Wednesday, 29th May 2024

ರಾಜ್ಯದಲ್ಲೂ ಬೀಸೀತೇ ಪರ್ಯಾಯ ಪಕ್ಷದ ಗಾಳಿ ?

ಅಶ್ವತ್ಥಕಟ್ಟೆ

ರಂಜಿತ್ ಎಚ್.ಅಶ್ವತ್ಥ

ranjith.hoskere@gmail.com

ದಕ್ಷಿಣ ಭಾರತದ ಪ್ರಮುಖ ರಾಜ್ಯಗಳಲ್ಲಿ ಒಂದಾಗಿರುವ ಕರ್ನಾಟಕದಲ್ಲಿ ಈಗಾಗಲೇ ಚುನಾವಣಾ ಕಾವು ದಿನದಿಂದ ದಿನಕ್ಕೆ ಏರುತ್ತಲೇ ಇದೆ.

ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್-ಮೂರೂ ಪಕ್ಷಗಳು, ತಾವೇ ಈ ಬಾರಿಯ ಅಽಕಾರದ ಗದ್ದುಗೆ ಏರುವುದು ಎನ್ನುವ ಮಾತನ್ನು ಗಟ್ಟಿ ಧ್ವನಿಯಲ್ಲಿ ಹೇಳಿಕೊಂಡು ಓಡಾಡುತ್ತಿವೆ. ಆದರೆ ಇವುಗಳ ನಡುವೆಯೇ ‘ಪರ್ಯಾಯ ರಾಜಕೀಯ ಪಕ್ಷ’ದ ಮಾತೂ ಕೇಳಿಬರುತ್ತಿವೆ. ರಾಜ್ಯ ದಲ್ಲಿ ಇಂಥ ಪಯಯ ವ್ಯವಸ್ಥೆಯ ಧ್ವನಿ ಎದ್ದಿರುವುದು ಇದೇ ಮೊದಲಲ್ಲ. ಕರ್ನಾಟಕ ರಾಜಕೀಯ ಇತಿಹಾಸದಲ್ಲಿ ರಾಷ್ಟ್ರೀಯ ಪಕ್ಷಗಳೇ ಪಾರುಪತ್ಯ ಮೆರೆದಿದ್ದರೂ, ಸ್ಥಳೀಯ ಪರ್ಯಾಯ ಪಕ್ಷಗಳ ಸದ್ದು ಸಹ ಆಗ್ಗಾಗೆ ಕೇಳಿ ಬಂದಿದೆ.

ಅದು ಬಂಗಾರಪ್ಪ ಅವರದ್ದಾಗಿರಬಹುದು, ಸಿದ್ದರಾಮಯ್ಯ ಅವರ ಅಹಿಂದವಾಗಿರ ಬಹುದು, ಇಲ್ಲವೇ ತೀರಾ ಇತ್ತೀಚಿಗೆ ಹೇಳುವುದಾದರೆ, ಯಡಿಯೂರಪ್ಪ ಅವರ ಕೆ.ಜೆ.ಪಿ, ಶ್ರೀರಾಮುಲು ಅವರ ಬಿಎಸ್‌ಆರ್ ಕಾಂಗ್ರೆಸ್ ಇರಬಹುದು. ಈ ಎಲ್ಲ ಪಕ್ಷಗಳು ಬರುವಾಗ ದೊಡ್ಡ ಸದ್ದಿನೊಂದಿಗೆ, ಭಾರೀ ಜನ ಬೆಂಬಲವಿದೆ ಎನ್ನುವ ಹುರುಪಿನಲ್ಲಿಯೇ ಬಂದವು.

