Friday, 26th July 2024

ಆ ರಾತ್ರಿ ಕೆಟ್ಟದಾಗಿ ಕೂಗಿದ ಜಕಣಿ ಹಕ್ಕಿ

ಶಶಾಂಕಣ

shashidhara.halady@gmail.com

ಕಾಡು, ಗುಡ್ಡ, ಹುಲ್ಲುಗಾವಲುಗಳ ನಡುವೆ ಸಾಗುವ ದಾರಿಯಲ್ಲಿ ನಡೆದು ಹೋಗುವ ಅನುಭವವೇ ಅನನ್ಯ. ಅಲ್ಲೆಲ್ಲಾ ಬೆಳೆಯುವ ಕಾಡು ಹಣ್ಣುಗಳನ್ನು ತಿನ್ನುವ ಅವಕಾಶವೂ ಸಿಗಬಹುದು. ಅಂತಹ ಕಾಡಿನಲ್ಲಿ ನಿಗೂಢ ಎನಿಸುವ ಜೀವಿಗಳೂ ಇರುತ್ತವೆ!

ನಮ್ಮ ಹಳ್ಳಿ ಮನೆಯ ಪೂರ್ವ ದಿಕ್ಕಿನಲ್ಲಿ ನಡೆಯತೊಡಗಿದರೆ, ಸುಮಾರು ಒಂದು ಕಿ.ಮೀ. ದೂರದ ತನಕ ಚೇರ್ಕಿ ಬೈಲು. ಬತ್ತದ ಗದ್ದೆಗಳ ನಡುವೆ ಸಾಗುವ ಆ ದಾರಿಯಲ್ಲಿ ನಡೆಯುತ್ತಾ ಹೋಗುವುದೇ ಒಂದು ವಿಶಿಷ್ಟ ಅನುಭವ. ವರ್ಷದಲ್ಲಿ ಎಂಟು ತಿಂಗಳುಗಳ ಕಾಲ ಅಲ್ಲಿ ಭತ್ತ ಬೆಳೆದಿರುತ್ತದೆ.

ಬತ್ತದ ಪಯಿರನ್ನು ಕಾಲಿಗೆ, ಮೈಗೆ ತಗುಲಿಸಿಕೊಳ್ಳುತ್ತಾ, ಬತ್ತದ ಪರಾಗ ವನ್ನು ಅಂಟಿಸಿಕೊಳ್ಳುತ್ತಾ ನಡೆಯುವಾಗ, ಆ ಬತ್ತದ ಗಿಡಗಳ ಸುಮಧುರ ವಾಸನೆಯನ್ನು ಗ್ರಹಿಸಲು ಸಾಧ್ಯ. ಆಗಿನ ದಿನಗಳಲ್ಲಿ ಐದರಿಂದ ಆರು ಅಡಿ ಎತ್ತರ ಬೆಳೆಯುವ ‘ಕರಿದಡಿ’ ಮೊದಲಾದ ಭತ್ತದ ತಳಿಗಳು, ನಾವು ನಡೆಯುವ ಗzಯಂಚಿನ ಮೇಲೆ ಬೀಳುತ್ತಿದ್ದು ಸಾಮಾನ್ಯ.

ಚೇರ್ಕಿ ಬಯಲಿನ ಆ ದಾರಿ ಉದ್ದಕ್ಕೂ ಮನೆಗಳು. ಮೊದಲಿಗೆ ಶೆಟ್ಟರ ಮನೆ, ನಂತರ ನಮಗೆ ಅಧ್ಯಾಪಕರಾಗಿದ್ದ ಸುಬ್ರಾಯ ಭಟ್ಟರ ಮನೆ, ಅದರ ಹಿಂಭಾಗದಲ್ಲಿ ಉಪ್ಪೂರರ ಮನೆ, ಅಲ್ಲಿಂದ ಆಚೆ ಕೊಮೆ, ಎಡ ಭಾಗದಲ್ಲಿ ಉಪಾಯ್ದರ ಬೆಟ್ಟು … ಈ ರೀತಿ ಆರೆಂಟು ಮನೆಗಳು ಬಯಲಿನ ಆಚೀಚೆ ದೂರ ದೂರದಲ್ಲಿ ಸಾಲಾಗಿ ಇದ್ದವು. ಅವುಗಳನ್ನು ನೋಡುತ್ತಾ ಒಂದು ಕಿ. ಮೀ. ನಡೆದರೆ, ಬಯಲು ಮುಗಿದು ಹರನಗುಡ್ಡೆ ಆರಂಭ. ಆ ಗುಡ್ಡೆಗೂ ಬಯಲಿಗೂ ನಡುವೆ ನೀರು ಹರಿಯುವ ಪುಟ್ಟ ತೋಡು. ಅದನ್ನು ದಾಟಲು ಹಳೆಯ ಮರದ ಸಂಕ.

