Friday, 26th July 2024

ಅತಿಕ್ರಮಣ ಮಾಡಿದ್ದು ನಾವಲ್ಲವೆ ?

ಶಶಾಂಕಣ

shashidhara.halady@gmail.com

ಕೆರೆಯ ಏರಿಯ ಪಕ್ಕದಲ್ಲೇ, ವಸತಿ ಸಂಕೀರ್ಣ ನಿರ್ಮಿಸಿಕೊಂಡಿರುವಾಗ, ಹಾವುಗಳು ಬಾರದೇ ಇರುವಂತೆ ಮಾಡಲು ಸಾಧ್ಯವೆ? ಇದು ಆ ಹಾವುಗಳ ವಾಸಸ್ಥಳ; ಪುರಾತನ ಕಾಲದಿಂದಲೂ ಅವು ಇಲ್ಲೇ ವಾಸವಾಗಿವೆ. ಕೆರೆ ಏರಿ ಮೇಲೆ ಸರಳ ರಸ್ತೆ ಮಾಡಿದಾಗಲೂ, ಅವು ತಮ್ಮ ಪಾಡಿಗೆ ತಾವು ಇದ್ದವು. ಈಗ, ಇಡೀ ಕೆರೆ ಏರಿಯನ್ನು ಅಗೆದು ಹಾಕಿ, ಗಿಡಮರಗಳನ್ನು ಕಿತ್ತಿದ್ದರಿಂದಾಗಿ, ಅವುಗಳ ಇದ್ದಬದ್ದ ವಾಸಸ್ಥಳವೂ ನಿರ್ನಾಮವಾಗಿ ಹೋಯಿತು.

ಬೆಂಗಳೂರಿನ ಒಂದು ಕೆರೆಯ ಏರಿಯ ಪಕ್ಕದಲ್ಲೇ ನಮ್ಮ ಮನೆ. ಕೆರೆಯ ಏರಿಯ ಮೇಲೆ ಬಸ್ ಚಲಿಸುವ ರಸ್ತೆ ಇದೆ. ಒಳ್ಳೆಯ ರಸ್ತೆ ಬೇಕು, ಅಗಲವಾದ ರಸ್ತೆ ಬೇಕು ಎಂಬುದು ಎಲ್ಲರ ಬೇಡಿಕೆ ತಾನೆ! ಅದಕ್ಕೆಂದೇ ಆ ರಸ್ತೆಯನ್ನು ಈಗ ನಾಲ್ಕು ಪಟ್ಟು ಅಗಲ ಮಾಡುತ್ತಿದ್ದಾರೆ. ಕೆರೆ ಏರಿಯ ಎರಡೂ ಕಡೆ, ಕಾಂಕ್ರೀಟಿನ ಗೋಡೆ ಕಟ್ಟಿ, ಅದರ ನಡುವೆ ಮಣ್ಣು ತುಂಬಿ ನಾಲ್ಕು ಪಥದ ರಸ್ತೆ ನಿರ್ಮಾಣವಾಗಲು ತೊಡಗಿ ಅದಾಗಲೇ ನಾಲ್ಕಾರು ತಿಂಗಳುಗಳಾದವು. ಕೆಲಸಗಳು ಇನ್ನೂ ನಡೆಯುತ್ತಿವೆ.

ಅತ್ತ, ಈ ವರ್ಷ ಮಳೆ ಚೆನ್ನಾಗಿ ಬಂದಿದ್ದರಿಂದಾಗಿ, ಕೆರೆಯಲ್ಲಿ ಸಾಕಷ್ಟು ನೀರು ತುಂಬಿಕೊಂಡಿದೆ. ಆ ಕೆರೆ ಏರಿ ಪುರಾತನ ಕಾಲದ್ದು; ಗಂಗರು, ಹೊಯ್ಸಳರು ಬೆಂಗಳೂರನ್ನು ಆಳುತ್ತಿದ್ದಾಗಲೇ ಕಟ್ಟಿದ ಕೆರೆ ಇರಬೇಕು ಅದು. ಏರಿಯುದ್ದಕ್ಕೂ ಹತ್ತಾರು ಮರಗಳೂ, ಕುರುಚಲು ಗಿಡಗಳು ಬೆಳೆದುಕೊಂಡಿದ್ದವು. ವಿಶಾಲ ರಸ್ತೆ ನಿರ್ಮಿಸುವ ಜಾಗಕ್ಕಾಗಿ, ಅಲ್ಲಿನ ಎಲ್ಲಾ ಗಿಡ ಮರಗಳನ್ನು ಬೇರು ಸಹಿತ ಕಿತ್ತು ಹಾಕಲಾಗಿದೆ, ನೆಲವನ್ನು ಅಗೆಯಲಾಗಿದೆ, ಅಲ್ಲಲ್ಲಿ ಹಸಿರು ಇದ್ದ ಜಾಗವೆಲ್ಲಾ ಇಂದು ಕಲ್ಲು, ಮಣ್ಣುಗಳ ರಾಶಿ.

