Friday, 21st June 2024

’ಪುತ್ರ ಸಾಂಗತೀ ಚರಿತ ಪಿತ್ಯಾಚೇ, ಜ್ಯೋತಿನೇ ತೇಜಾಚೀ ಆರತಿ…’

ತಿಳಿರು ತೋರಣ

srivathsajoshi@yahoo.com

ತೇಜಸ್ಸು ಎಂದಕೂಡಲೆ ನಮ್ಮ ಕಣ್ಣೆದುರಿಗೆ ಬರುವುದು ದೇವರ ಪಟಗಳಲ್ಲಿ ತಲೆಯ ಸುತ್ತಲೂ ಒಂದು ಜ್ಯೋತಿರ್ವೃತ್ತ ಇರುತ್ತದಲ್ಲ ಅದು! ಟಿವಿ ಧಾರಾವಾಹಿಗಳಲ್ಲಿ, ಚಲನಚಿತ್ರಗಳಲ್ಲಿ ದೇವರ ತಲೆಹಿಂದೆ ಬೆಳಕಿನ ವರ್ತುಲವೊಂದು ಇರಲೇಬೇಕು. ರಾಮ, ಕೃಷ್ಣ, ಆಂಜನೇಯ, ಬುದ್ಧ, ಈಶ್ವರ, ಏಸುಕ್ರಿಸ್ತನಿಂದ ಹಿಡಿದು ಸಾಯಿಬಾಬಾರಂಥ ದೇವಮಾನವರ ತನಕ ಎಲ್ಲರೂ ತೇಜಸ್ಸಿನ ತಲೆಯುಳ್ಳವರೇ ಎಂಬುದು ನಮ್ಮ ಕಲ್ಪನೆ.

ಅವಳಿ ಮಕ್ಕಳು ಅಪ್ಪನೆದುರಿಗೆ ಅವನದೇ ಜೀವನಗಾಥೆಯನ್ನು ಹಾಡಿ ತೋರಿಸುವ ಹೃದಯಸ್ಪರ್ಶಿ ಸನ್ನಿವೇಶ ರಾಮಾ ಯಣದ ಉತ್ತರಕಾಂಡ ದಲ್ಲಿ ಬರುವಂಥದ್ದು. ಹೃದಯಸ್ಪರ್ಶಿ ಏಕೆಂದರೆ ಆ ಸಂದರ್ಭದಲ್ಲಿ ಆ ಅವಳಿ ಮಕ್ಕಳಿಗೆ ಗೊತ್ತಿರುವುದಿಲ್ಲ ಆತನೇ ತಮಗೆ ಅಪ್ಪನಾಗಬೇಕು ಎಂದು. ಆ ಪುಣ್ಯಾತ್ಮ ತಂದೆಗೂ ಗೊತ್ತಿರುವುದಿಲ್ಲ ಆ ಮಕ್ಕಳಿಬ್ಬರೂ ತನ್ನದೇ ಕುಡಿ ಗಳೆಂದು.

ರಮಾನಂದ ಸಾಗರ್ ಟಿವಿ ರಾಮಾಯಣ ರಾವಾಹಿಯಲ್ಲಿ ಇದನ್ನು ‘ಹಮ್ ಕಥಾ ಸುನಾತೇ ರಾಮ ಸಕಲ ಗುಣ ಧಾಮ ಕೀ…’ ಹಾಡಿನೊಂದಿಗೆ ಅತ್ಯಂತ ಮನೋಜ್ಞವಾಗಿ ಚಿತ್ರಿಸಿದ್ದರು. ಮೂರು ವರ್ಷಗಳ ಹಿಂದೆ ಕೊರೊನಾ ಲಾಕ್‌ಡೌನ್ ವೇಳೆ ದೂರ ದರ್ಶನದಲ್ಲಿ ರಾಮಾಯಣ ಧಾರಾವಾಹಿ ಮರುಪ್ರಸಾರವಾದಾಗ ಹೊಸ ತಲೆಮಾರಿನವರೂ ನೋಡಿ ಆನಂದಿಸಿದ್ದರು. ಮುಖ್ಯವಾಗಿ ‘ಹಮ್ ಕಥಾ ಸುನಾತೇ…’ ಹಾಡಿನ ದೃಶ್ಯಾವಳಿಗಂತೂ ದೇಶಕ್ಕೆ ದೇಶವೇ ಭಾವುಕವಾಗಿ ಆನಂದಬಾಷ್ಪ ಸುರಿಸಿತ್ತು.

