Saturday, 27th July 2024

ವಿರೋಧಿಸುವುದೇ ಪ್ರತಿಪಕ್ಷದ ಕೆಲಸವಲ್ಲ

ಅಶ್ವತ್ಥಕಟ್ಟೆ

ranjith.hoskere@gmail.com

ಅಗ್ನಿಪಥ್ ವಿಷಯದಲ್ಲಿ ಮಾತ್ರ ವ್ಯಕ್ತವಾಗುತ್ತಿರುವ ವಿರೋಧವಲ್ಲ. ಕಾಂಗ್ರೆಸ್‌ನ ಮನಸ್ಥಿತಿ ಹೇಗಿದೆ ಎಂದರೆ ‘ಮೋದಿ ಮಾಡಿದ್ದೆಲ್ಲ ತಪ್ಪು’
ಎನ್ನುವಂತಾಗಿದೆ. ಆಡಳಿತ ಪಕ್ಷವನ್ನು ತೆಗಳುವುದಕ್ಕೆ ಮಾತ್ರ ಸೀಮಿತವಾಗದೇ, ಉತ್ತಮ ಯೋಜನೆಗಳ ಸಮಯದಲ್ಲಿ ಬೆಂಬಲಿಸಲೂ ಬೇಕಾಗುತ್ತದೆ.

ಕೇಂದ್ರ ಸರಕಾರ ಇತ್ತೀಚಿಗೆ ಘೋಷಿಸಿದ ‘ಅಗ್ನಿಪಥ್’ ಯೋಜನೆಗೆ ದೇಶಾದ್ಯಂತ ಭಾರಿ ವಿರೋಧ ಶುರುವಾಗಿದೆ. ಇದಕ್ಕಾಗಿ ದೇಶಾ ದ್ಯಂತ ಪ್ರತಿಭಟನೆ, ಗಲಭೆ ಸ್ವರೂಪದ ಪ್ರತಿಭಟನೆ, ಹಿಂಸಾಚಾರ ನಡೆಯುತ್ತಲೇ ಇದೆ. ಕರ್ನಾಟಕದಲ್ಲಿ ಈ ಬಿಸಿ ಇಲ್ಲದಿದ್ದರೂ, ಉತ್ತರ ಭಾರತದಲ್ಲಿ ಇದರ ಬಿಸಿ ಜೋರಾಗಿದೆ. ಈ ಯೋಜನೆಯನ್ನು ವಿರೋಧಿಸಿಯೇ, ಸೋಮವಾರ ಭಾರತ್ ಬಂದ್‌ಗೂ ಕರೆ ನೀಡಲಾಗಿತ್ತು. ಆದರೆ ಈ ಯೋಜನೆ ವಿರೋಧಿ ಸುತ್ತಿರುವ ಬಹುತೇಕರು, ಯೋಜನೆಯ ಬಗ್ಗೆ ಪೂರ್ಣ ಮಾಹಿತಿ ಪಡೆದಿಲ್ಲ ಎನ್ನುವುದು ಸ್ಪಷ್ಟ.

ಅಗ್ನಿಪಥ ಯೋಜನೆಯನ್ನು ಕಾಂಗ್ರೆಸ್ ಸೇರಿದಂತೆ ಅನೇಕ ಪ್ರತಿಪಕ್ಷಗಳು ವಿರೋಧಿಸು ತ್ತಿವೆ. ಇನ್ನು ಗಲಭೆ ನಡೆಸುತ್ತಿರುವವರೂ, ಈ ಯೋಜನೆ ದೇಶಕ್ಕೆ ಮಾರಕ ಎನ್ನುವ ಮಾತನ್ನು ಹೇಳುತ್ತಿದ್ದಾರೆ. ಆದರೆ ಅಗ್ನಿಪಥದಿಂದ ದೇಶಕ್ಕೆ ಯಾವ ರೀತಿಯಲ್ಲಿ ಮಾರಕ ಎಂದು ಮರು ಪ್ರಶ್ನಿಸಿದರೆ ಅದಕ್ಕೆ ಅವರ ಬಳಿ ಉತ್ತರವಿಲ್ಲ. ಈ ಯೋಜನೆಯನ್ನು ವಿರೋಧಿಸುವ ನೆಪದಲ್ಲಿ, ದೇಶದ ಆಸ್ತಿಯಾಗಿರುವ ರೈಲು ಗಳನ್ನು ಸೇರಿದಂತೆ ಸಾರ್ವಜನಿಕ ಆಸ್ತಿಪಾಸ್ತಿಯನ್ನು ಹಾಳು ಮಾಡಿರುವ ಘಟನೆಗಳು ನಡೆದಿವೆ.

