Friday, 26th July 2024

ಪುತ್ರನಿಗೆ ಟಿಕೆಟ್‌ ಖಾತ್ರಿಪಡಿಸಲು ಬಿಎಸ್‌ವೈ ತಂತ್ರ

ಅಶ್ವತ್ಥಕಟ್ಟೆ

ranjith.hoskere@gmail.com

ಕಳೆದ ಐದು ದಶಕದಿಂದ ದಣಿವರಿಯದೇ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ವಾರದ ಹಿಂದೆ ನೀಡಿದ್ದ ಹೇಳಿಕೆ ರಾಜಕೀಯ ವಲಯದಲ್ಲಿ ಭಾರಿ ಸದ್ದು ಮಾಡುವ ಜತೆಜತೆಗೆ ಬಿಜೆಪಿ ನಾಯಕರನ್ನು ಫಜೀತಿಗೆ ಸಿಲುಕುವಂತೆ ಮಾಡಿದ್ದು ಸುಳ್ಳಲ್ಲ.

ಹೌದು, ಕಳೆದ ವಾರ ಶಿಕಾರಿಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ‘ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಾನು ಶಿಕಾರಿಪುರದಿಂದ ನಾನು ಸ್ಪಽಸುವುದಿಲ್ಲ. ನನ್ನ ಪುತ್ರ ವಿಜಯೇಂದ್ರ ಸ್ಪರ್ಧಿಸಲಿದ್ದಾರೆ. ಅವರಿಗೆ ನನಗಿಂತ ಹೆಚ್ಚಿನ ಅಂತರದ ಗೆಲುವನ್ನು ತಂದುಕೊಡಬೇಕು’ ಎಂದು ಕಾರ್ಯಕರ್ತರಲ್ಲಿ ಮನವಿ ಮಾಡುವ ಜತೆಜತೆಯಲ್ಲಿಯೇ, ಸ್ಪಷ್ಟ ಸಂದೇಶ ವನ್ನು ಬಿಜೆಪಿ ನಾಯಕರಿಗೆ ರವಾನಿಸಿದ್ದಾರೆ.

ಯಡಿಯೂರಪ್ಪ ಅವರು ಈ ರೀತಿಯ ಹೇಳಿಕೆಗೆ ಹಲವು ರೀತಿಯ ವ್ಯಾಖ್ಯಾನ ಗಳು ಕೇಳಿಬರುತ್ತಿದೆ. ಇದರೊಂದಿಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಈ ಹೇಳಿಕೆಯನ್ನಿಟ್ಟುಕೊಂಡು ಬಿಜೆಪಿ ವರಿಷ್ಠರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದರೆ, ಇನ್ನೊಂದೆಡೆ ಬಿಜೆಪಿ ನಾಯಕರು ಯಡಿಯೂರಪ್ಪ ಅವರು ರಾಜಕೀಯದಿಂದ ಹಿಂದೆ ಸರಿಯುವುದಿಲ್ಲ ಎನ್ನುವ ಸಂದೇಶವನ್ನು ರವಾ ನಿಸಲು ಹೋರಾಡುತ್ತಿದ್ದಾರೆ. ಈ ರೀತಿ ಹೇಳುವ ಮೂಲಕ, ಯಡಿಯೂರಪ್ಪ ಅವರ ರಾಜಕೀಯ ನಿವೃತ್ತಿಯಿಂದ ಪಕ್ಷಕ್ಕಾಗುವ ಡ್ಯಾಮೇಜ್ ಅನ್ನು ತಗ್ಗಿಸುವ ಪ್ರಯತ್ನವನ್ನು ಬಿಜೆಪಿ ನಾಯಕರು ಮಾಡುತ್ತಿದ್ದಾರೆ.

