Friday, 21st June 2024

ಹಾಡಿ ಗುಡ್ಡಗಳ ನಡುವೆ ಮೂರು ದಾರಿಗಳು

ಶಶಾಂಕಣ

shashidhara.halady@gmail.com

ಶಾಲೆಗೆ ಹೋಗಲು ನಾವು ಪಡುತ್ತಿದ್ದ ಹರಸಾಹಸ ಅಷ್ಟಿಷ್ಟಲ್ಲ. ಹಂದಿಕೊಡ್ಲು ಬೈಲು ಹಾದು ಮರದ ಸಂಕದ ಮೇಲಿನ ತೋಡನ್ನು ದಾಟಿದರೆ, ಮೂಡುಹಾಲಾಡಿಯ ಹತ್ತಿರ ಟಾರುರಸ್ತೆ ಸಿಗುತ್ತಿತ್ತು. ಅದರಲ್ಲಿ ೧ ಕಿ.ಮೀ. ಪಶ್ಚಿಮಕ್ಕೆ ನಡೆದು ಹಾಲಾಡಿಯ ಹೊಳೆಮೇಲಿನ ಸೇತುವೆ ದಾಟಿ ಶಾಲೆ ತಲುಪುತ್ತಿದ್ದೆವು.

ಐದನೆಯ ತರಗತಿಯಿಂದ ಏಳನೆಯ ತರಗತಿಯ ತನಕ ನಾನು ಓದಿದ ಶಾಲೆಗೆ ನಮ್ಮ ಮನೆಯಿಂದ ಸುಮಾರು ಮೂರು ಕಿ.ಮೀ. ದೂರದ ನಡಿಗೆ ದಾರಿ. ಆ ಶಾಲೆಗೆ ಹೋಗಲು ಮೂರು ದಾರಿಗಳಿದ್ದವು. ದಟ್ಟ ಕಾಡಿನ ಪಕ್ಕದಲ್ಲಿದ್ದ ‘ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಲಾಡಿ’ ಇದು ಇದ್ದುದು, ಪಡುಹಾಲಾಡಿಯಲ್ಲಿ.

ಅಲ್ಲಿಂದ ದಕ್ಷಿಣ ದಿಕ್ಕಿನ ಒಂದು ಕಾಡಿನ ಕಿಬ್ಬದಿಯಲ್ಲಿದ್ದ ನಮ್ಮ ಮನೆಯಿಂದ ಅಲ್ಲಿಗೆ ಮೂರು ದಾರಿಗಳಿದ್ದರೂ, ಎಲ್ಲವೂ ಕಠಿಣವೇ.ಹಾಗೆ ನೋಡಿದರೆ, ಈಗಿನ ಪೇಟೆಯ ಶಾಲಾ ಮಕ್ಕಳು ಶಾಲೆಗೆ ತೆರಳಲು ಇರುವ ವಾಹನ ಸೌಕರ್ಯ, ರಸ್ತೆಗಳನ್ನು ಗಮನಿಸಿದರೆ ನಮಗಿದ್ದ ಆ ಮೂರು ದಾರಿಗಳು ದಾರಿಗಳೇ ಅಲ್ಲ, ಕಾಡಂಚಿನ ಜಾಡುಗಳು.ಇರಲಿ, ಆಗಿನ ಕಾಲದ ಹೆಚ್ಚಿನ
ಹಳ್ಳಿಯ ಹೈದರಿಗೆ ಹೆಚ್ಚು ಕಮ್ಮಿ ಅಂತಹದ್ದೇ, ಅಥವ ಅದಕ್ಕಿಂತ ದುರ್ಗಮ ಎನಿಸುವ ವ್ಯವಸ್ಥೆ ಇದ್ದುದರಿಂದ, ಈಗಿನ ಮಕ್ಕಳ ಸೌಕರ್ಯಕ್ಕೆ ಹೋಲಿಸದೇ, ಆ ಮೂರು ದಾರಿಗಳ ವಿವರ ನೋಡೋಣ.

