Wednesday, 29th May 2024

ಕರ್ನಾಟಕದಲ್ಲಿ ಉತ್ತರ ಪ್ರದೇಶ ಮಾಡೆಲ್ ಕಷ್ಟ

bommai- Yogi

ಅಶ್ವತ್ಥಕಟ್ಟೆ

ರಂಜಿತ್ ಎಚ್.ಅಶ್ವತ್ಥ

ranjith.hoskere@gmail.com

ಪಂಚರಾಜ್ಯ ಚುನಾವಣಾ ಫಲಿತಾಂಶವಾಗುತ್ತಿದ್ದಂತೆ ಕೆಲ ದಿನಗಳ ಕಾಲ ರಾಜ್ಯ ಬಿಜೆಪಿ ನಾಯಕರಲ್ಲಿಯೂ ಹೊಸದೊಂದು ಹುರುಪು ಕಾಣಿಸಿತ್ತು. ಉತ್ತರ ಪ್ರದೇಶದ ರೀತಿಯಲ್ಲಿಯೂ ಕರ್ನಾಟಕದಲ್ಲಿಯೂ ‘ಮೋದಿ ವೇವ್’, ಹಿಂದುತ್ವದ ಆಧಾರದಲ್ಲಿ ಮತ ಸೆಳೆದು ಕರ್ನಾಟಕದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ತರುವ ಲೆಕ್ಕಾಚಾರದಲ್ಲಿ ಬಿಜೆಪಿ ರಾಜ್ಯ ನಾಯಕರಿದ್ದರು. ಆದರೆ ಕರ್ನಾಟಕದ ಮಟ್ಟಿಗೆ ಹಿಂದುತ್ವಾಧಾರಿತ ಚುನಾವಣೆ ನಡೆಯುವುದೇ ಎನ್ನುವುದನ್ನು ಸೂಕ್ಷ್ಮವಾಗಿ ಗಮನಿಸಿ ದರೆ, ಅದು ಕಷ್ಟ ಎನ್ನುವ ಮಾತುಗಳನ್ನು ಕೇಳಿ ಬರುತ್ತದೆ.

ದೇಶದಲ್ಲಿ ನಡೆಯುವ ಲೋಕಸಭಾ ಚುನಾವಣೆಗೂ, ರಾಜ್ಯಗಳ ವಿಧಾನಸಭಾ ಚುನಾ ವಣಾ ತಂತ್ರಗಾರಿಕೆಗೂ ಬಹಳ ವ್ಯತ್ಯಾಸವಿದೆ. ಅದರಲ್ಲಿಯೂ ಉತ್ತರ ಭಾರತದ ರಾಜಕೀಯಕ್ಕೂ, ದಕ್ಷಿಣ ಭಾರತದ ರಾಜಕೀಯಕ್ಕೂ ವ್ಯತ್ಯಸವಾಗಿದೆ. ಆದ್ದರಿಂದಲೇ, ಈ ಹಂತದ ಲ್ಲಿಯೂ ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಉತ್ತರ ಭಾರತದಲ್ಲಿರುವಷ್ಟು ‘ಗಟ್ಟಿ ನೆಲೆ’ಯಿಲ್ಲ. ಕರ್ನಾಟಕದಲ್ಲಿ ಪ್ರಬಲ ರಾಜಕೀಯ ಪಕ್ಷವಾಗಿ ಬೆಳೆದಿದ್ದರೂ, ಅದಕ್ಕೆ ಕಾರಣ ಇಲ್ಲಿನ ಸ್ಥಳೀಯ ನಾಯಕತ್ವವೇ ಹೊರತು, ಬೇರೆ ಯಾವುದೇ ವಿಷಯಗಳಿಲ್ಲ ಎನ್ನುವುದು ಬಿಜೆಪಿ ನಾಯಕ ರಿಗೂ ಗೊತ್ತಿದೆ.

