Saturday, 27th July 2024

ನಮ್ಮ ದೇಶದಲ್ಲಿರುವ ಹಕ್ಕಿ ಪ್ರಭೇದಗಳೆಷ್ಟು ?

ಶಶಾಂಕಣ

shashidhara.halady@gmail.com

ಹಕ್ಕಿಗಳ ಬಗ್ಗೆ ನನಗೆ ಕುತೂಹಲ ಮೂಡಿದ್ದು ಕಾಲೇಜು ದಿನಗಳಲ್ಲಿ. ಆಗ ನಮ್ಮ ಹಳ್ಳಿಯ ಸುತ್ತಮುತ್ತಲಿನ ಹಕ್ಕಿಗಳ ವಿವರಗಳನ್ನು ಒಂದು ನೋಟ್ ಪುಸ್ತಕದಲ್ಲಿ ಗುರುತು ಹಾಕಿಕೊಳ್ಳುತ್ತಿದ್ದುದನ್ನು ನೋಡಿದ ನಮ್ಮಪ್ಪ ಕೇಳಿದರು ‘ಏನದು?‘ ನಾನೆಂದೆ ‘ಬರ್ಡ್ ವಾಚಿಂಗ್, ಹಕ್ಕಿಗಳನ್ನು ಗುರುತಿಸುವುದು.’

ಅದಕ್ಕೆ ಅವರ ಉತ್ತರ ‘ಹೇ.. ಅದು ನಮಗೆಲ್ಲ ಅಲ್ಲ. ಹಕ್ಕಿಗಳನ್ನು ಗುರುತಿ ಸುವ ಹವ್ಯಾಸವು ಶ್ರೀಮಂತರದ್ದು..ಉಹುಂ’ ಎಂದು ತಲೆಯಡಿಸಿ, ನಮ್ಮಂತಹವರು ಪಕ್ಷಿ ವೀಕ್ಷಣೆಯ ಹವ್ಯಾಸವನ್ನು ಮಾಡುತ್ತಾ ಕುಳಿತರೆ, ಬೇರೆ ಕೆಲಸಗಳಾಗುವುದಿಲ್ಲ ಎಂಬರ್ಥವನ್ನು ಹೊಮ್ಮಿಸಿದರು. ಅವರ ಮಾತಿನಲ್ಲಿ ಸತ್ಯವಿತ್ತು.

ದುಡಿದು ತಿನ್ನಬೇಕಾದವರಿಗೆ, ಶಿಸ್ತಾಗಿ ಕೆಲಸ ಮಾಡಿ ನಾಲ್ಕು ಕಾಸು ಉಳಿಸಿ, ಬದುಕು ಕಟ್ಟಿಕೊಳ್ಳಬೇಕಾದವರಿಗೆ, ಪಕ್ಷಿ ವೀಕ್ಷಣೆ ಮಾಡಲು ಸಮಯ ಹೊಂದಿಸಿಕೊಳ್ಳುವುದು ಹೇಗೆ ಸಾಧ್ಯ? ನಮ್ಮ ಸುತ್ತಮುತ್ತಲಿರುವ ನೂರಾರು ಹಕ್ಕಿಗಳನ್ನು ಗುರುತಿಸುತ್ತಾ, ಅವುಗಳ ವಿವರವನ್ನು ನೋಟ್ ಬುಕ್ ನಲ್ಲಿ ಬರೆದು ಕೊಳ್ಳುತ್ತಾ, ‘ಹಕ್ಕಿ ಬಾಲ ಹಿಡಿದು’ ಹೊರಟರೆ, ಜೀವನ ನಡೆಸುವುದಾದರೂ ಹೇಗೆ? ಈ ಚಿಂತನೆಯ ಹಿನ್ನೆಲೆಯಲ್ಲಿ ‘ಅದು ಶ್ರೀಮಂತರ ಹವ್ಯಾಸ, ನಮಗೆ ಹೇಳಿಸಿದ್ದಲ್ಲ’ ಎಂದು ನಮ್ಮಪ್ಪ ಹೇಳಿರ ಬೇಕು.

