Friday, 21st June 2024

ಪಕ್ಷದ ಅಡಿಪಾಯದಲ್ಲೇ ಆಕ್ರೋಶ

ಅಶ್ವತ್ಥಕಟ್ಟೆ

ranjith.hoskere@gmail.com

ಹಿಂದೂತ್ವದ ಪ್ರಮುಖ ನಾಯಕರಾಗಿರುವ ಪ್ರಮೋದ್ ಮುತಾಲಿಕ್, ಚಕ್ರವರ್ತಿ ಸೂಲಿಬೆಲೆ ಧ್ವನಿಗೂಡಿಸುತ್ತಿರುವುದರಿಂದ ಪಕ್ಷದ ವರಿಷ್ಠರು ಗಂಭೀರವಾಗಿ ಆಲೋಚನೆ ಮಾಡಬೇಕಾಗಿದೆ. ಇಲ್ಲದಿದ್ದರೆ ಎದುರಾಗಲಿರುವ ಚುನಾವಣೆಯನ್ನು ಎದುರಿಸು ವುದು ಭಾರಿ ಸಮಸ್ಯೆಯಾಗುತ್ತದೆ.

ಯಾವುದೇ ಪಕ್ಷಕ್ಕೆ ಕಾರ್ಯಕರ್ತರೇ ಜೀವಾಳ. ನಾಲ್ಕೈದು ದಶಕದಲ್ಲಿ ಬಿಜೆಪಿ ಎದ್ದು ನಿಂತು, ಅಧಿಕಾರದ ಗದ್ದುಗೆಯಲ್ಲಿ ಕೂರುವುದಕ್ಕೆ ಪ್ರಮುಖ ಕಾರಣವೂ ಇದೇ ಕಾರ್ಯಕರ್ತರು. ಅದರಲ್ಲಿಯೂ ಯಾವುದೇ ಆಸೆ, ಆಕಾಂಕ್ಷೆಯಿಲ್ಲದೇ ಬಿಜೆಪಿಗಾಗಿಯೇ ತನು-ಮನ-ಧನವನ್ನು ಸಮರ್ಪಿಸಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದ ಅದೇ ಕಾರ್ಯಕರ್ತರು ಇದೀಗ ತಮ್ಮದೇ ಪಕ್ಷದ ಸರಕಾರದ ವಿರುದ್ಧ ತಿರುಗಿ ಬಿದ್ದಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಾಗಿನಿಂದಲೂ, ಕಾರ್ಯ ಕರ್ತರಲ್ಲಿ ಸರಕಾರದ ಆಡಳಿತ ವಿರುದ್ಧ ಸಣ್ಣ ಪ್ರಮಾಣದ ಅಸಮಾಧಾನ ಇದ್ದೇ ಇತ್ತು. ಅದರಲ್ಲಿಯೂ ಯಡಿಯೂರಪ್ಪ ಅವರು ರಾಜೀನಾಮೆ ನೀಡಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರಕ್ಕೆ ಬಂದ ಬಳಿಕ ಈ ಆಕ್ರೋಶ ಹೆಚ್ಚಾಯಿತು. ಈ ರೀತಿ ಆಕ್ರೋಶ ಹೆಚ್ಚಾಗಲು, ತಮ್ಮ ಪಕ್ಷದ ಸರಕಾರ ವಿದ್ದಾಗಲೇ ತಮ್ಮ ಕೆಲಸಗಳಾಗುತ್ತಿಲ್ಲ. ಬದಲಿಗೆ ಬೇರೆಯವರ ಕೆಲಸಗಳೇ ಆಗುತ್ತವೆ ಎನ್ನುವುದು ಒಂದು ಭಾಗವಾದರೆ, ಹಿಂದುತ್ವದ ಹೆಸರಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರಕಾರದ ಅವಧಿಯಲ್ಲಿಯೇ ಹಿಂದುತ್ವಕ್ಕೆ ಹಾಗೂ ಹಿಂದೂಗಳಿಗೆ ರಕ್ಷಣೆಯಿಲ್ಲ ಎನ್ನುವುದು ಎರಡನೇ ಅಂಶ.