ಆದರೆ ಇಲ್ಲಿ ಯಡಿಯೂರಪ್ಪ ಅವರು ಈ ರೀತಿ ಬಹಿರಂಗವಾಗಿಯೇ ಈ ಹೇಳಿಕೆ ನೀಡಿದ್ದೇಕೆ ಎನ್ನುವ ಪ್ರಶ್ನೆಗಳು ಬರುತ್ತಿವೆ. ಪ್ರಮುಖವಾಗಿ ತಮ್ಮ ನಂತರ ತಮ್ಮ ಪುತ್ರ ವಿಜಯೇಂದ್ರ ಅವರಿಗೇ ಟಿಕೆಟ್ ನೀಡಬೇಕು ಎನ್ನುವ ಸ್ಪಷ್ಟ ಸಂದೇಶವನ್ನು ಪಕ್ಷದ ವರಿಷ್ಠರಿಗೆ ನೀಡುವುದಾದರೆ, ರಾಜಕೀಯ ನಿವೃತ್ತಿಯ ಮಾತು ಪಕ್ಷದ ಆಂತರಿಕ ವಲಯದಲ್ಲಿ, ಕಾರ್ಯಕರ್ತರ ನಡುವೆ ಹಾಗೂ ಮತದಾರರಲ್ಲಿ ಆಗಬಹುದಾದ ಬದಲಾವಣೆಯನ್ನು ಗಮನಿಸುವುದಕ್ಕಾಗಿಯೂ ಈ ಹೇಳಿಕೆ ನೀಡಿರಬಹುದು. ಏಕೆಂದರೆ, ರಾಜ್ಯದಲ್ಲಿ ಬಿಜೆಪಿಯನ್ನು ಸಂಘಟಿಸಿ, ಬೆಳೆಸಿದ್ದು ಯಡಿಯೂರಪ್ಪನವರಾದರೂ ಕಳೆದ ನಾಲ್ಕು ವರ್ಷಗಳಿಂದ ರಾಜ್ಯ ಯಾವುದೇ ಪ್ರಮುಖ ನಿರ್ಣಯವನ್ನು ತೆಗೆದುಕೊಳ್ಳುವುದಕ್ಕೂ ಯಡಿಯೂರಪ್ಪ ಅವರಿಗೆ ‘ಫ್ರೀ ಹ್ಯಾಂಡ್’ ನೀಡುತ್ತಿಲ್ಲ ಎನ್ನುವ ಬೇಸರ ಯಡಿಯೂರಪ್ಪ ಹಾಗೂ ಅವರ ಬೆಂಬಲಿಗರಲ್ಲಿ ಇದ್ದೇ ಇದೆ.

ಕಳೆದ ಬಾರಿಯ ವಿಧಾನಸಭಾ ಚುನಾವಣಾ ಸಮಯದಲ್ಲಿ ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ಬರಲೇಬೇಕು ಎನ್ನುವ
ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಇಬ್ಬರೂ ‘ಯಡಿಯೂರಪ್ಪ ನೇತೃತ್ವದಲ್ಲಿಯೇ ಚುನಾವಣೆ’
ಎನ್ನುವ ಘೋಷಣೆ ಮಾಡಿದ್ದರು. ರಾಜ್ಯದಲ್ಲಿ ಅತಂತ್ರ ಫಲಿತಾಂಶ ಬಂದು, ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಅದನ್ನು ಉರುಳಿಸಲು ಬಿಜೆಪಿ ನಡೆಸಿದ ‘ಆಪರೇಷನ್ ಕಮಲ’ದ ಜವಾಬ್ದಾರಿಯನ್ನು ಯಡಿಯೂರಪ್ಪ ಅವರೇ ಹೊತ್ತಿದ್ದರು.

