Sunday, 26th May 2024

ಕಮಲಾ ಹ್ಯಾರಿಸ್ ಇಡ್ಲಿ ನೆನೆಸಿದ್ದು ಸ್ಮೃತಿಯಲ್ಲೋ ಸಾಂಬಾರಿನಲ್ಲಿ?

ತಿಳಿರು ತೋರಣ
ಶ್ರೀವತ್ಸ ಜೋಶಿ

srivathsajoshi@yahoo.com

ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಇಡ್ಲಿ ನೆನೆಸಿಕೊಂಡ ಸುದ್ದಿ ಹಳೆಯದು. ಆಗಸ್ಟ್ 2020ರಷ್ಟು ಹಳೆ ಯದು. ಆಗಷ್ಟೇ ಕಮಲಾ ಹ್ಯಾರಿಸ್ ಅಮೆರಿಕ ಉಪಾಧ್ಯಕ್ಷ ಹುದ್ದೆಯ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದರು; ಮುಂದೆ ನವೆಂಬರ್ 2020ರ ಚುನಾವಣೆಯಲ್ಲಿ ಗೆದ್ದು ಉಪಾಧ್ಯಕ್ಷೆಯಾದರು.

ಅಷ್ಟಾಗಿ ಆ ಸುದ್ದಿಯನ್ನು ನಾನೋದಿದ್ದು ಕನ್ನಡ ದಿನಪತ್ರಿಕೆಗಳಲ್ಲೇ. ವಿಜಯವಾಣಿ ಪತ್ರಿಕೆಯು ಅದನ್ನು ಆಕರ್ಷಕವಾಗಿ ಬಾಕ್ಸ್ ಐಟಂ ನಲ್ಲಿ ಪ್ರಕಟಿಸಿ ‘ಇಡ್ಲಿ ನೆನೆಸಿಕೊಂಡ ಕಮಲಾ’ ಎಂದು ಶೀರ್ಷಿಕೆ ಕೊಟ್ಟಿತ್ತು. ಕಮಲಾ ಹ್ಯಾರಿಸ್ ಭಾರತೀಯ ಮೂಲದವರಾಗಿರುವುದು ಅವರ ತಾಯಿ ಶ್ಯಾಮಲಾ ಚೆನ್ನೈಯವರಾದ್ದರಿಂದ. ‘ಅಮ್ಮ ನನ್ನನ್ನು ಮತ್ತು ನನ್ನ ತಂಗಿ ಮಾಯಾಳನ್ನು ಚೆನ್ನೈ ಬೀಚ್‌ನಲ್ಲಿ ವಾಯುವಿಹಾರಕ್ಕೆ ಕರೆದುಕೊಂಡು ಹೋಗುತ್ತಿದ್ದರು. ನಮ್ಮ ತಾತನೂ ಜೊತೆಗಿರುತ್ತಿದ್ದರು.

ತಾತ ಕಲಿಸಿದ ಪಾಠಗಳೇ ನಾನು ಇಂದಿನ ಸ್ಥಿತಿಯಲ್ಲಿರಲು ಕಾರಣ ಮತ್ತು ಪ್ರೇರಣೆ. ಇಡ್ಲಿಯ ಮೇಲೆ ಪ್ರೀತಿ ಬೆಳೆಸುವಂತೆ ಹೇಳಿಕೊಟ್ಟಿದ್ದು ಅಮ್ಮನೇ…’ ಕಮಲಾ ಉವಾಚ. ಅವರು 19 ವರ್ಷದವರಿದ್ದಾಗ ತಾಯಿಯೊಡನೆ ಅಮೆರಿಕ ದೇಶಕ್ಕೆ ಬಂದರು. ಆಮೇಲೆ ಇಲ್ಲಿ ಬರ್ಗರ್ ಪಿಜ್ಜಾ ಬೇಗಲ್ ಮಫಿನ್ ಸ್ಯಾಂಡ್‌ವಿಚ್‌ಗಳನ್ನು ಮೆಲ್ಲುತ್ತ ಬೆಳೆದರು. ಆದರೂ ಇಡ್ಲಿಯ ಸ್ವಾದ ಅವರ ಸ್ಮೃತಿಪಟಲದಿಂದ ಮರೆಯಾಗಿಲ್ಲ ಎನ್ನುವುದು ಹೆಮ್ಮೆಯ ವಿಚಾರವೇ.

ಬಹುಶಃ ಇಡ್ಲಿಯ ಸ್ವಾದಕ್ಕಿಂತಲೂ ಸಾಂಬಾರಿನ ಸ್ವಾದ ಎಂದರೆ ಹೆಚ್ಚು ಸಮಂಜಸ. ಅದರಲ್ಲೂ ಮದರಾಸೀ ಸಾಂಬಾರಿನ ಘಮ ಬಾಯಿಯಲ್ಲಿ ನೀರೂರಿಸುವಂಥದ್ದೇ. ಹಬೆ ಯಾಡುವ ಇಡ್ಲಿಗಳನ್ನು ತಟ್ಟೆಯಲ್ಲೋ ದೊಡ್ಡದೊಂದು ಬೌಲ್‌ನಲ್ಲೋ ಹಾಕಿ ಆ ಇಡ್ಲಿಗಳು ಸಂಪೂರ್ಣ ನೆನೆಯುವಷ್ಟು ಪ್ರಮಾಣದಲ್ಲಿ ಮೇಲಿಂದ ಸಾಂಬಾರ್ ಸುರಿದು ಪ್ರೀತಿಯಿಂದ ತಿನ್ನಿಸುತ್ತಿದ್ದರೋ ಏನೋ ಕಮಲಾರ ಅಮ್ಮ. ಅಂತಹ ವೈಭವೋಪೇತ ಖಾದ್ಯದ ನೆನಪು ರಸನೆಯ ಭಾವಕೋಶಗಳಲ್ಲಿ ಎಂದೆಂದಿಗೂ ಉಳಿಯುವಂಥದ್ದೇ.