ಈ ಎರಡು ಅಂಶಗಳು ಬೂದಿ ಮುಚ್ಚಿದ ಕೆಂಡದಂತಿತ್ತು. ಆದರೆ ಕಳೆದೊಂದು ವಾರದ ಹಿಂದೆ ದಕ್ಷಿಣ ಕನ್ನಡದ ಬೆಳ್ಳಾರೆಯಲ್ಲಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ಅವರ ಕಗ್ಗೊಲೆಯ ಬಳಿಕ, ಈ ಅಸಮಾಧಾನ, ಆಕ್ರೋಶ ಕೇವಲ ಪಕ್ಷದ ವೇದಿಕೆ ಅಥವಾ ಖಾಸಗಿ ಮಾತುಕತೆ ಯಾಗಿ ಉಳಿಯದೇ ಬಹಿರಂಗವಾಗುತ್ತಿರುವುದು ಪಕ್ಷದ ನಾಯಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಅದರಲ್ಲಿಯೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಅವರ ಕಾರನ್ನು ಅಲುಗಾಡಿಸಿ ಆಕ್ರೋಶ ಹೊರಹಾಕಿದ್ದು, ಮುಖ್ಯಮಂತ್ರಿ ಬೊಮ್ಮಾಯಿ ಅವರಿದ್ದಾಗಲೇ ಪಕ್ಷದ ನಾಯಕತ್ವದ ವಿರುದ್ಧ ಘೋಷಣೆ ಕೂಗಿದ್ದು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಯುವ ಮೋರ್ಚಾದ ನಾನಾ ಹುದ್ದೆಗಳಿಗೆ ಸಾಮೂಹಿಕ ರಾಜೀನಾಮೆ ನೀಡಿದ್ದು ಉತ್ತಮ ಬೆಳವಣಿಗೆಯಂತೂ ಅಲ್ಲವೇ, ಅಲ್ಲ.

ಹೌದು, ಯಾವುದೇ ಪಕ್ಷದ ಸರಕಾರ ಆಡಳಿತದಲ್ಲಿರುವಾಗ ಕಾರ್ಯಕರ್ತರು ಈ ರೀತಿ ಆಕ್ರೋಶ ವ್ಯಕ್ತಪಡಿಸುವುದು ಆ ಪಕ್ಷಕ್ಕೆ ಡ್ಯಾಮೇಜ್ ಮಾಡುತ್ತದೆ. ಆದರೆ ರಾಜ್ಯದ ಹಾಗೂ ದೇಶದ ರಾಜಕೀಯ ವ್ಯವಸ್ಥೆಯಲ್ಲಿ, ಬಿಜೆಪಿ ಕಾರ್ಯಕರ್ತರು ಇತರ ಪಕ್ಷಗಳ ಕಾರ್ಯಕರ್ತರಿಗಿಂತ ವಿಭಿನ್ನವಾಗಿ ನಿಲ್ಲುತ್ತಾರೆ. ಏಕೆಂದರೆ, ಸಾಮಾನ್ಯವಾಗಿ ಬಿಜೆಪಿ ಕಾರ್ಯಕರ್ತರು, ಸೈದ್ಧಾಂತಿಕ ವಿಷಯಗಳಿಗೆ ಸೀಮಿತವಾಗಿ ಪಕ್ಷದ ಸೇವೆಯಲ್ಲಿರುತ್ತಾರೆಯೇ (ಖಟ್ಟರ್ ಬಿಜೆಪಿ ಕಾರ್ಯಕರ್ತರಿಗೆ ಮಾತ್ರ ಈ ಮಾತು) ಹೊರತು, ಅಽಕಾರ, ಖುರ್ಚಿ ಅಥವಾ ರ‍್ಯಾಲಿಯಲ್ಲಿ ಬಂದರೆ ಸಿಗುವ ೫೦೦ ರು. ಆಸೆಗಾಗಿ ಪಕ್ಷದೊಂದಿಗೆ ಗುರುತಿಸಿಕೊಂಡಿ ರುವುದಿಲ್ಲ.