೧೯೮೭ರಲ್ಲಿ ದೂರದರ್ಶನದಲ್ಲಿ ರಾಮಾಯಣ ಧಾರಾವಾಹಿ ಬರುವುದಕ್ಕಿಂತ ಮೂರು ದಶಕಗಳ ಹಿಂದೆಯೇ, ಅಂದರೆ
ನಿಖರವಾಗಿ ಹೇಳುವುದಾದರೆ ೧ ಏಪ್ರಿಲ್ ೧೯೫೫ರಿಂದ ೧೯ ಏಪ್ರಿಲ್ ೧೯೫೬ರವರೆಗೆ ಆಕಾಶವಾಣಿಯ ಪುಣೆ ಕೇಂದ್ರದಿಂದ ಮರಾಠಿ ಭಾಷೆಯಲ್ಲಿ ‘ಗೀತ ರಾಮಾಯಣ’ ಎಂಬ ಸಾಪ್ತಾಹಿಕ ಸಂಗೀತ ಕಾರ್ಯಕ್ರಮ ಪ್ರಸಾರವಾಯಿತು. ಮರಾಠಿಯ ಸುಪ್ರಸಿದ್ಧ ಕವಿ ಗಜಾನನ ದಿಗಂಬರ ಮಾಡಗೂಳಕರ (‘ಗದಿಮಾ’ ಎಂದೇ ಪ್ರಖ್ಯಾತ) ಅವರ ಸಾಹಿತ್ಯ; ಸುಧೀರ್ ಫಡ್ಕೆ ಅವರ ಸಂಗೀತ ನಿರ್ದೇಶನ ಮತ್ತು ಸುಶ್ರಾವ್ಯ ಗಾಯನ.

೧೯೫೩ರಲ್ಲಷ್ಟೇ ಪುಣೆ ಆಕಾಶವಾಣಿ ನಿಲಯ ಪ್ರಸಾರಕಾರ್ಯ ಆರಂಭಿಸಿತ್ತು. ಸೀತಾ ಕಾಂತ ಲಾಡ ಎಂಬುವವರು, ಗ. ದಿ. ಮಾಡಗೂಳಕರರ ಆಪ್ತರು, ನಿಲಯ ನಿರ್ದೇಶಕರಾಗಿದ್ದರು. ಸದಭಿರುಚಿಯ ಸಾಹಿತ್ಯ-ಸಂಗೀತ ರಸದೌತಣವೊಂದನ್ನು ಶ್ರೋತೃಗಳಿಗೆ ಉಣಬಡಿಸಬೇಕು ಎಂಬ ಅವರ ಆಶಯ, ಅದಕ್ಕೆ ನೆರವಾಗುವಂತೆ ಮಾಡಗೂಳಕರರಲ್ಲಿ ಒತ್ತಾಸೆ, ಫಲವಾಗಿ ಮರಾಠಿ ಗೀತ ರಾಮಾಯಣ ಜನ್ಮತಾಳಿತು. ವಾಲ್ಮೀಕಿ ಮಹರ್ಷಿ ೨೪೦೦೦ ಶ್ಲೋಕಗಳಲ್ಲಿ ಹೇಳಿದ್ದ ರಾಮಕಥೆ ಯನ್ನು ಗದಿಮಾ ೫೫ ಗೀತೆಗಳಲ್ಲಿ ಶಬ್ದಬದ್ಧಗೊಳಿಸಿದರು. ಗೀತ ರಾಮಾಯಣವು ಮಹಾರಾಷ್ಟ್ರದಲ್ಲಿ ಅದೆಂತಹ ಸಂಚಲನ ಮೂಡಿ
ಸಿತೆಂದರೆ, ಆಮೇಲೆ ಅದು ಪುಸ್ತಕರೂಪದಲ್ಲಿ ಬಂತು; ಎಲ್‌ಪಿ ರೆಕಾರ್ಡ್‌ಗಳು, ಕ್ಯಾಸೆಟ್‌ಗಳು, ಸಿ.ಡಿಗಳ ರೂಪದಲ್ಲಿಯೂ
ಬಂತು. ಗೀತ ರಾಮಾಯಣ ಮೊಳಗದ ಮರಾಠಿ ಮನೆಯೇ ಇಲ್ಲ ಎನ್ನುವಷ್ಟು ಮನೆಮಾತಾಯಿತು, ಸರ್ವಜನಪ್ರಿಯ ಎನಿಸಿತು.