ಅವರ ದೃಷ್ಟಿಕೋನ ದಲ್ಲಿ ನೋಡಿದರೆ ಅದು ನಿಜವೇ. ಪಕ್ಷಿವೀಕ್ಷಣೆ, ಛಾಯಾಚಿತ್ರಗ್ರಹಣ, ಚಾರಣ ಮೊದಲಾದ ಹವ್ಯಾಸ ಗಳೆಲ್ಲವೂ ಅದೇ ರೀತಿಯವು. ಛಾಯಾಚಿತ್ರಗ್ರಹಣವಂತೂ, ಅಂದಿನ ದಿನಗಳಲ್ಲಿ ಕೆಲವೇ ವ್ಯಕ್ತಿಗಳ ಸ್ವತ್ತಾಗಿತ್ತು, ಕ್ಯಾಮೆರಾ ಹೊಂದಿ, ಅದಕ್ಕೆ ಕಾಲಕಾಲಕ್ಕೆ ರೀಲುಗಳನ್ನು ಖರೀದಿಸಿ, ಫೋಟೋ ಪ್ರಿಂಟ್ ಹಾಕುವ ತಾಕತ್ತುಳ್ಳವರು ಮಾತ್ರ ಆ ಹವ್ಯಾಸ ವನ್ನು ಮುಂದುವರಿಸಬಹುದಿತ್ತು. ಹಾಗೆ ನೋಡುತ್ತಾ ಹೋದರೆ ಆಗಿನ ಕಾಲದ ಕ್ರಿಕೆಟ್, ಟೆನಿಸ್ ಮೊದಲಾದ ಕ್ರೀಡೆಗಳು ಸಹ ಶ್ರೀಮಂತರ ಹವ್ಯಾಸಗಳೇ ಅಲ್ಲವೇ!

ಬ್ರಿಟಿಷರು ನಮ್ಮ ದೇಶದಲ್ಲಿ ಕ್ರಿಕೆಟ್ ಆಟವನ್ನು ಪರಿಚಯಿಸಿದಾಗ ಅದು ಉಳ್ಳವರಿಗೆ ಮೀಸಲಾದ ಆಟವಾಗಿತ್ತು. ಉತ್ತಮ ಗುಣಮಟ್ಟದ ಬ್ಯಾಟ್, ಲೆದರ್ ಬಾಲ್, ಕಾಲಿಗೆ ಕಟ್ಟುವ ಪ್ಯಾಡ್, ಬಾಲ್ ತಗುಲಿದರ ಏಟಾಗದಂತೆ ಕೈಗೆ ಗ್ಲೌಸ್, ಸೆಂಟರ್ ಪ್ಯಾಡ್, ಐದು ದಿನಗಳ ತನಕ ಮುಂದುವರಿಯುವ ಎರಡೆರಡು ಇನಿಂಗ್ಸ್‌ಗಳು, ಇದಕ್ಕೆ ಬೇಕಾದ ಸಮಯ ಇವೆಲ್ಲವನ್ನು ಹೊಂದಿಸಲು ಶ್ರೀಮಂತರಿಂದ ಮಾತ್ರ ಸಾಧ್ಯವಿತ್ತು. ಆದರೆ ದೇಶಕ್ಕೆ ಸ್ವಾತಂತ್ರ್ಯ ದೊರೆತ ನಂತರ ಕ್ರಿಕೆಟ್ ಆಟ ನಮ್ಮೂರಿನ ಹಳ್ಳಿಗಳನ್ನು ಮತ್ತು ಗಲ್ಲಿಗಳನ್ನು ಪ್ರವೇಶಿಸಿ, ಜನಸಾಮಾನ್ಯರ ಪ್ರೀತಿ ಗಳಿಸಿತು!

ಇದೇ ರೀತಿ, ಪಕ್ಷಿ ವೀಕ್ಷಣೆಯಂತಹ ‘ಶ್ರೀಮಂತರ ಹವ್ಯಾಸ’ವು ನಿಧಾನವಾಗಿ ಜನಸಾಮಾನ್ಯರ ಪರಿಧಿಯನ್ನು ಪ್ರವೇಶಿಸಲು ಸಾಧ್ಯವೆ? ನನಗೆ ಪಕ್ಷಿ ವೀಕ್ಷಣೆಯ ಪ್ರಾಥಮಿಕ ಪಾಠಗಳನ್ನು ಕಲಿಸಿದ್ದು ‘ದ ಬುಕ್ ಆಫ್ ಇಂಡಿಯನ್ ಬಡ್ಸ್’ ಪುಸ್ತಕ. ಹಿರಿಯ ಪಕ್ಷಿ ವೀಕ್ಷಕ ಸಲೀಂ ಅಲಿ ಅವರು 1941 ರಲ್ಲಿ (ಸ್ವತಂತ್ರ ಪೂರ್ವ ಕಾಲ) ಪ್ರಕಟಿಸಿದ ಆ ಪುಸ್ತಕವು ನಮ್ಮ ದೇಶದ ಪಕ್ಷಿವೀಕ್ಷಕರ ಪಾಲಿನ ಭಗವದ್ಗೀತೆ. ಆ ಕಾಲದಲ್ಲಿ ಆ ಪುಸ್ತಕದಲ್ಲಿ ಅವರು ಅಡಕಗೊಳಿಸಿದ 181 ಪಕ್ಷಿಗಳ ಬಣ್ಣ ಬಣ್ಣದ ಹಕ್ಕಿಗಳ ಚಿತ್ರಗಳು ಅಭೂತಪೂರ್ವ! ಸಹಜವಾಗಿ ಅಂದು ಆ ದುಬಾರಿ ಪುಸ್ತಕವನ್ನು ಶ್ರೀಮಂತರು, ರಾಜ ಮಹಾರಾಜರು ಸಾಮಂತರು, ಬ್ರಿಟಿಷ್ ಸರಕಾರದ ಅಧಿಕಾರಿಗಳು ಮಾತ್ರ ಕೊಳ್ಳಬಹುದಿತ್ತು.