ಆದರೆ ಚುನಾವಣಾ ಸಮಯದ ವೇಳೆಗೆ ಮಾತ್ರ, ಯಥಪ್ರಕಾರ ರಾಷ್ಟ್ರೀಯ ಪಕ್ಷಗಳೇ ಮೇಲುಗೈ ಸಾಧಿಸಿದ್ದವು. ಇದರಲ್ಲಿ ಯಡಿಯೂರಪ್ಪ ಅವರ ಕೆಜೆಪಿ ಒಂದು ಹಂತಕ್ಕೆ ಬಿಜೆಪಿಯನ್ನು ಅಧಿಕಾರದಿಂದ ದೂರಾಗುವಂತೆ ನೋಡಿಕೊಂಡಿದ್ದು ಬಿಟ್ಟರೆ ಇನ್ನುಳಿದ ಎಲ್ಲ ಪಕ್ಷಗಳು, ‘ಹೇಳಿಕೊಳ್ಳುವ’ ಸಾಧನೆ ಏನು ಮಾಡಲಿಲ್ಲ. ಹಾಗೇ ನೋಡಿದರೆ ದಕ್ಷಿಣ ಭಾರತದಲ್ಲಿ ರಾಷ್ಟ್ರೀಯ ಪಕ್ಷಗಳಿಗಿಂತ ಪ್ರಾದೇಶಿಕ ಪಕ್ಷಗಳು ಅಧಿಕಾರ ನಡೆಸುವುದೇ ಹೆಚ್ಚು. ಕರ್ನಾಟಕದಲ್ಲಿ ಮಾತ್ರ ಇದಕ್ಕೆ ವಿರುದ್ಧ ಎನ್ನುವಂತೆ, ಪ್ರಾದೇಶಿಕ ಪಕ್ಷವಾಗಿರುವ ಜೆಡಿಎಸ್ ಇದ್ದರೂ ಜನ ಮಾತ್ರ ಬಿಜೆಪಿ ಅಥವಾ ಕಾಂಗ್ರೆಸ್‌ಗೆ ಹೆಚ್ಚು ಪ್ರಾಶಸ್ತ್ಯ ನೀಡುತ್ತಿರುವುದು ಚುನಾವಣಾ ಫಲಿತಾಂಶಗಳಲ್ಲಿ ಸ್ಪಷ್ಟವಾಗಿ ಕಾಣಬಹುದು.

ಪ್ರಾದೇಶಿಕ ಪಕ್ಷವಾಗಿ ಜೆಡಿಎಸ್ ಅನ್ನು ಒಪ್ಪಿಕೊಂಡಿದ್ದರೂ, ಸ್ವಂತ ಬಲದ ಮೇಲೆ ಅಽಕಾರಕ್ಕೆ ಬಾರದೇ ಇರುವುದಕ್ಕೂ ಆ ಪಕ್ಷದಲ್ಲಿರುವ ಕುಟುಂಬ ಪ್ರೇಮವೇ ಕಾರಣ. ಇದರೊಂದಿಗೆ ಆ ಕ್ಷಣಕ್ಕೆ ತಕ್ಕಂತೆ ಪಕ್ಷದ ವರಿಷ್ಠರಾದ ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರು ಮಾಡಿಕೊಳ್ಳುವ ‘ಹೊಂದಾಣಿಕೆ’ ರಾಜಕೀಯ ಮತ್ತೊಂದು ಕಾರಣ. ರಾಷ್ಟ್ರೀಯ ಪಕ್ಷಗಳು ಕರ್ನಾಟಕದಲ್ಲಿ ಇರುವಷ್ಟು ದಿನ ರಾಜ್ಯದ ನೆಲ, ಜಲ ಸಮಸ್ಯೆಗಳಿಗೆ ಸಂಬಂಽಸಿದಂತೆ ತಾರ್ತಿಕ ತೀರ್ಮಾನಕ್ಕೆ ಬರುವುದು ಕಷ್ಟವಾಗಬಹುದು. ಆದ್ದರಿಂದ ರಾಜ್ಯದ ಹಿತದೃಷ್ಟಿಯಿಂದ, ಪ್ರಾದೇಶಿಕ ಪಕ್ಷ ಅಥವಾ ಪ್ರಾದೇಶಿಕ ಚಿಂತನೆಗಳನ್ನೇ ಅಸವನ್ನಾಗಿಸಿಕೊಳ್ಳುವ ಪಕ್ಷದ ಅಗತ್ಯ ಇದೆ. ಈ ಮಾತುಗಳನ್ನು  ಜನಸಾಮಾನ್ಯ ರು ಆಡುತ್ತಿದ್ದಾರೆ.