ನನ್ನ ತರ್ಲೆ ಬುದ್ಧಿಗೆ ರುಚಿಕರವಾದೊಂದು ಚಿಂತನೆಯ ಕಿಡಿ ಹಚ್ಚಿದ್ದು ‘ಇಡ್ಲಿ ನೆನೆಸಿಕೊಂಡ ಕಮಲಾ’ ಶೀರ್ಷಿಕೆ. ಕಮಲಾ ಹ್ಯಾರಿಸ್ ಇಡ್ಲಿಯನ್ನು ಸಾಂಬಾರಿನಲ್ಲಿ ನೆನೆಸಿದರೋ ಅಥವಾ ಚಟ್ನಿಯಲ್ಲಿ ನೆನೆಸಿದರು? ನನಗೆ ಅಂತಲ್ಲ ಯಾರಿಗೇ ಆದರೂ ಇಂಥದೊಂದು ಟಂಗ್-ಇನ್-ಚೀಕ್ ಸಂದೇಹ ಮೂಡುತ್ತದೆ. ಅದಕ್ಕೆ ಕಾರಣ ‘ನೆನೆ’ ಎಂಬ ಪದದ ಅರ್ಥವೈಶಾಲ್ಯ. ನೆನೆಯುವುದು ಅಂದರೆ ನೆನಪು ಮಾಡಿಕೊಳ್ಳುವುದೂ ಹೌದು, ಒದ್ದೆಯಾಗುವುದೂ ಹೌದು. ಕನ್ನಡದ ಆದಿ-ನಿಘಂಟು ಕಿಟ್ಟೆಲ್ ಕೋಶವನ್ನು ತೆರೆದುನೋಡಿದರೂ ನೆನೆ ಪದಕ್ಕೆ ಎರಡು ಎಂಟ್ರಿಗಳಿರುವುದು ಗೊತ್ತಾಗುತ್ತದೆ.

ಮೊದಲನೆಯದಕ್ಕೆ to think; to think upon; to bear in mind; to be mindful of; to wish; to remember; to recollect ಎಂದು ಅರ್ಥ ಕೊಟ್ಟದ್ದಿದೆ. ಅವೆಲ್ಲವೂ ನೆನಪಿಸಿಕೊಳ್ಳುವುದರ ಬಗೆಗಿನವೇ. ಎರಡನೆಯ ಎಂಟ್ರಿಯಲ್ಲಿ, ನೆನೆ ಅಂದರೆ ಠಿಟ ಚಿಛ್ಚಿಟಞಛಿ ಡಿಛಿಠಿ ಎಂಬ ಅರ್ಥ ಇದೆ. ಪತ್ರಿಕೆಯವರು ಆ ಶೀರ್ಷಿಕೆಯನ್ನು ಬರೆದದ್ದು ನೆನೆ ಪದದ ಮೊದಲ ಅರ್ಥದಲ್ಲೇ. ಅವರದೇನೂ ತಪ್ಪಿಲ್ಲ. ಆದರೆ ಎರಡನೆಯ ಅರ್ಥವೂ ಅಷ್ಟೇ ಚೆನ್ನಾಗಿ- ಇಡ್ಲಿಯನ್ನು ಸಾಂಬಾರಿನಲ್ಲೋ ಚಟ್ನಿಯಲ್ಲೋ ನೆನೆಸಿಕೊಂಡು ಚಪ್ಪರಿಸುವಷ್ಟೇ ಚೆನ್ನಾಗಿ- ಹೊಂದಿಕೊಳ್ಳುವುದರಿಂದ ಆ ಶೀರ್ಷಿಕೆಗೊಂದು ಅಯಾಚಿತ ಸ್ವಾರಸ್ಯ ಬಂದಿದೆ.

ಸೂಕ್ಷ್ಮವಾಗಿ ಆಲೋಚಿಸಿದರೆ, ನೆನೆ ಪದದ ಎರಡೂ ಅರ್ಥಗಳು ಒಂದಕ್ಕೊಂದು ಪೂರಕವಾದವುಗಳೇ. ಒಂದು ವಿಷಯವನ್ನು ನೆನೆಯು ವುದು(ನೆನಪಿಸಿಕೊಳ್ಳುವುದು) ಅಂದರೆ ಏನು? ನಮ್ಮ ಮನಸ್ಸು ಅದರಿಂದ ಆವೃತವಾಗುವುದು ಅಥವಾ ಒದ್ದೆಯಾಗುವುದೇ ತಾನೆ? ನೆನೆ ಪದದ ಎರಡೂ ಅರ್ಥಗಳೂ ಎಷ್ಟು ತಳಕು ಹಾಕಿಕೊಂಡಿವೆಯೆಂದರೆ ಕಿಟ್ಟೆಲ್ ಕೋಶದಲ್ಲಿ ನೆನ, ನೆನದು, ನೆನಪು, ನೆನವಿ, ನೆನವು, ನೆನಸು, ನೆನಹ, ನೆನಹು, ನೆನೆ, ನೆನಯಿಸು, ನೆನೆಯುವಿಕೆ, ನೆನ್ದು, ನೆಪ್ಪು- ಇವಿಷ್ಟೂ ಪದಗಳ ಅರ್ಥದಲ್ಲಿ ನೆನಪು ಮಾಡಿಕೊಳ್ಳುವ ಮತ್ತು ಒದ್ದೆಯಾಗುವ/ಒದ್ದೆಯಾಗಿಸುವ ಪ್ರಕ್ರಿಯೆಗಳ ಅಂಶ ಜೊತೆಜೊತೆಯಾಗಿ ಸಮಾನವಾಗಿ ಇದೆ!