ಕರ್ನಾಟಕದಲ್ಲಿ ಬಿಜೆಪಿ ಬೇರೂರಲು ಕಾರಣರಾಗಿದ್ದ ಯಡಿಯೂರಪ್ಪ ಅವರಿಂದ ಪಕ್ಷಕ್ಕೆ ಈ ವಿಷಯದಲ್ಲಿ ಲಾಭ-ನಷ್ಟ ಎರಡೂ ಆಗಿದ್ದಿದೆ. ಏಕೆಂದರೆ, ಯಡಿಯೂರಪ್ಪ ಅವರು ಪಟ್ಟು ಹಿಡಿದು ಪ್ರವಾಸಕ್ಕೆ ಹೊರಟರೆ ಉತ್ತರ ಕರ್ನಾಟಕದ 60ರಿಂದ 80 ಸೀಟುಗಳಲ್ಲಿ ಚುನಾವಣಾ ಫಲಿತಾಂಶವನ್ನು ಏರುಪೇರು ಮಾಡುವ ಸಾಮರ್ಥ್ಯ ಅವರಲ್ಲಿದೆ. ಇದು 2013ರ ಚುನಾವಣೆಯಲ್ಲಿ ಅವರು ಬಿಜೆಪಿಯಿಂದ ಹೊರಹೋಗಿ ಕೆ.ಜೆ.ಪಿಯಿಂದ ಚುನಾವಣೆಗೆ ಸ್ಪರ್ಧಿಸಿದಾಗ ಸ್ಪಷ್ಟವಾಗಿದೆ. (ಕೆ.ಜೆ.ಪಿ ಯಿಂದ ಆಯ್ಕೆಯಾದವರು ಒಂದಂಕಿ ದಾಟದೇ ಇರಬಹುದು. ಆದರೆ ಮತ ವಿಭಜನೆಯಿಂದ ಬಿಜೆಪಿ ಶಾಸಕರಿಗೆ ಸೋಲುಣಿ ಸಿದ್ದು ಸುಮಾರು 30ರಿಂದ 35 ಕ್ಷೇತ್ರಗಳಲ್ಲಿ ಎನ್ನುವುದನ್ನು
ಮರೆಯುವಂತಿಲ್ಲ). ಆದರೆ ಇದೇ ರೀತಿ ಉತ್ತರ ಭಾರತದಲ್ಲಿ, ಉತ್ತರಾಖಾಂಡ್‌ನಲ್ಲಿ ಆಗುತ್ತದೆ ಎನ್ನಲು ಸಾಧ್ಯವಿಲ್ಲ.

ದೇಶದ ಬಹುದೊಡ್ಡ ರಾಜ್ಯ ಎನಿಸಿರುವ ಉತ್ತರ ಪ್ರದೇಶದಲ್ಲಿ ಕಳೆದ ಎರಡು ಬಾರಿಯ ಚುನಾವಣೆಯ ವೇವ್ ಅನ್ನು ನೋಡಿದರೆ, ಅಲ್ಲಿ ನಡೆಯುತ್ತಿರುವುದು ಜಾತಿಗಳಿಂದ ಧರ್ಮದ ಸಮೀಕರಣ. 2018ರ ಚುನಾವಣೆಯಂತೂ, ಹಿಂದು ಮತಗಳ ಸಮೀಕರಣದಿಂದ, ಬಿಜೆಪಿ ಇನ್ನುಳಿದ ಎಲ್ಲ ಪಕ್ಷಗಳನ್ನು ವೈಟ್ ವಾಶ್ ಮಾಡಿತ್ತು. ಹಿಂದು ಮತಗಳು ಗಟ್ಟಿಯಾಗಿ ಒಂದಾಗಿದ್ದರಿಂದ, ಮುಸ್ಲಿಂ ಬಾಹುಳ್ಯವಿರುವ
ಕ್ಷೇತ್ರಗಳಲ್ಲಿಯೂ ಬಿಜೆಪಿ ಗೆಲ್ಲುವುದಕ್ಕೆ ಕಾರಣವಾಗಿತ್ತು.

