Friday, 26th July 2024

ಭಾರತಕ್ಕೆ ಸುಳ್ಳು ವ್ಯಾಖ್ಯಾನಗಳ ಸವಾಲುಗಳು

ವಿಶ್ಲೇಷಣೆ

ಗಣೇಶ್ ಭಟ್, ವಾರಣಾಸಿ

ಕರ್ನಾಟಕದಲ್ಲಿ ನಕಲಿ ವ್ಯಾಖ್ಯಾನಗಳನ್ನು ಹಿಮ್ಮೆಟ್ಟಿಸಲು ವಿಫಲವಾದುದು ಕೂಡ ಬಿಜೆಪಿ ಪಕ್ಷದ ಸೋಲಿಗೆ ಪ್ರಮುಖ ಕಾರಣ ವಾಗಿದೆ. ವಿಪಕ್ಷಗಳು ೪೦% ಸರಕಾರ, ಫೇ ಸೀಎಂ, ಗುಜರಾತ್ ನ ಅಮೂಲ್ ಸಂಸ್ಥೆಗೆ ಕರ್ನಾಟಕದ ನಂದಿನಿಯನ್ನು ಮಾರಲಾಗುತ್ತಿದೆ ಎಂದೆಲ್ಲಾ ಪ್ರಚಾರವನ್ನು ಮಾಡಿದವು.

ಕೆಲವು ತಿಂಗಳುಗಳ ಹಿಂದೆ ಇಂಡಿಯಾ ಟುಡೇ ಮಾಧ್ಯಮ ಸಮೂಹ ಸಂಸ್ಥೆಯು ನಡೆಸಿದ್ದ ಇಂಡಿಯಾ ಟುಡೇ ಕಾಂಕ್ಲೇವ್ ನಲ್ಲಿ ಭಾಗವಹಿಸಿದ್ದ ಯುನಿವರ್ಸಿಟಿ ಆಫ್ ಸಿಡ್ನಿಯ ಸೋಶಿಯಾಲಜಿ ವಿಭಾಗದಲ್ಲಿ ಅಸೋಸಿ ಯೇಟ್ ಪ್ರೊಫೆಸರ್ ಆಗಿರುವ ಸಾಲ್ವೆಟೋರ್ ಬ್ಯಾಬೊ ನೋಸ್ ಮಾತ ನಾಡುತ್ತಾ ‘ಕೆಲವು ವಿದೇಶೀ ಸಂಸ್ಥೆಗಳು ಭಾರತಕ್ಕೆ ಕಳಪೆ ಸೂಚ್ಯಂಕವನ್ನು ಕೊಡಲು ಭಾರತದ ಬುದ್ಧಿಜೀವಿಗಳು, ಅಕಾಡೆಮೀಶಿಯನ್ ಗಳು, ಆಕ್ಟಿವಿಸ್ಟ್ ಗಳು ಹಾಗೂ ಪತ್ರಕರ್ತರ ಒಂದು  ವರ್ಗ ಕಾರಣ’ ಎಂದು ಎಂದು ಹೇಳಿದ್ದರು.

ವಿದೇಶೀ ಸಂಸ್ಥೆಗಳು ಭಾರತದ ಅಂಕಿ ಅಂಶಗಳು ಹಾಗೂ ಮಾಹಿತಿಗಳನ್ನು ಭಾರತದ ಜೆಎನ್‌ಯು ಗಳಂತಹ ಯುನಿವರ್ಸಿಟಿಗಳ ಪ್ರೊಫೆಸರ್‌ಗಳು, ಎನ್‌ಜಿಓಗಳು ಅಥವಾ ಕೆಲವು ಪತ್ರಕರ್ತರಿಂದ ಸಂಗ್ರಹಿಸುತ್ತವೆ. ಪೂರ್ವ ಗ್ರಹ ಪೀಡಿತ ಮಾಹಿತಿಯ ಮೂಲಗಳು ಕೊಟ್ಟ ಆಯ್ದ ನಕಾರಾತ್ಮಕ ಅಂಕಿ ಅಂಶಗಳು, ಜಾಗತಿಕ ಸೂಚ್ಯಂಕಗಳು ರೂಪಿತ ವಾಗುವಾಗ ಪರಿಗಣಿಸಲ್ಪಟ್ಟು, ಸೂಚ್ಯಂಕಗಳಲ್ಲಿ ಭಾರತವು ಕೆಟ್ಟದಾಗಿ ಬಿಂಬಿಸಲ್ಪಡುತ್ತದೆ ಎಂದು ಅವರು ಹೇಳಿದ್ದರು. ಭಾರತದ ಬಗ್ಗೆ ವಿದೇಶೀ ಪತ್ರಿಕೆಗಳಲ್ಲಿ ನಕಾರಾತ್ಮಕವಾದ ಲೇಖನಗಳನ್ನು ಬರೆದು ಪ್ರಕಟಿಸುವವರಲ್ಲಿ ಹೆಚ್ಚಿನ ಲೇಖಕರು ಭಾರತೀಯರು ಅಥವಾ ಭಾರತೀಯ ಮೂಲದ ವ್ಯಕ್ತಿಗಳೇ.

