Saturday, 27th July 2024

ಗುರುವಿರದ ವಿಷಯದಲಿ ಲಘುಬಗೆಯ ಹರಟೆಯಿದು

ತಿಳಿರು ತೋರಣ

srivathsajoshi@yahoo.com

ಲಘು ಉಪಾಹಾರದಲ್ಲೂ ಲಘು ಅಂದರೆ ಚಿಕ್ಕ, ಚೊಕ್ಕ, ಬೇಗ ತಿಂದು ಮುಗಿಸಬಹುದಾದ ಎಂದೇ ಅರ್ಥ. ಉಪ್ಪಿಟ್ಟು+ಕೇಸರಿಭಾತ್+ಕಾಫಿ ಅಥವಾ ಸಮೋಸಾ+ಕಾಜೂಬರ್ಫಿ+ಚಹ ಅಂತಿಟ್ಕೊಳ್ಳಿ. ಪುಸ್ತಕ ಬಿಡುಗಡೆಯಂಥ ಸಮಾರಂಭದ ಆಹ್ವಾನಪತ್ರಿಕೆಯಲ್ಲಿ ಲಘು ಉಪಾ ಹಾರದ ಪ್ರಲೋಭನೆ ತೋರಿದ ರಷ್ಟೇ ಒಂದಿಷ್ಟಾದರೂ ಜನ ಸೇರುತ್ತಾರೆ ಎನ್ನುವ ಪರಿಸ್ಥಿತಿ ಈಗ ಉಂಟಾಗಿದೆಯಂತೆ.

ಅರ್ಥವ್ಯಾಪ್ತಿಯ ದೃಷ್ಟಿಯಿಂದ ನೋಡಿದರೆ ಲಘು ಸಹ ಗುರುವಿಗೆ ಕಡಿಮೆಯೇನಲ್ಲ. ಬಹುಶಃ ಗುರುವಿಗಿಂತಲೂ ಒಂದು ತೂಕ ಹೆಚ್ಚೇ ಎನ್ನಬಹುದೇನೋ! ಆದರೆ ಬೇಡಾ, ಲಘು ಎಂಬ ಪದಕ್ಕಿರುವ ಹಲವಾರು ಅರ್ಥಗಳಲ್ಲಿ ಭಾರವಿಲ್ಲದ್ದು ಅಥವಾ ಹಗುರ ಎನ್ನುವುದೂ ಒಂದು. ನೀವು ನಂಬಲಿಕ್ಕಿಲ್ಲ, ಕನ್ನಡ ಸಾಹಿತ್ಯ ಪರಿಷತ್ತಿನ ನಿಘಂಟುವಿನಲ್ಲಿ ಲಘು ಎಂಬ ಪದಕ್ಕೆ ಒಟ್ಟು ೨೬ ಅರ್ಥಗಳನ್ನು ಕೊಟ್ಟಿದ್ದಾರೆ! ಮತ್ತು ಅವುಗಳ ಪೈಕಿ ಮೊದಲನೆ ಯದೇ ‘ಹಗುರವಾದ, ಭಾರವಿಲ್ಲದ, ತೂಕವಿಲ್ಲದ’ ಎಂದು.

ಹಾಗಿರುವಾಗ ತೂಕ ಹೆಚ್ಚು ಅಂತಂದ್ರೆ ಲಘು ಸಿಟ್ಟಿಗೇಳಬಹುದು- ತೂಕ ಇಳಿಸಿಕೊಳ್ಳುತ್ತಿರುವ ಲಲನೆಯರು ಅಕಸ್ಮಾತ್ ಒಂದೆರಡು ಮಿಲಿಗ್ರಾಂನಷ್ಟು ತೂಕ ಹೆಚ್ಚಳ ಕಂಡುಬಂದರೂ ಸಿಡಿಮಿಡಿಗೊಳ್ಳುವಂತೆ. ಲಘು ಎಂದರೆ ಹಗುರ ಎನ್ನುವ ಅರ್ಥದಲ್ಲಿಯೇ ಪು. ತಿ. ನರಸಿಂಹಾಚಾರ್ ‘ಲಘುವಾಗೆಲೆ ಮನ ಗೆಲವಾಗೆಲೆ ಮನ ಹಾರು ನನ್ನ ಬಿಟ್ಟು… ಹಾರಿ ಹರಿಯ ಮುಟ್ಟು…’ ಎಂದರು. ಇಹಲೋಕದ ಜಂಜಡಗಳನ್ನೆಲ್ಲ ಅನಾವಶ್ಯಕವಾಗಿ ಅಂಟಿಸಿಕೊಂಡು ಭಾರವಾಗಬೇಡ; ಅವೆಲ್ಲದ ರಿಂದ ಮುಕ್ತಿ ಪಡೆದು ಹಗುರಾಗಿ ತೇಲುತ್ತ ಹರಿಯೆಡೆಗೆ ಸಾಗು; ಶ್ಯಾಮಸುಂದರನ ಉಸಿರೊಳಾಡು ನೀ ಅವನುಸಿರಾಗುತ… ಅಂದರೆ ಅಕ್ಷರಶಃ ಉಸಿರಿನಂತೆ ಅರ್ಥಾತ್ ಗಾಳಿಯಂತೆ ಹಗುರ ವಾಗು ಎಂದು ಮನಸ್ಸಿಗೆ ಕಿವಿಮಾತು ಹೇಳಿದರು.