ಇದರೊಂದಿಗೆ ಬಿಜೆಪಿಯ ಬೆನ್ನೆಲುಬು ಆಗಿರುವ ಆರ್‌ಎಸ್‌ಎಸ್‌ನ ಪ್ರಚಾರಕರೂ ಸಹ, ದೇಶ-ಧರ್ಮದ ರಕ್ಷಣೆಗಾಗಿ ಬಿಜೆಪಿಯನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ ಸಂಘಟನೆಯಲ್ಲಿ ತೊಡಗಿಸಿಕೊಂಡಿರು ತ್ತಾರೆ. ಆದರೆ ರಾಜ್ಯದಲ್ಲಿ ಆಗುತ್ತಿರುವ ಸರಳಿ ಘಟನಾವಳಿಗಳು ಇಂತಹ ನಿಷ್ಠಾವಂತ ಕಾರ್ಯಕರ್ತರಿಗೆ ಭ್ರಮ ನಿರಸವನ್ನು ತರಿಸಿದೆ. ಆ ಕಾರಣಕ್ಕಾಗಿಯೇ, ಬಿಜೆಪಿಯೇ ಉಸಿರು ಎಂದುಕೊಂಡವರು ಪಕ್ಷದ ನಾಯಕರ, ಸರಕಾರದ ವಿರುದ್ಧ ವಾಗ್ದಾಳಿ ನಡೆಸುವ ಸ್ಥಿತಿಗೆ ಬಂದು ನಿಂತಿದ್ದಾರೆ. ಪಕ್ಷದ ಸಂಘಟನೆಯಿಂದ ದೂರಾಗುವ ಮಾತುಗಳನ್ನು ಬಹಿರಂಗವಾಗಿಯೇ
ಹೇಳಿಕೊಳ್ಳು ತ್ತಿದ್ದಾರೆ.

ಇಷ್ಟು ದಿನ ಧರ್ಮ ಹಾಗೂ ದೇಶ ರಕ್ಷಣೆಗಾಗಿ ಬಿಜೆಪಿಯೊಂದಿಗೆ ನಿಂತಿದ್ದವರು, ಪ್ರವೀಣ್ ನೆಟ್ಟಾರ್ ಕೊಲೆಯ ಬಳಿಕ ಈ ರೀತಿಯಾದ ಭಾರಿ ಬದಲಾವಣೆ ಆಗಿರುವುದು ಏಕೆ ಎನ್ನುವ ಪ್ರಶ್ನೆ ಬರುವುದು ಸಹಜ. ಆದರೆ ಕೇವಲ ಪ್ರವೀಣ್ ನೆಟ್ಟಾರ್ ಘಟನೆ ಮಾತ್ರ ಪಕ್ಷದ ನಿಷ್ಠಾವಂತರು ರೋಸಿ ಹೋಗಲು ಕಾರಣವಲ್ಲ. ಬದಲಿಗೆ ಬಸವರಾಜ ಬೊಮ್ಮಾಯಿ ನೇತೃತ್ವದ ಸರಕಾರ ಅಽಕಾರಕ್ಕೆ ಬಂದಾಗಿನಿಂದಲೂ, ಈ ರೀತಿಯ ಸರಣಿ ಘಟನೆಗಳು ನಡೆಯುತ್ತಲೇ ಇದೆ. ಈ ಎಲ್ಲ ಘಟನೆಗಳ ನೋವು, ಪ್ರವೀಣ್ ನೆಟ್ಟಾರ್ ಪ್ರಕರಣದಲ್ಲಿ ಕಟ್ಟೆ ಒಡೆದಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಹಿಜಾಬ್ ವಿಷಯವಾಗಬಹುದು, ಆಜಾನ್ ನಿರ್ಬಂಧವಿರಬಹುದು, ಝಟ್ಕಾ ವಿಷಯವಾಗಬಹುದು, ಹಿಂದೂ ಕಾರ್ಯಕರ್ತ ಹರ್ಷಾ ಕೊಲೆ ಪ್ರಕರಣ, ಪಠ್ಯಪುಸ್ತಕ ವಿವಾದವಿರಬಹುದು… ಈ ಎಲ್ಲ ವಿಷಯದಲ್ಲಿಯೂ ಬಿಜೆಪಿ ಸರಕಾರ, ಮುಸ್ಲಿಮರ ಪರವಾಗಿ ನೇರವಾಗಿ ನಿಲ್ಲದಿದ್ದರೂ, ‘ಸಾಫ್ಟ್ ಕಾರ್ನರ್’ ತೋರಿತೇ? ಅಥವಾ ನಿರೀಕ್ಷಿತ ಬೆಂಬಲವನ್ನೂ ನೀಡಿಲ್ಲ.

