Friday, 26th July 2024

ಲಡ್ಡುಗೆ, ಲಡ್ಡು, ಲಾಡು, ಉಂಡೆ…ನಾಮಾವಳಿ ಮತ್ತು ಕಥಾವಳಿ

ತಿಳಿರು ತೋರಣ

srivathsajoshi@yahoo.com

ಉಂಡೆ-ಲಾಡು-ಲಡ್ಡು-ಲಡ್ಡುಕ ಎಲ್ಲದರ ಪ್ರಪಿತಾಮಹ ಯಾವುದೆಂದರೆ ಎಳ್ಳುಂಡೆಯೇ! ಮೊತ್ತಮೊದಲಿಗೆ ಉಂಡೆ ಕಟ್ಟಿದ ಖ್ಯಾತಿ ಕ್ರಿಸ್ತಪೂರ್ವ ಐದನೆಯ ಶತಮಾನ ಕಾಲಘಟ್ಟದಲ್ಲಿ ಬಾಳಿದ್ದನೆನ್ನಲಾದ ಸುಶ್ರುತ ಮಹರ್ಷಿಯದು. ಆತ ತನ್ನ ರೋಗಿಗಳಿಗೆ ಚಿಕಿತ್ಸೆಯ ರೂಪದಲ್ಲಿ ಎಳ್ಳಿನ ಉಂಡೆ- ತುಪ್ಪದಲ್ಲಿ ಹುರಿದ ಎಳ್ಳನ್ನು ಬೆಲ್ಲದ ಪಾಕ ಅಥವಾ ಜೇನುತುಪ್ಪದಲ್ಲಿ ಮಿಶ್ರಣ ಮಾಡಿ ಕಟ್ಟಿದ ಉಂಡೆ-ಗಳನ್ನು ಕೊಡುತ್ತಿದ್ದನಂತೆ.

ಅಮೃತಮತಿ ಮತ್ತು ಅಷ್ಟಾವಂಕನ ಕಥೆಯಿಂದಲೇ ಆರಂಭಿಸೋಣ. ಇದು ಹದಿಮೂರ ನೆಯ ಶತಮಾನದಲ್ಲಿ ಬಾಳಿದ್ದ ಕವಿ ಜನ್ನ ಬರೆದ ಯಶೋಧರ ಚರಿತೆಯಲ್ಲಿ ಬರುವ ಪ್ರಸಂಗ. ಯುವರಾಜ ಯಶೋಧರನ ಪತ್ನಿ ಅಮೃತಮತಿ ಮಕ್ಕಳಿಲ್ಲದೆ ಕೊರಗು ತ್ತಾಳೆ. ಯಶೋಧರನ ಗಂಡಸುತನವನ್ನೇ ಶಂಕಿಸುತ್ತಾಳೆ. ಸಾಲದೆಂಬಂತೆ ಕುದುರೆಲಾಯದ ಉಸ್ತುವಾರಿ ನೋಡಿ ಕೊಳ್ಳುತ್ತಿದ್ದ ಅಷ್ಟಾವಂಕನ ಕಂಠಮಾಧುರ್ಯಕ್ಕೆ ಮನಸೋಲುತ್ತಾಳೆ, ಆತನಲ್ಲಿ ಮೋಹಿತಳಾಗುತ್ತಾಳೆ.

ಸೇವಕಿಯ ಮೂಲಕ ಆತನನ್ನು ಒಪ್ಪಿಸಿ ತಾನೇ ಲಾಯಕ್ಕೆ ಹೋಗಿಬರಲಾರಂಭಿಸುತ್ತಾಳೆ. ಅನುಮಾನ ಬಂದ ಯಶೋಧರ ಒಂದು ರಾತ್ರಿ ಅಮೃತಮತಿಯನ್ನು ಹಿಂಬಾಲಿಸುತ್ತಾನೆ. ಆಕೆ ಅಷ್ಟಾವಂಕನಲ್ಲಿಗೆ ಹೋಗಿ ಅವರಿಬ್ಬರು ಜೊತೆಯಾಗುವುದನ್ನು ಕಣ್ಣಾರೆ ಕಾಣುತ್ತಾನೆ. ಆಕೆಯನ್ನು ಕೊಲ್ಲಬೇಕೆನಿಸಿದರೂ ಜಿನತತ್ತ್ವ ನೆನಪಾಗಿ ಕೊಲ್ಲದೆ ಹಿಂದಿರುಗುತ್ತಾನೆ. ತನ್ನ ಅನೈತಿಕ ಪ್ರೇಮವ್ಯವಹಾರ ಗಂಡನಿಗೆ ಮತ್ತು ಅತ್ತೆಗೆ ಗೊತ್ತಾಗಿದೆಯೆಂದು ಅಮೃತಮತಿ ತಿಳಿದುಕೊಳ್ಳುತ್ತಾಳೆ.

ಅವರನ್ನೇ ಮುಗಿಸಿಬಿಟ್ಟರೆ ಹೇಗೆ ಎಂದು ಆಲೋಚಿಸುತ್ತಾಳೆ. ತಪಸ್ಸಿಗೆ ಹೊರಡುತ್ತೇವೆ ಎಂದ ಅವರಿಬ್ಬರನ್ನೂ ಊಟಕ್ಕೆ ಕರೆಯುತ್ತಾಳೆ. ‘ಜನಪತಿ ಮನಮಲ್ಲದ ಮನದೊಳೊಡಂಬಟ್ಟು ಬಂದು ತಾಯೊಡನುಣೆ ನಂಜಿನ ಲಡ್ಡುಗೆಯಂ ಮಾಡಿದು ದನುಣ್ ಮಹಾರಾಜ ಎಂಬಿನಂ ಸವಿದುಂಡಂ’- ಯಶೋಧರನಿಗೆ ಮನಸ್ಸಿಲ್ಲದಿದ್ದರೂ ಒಪ್ಪಿಕೊಳ್ಳುತ್ತಾನೆ. ತಾಯಿ ಯೊಡನೆ ಅಮೃತಮ ತಿಯ ಅಂತಃಪುರಕ್ಕೆ ಬರುತ್ತಾನೆ. ಅಲ್ಲಿ ಅವನೂ ಅವನ ತಾಯಿಯೂ ಅಮೃತಮತಿ ಉಣಬಡಿಸಿದ ವಿಷದ ಲಡ್ಡುಗೆಯನ್ನು ಸವಿಯುತ್ತಾರೆ.