ಜತೆಗೆ ಅಂದಿನ ದಿನಗಳಲ್ಲಿ ಅಂತಹ ಸ್ಥಿತಿವಂತರು ಮಾತ್ರ ಆ ಚಿತ್ರಗಳನ್ನು ನೋಡಿ ಹಕ್ಕಿಗಳನ್ನು ಗುರುತಿಸಬಹುದಿತ್ತು. ಇದನ್ನು ಗಮನಿಸಿಯೇ ನಮ್ಮ ತಂದೆ ಪಕ್ಷಿ ವೀಕ್ಷಣೆಯು ಶ್ರೀಮಂತರ ಹವ್ಯಾಸ ಎಂದು ನಿರ್ಧರಿಸಿರಬೇಕು. ಸಲೀಂ ಅಲಿ ಅವರ ಪುಸ್ತಕದ ಹಲವು ಮರು ಮುದ್ರಣಗಳು ಪ್ರಕಟಗೊಂಡು ಅದರ ಜನಪ್ರಿಯತೆಯನ್ನು ತೋರಿಸಿವೆ. ಆ ಪುಸ್ತಕವು ಹಲವು ಬಾರಿ ಮರು ಮುದ್ರಣಗೊಂಡಿದೆ.

ಇತ್ತೀಚೆಗಿನ ಮರು ಮುದ್ರಣದಲ್ಲಿ ಅದರಲ್ಲಿ ಸುಮಾರು 300 ಹಕ್ಕಿಗಳ ವಿವರಗಳಿವೆ. ಆ ಪುಸ್ತಕ ನನ್ನ ಕಣ್ಣಿಗೆ ಬಿದ್ದದ್ದು ಕುಂದಾಪುರದ ‘ಎಡ್ವರ್ಡ್ ಮೆಮೊರಿಯಲ್ ಲೈಬ್ರರಿ’ಯಲ್ಲಿ. ಬ್ರಿಟಿಷ್ ರಾಜನ ಹೆಸರು ಹೊತ್ತಿದ್ದ ಆ ಸಾರ್ವಜನಿಕ ವಾಚನಾಲ
ಯದಲ್ಲಿ, ಅಂತಹ ಹಲವು ಪುಸ್ತಕಗಳಿದ್ದವು. ಈಗ ಅದು ಸರಕಾರಿ ವಾಚನಾಲಯದ ಹೆಸರನ್ನು ಹೊತ್ತಿದೆ. ಅಲ್ಲಿ ಯಾವುದೇ ಪುಸ್ತಕವನ್ನು 15 ದಿನಗಳ ಮಟ್ಟಿಗೆ ಮಾತ್ರ ಎರವಲು ಕೊಡುತ್ತಿದ್ದರು.

