Saturday, 27th July 2024

ನಿಷೇಧವೆಂಬುದು ಕನ್ನಡಿಯೊಳಗಿನ ನಂಟು

ಅಶ್ವತ್ಥಕಟ್ಟೆ

ರಂಜಿತ್ ಎಚ್.ಅಶ್ವತ್ಥ

ranjith.hoskere@gmail.com

ಎಸ್‌ಡಿಪಿಐ, ಪಿಎಫ್ಐ ಅವರು ಎಲ್ಲಿಯವರೆಗೆ ಹಿಂದೂ, ಹಿಂದೂತ್ವದ ವಿರುದ್ಧ ಧ್ವನಿ ಎತ್ತುತ್ತಿರುತ್ತಾರೋ ಅಲ್ಲಿಯವರೆಗೆ ಬಿಜೆಪಿಯ ಹಿಂದೂ ತ್ವದ ವೋಟ್ ಬ್ಯಾಂಕ್ ಗಟ್ಟಿಯಾಗಿರುತ್ತದೆ. ಇವುಗಳ ವಿರುದ್ಧ ಯಾವುದೇ ಕ್ರಮ ತಗೆದುಕೊಳ್ಳದೇ ಹೇಳಿಕೆಗಳಿಗೆ ಮಾತ್ರ ಸೀಮಿತ ಗೊಳಿಸುತ್ತಿರುವುದು.

ಕರ್ನಾಟಕದಲ್ಲಿ ವರ್ಷಕ್ಕೆ ಕನಿಷ್ಠ ಒಂದೆರೆಡು ಬಾರಿ ಕೇಳಿಬರುವ ಇಲ್ಲವೇ, ಯಾವುದಾದರೂ ಹಿಂದು ಕಾರ್ಯಕರ್ತರ ಹತ್ಯೆಯಾದ ಕ್ಷಣ ಮಾತ್ರದಲ್ಲಿ ಬಿಜೆಪಿ ನಾಯಕರಿಂದ ಕೇಳಿಬರುವ ಸಾಮಾನ್ಯ ಮಾತು ‘ಎಸ್ ಡಿಪಿಐ, ಪಿಎಫ್ಐ ಸಂಘಟನೆಯನ್ನು ನಿಷೇಧಿಸಿ’ ಎನ್ನುವುದು.
ಹಿಂದೂ ವಿರೋಧಿ ಸಂಘಟನೆಗಳನ್ನು ವಿರೋಧಿಸಿಕೊಂಡೇ ಅಧಿಕಾರದ ಗದ್ದುಗೆ ಏರಿದ ಬಿಜೆಪಿಗರು. ನಿಜವಾಗಿಯೂ ನಿಷೇಧ ಮಾಡುತ್ತಾ ರೆಯೇ ಎಂದು ಸೂಕ್ಷ್ಮವಾಗಿ ಅವಲೋಕಿಸಿದರೆ, ‘ಸಾಧ್ಯವೇ ಇಲ್ಲ’ ಎನ್ನುವ ಮಾತುಗಳು ಅರಿವಿಗೆ ಬರುತ್ತದೆ.