ಭಾರತದ ವಿರುದ್ಧವಾಗಿ ನಕಲಿ ನರೇಟಿವ್ಸ್ (ವ್ಯಾಖ್ಯಾನಗಳನ್ನು) ಕಟ್ಟಿಕೊಡುವುದರಲ್ಲಿ ಇವರು ಪ್ರಮುಖ ಪಾತ್ರವನ್ನು ವಹಿಸು ತ್ತಾರೆ. ನರೇಂದ್ರ ಮೋದಿಯವರು ಗುಜರಾತ್ ಮುಖ್ಯ ಮಂತ್ರಿಯಾದ ನಂತರ ಸಂಭವಿಸಿದ ಗುಜರಾತ್ ಗಲಭೆಗಳಿಗೆ ಅವರನ್ನೇ ನೇರ ಹೊಣೆಯಾಗಿಸುವ ಎಲ್ಲ ಪ್ರಯತ್ನಗಳು ನಡೆದವು. ಸುಪ್ರೀಂಕೋರ್ಟ್ ನೇಮಿಸಿದ ವಿಶೇಷ ತನಿಖಾ ತಂಡ ಹಾಗೂ ಸ್ವತಃ ಸುಪ್ರೀಂ ಕೋರ್ಟ್ ಕೂಡ ಗುಜರಾತ್ ಗಲಭೆಯಲ್ಲಿ ಮೋದಿ ನಿರ್ದೋಷಿ ಎಂದು ಹೇಳಿದ್ದರೂ ಕೆಲವು ಬುದ್ಧಿ ಜೀವಿಗಳು, ರಾಜಕೀಯ ಪಕ್ಷಗಳು ಹಾಗೂ ಮಾಧ್ಯಮ ಮಂದಿಗಳು ಮೋದಿಯನ್ನು ಗುರಿ ಯಾಗಿಸುವುದನ್ನು ನಿಲ್ಲಿಸಿಲ್ಲ.

ಮೋದಿ ವಿರುದ್ಧವಾಗಿ ನಿರೂಪಿತವಾದ ವ್ಯಾಖ್ಯಾನವು ಎಷ್ಟು ಪರಿಣಾಮಕಾರಿಯಾಗಿತ್ತು ಎಂದ =ರೆ ಅದನ್ನು ನಂಬಿದ್ದ
ಅಮೆರಿಕಾವು ನರೇಂದ್ರ ಮೋದಿಯರು ಪ್ರಧಾನಿ ಗುವವರೆಗೂ ವೀಸಾವನ್ನು ನಿರಾಕರಿಸಿ ಅಮೆರಿಕಾ ಭೇಟಿಗೆ ಅವಕಾಶವನ್ನೇ ಕೊಟ್ಟಿರಲಿಲ್ಲ. ಗುಜರಾತ್ ದಂಗೆಯ ಪ್ರಕರಣದಲ್ಲಿ ಮೋದಿಯವರ ಹೆಸರನ್ನು ಎಳೆಯುವ ಪ್ರಯತ್ನಗಳು ಇಂದಿಗೂ ನಿಂತಿಲ್ಲ. ಈ ವರ್ಷದ ಆರಂಭದಲ್ಲಿ ಬಿಬಿಸಿಯು ಗುಜರಾತ್ ಗಲಭೆಯಲ್ಲಿ ಮೋದಿಯನ್ನು ಆರೋಪಿಯಾಗಿ ಚಿತ್ರಿಸುವ ಪ್ರಯತ್ನದ ಮುಂದುವರಿದ ಭಾಗವಾಗಿ ಇಂಡಿಯಾದ ಮೋದಿ ಕ್ವಶ್ಚನ್ ಹೆಸರಿನ ಡಾಕ್ಯುಮೆಂಟರಿ ಫಿಲ್ಮ್ ಅನ್ನು ಪ್ರಸಾರ ಮಾಡಿತ್ತು.