ಈ ರೀತಿ ದೇಶದ ಆಸ್ತಿಯನ್ನು ಹಾಳು ಮಾಡುವವರು, ಸೇನೆ ಸೇರುವ ಮನಃ ಸ್ಥಿತಿಯಲ್ಲಿ ನಿಜಕ್ಕೂ ಇರುವರೇ ಎನ್ನುವುದು ಅನೇಕರ ಪ್ರಶ್ನೆ. ಅಗ್ನಿಪಥ ಯೋಜನೆಯಲ್ಲಿ ಆಯ್ಕೆಯಾಗುವ ಅಭ್ಯರ್ಥಿಗಳನ್ನು‘ಅಗ್ನಿವೀರ’ರೆಂದು ಕರೆದಿರುವ ಕೇಂದ್ರ ಸರಕಾರ, ೧೮ರಿಂದ ೨೧ ವರ್ಷದೊಳಗಿನ ಅಭ್ಯರ್ಥಿಗಳಿಗೆ ಈ ಯೋಜನೆ ಯನ್ನು ನೀಡಿದ್ದು, ನಾಲ್ಕು ವರ್ಷಗಳ ಕಾಲ ಮಾತ್ರ ಇರಲು ಅವಕಾಶ ಕಲ್ಪಿಸಿದೆ. ಇವರಿಗೆ ವೇತನ 30 ಸಾವಿರದಿಂದ ಆರಂಭಗೊಂಡು ನಾಲ್ಕನೇ ವರ್ಷಕ್ಕೆ 40 ಸಾವಿರದವರೆಗೆ ಸಿಗಲಿದೆ.

ನಾಲ್ಕನೇ ವರ್ಷದ ಅಂತ್ಯಕ್ಕೆ ಸುಮಾರು 12 ಲಕ್ಷ ರು. ಹಣದೊಂದಿಗೆ ಶೇ.75ರಷ್ಟು ಅಗ್ನಿವೀರರು ಸೇನೆಯಿಂದ ನಿರ್ಗಮಿಸಿದರೆ, ಶೇ.25ಮಂದಿ ಮುಂದುವರಿಯಲಿದ್ದಾರೆ. ಆದರೆ ಪ್ರತಿಪಕ್ಷಗಳು ನಾಲ್ಕು ವರ್ಷದ ಬಳಿಕ ಏನು ಮಾಡಬೇಕು ಎನ್ನುವ ಕೊಂಕನ್ನು ತಗೆದಿವೆ. ನಾಲ್ಕು ವರ್ಷದ ಬಳಿಕ ಹೊರಬರಲಿರುವ ಅಗ್ನಿವೀರರಿಗೆ, ಕೇಂದ್ರದ ನಾನಾ ಇಲಾಖೆಯಲ್ಲಿ, ಸ್ವಾಯತ್ತ ಸಂಸ್ಥೆಯಲ್ಲಿ ಕೋಟ ನೀಡಲು ತೀರ್ಮಾನಿಸಿದೆ. ಇದರೊಂದಿಗೆ 12 ಲಕ್ಷದೊಂದಿಗೆ 25ನೇ ವಯಸ್ಸಿಗೆ ಹೊರಬಂದರೆ, ಸ್ವಂತ ಉದ್ಯಮವನ್ನು ಆರಂಭಿಸ ಬಹುದು. ಆದರೆ ಇದ್ಯಾವುದನ್ನು ಕೇಳಿಸಿಕೊಳ್ಳುವ ಪರಿಸ್ಥಿತಿಯಲ್ಲಿ ಪ್ರತಿಪಕ್ಷಗಳಿಲ್ಲ.