ಮುಖ್ಯಮಂತ್ರಿಯಾದಿಯಾಗಿ ಸಚಿವರೆಲ್ಲರೂ ‘ಕಠಿಣ ಕ್ರಮ’ ಎನ್ನುವ ಹೇಳಿಕೆಯನ್ನು ನೀಡಿದ್ದು ಬಿಟ್ಟರೆ ಹಿಂದೂ ಧರ್ಮದ ವಿಷಯದಲ್ಲಿ ಗಟ್ಟಿ ನಿಲುವನ್ನು ತಾಳಲಿಲ್ಲ. ಕೆಲವೇ ಕೆಲವರು ಸಚಿವರನ್ನು ಹೊರತುಪಡಿಸಿದರೆ, ಬಹುತೇಕರು ಈ ರೀತಿಯ ವಿವಾದಗಳು ಬಂದಾಗಲೆಲ್ಲ ‘ಮೌನ’ಕ್ಕೆ ಶರಣಾಗಿದ್ದೇ ಹೆಚ್ಚು. ಹಿಂದೂತ್ವದ ಆಧಾರದಲ್ಲಿಯೇ ಬಿಜೆಪಿ ಕರ್ನಾಟಕದಲ್ಲಿ ಸರಕಾರವನ್ನು ರಚಿಸಿದ್ದರೂ, ಮುಸ್ಲಿಮರ ಓಲೈಕೆಯ ಸಲುವಾಗಿ ಒಂದು ಹಂತದಲ್ಲಿ ಮೃಧು ಧೋರಣೆ ತಾಳುತ್ತಿದ್ದಾರೆ ಎನ್ನುವುದು ಹಿಂದೂ ನಾಯಕರ ಆಕ್ರೋಶ. ಈ ಮಾತಿಗೆ ಬಿಜೆಪಿ ಕಾರ್ಯಕರ್ತರು ಒಪ್ಪಿಕೊಳ್ಳುತ್ತಿದ್ದಾರೆ.

ಮೂರು ತಿಂಗಳ ಅಂತರದಲ್ಲಿಯೇ ಇಬ್ಬರು ಹಿಂದೂ ಕಾರ್ಯಕರ್ತರ ಹತ್ಯೆಯಾಗಿರುವುದು ಬಿಜೆಪಿ ಕಾರ್ಯಕರ್ತರ ಆತಂಕಕ್ಕೆ ಕಾರಣವಾಗಿದೆ. ಪಕ್ಷದ ಸಿದ್ಧಾಂತವನ್ನು ಪಾಲಿಸುವುದಕ್ಕೆ ಅಡ್ಡ ಹಾಕುವ ದುಷ್ಟಶಕ್ತಿಗಳನ್ನು ಮಟ್ಟಹಾಕುವುದಕ್ಕೂ ಬೊಮ್ಮಾಯಿ ಸರಕಾರದಿಂದ ಏಕೆ ಸಾಧ್ಯವಾಗುತ್ತಿಲ್ಲ. ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸರಕಾರ, ಮುಸ್ಲಿಂ ಹಾಗೂ ಹಿಂದೂ ವಿರೋಽಗಳ ವಿರೋಧ ಕಟ್ಟಿಕೊಂಡು ಯಶಸ್ವಿ ಆಡಳಿತ ನೀಡುತ್ತಿದ್ದಾರೆ. ಆ ಆಡಳಿತ ಬೊಮ್ಮಾಯಿ ಅವರಿಂದ ಏಕೆ ಸಾಧ್ಯವಿಲ್ಲ ಎನ್ನುವುದು ಬಹುತೇಕ ಕಾರ್ಯಕರ್ತರ ಪ್ರಶ್ನೆಯಾಗಿದೆ.