ನರೇಂದ್ರ ಮೋದಿಯವರು ಪ್ರಧಾನಿಯಾದ ನಂತರ ದೇಶಾದ್ಯಂತ ಅಸಹಿಷ್ಣುತೆಯ ವಾತಾವರಣವು ನಿರ್ಮಾಣವಾಗಿದೆ ಎನ್ನುವ ಚಿತ್ರಣವನ್ನು ಕಟ್ಟುವ ಭಾರೀ ಪ್ರಯತ್ನಗಳು ನಡೆದವು. ೨೦೧೫ ರಲ್ಲಿ ಉತ್ತರಪ್ರದೇಶದ ದಾದ್ರಿಯಲ್ಲಿ ಮೊಹಮ್ಮದ್ ಅಖ್ಲಾಖ್ ಹೆಸರಿನ ಇಸ್ಲಾಂ ಮತಕ್ಕೆ ಸೇರಿದ ವ್ಯಕ್ತಿಯ ಕೊಲೆ ನಡೆದುದನ್ನು ಆಧರಿಸಿ ದೇಶದಲ್ಲಿ ಬಹುಸಂಖ್ಯಾತ ಹಿಂದೂಗಳು ಅಲ್ಪಸಂಖ್ಯಾತರ ಮೇಲೆ ದಬ್ಬಾಳಿಕೆಯನ್ನು ನಡೆಸುತ್ತಿದ್ದಾರೆ ಎನ್ನುವ ಪ್ರಚಾರ ವನ್ನು ನಡೆಸಲಾಯಿತು.

ಭಾರತದಲ್ಲಿ ಅಸಹಿಷ್ಣುತೆಯ ವಾತಾವರಣವಿದೆ ಎಂದು ಆರೋಪಿಸಿ ಕೆಲವು ಸಾಹಿತಿಗಳು ಹಾಗೂ ಕಲಾವಿದರು ತಮಗೆ ಈ
ಹಿಂದೆ ಕೇಂದ್ರ ಸರಕಾರವು ನೀಡಿದ್ದ ಪ್ರಶಸ್ತಿಗಳನ್ನು ಹಿಂದಿರುಗಿಸುವ ಅವಾರ್ಡ್ ವಾಪ್ಸಿ ಚಳುವಳಿ ಆರಂಭವಾಯಿತು. ಪಂಡಿತ್ಜವಾಹರ್ ಲಾಲ್ ನೆಹರೂ ಅವರ ಸೊಸೆ ಹಾಗೂ ಇಂಗ್ಲಿಷ್ ಸಾಹಿತಿ ನಯನತಾರಾ ಸೆಹಗಲ್ ಭಾರತದ ವೈವಿಧ್ಯತೆ
ಮತ್ತು ಸಂವಾದದ ಸಂಸ್ಕೃತಿ ಈಗ ಕೆಟ್ಟ ಆಕ್ರಮಣ ವನ್ನೆದುರಿಸುತ್ತಿದೆ ಎಂದು ಆರೋಪಿಸಿ ತಮಗೆ ೧೯೮೫ ರಲ್ಲಿ ದೊರಕಿದ್ದ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸರಕಾರಕ್ಕೆ ವಾಪಾಸು ಮಾಡುವುದರೊಂದಿಗೆ ಪ್ರಶಸ್ತಿ ಹಿಂದಿರುಗಿಸುವ ಚಳುವಳಿ
ಆರಂಭವಾಯಿತು.

ಕನ್ನಡ ಸಾಹಿತಿಗಳಾದ ದೇವನೂರು ಮಹದೇವ, ಕುಂ. ವೀರಭದ್ರಪ್ಪ ಮೊದಲಾದವರೂ ಪ್ರಶಸ್ತಿ ಮರಳಿಸಿದವರ ಪಟ್ಟಿ ಯಲ್ಲಿದ್ದಾರೆ. ಖ್ಯಾತ ಬಾಲಿವುಡ್ ನಟ ಅಮೀರ್ ಖಾನ್ ದೇಶದಲ್ಲಿ ಅಸಹಿಷ್ಣುತೆಯ ವಾತಾವರಣವಿರುವುದರಿಂದ ದೇಶವನ್ನು ತೊರೆಯುವ ಮಾತುಗಳನ್ನೂ ಆಡಿದ್ದರು. ಶಾರುಖ್ ಖಾನ್ ಕೂಡ ದೇಶದಲ್ಲಿ ಅಸಹಿಷ್ಣುತೆ ಇದೆ ಎಂದು ಹೇಳಿದ್ದರು. ಈ ಎಲ್ಲಾ ಪ್ರಕರಣಗಳು ದೇಶ ವಿದೇಶಗಳ ಮಾಧ್ಯಮಗಳಲ್ಲಿ ಪ್ರಕಟವಾಗಿ ಭಾರತದಲ್ಲಿ ನರೇಂದ್ರ ಮೋದಿಯಿಂದಾಗಿ ಅಸಹಿಷ್ಣುತೆಯ ವಾತಾವರಣ ನಿರ್ಮಾಣ ಆಗಿದೆ ಎನ್ನುವ ಜಾಗತಿಕ ಅಭಿಪ್ರಾಯವನ್ನು ಮೂಡಿಸಿದವು.