ಹೀಗೆ ಅಮೃತಮತಿ ಅವರಿಬ್ಬರ ಸಾವಿಗೆ ಕಾರಣಳಾಗುತ್ತಾಳೆ. ಅನಂತರ ಎಲ್ಲರೂ ವಿವಿಧ ಜನ್ಮಾಂತರಗಳಲ್ಲಿ ಮರುಹುಟ್ಟು ಪಡೆಯುತ್ತಾರೆ… ಎಂದು ಕಥೆ ಮುಂದುವರಿಯುತ್ತದೆ. ಯಶೋಧರ ಚರಿತೆಯಲ್ಲಿ ಅಮೃತಮತಿಯ ಈ ಚಿತ್ತ ವ್ಯಾಕುಲತೆಯನ್ನು ವಿದ್ವಾಂಸರು, ರಸಜ್ಞರು ಬೇರೆಬೇರೆ ತರ್ಕಗಳಿಂದ, ದೃಷ್ಟಿಕೋನಗಳಿಂದ ವ್ಯಾಖ್ಯಾನಿಸಿದ್ದಾರೆ. ಅಷ್ಟಾವಂಕನಲ್ಲಿ ಆಕೆ ಅನುರಕ್ತ ಳಾಗಲಿಕ್ಕೆ ಬರೀ ಅವನದೊಂದು ಹಾಡು ಮಾತ್ರ ಕಾರಣವಾಗಿರಲಿಕ್ಕಿಲ್ಲ, ಅರಮನೆಯ ಭೋಗಬಂಧನದಲ್ಲಿ ಆಕೆ ಅನುಭವಿಸು ತ್ತಿದ್ದ ತಳಮಳ, ಮತ್ತು ಜನಪದ ಸಂಗೀತಾದಿ ಕಲೆಗಳ ಬಗ್ಗೆ ಆಕೆಗಿದ್ದ ಆಸಕ್ತಿಗಳೇ ಹಾಗೆ ಮಾಡಿಸಿದುವು ಅಂತೆಲ್ಲ ವಿವರಿಸಿದ್ದಾರೆ.

ಅದೇನೇ ಇರಲಿ, ಸಖೇದಾಶ್ಚರ್ಯವಾಗುವುದೇ ನೆಂದರೆ ಅಮೃತಮತಿ ಎಂದು ಹೆಸರಿದ್ದೂ ಆಕೆ ತನ್ನದೇ ಗಂಡನಿಗೆ ಮತ್ತು ಅತ್ತೆಗೆ ಕೈಯಾರೆ ವಿಷವುಣಿಸುವಷ್ಟು ಮತಿಗೆಟ್ಟಳಲ್ಲ ಎಂಬುದು. ನನಗೆ ಅದಕ್ಕಿಂತಲೂ ಆಶ್ಚರ್ಯ ಅಥವಾ ಕುತೂಹಲವೆನಿಸುವ ವಿಚಾರವೊಂದಿದೆ. ಈ ಪೌರಾಣಿಕ ಕಥೆಗಳಲ್ಲಿ ವಿಷವುಣಿಸಲಿಕ್ಕೆ ಲಡ್ಡುಗೆಯನ್ನೇ ಏಕೆ ಬಳಸುತ್ತಿದ್ದರು? ಜಿಲೇಬಿ, ಹೋಳಿಗೆ ಅಥವಾ ಬೇರಾವ ತಿಂಡಿ-ತಿನಿಸನ್ನು ಅಲ್ಲವೇಕೆ? ಆ ಕಾಲದಲ್ಲೇನೂ ಲಡ್ಡುಗೆ ಮಾತ್ರ ಬಾಯಿಯಲ್ಲಿ ನೀರೂರಿಸುವ ಭಕ್ಷ್ಯವಾಗಿ ಇದ್ದದ್ದಲ್ಲ.

‘ಪೂರಿಗೆ ಇಡ್ಡಲಿಗೆ ಸೋದಿಗೆ ಲಾವಣಿಗೆ -ತಪೂರಂ ಲಡ್ಡುಗೆ ಮಂಡಗೆ ಮೊದಲಾಗೊಡೆಯ ಪದಿನೆಂಟುಂ ತೆರದ ಭಕ್ಷ್ಯರೂ ಪಂಗಳುಮಂ…’ ಎಂದು ವಡ್ಡಾರಾಧನೆಯಲ್ಲಿ ಬರುತ್ತದಂತೆ- ಶಿವಗುಪ್ತಾಚಾರ್ಯ ಮತ್ತವನ ಶಿಷ್ಯ ನಂದಿಮಿತ್ರನನ್ನು ಮಹಾ ದೇವಿಯು ಹೇಗೆ ಸತ್ಕರಿಸಿದಳು ಎಂಬ ಬಣ್ಣನೆಯಲ್ಲಿ. ಹಾಗಾಗಿ ನನ್ನ ಪ್ರಶ್ನೆ ವಿಷಪ್ರಾಶನಕ್ಕೆ ಲಡ್ಡುಗೆಯೇ ಏಕೆ? ನಿಮಗೆ ನೆನಪಿರ ಬಹುದು ಮಹಾಭಾರತದಲ್ಲಿ ಶಕುನಿಯ ನಿರ್ದೇಶನದ ಪ್ರಕಾರ ಕೌರವರು ಭೀಮಸೇನನಿಗೆ ವಿಷವುಣ್ಣಿಸಿದ್ದೂ ಲಡ್ಡುಗೆಯಲ್ಲೇ. ‘ಬಂಡಿ ಅನ್ನವನುಂಡಿತು ಕೂಸು| ಬಕನ ಪ್ರಾಣವ ಕೊಂದಿತು ಕೂಸು| ವಿಷದ ಲಡ್ಡುಗೆ ಮೆದ್ದಿತು ಕೂಸು| ಮಡದಿಗೆ ಪುಷ್ಪವ ಕೊಟ್ಟಿತು ಕೂಸು…’ ಎಂದು ಪುರಂದರ ದಾಸರೂ ಅದನ್ನು ಉಲ್ಲೇಖಿಸಿದ್ದಾರೆ ‘ಕೂಸಿನ ಕಂಡೀರ್ಯಾ ಗುರು ಮುಖ್ಯ ಪ್ರಾಣನ ಕಂಡೀರ್ಯಾ…’ ಕೀರ್ತನೆಯಲ್ಲಿ.