ಹಲವು ಬಾರಿ ‘ದ ಬುಕ್ ಆಫ್ ಇಂಡಿಯನ್ ಬರ್ಡ್ಸ್’ ಎರವಲು ಪಡೆದು ನಮ್ಮ ಹಳ್ಳಿಗೆ ತಂದು, ಮನೆಯ ಸುತ್ತಮುತ್ತಲಿನ ಹಾಡಿ, ಹಕ್ಕಲು, ಬ್ಯಾಣ, ತೊರೆ, ಗದ್ದೆಯಂಚು, ತೋಡಿನ ಬದಿಯಲ್ಲಿ ಹಕ್ಕಿಗಳನ್ನು ಗುರುತಿಸಲು ಪ್ರಯತ್ನಿಸಿದ್ದೆ. ಅಂದಿನ ದಿನಗಳಲ್ಲಿ ಅಂತಹ ಇನ್ನೊಂದು ಪುಸ್ತಕ ನಮ್ಮ ದೇಶದಲ್ಲಿರಲಿಲ್ಲ. ಸಲೀಂ ಅಲಿ ಅವರು ನಮ್ಮ ದೇಶದ ನಾನಾ ಭಾಗಗಳಲ್ಲಿ ಪಕ್ಷಿ
ವೀಕ್ಷಣೆ ಮಾಡಿ, ಅವುಗಳ ವರ್ತನೆ, ಅವು ಕೂಗುವ ರೀತಿ, ಅವುಗಳ ವ್ಯಾಪ್ತಿ ಎಲ್ಲವನ್ನೂ ಆ ಪುಸ್ತಕದಲ್ಲಿ ದಾಖಲಿಸಿರುವ ಪರಿ ಹೇಗಿದೆ ಎಂದರೆ, ಇಂದಿನ ಆಧುನಿಕ ಯುಗಕ್ಕೂ ಅದು ಬಹುಮಟ್ಟಿಗೆ ನಿಖರ. ಹೊಸ ಹೊಸ ಸಂಶೋಧನೆಗಳಿಂದ ಕೆಲವು ಹಕ್ಕಿಗಳ ಕುರಿತು ಹೊಸ ಹೊಸ ವಿಚಾರಗಳು ಪತ್ತೆಯಾಗಿವೆಯಾದರೂ, ಅಂತಹ ಹೆಚ್ಚಿನ ಸಂಶೋಧನೆಗಳು ಅವರು ಬರೆದಿಟ್ಟ ವಿಚಾರಗಳಿಗೆ ಪೂರಕವಾಗಿ, ಮುಂದುವರಿಕೆಯಾಗಿ ದಾಖಲುಗೊಂಡಿವೆ!

ನಮ್ಮ ದೇಶದಲ್ಲಿ ಸಾವಿರಕ್ಕೂ ಹೆಚ್ಚಿನ ಹಕ್ಕಿಗಳ ಪ್ರಭೇದಗಳಿದ್ದು, ಸುಲಭವಾಗಿ ಕಾಣಿಸಿಗುವ ಹಕ್ಕಿಗಳ ವಿವರಗಳನ್ನ ಮಾತ್ರ ‘ದ ಬುಕ್ ಆಫ್ ಇಂಡಿಯನ್ ಬರ್ಡ್ಸ್’ನಲ್ಲಿ ಸಲೀಂ ಅಲಿಯವರು ನೀಡಿದ್ದಾರೆ. ಅತ್ಯಂತ ಜನಪ್ರಿಯ ಎನಿಸಿರುವ ಈ ಪುಸ್ತಕದ ಜತೆ ಇತರ ಹಲವು ಹಕ್ಕಿಗಳ ಪುಸ್ತಕಗಳನ್ನು ಅವರು ರಚಿಸಿದ್ದಾರೆ. ದಿನ್ ರಿಪ್ಲೇ ಎಂಬ ಪಕ್ಷಿತಜ್ಞನ ಜತೆಗೂಡಿ ಸಲೀಂ ಅಲಿಯವರು ರಚಿಸಿದ, ‘ದ ಹ್ಯಾಂಡ್ ಬುಕ್ ಆಫ್ ಬರ್ಡ್ಸ್ ಆಫ್ ಇಂಡಿಯಾ ಅಂಡ್ ಪಾಕಿಸ್ತಾನ್’ ಎಂಬ ಬೃಹತ್ ಗ್ರಂಥ ವಿಶಿಷ್ಟ. ೧೦ ಸಂಪುಟಗಳಲ್ಲಿರುವ ಆ ಗ್ರಂಥ ದಲ್ಲಿ ನಮ್ಮ ಉಪಖಂಡದಲ್ಲಿ ಕಾಣಸಿಗುವ ಸುಮಾರು 2060 ಹಕ್ಕಿಗಳ ಸಂಪೂರ್ಣ ವಿವರಗಳಿದ್ದು, ಇದು ಅವಶ್ಯವಾಗಿ ವಿದ್ವಾಂಸರ, ಸಂಶೋಧಕರ, ಸಂಶೋಧನಾ ವಿದ್ಯಾರ್ಥಿಗಳ ಪರಾಮರ್ಶನೆಗಾಗಿ ಸಿದ್ಧಗೊಂಡದ್ದು.