ಆದರೆ ಅಂತಹ ಗಟ್ಟಿಯಾಗಿ ನಿಲ್ಲುವ ಪಕ್ಷ ಯಾವುದು ಎನ್ನುವ ಪ್ರಶ್ನೆ ಬಂದಾಗ, ಉತ್ತರವಿಲ್ಲದೇ ಅನಿವಾರ್ಯವಾಗಿ ರಾಷ್ಟ್ರೀಯ ಪಕ್ಷಗಳ ಮೊರೆ ಹೋಗಬೇಕಾದ ಸ್ಥಿತಿಯಿದೆ. ಪ್ರಾದೇಶಿಕ ಪಕ್ಷವಾಗಿ ಜೆಡಿಎಸ್ ಇದ್ದರೂ, ಹಳೇ ಮೈಸೂರು ಭಾಗದ ಹೊರತಾಗಿ ಪಕ್ಷ ಸಂಘಟನೆಗೆ ಪಕ್ಷದ ವರಿಷ್ಠರೇ ಹೆಚ್ಚು ಆಸಕ್ತಿ ತೋರುವುದಿಲ್ಲ. ಬಹುತೇಕ ಸಮಯದಲ್ಲಿ ಸ್ವಂತ ಬಲದ ಮೇಲೆ ಅಧಿಕಾರ ಬರುವ ಯೋಜನೆಗಿಂತ
ಹೆಚ್ಚಾಗಿ ‘ಕಿಂಗ್ ಮೇಕರ್’ ಆಗಿರಬೇಕು ಎನ್ನುವ ಆಲೋಚನೆಯೇ ಆ ಪಕ್ಷವನ್ನು ಜನರ ಬಳಿಗೆ ತಗೆದುಕೊಂಡು ಹೋಗುವುದಕ್ಕೆ ಬಿಡುತ್ತಿಲ್ಲ ಎಂದರೆ ತಪ್ಪಾಗುವುದಿಲ್ಲ.

ಇಂತಹ ಸಂದಿಗ್ಧ ಸಮಯದಲ್ಲಿ ಕರ್ನಾಟಕ ಮತ್ತೊಂದು ವಿಧಾನಸಭಾ ಚುನಾವಣೆಗೆ ಸಿದ್ಧವಾಗುತ್ತಿದೆ. ಬಿಜೆಪಿಗೆ ಅಧಿಕಾರ ಉಳಿಸಿ ಕೊಳ್ಳುವ ಒತ್ತಡವಿದ್ದರೆ, ಕಾಂಗ್ರೆಸ್‌ಗೆ ಇರುವ ಒಂದು ರಾಜ್ಯವನ್ನಾದರೂ ಉಳಿಸಿಕೊಂಡು ಹೋಗುವ ಅನಿವಾರ್ಯವಿದೆ. ಎರಡೂ ಪಕ್ಷಗಳು ಈಗಾಗಲೇ ರಾಜ್ಯದ ಜನರನ್ನು ಒಲಿಸಿಕೊಳ್ಳಲು ಸಾಲು ಸಾಲು ಭರವಸೆಗಳನ್ನು ನೀಡಲು ಆರಂಭಿಸಿವೆ. ಆದರೆ, ಈ ಎಲ್ಲ ಸರ್ಕಸ್‌ಗಳ ನಡುವೆ ರಾಜ್ಯದಲ್ಲಿ ಪುನಃ ‘ಪರ್ಯಾಯ ಪಕ್ಷ’ದ ಕೂಗು ಶುರುವಾಗಿದೆ. ಅದರಲ್ಲಿಯೂ ಪಂಚ ರಾಜ್ಯ ಚುನಾವಣಾ ಫಲಿತಾಂಶದಲ್ಲಿ ಪಂಜಾಬ್‌ನಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಯನ್ನು ಮೀರಿ, ಅಧಿಕಾರದ ಗದ್ದುಗೆಗೆ ಆಮ್ ಆದ್ಮಿ ಪಕ್ಷ ಏರುತ್ತಿದ್ದಂತೆ, ಕರ್ನಾಟಕದಲ್ಲಿಯೂ ಇಂತಹ ಚಮತ್ಕಾರ ನಡೆಯಬಾರದೇಕೆ ಎನ್ನುವ ಮಾತುಗಳು ಶುರುವಾಗಿವೆ.

