Sunday, 21st April 2024

ಖಚಿತ ಮರಣ ಭಾರದೂರಿನ ಪ್ರಯಾಣ

ಸಂಪದ

ಕೆ.ಎಂ.ಶಿವಪ್ರಸಾದ್

ಮಧ್ಯರಾತ್ರಿ ೧೨ ಗಂಟೆ. ಸ್ನೇಹಿತನೊಂದಿಗೆ ಪಾರ್ಟಿ ಮುಗಿಸಿ ಮನೆಗೆ ಮರಳುವ ಮಾರ್ಗ ಮಧ್ಯೆ ಒಂದು ವಾಣಿಜ್ಯ ಸಂಕೀರ್ಣದೆಡೆಗೆ ದೃಷ್ಟಿ ವಾಲಿತು. ಆವರೆವಿಗೂ ನೋಡಿರದ ವಿಚಿತ್ರ ಯಂತ್ರ ವದು. ಸ್ಥಳದಲ್ಲಿ ಬೇರೆ ಯಾರು ಇಲ್ಲದ ಕಾರಣ ಆ ಕಡೆ ಹೋಗುವ ಧೈರ್ಯವೂ ಸಾಲುತ್ತಿಲ್ಲ. ಬೆಳಿಗ್ಗೆ ನೋಡೋಣ ಎಂದು ಅನಿಸಿದರು ಕುತೂಹಲ ತಡೆಯಲಾಗದೇ ಹತ್ತಿರ ಹೋದೆ.

ಎಟಿಎಂ ಹೋಲುವ ಯಂತ್ರ. ಅದರ ಮೇಲೆ Death Prediction Machine ಎಂದು ಬರೆದಿತ್ತು. ವಾಕ್ಯ ನೋಡಿಯೇ ಎದೆ ಧಸಕ್ ಎಂದಿತು. 5Rs. Only ಎಂದೂ ನಮೂದಿಸಿದ್ದರಿಂದ ಯಂತ್ರದ ಮೇಲೆ ಕಾಲಿಟ್ಟು ೫ ರೂ ನಾಣ್ಯ ಹಾಕಿದೆ. ಅಂಗೈ ಅಗಲದ ಹಾಳೆ ಮುದ್ರಣಗೊಂಡು ಹೊರ ಬಂತು. ಓದಿದರೆ ‘ಕಾಡು ಪ್ರಾಣಿಯಿಂದ ಸಾವು’ ಎಂದು ಬರೆದಿತ್ತು. ಭಯದ ಜತೆ ನಗು ಬಂದರೂ ಸಾವಿನ ರೂಪ ಮತ್ತೆ ಮತ್ತೆ ತಲೆಯೊಳಗೆ ನಾಟ್ಯ ನಡೆಸಲಾರಂಭಿಸಿತು.

ಭಯದ ಮನೆಗೆ ಹೋಗಿ ಮಲಗಿದೆ. ಬೆಳಿಗ್ಗೆ ಎದ್ದು ಜಮೀನಿಗೆ ಹೋಗಲು ಅನುವಾಗುತ್ತಿದ್ದಂತೆ ಯಂತ್ರ ನುಡಿದ ಸಾವಿನ ಮಾತು ಮತ್ತೆ ತಲೆಹೊಕ್ಕಿ ಭಯ ಆವರಿಸಿತು. ಯಾವ ಪ್ರಾಣಿಯಿಂದ ಸಾವು? ಯಾವ ಪ್ರಾಣಿ ಎಷ್ಟು ಶಕ್ತಿ ಶಾಲಿ? ದಾಳಿ ಮಾಡಿದರೆ ಹೇಗೆ ರಕ್ಷಿಸಿಕೊಳ್ಳಬಹುದು. ನಾನೇನಾದರೂ ಸತ್ತು ಹೋದರೆ ನನ್ನ ಕುಟುಂಬ, ನನ್ನ ಕನಸುಗಳು… ಎಂಬೆ ವಿಚಾರದಿಂದ ತಲೆ ತಿಪ್ಪೆಯಂತಾಯಿತು.

