕ್ತಿ ಸಾಮರ್ಥ್ಯ ಮತ್ತು ಅವಕಾಶಗಳಿರುವವರಿಗೆ ನೀಡುವ ಅನ್ನಭಾಗ್ಯ ಅವರ ಕ್ರಿಯಾಶೀಲತೆಯನ್ನು ನಾಶಮಾಡಿ ಮಾನವ ಸಂಪನ್ಮೂಲ ಶಕ್ತಿ ದಮನಕ್ಕೆ ಕಾರಣವಾಗುತ್ತದೆ.

ಫಲಾನುಭವಿಗಳನ್ನು ಆಯಾಯ ಪ್ರದೇಶದಲ್ಲಿ ಕನಿಷ್ಠ ಸಮಯಕ್ಕಾದರೂ ಗಿಡ ಬೆಳೆಸುವ, ಸ್ವಚ್ಛಗೊಳಿಸುವ ಇತ್ಯಾದಿ
ಸಾರ್ವಜನಿಕ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಬಳಸಿಕೊಳ್ಳಬೇಕು. ಅನ್ನಭಾಗ್ಯ ಯೋಜನೆಯನ್ನು ಕೂಲಿ
ಕಾರ್ಮಿಕರು ಸದುಪಯೋಗ ಪಡಿಸಿಕೊಂಡು ಆರ್ಥಿಕ ಭದ್ರತೆಯನ್ನು ಕಟ್ಟಿಕೊಳ್ಳುವ ಬದಲು ಸೋಮಾರಿಗಳಾದ ಪರಿಣಾಮ ವಾಗಿ ಇಂದು ವ್ಯವಸಾಯಕ್ಕಾಗಲಿ ಮತ್ತಿತರ ಕೆಲಸಗಳಿಗೆ ಕೂಲಿ ಕಾರ್ಮಿಕರು ಲಭಿಸದೆ ಈಗಾಗಲೆ ಬಹಳ ತೊಂದರೆ ಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಮಾನವ ಸಂಪನ್ಮೂಲಾಧಾರಿತ ಗ್ರಾಮೀಣ ಕಸುಬುಗಳಿಗೆ ದೊಡ್ಡ ಮಟ್ಟದಲ್ಲಿ ಧಕ್ಕೆಯಾಗುವ ಎಲ್ಲ ಸಾಧ್ಯತೆಗಳು ಗೋಚರವಾಗುತ್ತಿವೆ.

ರಾಷ್ಟ್ರಕಾರಣಿ (ಮುತ್ಸದ್ದಿ) ಮುಂದಿನ ತಲೆಮಾರಿನ ಬಗ್ಗೆ ಯೋಚಿಸಿ ಯೋಜನೆಯನ್ನು ರೂಪಿಸುತ್ತಾನೆ. ರಾಜಕಾರಣಿ ಮುಂದಿನ ಚುನಾವಣೆಯನ್ನು ಮಾತ್ರ ಗಮನದಲ್ಲಿಟ್ಟುಕೊಂಡು ಯೋಜನೆಯನ್ನು ರೂಪಿಸುತ್ತಾನೆ. ರಾಜಕೀಯ ಯೋಜನೆಗಳು ತಾತ್ಕಾಲಿಕ. ರಾಷ್ಟ್ರಕಾರಣಿ ಯೋಜನೆಗಳು ಶಾಶ್ವತ. ಗ್ರಾಮೀಣ ಪ್ರದೇಶದ ಹಿನ್ನೆಲೆ ಯಿಂದ ಬಂದ ಅಪಾರ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಅನುಭವವಿರುವ ಮುಖ್ಯಮಂತ್ರಿಸಿದ್ದರಾಮಯ್ಯನವರ ಸರಕಾರ ಇವೆಲ್ಲವುಗಳ ಹಿನ್ನೆಲೆಯಲ್ಲಿ ಮುತ್ಸದ್ದಿ ನಿರ್ಧಾರ ವನ್ನು ತೆಗೆದುಕೊಳ್ಳುತ್ತದೆ ಎಂದು ಆಶಿಸೋಣ.

error: Content is protected !!