ಹೌದು, ರಾಜಕೀಯ ಮೊಗಸಾಲೆಯಲ್ಲಿರುವ ಯಾರನ್ನೇ ಕೇಳಿದರೂ ಈ ಮಾತನ್ನು ಹೇಳುವುದು ಸಹಜ. ಆಫ್ ದಿ ರೆಕಾರ್ಡ್ ಮಾತನಾಡಿ ದರೆ ಸ್ವತಃ ಬಿಜೆಪಿ ನಾಯಕರೇ, ಎಸ್ ಡಿಪಿಐ, ಪಿಎಫ್ಐನಂತಹ ಸಂಘಟನೆಗಳನ್ನು ಬ್ಯಾನ್ ಮಾಡುವುದು ಸಾಧ್ಯವಿಲ್ಲ ಎನ್ನುವ ಅಭಿಪ್ರಾಯವನ್ನೇ ವ್ಯಕ್ತಪಡಿಸುತ್ತಾರೆ. ಹಾಗಾದರೆ, ಈ ರೀತಿಯ ಹೇಳಿಕೆ, ಆಕ್ರೋಶ ಮಾತುಗಳೆಲ್ಲ ಏಕೆ ಎನ್ನುವ ಪ್ರಶ್ನೆಗೆ ಅವರಿಂದ ಬರುವ ಉತ್ತರ ‘ಮತ ಬ್ಯಾಂಕ್ ರಾಜಕೀಯ’ ಎನ್ನುವುದಾಗಿದೆ. ಈ ಎರಡು ಸಂಘಟನೆಗಳನ್ನು ಬ್ಯಾನ್ ಮಾಡಬೇಕು ಎನ್ನುವ ಕೂಗು ಈ ಹಿಂದೆ ಸಾಲು ಸಾಲು ಹಿಂದೂ ಕಾರ್ಯಕರ್ತರ ಕೊಲೆಯಾಗಿದ್ದ ಸಮಯದಲ್ಲಿ ಬಂದಿತ್ತು.

ಅದಾದ ಬಳಿಕ ತನ್ವೀರ್ ಸೇಠ್ ಮೇಲೆ ಹಲ್ಲೆ ನಡೆದಾಗ, ಡಿ.ಜೆ.ಹಳ್ಳಿ ಗಲಭೆ ಪ್ರಕರಣದ ಸಮಯದಲ್ಲಿ ಈ ಆಗ್ರಹ ಹಾಗೇ ಬಂದು, ಒಂದೆರೆಡು ವಾರವಿದ್ದು ಬಳಿಕ ಹೋಗಿತ್ತು. ಇದೀಗ ಪುನಃ ಮುನ್ನಲೆಗೆ ಬಂದಿದ್ದು, ಶಿವಮೊಗ್ಗದಲ್ಲಿ ಹರ್ಷ ಎನ್ನುವ ಹಿಂದು ಪರ ಸಂಘಟನೆ ಕಾರ್ಯಕರ್ತನ ಹಲ್ಲೆ ಬಳಿಕವೇ. ಹಾಗೇ ನೋಡಿದರೆ ಕರ್ನಾಟಕದಲ್ಲಿ ಈ ಸಂಘಟನೆಗಳನ್ನು ನಿಷೇಧಿಸಬೇಕು ಎನ್ನುವ ಒತ್ತಡ ಬಂದಿರು ವುದು ಇದೇ ಮೊದಲಲ್ಲ. ಈ ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದಾಗಲೂ ಬಂದಿತ್ತು.

ಸಮ್ಮಿಶ್ರ ಸರಕಾರ ಪತನಗೊಂಡ ಬಳಿಕ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕವೂ ಹಲವು ಬಾರಿ ಈ ಆಗ್ರಹ ಕೇಳಿಬಂದಿದೆ. ಆದರೆ ಅದನ್ನು ಕಾರ್ಯಗತಗೊಳಿಸುವ ಮಾತ್ರ ಸರಕಾರ ಮುಂದಾಗಿಲ್ಲ. ಇದಕ್ಕೆ ಕಾರಣ ಪುನಃ ‘ಮತ ಬ್ಯಾಂಕ್’. ಹಿಂದುತ್ವ ವಿರೋಧಿ ಚಟುವಟಿಕೆಯಲ್ಲಿ ಭಾಗವಹಿಸುವ ಈ ಸಂಘಟನೆಗಳಿಂದ ಬಿಜೆಪಿ ಯಾವುದೇ ಲಾಭವಾಗುವುದಿಲ್ಲ ಎಂದು ಯಾರಾದರೂ ಅಂದು ಕೊಂಡರೆ ಅದು ಬಹು ದೊಡ್ಡ ತಪ್ಪು.