ಈ ವರ್ಷದ ಮಾರ್ಚ್ ತಿಂಗಳಲ್ಲಿ ಲಂಡನ್‌ಗೆ ತೆರಳಿ ಅಲ್ಲಿನ ಇಂಡಿಯನ್ ಜರ್ನಲಿಸ್ಟ್ಸ್ ಅಸೋಸಿಯೇಶನ್ ಅನ್ನು ಉದ್ದೇಶಿಸಿ ಮಾತನಾಡಿದ್ದ ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ‘ಭಾರತದಲ್ಲಿ ಪ್ರಜಾಪ್ರಭುತ್ವವು ಕ್ರೂರ ಆಕ್ರಮಣವನ್ನು ಎದುರಿಸುತ್ತಿದೆ’ ಎಂದು ಆರೋಪಿಸಿದ್ದರು. ಮೋದಿ ಎನ್ನುವ ಉಪನಾಮವನ್ನು ಹೊಂದಿರುವ ಎಲ್ಲರೂ ಕಳ್ಳರಾಗಿದ್ದಾರೆ ಎನ್ನುವ ಅರ್ಥದಲ್ಲಿ ಮಾತನಾಡಿರುವುದರ ವಿರುದ್ಧ ಆ ಸಮುದಾಯದ ಕೆಲವು ವ್ಯಕ್ತಿಗಳು ಕೋರ್ಟಿನಲ್ಲಿ ರಾಹುಲ್ ಗಾಂಽಯ ಈ
ಹೇಳಿಕೆಯ ವಿರುದ್ಧ ಮಾನನಷ್ಟ ಮೊಕದ್ದಮೆಯನ್ನು ಹೂಡಿದ್ದರು. ಈ ಪ್ರಕರಣದಲ್ಲಿ ಗುಜರಾತಿನ ಕೋರ್ಟಿನಲ್ಲಿ ರಾಹುಲ ಗಾಂಧಿ ಅಪರಾಧಿತ್ವ ಸಾಬೀತಾಗಿ ಕೋರ್ಟ್ ಅವರಿಗೆ ಎರಡು ವರ್ಷಗಳ ಕಾಲದ ಜೈಲು ಶಿಕ್ಷೆಯನ್ನು ವಿಧಿಸಿತ್ತು.

ಭಾರತದ ಪಾರ್ಲಿಮೆಂಟಿನ ನಿಯಮಗಳ ಅನ್ವಯ ಕ್ರಿಮಿನಲ್ ಪ್ರಕರಣಗಳಲ್ಲಿ ಎರಡು ಅಥವಾ ಹೆಚ್ಚು ವರ್ಷಗಳ ಕಾಲದ ಜೈಲುಶಿಕ್ಷೆಗೆ ಗುರಿಯಾದ ಸಂಸದರ ಪಾರ್ಲಿಮೆಂಟ್ ಸದಸ್ಯತ್ವವು ರದ್ದಾಗುತ್ತದೆ. ಈ ಕಾನೂನಿನ ಪ್ರಕಾರ ಎರಡು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ರಾಹುಲ್ ಗಾಂಧಿಯವರ ಸದಸ್ಯತ್ವವು ಸಹಜವಾಗಿಯೇ ರದ್ದಾಯಿತು. ಈ ಪ್ರಕರಣವನ್ನು
ಹಿಡಿದುಕೊಂಡು ಇದೀಗ ರಾಹುಲ್ ಗಾಂಧಿಯವರನ್ನು ಬಲಿಪಶು ಎಂಬಂತೆ ಬಿಂಬಿಸಲಾಗುತ್ತಿದೆ.