ಈಗ ನೋಡಿದರೆ, ನಮ್ಮ ಮನೆಯ ಸುತ್ತಲೂ ಆಗಾಗ ಹಾವುಗಳು ಬರುವುದು ಜಾಸ್ತಿಯಾಗಿದೆ! ನಾವಿರುವುದು ಒಂದು ರೆಸಿಡೆನ್ಶಿಯಲ್ ಕಾಂಪ್ಲೆಕ್ಸ್. ಕೆರೆ ಏರಿಯ ಮೇಲೆ ನಿರಂತರವಾಗಿ ನಾಲ್ಕಾರು ತಿಂಗಳುಗಳಿಂದ ನಡೆಯುತ್ತಿರುವ ರಸ್ತೆ ವಿಸ್ತರಣೆ ಕಾಮಗಾರಿಯಿಂದಾಗಿ, ಅಲ್ಲಿದ್ದ ಹಾವುಗಳ ಸಹಜ ವಾಸಸ್ಥಳ ನಾಶವಾಗಿದೆ. ಅವು ದಿಕ್ಕಾಪಾಲಾಗಿ ಚಲಿಸುತ್ತಿವೆ. ನಮ್ಮ ರೆಸಿಡೆನ್ಶಿಯಲ್ ಕಾಂಪ್ಲೆಕ್ಸ್‌ನಲ್ಲಿ ಕಳೆದ ಎರಡೇ ವಾರಗಳಲ್ಲಿ ಹತ್ತಕ್ಕೂ ಹೆಚ್ಚು ಹಾವುಗಳನ್ನು ಹಿಡಿಯಲಾಗಿದೆ! ಇನ್ನೂ ಕೆಲವು ಅಲ್ಲಲ್ಲಿ ಸಂದಿ ಮೂಲೆಯಲ್ಲಿ ಅಡಗಿವೆ ಎನ್ನುತ್ತಿದ್ದಾರೆ ಸೆಕ್ಯುರಿಟಿ ಸಿಬ್ಬಂದಿ.

ಹೂವಿನ ಗಿಡ, ಅಲಂಕಾರಿಕ ಗಿಡಗಳನ್ನು  ಬೆಳೆಸಿದ ಜಾಗಗಳಲ್ಲಿ ಓಡಾಡುವ ಹಾವುಗಳನ್ನು ಕಂಡಾಗ, ನಿವಾಸಿಗಳಿಗೆ ಸಹಜವಾಗಿ ಗಾಬರಿ, ಭಯ. ‘ನಮ್ಮ ಮಕ್ಕಳು ಓಡಾಡುವ ಜಾಗ ಇದು, ಹಾವು ಬಂದಿದೆ ಬೇಗನೆ ಹಿಡಿಸಿ’ ಎಂಬ ಸಂದೇಶ
ವಾಟ್ಸಾಪ್ ಗ್ರೂಪ್‌ನಲ್ಲಿ ಬಂದ ತಕ್ಷಣ, ಸೆಕ್ಯುರಿಟಿಯವರು ಫೋನ್ ಹಚ್ಚುತ್ತಾರೆ. ಹಾವು ಹಿಡಿಯುವವರ ನಾಲ್ಕಾರು ನಂಬರು ಗಳು ಅವರ ಬಳಿ ಇವೆ. ಹಾವು ಹಿಡಿಯುವವರಿಗೆ ಅದೇ ಕೆಲಸ – ಬೆಂಗಳೂರಿನ ಮೂಲೆ ಮೂಲೆಗಳಿಗೆ ತೆರಳಿ, ಹಾವನ್ನು ಹಿಡಿದು, ಗೋಣಿಚೀಲಕ್ಕೆ ತುಂಬಿ, ದೂರದ ಅದ್ಯಾವುದೋ ಕಾಡು ಪ್ರದೇಶಕ್ಕೆ ಬಿಡುವ ಕೆಲಸ. ಟಿ ಶರ್ಟ್, ಜೀನ್ಸ್ ಧರಿಸಿ, ಬೈಕ್ ಹತ್ತಿ ಬರುವ ಹಾವು ಹಿಡಿಯುವವರು ತಮ್ಮ ಕೈ ಚಳಕ ತೋರುವಾಗ, ನಿವಾಸಿಗಳು ತಮ್ಮ ಆಧುನಿಕ ಮೊಬೈಲುಗಳಿಗೆ ಕೆಲಸ ಕೊಟ್ಟು, ತಮ್ಮ ಕೈಚಳಕ ತೋರುತ್ತಾರೆ.