ಇದರ ಒಂದೊಂದು ಸಂಪುಟದ ಬೆಲೆ ಸುಮಾರು ರೂ 8000. ಈ 10 ಸಂಪುಟಗಳ ಸಂಕ್ಷಿಪ್ತ ರೂಪ ಸಹ ಪ್ರಕಟಗೊಂಡಿದೆ.
ಆದರೆ ಈಚಿನ ಒಂದು ದಶಕದಲ್ಲಿ ಪಕ್ಷಿ ವೀಕ್ಷಣೆ ಮತ್ತು ಪಕ್ಷಿಗಳ ಫೋಟೋಗ್ರಾಫಿಯ ಸ್ವರೂಪವೇ ಬದಲಾಗಿದೆ. ಎಲ್ಲರಿಗೂ ಅಂತರ್ಜಾಲದ ಲಭ್ಯತೆಯಿಂದಾಗಿ ಪಕ್ಷಿಗಳ ಡೇಟಾಬೇಸ್‌ಗಳು ಸೃಷ್ಟಿಗೊಂಡಿವೆ. ಬಣ್ಣ ಬಣ್ಣದ ಫೋಟೋಗಳನ್ನು ವಿಶ್ವದ
ಯಾವ ಮೂಲೆಯದರೂ ಕುಳಿತು ನೋಡುವ ಅವಕಾಶ, ಯೂಟ್ಯೂಬ್ ಬದಲಾದ ಮಾಧ್ಯಮಗಳಲ್ಲಿ ಪಕ್ಷಿಗಳ ಕೂಗುಗಳನ್ನು ಕೇಳುವ ಅವಕಾಶ, ಡಿಜಿಟಲ್ ಫೋಟೋಗ್ರಾಫಿಯ ಸೌಕರ್ಯ, ಸ್ಮಾರ್ಟ್ ಫೋನ್‌ನಲ್ಲಿ ಗುಣಮಟ್ಟದ ಛಾಯಾಚಿತ್ರ ಗ್ರಹಣದ
ಅವಕಾಶ, ಕಾಡಿನ ನಡುವೆ ಹಕ್ಕಿಗಳ ಕೂಗನ್ನು ಜನಸಾಮಾನ್ಯರು ರೆಕಾರ್ಡ್ ಮಾಡುವ ಅವಕಾಶ, ಅವುಗಳನ್ನು ಅಂತ ರ್ಜಾಲಕ್ಕೆ ಅಪ್ಲೋಡ್ ಮಾಡುವ ಸಾಧ್ಯತೆ, ಇವೆಲ್ಲವೂ ಪಕ್ಷಿ ವೀಕ್ಷಣೆಯಂತಹ ಹವ್ಯಾಸವನ್ನು ಸರಳಗೊಳಿಸಿವೆ.

ಇದರಿಂದಾಗಿ ಪಕ್ಷಿ ವೀಕ್ಷಣೆಯ ಹೊಸ ಹೊಸ ಆಯಾಮಗಳು ಸೃಷ್ಟಿಗೊಂಡಿದ್ದು, ಈ ಪರಿಸರ ಸಂಬಂಧಿ ಚಟುವಟಿಕೆಯ
ಅಪಾರ ಸಾಧ್ಯತೆಗಳನ್ನು ತೆರೆದಿಟ್ಟಿವೆ. ಪಕ್ಷಿಗಳ ಕೆಲವು ಪ್ರಭೇದಗಳನ್ನು ಅವುಗಳು ಕೂಗುವ ರೀತಿಯಲ್ಲಿ ಮಾತ್ರ ಹವ್ಯಾಸಿಗಳು ಗುರುತಿಸಲು ಸಾಧ್ಯ. ಉದಾಹರಣೆಗೆ ನಮ್ಮ ನಾಡಿನಲ್ಲಿರುವ ಕೆಲವು ನೆತ್ತಿಂಗಗಳು, ನೋಡಲು ಬಹು ಮಟ್ಟಿಗೆ ಒಂದೇ ರೀತಿ ಇದ್ದರೂ, ವಿಭಿನ್ನವಾಗಿ ಕೂಗುತ್ತವೆ. ಅವುಗಳ ವಿಶಿಷ್ಟವಾದ ಧ್ವನಿಯಿಂದ ಮಾತ್ರ ಅವುಗಳ ಪ್ರಭೇದವನ್ನು ಗುರುತಿಸಲು
ಸಾಧ್ಯ.