ಈಗ ಯುಟ್ಯೂಬ್‌ನಲ್ಲೂ ಅದಕ್ಕೆ ಮಿಲಿಯಗಟ್ಟಲೆ ವ್ಯೂಗಳು. ಅದರ ಕನ್ನಡ, ಸಂಸ್ಕೃತ ಅವತರಣಿಕೆಗಳೂ ಬಂದಿವೆ. ಮರಾಠಿ ಗೀತ ರಾಮಾಯಣವನ್ನು ನಾನೂ ಆಗೊಮ್ಮೆ ಈಗೊಮ್ಮೆ ಕೇಳಿ ಆನಂದಿಸುತ್ತೇನೆ. ಅದರ ಮೊತ್ತಮೊದಲ ಪದ್ಯ‘ಸ್ವಯೇ ಶ್ರೀರಾಮಪ್ರಭು ಐಕತಿ ಕುಶ-ಲವ ರಾಮಾಯಣ ಗಾತೀ…’ ಇದನ್ನಂತೂ ಎಷ್ಟು ಸರ್ತಿ ಕೇಳಿದ್ದೇನೆಂಬುದಕ್ಕೆ ಲೆಕ್ಕವೇ ಇಲ್ಲ. ನನಗೆ ಬಾಯಿಪಾಠ ಬರುವಷ್ಟು ಅಚ್ಚುಮೆಚ್ಚಿನದು. ಅದೊಂಥರದಲ್ಲಿ ಗೀತ ರಾಮಾಯಣದ ಪೀಠಿಕೆ.

ಅಯೋಧ್ಯೆಯಲ್ಲಿ ನಡೆಯುವ ಅಶ್ವಮೇಧ ಯಾಗಕ್ಕೆ ವಾಲ್ಮೀಕಿ ಮಹರ್ಷಿಗಳ ಜೊತೆಯಲ್ಲಿ ಬರುವ ಲವ-ಕುಶರಿಗೆ ಅದೇ ಮೊದಲ ಸಲ ಶ್ರೀರಾಮನೊಂದಿಗೆ ಮುಖಾಮುಖಿ, ಆ ಸಂದರ್ಭದಲ್ಲೇ ರಾಮಾಯಣ ಗೀತಗಾಯನ ಕಾರ್ಯಕ್ರಮದ ಆಯೋಜನೆ, ಎಲ್ಲವೂ ವಾಲ್ಮೀಕಿಯ ಏರ್ಪಾಡು, ಆ ಪ್ರಸ್ತುತಿಯ ವೇಳೆ ತೇಜಸ್ವಿ ಬಾಲಕರಿಬ್ಬರು ಹೇಗೆ ಕಾಣಿಸುತ್ತಿದ್ದರು, ಅವರ ಹಾವಭಾವ ಹಸ್ತ ಮುದ್ರೆಗಳು ಹೇಗಿದ್ದುವು, ರಾಮಚರಿತವನ್ನು ಸುಮಧುರವಾಗಿ ಹಾಡುತ್ತಿದ್ದಾಗ ಸಭೆಯಲ್ಲಿದ್ದ ಶ್ರೋತೃಗಳ ಮೇಲೆ ಅದರ ಪರಿಣಾಮ ಏನಿತ್ತು, ಸ್ವತಃ ಶ್ರೀರಾಮನ ಭಾವನಾತ್ಮಕ ಪರಿಸ್ಥಿತಿ ಹೇಗಿತ್ತು, ಒಟ್ಟಿನಲ್ಲಿ ಅಲ್ಲಿ ಎಂತಹ ರೋಮಾಂಚನದ ವಾತಾವರಣ ನಿರ್ಮಾಣ ಆಗಿತ್ತೆಂಬ ವಿವರಗಳು ಬರುತ್ತವೆ.

ಗದಿಮಾ ಅದನ್ನು ಅತ್ಯಂತ ಸುಂದರ ಪದಗಳಲ್ಲಿ ಬಣ್ಣಿಸಿದ್ದಾರೆ. ಅವಳಿ ಮಕ್ಕಳ ಅದ್ಭುತ ವಾದ ಗಾಯನಕ್ಕೆ ತಲೆದೂಗುತ್ತಿರುವ ಶ್ರೀರಾಮ, ಅದರಿಂದ ಮತ್ತಷ್ಟು ಹುರುಪುಗೊಂಡು ತಲ್ಲೀನರಾಗಿ ಹಾಡುತ್ತಿರುವ ಸುಕುಮಾರರು- ಈ ಮೂವರ ದಿವ್ಯಪ್ರಭೆ ಯಿಂದ ಅಲ್ಲೊಂದು ತೇಜೋವಲಯವೇ ಸೃಷ್ಟಿಯಾಗಿತ್ತಂತೆ; ಗದಿಮಾ ಅವರ ಮರಾಠಿ ಸಾಲುಗಳನ್ನೇ ಉದ್ಧರಿಸುವುದಾದರೆ ಅಲ್ಲಿ ‘ತೇಜಾಚೀ ಆರತಿ…’ಯೇ ಬೆಳಗಿತ್ತಂತೆ! ಆ ಸಾಲುಗಳಂತೂ ನನಗೆ ಅದೆಷ್ಟು ಇಷ್ಟವೆಂದರೆ ಇಂದಿನ ತಲೆಬರಹಕ್ಕೂ ಅದನ್ನೇ ಆಯ್ದುಕೊಂಡಿದ್ದೇನೆ.