ಅಷ್ಟಾಗಿ, ‘ವಿಷದ ಲಡ್ಡುಗೆಯನಿಕ್ಕಿಯುಂ ಎನಿತಾನುಂ ಉಪದ್ರವಂಗಳೊಳ್ ತೊಡರಿಕ್ಕಿಯುಂ ಗೆಲಲಾರದೆ…’ ಹೋದರು, ಕೌರವರು ಮನಸ್ಸು ಕುಗ್ಗಿ ಧೈರ್ಯಗೆಟ್ಟರು… ಎಂದು ಪಂಪಭಾರತದಲ್ಲಿ ಪಾಂಡವರ ಗುಣಗಾನ. ಇರಲಿ, ಪುರಾಣಕಥೆಗಳನ್ನು ನೆನಪಿಸಿಕೊಂಡಿದ್ದು- ಈಗ ನಾವು ಲಡ್ಡು ಅಥವಾ ಲಾಡು ಎಂದೇನು ಕರೆಯುತ್ತೇವೆಯೋ, ಹಿಂದಿನ ಕಾಲದಲ್ಲಿ ಅದನ್ನು ಲಡ್ಡುಗೆ ಎನ್ನುತ್ತಿದ್ದರು ಎಂದು ತೋರಿಸಲಿಕ್ಕೆ. ‘ಷಡ್ಡಕನಿಗಿಂತ ನೆಂಟನಿಲ್ಲ, ಲಡ್ಡುಗೆಗಿಂತ ಕಜ್ಜಾಯವಿಲ್ಲ’ ಅಂತೊಂದು ಗಾದೆಮಾತೂ ಇದೆಯಂತೆ.

ಪ್ರಾಚೀನ ಕರ್ನಾಟಕದ ತಿಂಡಿತಿನಸುಗಳ ಪ್ರಸ್ತಾವವಾದಾಗೆಲ್ಲ ನೆನಪಾಗುವ ಮಂಗರಸನ ಸೂಪಶಾಸ್ತ್ರದಲ್ಲೂ ಲಡ್ಡುಗೆ ಎಂದೇ ಹೆಸರಿಸಲಾಗಿದೆ, ಮತ್ತು ಅದರ ತಯಾರಿಯ ವಿಧಾನ ಹೀಗಿದೆ: ‘ಬಿಳಿಯ ಕಡಲೆಯ ಸಣ್ಣಹಿಟ್ಟ ಸೋದಿಸಿ ಹಾಲಿ| ನೊಳಗಿಕ್ಕಿ ಸಂಪಳವ ಮಾಡಿ ತೆಂಗಿನ ಕರಟ| ದೊಳಗೆ ಕಿರುವೆರಲಗಾತ್ರದ ವೆಜ್ಜವಂ ಮಾಡಿ ತುಂಬಿ ತುಪ್ಪವನು ಕಾಸಿ| ಇಳಿಯಬಿಡೆ ಬುರುಬುರನೆ ಬೆಂದು ಹದನಾದುಂಡೆ| ಗಳಿಗೆ ಸಕ್ಕರೆಯ ಪಾಕವ ಹೊಯ್ದು ನವ್ಯಪರಿ| ಮಳವನಿಕ್ಕಿ ಕಟ್ಟಿ ಪೊರೆ ಯಲಡ್ಡುಗೆಗಳೆಂದು ಹೆಸರನೊಲವಿಂ ಕರೆವುದು…’ ಇದು ಬಹುಮಟ್ಟಿಗೆ ಬೂಂದಿಲಾಡು ತಯಾರಿಯ ವಿಧಾನವೇ, ತೆಂಗಿನ
ಕರಟದಲ್ಲಿ ಮಾಡಿದ ತೂತಿನಿಂದ ಹಿಟ್ಟನ್ನು ಬಿಸಿ ತುಪ್ಪದಲ್ಲಿ ಬಿಡುವುದು ಎಂಬ ಅಂಶವನ್ನು ಹೊರತುಪಡಿಸಿದರೆ. ತೆಂಗಿನ ಕರಟ ನಮ್ಮಲ್ಲಿ ಈಗಲೂ ಬಳಸುವುದು ಜಿಲೇಬಿ ಮಾಡಲಿಕ್ಕೆ ಮಾತ್ರ.

ಅಂದಹಾಗೆ ತೆಂಗಿನ ಕರಟದ ತೂತಿಂದ ಬಂದ ಹಿಟ್ಟು ತುಪ್ಪದಲ್ಲಿ ಕರಿದು ಉಬ್ಬಿದಾಗಲೇ ಸಾಕಷ್ಟು ದೊಡ್ಡ ಉಂಡೆಯಂತೆ ಕಾಣ
ಬಹುದು; ಅಂಥ ಉಂಡೆಗಳ ಮೇಲೆ ಸಕ್ಕರೆ ಪಾಕ ಹೊಯ್ದು ಕಟ್ಟಿದರೆ ಆ ಲಡ್ಡುಗೆಯು ತಿರುಪತಿ ಲಡ್ಡುವಿಗಿಂತಲೂ ಡಬಲ್
ಸೈಜಿನದು ಆಗಬಹುದೇನೋ! ತೀರ ಹಳಗನ್ನಡದಲ್ಲಿ ಮಾತ್ರವಲ್ಲ, ನಡುಗನ್ನಡದಲ್ಲಿಯೂ ಲಡ್ಡುಗೆ ಪದಬಳಕೆ ಇತ್ತೆಂಬುದಕ್ಕೆ ಕುಮಾರವ್ಯಾಸನ ಈ ಷಟ್ಪ ದಿಯೂ ಒಂದು ನಿದರ್ಶನ. ‘ಒಡ್ಡು ಮೆರೆದುದು ಮೇಘ ಘಟೆ ಬಿಸಿ| ಲೊಡ್ಡು ಮುರಿದುದು ಚಂದ್ರಸೂರ್ಯರ| ನಡ್ಡವಿಸಿ ಹಿಡಿಯಾಳ ಹಿಡಿದವು ಮುಗಿಲ ಚೂಣಿಗಳು| ಖಡ್ಡಿ ತಡೆವುದೆ ಕಡಲ ನುಡುಗಣ| ದೊಡ್ಡ ಕಾಣೆನು ಮುಗಿಲ ಬೆನಕಗೆ| ಲಡ್ಡುಗೆಗಳಾದವು ಸಮಸ್ತ ಗ್ರಹ ಸುತಾರೆಗಳು||’ ಕರ್ಣಾಟಭಾರತ ಕಥಾಮಂಜರಿಯ ಆದಿಪರ್ವದ್ದು. ಇಲ್ಲಿ ಲಡ್ಡುಗೆಯನ್ನು ಭಕ್ಷ್ಯವೆನ್ನುವುದಕ್ಕಿಂತ ಒಂದು ಉಪಮೆಯಾಗಿ ಬಳಸಲಾಗಿದೆ.