ಪುತಿನ ಅವರ ಕಾವ್ಯಕ್ಕಿರುವ ವಜನೇ ಬೇರೆ. ಅಧ್ಯಾತ್ಮದ ಗಾಢ ಛಾಯೆಯಿರುವ ಅದನ್ನು ನಾವು ಲಘುವಾಗಿ ಪರಿಗಣಿಸಲಿಕ್ಕಾಗದು. ಹಾಂ! ಇಲ್ಲಿ
ಲಘುವಾಗಿ ಅಂದರೆ ನಿಕೃಷ್ಟವಾಗಿ, ತುಚ್ಛವಾಗಿ, ಕೇವಲವಾಗಿ, ಅಥವಾ ಕನಿಷ್ಠವೆಂಬಂತೆ ಎಂದು ಅರ್ಥ. ಲಘು ಎಂದರೆ ವೇಗ ಅಥವಾ ಶೀಘ್ರತೆ ಎಂಬ ಅರ್ಥವೂ ಇದೆ. ‘ಜವೋಧಿಥ ಶೀಘ್ರಂ ತ್ವರಿತಂ ಲಘು ಕ್ಷಿಪ್ರಮರಂ ದ್ರುತಮ್’ ಎನ್ನುತ್ತದೆ ಅಮರಕೋಶ. ಜವ(ವೇಗ), ಶೀಘ್ರ, ತ್ವರಿತ, ಕ್ಷಿಪ್ರ, ಅರ, ದ್ರುತ, ಅವಿಲಂಬಿತ, ಆಶು… ಮುಂತಾದುವೆಲ್ಲ ಲಘುವಿನ ಸಮಾನಾರ್ಥಕ ಪದಗಳು. ಉತ್ತರ ಕರ್ನಾಟಕದ ಮಂದಿ ಇದನ್ನು ಭಾಳ ಛಲೋತ್ನಾಗ ಅರ್ಥ
ಮಾಡಿಕೊಂಡ್ಯಾರ ಮತ್ತ ಮಾತ್ ಮಾತಿಗೆಲ್ಲ ‘ಲಗೂ’ನ ಯಥೇಚ್ಛ ಬಳಸ್ತಾರ.

ಉದಾಹರಣೆಗೆ- ‘ಮುಂಜಾನೆ ಲಗೂ ಎಬ್ಬಸು ಅಂತ ನನ್ನ್ಯಾಕ್ ಕೇಳ್ತಿ? ರಾತ್ರಿ ಲಗೂ ಮಲಗಿ ಮುಂಜಾನೆ ಲಗೂ ಏಳು!’, ‘ನೀ ಶ್ರದ್ಧಾ ಇಟ್ಟು ಕೆಲ್ಸ ಮಾಡಾಕ ಹತ್ತಿದ್ರ ಲಗೂ ಲಗೂ ಪ್ರಮೋಷನ್ಸ್ ಸಿಗ್ತಾವ…’, ‘ಇವತ್ತ ಸುಬ್ಬಣ್ಣಾಚಾರ್ರು ಲಗೂನೇ ಐದಕ್ಕೇ ಬರತೀನಂದಾರ ಉತ್ತರಪೂಜಾಕ್ಕ. ಹೋಗು ಲಗೂ
ಲಗೂ ಹೆರಳು-ಮಾರಿ ಮಾಡ ಕೊಂಡು ಎಲ್ಲಾರನ್ನೂ ಅರಿಶಿಣ- ಕುಂಕುಮಕ್ಕ ಕರದ ಬಾ’, ‘ಸಾಬಕ್ಕಾ, ಲಗೂ ಲಗೂ ಊಟಾ ಕೆಲಸಾ ಮುಗಸರೀ… ನಿಮ್ಮನಿಯವರೂ ಬಂದು ಕೂತಾರ ನಮ್ಮನ್ಯಾಗ.

ಒಂಬತ್ತು ಹೊಡೀತಂತರೆವಾ, ಯಾವಾಗ ಶುರು ಮಾಡೋದು ಆಟಾ ಅಂತೇನಿ’, ‘ಲಗೂ ಬರಲಿಕ್ಕೆ ಏನ ಧಾಡಿ? ಪಿಂಡಕ್ಕ ನಮಸ್ಕಾರ ಮಾಡ್ಲಿಕ್ಕೆರೆ ಬರಬೇಕೋ ಬ್ಯಾಡೋ? ಎಲ್ಲಾ ಮುಗದ ಮ್ಯಾಲೆ ಅತಿಥಿಗತೆ ಊಟಕ್ಕ ಮಾತ್ರ ಬರೋದಧಿ’, ‘ನೀವು ಇಷ್ಟ ಲಗೂ ಪ್ಯಾಂಟ್ ಹಾಕ್ಕೊಂಡ್ರ ನಾ ಸಾಮಾನ್ ಹ್ಯಾಂಗ ನೋಡ್ಲೀ?’, ‘ಎಲ್ಲಾ ಸಾಮಾನೂ ಆನ್ಲೈನ್‌ದಾಗನ ತರಸತೇನಿ. ಗುಳಿಗಿ, ಔಷಧಾ, ಬಟ್ಟೀಬರೀ ಈವನ್ ಕಿರಾಣಿ ಸೈತ… ಗುಳಿಗಿ ಔಷಧಾ ತಪ್ಪಿ
ಯಾವರೆ ಬಂದ್ರ ಲಗೂ ರಿಪ್ಲೇಸ್ ಸೈತ ಮಾಡ್ತಾರ!’ ಇತ್ಯಾದಿ.

ಗಮನಿಸಿ- ಇವೆಲ್ಲವುಗಳನ್ನು ನಾನು ಗೂಗಲ್ ಮಹಾಶಯನ ನೆರವಿನಿಂದ ಸಂಗ್ರಹಿಸಿದ್ದು. ಅಂತೆಯೇ ಇದೊಂದು ಹಾಸ್ಯಪ್ರಸಂಗ ಸಹ, ಪರಮೇಶ್ವರಿ ಭಟ್ ಎಂಬುವವರು ಬರೆದಿದ್ದು: ‘ದಕ್ಷಿಣ ಕನ್ನಡದ ಹಳ್ಳಿಯಲ್ಲಿ ಹುಟ್ಟಿದರೂ ಪದವಿ ಓದಲು ಹಾಸ್ಟೆಲ್ ಸೇರಿದಾಗ ಘಟ್ಟದ ಭಾಷೆಯ ಪರಿಚ ಯವಾಯ್ತು. ಹಾಗಾಗಿ ಸ್ನಾತಕೋತ್ತರ ಪದವಿಗಾಗಿ ಮೈಸೂರು ಹಾಸ್ಟೆಲ್ ಸೇರಿದಾಗ ‘ಭಾಷಾಘಾತ’ ಆಗಲಿಲ್ಲ. ಅರ್ಥವಾಗದ ಪದಗಳಿದ್ದರೆ ಯೋಚಿಸಿ
ಅರ್ಥ ಕಂಡುಕೊಳ್ಳಲು ಅಭ್ಯಾಸವಾಯಿತು. ಆದರೆ ಪ್ರಥಮ ಬಾರಿಗೆ ಬೇರೆ ಕನ್ನಡ ಕೇಳಿದ ದಕ್ಷಿಣಕನ್ನಡಿಗರಿಗೆ ಕೆಲವು ಶಬ್ದಗಳು ಅರ್ಥವಾಗುವುದಿಲ್ಲ. ಒಮ್ಮೆ ನಾವು ಧಾರವಾಡದಲ್ಲಿದ್ದಾಗ ಊರಿನಿಂದ ನಮ್ಮ ಅತ್ತಿಗೆ ಬಂದಿದ್ದರು.