ನಮ್ಮ ಮನೆಯ ಎದುರಿನಲ್ಲಿ, ಉತ್ತರ ದಿಕ್ಕಿಗೆ ಉದ್ದಕ್ಕೂ ಗದ್ದೆಗಳು; ವರ್ಷದ ಎಂಟು ತಿಂಗಳುಗಳ ಕಾಲ ನೀರಿನಿಂದ ತುಂಬಿರುತ್ತಿದ್ದ ಆ ಗದ್ದೆಗಳಲ್ಲಿ ಬತ್ತವೇ ಪ್ರಧಾನ ಬೆಳೆ. ನಮ್ಮ ಮನೆಯ ಪೂರ್ವ ದಿಕ್ಕಿನಲ್ಲೂ, ಒಂದು ಕಿ.ಮೀ. ತನಕ ಸಾಗಿತ್ತು ಚೇರಿಕೆ ಬೈಲು. ದಕ್ಷಿಣ ದಿಕ್ಕಿನಲ್ಲಿ ಹಾಡಿ, ಹಕ್ಕಲು ಗುಡ್ಡ. ಪಶ್ಚಿಮ ದಿಕ್ಕಿನಲ್ಲೂ ಗದ್ದೆಗಳು, ನೀಕ್ಮಡಿಗೆ ಹೋಗುವ ದಾರಿ, ಅದರಾಚೆ ಸೊಪ್ಪಿನ ಅಣೆ ಮತ್ತು ಹಾಡಿ.

ಇಲ್ಲೆಲ್ಲೂ ಯಾವುದೇ ವಾಹನ ಅಥವಾ ಸೈಕಲ್ ಓಡುವ ಅವಕಾಶ ಇರಲಿಲ್ಲ. ಬೆಳಗ್ಗೆದ್ದು, ಗಂಜಿ ಊಟ ಮಾಡಿ, ಅದೇ ಗಂಜಿಯನ್ನು ಬುತ್ತಿ ಕಟ್ಟಿಕೊಂಡು ಹೊರಟರೆ, ಮೊದಲಿಗೆ ಗದ್ದೆ ಬೈಲಿನ ಕಂಟದ (ಅಂಚು, ಬದು) ಮೇಲೆ ನಡೆಯಬೇಕು.
ಸುಮಾರು ಒಂದು ಕಿ.ಮೀ. ನಷ್ಟು ದೂರ ಆ ಬೈಲಿನಲ್ಲಿ ಸಾಗುವಾಗ ಹಲವು ಅನುಭವಗಳು. ಗದ್ದೆಯ ನೀರಿನಲ್ಲಿ ಬೆಳೆಯುವ ಪಾಚಿ, ಗದ್ದೆ ಯಂಚಿನಲ್ಲಿ ಮಳೆಗಾಲದಲ್ಲಿ ಬೆಳೆಯುವ ದಟ್ಟ ನೇರಳೆ ಬಣ್ಣದ ಹೂವು ಮತ್ತು ಕಾಂಡ ಹೊಂದಿರುವ ಸೋಣೆ ಗಿಡ, ದಾರಿಯುದ್ದಕ್ಕೂ ಹುಲ್ಲು, ಗದ್ದೆಯ ಕಳೆಗಳು, ಅದನ್ನು ಕಿತ್ತು ದಾರಿಯ ಮೇಲೆ ಎಸೆಯುವ ಪರಿಪಾಠ, ಬತ್ತ ಹೊಡೆಯಾಗಿ ಹೂ ಬಿಡುವುದು, ತೆನೆಗಟ್ಟುವುದು, ಆಗ ಬತ್ತದಲ್ಲಿರುವ ಹಾಲು, ಕೆಲವು ಬತ್ತಗಳು ಕೆಂಪು ಹೊದಳಾಗುವುದು, ಬಲಿತಾಗ ಬತ್ತದ ಗಿಡ ಹಳದಿಯಾಗುವುದು, ಅದರ ಕೊಯ್ಲು, ಎರಡು ದಿನ ಗದ್ದೆಯಲ್ಲೇ ಒಣಗಿಸಿ, ಮನೆಯ ಕಣಕ್ಕೆ ತಂದು ಬಡಿಯುವುದು – ಇವೆಲ್ಲವೂ ಪ್ರತಿದಿನ ಆ ದಾರಿಯಲ್ಲಿ ಸಾಗುವ ನಮಗೆ ಪರಿಸರ ಪಾಠಗಳು.