ಅಲ್ ಜಝೀರಾ, ಬಿಬಿಸಿ, ನ್ಯೂಯಾರ್ಕ್ ಟೈಮ್ಸ್  ಮೊದಲಾದ ಮಾಧ್ಯಮಗಳು ರಾಹುಲ್ ಗಾಂಧಿಯವರ ಸದಸ್ಯತ್ವದ ರದ್ಧತಿಯಾದುದು ಭಾರತದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ನಡೆಯುತ್ತಿರುವ ಆಕ್ರಮಣ ಎಂಬಂತೆ ವರದಿ ಮಾಡಿದವು. ಅಮೆರಿಕನ್ ಸ್ಟೇಟ್ ಡಿಪಾರ್ಟ್‌ಮೆಂಟ್ ಹೇಳಿಕೆಯನ್ನು ಬಿಡುಗಡೆ ಮಾಡಿ ರಾಹುಲ್ ಗಾಂಧಿ ಸದಸ್ಯತ್ವದ ರದ್ದತಿ ಪ್ರಕರಣವನ್ನು ಗಮನಿಸುತ್ತಿದ್ದೇವೆ ಎಂದಿತು. ಆದರೂ ಚೌಕೀದಾರ್ ಚೋರ್ ಹೈ, ಆರ್‌ಎಸ್‌ಎಸ್ ಗಾಂಧೀಜಿಯನ್ನು ಹತ್ಯೆಗೈದಿದೆ ಎಂಬೆಲ್ಲಾ ರೀತಿಯ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡಿ ನಂತರ  ಕೋರ್ಟ್‌ಗಳ ಮುಂದೆ ಕ್ಷಮೆಯಾಚನೆ ಮಾಡುವುದು ರಾಹುಲ್ ಗಾಂಧಿಯವರ ಖಾಯಂ ಅಭ್ಯಾಸ ಎನ್ನುವುದು ಭಾರತೀಯರಿಗೆ ಗೊತ್ತಿದೆ.

ಕ್ರಿಮಿನಲ್ ಪ್ರಕರಣಗಳಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿ ಸಂಸತ್ ಸದಸ್ಯತ್ವವನ್ನು ಕಳೆದುಕೊಂಡವರಲ್ಲಿ ರಾಹುಲ್ ಮೊದಲಿಗರೇ ನಲ್ಲ. ಪ್ರಸ್ತುತ ಕೇಂದ್ರ ಸರಕಾರವು ಉದ್ಯಮಿಗಳ ಪರ ವಾಗಿದೆ, ಅದು ಸೂಟ್ ಬೂಟ್ ಕೀ ಸರ್ಕಾರ್ ಎಂದು ಲೇವಡಿ ಮಾಡುವುದು ರಾಹುಲ್ ಗಾಂಧಿ, ಅರವಿಂದ್ ಕೇಜ್ರೀವಾಲ್ ಸೇರಿದಂತೆ ವಿಪಕ್ಷಗಳ ಹವ್ಯಾಸವಾಗಿದೆ. ಸಕಾಲದಲ್ಲಿ ವಸೂಲಾ ಗದ ಸಾಲ ಗಳನ್ನು ಬ್ಯಾಂಕುಗಳು ಅನುತ್ಪಾದಿತ ಆಸ್ತಿಗಳು ಎಂದು ಗುರುತಿಸಿ ಅವುಗಳನ್ನು ಪ್ರತ್ಯೇಕವಾಗಿ ತೋರಿಸುತ್ತವೆ. ಈ ಪ್ರಕ್ರಿಯೆಯನ್ನು ರೈಟ್ ಆಫ್ ಎಂದು ಕರೆಯಲಾಗುತ್ತದೆ.

ಆದರೆ ರೈಟ್ ಆಫ್ ಎಂದು ತೋರಿಸಲ್ಪಟ್ಟ ಸಾಲಗಳಿಗೆ ವಸೂಲಾತಿಯಿಂದ ಯಾವುದೇ ರೀತಿಯ ವಿನಾಯಿತಿಯಿಲ್ಲ. ಆದರೆ ಕೆಲವು ರಾಜಕೀಯ ಪಕ್ಷಗಳು, ಎಡಪಂಥೀಯ ಬುದ್ಧಿಜೀವಿಗಳು ಹಾಗೂ ಕೆಲವು ಮಾಧ್ಯಮಗಳು ರೈಟ್ ಆಫ್ ಪ್ರಕ್ರಿಯೆಯನ್ನು
ಕೇಂದ್ರ ಸರಕಾರವು ಉದ್ಯಮಿಗಳ ಸಾಲ ಮನ್ನಾ ಮಾಡುತ್ತಿದೆ ಎಂಬಂತೆ ತಿರುಚಿ ಅಪಪ್ರಚಾರ ಮಾಡುತ್ತಿದ್ದಾರೆ. ಕೇಂದ್ರ ಸರಕಾರವು ಕೆಟ್ಟ ಸಾಲಗಳ ವಸೂಲಾತಿಗೆ ಇನ್ಸಾಲ್ವೆನ್ಸಿ ಆಂಡ್ ಬ್ಯಾಂಕ್ರಪ್ಟಸಿ ಕೋಡ್ ೨೦೧೬, -ಗುಟಿವ್ ಎಕನಾಮಿಕ್ ಅ-ಂ
ಡರ್ಸ್ ಆಕ್ಟ್ ೨೦೧೮ ರಂತಹ ಕಾನೂನುಗಳನ್ನು ರೂಪಿಸಿ ಕಳೆದ ೮ ವರ್ಷಗಳಲ್ಲಿ ೮.೬ ಲಕ್ಷ ಕೋಟಿ ರುಪಾಯಿಗಳಷ್ಟು ಕೆಟ್ಟ ಸಾಲಗಳನ್ನು ಸಾಲ ವಂಚಕರಿಂದ ವಸೂಲಿ ಮಾಡಿರುವುದನ್ನು ಇವ ಹೇಳುವುದಿಲ್ಲ.