ಆದರೆ ಅಧಿಕಾರಕ್ಕೆ ಬಿಜೆಪಿ ಬರುತ್ತಿದ್ದಂತೆ, ಯಡಿಯೂರಪ್ಪ ಅವರನ್ನು ಏಕಾಂಗಿ ಮಾಡುವ ಪ್ರಯತ್ನವನ್ನು ಪಕ್ಷದ ವರಿಷ್ಠರು ಮಾಡಿದ್ದಾರೆ ಎನ್ನುವ ಅಸಮಾಧಾನವಿದೆ. ಇದರ ನಡುವೆ ಉಪಚುನಾವಣೆಯಲ್ಲಿ ಗೆಲ್ಲುವ ಜವಾಬ್ದಾರಿಯನ್ನು ಯಡಿಯೂರಪ್ಪ ಅವರ ಹೆಗಲಿಗೆ ಹಾಕಿದರೂ, ಸಂಪುಟ ವಿಸ್ತರಣೆಯನ್ನು ಮಾತ್ರ ಯಡಿಯೂರಪ್ಪನವರ ಮೂಗಿನ ನೇರಕ್ಕೆ ಮಾಡಲು ಹೈಕಮಾಂಡ್ ಒಪ್ಪಲಿಲ್ಲ.

ಇನ್ನು ಯಡಿಯೂರಪ್ಪ ಅವರು ಎರಡು ವರ್ಷ ಮುಖ್ಯಮಂತ್ರಿಯಾಗಿದ್ದ ವೇಳೆಗೂ ಪೂರ್ಣ ಪ್ರಮಾಣದಲ್ಲಿ ಸ್ವಾತಂತ್ರ್ಯವನ್ನು ನೀಡದೇ, ನಿಗಮ ಮಂಡಳಿ ನೇಮಕ, ಸಂಪುಟ ವಿಸ್ತರಣೆ ಸೇರಿದಂತೆ ಪ್ರತಿ ವಿಷಯದಲ್ಲಿಯೂ ಸತಾಯಿಸಿದ್ದೇ ಹೆಚ್ಚು. ಎರಡು ಪೂರೈಸುತ್ತಿದ್ದಂತೆ ಯಡಿಯೂರಪ್ಪ ಅವರಿಂದ ‘ರಾಜೀನಾಮೆ ಪಡೆದಿದ್ದು’ ಬಿಎಸ್‌ವೈ ಅಸಮಾಧಾನಕ್ಕೆ ಕಾರಣ. (ಯಡಿಯೂ ರಪ್ಪ ಅವರು ಸೂಚಿಸಿದ್ದ ಬಸವರಾಜ ಬೊಮ್ಮಾಯಿ ಅವರನ್ನೇ ಸಿಎಂ ಮಾಡಿದ್ದು ಬೇರೆ ಮಾತು).

ಇದರೊಂದಿಗೆ ಯಡಿಯೂರಪ್ಪ ಅವರು ಕಳೆದ ಚುನಾವಣೆಯಿಂದಲೂ ತಮ್ಮ ಕಿರಿಯ ಪುತ್ರ ವಿಜಯೇಂದ್ರ ಅವರನ್ನು ಚುನಾವಣಾ ರಾಜಕೀಯಕ್ಕೆ ತರಬೇಕು ಎನ್ನುವ ಭಾರಿ ಪ್ರಯತ್ನವನ್ನು ಮಾಡುತ್ತಿದ್ದಾರೆ. ಅದಕ್ಕಾಗಿ ಮೂರು ಬಾರಿ, ಅವಕಾಶ ಒದಗಿ ಬಂದರೂ, ಪಕ್ಷದ ವರಿಷ್ಠರ ‘ರೆಡ್ ಸಿಗ್ನಲ್’ನಿಂದ ಅದು ಈಡೇರಿರಲಿಲ್ಲ. ಮೊದಲ ಬಾರಿಗೆ 2018ರಲ್ಲಿ ನಡೆದ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ವರುಣದಿಂದ ಸಿದ್ದರಾಮಯ್ಯ ಪುತ್ರ ಯತೀಂದ್ರ ವಿರುದ್ಧ ವಿಜಯೇಂದ್ರ ನಿಲ್ಲುವುದು ಎನ್ನುವುದು ಬಹುತೇಕ ನಿಶ್ಚಿತವಾಗಿ, ಅಲ್ಲಿ ತಯಾರಿಯನ್ನು ಆರಂಭಿಸಿದ್ದರು.