ಯಂತ್ರವೊಂದು ನನ್ನ ಸಾವು ನಿರ್ಧರಿಸಲು ಸಾಧ್ಯವೇ? ಅದೆ ಸುಳ್ಳು ಎಂದು ಎಷ್ಟೇ ಸಮಾಧಾನ ಮಾಡಿಕೊಳ್ಳಲೆತ್ನಿಸಿದರು ಮತ್ತೆ ಸಾವಿನ ಭಯ. ಕಾಡಿನ ಪ್ರಾಣಿಗಳ ಚಿತ್ರ ಕಣ್ಣ ಮುಂದೆ ಹಾದು ಹೋದವು. ಗಾಬರಿಯಿಂದ ತಲೆ ನೋವು ಹೆಚ್ಚಾಯಿತು. ಹೋಗುತ್ತಿರುವ ದಾರಿ, ಕ್ರಮಿಸು ತ್ತಿರುವ ದೂರ ಎಲ್ಲವೂ ಭಾರ. ಧೈರ್ಯ ಮಾಡಿ ಕಬ್ಬಿನ ಗದ್ದೆ ಬಳಿ ತೆರಳುತ್ತಿದ್ದಂತೆ ವಿಚಿತ್ರ ಶಬ್ಧ. ಎಂದೂ ಕೇಳಿರದ ಧ್ವನಿ. ಯಾವುದೋ ಪ್ರಾಣಿ ಇರಬೇಕೆಂದು ಕಬ್ಬಿನ ಗzಯೊಳಗೆ ಕಾಲಿಟ್ಟರೆ ಎದೆ ಧಸಕ್ ಎನಿಸುವಂತಹ ಘಟನೆ ಜರುಗಿತು.

ವಿಚಿತ್ರ ಪ್ರಾಣಿ ಗದ್ದೆಯೊಳಗಿನಿಂದ ವೇಗವಾಗಿ ನನ್ನತ್ತ ನುಗ್ಗಿ ಬಂದಂತೆ. ಎದೆ ಬಡಿತ ಆ ಪ್ರಾಣಿಯ ಓಟಕ್ಕಿಂತಲೂ ಬಿರುಸಾಯಿತು. ಇನ್ನೇನು ಆ ಪ್ರಾಣಿ ಹತ್ತಿರ ಬಂತು ಎನ್ನುವಷ್ಟರಲ್ಲಿ ಅ ನೀರು ಹಾಯಿಸಲು ಇಟ್ಟಿದ್ದ ಗುದ್ದಲಿ ಕೈಗೆತ್ತಿಕೊಂಡು ಆ ಪ್ರಾಣಿಯ ತಲೆಗೆ ಬಾರಿಸಿಬಿಟ್ಟೆ. ಆ ಕ್ಷಣಕ್ಕೆ ಭಯ ದೂರವಾಗಿತ್ತು, ಮನಸ್ಸು ಹಗುರವಾಯಿತು. ಆದರೆ ಬಾರಿಸಿದ ಕೂಡಲೇ ಕೇಳಿಸಿದ ಒಂದು ರೀತಿಯ ಸದ್ದು ಬೇರೆಯದ್ದೇ ಅನುಭವ ನೀಡಿತು. ಕುತೂಹಲದಿಂದ ಮುಚ್ಚಿದ್ದ ಕಣ್ಣು ತೆರೆದು ನೋಡಿದರೆ ಹಾಸಿಗೆಯಲ್ಲಿ ಮಲಗಿರುವುದು ಅರಿವಾಯಿತು. ಎದ್ದು ಲೈಟ್ ಸ್ವಿಚ್ ಆನ್ ಮಾಡಿದರೆ ನನ್ನ
ಮೊಬೈಲ್ ಚೂರು ಚೂರಾಗಿತ್ತು!