ಆ ಸಂಕ ದಾಟಿದ ನಂತರ ದೊಡ್ಡ ದೊಡ್ಡ ಮರಗಳಿದ್ದ ಹಾಡಿ. ಏರು ದಾರಿ; ಆ ಏರನ್ನುಏರಲು, ದಟ್ಟ ಕಾಡಿನ ನಡುವೆ ಸುಮಾರು
120 ಮೆಟ್ಟಿಲುಗಳು. ಸುಮಾರು ನಾಲ್ಕು ನೂರು ವರ್ಷಗಳ ಹಿಂದೆ, ಮುರಕಲ್ಲಿನಿಂದ ನಿರ್ಮಿಸಲಾದ ಆ ಮೆಟ್ಟಿಲುಗಳ ಎರಡೂ ಕಡೆ ಎತ್ತರವಾದ ಮರಗಳು. ಆ ಮರಗಳ ನೆರಳಿನಿಂದಾಗಿ ಮೆಟ್ಟಿಲು ಏರಿ ಹೋಗಲು ಹೆಚ್ಚು ಸುಸ್ತಾಗುವುದಿಲ್ಲ. ಆದರೆ ಕೊನೆಯ ನಾಲ್ಕರು ಮೆಟ್ಟಿಲುಗಳನ್ನು ದೊಡ್ಡ ಗಾತ್ರದಲ್ಲಿ ಮಾಡಿಟ್ಟಿದ್ದರು, ಆದ್ದರಿಂದ ಅವನ್ನು ಏರುವ ಹೊತ್ತಿಗೆ ಕಾಲು ನೋವು ಬರಲೇ ಬೇಕು.

ಹರನ ಗುಡ್ಡೆಯ ಈ 120 ಮೆಟ್ಟಿಲುಗಳನ್ನು ಹತ್ತಿ, ಅಲ್ಲಿದ್ದ ದಟ್ಟ ಹಾಡಿಯಿಂದ ಸೊಪ್ಪು ಸೌದೆಯನ್ನು ನಮ್ಮ ಅಮ್ಮಮ್ಮ ತರುತ್ತಿದ್ದ ರಂತೆ. ಅಲ್ಲಿದ್ದ ಹಾಡಿಯಿಂದ ಸೊಪ್ಪು ಕಡಿದು ತರುವುದು ನಮ್ಮ ಹಳ್ಳಿಯ ಹೆಚ್ಚಿನ ಮನೆಗಳವರ ಪರಿಪಾಠ. ಗಂಟಿ ಕಟ್ಟುವ ಹಟ್ಟಿಗೆ ಹರಡಲು ಬೇಕಾದ ಸೊಪ್ಪನ್ನು ಅಲ್ಲಿಂದ ತರಲು ಯಾರ ಅನುಮತಿಯೂ ಬೇಕಿರಲಿಲ್ಲ. ಆ ಹಾಡಿಯಲ್ಲಿ, ಸಾಕಷ್ಟು ಮರಗಳಿದ್ದುದರಿಂದ, ಸೊಪ್ಪು , ಸುಡುಮಣ್ಣಿಗೆ ಬೇಕಾದ ಅಡರು ಎಲ್ಲವನ್ನೂ ತರುತ್ತಿದ್ದರು.