ಈಗಿನ ಅಂತರ್ಜಾಲ ಮತ್ತು ಸ್ಮಾರ್ಟ್ ಫೋನ್ ಯುಗದಲ್ಲಿ, ಇಂತಹ ವಿಶಿಷ್ಟ ಹಕ್ಕಿಗಳ ಕೂಗನ್ನು ಯಾರು ಬೇಕಾದರೂ ಯೂಟ್ಯೂಬ್ ನಂತಹ ಮಾಧ್ಯಮಗಳಲ್ಲಿ ಹಂಚಿಕೊಳ್ಳಲು ಸಾಧ್ಯವಾಗಿರುವುದರಿಂದಾಗಿ, ಇಂತಹ ಪಕ್ಷಿಗಳನ್ನು ಹವ್ಯಾಸಿ ವೀಕ್ಷಕರು ಸುಲಭವಾಗಿ ಗುರುತಿಸಲು ಸಾಧ್ಯವಾಗಿದೆ. ಜತೆಗೆ ಅಂತಹ ಹಕ್ಕಿಗಳ ಅಧ್ಯಯನದ ಹೊಸ ಸಾಧ್ಯತೆಗಳನ್ನು, ದಾರಿಗಳನ್ನು ತೆರೆದಿದೆ. ಆಧುನಿಕ ಡಿಜಿಟಲ್ ಕ್ಯಾಮೆರಾ ಫೋಟೋಗ್ರಾಫಿಯಲ್ಲಿರುವ ಅಪಾರ ಸಾಧ್ಯತೆಗಳಿಂದಾಗಿ, ಅಪರೂಪ ಎನಿಸುವ ಚಿಕ್ಕ ಪುಟ್ಟ ಹಕ್ಕಿಗಳನ್ನು ಸಹ ಸ್ಪಷ್ಟವಾಗಿ ಚಿತ್ರೀಕರಣ ಮಾಡಲು ಸಾಧ್ಯವಾಗಿರುವುದು, ಅವುಗಳನ್ನು ಹಂಚಿಕೊಳ್ಳಲು ಸಾಧ್ಯವಾಗಿರುವುದು, ಇವೆಲ್ಲವೂ ಪಕ್ಷಿ ವೀಕ್ಷಣೆಯ ಹವ್ಯಾಸಕ್ಕೆ ಇಂಬು ಕೊಟ್ಟಿವೆ. ಅಮೆಚ್ಯೂರ್ ಹವ್ಯಾಸಿಗಳಿಗೆ ಪಕ್ಷಿವೀಕ್ಷಣೆಯು ಇನ್ನಷ್ಟು ಸರಳವಾಗಿದೆ, ಕುತೂಹಲ ಮೂಡಿಸುತ್ತಿದೆ.

ನಮ್ಮ ದೇಶದ ಎಲ್ಲಾ ಹಕ್ಕಿಗಳ ಛಾಯಾಚಿತ್ರಗಳನ್ನು ಒಂದೇ ಪುಸ್ತಕದಲ್ಲಿ ಅಡಕಗೊಳಿಸಲಾಗಿದೆಯೇ? ಎಂಬ ಪ್ರಶ್ನೆಗೆ ಬಹುಮಟ್ಟಿಗೆ ‘ಹೌದು’ ಎಂಬ ಉತ್ತರವನ್ನು ನೀಡಲು ಈ ವರ್ಷ ಸಾಧ್ಯವಾಗಿದೆ. ಈಗ ಪ್ರಕಟಗೊಂಡಿರುವ ‘ಬರ್ಡ್ಸ್ ಆಫ್ ಇಂಡಿಯಾ’ ಪುಸ್ತಕದಲ್ಲಿ ನಮ್ಮ ದೇಶದ 1332 ಪ್ರಭೇದದ ಹಕ್ಕಿಗಳ ಬಣ್ಣದ ಛಾಯಾಚಿತ್ರಗಳು ಇರುವುದು ವಿಶೇಷ. ಇದೊಂದು ಆಕರ್ಷಕ ಫೀಲ್ಡ್ ಗೈಡ್. ಸರಕಾರಿ ಒಡೆತನದ ಜೂವಲಾಜಿಕಲ್ ಸರ್ವೆ ಆಫ್ ಇಂಡಿಯಾ ಪ್ರಕಟಿಸಿರುವ ಸುಮಾರು ೬೦೦ ಪುಟಗಳ ಪುಸ್ತಕವು, ಸರಳವಾಗಿ ಹೇಳಬೇಕೆಂದರೆ ‘ಒಂದು ಅದ್ಭುತ’! ಎಲ್ಲಾ ಪುಟಗಳು ಆರ್ಟ್ ಪೇಪರ್, ಎಲ್ಲಾ ಚಿತ್ರಗಳು ಗುಣಮಟ್ಟದ ವರ್ಣ ಛಾಯಾಚಿತ್ರಗಳು, ಅದ್ಭುತ ಪುಟ ವಿನ್ಯಾಸ, ಹಕ್ಕಿಗಳ ವಿವರವೂ ತೃಪ್ತಿಕರ.