ಚಳಿಗಾಲದ ಬೆಳಗಿನ ಹೊತ್ತಿನಲ್ಲಿ ಇಬ್ಬನಿಯಿಂದ ತುಂಬಿ ಗದ್ದೆಯಂಚಿನ ಹುಲ್ಲು, ನಮ್ಮ  ಸೊಂಟದ ತನಕ ಒದ್ದೆಮಾಡುವುದೂ ಉಂಟು! ಮಳೆಗಾಲದಲ್ಲಿ ಸುರಿವ ಮಳೆಯಲ್ಲೇ ನಡಿಗೆ! ಆ ಬೈಲುದಾರಿಯ ತುದಿಯಲ್ಲಿ ಒಂದು ತೋಡು; ಅದನ್ನು ದಾಟಲು ನಾಲ್ಕು ಅಡಿ ಅಗಲದ ಮರದ ಹಲಗೆಗಳನ್ನು ಜೋಡಿಸಿ ಮಾಡಿದ್ದ ಪುಟ್ಟ ಮರದ ಸಾರ. ಅದರ ಒಂದೆರಡು ಹಲಗೆಗಳು ಕಿತ್ತು
ಹೋಗಿದ್ದರೂ, ಮಕ್ಕಳು ನಡೆಯಲು ತೊಂದರೆ ಇರಲಿಲ್ಲ. ಆ ಸಂಕ ದಾಟಿ ಒಂದು ಏರು ದಾರಿಯನ್ನೇರಿದಾಗ, ದಟ್ಟವಾಗಿ ಮರಗಳು ಬೆಳೆದಿದ್ದ ಒಂದು ಹಾಡಿ. ಅದನ್ನು ಪ್ರವೇಶಿಸುವಾಗ, ಎಡಭಾಗದಲ್ಲಿ ಒಂದೆರಡು ಮಕ್ಕಿ ಗದ್ದೆ, ಅಲ್ಲೊಂದು ಹುಲ್ಲು ಮಾಡಿನ ಪುಟ್ಟ ಮನೆ. ಅಲ್ಲಿದ್ದ ಒಕ್ಕಲು, ಒಂದು ರಾತ್ರಿ ಸದ್ದಿಲ್ಲದೇ ಮನೆ ಖಾಲಿ ಮಾಡಿ, ಒಂದು ಖಾಲಿ ಮಣ್ಣಿನ ಹರಿಯನ್ನು ಮನೆ ಎದುರಿನ ಅಂಗಳದಲ್ಲಿ ಕವುಚಿ ಹಾಕಿ ಹೋಗಿದ್ದರು!

ಅದೊಂದು ಬೇರೆಯೇ ಕಥೆ. ಈ ಹಾಡಿ ದಾರಿಯು ಹಲವು ಕೌತುಕಗಳ ಆಗರ. ಅಲ್ಲಿ ಒಂದು ರಾಶಿ ಕಾಯಿಕಳ್ಳಗಳಿದ್ದವು
(ಓತಿ ಕ್ಯಾತ). ಅವಕ್ಕೆ ಕಲ್ಲು ಹೊಡೆಯುವುದು ಶಾಲಾ ಮಕ್ಕಳ ಪ್ರಮುಖ ಹವ್ಯಾಸ. ಮಳೆಗಾಲ ಮುಗಿಯುವ ತನಕ ತಿಳಿನೀರು ಹರಿಯುವ ಒಂದು ತೋಡು ಆ ಹಾಡಿಯ ಇಳುಕಲಿನಲ್ಲಿ ಹರಿಯುತ್ತಿತ್ತು. ಇಳಿಜಾರಿನ ಕಲ್ಲುಗಳ ನಡುವೆ ಹರಿದು ಬರುತ್ತಿದ್ದ ಆ ಪುಟ್ಟ ತೋಡಿನ ನೀರು ಅದೆಷ್ಟು ತಿಳಿಯಾಗಿತ್ತೆಂದರೆ, ಶಾಲೆಯಿಂದ ಸಂಜೆ ವಾಪಸಾಗುವಾಗ, ಆ ನೀರನ್ನೇ ನಾವು ಹಲವು
ಬಾರಿ ಕುಡಿದದ್ದು ಇದೆ. ಈಗಿನಂತೆ, ಶಾಲೆಗೆ ಹೋಗುವಾಗ ಬಾಟಲಿಯಲ್ಲಿ ನೀರು ಕೊಂಡೊಯ್ಯವ ಕ್ರಮ ಆಗ ಇರಲಿಲ್ಲವಲ್ಲ!