ಆದರೆ ಯಾರೂ ಅಲ್ಲಿ ಮರ ಕಡಿಯುವಂತಿರಲಿಲ್ಲ. ಹರನ ಗುಡ್ಡೆಯ ಆ ಹಾಡಿಯನ್ನು ದಾಟಿದರೆ, ವಿಶಾಲವಾದ ಮೈದಾನ ಸಿಗುತ್ತದೆ. ಮುರಕಲ್ಲಿನ ಹಾಸು ಇದ್ದ ಆ ಎತ್ತರ ಪ್ರದೇಶದಲ್ಲಿ ದೊಡ್ಡ ಮರಗಳು ಕಡಿಮೆ. ಅಲ್ಲಲ್ಲಿ ಕುರುಚಲುಗಿಡಗಳು;
ಮಿಕ್ಕಂತೆ, ಆ ಪ್ರದೇಶದದ ತುಂಬಾ ‘ಕರಡ’ ಬೆಳೆಯುತ್ತಿತ್ತು. ಮಳೆಗಾಲದಲ್ಲಿ ಅದೊಂದು ವಿಶಾಲ ಹುಲ್ಲುಗಾವಲು; ಉದ್ದಕ್ಕೂ ಹಸಿರಿನ ಹಚ್ಚಡ ಹೊದಿಸಿದಂತೆ ಬೆಳೆಯುವ ಹುಲ್ಲು. ಆ ಹುಲ್ಲನ್ನು ತಿನ್ನುವುದೆಂದರೆ ದನ, ಕರು, ಎತ್ತುಗಳಿಗೆ ಬಹಳ ಖುಷಿ. ಈ ರೀತಿ ಎರಡು ಮೂರು ತಿಂಗಳುಗಳ ಕಾಲ ಗಂಟಿ ತಿಂದು ಬಿಟ್ಟ ಹುಲ್ಲು, ಬೆಳೆದು, ದೀಪಾವಳಿಯ ಸಮಯಕ್ಕೆ ಕರಡ (ದೊಡ್ಡ ಹುಲ್ಲು) ಆಗುತ್ತದೆ.

ಆಗ ನೋಡಬೇಕು ಆ ಮೈದಾನದ ಅಂದ! ಸಣ್ಣಗೆ ಗಾಳಿ ಬೀಸಿದಾಗ, ಕರಡವು ನಿಧಾನವಾಗಿ ಓಲಾಡಿ, ಇಡೀ ಮೈದಾನವೇ ತೇಲಿದಂತೆ ಅನಿಸುತ್ತದೆ! ಈ ಕರಡ ಬಹೂಪಯೋಗಿ; ದನಕರುಗಳು ತಿನ್ನಲು ಒಳ್ಳೆಯ ಮೇವು. ಒಂದರಿಂದ ಎರಡು ಅಡಿ ಎತ್ತರ ಬೆಳೆದ ಕರಡವನ್ನು ಕಿತ್ತು ತಂದು ಒಣಗಿಸಿಟ್ಟುಕೊಂಡರೆ, ಮಳೆಗಾಲದಲ್ಲಿ ಗಂಟಿ ತಿನ್ನುವ ಅಕ್ಕಚ್ಚು ಬೇಯಿಸಬಹುದು.
ಉದ್ದನೆಯ ಕರಡವನ್ನು ಒಣಗಿಸಿ ‘ಮನೆ ಹೊದಿಸಲು’ ಬಳಸುತ್ತಿದ್ದುದುಂಟು.

ಹಂಚಿನ ಮನೆಗಳು ಜಾಸ್ತಿಯಾದ ನಂತರ, ಈ ರೀತಿ ವರ್ಷಕ್ಕೊಮ್ಮೆ ‘ಮನೆ ಹೊದಿಸುವ’ ಕೆಲಸವೇ ನಮ್ಮೂರಿನಿಂದ
ಕಣ್ಮರೆ ಯಾಯಿತು. ಈ ವಿಶಾಲ ಹರನಗುಡ್ಡೆಯ ಮೈದಾನದಲ್ಲಿ ನಡೆಯುವುದೆಂದರೆ ನನಗೆ ಬಹಳ ಖುಷಿ. ಒತ್ತೊತ್ತಾಗಿ
ಬೆಳೆದ ಎರಡಡಿ ಎತ್ತರದ ಕರಡದ ನಡುವೆ ಸಾಗುವ ಕಾಲ್ದಾರಿಯಲ್ಲಿ ಕಾಲು ಹಾಕುತ್ತಾ ನಡೆಯುವಾಗ, ಆ ಕರಡ ಎರಡೂ ಕಾಲುಗಳನ್ನು ಮುತ್ತಿಕ್ಕಿದಾಗ ಆಗುವ ಅನುಭವ ಅನನ್ಯ.