ಈ ಹಿಂದಿನ ಚುನಾವಣೆಗಳಲ್ಲಿ ಈ ರೀತಿಯಾಗಿರಲಿಲ್ಲ. 2018ಕ್ಕೆ ಮೊದಲು ಉತ್ತರ ಪ್ರದೇಶದ ಚುನಾವಣೆಗಳು ನಡೆಯುತ್ತಿದಿದ್ದನ್ನು ‘ದಲಿತ’, ‘ಅಲ್ಪ ಸಂಖ್ಯಾತ’ ಎನ್ನುವ ಟ್ರೇಡ್ ಮಾರ್ಕ್ ಮೇಲೆ. ಅದೇ ಕಾರಣಕ್ಕೆ ಬಿಎಸ್‌ಪಿಯ ಮಾಯಾವತಿ ಅವರು, ಉಳಿದೆಲ್ಲ ಪಕ್ಷಗ ಳನ್ನು ಪಕ್ಕಕ್ಕಿಟ್ಟು ಅಧಿಕಾರದ ಗದ್ದುಗೆ ಏರಿದ್ದು. ಆದರೆ ಕಳೆದ 10 ವರ್ಷದಲ್ಲಿ ಈ ಟ್ರೇಂಡ್ ಭಾರಿ ಪ್ರಮಾಣದಲ್ಲಿ ಕಡಿಮೆಯಾಯಿತು. ಈ ಬಾರಿಯ ಚುನಾವಣೆಯಲ್ಲಿ ಅಂತೂ, ಹಿಂದುತ್ವ ಹಾಗೂ ಕಳೆದ ಐದು ವರ್ಷದಲ್ಲಿ ಯೋಗಿ ನೇತೃತ್ವದಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಮತ ಸಿಕ್ಕಿವೆ ಎನ್ನುವ ವಿಶ್ಲೇಷಣೆಗಳು ಬರುತ್ತಿವೆ.

ಜಾಟ್, ದಲಿತ ಮತಗಳು ಡಿವೈಡ್ ಆದರೂ, ಹಿಂದು ಮತ ಬ್ಯಾಂಕ್‌ನಿಂದ ಗಟ್ಟಿಯಾಗಿಸಿಕೊಂಡಿದ್ದರಿಂದ ಅದು ಪ್ರತಿಪಕ್ಷಗಳಿಗೆ ಸಹಾಯ ವಾಗಲಿಲ್ಲ. ಆದರೆ ಕರ್ನಾಟಕದ ಮತದಾರರ ಮನಸ್ಥಿತಿ ಹೀಗಿಲ್ಲ. ಕರ್ನಾಟಕದಲ್ಲಿ ಧರ್ಮಾಧಾರಿತ ರಾಜಕೀಯಕ್ಕಿಂತ ಹೆಚ್ಚಾಗಿ ತಿಯ ಆಧಾರದ ಮೇಲೆ ಚುನಾವಣೆ ನಡೆಯುತ್ತವೆ. ಕರಾವಳಿ ಭಾಗ, ಕೊಡಗು ಮಲೆನಾಡಿನ ಕೆಲ ಭಾಗದಲ್ಲಿ ಹಿಂದುತ್ವದ ಆಧಾರದಲ್ಲಿ ಚುನಾ ವಣೆ ನಡೆಸಬಹುದೇ ಹೊರತು, ಮಧ್ಯಕರ್ನಾಟಕ, ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕದಲ್ಲಿ ಈ ರೀತಿಯ ಚುನಾವಣಾ ತಂತ್ರಗಾರಿಕೆ ಯಶಸ್ಸು ಸಿಗುವುದು ಕಷ್ಟ.

ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರವಿದ್ದಾಗ, ಹಿಂದು ಕಾರ್ಯಕರ್ತರ ಸಾಲು ಸಾಲು ಹತ್ಯೆಗಳಾಯಿತು. ಆ ಸಮಯದಲ್ಲಿ ಬಿಜೆಪಿ ನಾಯಕರು ಹಿಂದುತ್ವದ ಕಾರ್ಡ್ ಬಳಸಲು ಪ್ರಯತ್ನಿಸಿದರು. ಆದರೆ ಚುನಾವಣಾ ಸಮಯದಲ್ಲಿ, ಅದು ಕೈ ಹಿಡಿಯಲಿಲ್ಲ. ಬದಲಿಗೆ ಕೈ ಹಿಡಿದದ್ದು ಪ್ರತ್ಯೇಕ ಲಿಂಗಾಯತ ಧರ್ಮದ ಅಸ್ತ್ರ. ಆದರೆ ಕರ್ನಾಟಕದ ಚುನಾವಣೆಗಳು ಜಾತಿ ಆಧಾರದಲ್ಲಿಯೇ ನಡೆಯುವುದು
ಎನ್ನುವ ಸ್ಪಷ್ಟ ಪರಿಕಲ್ಪನೆ ಬಿಜೆಪಿ ನಾಯಕರಿಗಿದೆ. ಆದರೆ ಇತ್ತೀಚಿಗೆ ನಡೆಯುತ್ತಿರುವ ಕೆಲವು ವಿವಾದಗಳು, ಹಿಂದುತ್ವದ ಆಧಾರದಲ್ಲಿ ಮತಗಳನ್ನು ಹಿಡಿದಿಟ್ಟುಕೊಳ್ಳಬೇಕು ಎನ್ನುವ ಬಿಜೆಪಿ ವರಿಷ್ಠರ ಆಸೆಗೆ ಪುಷ್ಠಿ ನೀಡಿದರೂ, ಅದು ಚುನಾವಣೆಯಲ್ಲಿ ಗೆಲ್ಲುವ ತನಕ ತಗೆದುಕೊಂಡು ಹೋಗುತ್ತದೆ ಎನ್ನುವ ನಂಬಿಕೆಯಿಲ್ಲ.

ಹಿಜಾಬ್ ವಿವಾದ, ದೇವಾಲಯದ ವ್ಯಾಪ್ತಿಯಲ್ಲಿ ಮುಸ್ಲಿಮರಿಗೆ ನಿರ್ಬಂಧ, ಹಿಂದು ದೇವಾಲಯಗಳ ಆಸ್ತಿ ರಕ್ಷಣೆ ಸೇರಿದಂತೆ ಹಲವು ಸಂಗತಿಗಳು ಹಿಂದುತ್ವದ ಟ್ರಂಪ್ ಕಾರ್ಡ್ ಬಳಸುವಂತೆ ಬಿಜೆಪಿ ನಾಯಕರಿಗೆ ಪ್ರೇರೇಪಿಸುತ್ತಿದೆ. ಅದಕ್ಕೆ ಪೂರಕವಾಗಿಯೂ, ಯುವಕರು ಹಿಂದುತ್ವ ಎನ್ನುವ ಮಾತನ್ನು ಹೇಳುತ್ತಿದ್ದಾರೆ. ಆದರೆ ವಿಶ್ಲೇಷಕರ ಪ್ರಕಾರ, ಜಾತಿಗಳ ಜತೆಗೆ ಧರ್ಮದ ಟ್ರಂಪ್‌ಕಾರ್ಡ್ ಬಳಸಿದರೆ ಲಾಭವಿದೆ. ಅದರ ಬದಲು ಕೇವಲ ಧರ್ಮದ ಆಧಾರದಲ್ಲಿ ಬಿಜೆಪಿ ಚುನಾವಣಾ ತಂತ್ರಗಾರಿಕೆ ಮಾಡಿದರೆ, ಪಕ್ಷಕ್ಕೆ ಹೆಚ್ಚು ಲಾಭವಿಲ್ಲ
ಎನ್ನುವುದಾಗಿದೆ.