ಇದೇ ಹಾಡಿಯಲ್ಲಿ ಒಂದು ಮಟ್ಟಸ ಜಾಗದಲ್ಲಿ ಒಂದು ನೀರಿನ ಬುಗ್ಗೆ ಇತ್ತು. ಮಳೆಗಾಲದ ನಾಲ್ಕು ತಿಂಗಳುಗಳಲ್ಲಿ ಅದರಿಂದ ಗುಳು ಗುಳು ಎಂದು ನೀರು ಉಕ್ಕಿ ಹರಿಯುವುದನ್ನು ನೋಡುವುದೇ ಒಂದು ವಿಶಿಷ್ಟ ಅನುಭವ. ನನ್ನ ಜತೆಗಾರ ಶಾಲಾ
ಮಕ್ಕಳು, ಕಿತಾಪತಿ ಮಾಡಿ, ಆ ಬುಗ್ಗೆಗೆ ಕಲ್ಲು ತುಂಬಿದರು. ‘ಹಾಗೆ ಮಾಡಬೇಡಿ, ಕಲ್ಲು ತುಂಬಿದರೆ ನೀರಿನ ಬುಗ್ಗೆ ಒಣಗಿ ಹೋಗಬಹುದು’ ಎಂದು ನಾನು ಹೇಳಿದರೂ ಕೇಳದೆ, ಎರಡು ಮೂರು ದಿನ ಆ ಬುಗ್ಗೆಯೊಳಗೆ ಕಲ್ಲುಗಳನ್ನು ತುಂಬಿದರು. ಆ ನಂತರ ಆ ಬುಗ್ಗೆ ಖಾಯಂ ಆಗಿ ಒಣಗಿಹೋಯ್ತು!

ಈ ಹಾಡಿದಾರಿಯಲ್ಲಿ ಮಣ್ಣು ರಸ್ತೆಯಿತ್ತು. ಅದರಲ್ಲಿ ಸುಮಾರು ಅರ್ಧ ಕಿ.ಮೀ. ನಡೆದು, ಎಡಭಾಗದಲ್ಲಿ ಕಾಣುವ ಮಕ್ಕಿಗದ್ದೆ ಮತ್ತು ಬೈಲು ಗದ್ದೆಯಲ್ಲಿ ನಡೆಯಬೇಕು. ಇದು ಹಂದಿಕೊಡ್ಲು. ಇಲ್ಲಿ ಒಂದೆರಡು ಮನೆಗಳು, ಪುಟ್ಟ ಅಡಕೆ ತೋಟ, ತೋಡು ಇದ್ದವು. ಆ ಅಡಕೆ ಮರಗಳು ಅದೆಷ್ಟು ಪುರಾತನವೆಂದರೆ, ಸಣ್ಣ ಗಾಳಿ ಬಂದರೂ, ಬಳುಕುತ್ತಾ ತೇಲಾಡುವಂತೆ ತೂಗುತ್ತಿದ್ದವು. ಇಲ್ಲಿದ್ದ ಅಡಕೆ ಮರಗಳ ಕಾಂಡ ಎಂದರೆ, ಹಾರುವ ಓತಿಗಳಿಗೆ ಬಹಳ ಇಷ್ಟ. ತಮ್ಮ ಕುತ್ತಿಗೆಯ ಹೊರಭಾಗ ದಲ್ಲಿದ್ದ ಹಳದಿ ಬಣ್ಣದ ನಾಲಗೆಯನ್ನು ಅಲ್ಲಾಡಿಸುತ್ತಾ, ಒಂದು ಮರದಿಂದ ಇನ್ನೊಂದು ಮರಕ್ಕೆ ಗ್ಲೈಡ್ ಮಾಡುತ್ತಾ ಹಾರಾಡುವ ಹಾರುವ ಓತಿಯನ್ನು ನಮ್ಮೂರಿನವರು ಕರೆಯುತ್ತಿದ್ದು ‘ಓಂತಿ’ ಎಂದ.

ಆ ಜಾಗದಲ್ಲಿ ನಾನು ಹಲವು ಬಾರಿ ಹಾರುವ ಓತಿಗಳನ್ನು ಕಂಡಿದ್ದೆ. ಹಂದಿಕೊಡ್ಲು ಬೈಲು ದಾಟಿ, ಒಂದು ಮರದ ಸಂಕದ ಮೇಲೆ ತೋಡೊಂದನ್ನು ದಾಟಿದರೆ, ಮೂಡುಹಾಲಾಡಿಯ ಗೋಳಿಯರ ಅಂಗಡಿ ಹತ್ತಿರ ಟಾರು ರಸ್ತೆಯನ್ನು ಪ್ರವೇಶಿಸುತ್ತಿದ್ದೆವು. ಅಲ್ಲಿಂದ ಒಂದು ಕಿ.ಮೀ. ರಸ್ತೆಯ ಮೇಲೇ ನೇರವಾಗಿ ಪಶ್ಚಿಮಕ್ಕೆ ನಡೆದರೆ, ಹಾಲಾಡಿಯ ಸಣ್ಣ
ಹೊಳೆಯ ಮೇಲಿನ ಸೇತುವೆಯನ್ನು ದಾಟಿ, ಪಡುಹಾಲಾಡಿಯಲ್ಲಿದ್ದ ಶಾಲೆ ತಲುಪುತ್ತಿದ್ದೆವು.