ನಮ್ಮನೆಯ ಬಾಲ್ಕನಿಯಲ್ಲಿ  ನಿಂತರೆ ರಸ್ತೆಯಲ್ಲಿ ಹೋಗುವವರು ಕಾಣುತ್ತಿದ್ದರು. ಒಂದು ದಿನ ಅತ್ತಿಗೆ ನನ್ನಲ್ಲಿ ‘ಇಲ್ಲಿ ತುಂಬ ಜನ ಲಗು ಅಂತ ಹೆಸರಿಟ್ಟುಕೊಂಡಿದ್ದಾರೆ ಅಲ್ವಾ?’ ಅಂತ ಹೇಳಿದರು. ನನಗೆ ನಗು ಬಂತು. ಯಾಕೆಂದರೆ ರಸ್ತೆಯಲ್ಲಿ ಮಕ್ಕಳನ್ನು ಶಾಲೆಗೆ ಕರಕೊಂಡು ಹೋಗುವಾಗ ಮಕ್ಕಳಲ್ಲಿ ಹೆಚ್ಚಿನವರು ‘ಲಗೂ ಬಾ!’ ಅಂತ ಕೂಗಿಕರೆಯುತ್ತಿದ್ದರು.’ ಇಲ್ಲೊಂದು ವಿರೋಧಾಭಾಸ ಸ್ವಾರಸ್ಯವೂ ಇದೆ. ಉತ್ತರ ಕರ್ನಾಟಕ ಮಂದಿ ‘ಲಗೂ ಲಗೂ ಬಾ’ ಅಂತ ಹೇಳಿದ್ರೆ ಅವಸರದಿಂದ ಬೇಗ ಬಾ ಎಂದು ಅರ್ಥ ತಾನೆ? ಕರ್ನಾಟಕದ ಬೇರೆಡೆಗಳಲ್ಲಿ ನಾವು, ಯಾರಾದರೂ ಅವಸರ ಮಾಡಿಕೊಂಡು
ನಡೆದರೆ/ ಗಾಡಿ ಚಲಾಯಿಸಿದರೆ ‘ಹಗುರ… ಹಗುರ…’ ಎನ್ನುತ್ತೇವೆ!

ಅಂದರೆ, ಜಾಗರೂಕತೆಯಿಂದ ನಿಧಾನವಾಗಿ ಚಲಿಸು,  ಆಚೆ ಈಚೆ ಮೇಲೆ ಕೆಳಗೆ ಸರಿಯಾಗಿ ನೋಡ್ಕೊಂಡು ಹೆಜ್ಜೆಯಿಡು ಎಂಬರ್ಥದಲ್ಲಿ ಎಚ್ಚರಿಸುತ್ತೇವೆ. ಇಲ್ಲಿ ಹಗುರ ಮತ್ತು ಲಗೂ ಒಂದಕ್ಕೊಂದು ವಿರೋಧಪದಗಳೇನೋ ಅಂತನಿಸುತ್ತದೆ. ಲಗುಬಗೆ ಎಂಬ ಪದ ಕನ್ನಡ ಸಾಹಿತ್ಯದಲ್ಲಿ ಸೇರಿಕೊಂಡಿದ್ದೂ ಈ ‘ಲಗು’ವಿನಿಂದಲೇ. ಅದೂ ಉತ್ತರ ಕರ್ನಾಟಕದ ಆಡುಮಾತಿಗಷ್ಟೇ ಸೀಮಿತವಾಗಿಯೇನಲ್ಲ. ‘ಅಪ್ಪ ಲಗುಬಗೆಯಿಂದ ಗಂಜಿ ಕುಡಿದು ಹೊಲಕ್ಕೆ ಹೋದ ಮೇಲೆ ಉಳಿದಿದ್ದರಲ್ಲಿ ನಾನು ಮತ್ತು ಅಮ್ಮ ಪಾಲು ಮಾಡಿಕೊಳ್ಳುತ್ತಿದ್ದೆವು…’, ‘ಚಿತ್ರದ ಕೊನೆಯ ಭಾಗದ ಕೆಲಸ ಗಳು ಲಗುಬಗೆಯಿಂದ ನಡೆಯುತ್ತಿವೆ ಎಂದು ನಾಗತಿಹಳ್ಳಿ ಹೇಳಿದ್ದಾರೆ’, ‘ಅಪರೂಪದ ಹಕ್ಕಿ ಕಾಣಿಸಿಕೊಂಡದ್ದೇ ತಡ, ಲಗುಬಗೆಯಿಂದ ಕ್ಯಾಮರಾ
ಹೊರತೆಗೆದು ಹಲವಾರು ಫೋಟೊ ಕ್ಲಿಕ್ಕಿಸಿದೆ…’ ರೀತಿಯ ವಾಕ್ಯಗಳು ನಮಗೆ ಶಿಷ್ಟಸಾಹಿತ್ಯದಲ್ಲಿ ಅಲ್ಲಲ್ಲಿ ಕಾಣಿಸಿಕೊಳ್ಳುತ್ತವೆ.