ಕವಿಯ ಕಣ್ಣಿಗೆ ಮೋಡವು ಹೇಗೆ ಕಾಣಿಸಿತೆಂಬ ವರ್ಣನೆ. ಆನೆಯಾಕಾರದ ಮೋಡಗಳ ಸೈನ್ಯದ ಹಾವಳಿಗೆ ಬಿಸಿಲಿನ ಸೈನ್ಯವು ಸೋತಿತು. ಚಂದ್ರ-ಸೂರ್ಯರ ಸೈನ್ಯವನ್ನು ಅಡ್ಡಗಟ್ಟಿ ಮೋಡದ ಸೈನ್ಯಗಳು ಶತ್ರುಗಳನ್ನು ಸೆರೆಹಿಡಿದವು. ಎಷ್ಟೆಂದರೂ ಚಿಕ್ಕದೊಂದು ಕಟ್ಟಿಗೆಯ ಚೂರು ಅಷ್ಟು ದೊಡ್ಡ ಸಮುದ್ರವನ್ನು ತಡೆದೀತೆ? ಮೋಡವೆಂಬ ಗಣಪತಿಗೆ ಗ್ರಹ ನಕ್ಷತ್ರಗಳೆಲ್ಲವೂ ಗುಳುಂ ಗುಳುಂ ಎಂದು ಮುಕ್ಕಿ ಮುಗಿಸಬಹುದಾದ ಲಡ್ಡುಗೆಗಳಾದುವು- ಎಂದು ಕವಿಕಲ್ಪನೆಯ ಆಲಂಕಾರಿಕ ವಿಶ್ಲೇಷಣೆ.

ಕುಮಾರವ್ಯಾಸನೇನು ಸಾಮಾನ್ಯನೇ? ಲಡ್ಡುಗೆ ಕನ್ನಡಕ್ಕೆ ಬಂದದ್ದು ಸಂಸ್ಕೃತದ ‘ಲಡ್ಡುಕ’ದಿಂದ. ಅದನ್ನೇ ಹಿಂದೀ ಮತ್ತಿತರ ಉತ್ತರ ಭಾರತೀಯ ಭಾಷೆಗಳು ‘ಲಡ್ಡು’ ಮಾಡಿದುವು. ಉತ್ತರ ಭಾರತೀಯರು ಬಾಲಕೃಷ್ಣನನ್ನು ‘ಲಡ್ಡು ಗೋಪಾಲ’ ಎಂದು ಪೂಜಿಸುತ್ತಾರೆ. ಅದಕ್ಕೊಂದು ಲಡ್ಡುವಿನಷ್ಟೇ ಸಿಹಿಯಾದ ಕಥೆಯೂ ಇದೆ: ಒಂದಾನೊಂದು ಕಾಲದಲ್ಲಿ ಮುಕುಂದಾನಂದ ಎಂಬ ಹೆಸರಿನ ಕೃಷ್ಣಭಕ್ತನೊಬ್ಬನಿದ್ದನು. ಮನೆಯಲ್ಲಿದ್ದ ಕೃಷ್ಣನ ಮೂರ್ತಿಗೆ ನೈವೇದ್ಯ ಮಾಡದೆ ಏನನ್ನೂ ಸ್ವೀಕರಿಸದಷ್ಟು
ಪರಮಭಕ್ತಿ ಆತನದು. ಅವನಿಗೆ ರಘುನಂದನ ಎಂಬ ಹೆಸರಿನ, ಇನ್ನೂ ಎಳೆ ಪ್ರಾಯದ ಮಗನಿದ್ದನು. ಒಮ್ಮೆ ಮುಕುಂದಾ ನಂದನು ತನ್ನ ಪ್ರಿಯಶಿಷ್ಯನೊಬ್ಬನನ್ನು ಭೇಟಿಯಾಗುವುದಕ್ಕೆಂದು ಪರವೂರಿಗೆ ಹೋಗಬೇಕಾಯಿತು.

ಜೀವನ್ಮರಣ ಹೋರಾಟ ನಡೆಸುತ್ತಿದ್ದ ಶಿಷ್ಯನಿಗೆ ಕೃಷ್ಣನಾಮ ಕೇಳಿಸಿದರೆ ಬದುಕಿಯಾನು, ಒಂದೊಮ್ಮೆ ವಿಧಿ ಲಿಖಿತದಂತೆ ಸತ್ತರೂ ಸ್ವರ್ಗಪ್ರಾಪ್ತಿಯಾಗಬಹುದು ಎಂದುಕೊಂಡು ಮುಕುಂದಾನಂದ ಅವಸರದಿಂದಲೇ ಹೊರಟನು. ತನ್ನ ಅನುಪಸ್ಥಿತಿ ಯಲ್ಲಿ ಕೃಷ್ಣನಿಗೆ ಪೂಜೆ ಮತ್ತು ನೈವೇದ್ಯ ಅರ್ಪಣೆ ರಘುನಂದನನೇ ಮಾಡಲಿ ಎಂದು ಹೆಂಡತಿಗೆ ಹೇಳಿಹೋದನು.