ಆದರೆ ಅಂತಿಮವಾಗಿ ಅವರಿಗೆ ಟಿಕೆಟ್ ಕೊಡಲಿಲ್ಲ. ಅದಾದ ಬಳಿಕ ಹಾನಗಲ್ ಉಪಚುನಾವಣೆಯಲ್ಲಿ ವಿಜಯೇಂದ್ರ ಅವರಿಗೆ
ಟಿಕೆಟ್ ಎಂದೇ ಹೇಳಲಾಗಿತ್ತು. ಅದಕ್ಕೂ ಪಕ್ಷದ ವರಿಷ್ಠರು ಒಪ್ಪಿಗೆ ನೀಡಲಿಲ್ಲ. ಇದಾದ ಬಳಿಕ ವಿಧಾನಪರಿಷತ್‌ಗೆ ವಿಜಯೇಂದ್ರ ಅವರನ್ನು ಆಯ್ಕೆ ಮಾಡಲು ರಾಜ್ಯ ಕೋರ್ ಕಮಿಟಿ ಶಿಫಾರಸು ಮಾಡಿದ್ದರೂ, ಅದನ್ನು ಒಪ್ಪದೇ ಬೇರೆಯವರಿಗೆ ನೀಡಿರುವುದು ಯಡಿಯೂರಪ್ಪ ಅವರಿಗೆ ಬೇಸರ ತರಿಸಿತ್ತು. ಇದೇ ಕಾರಣಕ್ಕೆ ಶಿಕಾರಿಪುರದಲ್ಲಿ ‘ನನ್ನ ಕ್ಷೇತ್ರದಿಂದ ನನ್ನ ಬದಲಿಗೆ ನನ್ನ ಮಗ ಸ್ಪರ್ಧಿಸುತ್ತಾನೆ’ ಎಂದಿದ್ದಾರೆ.

ಇದೀಗ ಯಡಿಯೂರಪ್ಪ ಮಾತು ಮೀರಿ ಬೇರೆಯವರಿಗೆ ಟಿಕೆಟ್ ನೀಡಿದರೆ ಯಡಿಯೂರಪ್ಪ ಅವರ ಆಪ್ತರು ಹಾಗೂ ಅಭಿಮಾನಿಗಳು ತಿರುಗಿ ಬೀಳುತ್ತಾರೆ. ಇದರೊಂದಿಗೆ ಯಡಿಯೂರಪ್ಪ ಅವರು ಚುನಾವಣಾ ಪ್ರಚಾರದಲ್ಲಿ ಭಾಗಿಯಾಗದೇ ತಟಸ್ಥ ನೀತಿ ಅನುಸರಿಸಲು ಅವಕಾಶ ಸಿಗುತ್ತಿದೆ. ಬಿಎಸ್‌ವೈ ಪ್ರಚಾರಕ್ಕೆ ಬಾರದಿದ್ದರೆ ಲಿಂಗಾಯತಗಳ ವಿಭಜನೆ ಯಾಗುವುದು ಬಹುತೇಕ ನಿಶ್ಚಿತ. ಆದ್ದರಿಂದ ಇದೀಗ ಯಡಿಯೂರಪ್ಪ ಅವರು, ತಮ್ಮ ಪುತ್ರನಿಗೆ ಟಿಕೆಟ್ ಕೊಡಿಸಲು ಭರ್ಜರಿ ಯೋಜನೆಯೊಂದಿಗೆ ಆ ಹೇಳಿಕೆ ನೀಡಿದ್ದಾರೆ ಎನ್ನಲಾಗುತ್ತಿದೆ.