ಮೊನ್ನೆ ಹರ್ಷ ಹತ್ಯೆ ಬಳಿಕ ಹಿಂದೂ ಪರ ಚಿಂತಕ ಚಕ್ರವರ್ತಿ ಸೂಲಿಬೆಲೆ ಅವರು ಹೇಳಿದ್ದು ಇದೇ ಮಾತನ್ನು. ‘ಎಸ್‌ಡಿಪಿಐ, ಪಿಎಫ್ಐ ಅನ್ನು ವಿರೋಧಿಸಿಕೊಂಡೇ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಅಧಿಕಾರ ನಡೆಸುವಾಗಲೂ, ಅದೇ ಮಾತನ್ನು ಪುನರುಚ್ಛರಿಸುತ್ತಾರೆ ಎಂದರೆ ನಾಚಿಕೆ ಗೇಡಿನ ಸಂಗತಿ’ ಎನ್ನುವ ಆಕ್ರೋಶದ ಮಾತುಗಳನ್ನು ಹೇಳಿದ್ದಾರೆ. ಆದರೆ ಈ ವಿಷಯದಲ್ಲಿ ಸೂಲಿಬೆಲೆ ಅವರು ಹೇಳಿದಂತೆ,
ಮುಂದಿನ ಚುನಾವಣೆಯಲ್ಲಿಯೂ ಇದೇ ಮಾತನ್ನು ಹೇಳಿಕೊಂಡು ಬಿಜೆಪಿ ನಾಯಕರು ಹೋಗುತ್ತಾರೆ. ಏಕೆಂದರೆ ಈ ಎರಡು ಸಂಘಟನೆ ಗಳನ್ನು ನಿಷೇಧಿಸಿದರೆ, ನಷ್ಟವಾಗುವುದು ಬಿಜೆಪಿ ಹೊರತು ಕಾಂಗ್ರೆಸ್‌ಗೆ ಅಲ್ಲ.

ಅಚ್ಚರಿಯಾದರೂ ಇದು ಸತ್ಯ. ಎಸ್‌ಡಿಪಿಐ, ಪಿಎಫ್ಐ ಆಗಲಿ ಇಲ್ಲವೇ ಒವೈಸಿ ನೇತೃತ್ವದ ಪಕ್ಷವಾಗಲಿ, ಅವರು ಎಲ್ಲಿಯವರೆಗೆ ಹಿಂದೂ, ಹಿಂದೂತ್ವದ ವಿರುದ್ಧ ದೊಡ್ಡದಲ್ಲಿ ಧ್ವನಿ ಎತ್ತುತ್ತಿರುತ್ತಾರೋ ಅಲ್ಲಿಯವರೆಗೆ ಬಿಜೆಪಿಯ ಹಿಂದೂತ್ವದ ವೋಟ್ ಬ್ಯಾಂಕ್ ಗಟ್ಟಿಯಾಗಿಯೇ ಇರುತ್ತದೆ. ಇದೇ ಕಾರಣಕ್ಕಾಗಿ, ಈ ಸಂಘಟನೆಗಳ ವಿರುದ್ಧ ಯಾವುದೇ ಕ್ರಮ ತಗೆದುಕೊಳ್ಳದೇ ಹೇಳಿಕೆಗಳಿಗೆ ಮಾತ್ರ ಸೀಮಿತಗೊಳಿಸು ತ್ತಿರುವುದು. ಆದರೆ ಒವೈಸಿ ನೇತೃತ್ವದ ಪಕ್ಷ ಕೇವಲ, ಹಿಂದೂತ್ವದ ವಿರುದ್ಧ, ಮೋದಿ ವಿರುದ್ಧ ಮಾತನಾಡುತ್ತಿದ್ದಾರೆ.