ಆ ಸ್ಪೆಷಲಿಸ್ಟ್ ನಮ್ಮ ಪ್ರದೇಶಕ್ಕೆ ಬಂದು, ಹಾವು ಹಿಡಿದು, ಚೀಲಕ್ಕೆ ತುಂಬುವ ವಿಡಿಯೋ ಚಿತ್ರೀಕರಣ ಮಾಡಿ, ಗ್ರೂಪ್‌ಗೆ
ಹಾಕುತ್ತಾರೆ. ಆ ನಂತರ, ಆ ಕುರಿತು ಚರ್ಚೆ – ಅದು ವಿಷಕಾರಿ ಹಾವೋ ಅಥವಾ ನಿರಪಾಯಕಾರಿ ಹಾವೋ ಎಂದು.
ಇಂತಹ ವೀಡಿಯೋಗಳನ್ನು ಹಲವು ಬಾರಿ ಬೇರೆ ಬೇರೆ ಕಡೆ ಅದಾಗಲೇ ನೋಡಿದ್ದ ಕೆಲವರು ತಮ್ಮನ್ನು ತಾವೇ ವಿಷಯ ತಜ್ಞರು ಎಂದು ಗುರುತಿಸಿಕೊಂಡಿದ್ದಾರೆ.

‘ಓಹ್, ಎಷ್ಟು ದೊಡ್ಡ ಗಾತ್ರದ ಹಾವು, ಅದು ನುಲಿಯುವುದು ಭಯ ಹುಟ್ಟಿಸುತ್ತಿದೆ, ಭಾರೀ ವಿಷ’ ಎಂದು ಒಬ್ಬರು ಹಾಕಿದರೆ ‘ಥ್ಯಾಂಕ್ ಗಾಡ್, ಇಷ್ಟು ದೊಡ್ಡ ಹಾವನ್ನು ನಮ್ಮ ರೆಸಿಡೆನ್ಶಿಯಲ್ ಕಾಂಪ್ಲೆಕ್ಸ್‌ನಲ್ಲಿ ಹಿಡಿಸಿರುವಿರಿ, ನಮಗೆಲ್ಲಾ ಒಂದು ಉಪಕಾರ ಮಾಡಿರುವಿರಿ’ ಎಂದು ಮತ್ತೊಬ್ಬರು ಸಂದೇಶ ಹಾಕಿ, ನಿವಾಸಿಗಳ ಸಂಘಕ್ಕೆ ಧನ್ಯವಾದ ಸಮರ್ಪಿಸುತ್ತಾರೆ.
‘ನಮ್ಮ ಕಾಂಪೌಂಡ್ ಒಳಗೆ ಯಾವುದೇ ಹಾವು ಬಾರದಂತೆ ಮಾಡಬೇಕು; ಹಾವನ್ನು ನಾಶಪಡಿಸುವ ಔಷಧವೇ ಇದೆಯಂತೆ, ಏನಿದ್ದರೂ ನಮ್ಮ ಮಕ್ಕಳ ಸೇಫ್ಟಿ ಮುಖ್ಯ’ ಎಂದು ಮತ್ತೊಬ್ಬರು ಸಂದೇಶ ಹಾಕುತ್ತಾರೆ.