ಪ್ರತಿಪಕ್ಷಗಳು ಮಾಡುತ್ತಿರುವ ಮತ್ತೊಂದು ಆರೋಪವೆಂದರೆ, ಇದರಿಂದ ರೆಜಿಮೆಂಟ್‌ನಲ್ಲಿರುವ ವ್ಯವಸ್ಥೆಯೇ ಹಾಳಾಗಲಿದೆ ಎಂದು. ಆದರೆ ರಕ್ಷಣಾ ಇಲಾಖೆಯ ಪ್ರಕಾರ, ಇಡೀ ಸೇನೆಯನ್ನು ಅಗ್ನಿಪಥದಿಂದಲೇ ಸೇರಿಸಿಕೊಳ್ಳುವುದಿಲ್ಲ. ಈಗಿರುವ ರೆಜಿಮೆಂಟ್‌ಗೆ ಯಾವುದೇ ಧಕ್ಕೆಯಾಗದ ರೀತಿಯಲ್ಲಿ, ಅವರಿಗೆ ಸರ್ಪೋಟ್ ಆಗುವ ರೀತಿಯಲ್ಲಿ ಈ ಅಗ್ನಿವೀರರನ್ನು ನೇಮಿಸಲಾಗುತ್ತದೆ. ಇಷ್ಟೆಲ್ಲಾ ಆದರೂ, ಒಂದು ವೇಳೆ ಏನಾದರೂ ಲೋಪವಾಗಿದ್ದರೂ ಅದನ್ನು ಸರಿಪಡಿಸುವುದಕ್ಕೂ ಸಿದ್ಧವಿದ್ದೇವೆ ಎನ್ನುವ ಮಾತನ್ನು ರಕ್ಷಣಾ ಇಲಾಖೆ ಸ್ಪಷ್ಟವಾಗಿ ಹೇಳಿದ್ದರೂ ಅದನ್ನು ಕೇಳಿಸಿಕೊಳ್ಳುವ ಅಥವಾ ಯಾವುದನ್ನು ಸರಿಪಡಿಸಬೇಕು ಎಂದು ಹೇಳುವ ಮನಸ್ಥಿತಿಯಲ್ಲಿ ವಿರೋಧಿಸು ವವರು ಇಲ್ಲ.

ಆದರೆ ಸಾಂಪ್ರದಾಯಿಕವಾಗಿಯೇ ಎಲ್ಲರನ್ನು ಸೇನೆಗೆ ತಗೆದುಕೊಂಡು ಎಲ್ಲರಿಗೂ ಪಿಂಚಣಿಯನ್ನು ನೀಡುತ್ತಾ ಹೋದರೆ, ಮುಂದೊಂದು ದಿನ ರಕ್ಷಣಾ ಇಲಾಖೆಯ ಬಹುಪಾಲು ಸೈನಿಕರ ಪಿಂಚಣಿಗೆ ನೀಡಬೇಕಾಗುತ್ತದೆ. 2022-23ರ ಬಜೆಟ್ ಅನ್ನು ನೋಡುವುದಾದರೆ, 3.65 ಲಕ್ಷ ಕೋಟಿ ರು.ಗಳನ್ನು ರಕ್ಷಣಾ ಇಲಾಖೆಗೆ ನೀಡಲಾಗಿದೆ. ಇದರಲ್ಲಿ 1.20 ಲಕ್ಷ ಕೋಟಿ ರು. ಸೈನಿಕರ ಪಿಂಚಣಿಗೆ ಮೀಸಲಿಡ ಬೇಕಾಗಿದೆ. ಈ ಪರಿಸ್ಥಿತಿ ಹೀಗೆ ಮುಂದುವರಿದರೆ, ಬಜೆಟ್‌ನ ಬಹುಪಾಲು ಭಾಗ, ಪಿಂಚಣಿಗೆ ಮೀಸಲಿಟ್ಟು, ಶಸಾಸ ಖರೀದಿಗೆ ಹಾಗೂ ಇನ್ನಿತರ ಯೋಜನೆಗೆ ಅನುದಾನದ ಕೊರತೆ ಅನುಭವಿಸಬೇಕಾಗುತ್ತದೆ.