ಹೀಗೇ ನಡೆಯುತ್ತಾ ಸಾಗುವಾಗ, ಆ ಕರಡದಲ್ಲಿರುವ ಒಣಗುಗಳು (ಉಣ್ಣಿ) ಮೈಗೆ ಹತ್ತಿದ್ದೂ ಉಂಟು! ಒಂದೆರಡು ದಿನಗಳ ನಂತರ ಆ ಜಾಗದಲ್ಲಿ ತುರಿಕೆಯಾದಾಗಲೇ, ಆ ಒಣಗುಗಳ ಕಾಟ ಗೊತ್ತಾಗುವುದು! ಹರನಗುಡ್ಡೆಯ ಈ ದಾರಿಗೂ, ನನಗೂ ಒಂದು ಆತ್ಮೀಯ ನಂಟಿದೆ. ಆ ವಿಶಾಲ ಮೈದಾನದ ಮಧ್ಯೆ ಸಾಗುವ ದಾರಿಯಲ್ಲಿ ಎರಡು ಕಿ.ಮಿ. ನಡೆದು, ಅಲ್ಲಿಂದ ಆಚೆ ಅದೇ ರೀತಿಯ ಕಾಡು ಗುಡ್ಡದ ದಾರಿಯಲ್ಲಿ ನಾಲ್ಕು ಕಿ.ಮಿ. ಸಾಗಿದರೆ, ನನ್ನ ಮಾವನ ಮನೆ ಸಿಗುತ್ತದೆ. ಅಲ್ಲಿಂದ ಮುಂದೆ ಒಂದು ಕಿ.
ಮಿ.ನಡೆದರೆ, ನನ್ನ ಅಮ್ಮ ಮತ್ತು ಅಮ್ಮನ ತವರು ಮನೆಗಳು ಇವೆ.

ಆದ್ದರಿಂದ ಹರನಗುಡ್ಡೆಯ ಆ ದಾರಿಯಲ್ಲಿ ಅದೆಷ್ಟು ಬಾರಿ ನಡೆದು ಸಾಗಿದ್ದೇನೋ ಲೆಕ್ಕವಿಲ್ಲ. ನಮ್ಮ ಮನೆಯಿಂದ ಚೇರಿಕೆ ಬಯಲು ಮೂಲಕ ನಡೆಯಲು ಆರಂಭಿಸಿದರೆ, ಹರನಗುಡ್ಡೆಯ ಆಚೆ ಇರುವ ಬಾವಣಿ ತೋಡು ದಾಟಿ, ನಾಗೆರ್ತಿ ಕಾನಿನ ಅಂಚಿನಲ್ಲಿ ಸಾಗಿ, ಗರಡಿ ಪೂಜಾರರ ಮನೆ ಹಾದು, ಕೊಟಬಚ್ಚಲು ಹೊಳೆ ದಾಟಿದರೆ, ನಮ್ಮ ಮಾವನ ಮನೆ ತಾರಿಕಟ್ಟೆ ಸಿಗುತ್ತದೆ.

ನೂರು ವರ್ಷಗಳಿಗೂ ಹಳೆಯದಾದ ಬೃಹತ್ ಗಾತ್ರದ ಒಂದು ತಾರಿ ಮರದ ಹತ್ತಿರವಿರುವ ತಾರಿಕಟ್ಟೆ ಒಂದು ಪುಟ್ಟ ಪೇಟೆ. ಅಲ್ಲಿಂದ ಒಂದು ಕಿ.ಮಿ. ನಡೆದರೆ ಸಿಗುವ ಅಬ್ಲಿಕಟ್ಟೆ. ಬಹುಶ ಮುಂಚೆ ಅಲ್ಲಿ ಅಬ್ಲಿ ಹೂ (ಕನಕಾಂಬರ) ಬೆಳೆಯುತ್ತಿದ್ದರೆನೋ. ಆ ಸ್ಥಳ ನನ್ನ ಅಮ್ಮನ ಮತ್ತು ಅಮ್ಮನ ತವರು ಮನೆ. ಈ ದಾರಿಯುದ್ದಕ್ಕೂ ನಡೆದು ಹೋಗುವಾಗ ಸಿಗುವ ಹಳ್ಳಿಗಳ ಹೆಸರು ಕುತೂಹಲಕಾರಿ. ಬಾವಣಿ, ಹುಯ್ಯಾರು, ಹಿಲಿಯಾಣ, ಹೈಕಾಡಿ ಮೊದಲಾದ ಊರುಗಳು ಆ ಸುತ್ತಲೂ ಇವೆ. ಹರನಗುಡ್ಡೆ
ಪಕ್ಕದಲ್ಲಿರುವ ‘ಬಾವಣಿ’ಗೆ ಅದೇಕೆ ಆ ಹೆಸರು ಬಂತೋ ಕಾಣೆ.