ಪಿಎಫ್ಐ, ಎಸ್‌ಡಿಪಿಐ ಸಂಘಟನೆಗಳು ಹಾಗಿಲ್ಲ. ಅವುಗಳು ಸಮಾಜ ಘಾತುಕ ಶಕ್ತಿಯಾಗಿ ಕಾರ್ಯ ನಡೆಸುತ್ತಿರುವುದಕ್ಕೆ ಹಲವು
ಪುರಾವೆಗಳಿವೆ. ಆದರೂ ಅವರ ಆ ಹೋರಾಟವೇ ಬಿಜೆಪಿಯ ಹಿಂದೂ ಮತಗಳ ಕ್ರೋಢೀಕರಣಕ್ಕೆ ಸೋಪಾನ ಎನ್ನುವ ಸತ್ಯವನ್ನು ಬಿಜೆಪಿಗರು ಅರಿತಿದ್ದಾರೆ. ಆ ಕಾರಣಕ್ಕೆ ಅವರನ್ನು ನಿಷೇಧಗೊಳಿಸುತ್ತಿಲ್ಲ. ಆದರೆ ಮತಬ್ಯಾಂಕ್ ವಿಷಯದಲ್ಲಿ ಎಸ್‌ಡಿಪಿಐ, ಪಿಎಫ್ಐ ಸಂಘಟನೆಗಳು ಬಹುದೊಡ್ಡ ತಲೆನೋವಾಗಿರುವುದು ಕಾಂಗ್ರೆಸ್ ಪಕ್ಷಕ್ಕೆ. ಕಾಂಗ್ರೆಸಿನೊಂದಿರುವ ಮುಸ್ಲಿಂ ಮತಗಳನ್ನು ಒಡೆಯುವಲ್ಲಿ ಈ ಎರಡು ಸಂಘಟನೆಗಳು ದೊಡ್ಡ ಪಾತ್ರ ನಿರ್ವಹಿಸುತ್ತವೆ. ಅದರಲ್ಲಿಯೂ ಕರಾವಳಿ ಭಾಗದಲ್ಲಿ ಈ ಎರಡು ಸಂಘಟನೆಗಳು ಅಽಕಾರಕ್ಕೆ ಬರುವಷ್ಟು ಶಕ್ತಿಶಾಲಿಯಾಗಿ ಬೆಳೆಯುತ್ತಿದೆ.

ಇದರಿಂದ ಮತಗಳ ನಷ್ಟವಾಗುವುದು ಕಾಂಗ್ರೆಸ್‌ಗೆ. ಆದರೆ ಬಿಜೆಪಿಗೆ ಈ ರೀತಿಯ ಮತವಿಭಜನೆಯಿಂದ ಹೆಚ್ಚು ಲಾಭವಾಗುತ್ತದೆ. ಏಕೆಂದರೆ, ಮುಸ್ಲಿಂ ಮತಗಳು ಹರಿದು ಹಂಚಿ ಹೋದರೆ, ಹಿಂದೂತ್ವದ ಹೆಸರಲ್ಲಿ ಬಿಜೆಪಿಗೆ ಹಿಂದೂ ಮತಗಳು ಗಟ್ಟಿಯಾಗಿ ಸಿಗಲಿದೆ. ಇದರಿಂದ ಚುನಾವಣೆಯಲ್ಲಿ ಗೆಲ್ಲುವುದು ಸುಲಭ. ಈ ಕಾರಣಕ್ಕಾಗಿಯೇ ಕಾಂಗ್ರೆಸ್ ಈ ಎರಡು ಸಂಘಟನೆಗಳನ್ನು ನಿಷೇಧಿಸಬೇಕು
ಎನ್ನುವ ಒತ್ತಡವನ್ನು ಸರಕಾರದ ಮೇಲೆ ಪದೇಪದೆ ಹೇರುತ್ತಿರುವುದು. ಈ ಹಿಂದೆ ಸಿದ್ದರಾಮಯ್ಯ ಅವರ ಅವಧಿಯಲ್ಲಿ, ನಿಷೇಧಕ್ಕೆ ಪ್ರಸ್ತಾವನೆಯನ್ನು ಸಿದ್ಧತೆ ನಡೆಸಿಕೊಂಡಿದ್ದು.