ಈ ಶಾಲೆಗೆ ತಲುಪುವ ಎರಡನೆಯ ದಾರಿ, ಸ್ವಲ್ಪ ಹತ್ತಿರದ ದಾರಿ. ಆರಂಭದ ಗದ್ದೆಬೈಲಿನ ನಡಿಗೆ, ಮರದ ಸಾರ ಮೊದಲಿನ ದಾರಿಯಂತೆಯೇ. ಹಾಡಿಯ ದಾರಿ ಸಿಕ್ಕಾಗ, ಹಂದಿಕೊಡ್ಲಿಗಿಂತ ಮುಂಚೆ, ಎಡಭಾಗದ ಹಾಡಿ ಮತ್ತು ಗುಡ್ಡೆಯನ್ನೇರಿ ಸಾಗಿದರೆ, ಸ್ವಲ್ಪ ದೂರದಲ್ಲಿ ಕುಚ್ಚಾಳು ಬೈಲು ಸಿಗುತ್ತದೆ. ಆದರೆ, ಈ ದಾರಿಯಲ್ಲಿ ಸಿಗುವ ಹಾಡಿ, ಹಕ್ಕಲು ಎಲ್ಲವೂ
ದಟ್ಟವಾಗಿ ಗಿಡಮರ ಬೆಳೆದಿರುವ ಜಾಗ. ಕಲ್ಲು, ಮುಳ್ಳುಗಳೂ ಜಾಸ್ತಿ. ಕುಚ್ಚಾಳು ಬೈಲಿಗೆ ಇಳಿಯುವ ದಾರಿಯಂತೂ ಸಣ್ಣ ಚಾರಣ ಮಾಡಿದಷ್ಟು ಕಡಿದು.

ಅಲ್ಲಿಂದ ಮುಂದೆ ಬೈಲು, ತೋಡು, ಸಂಕಗಳನ್ನು ಹಾದರೆ, ಕುದುರುಮನೆಯ ಹತ್ತಿರ, ಸಣ್ಣ ಸೇತುವೆಗಿಂತ ಸ್ವಲ್ಪ ಮುಂಚೆ, ಟಾರು ರಸ್ತೆಯನ್ನು ಕೂಡಿಕೊಳ್ಳಬಹುದಿತ್ತು. ಮೊದಲನೆಯ ದಾರಿಗೆ ಹೋಲಿಸಿದರೆ ಈ ದಾರು ತುಸು ಕಠಿಣ, ಆದರೆ ಹತ್ತಿರ. ದಾರಿಯುದ್ದಕ್ಕೂ ಸಿಗುವ ಗಿಡ ಮರಗಳ ವೈವಿಧ್ಯ, ಬಳ್ಳಿಗಳ ದಟ್ಟಣೆ ಎಲ್ಲವೂ ಹೆಚ್ಚು ಸುಂದರ, ಆಪ್ಯಾಯಮಾನ. ಮಳೆಗಾಲ ಕಳೆದ ನಂತರ ಈ ದಾರಿಯಲ್ಲಿ ಸಾಗುವ ಪರಿಪಾಠ.

ಒಂದು ದಿನ ಇದೇ ದಾರಿಯಲ್ಲಿ ವಾಪಸಾಗುವಾಗ, ಮಾವಿನ ಗಿಡಗೊಂದರಲ್ಲಿದ್ದ ಮಾವಿನ ಮಿಡಿಗಳನ್ನು ಕೊಯ್ದು, ಕಲ್ಲಿನಿಂದ ಜಜ್ಜಿ ಅಲ್ಲೇ ಸ್ವಾಹಾ ಮಾಡಿದ್ದೆವು. ನನ್ನ ಜತೆಗಾರರು ಇದಕ್ಕೆಂದೇ ಮನೆಯಿಂದ ಉಪ್ಪನ್ನು ಸಹ ತಂದಿದ್ದರು! ಎರಡನೆಯ ದಾರಿ ತುಸು ಕಠಿಣ ಎಂದೆನಲ್ಲ, ಆದರೆ ನಮ್ಮ ಶಾಲೆಗೆ ಹೋಗಬಹುದಾದ ಮೂರನೆಯ ದಾರಿ ಇನ್ನೂ ಕಠಿಣ. ಇದನ್ನು ಕೇವಲ ಕಠಿಣ ಎನ್ನುವುದಕ್ಕಿಂತ, ಮಳೆಗಾಲದಲ್ಲಿ ಅದನ್ನು ಬಳಸಿದರೆ, ಜೀವಭಯವೂ ಇತ್ತು!