ಈ ರೀತಿಯ ಹಲವು ಸಂದೇಶಗಳು. ಅಷ್ಟು ಹೊತ್ತು ಇದರಿಂದ ದೂರವಿದ್ದು, ಆಗ ತಾನೆ ಗ್ರೂಪ್ ಚರ್ಚೆಗೆ ಪ್ರವೇಶ ನೀಡಿದ ಮಗದೊಬ್ಬರು ಕಾಳಜಿಯ ಸಂದೇಶ ಹಾಕಿದರು. ‘ನಾನು ಮಲೆನಾಡಿನವನು. ನಮ್ಮ ಕಡೆ ಹಾವುಗಳು ತೀರಾ ಸಾಮಾನ್ಯ. ಮನೆ ಸುತ್ತಲೂ ಓಡಾಡುತ್ತಿರುತ್ತವೆ. ಈಗ ಹಿಡಿದ ಹಾವಿನ ವಿಡಿಯೋ ನೋಡಿದಾಗ ಅನಿಸಿದ್ದು, ಇದು ವಿಷಕಾರಿಯಲ್ಲ, ಇದು ಕೇರೆ ಹಾವು. ನಮ್ಮ ಊರಿನಲ್ಲಿ ಇವು ತುಂಬಾ ಇವೆ. ಇಲಿ ಹಿಡಿದು ರೈತರಿಗೆ ಉಪಕಾರ ಮಾಡುತ್ತವೆ.

ಇದರಿಂದ ಏನೂ ತೊಂದರೆ ಇಲ್ಲ, ಪಾಪದ ಹಾವು ಅದು’ ಎಂದು ತಮ್ಮ ಜ್ಞಾನವನ್ನು ಹಂಚಿಕೊಂಡರು. ಅದಕ್ಕೆ ಒಂದಿಬ್ಬರು ಹೌದು, ಅದು ಕೇರೆ ಹಾವು ಇರಬೇಕು, ನಿರುಪದ್ರವಿ ಹಾವು ಅದು’ ಎಂದು ಸಹಮತ ವ್ಯಕ್ತಪಡಿಸಿದರು. ತಕ್ಷಣ, ಇನ್ನು ಕೆಲವು ಪಾಲಕರು, ‘ಯಾವ ಹಾವೇ ಆಗಲಿ, ನಮಗೆ ನಮ್ಮ ಮಕ್ಕಳ ಸೇಫ್ಟಿ ಮುಖ್ಯ. ಹಾವು ಎಂದಾಕ್ಷಣ ಮಕ್ಕಳು ತುಂಬಾ ಭಯ ಬೀಳುತ್ತಾರೆ, ಹೆದುರುತ್ತಾರೆ.

ವಿಷಕಾರಿ ಆಗಲಿ, ಆಗದೇ ಇರಲಿ, ತಕ್ಷಣ ಹಿಡಿಸಲೇ ಬೇಕು, ಜೀವ ಮುಖ್ಯ’ ಎಂದು ಸಂದೇಶ ಹಾಕಿದರು. ಅವರ ಪರವಾಗಿ ಪಟಪಟನೆ ಸಂದೇಶಗಳು. ‘ಹೌದು ನಮ್ಮ ಮಕ್ಕಳ ಸೇಫ್ಟಿ ಮುಖ್ಯ. ಇಲ್ಲಿ ಕೇರೆ ಹಾವೋ, ನಾಗರಹಾವೋ ಎಂಬುದು ಮುಖ್ಯವಲ್ಲ. ಹಾವು ಎಂದರೆ ಭಯ, ಅಪಾಯ. ಇವತ್ತು ಆ ಹಾವನ್ನು ಬೇಗನೆ ಹಿಡಿಸಿದ್ದು ಒಳ್ಳಯದಾಯಿತು. ನಮ್ಮ
ರೆಸಿಡೆನ್ಶಿಯಲ್ ಕಾಂಪ್ಲೆಕ್ಸ್‌ಗೆ ಹಾವುಗಳು ಬಾರದೇ ಇರುವಂತೆ ಏನಾದರೂ ಉಪಾಯ ಹುಡುಕಿ’ ಎಂದು ಒಬ್ಬರು ದೀರ್ಘ ಸಂದೇಶ ಹಾಕಿದರು.