ಹಾಗೇ ನೋಡಿದರೆ, ದೆಹಲಿಯಿಂದ ಚುನಾವಣಾ ರಾಜಕೀಯ ಆರಂಭಿಸಿದ ಆಪ್ ಇದೀಗ, ಪಂಜಾಬ್ ನಲ್ಲಿ ಸ್ವತಂತ್ರವಾಗಿ ಅಧಿಕಾರಕ್ಕೆ ಬಂದಿದೆ. ಇದರೊಂದಿಗೆ ಗೋವಾ, ಜಾರ್ಖಂಡ್ ಸೇರಿದಂತೆ ಕೆಲ ರಾಜ್ಯಗಳಲ್ಲಿ ತಮ್ಮ ಸಂಘಟನೆಯನ್ನು ಹಂತಹಂತವಾಗಿ ಹೆಚ್ಚಿಸಿ ಕೊಳ್ಳುತ್ತಿದೆ. ಇದೇ ರೀತಿ ಕರ್ನಾಟಕದಲ್ಲಿಯೂ ಆಪ್ ಪರ್ಯಾಯ ಪಕ್ಷವಾಗಿ ಹೊರಹೊಮ್ಮುವುದಕ್ಕೆ ಬೇಕಾದ ತಯಾರಿಯನ್ನು
ಆರಂಭಿಸಿದೆ. ಅದರಲ್ಲಿಯೂ ಬಿಬಿಎಂಪಿ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ಈಗಾಗಲೇ ಬೆಂಗಳೂರಿನ 28 ಕ್ಷೇತ್ರದಲ್ಲಿ ಸಂಘಟನೆ ಬಲವನ್ನು ಹೊಂದಿದೆ. ಈ ಬಲ ಚುನಾವಣೆಯಲ್ಲಿ ಗೆಲ್ಲುವ ತನಕ ತಗೆದುಕೊಂಡು ಹೋಗುವುದೇ ಇಲ್ಲವೇ ಎನ್ನುವ ಬಗ್ಗೆ ಸ್ಪಷ್ಟತೆಯಿಲ್ಲ.