ನಮ್ಮ ದೇಶದಲ್ಲಿ ಕಾಣಸಿಗುವ ಎಲ್ಲಾ ಹಕ್ಕಿಗಳ ವರ್ಣ ಚಿತ್ರಗಳನ್ನು ಮತ್ತು ಪುಟ್ಟ ವಿವರಣೆಯನ್ನು ಒಳಗೊಂಡ ಈ ಪುಸ್ತಕವು
ಹವ್ಯಾಸಿ, ಹವ್ಯಾಸಿ ಪಕ್ಷಿವೀಕ್ಷಕರಿಗೆ ಅತ್ಯುತ್ತಮ ಆಧಾರ ಗ್ರಂಥ ಎನಿಸಬಲ್ಲದು. ಹೊಸದಾಗಿ ಪಕ್ಷಿ ವೀಕ್ಷಣೆ ಆರಂಭಿಸುವವರಿಗೆ ಮತ್ತು ಅಮೆಚೂರ್ (ಹವ್ಯಾಸಿ) ಪಕ್ಷಿ ವೀಕ್ಷಕರಿಗೆ ಎಂದೇ ಇದು ರೂಪುಗೊಂಡಿದೆ ಎಂದು ಆರಂಭದ ಈ ಪುಸ್ತಕದ ಟಾರ್ಗೆಟ್ ಗ್ರೂಪನ್ನು ಸೂಚಿಸಿರುವುದು ಉತ್ತಮ.

ಕೊಲ್ಕತ್ತಾದಲ್ಲಿರುವ ಜುವಾಲಾಜಿಕಲ್ ಸರ್ವೆ ಆಫ್ ಇಂಡಿಯಾ ಪ್ರಕಟಿಸಿರುವ ಇದನ್ನು ಬರೆದವರು, ಅಮಿತಾವ್ ಮುಜಂದಾರ್
ಮತ್ತು ಇತರ ಆರು ಜನ ತಜ್ಞರು. ಈ ಆರು ಲೇಖಕರು ಈ ಪುಸ್ತಕವನ್ನು ರೂಪಿಸಲು ಪಟ್ಟಿರುವ ಶ್ರಮ ಪುಟ ಪುಟಗಳಲ್ಲೂ ಕಾಣಿಸುತ್ತಿದೆ. ನಮ್ಮ ದೇಶದಲ್ಲಿ ಪ್ರಧಾನವಾಗಿ ವಾಸಿಸುವ 1227 ಪ್ರಭೇದ ಹಕ್ಕಿಗಳು ಮತ್ತು ಆಗಾಗ ಆಕಸ್ಮಿಕವಾಗಿ ಕಾಣಿಸಿಕೊಳ್ಳುವ 104 ಹಕ್ಕಿಗಳ ವರ್ಣ ಚಿತ್ರಗಳನ್ನು ಇಲ್ಲಿ ನೋಡುವುದೇ ಒಂದು ಅದ್ಭುತ ಅನುಭವ. ಈಗಾಗಲೇ ನಶಿಸಿ
ಹೋಗಿರಬಹುದು ಎನ್ನಲಾದ ಪಿಂಕ್ ಹೆಡೆಡ್ ಡಕ್, ಹಿಮಾಲಯನ್ ಕ್ವೆಲ್ ಮೊದಲಾದ ಕೆಲವು ಹಕ್ಕಿಗಳ ಚಿತ್ರವನ್ನು ಹೊರತು ಪಡಿಸಿದರೆ (ಇವು ಡ್ರಾಯಿಂಗ್) ಬೇರೆ ಚಿತ್ರಗಳು ಉತ್ತಮ ಗುಣಮಟ್ಟದ ಛಾಯಾಚಿತ್ರಗಳು.