ಆದರೆ ಬಾವಣಿಯ ಪಕ್ಕದಲ್ಲಿರುವ ‘ನಾಗೆರ್ತಿ ಕಾನು’ ಹೆಚ್ಚು ಪ್ರಸಿದ್ಧ. ನಾಗರತಿ ಎಂಬ ಸರ್ಪಕನ್ಯೆ ನೆಲೆಸಿರುವ ಕಾನು ಅದು ಎಂಬ ಕಥೆ ಯುಂಟು. ನಾಗರತಿಯು, ಮಂದರತಿ (ಮಂದಾರ್ತಿ) ಎಂಬ ಇನ್ನೊಬ್ಬ ಖ್ಯಾತ ಸರ್ಪಕನ್ಯೆಯ ಸಹೋದರಿ. ಅದೇ ರೀತಿ ಚಾರುರತಿ, ದೇವರತಿ, ನೀಲರತಿ ಎಂಬ ಮೂವರು ಸರ್ಪಕನ್ಯೆಯರ ಐತಿಹ್ಯವು ನಮ್ಮ ಊರಲ್ಲಿ ಸಾಕಷ್ಟು
ಪ್ರಸಿದ್ಧ. ಈ ಐವರು ಸರ್ಪಕನ್ಯೆಯರು ನೆಲೆಸಿದ ಜಾಗಗಳಲ್ಲಿ ಇಂದು ಅಮ್ಮನವರ ದೇಗುಲಗಳಿವೆ.

ನಾನು ಕಂಡಂತೆ ನಾಗರತಿ ಕಾನ್‌ನಲ್ಲಿ ದಟ್ಟವಾದ ಕಾಡಿತ್ತು. ಕಾಡುಗಳ್ಳರು ಅಲ್ಲಿ ನಿರಂತರವಾಗಿ ತಮ್ಮ ಕೈಚಳಕ ತೋರಿದ್ದ ರಿಂದಾಗಿ ಈಗ ಮಧ್ಯಮ ಗಾತ್ರದ ಮರಗಳಿರುವ ಕಾಡು ಮಾತ್ರ ಉಳಿದುಕೊಂಡಿದೆ. ವರ್ಷದ ಹೆಚ್ಚಿನ ಕಾಲ ನೀರು ಹರಿಯು ತ್ತಿದ್ದ ಬಾವಣಿ ತೋಡಿನ ಹತ್ತಿರ ಎರಡು ಎತ್ತರವಾದ ಮರಗಳಿದ್ದವು. ಅವುಗಳ ವಿಶೇಷತೆ ಎಂದರೆ ತುಂಬಾ ನಯವಾದ ಬಿಳಿ ಕಾಂಡ. ಆ ಮರದ ಕಾಂಡಗಳು 30 ಅಡಿಗೂ ಹೆಚ್ಚು ಎತ್ತರವಾಗಿ, ರೆಂಬೆ ಕೊಂಬೆಗಳಿಲ್ಲದೆ ಬೆಳೆದು ಕೊಂಡಿದ್ದವು.