ಡೆತ್ ಮೆಷಿನ, ಕಾಡು ಪ್ರಾಣಿ ಎಲ್ಲವೂ ಕನಸಾಗಿತ್ತು. ಕೆಟ್ಟ ಕನಸು ಆ ರಾತ್ರಿ ಹಿಂಡಿ ಹಿಪ್ಪೆ ಮಾಡಿತ್ತು. ಇಂತಹ ವಿಚಿತ್ರ ಕನಸು ಸುಮ್ಮನೆ ಎದುರಾಗಲು ಸಾಧ್ಯವೇ? ಮಲಗುವ ಮುನ್ನ ಫೇಸ್ ಬುಕ್, ವಾಟ್ಸಪ್, ಯೂಟ್ಯೂಬ್‌ನಲ್ಲಿ ಸಿನಿಮಾ ವಿಡಿಯೋ ನೋಡಿ ಮಲಗುವ ಗೀಳು. ಆ ರಾತ್ರಿ ನೋಡಿದ
ವಿಡಿಯೋ ಕನಸಿನಲ್ಲಿ ಕಾಡಿತ್ತು. ಸಿನಿಮಾ ಹೆಸರು ತಿಳಿಯವ ಕುತೂಹಲ ಆ ಕ್ಷಣಕ್ಕೆ ಇರದ ಕಾರಣ ಫೇಸ್ ಬುಕ್‌ನಲ್ಲಿ ಅಪ್‌ಲೋಡ್ ಆಗಿದ್ದ ಡೆತ
ಮೆಷಿನ್ ಗೆ ಸಂಬಂಧಿಸಿದ ೮ ನಿಮಿಷಗಳ ವಿಡಿಯೊ ತುಣಕು ನೋಡಿ ಅದೇ ಗುಂಗಿನಲ್ಲಿ ನಿದ್ರೆಗೆ ಜಾರಿದೆ. ಅದು ನನ್ನ ಕನಸಿನಲ್ಲಿ ನನ್ನನ್ನೇ ಪಾತ್ರ ದಾರಿಯನ್ನಾಗಿಸಿತ್ತು. ಪರಿಣಾಮ ನನ್ನ ದುಬಾರಿ ಮೊಬೈಲ್ ಗೋಡೆಗೆ ಬಡಿದು ಛಿದ್ರವಾಗಿತ್ತು.

ಸಾವಿನಿಂದ ಪಾರಾಗಲು ಸಾಧ್ಯವಿಲ್ಲ ಎಂಬುದು ಗೊತ್ತಿದ್ದರೂ ಬೆನ್ನು ತೋರಿಸಿ ಓಡುವುದನ್ನೇ ಕಾಯಕವಾಗಿಸಿ ಕೊಂಡಿರುತ್ತೇವೆ. ನಮ್ಮ ದೇಶ ದಲ್ಲಂತೂ ೧೦೦ ವರ್ಷ ಪೂರ್ಣಾಯುಷ್ಯ ತುಂಬಿ ಮರಣ ಹೊಂದಿದರೂ ನಮ್ಮವರಿಗದು ಇಷ್ಟವಾಗದು. ಪಾಪ ಇನ್ನೊಂದೆರೆಡು ವರ್ಷ ಬದುಕಿದ್ದರೆ ಚೆನ್ನಾಗಿತ್ತು ಎಂದೇ ಸಂತಾಪ ಸೂಚಿಸುತ್ತೇವೆ. ಸಾಯುವ ಕಡೆ ಗಳಿಗೆಯ ಅಥವಾ ಒಂದಷ್ಟು ಕೊನೆಯ ದಿನಗಳ ಮಾಡಿದ ಕೆಲಸ-ಕಾರ್ಯಗಳು ಆ ವ್ಯಕ್ತಿಗೆ ಸಾವಿನ ಮುನ್ಸೂಚನೆ ಸಿಕ್ಕಿತ್ತಾ ಅಥವಾ ಸಾವು ಹತ್ತಿರ ಬರುತ್ತಿದ್ದಂತೆ ದೈವ ಶಕ್ತಿಯೇ ಆ ವ್ಯಕ್ತಿಗಳಿಂದ ಅವುಗಳೆಲ್ಲವನ್ನು ಮಾಡಿಸಿತ್ತಾ ಎಂಬುದರ ಬಗ್ಗೆಯೂ ಬೆಟ್ಟದಷ್ಟು ಚರ್ಚೆಗಳು ನಡೆಯುತ್ತವೆ.