ವಿಶ್ವೇಶ್ವರ ಭಟ್ಟರು ವಿಜಯಕರ್ನಾಟಕ ಪತ್ರಿಕೆಯಲ್ಲಿದ್ದಾಗ, ಲಗುಬಗೆಗೇ ಸ್ವಲ್ಪ ಪನ್ ಸೇರಿಸಿ ರಸವಾರ್ತೆಯಂಥ ಚಿಕ್ಕಚಿಕ್ಕ ಸುದ್ದಿಗಳಿಗೆಂದೇ ‘ಲಘುಬಗೆ’ ಎಂಬ ಸ್ಥಿರಶೀರ್ಷಿಕೆ ಮೀಸಲಾಗಿರಿಸಿದ್ದರು. ಆ ಪದದಿಂದ ಪ್ರೇರಿತನಾಗಿ ನಾನು ನನ್ನದೊಂದು ಪುಸ್ತಕ ‘ಇನ್ನೊಂದಿಷ್ಟು ವಿಚಿತ್ರಾನ್ನ’ಕ್ಕೆ ಹೆಸರಿನ ಕೆಳಗೆ ‘ಲಘುಬಗೆ ಬರಹಗಳ ಬುತ್ತಿಯನ್ನ’ ಎಂದು ಟ್ಯಾಗ್‌ಲೈನ್ ಸೇರಿಸಿದ್ದೆ. ವಿಚಿತ್ರಾನ್ನ ಅಂಕಣದ ಬರಹಗಳು ಲಘು ಹರಟೆ ರೀತಿಯವೇ ಆಗಿದ್ದರಿಂದ ಮತ್ತು ದಟ್ಸ್‌ಕನ್ನಡ ಡಾಟ್ ಕಾಮ್ ಸಂಪಾದಕರಾಗಿದ್ದ ಶ್ಯಾಮಸುಂದರ್ ಆ ಅಂಕಣಕ್ಕೆ ‘ಲೈಟಾಗಿರೋ ದನ್ನು ಬಯಸುವವರ ವಾರಾನ್ನ’ ಎಂದೇ ಪ್ರಚಾರ ಕೊಟ್ಟಿದ್ದರಿಂದ ಲೈಟ್‌ನೆಸ್ ಮತ್ತು ಲಘುಬಗೆ ಚೆನ್ನಾಗಿ ಮ್ಯಾಚ್ ಆಗುತ್ತಿದ್ದವು.

ಲಘು ಎಂದರೆ ಚಿಕ್ಕದಾದ, ಸಣ್ಣಗಿರುವ ಎಂದು ಕೂಡ ಆಗುತ್ತದೆ. ನೀವು ನನ್ನಂತೆ ಕನ್ನಡ ಮಾಧ್ಯಮದಲ್ಲಿ ಹತ್ತನೆಯ ತರಗತಿವರೆಗೆ ಓದಿದವರಾದರೆ ರೇಖಾಗಣಿತದಲ್ಲಿ ಲಘುಕೋನ, ಲಂಬಕೋನ, ವಿಶಾಲಕೋನ ಎಂದು ಕಲಿತಿರುತ್ತೀರಿ. ೯೦ ಡಿಗ್ರಿಗಿಂತ ಕಡಿಮೆ ಮಾಪನವುಳ್ಳದ್ದು ಲಘುಕೋನ. ಹಾಗೆಯೇ ಅಂಕಗಣಿತ ದಲ್ಲಿ ಲಸಾಅ ಮತ್ತು ಮಸಾಅ. ಅನುಕ್ರಮವಾಗಿ ‘ಲಘುತಮ ಸಾಮಾನ್ಯ ಅಪವರ್ತ್ಯ’ ಮತ್ತು ‘ಮಹತ್ತಮ ಸಾಮಾನ್ಯ ಅಪ ವರ್ತನ’. ೬ ಮತ್ತು ೮ರ ಲಸಾಅ ೨೪ ಆದರೆ ೮ ಮತ್ತು ೧೨ರ ಮಸಾಅ ೪. ಲಘು ಉಪಾಹಾರದಲ್ಲೂ ಲಘು ಅಂದರೆ ಚಿಕ್ಕ, ಚೊಕ್ಕ, ಬೇಗ ತಿಂದು ಮುಗಿಸಬಹುದಾದ ಎಂದೇ ಅರ್ಥ. ಇಂಗ್ಲಿಷ್‌ನಲ್ಲಾದರೆ ಲೈಟ್ ರಿಫ್ರೆಷ್‌ಮೆಂಟ್ಸ್. ಉಪ್ಪಿಟ್ಟು+ಕೇಸರಿ ಭಾತ್+ಕಾಫಿ ಅಥವಾ ಸಮೋಸಾ+ಕಾಜೂಬರ್ಫಿ+ಚಹ ಅಂತಿ
ಟ್ಕೊಳ್ಳಿ. ಪುಸ್ತಕ ಬಿಡುಗಡೆಯಂಥ ಸಮಾರಂಭದ ಆಹ್ವಾನ ಪತ್ರಿಕೆಯಲ್ಲಿ ಲಘು ಉಪಾಹಾರದ ಪ್ರಲೋಭನೆ ತೋರಿದರಷ್ಟೇ ಒಂದಿಷ್ಟಾದರೂ ಜನ ಸೇರುತ್ತಾರೆ ಎನ್ನುವ ಪರಿಸ್ಥಿತಿ ಈಗ ಉಂಟಾಗಿದೆಯಂತೆ.