ಮಾರನೆಯ ದಿನ ರಘುನಂದನ ಅಮ್ಮ ಮಾಡಿಕೊಟ್ಟ ಲಡ್ಡುಗಳನ್ನು ತಟ್ಟೆಯಲ್ಲಿಟ್ಟುಕೊಂಡು ಕೃಷ್ಣನ ವಿಗ್ರಹದ ಬಳಿಸಾರಿದನು. ‘ಈ ಲಡ್ಡುಗಳೆಲ್ಲ ನಿನಗೇ ಅರ್ಪಣೆ!’ ಎಂದು ಹೇಳಿಬರುವಂತೆ ಅಮ್ಮ ಅವನಿಗೆ ತಿಳಿಸಿದ್ದಳು. ಹಾಗೆಯೇ ಮಾಡಿದ ರಘುನಂದನ
ನಿಜವಾಗಿಯೂ ಕೃಷ್ಣ ಬಂದು ಲಡ್ಡುಗಳನ್ನು ತಿನ್ನುತ್ತಾನೆಂದುಕೊಂಡಿದ್ದನು. ಮತ್ತೆಮತ್ತೆ ಕರೆದರೂ ಕೃಷ್ಣನ ಸುಳಿವಿಲ್ಲ. ಕೊನೆಗೂ ಬಾಲಕನ ಮುಗ್ಧ ಭಕ್ತಿಗೆ ಮೆಚ್ಚಿನ ಕೃಷ್ಣನು ಒಬ್ಬ ಪುಟ್ಟ ಬಾಲಕನಾಗಿಯೇ ಕಾಣಿಸಿಕೊಂಡು ಅಂಬೆಗಾಲಿಕ್ಕುತ್ತ ಬಂದು
ತಟ್ಟೆಯಲ್ಲಿದ್ದ ಲಡ್ಡುಗಳನ್ನೆಲ್ಲ ಭಕ್ಷಿಸಿದನು.

ಮುಕುಂದಾನಂದ ಮನೆಯಲ್ಲಿಲ್ಲದಿದ್ದ ಐದಾರು ದಿನ ಕೃಷ್ಣಪೂಜೆಯ ವೇಳೆ ಹೀಗೆಯೇ ಆಯಿತು. ನೈವೇದ್ಯದ ಲಡ್ಡುಗಳನ್ನು ರಘುನಂದನನೇ ತಿನ್ನುತ್ತಿರ ಬೇಕೆಂದು ಅಮ್ಮನೂ ಅಂದುಕೊಂಡಿದ್ದಳು. ಮುಕುಂದಾನಂದ ಊರಿಗೆ ಹಿಂದಿರುಗಿದ ದಿನ ಆಗಷ್ಟೇ ರಘುನಂದನ ತಟ್ಟೆಯಲ್ಲಿ ಲಡ್ಡುಗಳನ್ನಿಟ್ಟುಕೊಂಡು ಪೂಜೆಗೆ ತೆರಳಿದ್ದನು. ಹೆಂಡತಿಯಿಂದ ವಿಷಯ ತಿಳಿದುಕೊಂಡ ಮುಕುಂದಾನಂದ ಈ ರಹಸ್ಯವೇನೆಂಬ ಕುತೂಹಲದಿಂದ ಮರೆಯಲ್ಲಿ ನಿಂತು ನೋಡುತ್ತಾನೆ, ಆವತ್ತೂ ಕೃಷ್ಣನೇ ಬಾಲಕನಾಗಿ ಬಂದು ಲಡ್ಡುಗಳನ್ನು ಸ್ವೀಕರಿಸಿದ್ದಾನೆ.

ಮುಕುಂದಾನಂದನ ದೃಷ್ಟಿಗೆ ಬಿದ್ದದ್ದೇ ತಡ, ಕೃಷ್ಣ ಅಂಬೆಗಾಲಿಕ್ಕುತ್ತ ಒಂದು ಕೈಯಲ್ಲಿ ಲಡ್ಡು ಹಿಡಿದುಕೊಂಡ ಆ ಭಂಗಿಯಲ್ಲೇ ವಿಗ್ರಹವಾಗಿ ಹೋಗಿದ್ದಾನೆ. ಅಂದಿನಿಂದ ‘ಲಡ್ಡು ಗೋಪಾಲ’ನಾಗಿ ಪೂಜೆಗೊಳ್ಳುತ್ತಿದ್ದಾನೆ. ನಿಮಗೆ ಉತ್ತರ ಭಾರತದವರಾ ರಾದರೂ ಸ್ನೇಹಿತರಿದ್ದರೆ ಕೇಳಿನೋಡಿ: ಲಡ್ಡು ಗೋಪಾಲನ ಬಗ್ಗೆ ಭಾವುಕರಾಗಿ ಬಣ್ಣಿಸುತ್ತಾರೆ.

ಮುಂದಿನ ಲಡ್ಡು ಕಥೆ ಪುರಾಣದ್ದಲ್ಲ, ೨೧ನೆಯ ಶತಮಾನದ ಭವ್ಯ ಭಾರತದ್ದು. ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ರೇಡಿಯೊ ಕಾರ್ಯಕ್ರಮ ‘ಮನ್ ಕೀ ಬಾತ್’ನದು. ಇದೀಗ ಯಶಸ್ವಿ ೧೦೦ ಸಂಚಿಕೆಗಳನ್ನು ಪೂರೈಸಿರುವ ಈ ಅನನ್ಯ ಆತ್ಮೀಯ ಕಾರ್ಯಕ್ರಮಕ್ಕೆ ಮೂಲಪ್ರೇರಣೆ ಒಂದು ಲಡ್ಡು ಎಂಬ ವಿಚಾರ ನಿಮಗೆ ಗೊತ್ತೇ? ಬೇಡ, ಲಡ್ಡುವಿಗೇ ಪೂರ್ಣ ಕ್ರೆಡಿಟ್ ಕೊಡುವುದಕ್ಕಿಂತ, ಪ್ರೇರಣೆಯಲ್ಲಿ ಲಡ್ಡುವಿನ ಪಾತ್ರವೂ ಇದೆಯೆಂದರೆ ಸೂಕ್ತ.