ಅದು ಅಕ್ಷರಶಃ ಚಾರಣ ಮತ್ತು ಸಾಹಸಮಿಶ್ರಿತ ದಾರಿ! ಜೀವ ಭಯ ಇದ್ದದ್ದು ಕೊಯ್ಕಾಡಿ ಬೈಲಿನಲ್ಲಿದ್ದ ಸಂಕದ ಮೇಲೆ ನಡೆಯುವಾಗ! ಮಳೆಗಾಲದಲ್ಲಿ ತುಂಬಿ ಹರಿಯುವ ಆ ಸಣ್ಣ ಹೊಳೆಯನ್ನು ದಾಟಲು ಹಾಕಿದ್ದ, ಏಕೈಕ ಮರದ ಕಾಂಡದ ಮೇಲೆ
ನಡೆಯುವ ಐದನೆಯ ತರಗತಿಯ ವಿದ್ಯಾರ್ಥಿಯೊಬ್ಬನು, ಅಕಸ್ಮಾತ್ ಕಾಲು ಜಾರಿ ನೀರಿಗೆ ಬಿದ್ದರೆ, ಜೀವ ಉಳಿಯುವ ಸಾಧ್ಯತೆ ಕಡಿಮೆ.

ಹತ್ತಿರ ಮನೆಗಳೂ ಇರಲಿಲ್ಲ. ಆದ್ದರಿಂದಲೇ ಇರಬೇಕು ಈ ದಾರಿಯನ್ನು ನಾವು ಮಕ್ಕಳು ಬಳಸುತ್ತಿದ್ದುದು ಕಡಿಮೆ. ಈ ದಾರಿ ಹಿಡಿಯಲು, ನಮ್ಮ ಮನೆಯಿಂದ ಉತ್ತರ ದಿಕ್ಕಿನ ಗುಡ್ಡೆಯಲ್ಲಿದ್ದ ಮುದೂರಿ ದೇವಸ್ಥಾನಕ್ಕೆ ಸಾಗುವ ದಾರಿಯಲ್ಲಿ ಸಾಗಿ, ದೇವಸ್ಥಾನದ ಹಿಂಭಾಗದ ಹಾಡಿಯಲ್ಲಿ ನಡೆಯಬೇಕು. ಈ ಹಾಡಿಯಂತೂ ದಟ್ಟ ಕಾಡಿನ ಸ್ವರೂಪದ್ದು. ವಿವಿಧ ರೀತಿಯ ಮರಗಳು, ಪೊದೆಗಳು ಅಲ್ಲಿನ ವಿಶೇಷ.

ಈ ಹಾಡಿಯಲ್ಲಿ ಪ್ಯಾರಡೈಸ್ – ಕ್ಯಾಚರ್ ಹಕ್ಕಿಗಳು ಜಾಸ್ತಿ ಕಾಣಸಿಗುತ್ತಿದ್ದವು. ಮರಕೆಸು ಸಹ ಅಲ್ಲಿ ಹೆಚ್ಚು. ದಾರಿಯು ಅಲ್ಲಲ್ಲಿ
ಕೊರಕಲು ಬಿದ್ದು, ನಡಿಗೆಯ ಅನುಭವಕ್ಕೆ ರೋಚಕತೆಯನ್ನು ತುಂಬುತ್ತಿತ್ತು. ಹಾಡಿ ದಾಟಿ ಕೊಯ್ಕಾಡಿ ಬೈಲಿನಲ್ಲಿ ಸಾಗುವ ಈ ದಾರಿ, ಅರ್ಧ ಕಿ.ಮೀ. ಸಾಗಿದಾಗ ಒಮ್ಮೆಗೇ ಗಕ್ಕನೆ ನಿಂತು ಬಿಡುತ್ತದೆ. ಏಕೆಂದರೆ, ದಾರಿಗಡ್ಡಲಾಗಿ, ಹಾಲಾಡಿ ಸಣ್ಣ ಹೊಳೆ ಹರಿಯುತ್ತಿದೆ!