ಅದಾನಿ ಸಮೂಹ ಸಂಸ್ಥೆಯ ಬಗ್ಗೆ ಹಿಂಡೆನ್ಬರ್ಗ್ ಎನ್ನುವ ಶಾರ್ಟ್ ಸೆಲ್ಲರ್ ಸಂಸ್ಥೆಯು ಬಿಡುಗಡೆ ಮಾಡಿದ ವರದಿಯು ಅದಾನಿ ಸಂಸ್ಥೆಗೆ ಭಾರೀ ಹಾನಿಯನ್ನುಂಟು ಮಾಡಿ ಸಂಸ್ಥೆಯ ಶೇರ್‌ಗಳ ಬೆಲೆಯು ನೆಲಕಚ್ಚುವಂತೆ ಮಾಡಿತ್ತು. ಕೇಂದ್ರ ಸರಕಾರವು ಅದಾನಿ, ಅಂಬಾನಿ ಸಂಸ್ಥೆಗಳಿಗೆ ಅನುಕೂಲ ಮಾಡಿಕೊಡುತ್ತಿದೆ ಎಂದು ಕಳೆದ ೫-೬ ವರ್ಷ ಗಳಿಂದ ಅಪಪ್ರಚಾರ ಮಾಡು ತ್ತಿರುವವರಿಗೆ ಹಿಂಡೆನ್ಬರ್ಗ್ ವರದಿ ಪ್ರಕರಣವು ಬಹಳ ಅನುಕೂಲಕರವಾಗಿ ಪರಿಣಮಿಸಿತು.

ವಿಪಕ್ಷಗಳು ಅದಾನಿ ಹಾಗೂ ನರೇಂದ್ರ ಮೋದಿ ಸರಕಾದ ಮೇಲೆ ಭಾರೀ ವಾಗ್ದಾಳಿಗಳು ನಡೆಸಿದವು, ಮಾಧ್ಯಮಗಳು ಈ
ಕುರಿತು ಪುಂಖಾನುಪುಂಖವಾಗಿ ವರದಿಗಳನ್ನು ಪ್ರಕಟಿಸಿದವು. ಕೊನೆಗೆ ಸುಪ್ರೀಂ ಕೋರ್ಟ್ ಮಧ್ಯ ಪ್ರವೇಶಿಸಿ ಸುಪ್ರೀಂ ಕೋರ್ಟ್ ನಿವೃತ್ತ ಜಡ್ಜ್ ಎಎಂಸಪ್ರೆ ನೇತೃತ್ವದಲ್ಲಿ ೬ ಜನರ ಸಮಿತಿಯನ್ನು ರಚಿಸಿ ಅದಾನಿ-ಹಿಂಡೆನ್ಬರ್ಗ್ ಪ್ರಕರಣದ ಕುರಿತು ತನಿಖೆ ನಡೆಸಿ ೨ ತಿಂಗಳುಗಳ ಒಳಗೆ ವರದಿಯನ್ನು ಸಲ್ಲಿಸಲು ಆದೇಶಿಸಿತು.

ಇತ್ತೀಚೆಗೆ ಸಮಿತಿಯು ಸುಪ್ರೀಂ ಕೋರ್ಟಿಗೆ ಸಲ್ಲಿಸಿರುವ ವರದಿಯಲ್ಲಿ ಅದಾನಿ ಸಂಸ್ಥೆಯು ಸ್ಟಾಕ್‌ಗಳ ಬೆಲೆ ನಿಗದಿಯಲ್ಲಿ ಹಸ್ತಕ್ಷೇಪ ಮಾಡಿಲ್ಲ ಎಂದು ವರದಿಯನ್ನು ಕೊಟ್ಟಿರುವ ಹಿನ್ನೆಲೆಯಲ್ಲಿ ಪುನಃ ಅದಾನಿ ಕಂಪೆನಿಗಳ ಶೇರುಗಳ ಬೆಲೆ ಏರುತ್ತಿದೆ. ಆದರೆ ಮೋದಿ ಸರಕಾರವನ್ನು ವಿರೋಧಿಸುವ ಭರದಲ್ಲಿ ರಾಜಕೀಯ ಪಕ್ಷಗಳು ಹಾಗೂ ಮಾಧ್ಯಮಗಳು ಅದಾನಿ ಸಂಸ್ಥೆಯ ಕುರಿತಾಗಿ ಉತ್ಪ್ರೇಕ್ಷಿ ವರದಿಯನ್ನು ಮಾಡಿದುದರ ಪರಿಣಾಮವಾಗಿ ಹೂಡಿಕೆದಾರರು ಸುಮಾರು ೮.೨ ಲಕ್ಷ ಕೋಟಿ
ರುಪಾಯಿಗಳ ಹಣವನ್ನು ಕಳೆದುಕೊಳ್ಳುವಂತೆ ಆದದ್ದು ಸತ್ಯ.