ನೆನೆಸಿಕೊಂಡ ಪದವನ್ನು ನೆನಪು ಮಾಡಿಕೊಂಡ ಎಂಬ ಅರ್ಥದಲ್ಲಿ ಬಳಸಿರುವ ಎಷ್ಟೋ ಉದಾಹರಣೆಗಳನ್ನು ನಾವು ಗಮನಿಸಬಹುದು. ‘ಹರ್ಭಜನ್‌ಗೆ ಅನ್ಯಾಯವಾಗಿದ್ದ ಹಳೆಯ ಘಟನೆಯನ್ನು ನೆನೆಸಿಕೊಂಡ ಅನಿಲ್ ಕುಂಬ್ಳೆ’, ‘ನಾನು ಕೊನೆ ಬೆಂಚಿನ ವಿದ್ಯಾರ್ಥಿ ಎಂದು ಕಾಲೇಜು ದಿನಗಳನ್ನು ನೆನೆಸಿಕೊಂಡ ಎಚ್‌ಡಿಕೆ’, ‘ಸಿದ್ಧಗಂಗಾ ಶ್ರೀಗಳನ್ನು ಮನ್ ಕೀ ಬಾತ್ ನಲ್ಲಿ ನೆನೆಸಿಕೊಂಡ ಮೋದಿ’, ‘ಮೈಸೂರಿನ ದಾಸಪ್ರಕಾಶ್ ಹೊಟೇಲ್ ನೆನೆಸಿಕೊಂಡ ಉಪರಾಷ್ಟ್ರಪತಿ’- ಇವೆಲ್ಲ ಪತ್ರಿಕೆಗಳಲ್ಲಿ ಬಂದಿರುವ ಅರ್ಥಪೂರ್ಣ ವಾಕ್ಯಗಳೇ.

ಪತ್ರಿಕೆಗಳಲ್ಲಿ ಅಂತಲ್ಲ, ರಾಮಾಯಣ ಮಹಾಭಾರತ ಮುಂತಾದ ಮಹಾಕಾವ್ಯಗಳಿಗೆ ಸಂಬಂಽಸಿದ ಶ್ರೇಷ್ಠ ಗ್ರಂಥಗಳಲ್ಲಿ ವಿದ್ವಾಂಸ ರಿಂದಲೂ ಈ ಪದಬಳಕೆ ಆಗಿದೆ. ‘ಹಿಂದಿನ ದಿನ ತಮ್ಮಂದಿರು ಸತ್ತದ್ದನ್ನು ನೆನೆಸಿಕೊಂಡ ದುರ್ಯೋಧನನು ದ್ರೋಣರ ಬಳಿಗೆ ಬಂದು ಇಂತೆಂದನು…’, ‘ಸುಗ್ರೀವನ ಕೃತಘ್ನತೆಯನ್ನು ನೆನೆಸಿಕೊಂಡ ಹಾಗೆಲ್ಲಾ ಕೋಪಯುಕ್ತನಾಗಿ, ಅಗ್ನಿಸಹಿತವಾದ ವಾಯುವಿನಂತೆ ಅತಿ ವೇಗದಿಂದ ಕಿಷ್ಕಿಂಧೆಗೆ ಬಂದು ಸೇರಿದ ಲಕ್ಷ್ಮಣನು…’, ‘ತಾಯಿ ಸುನೀತಿಯ ಮಾತುಗಳನ್ನು ನೆನೆಸಿಕೊಂಡ ಧ್ರುವ…’ ಇತ್ಯಾದಿ. ‘ಮುದುಕಿ ಯೌವನದಲ್ಲಿನ ತನ್ನ ತುರುಬು ನೆನೆಸಿಕೊಂಡ ಹಾಗೆ’ ಅಂತೊಂದು ಗಾದೆಯೂ ಇದೆ.

ಕಮಲಾ ಹ್ಯಾರಿಸ್‌ರನ್ನು ನಾವೀಗ ಮುದುಕಿ ಎನ್ನಲಾರೆವು; ಅಲ್ಲದೇ ಅವರು ನೆನೆಸಿಕೊಂಡದ್ದು ಯೌವನದಲ್ಲಿನ ತನ್ನ ತುರುಬನ್ನಲ್ಲ ಬಾಲ್ಯದಲ್ಲಿ ತನ್ನ ತಾಯಿ ಬಡಿಸಿದ್ದ ಇಡ್ಲಿಯನ್ನು. ನನ್ನ ಊಹೆಯ ಪ್ರಕಾರ- ಇಡ್ಲಿ ನೆನೆಯುವಂತೆ ಮಾಡಿದ ಸಾಂಬಾರನ್ನು. ನೋಡಿ! ಮತ್ತೆ ನೆನೆ ಪದದ ಎರಡನೆಯ ಅರ್ಥಕ್ಕೇ ಬಂದೆ! ಅದಕ್ಕೇ ಹೇಳಿದ್ದು ಅವೆರಡೂ ಮೇಲ್ನೋಟಕ್ಕೆ ಒಂದಕ್ಕೊಂದು ಸಂಬಂಧವಿಲ್ಲದ ಅರ್ಥಗಳಾ ದರೂ ಪರಸ್ಪರ ಪೂರಕವಾಗಿ ಪರ್ಯಾಯವಾಗಿ ಬಳಸಿದರೆ ಮತ್ತು ಅರ್ಥೈಸಿಕೊಂಡರೆ ಭಲೇ ಸ್ವಾರಸ್ಯವನ್ನು ಕೊಡುವಂಥವು.