ಸಾಕಷ್ಟು ಅಗಲವಾಗಿದ್ದ ಆ ಹೊಳೆಯನ್ನು ದಾಟಲು ಆಗ ಇದ್ದದ್ದು ಒಂದೇ ಮರದ ಸಂಕ. ಅದರ ಮೇಲೆ ನಡೆಯುವಾಗ, ಆ
ಸಂಕವು ನಿಧಾನವಾಗಿ ಅಲ್ಲಾಡುತ್ತಿತ್ತು! ಐದನೆಯ ತರಗತಿಯಲ್ಲಿದ್ದಾಗ ಮೊದಲ ಬಾರಿ ಅದರ ಮೇಲೆ ನಡೆದಾಗ, ಮಧ್ಯಭಾಗದಲ್ಲಿ ಅದು ಮಾಡಿದ ತೂಗಾಟಕ್ಕೆ ನನ್ನ ಜೀವ ಬಾಯಿಗೆ ಬಂದಿತ್ತು. ಜತೆಗಾರ ಹುಡುಗರು ಕೈ ಹಿಡಿದು ದಾಟಿಸಿದ್ದರಿಂದ ಬಚಾವು! ಬೇಸಗೆಯಲ್ಲೂ ಸ್ವಲ್ಪ ನೀರು ಇರುತ್ತಿದ್ದ ಆ ಸಣ್ಣ ಹೊಳೆಯು, ಮಳೆಗಾಲದಲ್ಲಿ ಕೆಂಪನೆಯ ನೀರಿನಿಂದ ತುಂಬಿರುತ್ತಿತ್ತು. ಆದ್ದರಿಂದ ನಾವು ಮಕ್ಕಳು ಮಳೆಗಾಲದಲ್ಲಿ ಕೊಯ್ಕಾಡಿ ದಾರಿಯಲ್ಲಿ ಹೋಗಿದ್ದೇ ಇಲ್ಲ. ಚಳಿಗಾಲ ಕಳೆದ ನಂತರ ಒಮ್ಮೊಮ್ಮೆ ಈ ದಾರಿಯಲ್ಲಿ ಹೋಗುತ್ತಿದ್ದೆವು.

ಏಕೆಂದರೆ, ಶಾಲೆಗೆ ಇದ್ದ ಮೂರು ದಾರಿಗಳ ಪೈಕಿ, ಇದು ಅತಿ ಹತ್ತಿರದ ದಾರಿ. ಕೊಯ್ಕಾಡಿ ಸಂಕ ದಾಟಿದ ನಂತರ, ಬತ್ತದ ಗದ್ದೆಗಳ ನಡುವೆ ಸಾಗುವ ಆ ದಾರಿಯಲ್ಲಿ ಅರ್ಧ ಕಿ.ಮೀ. ನಡೆದರೆ, ಶಾಲೆಗೆ ನೇರ ಎದುರು ಭಾಗದಲ್ಲಿ ಟಾರು ರಸ್ತೆಗೆ
ಕೂಡುಕೊಳ್ಳಬಹುದಿತ್ತು. ಬಹು ಹಿಂದೆ, ಪಡು ಹಾಲಾಡಿಯು ಪ್ರಾಮುಖ್ಯತೆ ಪಡೆದಿದ್ದಾಗ, ನಮ್ಮ ಮನೆಯ ಸುತ್ತ ಮುತ್ತಲಿನವರು ಕೊಯ್ಕಾಡಿ ದಾರಿಯಲ್ಲಿ ನಡೆದು, ಆ ತೂಗಾಡುವ ಸಂಕ ದಾಟಿ ಬರುತ್ತಿದ್ದರು. ಹಿಂದೆ ಅಲ್ಲೊಂದು ಮರದ ಸಾರ ಇತ್ತು ಎನಿಸುತ್ತದೆ; ಅದಕ್ಕೆಂದು ಮಾಡಿದ ಕಲ್ಲಿನ ದಿಬ್ಬಗಳು ಆ ಸಣ್ಣ ಹೊಳೆಯ ಎರಡೂ ದಡಗಳಲ್ಲಿ ಇದ್ದವು. ಪಡು
ಹಾಲಾಡಿಯಲ್ಲಿ ಮಂಗಳವಾರ ಸಂತೆ ನಡೆಯುತ್ತಿತ್ತು, ಅದಕ್ಕೆ ಸಾಕಷ್ಟು ಜನ ಸೇರುತ್ತಿದ್ದರು.