ಇದನ್ನು ಮೋದಿಯವರೇ ಒಂದು ಸಂಚಿಕೆಯಲ್ಲಿ ವಿವರಿಸಿದ್ದಾರೆ: ೧೯೯೮ರ ಸಮಯ. ಆಗಿನ್ನೂ ಮೋದಿ ಗುಜರಾತ್‌ನ
ಮುಖ್ಯ ಮಂತ್ರಿಯೂ ಆಗಿರಲಿಲ್ಲ. ಬಿಜೆಪಿಯ ಕಾರ್ಯಕರ್ತನಾಗಿ ಹಿಮಾಚಲ ಪ್ರದೇಶದಲ್ಲಿ ಸಂಘಟನಾಕಾರ್ಯದಲ್ಲಿ ತೊಡಗಿದ್ದರು. ಅದೊಂದು ದಿನ ಕುಗ್ರಾಮದಂಥ ಪ್ರದೇಶದಲ್ಲಿ ಕೆಲಸ ಮಾಡುವಾಗ ಚಹ ಕುಡಿಯಲೆಂದು ಒಂದು ಚಿಕ್ಕ ಧಾಬಾಗೆ ಹೋದರು. ಖುಷಿಯಿಂದ ಬೀಗುತ್ತಿದ್ದ ಧಾಬಾದವನು ಮೋದಿಯವರ ಮುಂದೆ ಚಹದ ಬದಲಿಗೆ ಒಂದು ಲಡ್ಡು ತಂದಿಟ್ಟನು.

‘ಅರೆರೆ! ನಾನು ಚಹ ಕೇಳಿದ್ದು, ಲಡ್ಡು ಏಕೆ ಕೊಡ್ತಿದ್ದೀರಿ?’ ಎಂದು ಮೋದಿ ಕೇಳಿದ್ದಕ್ಕೆ ಧಾಬಾದವನು ‘ನೀವು ಅದನ್ನು ತಿನ್ನಲೇಬೇಕು. ಈದಿನ ಭಾರತ ದೇಶವೆಲ್ಲ ಸಂತೋಷದ ಅಲೆಯಲ್ಲಿ ತೇಲುತ್ತಿದೆ. ನನ್ನ ಅಂಗಡಿಗೆ ಬಂದ ಗ್ರಾಹಕರಿಗೆಲ್ಲ ಲಡ್ಡು ಹಂಚಿ ನಾನೂ ಆ ಖುಷಿ ಹೆಚ್ಚಿಸುತ್ತಿದ್ದೇನೆ!’ ಎಂದನಂತೆ. ಖುಷಿ ಪಡುವಂಥದ್ದೇನಾಗಿದೆ ಎಂದು ಮೋದಿಯವರು ಕೇಳಲಾಗಿ, ಭಾರತ ಅಣ್ವಸ್ತ್ರ ಪರೀಕ್ಷೆ ಯಶಸ್ವಿಯಾಗಿ ನಡೆಸಿದೆ ಎಂದು ಧಾಬಾದವನು ತಾನೇ ಏನನ್ನೋ ಸಾಧಿಸಿದೆನೋ ಎಂಬಂತೆ ಬೀಗಿದನಂತೆ. ‘ಅದ್ಸರಿ, ನಿಮಗೆ ಈ ಸುದ್ದಿ ಹೇಗೆ ಗೊತ್ತಾಯ್ತು?’ ಎಂದು ಕೇಳಿದ್ದಕ್ಕೆ ತನ್ನ ಬಳಿಯಿದ್ದ ಪುಟ್ಟ ಟ್ರಾನ್ಸಿಸ್ಟರ್‌ಅನ್ನು ಮೋದಿಯವರಿಗೆ ತೋರಿಸಿದನು.

ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಮಾರ್ಗದರ್ಶನದಲ್ಲಿ ಆವತ್ತು ಪೋಖ್ರಾಣ್‌ನಲ್ಲಿ ಅಣ್ವಸ್ತ್ರ ಪರೀಕ್ಷೆ ನಡೆದ ಸುದ್ದಿ ಆಕಾಶವಾಣಿಯಲ್ಲಿ ಬಿತ್ತರಗೊಂಡಿತ್ತು. ಅಂಥ ರಿಮೋಟ್ ಜಾಗದಲ್ಲಿದ್ದ ವ್ಯಕ್ತಿಗೆ ದೇಶದಲ್ಲೇನು ನಡೆಯುತ್ತಿದೆಯಂತ ರೇಡಿಯೊ ಮೂಲಕ ಗೊತ್ತಾಗಿತ್ತು. ರೇಡಿಯೊವನ್ನು ದೇಶದಲ್ಲಿ ಯಾವ ಮೂಲೆಯಲ್ಲೂ ಆಲಿಸಬಹುದು, ಅಷ್ಟು ಪವರ್‌ಫುಲ್ ಮಾಧ್ಯಮ ಮತ್ತೊಂದಿಲ್ಲ ಎಂದು ಮೋದಿಯವರಿಗೆ ಆವತ್ತು ಮನದಟ್ಟಾಯಿತು.

ಮುಂದೆ ಪ್ರಧಾನಿಯಾದ ಮೇಲೆ ‘ಮನ್ ಕೀ ಬಾತ್’ ಮೂಲಕ ದೇಶದ ಜನರನ್ನು ತಲುಪುವ ಯೋಜನೆಗೆ ಅದು ಬುನಾದಿ ಯಾಯಿತು. ಮನ್ ಕೀ ಬಾತ್‌ನ ೧೦೦ನೆಯ ಸಂಚಿಕೆ ಮೊನ್ನೆ ವಿಶ್ವಸಂಸ್ಥೆಯ ಪ್ರಧಾನಕಚೇರಿಯಲ್ಲೂ ಮೊಳಗಿದ್ದು ರೋಮಾಂಚಕಾರಿ ದಾಖಲೆ. ಅಟಲ್ ಬಿಹಾರಿ ವಾಜಪೇಯಿಯವರ ನೆನಪಾದಾಗ ಅವರ ಅಚ್ಚುಮೆಚ್ಚಿನದಾದ ಕಾನ್ಪುರದ ‘ಥಗ್ಗು ಕೀ ಲಡ್ಡು’ವಿನ ಬಗ್ಗೆ ಹೇಳಲೇಬೇಕು. ಅಟಲ್‌ಜೀ ಕಾನ್ಪುರಕ್ಕೆ ಹೋದಾಗೆಲ್ಲ ಥಗ್ಗು ಕೀ ಲಡ್ಡು ಅಂಗಡಿಯಿಂದ ಲಡ್ಡು ಖರೀದಿಸುತ್ತಿದ್ದರು. ಅಟಲ್‌ಜೀ ಬಂದಿದ್ದಾರೆಂದು ಗೊತ್ತಾದರೆ ಅಂಗಡಿಯ ಮಾಲಿಕ ರಾಮಾವತಾರ್ ತಾನೇ ಲಡ್ಡು ತೆಗೆದು ಕೊಂಡು ಹೋಗಿ ಕೊಡುತ್ತಿದ್ದನು.