ಆ ಕಾಡು ದಾರಿಯಲ್ಲಿ ನಡೆಯುವಾಗ ಅಡ್ಡವಾಗಿ ‘ಹುಲಿ ಬಂದರೆ ಆ ಮರಗಳನ್ನು ಹತ್ತಬೇಕು’ ಎನ್ನುತ್ತಿದ್ದರು ನಮ್ಮ ಹಳ್ಳಿಯ ವರು. ಆ ಮರದ ನಯವಾದ ಕಾಂಡವನ್ನು ಹತ್ತಲು ಹುಲಿಯಿಂದ ಸಾಧ್ಯವಾಗುವುದಿಲ್ಲವಂತೆ! ಆದರೆ ನಾನು ಆ ದಾರಿಯಲ್ಲಿ ಓಡಾಡುವ ಸಮಯಕ್ಕಾಗಲೇ ಆ ಸುತ್ತಮುತ್ತಲಿನ ಪ್ರದೇಶದಲ್ಲಿದ್ದ ಹುಲಿಗಳು ನಾಮಾವಶೇಷವಾಗಿದ್ದವು. ನಮ್ಮ ಮನೆಯಿಂದ ಹರನಗುಡ್ಡೆ ಮೂಲಕ ಸಾಗುವ ದಾರಿಯಲ್ಲಿ ನಾವೆಲ್ಲ ಅದೆಷ್ಟು ಬಾರಿ ನಡೆದು ಹೋಗಿದ್ದವು ಲೆಕ್ಕವೇ ಇಲ್ಲ. ದಾರಿ ಉದ್ದಕ್ಕೂ ಸಿಗುವ ಕಿಸ್ಕಾರ ಹಣ್ಣು , ಬೆಳಮಾರ ಹಣ್ಣು , ಬುಕ್ಕಿ ಹಣ್ಣು, ಕಾಟು ಮಾವಿನ ಹಣ್ಣು, ಮುರಿನ ಹಣ್ಣು ಗಳನ್ನು ತಿನ್ನುತ್ತಾ ಸಾಗುವುದೇ ಒಂದು ಮಜಾ.

ವೇಗವಾಗಿ ನಡೆದರೆ ಸುಮಾರು 60 ನಿಮಿಷಗಳಲ್ಲಿ ನಮ್ಮ ಮನೆಯಿಂದ ನಮ್ಮ ಮಾವನ ಮನೆಗೆ ತಲುಪಬಹುದಿತ್ತು.
ಒಮ್ಮೆ ಈ ದಾರಿಯಲ್ಲಿ ನಡೆದು ಬರುವಾಗಲೇ, ಮೈ ನಡಗಿಸುವ ವಿಚಿತ್ರವಾದ ಒಂದು ಕೂಗನ್ನು ನಾನು ಕೇಳಿದ್ದು. ನಮ್ಮ ಮನೆಯಿಂದ ಒಂದು ಹಸುವನ್ನು ನಮ್ಮ ಮಾವನ ಮನೆಗೆ ಎಬ್ಬಿದ್ದರು. ಅದನ್ನು ವಾಪಸು ಹೊಡೆದುಕೊಂಡು ಬರುವುದು ನನ್ನ ಕೆಲಸ. ನಾನು ಆಗಿನ್ನೂ ಹೈಸ್ಕೂಲ್ ವಿದ್ಯಾರ್ಥಿಯಾಗಿದ್ದರಿಂದ, ನನ್ನ ಜತೆಗಾರನಾಗಿ ದ್ಯಾವಣ್ಣ ನಾಯಕ ಎಂಬಾತ ಬಂದಿದ್ದ.

ನಮ್ಮ ಮನೆಯಿಂದ ನಾವಿಬ್ಬರೂ ನಡೆದು ಹೊರಟು, ತಾರಿಕಟ್ಟೆ ತಲುಪುವಾಗ ಅದಾಗಲೇ ಸಂಜೆ ನಾಲ್ಕು ಗಂಟೆ ಯಾಗಿರಬಹುದು. ಹಸುವನ್ನು ಹೊಡೆದುಕೊಂಡು ಸುಮಾರು ಐದು ಗಂಟೆಯ ನಂತರ ವಾಪಸು ಹೊರಟೆವು. ಗೊತ್ತಿ
ರುವ ದಾರಿಯಾಗಿದ್ದರಿಂದ ಕಾಡಿನಲ್ಲಿ ದಾರಿತಪ್ಪುವ ಸಮಸ್ಯೆ ಇರಲಿಲ್ಲ. ಆದರೆ ಅದು ಬೇಗನೆ ಕತ್ತಲಾಗುವ ಚಳಿಗಾಲ ವಿರಬೇಕು; ಆ ಹಸುವಿನ ಜತೆ ಹರನಗುಡ್ಡೆ ಬಳಿ ಬರುವಾಗ, ಅದಾಗಲೇ ಕತ್ತಲಾಗಿತ್ತು.