ಕೆರೆಯ ಏರಿಯ ಪಕ್ಕದಲ್ಲೇ, ವಸತಿ ಸಂಕೀರ್ಣ ನಿರ್ಮಿಸಿಕೊಂಡಿರುವಾಗ, ಹಾವುಗಳು ಬಾರದೇ ಇರುವಂತೆ ಮಾಡಲು ಸಾಧ್ಯವೆ? ಇದು ಆ ಹಾವುಗಳ ವಾಸಸ್ಥಳ; ಪುರಾತನ ಕಾಲದಿಂದಲೂ ಅವು ಇಲ್ಲೇ ವಾಸವಾಗಿವೆ. ಕೆರೆ ಏರಿ ಮೇಲೆ ಸರಳ ರಸ್ತೆ ಮಾಡಿದಾಗಲೂ, ಅವು ತಮ್ಮ ಪಾಡಿಗೆ ತಾವು ಇದ್ದವು. ಈಗ, ಒಮ್ಮೆಗೇ ಇಡೀ ಕೆರೆ ಏರಿಯನ್ನು ಅಗೆದು ಹಾಕಿ, ಅಲ್ಲಿದ್ದ ಎಲ್ಲಾ ಗಿಡಮರಗಳನ್ನು ಕಿತ್ತು, ಜೆಸಿಬಿ ತಂದು ನೆಲವನ್ನೆಲ್ಲಾ ಅಗೆದು, ಅಲ್ಲಿ ಮಣ್ಣು ತುಂಬಿಸಿದ್ದರಿಂದಾಗಿ, ಜಲ್ಲಿಯನ್ನು ತುಂಬಿಸಿದ್ದರಿಂದಾಗಿ, ಅವುಗಳ ಇದ್ದಬದ್ದ ವಾಸಸ್ಥಳವೂ ನಿರ್ನಾಮವಾಗಿ ಹೋಯಿತು.

ಆದ್ದರಿಂದಲೇ, ದಿಕ್ಕು ಗೊತ್ತಾಗದೇ ಎತ್ತೆತ್ತಲೋ ಸಾಗುತ್ತಾ, ನಮ್ಮ ವಸತಿ ಸಂಕೀರ್ಣದ ಪಾರ್ಕಿನ ಗಿಡಗಳತ್ತಲೂ ಹರಿದು ಬಂದಿವೆ! ಅವುಗಳ ಪಾಡು ಅವುಗಳಿಗೆ, ಆದರೆ ಅವನ್ನು ಕಂಡು ಹೆದರುವುದು ನಗರವಾಸಿಗಳ ಪಾಡಾಗಿದೆ. ಹಾಗಂತ, ಈ ರೀತಿ ನಮ್ಮ ಕಾಂಪ್ಲೆಕ್ಸ್ ಒಳಗೆ ಹರಿದು ಬಂದ ಎಲ್ಲವೂ ಕೇರೆಹಾವುಗಳಲ್ಲ! ನಾಗರ ಹಾವುಗಳೂ ಆಗಾಗ ಬಂದಿವೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಆರೆಂಟು ನಾಗರಹಾವುಗಳನ್ನು ನಮ್ಮ ವಸತಿ ಸಂಕೀರ್ಣದಲ್ಲಿ ಹಿಡಿದು, ದೂರ ಬಿಡಲಾಗಿದೆ.
ಆದರೂ, ಅವು ಮತ್ತೆ ಮತ್ತೆ ಕಾಣಿಸಿಕೊಳ್ಳುವುದುಂಟು.

ಕಣ್ಣಿಗೆ ಕಂಡ ತಕ್ಷಣ ಹಿಡಿಸಿ, ಚೀಲದಲ್ಲಿ ಹಾಕಿ ದೂರ ಕಳಿಸಿದಷ್ಟೂ, ಅವುಗಳ ದರ್ಶನ ಜಾಸ್ತಿಯಾಗುತ್ತಾ ಇದೆಯೇನೋ ಎಂಬ ಅನುಮಾನ ಕೆಲವರಲ್ಲಿ ಬಂದದ್ದೂ ಇದೆ. ದೂರ ಬಿಟ್ಟರೂ, ಅವು ಪುನಃ ಪುನಃ ಅದೇ ಜಾಗಕ್ಕೆ ಬರಬಲ್ಲವೆ? ಏನೊ, ಒಟ್ಟಿನಲ್ಲಿ ನಮ್ಮ ವಸತಿ ಸಂಕೀರ್ಣದಲ್ಲಿ ಅವು ಕಾಣಿಸಿಕೊಳ್ಳುವುದು ಮುಂದುವರಿದೇ ಇದೆ. ಈ ಸುತ್ತಲೂ ಯಾವುದೇ ಹಾವುಗಳು ಬಾರದಂತೆ ಮಾಡಿ ಎಂದು ಕೆಲವು ನಿವಾಸಿಗಳು, ನಿವಾಸಿ ಸಂಘಕ್ಕೆ ಮನವಿ ಮಾಡುವುದು ಮುಂದುವರಿದೇ ಇದೆ.