ಇನ್ನು, ಧರ್ಮ-ಸಂಸ್ಕೃತಿ-ಸಾಹಿತ್ಯದ ವಿಚಾರಕ್ಕೆ ಬಂದರೆ- ಅತಿರುದ್ರ, ಮಹಾರುದ್ರ ಯಾಗಗಳಿಗೆ ಹೋಲಿಸಿದರೆ ಚಿಕ್ಕದು ಎಂಬರ್ಥದಲ್ಲಿ ಲಘುರುದ್ರ ಇರುತ್ತದೆ. ಒಟ್ಟು ೧೨೧ ಸರ್ತಿ ರುದ್ರವನ್ನು ಮತ್ತು ೧೧ ಸರ್ತಿ ಚಮಕವನ್ನು ಪಠಿಸುವುದಕ್ಕೆ ಲಘುರುದ್ರ ಎನ್ನುತ್ತಾರೆ. ಲಘುಕಾವ್ಯ, ಲಘು ಪ್ರಹಸನ, ಲಘು ಟಿಪ್ಪಣಿ ಮುಂತಾದುವುಗಳಲ್ಲೆಲ್ಲ ಲಘು ಅಂದರೆ ಚಿಕ್ಕದು. ಲಘುಸಿದ್ಧಾಂತ ಕೌಮುದೀ ಅಂತೊಂದು ಸಂಸ್ಕೃತ ವ್ಯಾಕರಣ ಗ್ರಂಥ ಇದೆ, ಹೆಸರಲ್ಲಷ್ಟೇ ಲಘು. ಅದರಲ್ಲಿರುವ ವಿಚಾರಗಳನ್ನು ಅರ್ಥಮಾಡಿಕೊಳ್ಳಲಿಕ್ಕೆ ನಮ್ಮಂಥ ಪಾಮರರಿಗೆ ಬಲುಕಷ್ಟ. ಆದರೆ ಲಘುಸಂಗೀತ ಎಂದರೆ ಹಾಗಲ್ಲ. ಅದು ಶಾಸ್ತ್ರೀಯ ಸಂಗೀತದಷ್ಟು ಗಂಭೀರವಲ್ಲದ್ದು ಆಲಾಪನೆ, ಸ್ವರಪ್ರಸ್ತಾರ, ತನಿಆವರ್ತನ ಇತ್ಯಾದಿ ಇಲ್ಲದೆ ಚಿಕ್ಕದಾಗಿ ಚೊಕ್ಕವಾಗಿರುವಂಥದ್ದು.

ಲೈಟ್ ಎಂಟರ್‌ಟೇನ್ ಮೆಂಟ್‌ಗೆ ಸರಿಹೊಂದುವಂಥದ್ದು. ಇಲ್ಲೆಲ್ಲ ಲಘು ಅಂದರೆ ಪ್ರಮಾಣದಲ್ಲಿ ಚಿಕ್ಕದು ಅಥವಾ ವೇಗದಲ್ಲಿ ಹೆಚ್ಚಿನದು ಎಂದು
ಸುಲಭವಾಗಿಯೇ ಅರ್ಥಮಾಡಿಕೊಳ್ಳಬಲ್ಲೆವು. ಆದ್ದರಿಂದಲೇ ಲಘುಹಸ್ತ ಎಂದರೆ ಗಿಡ್ಡ ಕೈಯಿರುವವನು ಎಂದೇ ಆಗಬೇಕಿಲ್ಲ, ಕೈಚಳಕವುಳ್ಳವನು, ಕರಕೌಶಲವುಳ್ಳವನು, ವೇಗವಾಗಿ ಬಾಣಪ್ರಯೋಗ ಮಾಡಬಲ್ಲವನು, ನುರಿತ ಬಿಲ್ಲುಗಾರ ಎಂದು ಅರ್ಥ. ಲಘುಶಂಕೆ ಎಂದರೇನು ಅಂತ ಊಹಿಸಿ ನೋಡೋಣ? ಚಿಕ್ಕದಾದ ಶಂಕೆ/ಸಂದೇಹ ಅಂತಲ್ಲ, ಮೂತ್ರವಿಸರ್ಜನೆ ಎಂದು ಅರ್ಥ! ನಂಬರ್ ಎರಡರಷ್ಟು ಸಂಕೀರ್ಣವಾದುದಲ್ಲ ಈ ಪ್ರಕ್ರಿಯೆ
ವೇಗವಾಗಿ ಮಾಡಿಮುಗಿಸುವಂಥದ್ದು ಅಂದಮೇಲೆ ಲಘುಶಂಕೆ ಪದ ಅರ್ಥಪೂರ್ಣವಾಗಿಯೇ ಇದೆ ತಾನೆ? ಇಷ್ಟೆಲ್ಲ ಲಘುಪುರಾಣ ಆದಮೇಲೂ ಛಂದಸ್ಸಿನ ಲಘು ಮಾತ್ರೆ ವಿಚಾರ ಬರಲೇ ಇಲ್ಲ ಅಂತೀರಾ? ಅದೂ ಇದೆ, ಲೇಖನದ ಇನ್ನುಳಿದ ಭಾಗವೆಲ್ಲ ಅದರದೇ ದರ್ಬಾರು, ಕಾರುಬಾರು.

ತೀರ ಆಳಕ್ಕೆ ಹೋಗದೆ ಲೈಟಾಗಿಯೇ ಅಂದರೆ ಲಘುವಾಗಿಯೇ ಲಘುವಿನ ವಿಚಾರ ಸವಿಯೋಣ: ‘ಪದ್ಯದಲ್ಲಿ ಒಂದು ಮಾತ್ರಾಕಾಲದಲ್ಲಿ ಉಚ್ಚರಿಸ ಲಿಕ್ಕಾಗುವುದನ್ನು ಲಘು ಎನ್ನುತ್ತೇವೆ. ಅದರ ದ್ವಿಗುಣದಷ್ಟು ಉಚ್ಚಾರಾವಧಿ ಬೇಕಾಗುವುದನ್ನು ಗುರು ಎನ್ನುತ್ತೇವೆ. ಕನ್ನಡದಲ್ಲಾದರೆ ಅ, ಇ, ಉ, ಋ, ಎ, ಒ ಸ್ವರಾಕ್ಷರಗಳು ಮತ್ತು ಇದೇ ಸ್ವರಗಳುಳ್ಳ ಕಾಗುಣಿತಾಕ್ಷರಗಳು ಮಾತ್ರ ಲಘು ಎಂದು ಪರಿಗಣನೆ. ಸಂಸ್ಕೃತದಲ್ಲಾದರೆ ಹ್ರಸ್ವ ಎ ಮತ್ತು ಹ್ರಸ್ವ ಒ ಇಲ್ಲವಾದ್ದರಿಂದ ಇನ್ನೂ ಕಡಿಮೆ. ದೀರ್ಘಸ್ವರಗಳಿಂದಾದ ಅಕ್ಷರಗಳು, ಅನುಸ್ವಾರ-ವಿಸರ್ಗಗಳು, ಒತ್ತಕ್ಷರದ ಹಿಂದಿನ ಅಕ್ಷರ ಇವೆಲ್ಲ ಗುರು ಎಂದು ಪರಿಗಣನೆ, ಕನ್ನಡದಲ್ಲೂ ಸಂಸ್ಕೃತದಲ್ಲೂ.