ನಮ್ಮ ಜೊತೆ ಹಸು ಇದ್ದುದರಿಂದ 120 ಮೆಟ್ಟಿಲುಗಳ ದಾರಿಯ ಮೂಲಕ ಇಳಿಯುವಂತಿರಲಿಲ್ಲ. ಆ ದಾರಿಯ ಕೆಳಭಾಗದಲ್ಲಿ ಸಂಕ, ಗz ಎಲ್ಲ ಇವೆ. ಆದ್ದರಿಂದ ಸ್ವಲ್ಪ ದಕ್ಷಿಣ ಭಾಗದಲ್ಲಿದ್ದ ಕೊರಕಲು ಕಣಿವೆಯ ದಾರಿಯಲ್ಲಿ ದ್ಯಾವಣ್ಣ ನಾಯಕ ಹೊರಟ. ಸುತ್ತಲೂ ಕತ್ತಲು. ಅವನ ಕೈಯಲ್ಲಿದ್ದ ಹಗ್ಗಕ್ಕೆ ಹಸುವನ್ನು ಕಟ್ಟಿ ಮುಂದೆ ನಡೆದಿದ್ದ. ಅವನ ಹಿಂದೆ ನಾನು. ಇಳಿಜಾರಿನ, ಕೊರಕಲು ದಾರಿ.

ಹರನಗುಡ್ಡೆಯ ಈ ಭಾಗದಲ್ಲಿ ಇನ್ನಷ್ಟು ದಟ್ಟವಾದ ಕಾಡಿತ್ತು. ಅಲ್ಲಿನ ಕತ್ತಲು ಹೇಗಿತ್ತೆಂದರೆ, ಏನೆಂದರೆ ಏನೂ ಕಾಣಿಸು ತ್ತಿರಲಿಲ್ಲ. ಅಂತಹ ಕೊರಕಲು, ಕಾಡುದಾರಿಯಲ್ಲಿ ಸಾಕಷ್ಟು ಬಾರಿ ಓಡಾಡಿದ್ದ ದ್ಯಾವಣ್ಣ ನಾಯಕನು ಅಭ್ಯಾಸ ಬಲದಿಂದ ಬೇಗ ಬೇಗನೆ ನಡೆದಿದ್ದ. ಆಗ ಕೇಳಿಸಿತು, ಕತ್ತಲ ಗರ್ಭದಿಂದ ಸೀಳಿ ಬಂದ ಆ ಭಯಾನಕ ಕೂಗು. ತಾರಕ ಮತ್ತು ತೀಕ್ಷ್ಣ ದನಿ ಯಲ್ಲಿ ಭಯಭೀತ ಮುದುಕಿಯೊಬ್ಬಳು ದೊಡ್ಡ ದನಿಯಲ್ಲಿ, ರಕ್ತ ಹೆಪ್ಪುಗಟ್ಟಿಸುಂತೆ ಕೂಗುವ ದನಿ.

ಸುಮಾರು 10 ರಿಂದ 20 ಸೆಕೆಂಡ್ ಎಡೆಬಿಡದೆ ಕೇಳಿಸಿದ ಆ ಕೂಗು, ನಮ್ಮ ತಲೆಯ ಮೇಲಿದ್ದ ಮರಗಳ ಕ್ಯಾನೋಪಿ ಯಿಂದಲೇ ಬಂದಿತ್ತು. ಕತ್ತಲ ರಾತ್ರಿ ಯಲ್ಲಿ ಆ ಕೂಗನ್ನು ಕೇಳಿ ನನಗೆ ಭಯವಾಯ್ತು. ‘ಅದೆಂತ ಕೂಗು?’ ಎಂದು ದ್ಯಾವಣ್ಣ ನಾಯಕ ನನ್ನು ಕೇಳಿದೆ. ಅವನು ಅದಕ್ಕೆ ಉತ್ತರ ಕೊಡದೆ, ‘ಬೇಗ ಬೇಗ ನಡಿನಿ’ ಎನ್ನುತ್ತಾ ಓಡೋಡುತ್ತಾ ಸಾಗಲು ಶುರು ಮಾಡಿದ. ಅಲ್ಲಿಂದ ನಮ್ಮ ಮನೆ ತಲುಪಲು ಸುಮಾರು 20 ನಿಮಿಷ ಬೇಕಾಯಿತು.