ಏಕೆಂದರೆ ಅದ್ಯಾವುದೂ ಮನುಷ್ಯ ಪ್ರಾಣಿಯ ಊಹೆಗೆ ನಿಲುಕದೇ ಇರುವ ವಿಚಾರ. ಅಂತಹದರಲ್ಲಿ ಸಾಯುವ ಮುನ್ಸೂಚನೆಯೇ ಇರದವರಿಗೆ ಸಾವು
ಯಾವ ರೀತಿ ಬರುತ್ತದೆ ಎಂಬ ವಿಚಾರ ಮುಂಚಿತವಾಗಿ ತಿಳಿದುಬಿಟ್ಟರೆ ಆ ವ್ಯಕ್ತಿಯ ನಡೆ-ನುಡಿ, ಆಲೋಚನೆಗಳು, ಮನಸ್ಸಿನ ದುಗುಡ, ಭಯ ಎಲ್ಲ ಹೇಗಿರಬಹುದು? ನೆನಪಿಸಿಕೊಂಡರೆ ಮೈ ಝುಮ್ಮೆನಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಮಗು ಯಾವ ದಿನ, ಎಷ್ಟು ಗಂಟೆಗೆ ಹುಟ್ಟಿದರೆ ಆ ಮಗುವಿನ ಭವಿಷ್ಯ ಪ್ರಕಾಶಮಾನವಾಗಿರುತ್ತದೆ ಎಂಬ ಭವಿಷ್ಯವಾಣಿಯಂತೆಯೇ ಜನನ ಸಮಯವನ್ನು ಅಪ್ಪ-ಅಮ್ಮ ನಿರ್ಧರಿಸುತ್ತಿದ್ದಾರೆ.

ಹೊಟ್ಟೆಯಲ್ಲಿರುವ ಮಗು ಗಂಡೋ-ಹೆಣ್ಣೋ? ಆರೋಗ್ಯವಾಗಿದೆಯೇ? ಅಂಗಾಂಗಗಳು ಸಹಜವಾಗಿವೆಯೇ? ಎಂಬುದನ್ನೆಲ್ಲಾ ತಿಳಿಯುವ ಚಮತ್ಕಾರ ವನ್ನು ವೈದ್ಯಲೋಕ ಸಾಧಿಸಿ ತೋರಿಸಿದೆ. ಹಾಗಾಗಿ ಹುಟ್ಟು ಮೊದಲಿನಷ್ಟು ನಿಗೂಢವಾಗಿಲ್ಲ, ಅದ್ಭುತವಾಗಿಯೂ ಕಂಡು ಬರುತ್ತಿಲ್ಲ. ಆದರೆ ಆ ನಿಗೂಢವನ್ನು ಕಾಯ್ದುಕೊಂಡಿರುವುದು ಸಾವು ಮಾತ್ರ. ಈ ಕ್ಷಣದ ನಂತರ ಜೀವಂತವಾಗಿರಲ್ಲ ಎಂಬ ಊಹೆಯೇ ಆಘಾತಕಾರಿ. ಅಂತಹದರಲ್ಲಿ ಸಾವೇ ಕಣ್ಮುಂದೆ ನಿಂತು ನಗುವಾಗ ಎದೆ ಢವಢವ ಅದೆಷ್ಟು ವೇಗವಾಗಬಲ್ಲದು ಊಹಿಸಿ. ಇಂತಹ ಕ್ಷಣ ಹೆಚ್ಚಾಗಿ ಎದುರಾಗುವುದು ಸೈನಿಕರಿಗೆ. ಆ ಸಾವಿಗೆ ಅಷ್ಟೇ ಗೌರವ.

ನೀತಿ: ರಾತ್ರಿ ನಿದ್ರೆಗೆ ಜಾರುವ ಮುನ್ನ ಫ್ಯಾಂಟಸಿ ದೃಶ್ಯಗಳನ್ನು ನೋಡುವ ಬದಲು, ಮನಸ್ಸಿಗೆ ಹಿತ ನೀಡುವ, ಮಧುರ ಕನಸಿ(ಸ್ವೀಟ್ ಡ್ರೀಮ್ಸ್)ಗೆ ಕಾರಣವಾಗುವ ಸಂಗೀತ ಕೇಳುವ, ಸಿನಿಮಾ ನೋಡುವ, ಪುಸ್ತಕ ಓದುವ ಅಭ್ಯಾಸ ಬೆಳಸಿಕೊಂಡರೆ ನೆಮ್ಮದಿಯ ನಿದ್ರೆ ಸಾಧ್ಯ.

error: Content is protected !!