ಆದರೆ ಒಂದು ಹಂತಕ್ಕೆ ಕಾಂಗ್ರೆಸ್-ಬಿಜೆಪಿಗೆ ಪ್ರತಿಸ್ಪರ್ಧೆ ನೀಡಬಹುದು ಎನ್ನುವ ಆಶಾಭಾವನೆಯನ್ನು ಹುಟ್ಟಿಸಿರುವುದಂತೂ ಸತ್ಯ.
ಕರ್ನಾಟಕದಲ್ಲಿ ಆಪ್‌ಗೆ ಇರುವ ಬಹುದೊಡ್ಡ ಸಮಸ್ಯೆಯೆಂದರೆ ‘ಪಕ್ಷದ ಫೇಸ್’. ಯಾವ ನಾಯಕನನ್ನು ಮುಂದಿಟ್ಟುಕೊಂಡು ಮತ ಕೇಳಲು ಜನರ ಬಳಿ ಹೋಗುತ್ತಾರೆ ಎನ್ನುವುದು ಬಹುದೊಡ್ಡ ಪ್ರಶ್ನೆ. ಬೆಂಗಳೂರಿನ ಪೊಲೀಸ್ ಆಯುಕ್ತರಾಗಿ ಸೇವೆ ಸಲ್ಲಿಸಿದ್ದ ಭಾಸ್ಕರ್ ರಾವ್ ಅವರು ಕೆಲ ದಿನಗಳ ಹಿಂದೆ ಆಪ್ ಸೇರ್ಪಡೆಯಾಗಿದ್ದಾರೆ. ಆದರೆ ಅವರು ಪಕ್ಷದ ಸ್ಟಾರ್ ನಾಯಕರಾಗುವರೇ ಎನ್ನುವ ಖಾತ್ರಿಯಿಲ್ಲ. ಭಾಸ್ಕರ್ ರಾವ್ ಅವರು ಬೆಂಗಳೂರಿನವರೇ ಆಗಿದ್ದು, ಐಪಿಎಸ್ ಅಧಿಕಾರಿಯಾಗಿಯೂ ರಾಜ್ಯದಲ್ಲಿ ಉತ್ತಮ ಹೆಸರನ್ನು ಹೊಂದಿದ್ದಾರೆ.

ಅಧಿಕಾರಿಯಾಗಿ ಭಾಸ್ಕರ್ ರಾವ್ ಅವರು ಯಶಸ್ವಿಯಾಗಿರಬಹುದು. ಆದರೆ ರಾಜಕೀಯಕ್ಕೆ ಬಂದಾಗ, ಇಲ್ಲಿ ಎದುರಾಗುವ ಸವಾಲು ಗಳನ್ನು ಎದುರಿಸಲು ಸಕಲ ತಯಾರಿ ಮಾಡಿಕೊಂಡಿದ್ದಾರೆಯೇ? ಭ್ರಷ್ಟಾಚಾರದ ವಿರುದ್ಧ ಗಟ್ಟಿ ಧ್ವನಿ ಯಲ್ಲಿ ಮಾತನಾಡುವ ‘ಕ್ಲೀನ್ ಇಮೇಜ್’ಯಿರುವ ಭಾಸ್ಕರ್ ಅವರ ಆ ಒಂದು ವ್ಯಕ್ವಿತ್ವವೇ, ಇಡೀ ರಾಜ್ಯದಲ್ಲಿ ಆಪ್ ಪರ ಅಲೆ ಏಳುವಂತೆ ಮಾಡಲು ಸಾಧ್ಯವೆಂದು ಹೇಳುವುದು ಕಷ್ಟಸಾಧ್ಯ.

ಇನ್ನು ಆಪ್ ಕಾರ್ಯಕರ್ತರು ದೆಹಲಿ ಹಾಗೂ ಪಂಜಾಬ್ ನಲ್ಲಿ ಗೆಲುವು ಸಾಧಿಸಿದಷ್ಟೇ ಸುಲಭದಲ್ಲಿ ಕರ್ನಾಟಕದಲ್ಲೂ ಖಾತೆ ತೆರೆಯ ಬಹುದು ಎನ್ನುವ ಲೆಕ್ಕಾಚಾರದಲ್ಲಿದ್ದಾರೆ. ಈ ಎರಡು ರಾಜ್ಯಗಳ ರೀತಿಯಲ್ಲಿಯೇ, ಕರ್ನಾಟಕದಲ್ಲಿಯೂ ಪರ್ಯಾಯ ಪಕ್ಷದ ಮಾತುಗಳು ಕೇಳಿಬರುತ್ತಿದ್ದರೂ ಆ ಎರಡು ರಾಜ್ಯಗಳಿಗೂ ಕರ್ನಾಟಕಕ್ಕೂ ಅಜಗಜಾಂತರವಿದೆ ಎನ್ನುವುದನ್ನು ಮರೆಯುವಂತಿಲ್ಲ. ಅರವಿಂದ ಕೇಜ್ರಿವಾಲ್ ಅವರು ದೆಹಲಿಯಲ್ಲಿ ಉತ್ತಮ ಆಡಳಿತ ನೀಡುತ್ತಿದ್ದಾರೆ. ಆದರೆ ದೆಹಲಿಯಲ್ಲಿ ನೀಡುವ ಉಚಿತ ಶಿಕ್ಷಣ, ಸಾರಿಗೆ, ಆರೋಗ್ಯದ ಮಾದರಿಯಲ್ಲಿಯೇ ಕರ್ನಾಟಕದಲ್ಲಿಯೂ ನೀಡಲು ಸಾಧ್ಯವೇ? ದೆಹಲಿ ಪುಟ್ಟ ರಾಜ್ಯ.