ಅಷ್ಟು ದೂರ ಬರುವ ತನಕ ಅವನು ಬೇರೇನೂ ಮಾತನಾಡಲಿಲ್ಲ, ನಾನೂ ಸಹ. ಮನೆಗೆ ಬಂದ ನಂತರ, ಈ ರೀತಿ ಭಯ ಹುಟ್ಟಿಸುವ ತಾರಕ ದನಿಯನ್ನು ಆ ದಟ್ಟ ಕಾಡಿನಲ್ಲಿ ಕೇಳಿದೆ ಎಂದು ಅಮ್ಮಮ್ಮನ ಬಳಿ ಹೇಳಿದೆ. ಅದಕ್ಕೆ ಅವರು ‘ಹೆದರಿಕೆ ಆಯ್ತಾ, ಅದು ಜಕಣಿ ಹಕ್ಕಿ’ ಎಂದುತ್ತರಿಸಿ, ಮಾತನ್ನು ಜಾಸ್ತಿ ಮುಂದುವರಿಸದೆ ಬೇರೆ ಕೆಲಸದಲ್ಲಿ ಮಗ್ನರಾದರು. ದಟ್ಟ ಕಾಡಿನಲ್ಲಿ ಈ ರೀತಿ ರಕ್ತ ಹೆಪ್ಪುಗಟ್ಟಿಸುವಂತೆ ಕೂಗುವ ಹಕ್ಕಿಯು ಫಾರೆಸ್ಟ್ ಈಗಲ್ ಔಲ್ (ಸ್ಪಾಟ್ ಬೆಲ್ಲೀಡ್ ಈಗಲ್ ಔಲ್) ಎಂದು, ಸಲೀಂ ಅಲಿ ಅವರ ‘ಇಂಡಿಯನ್ ಹಿಲ್‌ಬರ್ಡ್ಸ್’ ಪುಸ್ತಕದ ಮೂಲಕ ಆಮೇಲೆ ತಿಳಿದುಕೊಂಡೆ.

ಅದನ್ನು ನಮ್ಮೂರಿನವರು ಜಕಣಿ ಹಕ್ಕಿ ಎಂದು ಭಯದಿಂದಲೇ ಕರೆಯುತ್ತಿದ್ದರು. ಜಕಣಿ ಹಕ್ಕಿ ಕೂಗುವುದನ್ನು ನಾನು ಕೇಳಿದ್ದು ಅದೇ ಮೊದಲು, ಅದೇ ಕೊನೆ. ಬಾಲ್ಯದಲ್ಲಿದ್ದಾಗ ತಮ್ಮ ತವರು ಮನೆ ಅಬ್ಲಿಕಟ್ಟೆಯ ಸುತ್ತಲಿನ ಕಾಡಿನಲ್ಲಿ ರಾತ್ರಿ ಹೊತ್ತು ಜಕಣಿ ಹಕ್ಕಿ ಕೂಗುವುದನ್ನು ಆಗಾಗ ಕೇಳುತ್ತಿದ್ದೆವು ಎಂದು ಅಮ್ಮಮ್ಮ ಹೇಳುತ್ತಿದ್ದರು. ಹರನಗುಡ್ಡೆಯ ವಿಸ್ಮಯಗಳಲ್ಲಿ ಈ ಜಕಣಿ
ಹಕ್ಕಿಯೂ ಒಂದು. ಇನ್ನೊಂದು ವಿಸ್ಮಯವೆಂದರೆ, ಅದರ ಉದ್ದಕ್ಕೂ ನಡೆದಾಡುವಾಗ ಧನ್ ಧನ್ ಎಂಬ ಶಬ್ದ ಕೇಳುತ್ತದೆ!

ಇಡೀ ಗುಡ್ಡವೇ ಟೊಳ್ಳು ಟೊಳ್ಳಾಗಿದೆಯೇನೋ ಎಂಬಂತಹ ಸದ್ದು. ಹರನ ಗುಡ್ಡ ಟೊಳ್ಳು, ಆ ಗುಡ್ಡದ ಗರ್ಭದಲ್ಲಿ ಚಿನ್ನದ
ಕೊಪ್ಪರಿಗೆ ಇದೆ, ಅದನ್ನು ಸರ್ಪ ಕಾಯುತ್ತಿದೆ ಎಂಬ ಬಲವಾದ ನಂಬಿಕೆಯೂ ನಮ್ಮೂರಿನಲ್ಲಿದೆ!

 

error: Content is protected !!