ಹೇಗಂತೀರಾ? ಸರಳವಾದ ಸವಿಯಾದ ಉದಾಹರಣೆಯೆಂದರೆ- ‘ಅಮ್ಮ ಮಾಡಿಕೊಡುತ್ತಿದ್ದ ಗರಿಗರಿ ದೋಸೆಯ ರುಚಿಯನ್ನೂ ಅದರ
ಹಿಂದಿನ ಪ್ರೀತಿಯನ್ನೂ ಮನದಲ್ಲೇ ನೆನೆದೆ; ಹಾಗೆಯೇ ನಾಳೆಗೆ ದೋಸೆ ಮಾಡಬೇಕೆಂದು ಉದ್ದಿನಬೇಳೆ ಅಕ್ಕಿ ನೆನೆಸಿದೆ…’ ಅಥವಾ, ‘ರಾಮನವಮಿಯಂದು ಪ್ರಸಾದವೆಂದು ಹಂಚುವ ರುಚಿರುಚಿ ಕೋಸಂಬರಿಯನ್ನು ನೆನೆದೆ, ಆಸೆಯಾಗಿ ಕೂಡಲೇ ಒಂದಿಷ್ಟು ಹೆಸರುಬೇಳೆ ನೆನೆಸಿದೆ…’ ಹೀಗೆ ಇಷ್ಟದ ತಿಂಡಿತಿನಸು ಯಾವುದೇ ಇರಲಿ, ಅದನ್ನು ನೆನೆಯುವುದು, ಅದರಿಂದಾಗಿ ಬಾಯಲ್ಲಿ ನೀರೂರಿ ನಾಲಿಗೆ ನೆನೆಯುವುದು, ತಿಂಡಿತಿನಸಿನ ತಯಾರಿಗಾಗಿ ಅಕ್ಕಿ-ಬೇಳೆ ನೆನೆಯುವುದು- ಪ್ರಚೋದನೆಗೆ ತಕ್ಕ ಪ್ರತಿಕ್ರಿಯೆ ಮತ್ತು ಪರಸ್ಪರ ಪೂರಕ ಪ್ರಕ್ರಿಯೆಗಳು. ಈ ಸಂದರ್ಭದಲ್ಲಿ ನೀವು ಒಂದು ಪಾರಮಾರ್ಥಿಕ ಜೋಕ್‌ಅನ್ನೂ ನೆನೆಯಬಹುದು.

ಇದು ವಾಟ್ಸಪ್‌ನಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿರುತ್ತದೆ: ‘ರಾತ್ರಿ ಉದ್ದಿನ ಬೇಳೆ ನೆನೆಸಿಡುತ್ತೀರಿ. ಬೆಳಗ್ಗೆ ಎದ್ದರೆ ಇಡ್ಲಿ, ಇಲ್ಲದಿದ್ದರೆ ಅದೇ ಹಿಟ್ಟಿನಲ್ಲಿ ವಡೆ’. ನಶ್ವರ ಜೀವನದ ಕಟುಸತ್ಯ ನೆನೆಯಲು ಇದಕ್ಕಿಂದ ದೊಡ್ಡ ಜೋಕು ಬೇಕೇ? ಹಾಗಾಗಿ ಬರೀ ತಿಂಡಿತಿನಸಿನ ವಿಷಯ ವಲ್ಲ, ಸ್ವಲ್ಪ ದೈವಭಕ್ತಿ- ಅಧ್ಯಾತ್ಮಗಳ ಬಗ್ಗೆಯೂ ಮಾತನಾಡೋಣ. ಆ ಪ್ರಕಾರದಲ್ಲೂ ಮೋಜು ಕಂಡುಕೊಳ್ಳೋಣ. ರಾಮನಾಮ ಪಾಯಸ ಮಾಡಲು ಯಾವ ಬೇಳೆ ನೆನೆಯುವುದೂ ಬೇಡ, ಕೇವಲ ವಿಟ್ಠಲನನ್ನು ನೆನೆದರೆ ಸಾಕಂತೆ!

ಪುರಂದರದಾಸರೇ ಹಾಗೆ ಹೇಳಿದ್ದಾರೆ. ದಾಸರ ಪದಗಳಲ್ಲಿ ಭಕ್ತಿಗೀತೆಗಳಲ್ಲಿ ನೆನೆ ಕ್ರಿಯಾಪದವು ಸ್ಮರಿಸು, ಧ್ಯಾನಿಸು, ಬಯಸು, ಚಿಂತಿಸು ಎಂಬರ್ಥದಲ್ಲೇ ಬರುವುದು. ‘ನೆನೆಯದೆ ಇರಲಾರೆ ಸ್ವಾಮೀ ನಿನ್ನ…’ ಎಂಬ ಭಕ್ತಿಗೀತೆಯನ್ನೊಮ್ಮೆ ನೆನೆಯಿರಿ. ಅದನ್ನು ರಾಘವೇಂದ್ರ ಸ್ವಾಮಿಗಳ ಭಕ್ತನಾಗಿ ಅಣ್ಣಾವ್ರು ಹಾಡಿದ್ದು. ಹಾಗೆಯೇ ‘ಅನುದಿನ ನಿನ್ನ ನೆನೆದು ಮನವು ನಿನ್ನಲಿ ನಿಲ್ಲಲಿ…’ ಎಂಬ ಒಂದು ಭಕ್ತಿಗೀತೆ ಪುತ್ತೂರು ನರಸಿಂಹ ನಾಯಕ್ ಹಾಡಿದ್ದನ್ನು ನಾನಿಲ್ಲಿ ನೆನೆಯುತ್ತಿದ್ದೇನೆ. ‘ಹರಿಯನು ನೆನೆಯದ ನರಜನ್ಮವೇಕೆ…’, ‘ಸುಲಭದ ಮುಕುತಿಗೆ ಸುಲಭವೆಂದೆ ಣಿಸುವ ಜಲರುಹನಾಭನ ನೆನೆ ಮನವೇ ರಂಗ…’ ಇತ್ಯಾದಿ ಎಷ್ಟೋ ಹಾಡುಗಳಿವೆ. ಈ ಎಲ್ಲ ಹಾಡುಗಳನ್ನು ದೇವರಿಗೆ
ಅಭಿಷೇಕ ಮಾಡುವಾಗ ಹೇಳಿದರೆ ದೇವರನ್ನು ನೀರಲ್ಲಿ ನೆನೆಸುತ್ತೇನೆ ಅಂತಲೂ, ಪೂಜೆಗೆ ಮೊದಲು ಸ್ನಾನಮಾಡುವಾಗ (ನದಿ
ಯಲ್ಲಿ ಮುಳುಗೇಳುವಾಗ) ಹೇಳಿದರೆ ತಾನೇ ನೆನೆಯುತ್ತೇನೆಂದೂ ಅರ್ಥ ಮಾಡಿಕೊಳ್ಳಲಿಕ್ಕಾಗುತ್ತದೆ!