ಇದರೊಂದಿಗೆ ಅಲ್ಲಿಗೆ ಕೇಂದ್ರ ಸರಕಾರದ ಶ್ರೀ ರಕ್ಷೆ ಸದಾ ಇರುತ್ತದೆ. ಆದ್ದರಿಂದ ರಾಜ್ಯ ಸರಕಾರವೇ ಪೂರ್ಣ ಜವಾಬ್ದಾರಿ ಹೋರ ಬೇಕಾದ ಅನಿವಾರ್ಯ ಇರುವುದಿಲ್ಲ. ಆದರೆ ಕರ್ನಾಟಕದ ವಿಷಯಕ್ಕೆ ಬಂದಾಗ ಆ ರೀತಿ ಇರುವುದಿಲ್ಲವಲ್ಲ?! ಇಡೀ ದೇಶಕ್ಕೆ ಪ್ರಮುಖ ರಾಜ್ಯವಾಗಿರುವ ಕರ್ನಾಟಕ ರಾಜಕೀಯವಾಗಿಯೂ ಬಹುದೊಡ್ಡ ಸವಾಲು ಒಡ್ಡುವ ರಾಜ್ಯ. ಆದ್ದರಿಂದ ‘ದೆಹಲಿ ಮಾದರಿ’ಯಲ್ಲಿ ಕರ್ನಾಟಕದಲ್ಲಿಯೂ ರಾಜಕೀಯ ತಂತ್ರಗಾರಿಕೆ ನಡೆಯುವುದು ಕಷ್ಟ.

ಆದರೆ, ಆಮ್‌ಆದ್ಮಿ ಪ್ರಾದೇಶಿಕ ಪಕ್ಷವಾಗಿ ಹೊರಹೊಮ್ಮಿ ಇದೀಗ ರಾಷ್ಟ್ರೀಯ ಪಕ್ಷವಾಗುವತ್ತ ಹೊರಳುತ್ತಿರುವುದಕ್ಕೆ ಅದರಲ್ಲಿರುವ ‘-ಸಿಬಿಲಿಟಿ’ಯೇ ಪ್ರಮುಖ ಕಾರಣ. ಬಿಜೆಪಿ- ಕಾಂಗ್ರೆಸ್ ರೀತಿ ರಾಷ್ಟ್ರೀಯ ಪಕ್ಷಗಳ ರೀತಿ ಯೋಚಿಸದೇ, ಸ್ಥಳೀಯ ಮಟ್ಟದಲ್ಲಿ ಅಥವಾ ಬೂತ್ ಮಟ್ಟದಲ್ಲಿ ಸಂಘಟನೆ ರೂಪಿಸುತ್ತಿದೆ. ಆದ್ದರಿಂದ ರಾಷ್ಟ್ರೀಯ ಪಕ್ಷದ ರೀತಿ ಕಾಣಿಸಿಕೊಂಡರೂ, ರಾಜ್ಯದ ಹಿತಾಸಕ್ತಿ ಎದುರಾದ ಸಮಯ ದಲ್ಲಿ ಪ್ರಾದೇಶಿಕ ಪಕ್ಷದ ರೀತಿಯಲ್ಲಿಯೇ ಚಿಂತಿಸುವ ಸಾಧ್ಯತೆಯಿರುವುದರಿಂದ, ‘ಪರ್ಯಾಯ ಪಕ್ಷ’ದ ಖಾಲಿತನವನ್ನು ತುಂಬುತ್ತದೆ ಎನ್ನುವ ವಿಶ್ವಾಸದಲ್ಲಿ ಅನೇಕರಿದ್ದಾರೆ.