ಮತ್ತೊಂದು ವಿಶೇಷವೆಂದರೆ ಇಲ್ಲಿನ ಸಾವಿರಕ್ಕೂ ಹೆಚ್ಚಿನ ಹಕ್ಕಿಗಳ ಚಿತ್ರಗಳು ಎಡದಿಂದ ಬಲಕ್ಕೆ ನೋಡುವ ಭಂಗಿಯಲ್ಲಿವೆ. ಇದರಿಂದಾಗಿ ಒಂದು ಹಕ್ಕಿಯನ್ನು ಇನ್ನೊಂದಕ್ಕೆ ಹೋಲಿಸುತ್ತಾ ಅವುಗಳನ್ನು ಅಧ್ಯಯನ ಮಾಡುವ ಹವ್ಯಾಸಿಗಳಿಗೆ ಬಹಳ ಅನುಕೂಲ. ಒಂದು ಪುಟದಲ್ಲಿ ಎರಡು ಅಥವಾ ಮೂರು ಹಕ್ಕಿಗಳ ಚಿತ್ರಗಳು, ಅಗತ್ಯ ಎನಿಸಿದಾಗ ಹಾರುವ ಸನ್ನಿವೇಶದ ಚಿತ್ರ,
ಗಂಡು ಹೆಣ್ಣುಗಳ ವ್ಯತ್ಯಾಸ, ಮರಿ ಹಕ್ಕಿಯ ವರ್ಣವಿನ್ಯಾಸಗಳು ಮೊದಲಾದ ವಿವರಗಳು ಗಮನ ಸೆಳೆಯುತ್ತವೆ. ಪ್ರತಿ ಹಕ್ಕಿಗೆ ನೀಡಿರುವ ಕಿರಿದಾದ ವಿವರಣೆ ಅಗತ್ಯಕ್ಕೆ ತಕ್ಕಷ್ಟು ಇದೆ ಎನ್ನಬಹುದು.

ಹಕ್ಕಿಗಳು ಕೂಗುವ ವಿವರ ಮಾತ್ರ ಇಲ್ಲಿಲ್ಲ. ಪ್ರತಿ ಹಕ್ಕಿಯು ನಮ್ಮ ದೇಶದ ಯಾವ ಭಾಗದಲ್ಲಿದೆ ಎಂದು ತೋರಿಸುವ ಪುಟಾಣಿ
ಮ್ಯಾಪ್ ಸಹ ವಿಶಿಷ್ಟ. ಪ್ರತಿ ಹಕ್ಕಿಯ ಚಿತ್ರದ ಜತೆ ಅದು ಅಪಾಯದ ಅಂಚಿನಲ್ಲಿದೆಯೇ, ಕಡಿಮೆ ಅಪಾಯದಲ್ಲಿದೆಯೇ ಎಂಬ ಮಾಹಿತಿ ಮತ್ತು ಯಾವ ಹಕ್ಕಿಯು ಪ್ರಾದೇಶಿಕ ವ್ಯಾಪ್ತಿ ಮಾತ್ರ ಹೊಂದಿದೆ ಎಂಬ ವಿವರ ಇರುವುದು ಗಮನ ಸೆಳೆಯುತ್ತದೆ. ನಮ್ಮ ದೇಶದ ಪ್ರಖ್ಯಾತ ಛಾಯಾಚಿತ್ರಗ್ರಾಹಕರು ತೆಗೆದಿರುವ ಇಲ್ಲಿನ ವರ್ಣಚಿತ್ರಗಳ ಬೆಡಗು, ಗುಣಮಟ್ಟ, ಸೌಂದರ್ಯ ವರ್ಣನಾತೀತ. ಪುಟ ವಿನ್ಯಾಸಕಾರರು ಪ್ರತಿ ಹಕ್ಕಿಯ ಚಿತ್ರವನ್ನು ಸೂಕ್ತವಾಗಿ ಆಕರ್ಷಕವಾಗಿ ಮುದ್ರಿಸಲು ತೆಗೆದುಕೊಂಡ ಶ್ರಮದಿಂದಾಗಿ, ಈ ಪುಸ್ತಕದ ಪುಟಗಳನ್ನು ತಿರುವಿ ಹಾಕುತ್ತಾ ಕೂರುವುದು ಒಂದು ಅನನ್ಯ ಆಹ್ಲಾಡ್ಕZರ ಅನುಭವ.
ನಮ್ಮ ದೇಶದ ಎಲ್ಲಾ ಹಕ್ಕಿಗಳ ಸುಂದರ ವರ್ಣ ಚಿತ್ರ ಹೊಂದಿರುವ ಇರುವ ಈ ಪುಸ್ತಕದ ಬೆಲೆ ರು.664/- ಇಷ್ಟು ಕಡಿಮೆ ಬೆಲೆಗೆ ಈ ಪುಸ್ತಕ ದೊರಕುವಂತಾಗಲು ಜೂವಲಾಜಿಕಲ್ ಸರ್ವೆ ಆಫ್ ಇಂಡಿಯಾದ ಧನಸಹಾಯವೇ ಮುಖ್ಯ ಕಾರಣ.

ಪಕ್ಷಿಗಳನ್ನು ಮತ್ತು ಪರಿಸರವನ್ನು ಪ್ರೀತಿಸುವ ಎಲ್ಲರೂ ಓದಬಹುದಾದ ಬಹು ಸುಂದರ ಪುಸ್ತಕ ಇದು.

error: Content is protected !!