ರೈತರನ್ನು ಎಪಿಎಂಸಿ ಮಧ್ಯವರ್ತಿಗಳ ಶೋಷಣೆಯಿಂದ ಮುಕ್ತಗೊಳಿಸಿ ಅವರಿಗೆ ಮುಕ್ತ ಮಾರುಕಟ್ಟೆಯನ್ನು ಒದಗಿಸುವ ದೃಷ್ಟಿಯಿಂದ ಕೇಂದ್ರ ಸರಕಾರವು ಹೊಸ ರೈತರ ಕಾಯಿದೆಗಳನ್ನು ಜಾರಿಗೆ ತಂದಿತು. ಆದರೆ ಈ ರೈತರ ಕಾಯಿದೆಗಳ ಬಗ್ಗೆ
ಭಾರೀ ಅಪಪ್ರಚಾರಗಳು ನಡೆದು ದೆಹಲಿಯ ಗಡಿ ಗಳಲ್ಲಿ ಪಂಜಾಬ್ ಹಾಗೂ ಹರಿಯಾಣಗಳ ರೈತರು ತಿಂಗಳುಗಟ್ಟಲೆ ಪ್ರತಿಭಟನೆಗಳನ್ನು ನಡೆಸಿದರು.

ಅಮೆರಿಕಾದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ರ ಸಹೋದರಿಯ ಮಗಳಾದ ಮೀನಾ ಹ್ಯಾರಿಸ್, ಖ್ಯಾತ ಹಾಡುಗಾರ್ತಿ ರಿಯಾನ್ನ, ಪರಿಸರ ಹೋರಾಟಗಾರ್ತಿ ಗ್ರೆಟ್ಟಾ ಥನ್ಬರ್ಗ್ ಮೊದಲಾದವರು ಹಾಗೂ ಭಾರತದ ವಿಪಕ್ಷಗಳು ಹೋರಾಟನಿರತ
ರೈತರಿಗೆ ಬೆಂಬಲವಾಗಿ ನಿಂತರು. ಇವರೆಲ್ಲ ಸೇರಿ ನರೇಂದ್ರ ಮೋದಿ ಸರಕಾರವು ರೈತವಿರೋಧಿಯಾಗಿದೆ ಎಂದು ಬಿಂಬಿಸುವಲ್ಲಿ ಸಫಲವಾದರು.

ಕೊನೆಗೆ ಕೇಂದ್ರ ಸರಕಾರವು ಹೊಸ ರೈತರ ಕಾಯ್ದೆ ಯನ್ನು ಹಿಂತೆಗೆದುಕೊಳ್ಳಬೇಕಾಯಿತು. ಇದರ ಪರಿಣಾಮವಾಗಿ ಕೃಷಿ ಮಾರುಕಟ್ಟೆಯು ಮಧ್ಯ ವರ್ತಿಗಳ ವಶದಲ್ಲೇ ಉಳಿಯಿತು ಹಾಗೂ ರೈತರ ಶೋಷಣೆ ಮುಂದುವರಿಯಿತು. ಕರ್ನಾಟಕದಲ್ಲಿ ನಕಲಿ ವ್ಯಾಖ್ಯಾನಗಳನ್ನು ಹಿಮ್ಮೆ ಟ್ಟಿಸಲು ವಿಫಲವಾದುದು ಕೂಡ ಬಿಜೆಪಿ ಪಕ್ಷದ ಸೋಲಿಗೆ ಪ್ರಮುಖ ಕಾರಣವಾಗಿದೆ.

ವಿಪಕ್ಷಗಳು ೪೦% ಸರಕಾರ, ಫೇ ಸೀಎಂ, ಗುಜರಾತ್ ನ ಅಮೂಲ್ ಸಂಸ್ಥೆಗೆ ಕರ್ನಾಟಕದ ನಂದಿನಿಯನ್ನು ಮಾರಲಾಗು ತ್ತಿದೆ ಎಂದೆಲ್ಲಾ ಪ್ರಚಾರವನ್ನು ಮಾಡಿದವು. ಈ ಆರೋಪಗಳಿಗೆ ಯಾವುದೇ ಆಧಾರಗಳಿಲ್ಲದೇ ಇದ್ದರೂ ಒಂದಷ್ಟು ಜನರು ಈ ಪ್ರಚಾರವನ್ನು ಸತ್ಯವೆಂದೇ ನಂಬಿದರು. ಈ ಪ್ರಚಾರದ ಹಿಂದೆ ರಾಜಕೀಯ ಪಕ್ಷಗಳಲ್ಲದೆ, ದೇವನೂರು ಮಹದೇವ, ಪುರುಷೋತ್ತಮ ಬಿಳಿಮಲೆ ಮೊದಲಾದ ಸಾಹಿತಿಗಳು, ಕೆಲವು ಚರ್ಚ್‌ಗಳು ಸಕ್ರಿಯವಾಗಿ ದುಡಿದವು.