‘ಸನಕ ಸನಂದನ ಸನತ್ಸುಜಾತರೂ, ಘನಶುಕ ಶೌನಕ ವ್ಯಾಸ ವಾಲ್ಮೀಕರೂ ನೆನೆದು ನೆನೆದು ಕೊಂಡಾಡುವರು…’ ವಿದ್ಯಾಭೂಷಣರ ಧ್ವನಿಯಲ್ಲಿ ‘ರಂಗ ನಾಯಕ ರಾಜೀವಲೋಚನ…’ ಉದಯರಾಗವನ್ನು ಕೇಳುತ್ತಿದ್ದರೆ ಮೈಮರೆಯುವಂತಾಗುತ್ತದೆ. ನೆನೆದು ನೆನೆದು ಎಂಬ ದ್ವಿರುಕ್ತಿಯಿಂದ, ಆ ಋಷಿಮುನಿಗಳೆಲ್ಲ ಸರಯೂ ನದಿಯಲ್ಲಿ ಸ್ನಾನಿಸುತ್ತ ಧ್ಯಾನಿಸುತ್ತ ಇರುವ ಚಿತ್ರಣವೇ ಕಣ್ಮುಂದೆ ಬರುತ್ತದೆ,
ಕಾಶಿಯ ಬಳಿ ಗಂಗಾನದಿಯಲ್ಲಿ ಮೀಯುವ ಸಾಧುಸಂತರಂತೆ.

ಮತ್ತೆ, ನವಂಬರ್ ಕನ್ನಡಿಗರಿರುತ್ತಾರಲ್ಲ? ಮೂವತ್ತು ದಿನಗಳ ಮಟ್ಟಿಗೆ ಕನ್ನಡಾಭಿಮಾನ ಉಕ್ಕಿ ಹರಿಯುವವರು. ಕನ್ನಡ ನಾಡು-ನುಡಿಯ ಬಗೆಗಿನ ಪ್ರೀತಿರಸಧಾರೆಯಿಂದ ಕನ್ನಡಮ್ಮ ನನ್ನು ನೆನೆಯುವವರು(ಒದ್ದೆ ಆಗಿಸುವವರು). ಮಿಕ್ಕ ಹನ್ನೊಂದು ತಿಂಗಳುಗಳಲ್ಲಿ ಬೇಕಿದ್ದರೆ ಕನ್ನಡಮ್ಮ ತನ್ನದೇ ಕಣ್ಣೀರಿಂದಲೇ ನೆನೆಯಬೇಕೇನೊ. ಮುತ್ತಯ್ಯ ಭಾಗವತರು ‘ಭುವನೇಶ್ವರಿಯನೆನೆ ಮಾನಸವೇ…’ ಎಂದು ಹಾಡಿದ್ದು ನವೆಂಬರ್ ಕನ್ನಡಿಗರನ್ನು ಕುರಿತಾಗಿಯೇ ಇರಬಹುದೇ? ‘ದೂರದೇಶಕೆ ಹೋದ ಸಮಯದಿ ತನ್ನ ನಾಡನು ನೆನೆನೆನೆದುಬ್ಬದ… ಮಾನವ ನಿದ್ದರೆ ಲೋಕದಲಿ… ತಾವಿಲ್ಲವನಿಗೆ ನಾಕದಲಿ… ವೀರ ನಾಕದಲಿ!’ ಎಂದು ಕುವೆಂಪು ಹೇಳಿದ್ದು ಭಾರತ ದೇಶವನ್ನು ಹೀಗಳೆಯುವ ಕೆಲವು ಅನೀಶ್-ಟ ಅನಿವಾಸಿಗಳನ್ನು ಕುರಿತಾಗಿಯೇ ಇರಬಹುದೇ? ಕೆಲವರು ನಾಯಿ ಸಾಕುತ್ತಾರೆ, ಅದರ ಅಪರಿಮಿತ ಸ್ವಾಮಿ ನಿಷ್ಠೆ ಮತ್ತು ಪ್ರೀತಿಯಿಂದ ಸಂತಸಪಡುತ್ತಾರೆ.