ಪದ್ಯದ ಒಂದೊಂದು ಸಾಲನ್ನೂ ತಲಾ ಮೂರು ಅಕ್ಷರಗಳ ಗುಂಪುಗಳಾಗಿ ವಿಂಗಡಿಸುವುದು, ಆ ಅಕ್ಷರಗಳು ಲಘು-ಗುರು- ಅಥವಾ ಮಿಶ್ರಣ ಆಗಿ ಇರುವುದನ್ನವಲಂಬಿಸಿ ಯಮಾತಾರಾಜ ಭಾನಸಲಗಂ ಸೂತ್ರದಂತೆ ಯ-ಗಣ, ಮ-ಗಣ, ತ-ಗಣ ಇತ್ಯಾದಿ ಗುರುತಿಸುವುದು…’ ಬಹುಶಃ ಇದಿಷ್ಟು ಸಾಕು ಈ ಲೇಖನದ ಮಟ್ಟಿಗೆ. ಮೂರೂ ಅಕ್ಷರಗಳು ಗುರುವಾಗಿದ್ದರೆ ಮ-ಗಣ, ಮೂರೂ ಲಘುವಾಗಿದ್ದರೆ ನ-ಗಣ ಎಂಬುದನ್ನೂ ಬೇಕಿದ್ದರೆ ಸೇರಿಸಿಕೊಳ್ಳೋಣ, ‘ಗುರುಲಘು ಮೂರಿರೆ ಮನ ಗಣ’, ‘ಮನೌ ತು ಗುರುಲಾಘವಮ್’ ಎಂಬ ನೆನೆಗುಬ್ಬಿಗಳನ್ನೂ ನೆನಪಿಸಿಕೊಂಡು.

ಮೂರೂ ಅಕ್ಷರಗಳು ಲಘು ಆಗಿದ್ದರೆ ನ-ಗಣ ಎಂದು ನೆನಪಿಸಿಕೊಂಡೆವಷ್ಟೆ? ಇದನ್ನು ಸರ್ವಲಘು ಎಂದು ಹೇಳುವುದಿದೆ. ಕೆಲವೊಮ್ಮೆ ಪದ್ಯದ ಸಾಲನ್ನು ಐದೈದು ಅಕ್ಷರಗಳ ಗುಂಪಾಗಿಸಿ ಐದೂ ಅಕ್ಷರಗಳು ಲಘು ಆಗಿರುವುದೂ ಇದೆ. ಇರಲಿ, ನಮಗೀಗ ಮೂರಕ್ಷರಗಳ ನ-ಗಣವಷ್ಟೇ ಸಾಕು. ಇಂತಹ ನ-ಗಣವು ಇಡ್ಲಿಯ ಬಣ್ಣನೆಗೆ ಬಳಕೆಯಾದ ಏಕಮೇವಾದ್ವಿತೀಯ ನಿದರ್ಶನವೊಂದು ನಮಗೆ ಹಳಗನ್ನಡದ ಒಂದು ಪದ್ಯದಲ್ಲಿ ಸಿಗುತ್ತದೆ ಎಂದರೆ ನಂಬುತ್ತೀರಾ? ಸುಮಾರು ಕ್ರಿ.ಶ ೧೩ನೆಯ ಶತಮಾನದಲ್ಲಿ ಬಾಳಿದ್ದನೆನ್ನಲಾದ ಕಮಲಭವ ಎಂಬ ಕವಿಯು ಬರೆದ ಶಾಂತೀಶ್ವರ ಪುರಾಣ ಗ್ರಂಥದಲ್ಲಿ ಬರುವ ಪದ್ಯವಿದು.

‘ಸುರಸಿಂಧುಫೇನ ಪಿಂಡೋ| ತ್ಕರಮಿವೆನಲ್ ಕಾಂತಿವೆತ್ತು ನಗಣದ ತೆರದಿಂ| ಪಿರಿದುಂ ಲಘುತ್ವದಿಂ ಬಿ| ತ್ತರಿಪಿಡ್ಡಲಿಗೆಗಳನಂತವರ್ ಬಡ್ಡಿಸಿದರ್’ ರಾಜನು ಅತಿಥಿಗಳಿಗೆ ಬಡಿಸಿದ ಇಡ್ಡಲಿಗೆ(ಇಡ್ಲಿ)ಗಳು ಹೇಗಿದ್ದುವು? ಶುದ್ಧಸಲಿಲ ಹರಿಯುವ ದೇವಗಂಗೆಯ ನೊರೆಯೇ ಘನೀಕೃತವಾಗಿದೆಯೇನೋ ಎನ್ನುವಂಥ ಕಾಂತಿ. ನ-ಗಣವು ಹೇಗೆ ಎಲ್ಲ ಲಘುಗಳಿಂದಾಗಿ ಅತಿ ಹಗುರವೋ ಹಾಗೆಯೇ ಅತ್ಯಂತ ಹಗುರವಾಗಿ ಇದ್ದುವಂತೆ ಇಡ್ಲಿಗಳು. ಈಗಿನ ಕಾಲದಲ್ಲೂ ನಾವು ‘ಮಲ್ಲಿಗೆ ಇಡ್ಲಿ’ ಎನ್ನುತ್ತೇವಲ್ಲ, ಮಲ್ಲಿಗೆಯಂತೆ ಬಿಳಿ ಎಂಬ ಕಾರಣಕ್ಕಷ್ಟೇ ಅಲ್ಲ, ಮಲ್ಲಿಗೆಯಂತೆ ಹಗುರ ಎಂಬ ಕಾರಣಕ್ಕೂ.
ಮಲ್ಲಿಗೆ ಅತ್ಯಂತ ಹಗುರವಾದ ಹೂವು ಎಂದು ಪರಿಗಣನೆ.