ಹಾವುಗಳು ನಮ್ಮ ವಸತಿ ಸಂಕೀರ್ಣವನ್ನು ಅತಿಕ್ರಮಣ ಮಾಡುತ್ತಿದ್ದಾವೆಂಬ ಭಾವ ಅವರದ್ದು. ಆದರೆ, ನಿಜವಾಗಿಯೂ ಅತಿಕ್ರಮಣ ಮಾಡಿದ್ದು, ಹಾವೋ, ನಾವೊ? ಹಾವುಗಳ ದರ್ಶನವೇ ಆಗಬಾರದು, ತಮ್ಮ ಮಕ್ಕಳು ಹಾವು ಕಂಡರೆ ಭಯ ಬೀಳುತ್ತಾರೆ, ಆದ್ದರಿಂದ ಅವು ಬಾರದಂತೆ ಮಾಡಿ ಎಂದು ವಾಟ್ಸಾಪ್ ಗ್ರೂಪ್‌ನಲ್ಲಿ ಮನವಿ ಮಾಡುವ ಪಾಲಕರ ಗಾಬರಿಯನ್ನು ಕಂಡಾಗ, ಹಳ್ಳಿಯಲ್ಲಿ ಕಳೆದ ನನ್ನ ಬಾಲ್ಯ ನೆನಪಾಯಿತು. ಎರಡು ಕಿ.ಮೀ. ಉದ್ದ ಗದ್ದೆ ಬೈಲಿನ ನಡುವೆ ನಮ್ಮ ಮನೆ; ಮನೆಯ ಹಿಂದೆ, ಮುಂದೆ ಅಷ್ಟು ದೂರದಲ್ಲಿ ಎರಡು ತೋಡುಗಳು, ಅದರಲ್ಲಿ ವರ್ಷದ ಆರೆಂಟು ತಿಂಗಳುಗಳ ಕಾಲ ಹರಿಯುವ ನೀರು. ಅದರಾಚೆ ಹಾಡಿ, ಹಕ್ಕಲು, ಗುಡ್ಡ. ಇಲ್ಲೆಲ್ಲಾ ಹಾವುಗಳ ವಾಸ ತೀರಾ ಸಾಮಾನ್ಯ.

ನೆಲದಲ್ಲಿ, ನೀರಿನಲ್ಲಿ, ಬಿಲದಲ್ಲಿ, ಕಲ್ಲುಗಳ ಸಂದಿಯಲ್ಲಿ, ಹುಲ್ಲುಗಾವಲಿನಲ್ಲಿ, ಕೊನೆಗೆ ಮರದ ಮೇಲೂ ಹಾವುಗಳು ವಾಸಿಸುತ್ತವೆ! ನಮ್ಮ ಮನೆ ಎದುರು ಒಂದು ಬಗ್ಗುಬಾವಿ ಇದೆ. ಅದರಲ್ಲಿ ಇಣುಕಿ ನೋಡಿದರೆ, ಕನಿಷ್ಟ ಹತ್ತು ‘ಒಳ್ಳೆ ಹಾವು’ಗಳು ಅಲ್ಲಿನ ಕಲ್ಲುಗಳ ಸಂದಿಯಲ್ಲಿ ಇಣುಕಿ ನಮ್ಮನ್ನು ನೋಡುವುದು ಕಣ್ಣಿಗೆ ಬೀಳುತ್ತದೆ. ಮನೆಯಿಂದ ನೂರು ಹೆಜ್ಜೆ ನಡೆದರೆ, ಗದ್ದೆ ಬೈಲಿನಲ್ಲಿ ಇನ್ನೊಂದು ಬಗ್ಗುಬಾವಿ. ಅಲ್ಲಿದ್ದ ಒಳ್ಳೆ ಹಾವುಗಳ ಸಂಖ್ಯೆ ಇನ್ನೂ ಜಾಸ್ತಿ!