ಸ್ವತಃ ಮಕ್ಕಳ ಮೇಲೆ ತೋರಿಸುವುದಕ್ಕಿಂತ ಹೆಚ್ಚು ಮಮತೆಯ ಮಹಾಪೂರವನ್ನು ನಾಯಿಯ ಮೇಲೆ ಹರಿಸುತ್ತಾರೆ. ಮುದ್ದಿನ ಟಾಮಿ ಬಂದು ತಮ್ಮ ಕಾಲು ನೆಕ್ಕಿದರೂ ಅವರಿಗೆ ಖುಶಿಯೇ ಹೊರತು ಹೇಸಿಗೆಯಾಗುವುದಿಲ್ಲ. ಅಂಥವರು ‘ಆಚಾರವಿಲ್ಲದ ನಾಲಿಗೆ…’ ಎಂಬ ದಾಸರ ಪದದ ‘ಚರಣಕಮಲ ನೆನೆ ನಾಲಿಗೆ…’ ಸಾಲನ್ನು ನಾಯಿಯ ನಾಲಿಗೆಯ ಜೊಲ್ಲಿನಿಂದ ತಮ್ಮ ಕಾಲು ಒದ್ದೆಯಾಗುವುದಕ್ಕೆ
ಅನ್ವಯಿಸುತ್ತಿರಬಹುದೇ? ನೆನೆ ಪದದಿಂದಲೇ ವ್ಯುತ್ಪತ್ತಿಯಾದ ನೆನೆಗುದಿ ಎಂಬೊಂದು ಪದ ಇದೆ. ಅನಿಶ್ಚಿತತೆ, ಪೇಚು, ತಳಮಳ ಎಂದು ಅರ್ಥ ಕೊಡುತ್ತದೆ.

ಬಹುಶಃ ನೆನೆಸಲು ಬಳಸುವ ನೀರು ಬಿಸಿಯಾಗಿ ಕುದಿಯತೊಡಗಿದರೆ ಆ ವಸ್ತು ಅಥವಾ ಸಂಗತಿ ಆಗ ನೆನೆಗುದಿಯಲ್ಲಿ ಬಿದ್ದಂತೆಯೇ. ನದಿ ನೀರು ಹಂಚಿಕೆಯ ಸಮಸ್ಯೆ ನೆನೆಗುದಿಗೆ ಅತಿ ಸಮರ್ಪಕ ಉದಾಹರಣೆ. ಅದರಲ್ಲಿ ನೆನೆಸಲು ನೀರೂ ಇದೆ, ಆ ನೀರು ಸರಿಯಾಗಿ ಬಟವಾಡೆಯಾಗಿಲ್ಲ ಎಂಬುದನ್ನು ನೆನೆದು ನೆನೆದು ಕುದಿಯುವ ನೆತ್ತರೂ ಇದೆ. ನ್ಯಾಯಬದ್ಧ ತೀರ್ಪು ಮಾತ್ರ ನೋಟಕ್ಕೆ ನಿಲುಕುವುದಿಲ್ಲ ಅಷ್ಟೇ! ನೀರಿನ ವ್ಯಾಜ್ಯದ ವಿಷಯ ಬಿಟ್ಟು ಮಳೆಯ ವಿಚಾರಕ್ಕೆ ಬಂದರೆ, ನೆನೆಯುವುದೆಂದರೆ ಒದ್ದೆಯಾಗುವುದೆಂದೂ ನೆನಪಿಸಿ ಕೊಳ್ಳುವುದೆಂದೂ ಅರ್ಥಗಳು ತುಂಬಾ ಚೆನ್ನಾಗಿ ಹೊಂದಿಕೊಳ್ಳುತ್ತವೆ.

ಆಲಿಕಲ್ಲು ಹೆಕ್ಕಲು ಅಂಗಳಕ್ಕೋಡಿ ಮಳೆಯಲ್ಲಿ ನೆನೆದದ್ದನ್ನು ನೆನೆಯುತ್ತೇವೆ. ಮರ್ಫಿಯ ನಿಯಮ ದಂತೆ, ಛತ್ರಿ ತೆಗೆದುಕೊಂಡು ಹೋಗಲು ಮರೆತ ದಿನವೇ ಮಳೆ ಸುರಿದು ನೆನೆಯಬೇಕಾಗಿ ಬಂದದ್ದನ್ನು ನೆನೆಯುತ್ತೇವೆ. ‘ಮಳೆಯಲ್ಲಿ ನೆನೆಯಬೇಡ ಅಂತ ಎಷ್ಟು ಸರ್ತಿ ಹೇಳಿಲ್ಲಾ ನಿನಗೆ? ಈಗ ನೋಡು ನೆಗಡಿಯಾಗಿದೆ’ ಎಂದು ಅಮ್ಮ ಗದರಿಸಿದ್ದನ್ನು ನೆನೆಯುತ್ತೇವೆ. ಮಳೆ ‘ನೆನೆ’ಸುವುದೇ ಹಾಗೆ,
ಮನದ ಒಳಗೂ ಮಳೆ ಮನೆಯ ಹೊರಗೂ ಮಳೆ ಎನ್ನುವಂತೆ.