ಅಂದ ಮಾತ್ರಕ್ಕೆ ಈ ರೀತಿ ವಿರೋಧಿಸುತ್ತಿರುವವರೆಲ್ಲ ಬಿಜೆಪಿಯನ್ನು ವಿರೋಽಸುತ್ತಿದ್ದಾರೆ ಎಂದರೆ, ಅದು ತಪ್ಪಾಗುತ್ತದೆ. ಬಹುತೇಕ ಕಾರ್ಯಕರ್ತರು, ‘ನಮ್ಮ ವಿರೋಧವಿರುವುದು ರಾಜ್ಯದಲ್ಲಿರುವ ಬಿಜೆಪಿ ನಾಯಕತ್ವದ ವಿರುದ್ಧವೇ ಹೊರತು, ಪಕ್ಷದ ವಿರುದ್ಧವಲ್ಲ’. ಬಿಜೆಪಿ ರಾಜ್ಯಾಧ್ಯಕ್ಷರು ಹಾಗೂ ಮುಖ್ಯಮಂತ್ರಿಗಳ ವಿರುದ್ಧ ನೇರ ಆರೋಪ ಮಾಡುತ್ತಿರುವ ಕಾರ್ಯಕರ್ತರು, ಈ ನಾಯಕತ್ವಕ್ಕೆ ವಿರೋಽಸಿದ ಮಾತ್ರಕ್ಕೆ ನಾವು ಬೇರೆ ಪಕ್ಷಗಳಿಗೆ ಹೋಗುತ್ತೇವೆ ಎಂದಲ್ಲ. ಬದಲಿಗೆ, ನಮ್ಮ ಪಕ್ಷದಲ್ಲಿರುವ ನಾಯಕತ್ವ ಸಮಸ್ಯೆಯನ್ನು ಬಗೆಹರಿಸುವ ತನಕ ಈ ಹೋರಾಟ ಮಾಡುತ್ತೇವೆ. ಈಗಲೂ ಪಕ್ಷದ ವರಿಷ್ಠರು, ಪಕ್ಷದ ಸಿದ್ಧಾಂತಕ್ಕೆ ಬದ್ಧರಾಗಿರುತ್ತೇವೆ ಎನ್ನುವ ಸ್ಪಷ್ಟ ಮಾತನ್ನು ಆಡುತ್ತಿದ್ದಾರೆ.

ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ಬಹಿರಂಗವಾಗಿಯೇ ಸಾವಿರಾರು ಕಾರ್ಯಕರ್ತರು ವಾಗ್ದಾಳಿ ನಡೆಸುತ್ತಿದ್ದರೂ, ಅವರ‍್ಯಾರನ್ನು ತಡೆಯುವ ಅಥವಾ ತಣ್ಣಗಾಗಿಸುವ ಪ್ರಯತ್ನವನ್ನು ಬಿಜೆಪಿ ವರಿಷ್ಠರಾಗಲಿ, ಆರ್‌ಎಸ್‌ಎಸ್ ಮುಖಂಡರಾಗಲಿ ಮಾಡದಿರು ವುದು ಇನ್ನಷ್ಟು ಅಚ್ಚರಿಯ ವಿಷಯ. ಏಕೆಂದರೆ, ಬಿಜೆಪಿಯಂತಹ ಪಕ್ಷದಲ್ಲಿ ಸಣ್ಣ ತಪ್ಪಾದರೂ ‘ಉಚ್ಚಾಟನೆ’ ಅಥವಾ ‘ಅಮಾನತಿ’ನ ವಿಽಸುವ ಸಮಯದಲ್ಲಿ, ಈ ರೀತಿ ಬಹಿರಂಗ ಹೇಳಿಕೆಗಳನ್ನು ನೀಡುತ್ತಿದ್ದರೂ ಮೌನವಾಗಿರುವುದಕ್ಕೆ ಕಾರಣ ಸ್ಪಷ್ಟವಾಗಿಲ್ಲ. ಆದರೆ ಈ ರೀತಿಯ ಜನಾಕ್ರೋಶವನ್ನೇ ನೆಪವಾಗಿಟ್ಟುಕೊಂಡು ‘ಬದಲಾವಣೆ’ ಛಾಟಿ ಬೀಸಿದರೂ ಬೀಸಬಹುದು ಎನ್ನುವ ಮಾತುಗಳು ಕೇಳಿಬರುತ್ತಿದ್ದು, ಅವುಗಳನ್ನು ಅಲ್ಲಗಳೆಯುವಂತಿಲ್ಲ.