ಆತನ ಅಂಗಡಿಗೆ ಆ ಹೆಸರು ಬಂದಿದ್ದೂ ಒಂದು ಸ್ವಾರಸ್ಯಕರ ಕಥೆ. ತಂದೆಯ ಕಾಲದಲ್ಲಿ ಮಾಮೂಲಿ ‘ಲಡ್ಡು ದುಕಾನ್’ ಅಷ್ಟೇ ಆಗಿತ್ತದು. ರಾಮಾವತಾರ್ ಚಿಕ್ಕಂದಿನಲ್ಲಿ ಒಮ್ಮೆ ಗಾಂಧೀಜಿಯವರ ಭಾಷಣ ಕೇಳಿದನು. ಆ ಭಾಷಣದಲ್ಲಿ ಗಾಂಧೀಜಿಯವರು ವಿದೇಶದಿಂದ ಆಮದಾಗುವ ಸಕ್ಕರೆ ಬಿಳಿ ವಿಷ ಇದ್ದಂತೆ ಎಂದಿದ್ದರು. ಅದನ್ನು ಕೇಳಿದಾಗ ರಾಮಾವತಾರ್‌ನ ಮನಸ್ಸಿನಲ್ಲೊಂದು ಪಾಪಪ್ರe ಹೆಡೆ ಯೆತ್ತಿತು. ಮಿಠಾಯಿಅಂಗಡಿ ನಡೆಸುತ್ತಿರುವ ತಾನು ಎಷ್ಟೊಂದು ಪ್ರಮಾಣದಲ್ಲಿ ಸಕ್ಕರೆ ಬಳಸುತ್ತಿದ್ದೇನೆ ಎನ್ನುವ ಅಪರಾಧಿ ಭಾವನೆ ಕಾಡಿತು.

ಪ್ರಾಯಶ್ಚಿತ್ತವೋ ಎಂಬಂತೆ ಅಂಗಡಿಯ ಹೆಸರನ್ನು ಥಗ್ಗು ಕೀ ಲಡ್ಡು ಎಂದು ಬದಲಾಯಿಸಿದನು. ಮೋಸದ ಲಡ್ಡು ಎಂದು
ಅದರ ಅರ್ಥ. ಉಳಿದಂತೆ ಆತನ ಉತ್ಪನ್ನಗಳಲ್ಲಿ ಶುದ್ಧ ತುಪ್ಪದ ಬಳಕೆ, ಉತ್ಕೃಷ್ಟ ಗುಣಮಟ್ಟ ಇದ್ದುದರಿಂದ ವ್ಯಾಪಾರ ಬಿರುಸಾಗಿಯೇ ಮುಂದುವರಿಯಿತು. ಸಕ್ಕರೆ ಬಳಸುತ್ತಿದ್ದೇವೆನ್ನುವುದನ್ನು ಮುಚ್ಚಿಟ್ಟಿಲ್ಲ, ಗ್ರಾಹಕರಿಗೆ ಖುಲ್ಲಂಖುಲ್ಲಾ ತಿಳಿಸಿದ್ದೇನೆ ಎನ್ನುವ ನಿರುಮ್ಮಳ ಭಾವನೆ ರಾಮಾವತಾರ್‌ನದು. ಥಗ್ಗು ಕೀ ಲಡ್ಡು ಈಗಲೂ ಕಾನ್ಪುರದಲ್ಲಿ ಒಂದು ಪ್ರಮುಖ ಲ್ಯಾಂಡ್‌ಮಾರ್ಕ್.

ಲಡ್ಡು, ಲಾಡು ಎಂದಾಗಿನ ಗತ್ತು ಕಾಣಿಸಿಕೊಳ್ಳಲಿಕ್ಕಿಲ್ಲ ಆದರೆ ನಮ್ಮ ಕನ್ನಡದ ‘ಉಂಡೆ’ಗಳೆಲ್ಲವಕ್ಕೂ ತಮ್ಮದೇ ಆದ ಖದರು ಇದೆ. ಗಣಪನಿಗೆ ಪ್ರಿಯವಾದ ಎಳ್ಳುಂಡೆಗೇ ಬೇಕಿದ್ದರೆ ಮೊದಲ ಮಣೆ ಹಾಕೋಣ. ಅಂದಹಾಗೆ, ಉಂಡೆ-ಲಾಡು-ಲಡ್ಡು-ಲಡ್ಡುಕ ಎಲ್ಲ ದರ ಪ್ರಪಿತಾಮಹ ಯಾವುದೆಂದರೆ ಎಳ್ಳುಂಡೆಯೇ! ಏಕೆ ಗೊತ್ತೇ? ಮೊತ್ತಮೊದಲಿಗೆ ಉಂಡೆ ಕಟ್ಟಿದ ಖ್ಯಾತಿ ಕ್ರಿಸ್ತಪೂರ್ವ ಐದನೆಯ ಶತಮಾನ ಕಾಲಘಟ್ಟದಲ್ಲಿ ಬಾಳಿದ್ದನೆನ್ನಲಾದ ಸುಶ್ರುತ ಮಹರ್ಷಿಯದು.