ಒಮ್ಮೆ ನೀವೂ ಊಹಿಸಿ. ಆರತಿ ಬೆಳಗಿದಂತೆ ಭಾಸವಾಗಬೇಕಿದ್ದರೆ ಅದೆಂತಹ ತೇಜಸ್ಸಿರಬಹುದು! ಎಷ್ಟೆಂದರೂ ಶ್ರೀರಾಮ ಸೂರ್ಯ ವಂಶಸಂಜಾತ ದೈವೀಪುರುಷ. ಮರ್ಯಾದಾ ಪುರುಷೋತ್ತಮ. ಸೀತಾಸ್ವಯಂವರದಲ್ಲಿ ಶಿವಧನುಸ್ಸಿಗೆ ಹೆದೆಯೇ ರಿಸಿದ ಪರಮವೀರ. ಸೀತೆಯನ್ನಪಹರಿಸಿದ ಲಂಕೇಶ್ವರನನ್ನು ಅವನ ನೆಲದಲ್ಲೇ ಸದೆಬಡಿದ ಅಪ್ರತಿಮ ಶೂರ. ಕ್ಷಾತ್ರತೇಜಸ್ಸು ಎಂಬುದೇನಿದೆಯೋ ಅದಷ್ಟೂ ಅವನಲ್ಲಿ ಮೇಳೈಸಿದೆ. ಇನ್ನು, ಲವ-ಕುಶರ ವಿಚಾರಕ್ಕೆ ಬಂದರೆ ವಾಲ್ಮೀಕಿ ಮಹರ್ಷಿಗಳ ಶಿಷ್ಯರಾಗಿ ಸಕಲವಿದ್ಯೆಗಳನ್ನೂ ಅರಗಿಸಿಕೊಂಡ ಽಶಕ್ತಿಯ ತೇಜಸ್ಸು ಒಂದೆಡೆಯಾದರೆ ವಂಶ ವಾಹಿನಿಯಾಗಿ ಬಂದಿರುವ ಶಕ್ತಿ, ಯುಕ್ತಿ, ಧೈರ್ಯ, ಸ್ಥೈರ್ಯಗಳ ತೇಜಸ್ಸು ಮತ್ತೊಂದೆಡೆ. ಅಂತೂ ಕಣ್ಣುಕೋರೈಸುವ ಪ್ರಭೆ-ಪ್ರತಿಭೆ ಆ ಬಾಲಕರಲ್ಲಿದೆ.

ಹಾಗಾಗಿ ಶ್ರೀರಾಮನೂ ಲವ-ಕುಶರೂ ಮುಖಾಮುಖಿಯಾದಾಗ ಅಲ್ಲಿ ತೇಜಸ್ಸಿನ ಆರತಿ ಬೆಳಗಿತೆಂಬ ಕವಿಕಲ್ಪನೆಯಲ್ಲಿ ಉತ್ಪ್ರೇಕ್ಷೆಯೇನಿಲ್ಲ. ಸರಿ, ಈಗಿನ್ನು ಗದಿಮಾ ಮತ್ತು ಗೀತ ರಾಮಾಯಣವನ್ನು ಅಲ್ಲಿಗೇ ಬಿಟ್ಟು, ತೇಜಸ್ಸಿನ ಮೇಲೊಂದಿಷ್ಟು ಬೆಳಕು ಚೆಲ್ಲೋಣ. ಅಲ್ಲ, ತೇಜಸ್ಸಿನ ಬೆಳಕನ್ನು ಪಡೆಯೋಣ. ತೇಜಸ್ಸು ಎಂದಕೂಡಲೆ ನಮ್ಮ ಕಣ್ಣೆದುರಿಗೆ ಬರುವುದು ದೇವರ ಪಟಗಳಲ್ಲಿ ತಲೆಯ ಸುತ್ತಲೂ ಒಂದು ಜ್ಯೋತಿರ್ವೃತ್ತ ಇರುತ್ತದಲ್ಲ ಅದು! ಟಿವಿ ಧಾರಾವಾಹಿಗಳಲ್ಲಿ, ಚಲನಚಿತ್ರಗಳಲ್ಲಿ ಸಹ ದೇವರ ತಲೆಹಿಂದೆ ಬೆಳಕಿನ ವರ್ತುಲವೊಂದು ಇರಲೇಬೇಕು (ಕೆಲವೊಮ್ಮೆ ಇಮೇಜ್ ಮಿಕ್ಸಿಂಗ್‌ನಲ್ಲಿ ಸ್ವಲ್ಪ ಏರುಪೇರಾಗಿ ನಟನಟಿಯರ ತಲೆ ಮತ್ತು ಪ್ರಭಾವಲಯ ಒಂಚೂರು ಆಚೀಚೆ ಆಗುವುದೂ ಇದೆಯೆನ್ನಿ).