ಅದರಿಂದಲೇ ‘ಏಳು ಮಲ್ಲಿಗೆ ತೂಕದ ರಾಜಕುಮಾರಿ’ಯೊಂದಿಗೆ ಲಲನಾಮಣಿಗಳು ತಮ್ಮನ್ನು ಹೋಲಿಸಿಕೊಳ್ಳುತ್ತಾರೆ. ಅಂದಹಾಗೆ ಸರ್ವಲಘು ಎಂದು ಹೇಳುವುದು ಪದ್ಯದಲ್ಲಿ ಒಂದು ಗಣದ ಎಲ್ಲ ಅಕ್ಷರಗಳೂ ಲಘು ಆಗಿರುವುದಕ್ಕೆ. ಆ ಕಾನ್ಸೆಪ್ಟನ್ನೇ ಮುಂದುವರಿಸಿ ಒಂದಿಡೀ ಸಾಲಿನ ಎಲ್ಲ ಅಕ್ಷರಗಳೂ
ಲಘು ಆಗಿರುವುದಂತೆ ಪದ್ಯ ರಚಿಸುವುದು ಸಾಧ್ಯವೇ? ಒಂದು ಸಾಲಷ್ಟೇ ಏಕೆ, ಎಂಟು ಸಾಲುಗಳ ಪದ್ಯ ಎಲ್ಲ ಲಘುಗಳನ್ನು ಪೋಣಿಸಿ ಬರೆಯಬಲ್ಲೆ ಎಂದು ತೋರಿಸಿದ್ದಾರೆ ನನ್ನೊಬ್ಬ ಹಿರಿಯ ಅಮೆರಿಕನ್ನಡಿಗ ಮಿತ್ರ ಎಚ್.ಕೆ.ರಾಮಪ್ರಿಯನ್. ಇಲ್ಲಿದೆ ನೋಡಿ ಅವರು ಹೊಸೆದ ಸರ್ವಲಘು ಪದ್ಯ: ‘ಗಣಪತಿಯನನವರತ ನೆನೆಯುತಲೆ ಹೊರಟಿರುತ| ಕವನವಿದ ಸರುವಲಘು ಬಳಸುತಲೆ ಬರೆಯುತಿರೆ| ಗುರುವಿರದ ಪದಗಳನು ಹಗಲಿರುಳು ಹುಡು
ಕುತಿರೆ| ಸಿಡಿಯುತಿದೆ ತಲೆಯೆನಗೆ ಕರುಣೆಯಿಡು ಸರಸತಿಯೆ|| ಕವನಗಳ ರಚಿಸುವುದು ನನಗೊಳಿತು ಮನಶಮನ| ಗುರುಗಳನು ಬಳಸದೆಯೆ ಬರೆಯುವುದು ಬಲು ಕಠಿನ| ಬರೆವ ಕವನದಿ ಗುರುವು ಬರುತಿರಲು ತಡೆಯುವೆನೆ| ಗುರುವಿರದ ಕವನಗಳ ಹಿರಿಮೆಯನೆ ಹುಡುಕುವೆನೆ||’ ಇದನ್ನವರು ಸುಮಾರು ಹದಿನೈದು ವರ್ಷಗಳ ಹಿಂದೆ ಬರೆದದ್ದು ನನ್ನ ಸಂಗ್ರಹಕ್ಕೆ ಸೇರಿಸಿಕೊಂಡಿದ್ದೆ.