ಆದರೆ, ಕ್ರಮೇಣ ಒಂದು ಕಿ.ಮೀ. ದೂರದ ಮೂಡು ಹಾಲಾಡಿ ಪ್ರವರ್ಧಮಾನಕ್ಕೆ ಬಂದು, ಅಲ್ಲಿ ಸಾಕಷ್ಟು ಅಂಗಡಿಗಳಾದ ನಂತರ, ಪಡುಹಾಲಾಡಿ ಪ್ರಾಮುಖ್ಯತೆಯನ್ನು ಕಳೆದುಕೊಂಡಿತು. ೧೯೬೦ರ ದಶಕದಲ್ಲಿ, ಅಂದರೆ ಸ್ವಾತಂತ್ರ್ಯ ದೊರಕಿ
ಸುಮಾರು ೧೫ ವರ್ಷಗಳ ನಂತರ, ಹಾಲಾಡಿ ಹೊಳೆಗೆ ಹೊಸ ಸೇತುವೆ ನಿರ್ಮಾಣಗೊಂಡ ನಂತರ, ಬಸ್ಸುಗಳು ನೇರವಾಗಿ ಓಡಲು ಆರಂಭಿಸಿದವು, ಮೂಡು ಹಾಲಾಡಿ ಬೆಳೆಯಿತು.

ಆ ಹೊಸ ಸೇತುವೆಯೇ ಪಡುಹಾಲಾಡಿಯ ಪ್ರಾಮುಖ್ಯತೆ ಕಡಿಮೆಯಾಗಲು ಮುಖ್ಯ ಕಾರಣ. ಶಾಲೆಗೆ ಹೋಗಲು ನಮಗಿದ್ದ ಮೂರು ದಾರಿಗಳ ಪೈಕಿ, ಮನೆ ಎದುರಿನ ಬೈಲಿನಲ್ಲಿ ಸಾಗುವ ದಾರಿಯೇ ಹೆಚ್ಚು ಜನಪ್ರಿಯ. ಆದರೆ, ಮಳೆಗಾಲದಲ್ಲಿ ನೆರೆ ಸುರಿದಾಗ, ಆ ಬೈಲಿನ ಪೂರ್ವ ದಿಕ್ಕಿನುದ್ದಕ್ಕೂ ಸಾಗಿದ್ದ ತೋಡಿನಲ್ಲಿ ಕೆಂಪನೆಯ ನೀರು ಉಕ್ಕಿಬಂದು, ಬೈಲು ಮತ್ತು
ತೋಡು ಒಂದಾಗುತ್ತಿದ್ದವು. ನಡೆಯುವ ಗದ್ದೆಯ ಅಂಚು ಕಾಣಿಸದಂತೆ, ಅದರ ಮೇಲೆ ಒಂದಡಿ ಕೆಂಪನೆಯ ನೀರು!

ಪ್ರತಿದಿನ ಅಲ್ಲಿ ನಡೆದ ದಾಜಿನ ಮೇಲೆ, ನೀರಿನಲ್ಲಿ ಮುಳುಗಿದ ಆ ಗದ್ದೆಯಂಚಿನ ಮೇಲೆ ನಡೆಯುವ ಅನುಭವ ರೋಚಕ, ತುಸು ಅಪಾಯಕಾರಿ ಸಹ. ಈ ರೀತಿ ನೀರಿನಲ್ಲಿ ಮುಳುಗಿದ್ದ, ಅಗಲಕಿರಿದಾದ ದಾರಿಯ ಮೆಲೆ ನಡೆಯಬೇಕಾಗಿದ್ದುದು ಕೇವಲ
ನೂರಿನ್ನೂರು ಮೀಟರ್ ಮಾತ್ರ. ಅಂತಹ ಅಪಾಯಕಾರಿ ದಾರಿಯಲ್ಲಿ ನಮ್ಮ ಕೈ ಹಿಡಿದು ಮಾರ್ಗದರ್ಶನ ನೀಡಿ, ಕರೆದೊಯ್ಯುತ್ತಿದ್ದುದು ಶಾಲೆಯ ಜತೆಗಾರ ಸತ್ಯ ಭಟ್. ಹೋಗಲು ಮೂರು ದಾರಿಗಳ ಆಯ್ಕೆಯಿದ್ದ ಹಾಲಾಡಿ ಶಾಲೆಯಲ್ಲಿ ನಾನು ಮೂರು ವರ್ಷ ಓದಿದೆ.

ನಾರಾಯಣ ಪೈ ಎಂಬ ಮಹನೀಯರು ಮುಖ್ಯೋಪಾಧ್ಯಾಯರಾಗಿದ್ದ ಸಮಯದಲ್ಲಿ, ಏಳನೆಯ ತರಗತಿ ಪಾಸು ಮಾಡಿದೆ. ಅದಕ್ಕಾಗಿ ಐದು ಕಿ.ಮೀ. ದೂರದ ಶಂಕರನಾರಾಯಣಕ್ಕೆ ಹೋಗಿ, ಪಬ್ಲಿಕ್ ಪರೀಕ್ಷೆ ಬರೆದ ಅನುಭವವೂ ರೋಚಕ !

error: Content is protected !!