ಆದ್ದರಿಂದ ಇಂತಹ ಯೋಜನೆಯನ್ನು ಜಾರಿಗೊಳಿಸಲು ನಿರ್ಧರಿಸಿದೆ. ಹಾಗೇ ನೋಡಿದರೆ, ಅಗ್ನಿಪಥ್ ವಿಷಯದಲ್ಲಿ ಮಾತ್ರ ವ್ಯಕ್ತ ವಾಗುತ್ತಿರುವ ವಿರೋಧವಲ್ಲ. ಕಾಂಗ್ರೆಸ್‌ನ ಮನಸ್ಥಿತಿ ಹೇಗಿದೆ ಎಂದರೆ ‘ಮೋದಿ ಮಾಡಿದ್ದೆಲ್ಲ ತಪ್ಪು’ ಎನ್ನುವಂತಾಗಿದೆ. ಆದರೆ ಪ್ರತಿಪಕ್ಷ ವಾಗಿ, ಆಡಳಿತ ಪಕ್ಷವನ್ನು ತೆಗಳುವು ದಕ್ಕೆ ಮಾತ್ರ ಸೀಮಿತವಾಗದೇ, ಉತ್ತಮ ಯೋಜನೆಗಳ ಸಮಯದಲ್ಲಿ ಬೆಂಬಲಿಸಲೂ ಬೇಕಾಗುತ್ತದೆ. ಒಂದು ವೇಳೆ ಬೆಂಬಲಿಸಿದರೆ ಸಮಸ್ಯೆಯಾಗುವುದಾದರೆ, ಕನಿಷ್ಠ ‘ತಟಸ್ಥ’ ನೀತಿಯನ್ನಾದರೂ ಅನುಸರಿಸಬೇಕು. ಯಾವುದನ್ನು ಬೆಂಬಲಿಸಬೇಕು, ಯಾವುದನ್ನು ವಿರೋಧಿಸಬೇಕು ಹಾಗೂ ಯಾವುದಕ್ಕೆ ‘ಜಾಣ ಮೌನ’ ಪ್ರದರ್ಶಿಸಬೇಕು ಎನ್ನುವುದನ್ನೇ ಪ್ರತಿಪಕ್ಷದ ನಾಯಕರಿಗೆ ಇರಬೇಕಾದ ಪ್ರಮುಖ ಲಕ್ಷಣ.

ಹಾಗೇ ನೋಡಿದರೆ, ಕಾಂಗ್ರೆಸ್ ಪ್ರತಿಪಕ್ಷವಾಗಿ ಸಮರ್ಥವಾಗಿ ನಿರ್ವಹಣೆ ಮಾಡುವ ಕಾರ್ಯವೈಖರಿಯೇ ಗೊತ್ತಿಲ್ಲ ಎಂದರೆ ತಪ್ಪಾಗುವುದಿಲ್ಲ. ಈ ವಿಷಯದಲ್ಲಿ ಬಿಜೆಪಿಯ ಶೈಲಿಯನ್ನು ಮೆಚ್ಚಬೇಕು. ಈ ಹಿಂದೆ ಕೇಂದ್ರ ಸರಕಾರದಲ್ಲಿ ಯುಪಿಎ ಆಡಳಿತದಲ್ಲಿದ್ದಾಗ, ಬಿಜೆಪಿಯೂ ನೂರಾರೂ ಪ್ರತಿಭಟನೆ, ಧರಣಿ ಹೋರಾಟ, ರಥ ಯಾತ್ರೆಗಳನ್ನು ಮಾಡಿದೆ. ಎಲ್ಲಿಯೂ, ಜನರಲ್ಲಿ ಅದು ‘ಅತಿ’ಯಾಯಿತು
ಅಥವಾ ಸ್ವಾರ್ಥಕ್ಕಾಗಿ ಮಾಡುತ್ತಿದ್ದಾರೆ ಎನ್ನುವ ಭಾವನೆ ಬರುವಂತೆ ಮಾಡಲಿಲ್ಲ. ಆದರೆ ಕಾಂಗ್ರೆಸ್ ಈ ವಿಷಯದಲ್ಲಿ ಸಂಪೂರ್ಣವಾಗಿ ಎಡವಿದೆ ಎಂದರೆ ತಪ್ಪಾಗುವುದಿಲ್ಲ.