ಕರ್ನಾಟಕದಲ್ಲಿರುವ ಫ್ಯಾಸಿಸ್ಟ್ ಸರಕಾರವನ್ನು ಉರುಳಿಸಬೇಕೆಂಬ ನೆಲೆಯಲ್ಲಿ ಎದ್ದೇಳು ಕರ್ನಾಟಕ ಹೆಸರಿನಲ್ಲಿ ಟೂಲ್ ಕಿಟ್‌ಗಳು ರೂಪು ಗೊಂಡು ಜನರ ನಡುವೆ ಹರಡಲ್ಪಟ್ಟವು. ಮತದಾರರ ಮೇಲೆ ಈ ಟೂಲ್ ಕಿಟ್‌ಗಳು ಸೃಷ್ಟಿಸಿದ ನರೇಟಿವ್‌ ಗಳು ಪ್ರಭಾವವನ್ನು ಬೀರಿದವು. ಉತ್ತರ ಭಾರತ ವರ್ಸಸ್ ದಕ್ಷಿಣ ಭಾರತ, ಹಿಂದೀ ಭಾಷಿಕರು ವರ್ಸಸ್ ದ್ರಾವಿಡ ಭಾಷಿಕರು,
ಆರ್ಯರು-ದ್ರಾವಿಡರು, ಮನುವಾದವನ್ನು ಹೇರಿಕೆ ಮಾಡಲಾಗುತ್ತಿದೆ, ಸಿಎಎ ಹಾಗೂ ಎನ್ ಆರ್‌ಸಿಗಳು ಮುಸ್ಲಿಮರ ವಿರುದ್ಧ ವಾಗಿವೆ, ಜಮ್ಮು ಕಾಶ್ಮೀರದಲ್ಲಿ ಆರ್ಟಿಕಲ್ ೩೭೦ ನ್ನು ರದ್ದುಗೊಳಿಸಿ ರುವುದು ಅಲ್ಲಿನ ಮುಸ್ಲಿಮರ ಹಕ್ಕುಗಳ ದಮನ,
ಸರಕಾರದ ಸಂಸ್ಥೆಗಳನ್ನು ಖಾಸಗಿಯವರಿಗೆ ಮಾರಲಾಗುತ್ತಿದೆ ಎಂದು ಪ್ರಚಾರ ಮಾಡಿ ಭಾರತೀಯರ ಮಧ್ಯೆ ಭೇದಭಾವ ಮೂಡುವಂತೆ ವ್ಯಾಖ್ಯಾನ ಗಳನ್ನು ರೂಪಿಸಲಾಗುತ್ತಿದೆ.

ದಕ್ಷಿಣದ ಭಾರತದ ರಾಜ್ಯಗಳನ್ನು ಭಾರತದ ಒಕ್ಕೂಟದಿಂದ ಪ್ರತ್ಯೇಕಿಸುವ ಮಾತುಗಳನ್ನು ಅಲ್ಲಲ್ಲಿ ತೇಲಿಬಿಡಲಾಗುತ್ತಿದೆ.
ಕ್ಷಣಿಕದ ರಾಜಕೀಯ ಲಾಭಗಳಿಗೋಸ್ಕರ ರಾಜಕೀಯ ಪಕ್ಷಗಳು ದೇಶಭಂಜನೆಯ ಹಾಗೂ ದೇಶ ವಿರೋಧಿ ಕೆಲಸಗಳಲ್ಲಿ ತೊಡಗಿಕೊಂಡಿವೆ. ಹೀಗಾಗಿ ಪ್ರಜ್ಞಾವಂತ ಜನರು ಕೂಡಲೇ ಎಚ್ಚೆತ್ತುಕೊಂಡು, ಸಂಘಟಿತರಾಗಿ, ಸುಳ್ಳು ವ್ಯಾಖ್ಯಾನಗಳನ್ನು ಬಯಲು ಮಾಡುವ ಕೆಲಸವನ್ನು ಮಾಡಬೇಕಾಗಿದೆ.

error: Content is protected !!