ಒಳ್ಳೆ ಹಾವುಗಳು ಯಾರಿಗೂ ತೊಂದರೆ ನೀಡದ ನಿರುಪದ್ರವಿ ಜೀವಿಗಳು. ಅವುಗಳಿಂದ ತೊಂದರೆಯಾಗುತ್ತಿದ್ದುದು ಕಪ್ಪೆಗಳಿಗೆ
ಮಾತ್ರ. ಬಾಯಲ್ಲಿ ಕಪ್ಪೆ ಕಚ್ಚಿಕೊಂಡು, ಅಂಗಳದಲ್ಲಿ ಓಡಾಡುವ ಒಳ್ಳೆ ಹಾವುಗಳ ನೋಟ ತೀರಾ ಸಾಮಾನ್ಯ. ಅವುಗಳ ಬಾಯಿಗೆ ಸಿಕ್ಕಿಹಾಕಿಕೊಂಡ ಕಪ್ಪೆಗಳು ಆರ್ತನಾದ ಮಾಡುತ್ತಿರುವುದನ್ನು ಕಂಡು ಒಮ್ಮೊಮ್ಮೆ ಕನಿಕರ ಹುಟ್ಟಿದರೂ, ಅದು ಅವುಗಳ ಜೀವನಕ್ರಮ ಎಂದು ನಮಗೆ ನಾವೇ ಸಮಾಧಾನ ಹೇಳಿಕೊಳ್ಳುತ್ತೇವೆ.

ಕೆಲವು ದೊಡ್ಡ ಕಪ್ಪೆಗಳು ಹಾವಿನ ಬಾಯಿಯಿಂದ ಜಬರ್ದಸ್ತ್ ಮಾಡಿ ತಪ್ಪಿಸಿಕೊಳ್ಳುವುದೂ ಉಂಟು! ಒಳ್ಳೆ ಹಾವುಗಳಿ ಗಿಂತಲೂ ತುಸು ದೊಡ್ಡದಾದ ಹೈಸಾರ ಹಾವುಗಳು ಸಹ ನಿರುಪದ್ರವಿಗಳು. ಆದರೆ, ಅವುಗಳ ಗಾತ್ರ ತುಸು ಭಯ ಹುಟ್ಟಿಸು ತ್ತದೆ. ಅವು ಆರು ಅಡಿ ತನಕವೂ ಬೆಳೆಯಬಲ್ಲವು. ಹೈಸಾರ ಹಾವುಗಳು ಇಲಿಗಳನ್ನು ಜಾಸ್ತಿ ಹಿಡಿಯುವುರಿಂದ, ಇವು ರೈತನ ಮಿತ್ರರು. ಇವೆರಡೂ ಪ್ರಭೇದದ ಹಾವುಗಳು ನಮ್ಮ ಹಳ್ಳಿಮನೆಯ ಸುತ್ತಲೂ ಸಾಮಾನ್ಯ ಎನಿಸಿದರೆ, ಆಗಾಗ ನಾಗರ ಹಾವುಗಳೂ ನಮ್ಮ ಮನೆ ಸುತ್ತ ಓಡಾಡುವುದುಂಟು.

ನಿಧಾನವಾಗಿ ತೆವಳುತ್ತಾ ಚಲಿಸುವ ಅವು, ಇಲಿಗಳನ್ನು ಹುಡುಕುತ್ತಾ, ನಮ್ಮ ಹಂಚಿನ ಮನೆಯ ಛಾವಣಿಯ ತೊಲೆ, ಜಂತಿ,
ರೀಪುಗಳ ನಡುವೆ ಸಾಗುತ್ತಿದ್ದರೆ, ಮನೆಯಲ್ಲಿರುವವರಿಗೆಲ್ಲಾ ಸಣ್ಣಗೆ ಭಯ. ಆಗ ಮನೆಯ ಹಿರಿಯರು, ಅದನ್ನೇ ನೋಡುತ್ತಾ
‘ಇದೇನು? ನೀನು ಈ ರೀತಿ ಮನೆಯ ಒಳಗೆಲ್ಲಾ ಬಂದು ಓಡಾಡುವುದು? ಮಕ್ಕಳಿಗೆ ಹೆದರಿಕೆ ಆಗುವುದಿಲ್ಲವಾ? ಮಕ್ಕಳನ್ನು ಹೆದರಿಸುವುದೇ ನಿನ್ನ ಉದ್ದೇಶವೆ? ಈಗ ಹೋಗು, ಸುಮ್ಮನೆ ಮನೆಯವರಿಗೆ ಹೆದರಿಕೆ ಹುಟ್ಟಿಸಬೇಡ. ಸೋಮವಾರ ನಿನಗೆ ಒಂದು ಬಾಳೆಗೊನೆಯ ತನು ಎರೆಯುತ್ತೇನೆ’ ಎಂದು ಗಂಭೀರವಾಗಿ ಹೇಳುವುದು ಕ್ರಮ.