ಇತ್ತೀಚೆಗೆ ಫೇಸ್‌ಬುಕ್‌ನಲ್ಲಿ ಹುಡುಕಿದಾಗ ನನ್ನ ಮಿತ್ರವರ್ಗದಲ್ಲೇ ಇರುವ ಇನ್ನೂ ಇಬ್ಬರು ಸರ್ವಲಘು ಪದ್ಯಗಳನ್ನು ಹೆಣೆದಿರುವ ವಿಚಾರ ಬೆಳಕಿಗೆ ಬಂತು. ನಮ್ಮೂರಿನ ಹುಡುಗ, ಉಡುಪಿಯಲ್ಲಿ ಬ್ಯಾಂಕ್ ಉದ್ಯೋಗಿಯಾಗಿರುವ ಸುಬ್ರಹ್ಮಣ್ಯ ಬರ್ವೆಯ ರಚನೆ ಇಲ್ಲಿದೆ. ಇದು ಶ್ರೀಹರಿಯ ಬಗೆಗಿನ ಪದ್ಯ: ‘ಹರಿಪದತಲದಲಿ ಅಜಗರನಿರುತಿಹ ನಿರತವು ಗರುಡನ ಹೆದರಿಕೆಯೊಳ್| ಗರುಡನು ಗರಿಗಳ ಪಸರಿಸಿ ನಭದಲಿ ಹರಿಯನುವಿನ ಬಲದಲಿರುತಿರಲ್| ಹರಿ ಕರಿವರದನು ಮಕರಿಯ ಬಿಡುವನೆ ಕರಿಪದವನು ಕೊರೆಯಲು ಜಲದೊಳ್? ತರಿದನು ಮಕರಿಯ ಕರಿಯನು ಪೊರೆದನು ಉರಗವ ಪೊರೆಯನೆ
ಖಗನುರಿಯೊಳ್? ಸಕಲರ ಪೊರೆವನು ಸಕಲದೊಳಿರುವನು ಸಖನಿವ ಭಕುತರ ನಿಶಿಹಗಲೊಳ್| ಭಕುತಿಯಲಿವನನು ಸೆರೆ ಪಿಡಿಯಿರಿ ಹರಿ ಶಕುತನು ಭಕುತರ ಸೆರೆಬಿಡಿಸಲ್||’ ಇನ್ನೊಂದು ಪದ್ಯ ಕೃಷ್ಣಾನಂದ ವೇದವ್ಯಾಸಾಚಾರ್ ಅವರ ರಚನೆ, ಕನ್ನಡಿಗರೆಲ್ಲರ ಹೆಮ್ಮೆಯ ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯನವರನ್ನು ಕುರಿತು: ‘ನದಿಗಳನು ತಡೆಹಿಡಿದು ಕೃಷಿನೆಲಕೆ ಜಲವುಣಿಸಿ| ನಿಲಿಸುತಲಿ ಬಗೆಬಗೆಯ ಕುಶಲಕಲೆ ಸದನಗಳ|  ಕರುನೆಲದ ಹಣೆಬರಹ ಬದಲಿಸಿದ ನವಭರಮ| ಜಗಪತಿಗೆ ನಿಶಿಮತಿಗೆ ನಮಿಸುವೆನು ಶುಭದಿನದೆ|| ಮಹಿಷಪುರ ಅರಸವನ ಬಲಭುಜವು ಎನಿಸುತಲಿ| ಜನಪದದ ಒಳಿತದನು ನೆನೆಯುತಲಿ ಅನವರತ| ಕೊಡುಗೆಗಳ ಸಲಿಸುತಲಿ ಜನಮನದಿ ಮೆರೆಯುತಿಹ| ಭರತಬುವಿ ರತುನವದು ಕರುಬುವಿಯ ಅದುಭುತವು||’ ಈಗ, ಲಘುವನ್ನು ತಲೆಮೇಲೆ ಹೊತ್ತುಕೊಂಡು ಮೆರೆಯುವ ಸರದಿ ನಿಮ್ಮದು- ಈ ಅಂಕಣಬರಹಕ್ಕೆಂದೇ ವಿಶೇಷ ಕೋರಿಕೆಯ ಮೇರೆಗೆ ಮಿತ್ರ ರಘುಪತಿ ಶೃಂಗೇರಿ ಅವರು ಬಿಡಿಸಿಕೊಟ್ಟಿರುವ ವ್ಯಂಗ್ಯಚಿತ್ರದಲ್ಲಿರುವ ಹದಿನಾರಾಣೆ ಕನ್ನಡಿಗನಂತೆ.

ಒಂದುವೇಳೆ ಪದ್ಯ ಬರೆಯುವುದು ನಿಮ್ಮ ಚಹದ ಕಪ್ಪಲ್ಲವಾದರೆ ಒಂದೆರಡು ವಾಕ್ಯಗಳನ್ನು ಸರ್ವಲಘು ರೀತಿಯಲ್ಲಿ ಬರೆಯಲಿಕ್ಕಾಗುತ್ತದೆಯೇ ಪ್ರಯತ್ನಿಸಿ. ಮಾದರಿಗೆ ಈ ಅಂಕಣಬರಹದ ಶೀರ್ಷಿಕೆಯನ್ನು ನೋಡಿಕೊಳ್ಳಿ. ನೆನಪಿಡಿ: ದೀರ್ಘಾಕ್ಷರ, ಒತ್ತಕ್ಷರ, ಅನುಸ್ವಾರ, ವಿಸರ್ಗಗಳು ಇರಕೂಡದು. ಅಂಥ ವಾಕ್ಯರಚನೆಯೂ ಕಷ್ಟ ಅಂತಾದರೆ ಇದೊಂದು ಚಟುವಟಿಕೆ ಆಗುತ್ತದೆಯೇ ನೋಡಿ: ಕನ್ನಡದ ಹಳೆ-ಹೊಸ ಚಲನಚಿತ್ರಗಳ ಹೆಸರುಗಳ ಪೈಕಿ  ಸರ್ವಲಘು ಆಗಿರುವಂಥವನ್ನು ಎಷ್ಟು ಹುಡುಕಿ ತೆಗೆಯಬಲ್ಲಿರಿ? ಅದೂ ಆಗದಿದ್ದರೆ ಇದು: ಕರ್ನಾಟಕ ರಾಜ್ಯದ ೩೧ ಜಿಲ್ಲೆಗಳ ಪೈಕಿ ಸರ್ವಲಘು ಹೆಸರುಳ್ಳ ೫ ಜಿಲ್ಲೆಗಳು ಯಾವುವು? ನನಗೆ ಗೊತ್ತು, ನಿಮ್ಮಲ್ಲಿ ಕೆಲವರಾದರೂ ಪದ್ಯ ರಚನೆಯ ಸವಾಲನ್ನೇ ಎತ್ತಿಕೊಳ್ಳುತ್ತೀರೆಂದು.

ನಿಮಗೆ ಎತ್ತುಗಡೆ (ಪುಷ್) ಕೊಡಲಿಕ್ಕೆ ನಾನೊಂದು ಸರ್ವಲಘು ಪದ್ಯ ಬರೆದಿದ್ದೇನೆ ನೋಡಿ, ದಿನಕರ ದೇಸಾಯಿಯವರ ಚುಟುಕ ಶೈಲಿಯಲ್ಲಿ, ತಲಾ ಹದಿನೆಂಟು ಮಾತ್ರೆಗಳ ನಾಲ್ಕು ಸಾಲುಗಳುಳ್ಳ ಚೌಪದಿ: ಮೊದಲು ನಮಿಸುವೆ ನಿನಗೆ ಶಿವಸುತನೆ ಬೆನಕ ಹರಸು ಕರುಣದಿ ಎನಗೆ ಉಸಿರಿರುವ ತನಕ
ಲಘುಗಳನು ಬಳಸುತಲಿ ಬರೆಯುವೆನು ಕವನ ಗುರು ನುಸುಳಿ ಬರಗೊಡೆನು ಹರಿಸುವೆನು ಗಮನ||

error: Content is protected !!