ಮಳೆಯಲ್ಲಿ ನೆನೆಯುವ ಬಗ್ಗೆ ವಿeನಿಗಳ ಸಂಶೋಧನೆಯ ಒಂದು ಕುತೂಹಲಕರ ಅಂಶವೂ ಇಲ್ಲಿ ಪ್ರಸ್ತುತವೆನಿಸುತ್ತದೆ. ಮಳೆಯಲ್ಲಿ ನೆನೆಯುವ ಸಂದರ್ಭ ಅನಿವಾರ್ಯವಾಗಿ ಬಂದಾಗ, ಆದಷ್ಟೂ ಕಡಿಮೆ ಒದ್ದೆಯಾಗಬೇಕಾದರೆ ನಾವು ನಡೆದುಕೊಂಡು ಹೋಗಬೇಕೇ ಅಥವಾ ಓಡಬೇಕು? ಇದೊಂದು ಜಿeಸೆ. ಅರ್ಥವಾಗಲಿಲ್ಲವೇ? ವಿಶಾಲವಾದ ಒಂದು ಬಯಲಿನಲ್ಲಿ ಇಬ್ಬರು ವ್ಯಕ್ತಿಗಳು- ಅವರ ಹೆಸರು
ಲಗುಬಗೆ ಲಕ್ಕಪ್ಪ ಮತ್ತು ಮಂದಗಾಮಿ ಮಲ್ಲಣ್ಣ ಅಂತಿಟ್ಕೊಳ್ಳಿ- ಏನೋ ಕೆಲಸ ಮಾಡುತ್ತಿರಬೇಕಾದರೆ ಹಠಾತ್ತನೆ ಮಳೆ
ಬೀಳ ತೊಡಗುತ್ತದೆ. ಕೊಡೆ ರೈನ್‌ಕೋಟು ಏನೂ ಇಲ್ಲದ ಅವರು ಹತ್ತಿರದ ಮರದ ಕೆಳಗೆ ಹೋಗಿ ನಿಂತುಕೊಳ್ಳಬೇಕೆಂದಿದ್ದರೂ ಅದು
ಸುಮಾರು ೫೦೦ ಮೀಟರ್‌ಗಳಷ್ಟು ದೂರವಿದೆ.

ಲಕ್ಕಪ್ಪ ಮಳೆಯಲ್ಲಿ ಓಡುತ್ತಾನೆ, ಮೂರೇ ನಿಮಿಷಗಳಲ್ಲಿ ಮರದ ಆಶ್ರಯ ಪಡೆಯುತ್ತಾನೆ. ಮಲ್ಲಣ್ಣ ನಿಧಾನವಾಗಿ ನಡೆದುಕೊಂಡು ಬರಲು
ಆರು ನಿಮಿಷ ತಗಲುತ್ತದೆ. ಈಗ ಪ್ರಶ್ನೆಯೇನೆಂದರೆ ಲಕ್ಕಪ್ಪನಿಗಿಂತ ಮಲ್ಲಣ್ಣ ಹೆಚ್ಚು ಒದ್ದೆಯಾಗಿರುತ್ತಾನೆಯೇ, ಹೌದಾದರೆ ಎಷ್ಟು ಹೆಚ್ಚು? ಎರಡರಷ್ಟು? ನಿಮಗೆ ಆಶ್ಚರ್ಯವಾಗಬಹುದು, ಮಳೆಯಲ್ಲಿ ನಡೆಯುವುದಕ್ಕಿಂತ ಓಡಿದರೆ ಕಡಿಮೆ ನೆನೆಯುತ್ತೇವೆ ಎನ್ನುವುದು ಸಾಮಾನ್ಯeನವಾದರೂ, ಆ ಪ್ರಮಾಣ- ಅಂದರೆ ಶೇಕಡಾವಾರು ಎಷ್ಟು ಕಡಿಮೆ ಒದ್ದೆಯಾಗುತ್ತೇವೆ ಎಂಬುದು- ನಮ್ಮ ನಿರೀಕ್ಷೆಗಿಂತ ಕಡಿಮೆಯಿರುತ್ತದೆ. ಓಡಿದರೆ ಕಡಿಮೆಹೊತ್ತು ಮಳೆಯಲ್ಲಿರುತ್ತೇವೆ ಹೌದಾದರೂ ಓಟದ ರಭಸದಿಂದಾಗಿ ಹೆಚ್ಚು ಮಳೆಹನಿಗಳು ನಮ್ಮ ದೇಹವನ್ನು ನೆನೆಸಿರುತ್ತವೆ!

ಓಡಲಿಕ್ಕೆ ವ್ಯಯಿಸಿದ ಶ್ರಮ, ಒದ್ದೆಯಾಗುವುದರಲ್ಲಿನ ಉಳಿತಾಯಕ್ಕೆ ಹೋಲಿಸಿದರೆ ವೇಸ್ಟ್. ಈ ಕುರಿತು ಪ್ರಯೋಗಗಳನ್ನು ನಡೆಸಿ
ವಿeನವೇದಿಕೆಗಳಲ್ಲಿ ಪ್ರಬಂಧ ಮಂಡಿಸಿದವರಿದ್ದಾರೆ, ಪುಸ್ತಕ ಬರೆದವರಿದ್ದಾರೆ. 1977ರಲ್ಲಿ ಜರ್ಲ್ ವಾಕರ್ ಎಂಬಾತ ಬರೆದ
The Flying Circus Of Physics ಪುಸ್ತಕದಲ್ಲಿ, ಓಡುವುದೇ ಒಳ್ಳೆಯ ಆಯ್ಕೆ ಎಂದಿದ್ದರೆ, ರೀಡಿಂಗ್ ಯುನಿವರ್ಸಿಟಿಯ
ಹವಾ ಮಾನ ಶಾಸ್ತ್ರಜ್ಞರು ಪ್ರಸ್ತುತಪಡಿಸಿದ Raindrops keep falling on my head ಪ್ರಬಂಧದಲ್ಲಿ ಅದರ ಗಣಿತ ವಿಶ್ಲೇಷಣೆಯೂ ಇದೆ. ಪ್ರಯೋಗಾಲಯದಲ್ಲಿ ಎರಡು ವುಡನ್ ಬ್ಲಾಕ್‌ಗಳ ಮೇಲೆ ಕೃತಕ ಮಳೆ ಸುರಿಸಿ ಅವುಗಳನ್ನು ಬೇರೆಬೇರೆ ವೇಗದಲ್ಲಿ ಚಲಿಸಿದಾಗ ಮೇಲೆ ಬಿದ್ದ ಮಳೆಹನಿಗಳ ಲೆಕ್ಕವಿದೆ.