ರಾಜ್ಯ ಹಾಗೂ ಕೇಂದ್ರ ಬಿಜೆಪಿಯ ಧೋರಣೆಯನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ, ಯಾವ ನಾಯಕರಿರಲಿ ಅಥವಾ ಹೋಗಲಿ ‘ಪ್ರಧಾನಿ ನರೇಂದ್ರ ಮೋದಿ’ ಹೆಸರಲ್ಲಿ ಚುನಾವಣೆ ನಡೆಸುತ್ತೇವೆ ಎನ್ನುವ ಮನಸ್ಥಿತಿಯಲ್ಲಿದ್ದಾರೆ. ಹಲವು ರಾಜ್ಯ ಗಳಲ್ಲಿ ಈ ತಂತ್ರಗಾರಿಕೆ ಯಶಸ್ವಿಯೂ ಆಗಿದೆ. ಆದರೆ ಕರ್ನಾಟಕದ ಮಟ್ಟಿಗೆ ಈ ತಂತ್ರ ಫಲಿಸುವುದಿಲ್ಲ ಎನ್ನುವ ಮಾತನ್ನು ಸ್ವತಃ ಬಿಜೆಪಿ ನಾಯಕರೇ ಒಪ್ಪಿಕೊಳ್ಳುತ್ತಾರೆ. ಮೋದಿ ಹೆಸರಲ್ಲಿ ಕರ್ನಾಟಕದಲ್ಲಿ ಲೋಕಸಭಾ ಚುನಾವಣೆ ನಡೆಸುವುದು ಸುಲಭವೇ ಹೊರತು, ವಿಧಾನಸಭಾ ಚುನಾವಣೆಯಲ್ಲ. ಈ ಬಾರಿಯ ಬಿಜೆಪಿಯ ಅಧಿಕಾರವನ್ನು ನೋಡಿರುವ ಜನರು, ರಾಜ್ಯ ನಾಯಕತ್ವದ ಮೇಲೆಯೇ ಮತ ಹಾಕುವುದು ಸ್ಪಷ್ಟ.

ಅದರಲ್ಲಿಯೂ ಉತ್ತರ ಕರ್ನಾಟಕ ಹಾಗೂ ಮಧ್ಯ ಕರ್ನಾಟಕದಲ್ಲಿರುವ ಸುಮಾರು ೮೦ಕ್ಕೂ ಹೆಚ್ಚು ಸೀಟುಗಳಲ್ಲಿ ಲಿಂಗಾ ಯತರ ಪ್ರಭಾಗ ದೊಡ್ಡ ಪ್ರಮಾಣದಲ್ಲಿದ್ದು, ಆ ಭಾಗದಲ್ಲಿ ಯಡಿಯೂರಪ್ಪ ಅವರೇ ‘ಟ್ರಂಪ್ ಕಾರ್ಡ್’. ಲಿಂಗಾಯತ ಪ್ರಭಾವ ವಿರುವ ಕ್ಷೇತ್ರಗಳಲ್ಲಿ ಯಡಿಯೂರಪ್ಪ ಅವರು ಹೋಗದಿದ್ದರೆ, ಪಕ್ಷಕ್ಕೆ ಭಾರಿ ಡ್ಯಾಮೇಜ್ ಆಗುವುದು ಕಟ್ಟಿಟ್ಟ ಬುತ್ತಿ. ಈಗಾಗಲೇ 2013ರ ಚುನಾವಣೆಯಲ್ಲಿ ಯಡಿಯೂರಪ್ಪ ಇಲ್ಲದ ಬಿಜೆಪಿ ಚುನಾವಣೆ ಎದುರಿಸಿ ಭಾರಿ ಹಿನ್ನಡೆ ಅನುಭವಿಸಿತ್ತು. ಯಡಿಯೂರಪ್ಪ ಕಟ್ಟಿದ್ದ ಕೆಜೆಪಿ ಅಭ್ಯರ್ಥಿಗಳು ಗೆಲ್ಲದಿದ್ದರೂ, ಬಿಜೆಪಿ ಅಭ್ಯರ್ಥಿಗಳು ಸೋಲುವಂತೆ ನೋಡಿಕೊಂಡಿದ್ದು ಸಹ ಯಡಿಯೂರಪ್ಪ ಅವರು ಆ ಕ್ಷೇತ್ರಗಳ ಮತದಾರರ ಮೇಲೆ ಹೊಂದಿರುವ ‘ಹೋಲ್ಡ್’ ಅನ್ನು ತೋರಿಸುತ್ತದೆ.