ಆತ ತನ್ನ ರೋಗಿಗಳಿಗೆ ಚಿಕಿತ್ಸೆಯ ರೂಪದಲ್ಲಿ ಎಳ್ಳಿನ ಉಂಡೆ- ತುಪ್ಪದಲ್ಲಿ ಹುರಿದ ಎಳ್ಳನ್ನು ಬೆಲ್ಲದ ಪಾಕ ಅಥವಾ ಜೇನುತುಪ್ಪದಲ್ಲಿ ಮಿಶ್ರಣ ಮಾಡಿ ಕಟ್ಟಿದ ಉಂಡೆ-ಗಳನ್ನು ಕೊಡುತ್ತಿದ್ದನಂತೆ. ಆಯುರ್ವೇದ ಔಷಧಪದ್ಧತಿಯಲ್ಲಿ ಈಗಲೂ ಬೇರೆಬೇರೆ ಥರದ ಉಂಡೆಗಳು ದೊಡ್ಡದೊಡ್ಡ ಗುಳಿಗೆಯಂಥವು ಅಪರೂಪವಲ್ಲ. ಉಂಡೆಗಳ ಇನ್ನೊಂದು ಇತಿಹಾಸವೆಂದರೆ ಚೋಳ ಸಾಮ್ರಾಜ್ಯದ ಸೈನಿಕರಿಗೆ ಪುಷ್ಟಿವರ್ಧಕ ಆಹಾರವಾಗಿ ಪ್ರತಿದಿನದ ಊಟದಲ್ಲಿ ಉಂಡೆಗಳನ್ನು ಬಡಿಸಲಾಗುತ್ತಿತ್ತಂತೆ.

ಆದರೆ ಔಷಧಕ್ಕಷ್ಟೇ ಸೀಮಿತವಲ್ಲ, ಭಕ್ಷ್ಯಭೋಜ್ಯವಾಗಿ ನಮ್ಮಲ್ಲಿನ ಉಂಡೆಗಳ ಪಟ್ಟಿ ಮಾಡಿದರೆ ಅಪರಿಮಿತವಾಗಬಹುದು. ಇಂಥಿಂಥ ಸಂದರ್ಭಕ್ಕೆ ಇಂಥಿಂಥ ಉಂಡೆ ಎಂಬ ರಿವಾಜೂ ಇದೆ. ನಮ್ಮಲ್ಲಿ ಮುಂಜಿಯಂದು ವಟುವಿಗೆ ಭಿಕ್ಷೆ ಹಾಕಲಿಕ್ಕೆ ಅರಳಿನುಂಡೆ ಆಗಬೇಕು. ನಾಗರಪಂಚಮಿಗೆ ತಂಬಿಟ್ಟುಂಡೆ, ಗೋಕುಲಾಷ್ಟಮಿಗೆ ಶುಂಠಿಉಂಡೆ (ಹಲಸಿನಬೀಜದ ಉಂಡೆ ಸಹ), ಮಹಾಲಯ- ಶ್ರಾದ್ಧಕ್ಕೆ ಸುಕ್ಕಿನುಂಡೆ, ದೀಪಾವಳಿಗೆ ಬೇಸನ್ ಉಂಡೆ… ಹೀಗೆ. ಮತ್ತೆ ಅಂಟಿ ನುಂಡೆ, ಗೋಧಿ ಹಿಟ್ಟಿನ ಉಂಡೆ, ಗೋಡಂಬಿಉಂಡೆ, ಚುರುಮುರಿಉಂಡೆ, ಶೇಂಗಾಉಂಡೆ, ಖರ್ಜೂರದಉಂಡೆ ಇತ್ಯಾದೀತ್ಯಾದಿ.

ಕನ್ನಡಿಗರಿಗೆ ಉಂಡೆ ಪ್ರೀತಿ ಎಷ್ಟೆಂದರೆ ಉಂಡೆಯಾಕಾರವಿಲ್ಲದೆ ಅಂಡಾಕಾರವಾಗಿರುವ, ಸಿಹಿಯಿಲ್ಲದೆ ಖಾರವಾಗಿರುವ
ನುಚ್ಚಿ ನುಂಡೆಯನ್ನೂ ಉಂಡೆ ಎಂದೇ ಗುರುತಿಸುತ್ತೇವೆ. ನಮಗೆ ವಿಭೂತಿಯದೂ ಉಂಡೆಯೇ. ಗೋಪಿಚಂದನದ್ದೂ ಉಂಡೆಯೇ. ಅದರಿಂದಲೇ ‘ಉಂಡೆನಾಮ’ ಎಂಬ ವ್ಯಂಗ್ಯ ನುಡಿಗಟ್ಟು. ಆದರೆ ನನಗನಿಸುವಂತೆ- ಬಹುಶಃ ನೀವೂ ಒಪ್ಪುತ್ತೀರಿ-
ಉಂಡೆಗಳ ಅನಭಿಷಿಕ್ತ ದೊರೆ ರವೆಉಂಡೆ. ಉಂಡೆ ಯಾವುದರದ್ದು ಎಂದು ಹೇಳದೆ ಬರೀ ಉಂಡೆ ಅಂತಷ್ಟೇ ಹೇಳಿದರೆ ಅದು
ರವೆಉಂಡೆಯೇ.

ಆದ್ದರಿಂದಲೇ ನಾನೂ ಅದನ್ನು ಈ ಹರಟೆಯ ಗ್ರ್ಯಾಂಡ್ ಫಿನಾಲೆ ಭಾಗದಲ್ಲಿಟ್ಟಿದ್ದೇನೆ. ಜನಗಣಮನದಂತೆ ಕೊನೆಗೊಳಿಸಲಿಕ್ಕೆ ಒಂದು ಪದವಿನೋದ ಪದ್ಯವನ್ನು ರವೆ ಉಂಡೆಯ ಗೌರವಾರ್ಥವೇ ಮಾಡಿದ್ದೇನೆ. ಅದು ಹೀಗಿದೆ: ‘ರವೀಂದ್ರರ ರಾಷ್ಟ್ರಗೀತೆಯಲ್ಲಿ ದ್ರಾವಿಡ-ಉತ್ಕಲ-ವಂಗ; ರವೆಉಂಡೆಯ ರಸಸ್ವಾದದಲ್ಲಿ ದ್ರಾಕ್ಷಿ-ಏಲಕ್ಕಿ-ಲವಂಗ!’

error: Content is protected !!