ಇದು ಸಂಪೂರ್ಣ ನಿಜವಾಗಬೇಕು ಎಂದಾದರೆ, ಧರ್ಮದ ವಿಷಯಗಳು ಬಂದಾಗ ಕಾಂಗ್ರೆಸ್ ನಾಯಕರು ಮೌನವಾಗಿರಲೇಬೇಕು. ಒಂದು ವೇಳೆ ಒಂದು ಧರ್ಮದ ಪರವಾಗಿ ಕಾಂಗ್ರೆಸ್ ನಿಂತರೆ ಇನ್ನೊಂದು ಧರ್ಮದ ಮತಗಳು ಕೈತಪ್ಪುವ ಸಾಧ್ಯತೆಯಿದೆ. ಇದನ್ನು ಅರಿತ ಕಾಂಗ್ರೆಸ್ ನಾಯಕರು ಇದೀಗ ಜಾಣನಡೆಗೆ ಮುಂದಾಗಿದ್ದಾರೆ. ಹಿಜಾಬ್ ವಿವಾದ, ಹರ್ಷಾ ಕೊಲೆ ಹಾಗೂ ಮುಸ್ಲಿಂ ವ್ಯಾಪಾರಿಗಳ
ನಿರ್ಬಂಧ ವಿಷಯದಲ್ಲಿ ಕೆಪಿಸಿಸಿ ಅಧ್ಯಕ್ಷರು ಹೆಚ್ಚು ಪ್ರತಿಕ್ರಿಯಿಸಲಿಲ್ಲ.

ಕರ್ನಾಟಕ ಮತದಾರರ ಮನಸ್ಥಿತಿಯಲ್ಲಿ ಈಗಲೂ ಜಾತಿಯ ಬೇರು ಹೆಚ್ಚು ತಲೆಯೂರಿದೆ. ‘ನಮ್ಮ ಜಾತಿಯವ’ ಎನ್ನುವ ಕಾರಣಕ್ಕೆ ಮತ ಹಾಕಿ ಬರುವ ಮನಸ್ಥಿತಿಯಿಂದ ಈಗಲೂ ಹೊರಬಂದಿಲ್ಲ. ಆದ್ದರಿಂದಲೇ, ಮೂರು ಪಕ್ಷಗಳು ಇದನ್ನು ಬಳಸಿಕೊಳ್ಳಲು ಮುಂದಾಗಿದೆ. ರಾಜ್ಯದಲ್ಲಿ ಲಿಂಗಾಯತ, ಒಕ್ಕಲಿಗ, ದಲಿತ ಹಾಗೂ ಕುರುಬ ಮತಗಳೇ ನಿರ್ಣಾಯಕ ಪಾತ್ರ ವಹಿಸುತ್ತವೆ. ಒಕ್ಕಲಿಗರು ದೇವೇಗೌಡರನ್ನು ಬಿಟ್ಟು ಬರುವುದಿಲ್ಲ ಎನ್ನುವ ಖಾತ್ರಿ ಎಲ್ಲ ಪಕ್ಷಗಳಿಗೂ ಇದೆ. ಇನ್ನು ರಾಮಕೃಷ್ಣ ಹೆಗಡೆ ಬಳಿಕ ಲಿಂಗಾಯತ ಸಮುದಾಯದ ಪ್ರಬಲ ನಾಯಕರಾಗಿ ಯಡಿಯೂರಪ್ಪ ಗುರುತಿಸಿಕೊಂಡರು.

ಅವರ ಜತೆಯಲ್ಲಿಯೇ ಈ ಸಮುದಾಯ ಹೋಗಿದ್ದರಿಂದ, ಬಿಜೆಪಿ ಕರ್ನಾಟಕದಲ್ಲಿ ತಳವೂರಿದ್ದು. ಆದರೀಗ ಯಡಿಯೂರಪ್ಪ ಅವರು ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿಯಲ್ಲ. ಆದ್ದರಿಂದಲೇ ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ಮುಂದಿನ ಲಿಂಗಾಯತ ನಾಯಕನ್ಯಾರು ಎನ್ನುವ ಹುಡುಕಾಟದಲ್ಲಿ ತೊಡಗಿದ್ದಾರೆ. ಬಸವರಾಜ ಬೊಮ್ಮಾಯಿ ಅವರನ್ನು ಈ ಸ್ಥಾನಕ್ಕೆ ಕೂರಿಸಲು ಬಿಜೆಪಿ ಪ್ರಯತ್ನಿಸಿತ್ತು. ಆದರೆ ಅದು ಕ್ಲಿಕ್ ಆಗಿಲ್ಲ.