ತೀರಾ ಇತ್ತೀಚಿಗೆ ನಡೆದ ಅಂದರೆ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿದ ಬಳಿಕ ನಡೆದ ಹಾನಗಲ್ ಚುನಾವಣೆಯಲ್ಲಿ, ಯಡಿಯೂರಪ್ಪ ಅವರನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳದೇ ಇದಿದ್ದರಿಂದ ಬಿಜೆಪಿಯ ಭದ್ರಕೋಟೆ ಯಾಗಿದ್ದ ಹಾನಗಲ್ ಅನ್ನು ಕಳೆದುಕೊಳ್ಳಬೇಕಾಗಿ ಬಂತು. ಬಿಜೆಪಿಗೆ ಯಡಿಯೂರಪ್ಪ ಟ್ರಂಪ್ ಕಾರ್ಡ್ ಎನ್ನುವುದನ್ನು ಪ್ರತಿಯೊಬ್ಬ ನಾಯಕರು ಒಪ್ಪಿಕೊಳ್ಳಬೇಕು. ಇಂದಿನ ರಾಜ್ಯ ರಾಜಕೀಯದ ಮಟ್ಟಿಗೆ ಬಿಜೆಪಿಯ ಯಡಿಯೂರಪ್ಪ, ಕಾಂಗ್ರೆಸ್‌ನ ಸಿದ್ದರಾಮಯ್ಯ ಹಾಗೂ ಜೆಡಿಎಸ್‌ನಲ್ಲಿ ದೇವೇಗೌಡರು ‘ಮಾಸ್ ಲೀಡರ್’ಗಳಾಗಿದ್ದು, ಅವರನ್ನು ಮುಂದಿಟ್ಟುಕೊಂಡೇ ಚುನಾವಣೆ ಎದುರಿಸಬೇಕು ಎನ್ನುವುದು ಸ್ಪಷ್ಟ.

ಈ ಬಗ್ಗೆ ಬಿಜೆಪಿ ನಾಯಕರಿಗೆ ಸ್ಪಷ್ಟತೆಯಿದ್ದರೂ, ಯಡಿಯೂರಪ್ಪ ಅವರನ್ನು ಮೂಲೆಗುಂಪು ಮಾಡುವ ಪ್ರಯತ್ನಕ್ಕೆ ಕೈ ಹಾಕಿರುವುದಕ್ಕೆ ಪ್ರತಿಯಾಗಿ ಚುನಾವಣಾ ರಾಜಕೀಯದಿಂದ ಹಿಂದೆ ಸರಿಯುವ ಮಾತನ್ನು ಯಡಿಯೂರಪ್ಪ ಹೇಳಿರುವುದು ಸ್ಪಷ್ಟ. ಏನೇ ಆದರೂ, ಯಡಿಯೂರಪ್ಪ ಅವರನ್ನು ಮುಂದಿಟ್ಟುಕೊಂಡೇ ಬಿಜೆಪಿ ಚುನಾವಣಾ ಪ್ರಚಾರ ಆರಂಭಿಸಬೇಕು. ಇದೀಗ ಯಡಿಯೂರಪ್ಪ ಬದಲಿಗೆ ಶಿಕಾರಿಪುರಕ್ಕೆ ವಿಜಯೇಂದ್ರ ಎಂದು ಬಹಿರಂಗವಾಗಿಯೇ ಹೇಳಿಕೆ ನೀಡುವ ಮೂಲಕ ಕೇಂದ್ರದ ವರಿಷ್ಠರಿಗೆ ‘ಆಯ್ಕೆ ಬಿಟ್ಟಿದ್ದಾರೆ’. ಕೇಂದ್ರದ ವರಿಷ್ಠರು ಯಾವ ರೀತಿಯ ತೀರ್ಮಾನ ಕೈಗೊಳ್ಳುತ್ತಾರೆ ಎನ್ನುವುದರ ಮೇಲೆ ಚುನಾವಣಾ ತಂತ್ರಗಾರಿಕೆ ನಿಂತಿದೆ ಎಂದರೆ ತಪ್ಪಾಗುವುದಿಲ್ಲ.

error: Content is protected !!