ಅಷ್ಟಕ್ಕೂ ಕಾಂಗ್ರೆಸ್ ಭಾರಿ ಪ್ರತಿಭಟನೆಯನ್ನು ನಡೆಸುತ್ತಿರುವುದು ಯಾವ ವಿಷಯದಲ್ಲಿ? ರಾಹುಲ್ ಗಾಂಧಿ ಅವರನ್ನು ಇಡಿ ವಿಚಾರಣೆಗೆ ಕರೆದರು ಎನ್ನುವ ಕಾರಣಕ್ಕೆ. ಅದಕ್ಕೂ ಮೊದಲು ಕರ್ನಾಟಕದ ಮಟ್ಟದಲ್ಲಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇ.ಡಿ. ಪ್ರಕರಣದಲ್ಲಿ ತಿಹಾರ್ ಜೈಲಿಗೆ ಹೋದ ಸಮಯದಲ್ಲಿ ಪ್ರತಿಭಟನೆ ನಡೆಸಿದರು. ಈ ರೀತಿಯ ವಿಷಯದಲ್ಲಿ ತಾರ್ತಿಕ ಅಂತ್ಯ ಕಾಣುವ ತನಕ
ಹೋರಾಟ ನಿಲ್ಲಿಸುವುದಿಲ್ಲ ಎನ್ನುವ ಕಾಂಗ್ರೆಸ್, ಜನಸಾಮಾನ್ಯರಿಗೆ ಬೇಕಿರುವ ವಿಷಯದಲ್ಲಿ ಮಾತ್ರ ‘ಜಾಣ ಮೌನ’ ಅನುಸರಿಸುತ್ತದೆ.

ಉದಾಹರಣೆಗೆ ಪೆಟ್ರೋಲ್ ಡಿಸೇಲ್ ದರ ಏರಿಕೆ ಇರಬಹುದು ಅಥವಾ ಗೃಹೋಪಯೋಗಿ ವಸ್ತುಗಳ ಬೆಲೆ ಏರಿಕೆ ವಿಷಯದಲ್ಲಿ ಕಾಂಗ್ರೆಸ್ ರಾಷ್ಟ್ರಾದ್ಯಂತ ಪ್ರತಿಭಟನೆ ನಡೆಸುವುದಾಗಿ ಘೋಷಿಸಿತ್ತು. ಬಹುತೇಕ ಕಡೆಗಳಲ್ಲಿ ಪ್ರತಿಭಟನೆಯನ್ನು ಮಾಡಿದೆ ಸಹ. ಆದರೆ ಅದು ಕೇವಲ
ನಾಮ್‌ಕೆವಸ್ತೆಗೆ ಸೀಮಿತವಾಗಿತ್ತೇ ಹೊರತು, ಸರಕಾರಕ್ಕೆ ಬಿಸಿ ಮುಟ್ಟಿಸುವ ರೀತಿಯಲ್ಲಿ ಇರಲಿಲ್ಲ. ಆದರೆ ಇದಕ್ಕೆ ತತ್ವಿರುದ್ಧ ಎನ್ನುವ ರೀತಿಯಲ್ಲಿ ಪ್ರತಿಪಕ್ಷದಲ್ಲಿ ಬಿಜೆಪಿ ಇದ್ದಾಗ ವರ್ತಿಸಿತ್ತು. ಬಿಜೆಪಿ ಹಲವು ನಾಯಕರನ್ನು ಕಾಂಗ್ರೆಸ್ ಗುರಿಯಾಗಿಸಿಕೊಂಡೇ ಜೈಲಿಗೆ ಕಳುಹಿಸಿದರೂ ಅದಕ್ಕೆ ಪ್ರತಿಕ್ರಿಯಿಸಲಿಲ್ಲ.

ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮುಖ್ಯಮಂತ್ರಿಯಾಗಿರುವಾಗಲೇ, ಗೋದ್ರಾ ಹತ್ಯಾಕಾಂಡದ ಪ್ರಕರಣದಲ್ಲಿ ೧೨ ತಾಸಿಗೂ ಹೆಚ್ಚು ಕಾಲ ವಿಚಾರಣೆಗೆ ಒಳಪಡಿಸಲಾಗಿತ್ತು. ಈಗಿನ ಕೇಂದ್ರದ ಗೃಹ ಸಚಿವ ಅಮಿತ್ ಶಾ ಅವರನ್ನು ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ಗಡಿಪಾರು ಮಾಡಿತ್ತು. ಈ ಯಾವ ಸಮಯದಲ್ಲಿಯೂ ಬಿಜೆಪಿ ಪಕ್ಷವಾಗಿ ಪ್ರತಿಕ್ರಿಯಿಸಲಿಲ್ಲ. ಬದಲಿಗೆ ಪ್ರಕರಣಗಳಿಂದ ‘ನಿದೋರ್ಷಿ’ ಪಟ್ಟಿ ಪಡೆದ ಬಳಿಕ, ಅದನ್ನು ರಾಜಕೀಯಗೊಳಿಸಿತ್ತು. ಆದರೆ ಪೆಟ್ರೋಲ್, ಡಿಸೇಲ್, ಎಲ್‌ಪಿಜಿಯಲ್ಲಿ ದರ ಏರಿಕೆಯಾ ದಾಗ ಬೀದಿಗೆ ಇಳಿದು ಹೋರಾಡಿರುವ ದೃಶ್ಯಗಳು ನಮ್ಮ ಮುಂದಿದೆ.

ಪ್ರತಿಭಟನೆ ಮಾಡುವುದು ಪ್ರತಿಯೊಬ್ಬರ ಹಕ್ಕು ಎನ್ನುವುದರಲ್ಲಿ ಎರಡನೇ ಮಾತಿಲ್ಲ. ಆದರೆ ಯಾವ ವಿಷಯವನ್ನು ಮುಂದಿಟ್ಟುಕೊಂಡು ಹೋರಾಟ ಮಾಡುತ್ತಾರೆ ಎನ್ನುವುದರ ಮೇಲೆ ಜನರ ಬೆಂಬಲ ಸಿಗುತ್ತದೆ. ಈ ಹಂತದಲ್ಲಿ ಆದರೂ ಕಾಂಗ್ರೆಸ್ ಈ ‘ಸೂಕ್ಷ್ಮ’ವನ್ನು ಅರ್ಥ ಮಾಡಿಕೊಳ್ಳದಿದ್ದರೆ ಮತ್ತಷ್ಟು ಸಮಸ್ಯೆ ಹೆಚ್ಚಾಗುತ್ತದೆ ಹೊರತು, ಕಡಿಮೆಯಾಗುವುದಿಲ್ಲ ಎನ್ನುವುದನ್ನು ಮರೆಯುವಂತಿಲ್ಲ.

ಪ್ರತಿಪಕ್ಷಗಳು ರಾಷ್ಟ್ರದ ಅಥವಾ ರಾಜ್ಯದ ಹಿತಾಸಕ್ತಿಯನ್ನು ಗಮನದಲ್ಲಿರಿಸಿಕೊಳ್ಳದೇ, ಕೇವಲ ರಾಜಕೀಯ ಹಿತಾಸಕ್ತಿಗೋಸ್ಕರವೇ ವಿರೋಧಿಸುವುದರಿಂದ ಆಡಳಿತ ಪಕ್ಷಕ್ಕೆ ‘ಪ್ಲಸ್’ ಆಗುತ್ತದೆ ಎನ್ನುವುದನ್ನು ಮರೆಯಬಾರದು. ಇನ್ನು ಕೇಂದ್ರದ ಅಗ್ನಿಪಥ್ ವಿಷಯವಾಗಲಿ, ಕರ್ನಾಟಕದಲ್ಲಿ ಪಠ್ಯದ ವಿಷಯವಾಗಲಿ ಮುಕ್ತ ಚರ್ಚೆಗೆ ಸಿದ್ಧವೆಂದು ಆಡಳಿತ ನಡೆಸುವವರು ಒಪ್ಪಿಕೊಂಡ ಬಳಿಕವೂ, ಅದನ್ನು
ವಿರೋಧಿಸಿ ಜನರಲ್ಲಿ ಗೊಂದಲ ಸೃಷ್ಟಿಸುವುದು ಉತ್ತಮ ಬೆಳವಣಿಗೆಯಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ, ಆಡಳಿತ ಪಕ್ಷಕ್ಕಿರುವಷ್ಟೇ ಜವಾಬ್ದಾರಿ ಪ್ರತಿಪಕ್ಷಗಳಿಗೂ ಇರುತ್ತದೆ ಎನ್ನುವುದು ಮಾತ್ರ ಯಾವುದೇ ಕಾರಣಕ್ಕೂ ಮರೆಯಬಾರದು.

error: Content is protected !!