ಕಾಂಗ್ರೆಸ್ ಎಂ.ಬಿ. ಪಾಟೀಲ್ ಅವರನ್ನು ಲಿಂಗಾಯತ ನಾಯಕನೆಂದು ತೋರಿಸಲು ಹೊರಟಿದೆ. ಎಷ್ಟರ ಮಟ್ಟಿಗೆ ಯಶ ಸಿಗಲಿದೆ ಎನ್ನುವ ಖಾತ್ರಿಯಿಲ್ಲ. ಇನ್ನು ಕುರುಬ ನಾಯಕನಾಗಿ ಸಿದ್ದರಾಮಯ್ಯ ಅವರಿದ್ದಾರೆ. ಆದರೆ ದಲಿತ ನಾಯಕನ ಸ್ಥಾನವೂ ಖಾಲಿಯಿದೆ. ಅದನ್ನು ಯಾವ ಪಕ್ಷದ ನಾಯಕ ತುಂಬುತ್ತಾನೆ ಎನ್ನುವುದರ ಮೇಲೆ ಚುನಾವಣೆ ನಿಂತಿದೆ. ದಕ್ಷಿಣ ಭಾರತದಲ್ಲಿ ಬಿಜೆಪಿ ತನ್ನ ನೆಲೆ ಕಂಡುಕೊಳ್ಳಲು
ಸಾಧ್ಯವಾಗಿರುವ ಏಕೈಕ ರಾಜ್ಯವಾಗಿರುವ ಕರ್ನಾಟಕದಲ್ಲಿ ಉತ್ತರ ಭಾರತದಲ್ಲಿ ಬಿಜೆಪಿ ನಡೆಸಿದ ಚುನಾವಣಾ ತಂತ್ರಗಾರಿಕೆ ವರ್ಕ್ ಔಟ್ ಆಗುವುದಿಲ್ಲ ಎನ್ನುವ ಸ್ಪಷ್ಟ ಚಿತ್ರಣ ಬಿಜೆಪಿಗಿದೆ.

ಕಾಂಗ್ರೆಸ್‌ಗೆ ಸಹ ಇದರ ಬಗ್ಗೆ ಸ್ಪಷ್ಟ ಮಾಹಿತಿಯಿದ್ದರೂ, ಅನಗತ್ಯವಾಗಿ ಧರ್ಮಾಧಾರಿತ ಮತಗಳ ಕ್ರೋಢೀಕರಣಕ್ಕೆ ಬಿಜೆಪಿ ಒಡ್ಡುವ ಸವಾಲುಗಳಿಗೆ ಪ್ರತಿ ಸವಾಲು ಹಾಕುವ ಸಾಹಸಕ್ಕೆ ಕೈಹಾಕಿ, ಅಪಾಯ ಮೈಮೇಲೆ ಎಳೆದುಕೊಳ್ಳುತ್ತಿದೆ. ಇದನ್ನು ಮಾಡದೇ, ಕೇವಲ ಸರಕಾರದ ವೈಫಲ್ಯ, ಜಾತಿ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ಚುನಾವಣಾ ತಂತ್ರಗಾರಿಕೆ ಹೆಚ್ಚು ಲಾಭ ಎನ್ನುವುದರಲ್ಲಿ ಎರಡನೇ ಮಾತಿಲ್ಲ. ಬಿಜೆಪಿಯ ಪ್ರಚೋದನೆಗೆ ಒಳಗಾಗದೇ, ಚುನಾವಣೆಯ ತನಕ ಇದನ್ನು ಯಾವ ರೀತಿ ತಗೆದುಕೊಂಡು ಹೋಗುತ್ತಾರೆ ಎನ್ನುವುದೇ
ಕಾಂಗ್ರೆಸ್ ಮುಂದಿರುವ ಬಹುದೊಡ್ಡ ಸವಾಲಾಗಿದೆ.

error: Content is protected !!