ಇದೀಗ ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿಯದ್ದೇ ಡಬಲ್ ಎಂಜಿನ್ ಸರಕಾರವಿದೆ. ಈ ಸಮಯದಲ್ಲಿ ಎಸ್‌ಡಿಪಿಐ, ಪಿಎಫ್ಐ ನಿಷೇಧ ಬಲು ಸುಲಭ ಕೆಲಸ ಎನ್ನುವುದು ಹಿಂದೂ ಕಾರ್ಯಕರ್ತರ ನಂಬಿಕೆ. ಏಕೆಂದರೆ ಆ ಸಂಘಟನೆಗಳನ್ನು ನಿಷೇಧಿಸುವುದಕ್ಕೆ ಬೇಕಿರುವ ಅಗತ್ಯ ಪುರಾವೆ, ದಾಖಲೆಗಳನ್ನು ಸರಕಾರ ಏಜೆನ್ಸಿ ಮಾಡಬೇಕಿರುವುದರಿಂದ, ಅದನ್ನು ಸಿದ್ಧಪಡಿಸುವುದು ಬಹುದೊಡ್ಡ ವಿಷಯವಲ್ಲ.
ಕಾರ್ಯಕರ್ತರ ಮನಸಿನ ಭಾವನೆಯೂ ಅದೇ ಆಗಿದೆ. ಆದರೆ ಪಕ್ಷದಲ್ಲಿರುವ ನಾಯಕರು, ಮತಬ್ಯಾಂಕ್ ರಾಜಕೀಯಕ್ಕಾಗಿ ಈ ರೀತಿ ಆಗುವುದನ್ನು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ.

ಹರ್ಷ ಹತ್ಯೆಯಾಗಿ 10 ದಿನಗಳ ಕಳೆಯುತ್ತಾ ಬಂದಿದೆ. ಇನ್ನೊಂದು 15 ದಿನದಲ್ಲಿ ಆ ಹತ್ಯೆಯನ್ನು ಜನ ಮರೆಯುತ್ತಾರೆ. ಅದಾದ ಬಳಿಕ ನಿಷೇಧ ಕೂಗು ಅಲ್ಲಿಯೇ ‘ಸತ್ತು’ ಹೋಗುತ್ತದೆ. ಆದರೆ ಈ ಸಂಘಟನೆಗಳು ಮುಸ್ಲಿಂ ಮತಗಳ ಬೇಟೆಯಾಡುವ ಕಾರಣಕ್ಕೆ, ಆಡುವ ಮಾತು, ನಡೆಯುವ ನಡೆ ಹಿಂದೂ ವಿರೋಧಿಯಾಗುತ್ತಿದ್ದಂತೆ, ಬಿಜೆಪಿ ನಾಯಕರು ಪುನಃ ಧರ್ಮ ರಕ್ಷಣೆಗೆ ಹಿಂದೂಗಳೆಲ್ಲ ಒಂದಾಗಿ ಎನ್ನುವ ಮಾತನ್ನು ಹೇಳಿ, ವೋಟ್ polariseಗೆ ವೇದಿಕೆ ಸಿದ್ಧಪಡಿಸಿಕೊಳ್ಳುತ್ತಾರೆ. ಅಲ್ಲಿ ಪುನಃ ಅದೇ ಭರವಸೆ. ಅದೇ ಹೋರಾಟದ ಎಚ್ಚರಿಕೆ.

ಹಾಗೇ ನೋಡಿದರೆ ಕಳೆದ ಎಂಟು ವರ್ಷದಿಂದ ದೇಶವನ್ನು ಆಳುತ್ತಿರುವ ಬಿಜೆಪಿಗೆ ಈ ಎರಡು ಸಂಘಟನೆಯನ್ನು ಬ್ಯಾನ್ ಮಾಡುವುದು ಬಹುದೊಡ್ಡ ವಿಷಯವೇನಲ್ಲ. ಸಂಘಟನೆಗಳನ್ನು ನಿಷೇಧಿಸುವುದು ಕೇಂದ್ರ ಗೃಹ ಇಲಾಖೆಯಲ್ಲಿ ಬರುವುದರಿಂದ, ಯಾವುದಾದರೂ ರಾಜ್ಯದಿಂದ ನಿಷೇಧಕ್ಕೆ ಶಿಫಾರಸು ಮಾಡಿಸಿ, ಅದೇ ಶಿಫಾರಸಿನ ಮೇಲೆ Unlawful Activities (Prevention) Act, 1967 ನಲ್ಲಿ ನಿಷೇಧಿಸಬಹುದು. ಈ ಎರಡು ಸಂಘಟನೆಗಳು ಕೇವಲ ಸಂಘಟನೆಗಳಾಗಿ ಉಳಿಯದೇ, ರಾಜಕೀಯ ಪಕ್ಷಗಳಾಗಿರುವು ದರಿಂದ ಚುನಾವಣಾ ಅಯೋಗಕ್ಕೂ, ಈ ಸಂಘಟನೆಗಳ ಕಾನೂನು ವಿರೋಧಿ ಚಟುವಟಿಕೆಯ ಬಗ್ಗೆ ಮಾಹಿತಿ ನೀಡಿ ಅದನ್ನು ನಿಷೇಧಿಸ ಬಹುದು.