ರಾಜೀನಾಮೆ ನೀಡಿರುವ ಅಥವಾ ಆಕ್ರೋಶಗೊಂಡಿರುವ ಬಹುತೇಕ ಕಾರ್ಯಕರ್ತರು ಕರ್ನಾಟಕ ಬಿಜೆಪಿಯ ವ್ಯವಸ್ಥೆಯನ್ನು ಬದಲಾಯಿಸಬೇಕು ಎಂದು ಹಠಕ್ಕೆ ಬಿದಿದ್ದಾರೆ. ಅವರಿಗೆ ಹಿಂದೂತ್ವದ ಪ್ರಮುಖ ನಾಯಕರಾಗಿರುವ ಪ್ರಮೋದ್ ಮುತಾಲಿಕ್, ಚಕ್ರವರ್ತಿ ಸೂಲಿಬೆಲೆ ಅಂಥವರು ಧ್ವನಿಗೂಡಿಸುತ್ತಿರುವುದರಿಂದ ಪಕ್ಷದ ವರಿಷ್ಠರು ಗಂಭೀರವಾಗಿ ಆಲೋಚನೆ ಮಾಡ ಬೇಕಾಗಿದೆ. ಇಲ್ಲದಿದ್ದರೆ ಆರೇಳು ತಿಂಗ ಳಲ್ಲಿ ಎದುರಾಗಲಿರುವ ವಿಧಾನಸಭಾ ಚುನಾವಣೆಯನ್ನು, ಕಾರ್ಯಕರ್ತರ ಆಕ್ರೋಶದ ಎದುರಿಸುವುದು ಭಾರಿ ಸಮಸ್ಯೆ ಯಾಗುತ್ತದೆ. ಈ ಕಾರ್ಯಕರ್ತರು ಬಿಜೆಪಿಯಿಂದ ಹೊರಹೋಗದಿರಬಹುದು ಅಥವಾ ಕಾಂಗ್ರೆಸ್‌ಗೆ ನೇರವಾಗಿ ಲಾಭ ವಾಗದೇ ಇರಬಹುದು.

ಆದರೆ ಚುನಾವಣೆಯಲ್ಲಿ ಸಾವಿರ ನಿಷ್ಠಾವಂತ ಕಾರ್ಯಕರ್ತನ ತಟಸ್ಥ ಐದಾರು ಸಾವಿರ ವೋಟುಗಳ ನಷ್ಟಕ್ಕೆ ಸಮಾನ ಎನ್ನುವುದನ್ನು ಮರೆಯುವಂತಿಲ್ಲ. ವಿಶ್ವದಲ್ಲಿಯೇ ಅತಿದೊಡ್ಡ ಕಾರ್ಯಕರ್ತರ ಪಡೆಯನ್ನು ಹೊಂದಿರುವ, ಹಿಂದೂ ಪರ ಸಂಘಟನೆಗಳ ಸಹಾಯ ದೊಂದಿಗೆ ಚುನಾವಣೆಗಳಲ್ಲಿ ಸಂಘಟನೆ ಮಾಡುತ್ತಿದ್ದ ಬಿಜೆಪಿ ಒಂದು ವೇಳೆ ಈ ರೀತಿಯ ನಿಷ್ಠರನ್ನು ಕಳೆದುಕೊಂಡರೆ, ಅದಕ್ಕೆ ಭಾರಿ ಬೆಲೆ ತೆರಬೇಕಾಗುತ್ತದೆ.

ಮುಸ್ಲಿಂ ಮತಗಳನ್ನು ಸೆಳೆಯುವ ಕಾರಣಕ್ಕೆ, ಕೈಯಲ್ಲಿ ಭದ್ರವಾಗಿರುವ ಹಿಂದೂ ಮತಗಳನ್ನು ಹಾಗೂ ಕಾರ್ಯಕರ್ತರನ್ನು ಕಳೆದುಕೊಳ್ಳುವ ‘ಸಾ- ಕಾರ್ನರ್’ ರಾಜಕಾರಣವನ್ನು ಮುಂದುವರಿಸಿದ್ದೇ ಆದರೆ ಮುಂದಿನ ದಿನದಲ್ಲಿ ದಕ್ಷಿಣ ಭಾರತದಲ್ಲಿ ಭದ್ರ
ಕೋಟೆಯಂತಿರುವ ಕರ್ನಾಟಕದಲ್ಲಿಯೂ ಬಿಜೆಪಿಗೆ ಭಾರಿ ಹಿನ್ನಡೆಯಾದರೂ ಅಚ್ಚರಿ ಪಡಬೇಕಾಗಿಲ್ಲ. ಇನ್ನಾದರೂ, ಪಕ್ಷದ ಕಾರ್ಯಕರ್ತರ ಆಶೋತ್ತರಗಳಿಗೆ ಪೂರಕವಾಗಿ ಕಾರ್ಯನಿರ್ವಹಿಸಬೇಕಿದೆ.

error: Content is protected !!