ಮನೆಯೊಳಗೆ ಪ್ರವೇಶಿಸಿದ ನಾಗರಹಾವನ್ನು ಒಬ್ಬ ಮನುಷ್ಯನ ರೀತಿಯೇ ಮಾತನಾಡಿಸುವ ಆ ವಿಧಾನವೇ ವಿಶಿಷ್ಟ. ಸ್ವಲ್ಪ ಹೊತ್ತಿನ ನಂತರ, ಆ ನಾಗರ ಹಾವು ತನ್ನ ಪಾಡಿಗೆ ತಾನು ಎತ್ತಲೋ ಹೋಗುತ್ತಿತ್ತು. ಮನೆ ಎದುರಿನ ಗದ್ದೆ ಬೈಲಿನಿಂದಾಚೆ, ಹಕ್ಕಲಿನಲ್ಲಿರುವ ನಾಗರಬನಕ್ಕೆ ಸೋಮವಾರ ಹೋಗಿ, ಪೂಜೆ ಮಾಡಿ, ಒಂದು ಹಣ್ಣಾದ ಬಾಳೆಗೊನೆಯನ್ನು ಒಪ್ಪಿಸಿ, ವಾಪಸು
ತರುತ್ತಿದ್ದರು. ಆ ಬಾಳೆಗೊನೆಯ ಹಣ್ಣುಗಳನ್ನು ಮುಂದಿನ ಒಂದು ವಾರ ಮನೆಯ ಮಕ್ಕಳು ಸ್ವಾಹಾ ಮಾಡಿ ಪ್ರಸನ್ನರಾಗು ತ್ತಿದ್ದರು.

ನಮ್ಮೂರಿನಲ್ಲಿ ನಾಗರಹಾವನ್ನು ಯಾವ ಕಾರಣಕ್ಕೂ ಬಡಿದುಹಾಕುತ್ತಿರಲಿಲ್ಲ. ಆದರೆ ಕಟ್ಟುಹಾವು, ಕನ್ನಡಿ ಹಾವು, ತೌಡಪ್ಪಳಕದಂತಹ ವಿಷಕಾರಿ ಹಾವುಗಳನ್ನು ಕಂಡರೆ, ತಕ್ಷಣ ಬಡಿಗೆ ಹಿಡಿದು ಬಡಿಯುವುದೇ. ನಾಗರಹಾವನ್ನು ಕಂಡರೆ ವಿಪರೀತ ಭಯ, ಭಕ್ತಿ. ಅಕಸ್ಮಾತ್ ಕಚ್ಚಿದರೆ, ಜೀವವೇ ಹೋಗುವ ಸಂಭವ. ನಾವೆಲ್ಲಾ ಮನೆ ಮುಂದಿನ ಗದ್ದೆಯಲ್ಲಿ
ಆಟವಾಡುವಾಗ, ನಮ್ಮ ಪಕ್ಕದ ಮನೆಯ ಹುಡುಗ ನಾಗರಹಾವು ಕಚ್ಚಿ ಸತ್ತುಹೋದ ದುರ್ಘಟನೆ ಹಿಂದೆ ನಡೆದಿತ್ತು.

ಅದೇನೇ ಇದ್ದರೂ, ಕಾಡು, ಗುಡ್ಡ, ಗದ್ದೆ, ಬಯಲು, ನದಿಕಿನಾರೆಗಳ ನಡುವೆ ಮನೆ ಮಾಡಿಕೊಂಡಿದ್ದ ಹಳ್ಳಿಯ ಜನರು, ಹಾವು ಗಳೊಡನೆ ಅದೇನೋ ಒಂದು ರೀತಿಯ ಸಹಬಾಳ್ವೆಯನ್ನು ಸಾಽಸಿದ್ದಾರೆ. ಅದು ಅನಿವಾರ್ಯವೂ ಇರಬಹುದು. ಆದರೆ, ಕೇರೆ ಹಾವಿನಂತಹ ನಿರುಪದ್ರವಿ ಜೀವಿಗಳನ್ನು ಸಹ, ಕಂಡ ತಕ್ಷಣ ಹಿಡಿಸಿ, ದೂರಕ್ಕೆ ಸಾಗಹಾಕುವ, ಇಪ್ಪತ್ತೊಂದನೇ ಶತಮಾನದ ‘ನಗರಿಗರ’ ಮನಸ್ಥಿತಿಯನ್ನು ಹೇಗೆ ವಿಶ್ಲೇಷಿಸುವುದೋ ಗೊತ್ತಾಗದು.

error: Content is protected !!