ಕರ್ನಾಟಕದ ಮಟ್ಟಿಗೆ ಇಂತಹ ಪಕ್ಷದ ಅನಿವಾರ್ಯವಿದೆ. ಪ್ರಾದೇಶಿಕ ಪಕ್ಷವಾಗಿರುವ ಜೆಡಿಎಸ್ ತನ್ನದೇ ಆದ ಹಿತಾಸಕ್ತಿಗೆ ಬಾಗಿ, ರಾಷ್ಟ್ರೀಯ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದರಿಂದ ಆಪ್ ಅದನ್ನು ತುಂಬಲಿ ಎನ್ನುವ ಆಶಾಭಾವನೆಯನ್ನು ಅನೇಕರು ಹೊರಹಾಕುತ್ತಿದ್ದಾರೆ. ಆದರೆ ಈಗಾಗಲೇ ರಾಜ್ಯದಲ್ಲಿ ತಮ್ಮದೇ ಆದ ಹಿಡಿತವನ್ನು ಕಾಂಗ್ರೆಸ್, ಬಿಜೆಪಿ ಹೊಂದಿದೆ. ಚುನಾವಣೆಗೆ ಒಂದು ತಿಂಗಳು ಇರುವಾಗ, ಮತದಾರರನ್ನು ಒಲಿಸಿಕೊಳ್ಳುವ ಎನ್ನುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಹಣ- ತೋಳ್ಬಲದಲ್ಲಿಯೂ ಈ ಎರಡೂ ಪಕ್ಷಗಳೂ ತಮ್ಮದೇಯಾದ ಸಾಮರ್ಥ್ಯವನ್ನು ಹೊಂದಿವೆ. ಹೀಗಿರುವಾಗ ಈ ಎಲ್ಲವನ್ನು ಮೀರಿ, ಜನರನ್ನು ಆಪ್ ಇನ್ನೊಂದು ವರ್ಷದಲ್ಲಿ ಸೆಳೆದುಕೊಳ್ಳುವುದು ಸುಲಭದ ಮಾತಲ್ಲ.

ಇನ್ನೊಂದು ವರ್ಷದಲ್ಲಿ ಎದುರಾಗಲಿರುವ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಏಕಾಏಕಿ ಪರ್ಯಾಯ ರಾಜಕೀಯ ಪಕ್ಷ ಅಥವಾ ವ್ಯವಸ್ಥೆ ಸೃಷ್ಟಿಯಾಗುವುದು ಕಷ್ಟ. ಒಂದು ವೇಳೆ ಆದರೂ, ಅದನ್ನು ಜನರು ಅಪ್ಪಿಕೊಳ್ಳುವರೇ ಎನ್ನುವುದನ್ನು ಯೋಚಿಸಬೇಕು. ಆದರೆ, ಇದೊಂದು ನಿರಂತರ ಪ್ರಕ್ರಿಯೆ ಎನ್ನುವುದು ಸ್ಪಷ್ಟ. ರಾಜ್ಯದ ಏಳಿಗೆ, ಅಭಿವೃದ್ಧಿಗೆ ಪೂರಕವಾಗಿರುವ ಯಾವುದಾದರೂ ಪರ್ಯಾಯ ಪಕ್ಷ ವೊಂದು ಗಟ್ಟಿಯಾಗಿ ನಿಂತರೆ, ಕರ್ನಾಟಕಕ್ಕೂ ಅನುಕೂಲ.

error: Content is protected !!