ದೇಶದ ಹಲವು ರಾಜ್ಯದಲ್ಲಿ ಬಿಜೆಪಿಯೇ ಅಧಿಕಾರದಲ್ಲಿದೆ. ಕೇಂದ್ರದ ಗುಪ್ತಚರ ಸೇರಿದಂತೆ ಎಲ್ಲ ಏಜೆನ್ಸಿಗಳೂ ಸರಕಾರದಲ್ಲಿಯೇ ಬರುತ್ತವೆ. ಹೀಗಿರುವಾಗ, ಈ ಎರಡು ಸಂಘಟನೆಗಳ ವಿರುದ್ಧ ಮಾಹಿತಿ ಸಂಗ್ರಹಿಸುವುದು ದೊಡ್ಡ ವಿಷಯವಲ್ಲ. ಬಳಿಕ ಕೇಂದ್ರ ಸಚಿವ ಸಂಪುಟದಲ್ಲಿ ಒಪ್ಪಿಗೆ ಪಡೆಯುವುದು ದೊಡ್ಡ ಸಮಸ್ಯೆಯಲ್ಲ. ಆದರೆ ಬಿಜೆಪಿಗರಿಗೆ ‘ಹಿಂದೂತ್ವದ ಬ್ರ್ಯಾಂಡ್’ ಅನ್ನು ಉಳಿಸಿ, ಬೆಳೆಸಲು ಈ ರೀತಿಯ ಸಂಘಟನೆಗಳ ಅಗತ್ಯವಿದೆ.

ಆದ್ದರಿಂದಲೇ ಬಿಜೆಪಿ ನಾಯಕರು ಈ ವಿಷಯವನ್ನು ಹೇಳಿಕೆಗೆ ಮಾತ್ರ ಸೀಮಿತಗೊಳಿಸುತ್ತಿದ್ದಾರೆ. ಈ ರೀತಿ ಇರುವಾಗ ಎಸ್‌ಡಿಪಿಐ, ಪಿಎಫ್ಐ ಸಂಘಟನೆಗಳನ್ನು ನಿಷೇಧಿಸುವ ಹೇಳಿಕೆಗಳನ್ನು ನಿಡುವುದು, ಒತ್ತಡ ಹೇರುವುದು ಎಲ್ಲ ‘ಬೂಟಾಟಿಕೆ’ಯ ಮಾತಿಗೆ ಸೀಮಿತ ವಾಗುತ್ತದೆ ಹೊರತು, ಅದರ ಮುಂದೆ ಏನು ಆಗುವುದಿಲ್ಲ. ಯಾವುದಾದರೂ ಗಲಭೆ, ಕೊಲೆ ನಡೆದಾ ಗಲೆಲ್ಲ ಕೇಳಿಬರುವ ‘ನಿಷೇಧ’ದ ಆಗ್ರಹ ಮುಂದಿನ ದಿನದಲ್ಲಿಯೂ ಆಗ್ರಹವಾಗಿಯೇ ಉಳಿಯಲಿದೆ ಹೊರತು, ಕಾರ್ಯರೂಪಕ್ಕೆ ಬರುವು ದಿಲ್ಲ ಎನ್ನುವುದು ಸ್ಪಷ್ಟ.

error: Content is protected !!