ನೋಡಿದಿರಾ! ಮಳೆಗರೆದ ಹನಿಹನಿಗೆ ಭೂತಾಯಿ ಲೆಕ್ಕ ಬರೆಯದಿದ್ದರೂ ಸಂಶೋಧಕ ಮನಸ್ಸಿನ ವಿeನಿಗಳಿಗೆ ಆ ಲೆಕ್ಕದಲ್ಲೂ ಆಸಕ್ತಿ!
ನಾರ್ತ್ ಕೆರೊಲಿನಾದ ಸಂಶೋಧಕರಾದ ಥಾಮಸ್ ಪೀಟರ್ ಸನ್ ಮತ್ತು ಟ್ರೆವರ್ ವಾಲೆಸ್ ಬರೆದಿರುವ Running In The
Rain ಪ್ರಬಂಧದಲ್ಲಿ ಈ ಬಗ್ಗೆ ಮತ್ತಷ್ಟು ಅಂಕಿಅಂಶಗಳಿವೆ. ಜೋರಾದ ಗಾಳಿಯಿಲ್ಲದೆ ಮಳೆ ಮಾತ್ರ ಬೀಳುತ್ತಿದ್ದರೆ, ನಡೆಯುವುದಕ್ಕಿಂತ ಓಡುವುದರಿಂದ ನೆನೆಯುವ ಪ್ರಮಾಣದಲ್ಲಿ ೧೦ ಶೇಕಡಾ ಮಾತ್ರ ಉಳಿತಾಯ. ಆದರೆ ಗಾಳಿಯೂ ಬೀಸುತ್ತಿದ್ದರೆ ಆಗ ನಡೆಯುವು ದರಲ್ಲೂ ಓಡುವುದರಲ್ಲೂ ನೆನೆಯುವ ಅನುಪಾತ ೪೦ ಶೇಕಡಾದಷ್ಟು ವ್ಯತ್ಯಾಸವಾಗಬಹುದು.

ಗಾಳಿ ಬೀಸುತ್ತಿರುವ ದಿಕ್ಕಿನಲ್ಲೇ ಗಾಳಿಯಷ್ಟೇ ವೇಗದಲ್ಲಿ ಓಡಿದರೆ ಒಂಚೂರೂ ಒದ್ದೆಯಾಗದೇ ಬರಬಹುದು! ಅದೇನಿದ್ದರೂ ಥಿಯರಿ ಯಲ್ಲಷ್ಟೇ; ಪ್ರಾಕ್ಟಿಕಲ್ ಪ್ರಪಂಚದಲ್ಲಿ ಮಳೆಬಂದಾಗ ಓಡಿದರೂ ನಡೆದರೂ ‘ನೆನೆಯದೆ ಇರಲಾರೆ ಸ್ವಾಮೀ…’ ಅಂತೂ ಎಲ್ಲ ಪ್ರಯೋಗ ಪರೀಕ್ಷೆಗಳ ತಾತ್ಪರ್ಯ ಇಷ್ಟೇ: ಮಳೆ ಬಂತು ಮಾರಾಯ… ಕೊಡೆ ಹಿಡಿಯೊ ಸುಬ್ರಾಯ… ಎಂದು ಏದುಸಿರು ಬಿಡುತ್ತಾ ಓಡುವುದರಲ್ಲಿ ಹೇಳಿಕೊಳ್ಳುವಂಥ ಪ್ರಯೋಜನವೇನೂ ಇಲ್ಲ. ಸ್ವಾತಿಮುತ್ತಿನ ಮಳೆಹನಿಗಳು ಮೆಲ್ಲಮೆಲ್ಲನೆ ಧರೆಗಿಳಿಯುತ್ತಿದ್ದರೆ ಅವನ್ನೆಲ್ಲ ಆನಂದಿಸಿ ಅನುಭವಿಸುತ್ತ ಮೆಲ್ಲಮೆಲ್ಲನೆ ನಡೆದುಕೊಂಡು ಹೋಗುವುದೇ ಹೆಚ್ಚಿನ ಖುಶಿ. ಮತ್ತೆ, ಮಳೆಯಲ್ಲಿ ನೆನೆದು ನೆಗಡಿಯಾದರೆ ಹೇಗೂ ಇದ್ದದ್ದೇ… ಆ…ಕ್ಷಿ…!

ಸರಿ, ಇಷ್ಟೆಲ್ಲ ನೆನೆದ ಮೇಲೆ ಈಗೊಂದು ರಸಪ್ರಶ್ನೆ. ‘ನೆನೆ’ ಎಂದೊಡನೆ ನೀವು ನೆನೆಯಬಹುದಾದ, ಹಿಂದೀ ಚಿತ್ರರಂಗದಲ್ಲಿ ಮೆರೆದ ಮೋಹಕ ಮಾದಕ ಮಧುರರೂಪದ ನಾಯಕಿ ಯಾರು? ಮಳೆಯಲ್ಲಿ ನೆನೆದ ನರ್ಗಿಸ್ ಎಂದಾಗಲೀ, ಜಲಪಾತದಡಿ ನೆನೆದ ಮಂದಾಕಿನಿ ಎಂದಾಗಲೀ, ಅಥವಾ ನೆನೆದೂ ನೆನೆದೂ ನೆನಪುಗಳನ್ನು ನಿರಂತರ ನೆನೆಸಿಟ್ಟ ಬೇರಾವ ನಟಿಯ ಹೆಸರನ್ನಾಗಲೀ ಬರೆದರೆ ಈ ಪ್ರಶ್ನೆಗದು ಉತ್ತರವಾಗುವುದಿಲ್ಲ; ಯಾರಿರಬಹುದು ಆ ಮಧುರ ರೂಪದ, ಮಧುರ ಹೆಸರಿನ, ಮದುವೆಯಾಗಿ ‘ನೆನೆ’ದ ವೈಯಾರಿ?

error: Content is protected !!