ರಾಮ, ಕೃಷ್ಣ, ಆಂಜನೇಯ, ಬುದ್ಧ, ಈಶ್ವರ, ಏಸುಕ್ರಿಸ್ತನಿಂದ ಹಿಡಿದು ಸಾಯಿಬಾಬಾರಂಥ ದೇವಮಾನವರ ತನಕ ಎಲ್ಲರೂ
ತೇಜಸ್ಸಿನ ತಲೆಯುಳ್ಳವರೇ ಎಂಬುದು ನಮ್ಮ ಕಲ್ಪನೆ. ಹಾಗಾಗಿಯೇ ‘ಓಜೋಧಿಸಿ ತೇಜೋಧಿಸಿ ಬಲೋಧಿಸಿ ಬಲಮಸಿ ಭ್ರಾಜೋಧಿಸಿ…’ ಎಂದು ಸಂಧ್ಯಾವಂದನೆಯಲ್ಲಿ ಗಾಯತ್ರೀದೇವಿಯನ್ನು ಸ್ತುತಿಸುತ್ತೇವೆ.

‘ಶಂಕರ ಸುವನ ಕೇಸರೀನಂದನ| ತೇಜ ಪ್ರತಾಪ ಮಹಾ ಜಗವಂದನ’ ಎಂದು ಚಾಲೀಸಾದಲ್ಲಿ ಹನೂಮಂತನ ಗುಣಗಾನ
ಮಾಡುತ್ತೇವೆ. ‘ಭಾನುಕೋಟಿ ತೇಜ ಸ್ವಯಂಪ್ರಕಾಶ…’  ಕೋಟಿ ಸೂರ್ಯರಿಗೆ ಸಮಾನವಾದ ಸ್ವಪ್ರಭೆಯುಳ್ಳವನು ಎಂದು
ಶ್ರೀಮನ್ನಾರಾಯಣನನ್ನು ಸ್ತೋತ್ರಗೈಯುತ್ತೇವೆ. ಅಷ್ಟೇಅಲ್ಲ, ನಮಗೂ ತೇಜಸ್ಸನ್ನು ಕೊಡಬೇಕೆಂದು ಅಗ್ನಿಯನ್ನು ಪ್ರಾರ್ಥಿಸು
ತ್ತೇವೆ: ‘ಶ್ರದ್ಧಾಂ ಮೇಧಾಂ ಯಶಃ ಪ್ರಜ್ಞೆಂ ವಿದ್ಯಾಂ ಬುದ್ಧಿಂ ಶ್ರಿಯಂ ಬಲಂ| ಆಯುಷ್ಯಂ ತೇಜ ಆರೋಗ್ಯಂ ದೇಹಿ ಮೇ ಹವ್ಯ
ವಾಹನ||’ ಅದೂ ಅಂಥಿಂಥ ತೇಜಸ್ಸಲ್ಲ, ಜ್ಞಾನಶಕ್ತಿಯ ತೇಜಸ್ಸು.

‘ತೇಜಸ್ವಿನಾವಧಿತಮಸ್ತು ಮಾ ವಿದ್ವಿಷಾವಹೈ’ ಎಂಬ ಉಪನಿಷತ್ ವಾಕ್ಯದ ಆಶಯವೂ ಅದೇ. ಅಷ್ಟಾಗಿಯೂ, ತೇಜಸ್ಸು ದೇವರ ಪಟಗಳಲ್ಲಿ ಮಾತ್ರ ಏಕೆ ಇರುತ್ತದೆ? ನಮ್ಮನಿಮ್ಮ ಭಾವಚಿತ್ರಗಳಲ್ಲೇಕೆ ತಲೆಯ ಹಿಂದೆ ತೇಜಸ್ಸಿನ ವರ್ತುಲವಿರುವುದಿಲ್ಲ? ಈ ಪ್ರಶ್ನೆ ನನ್ನನ್ನು ಆಗಾಗ ಕಾಡುವುದಿದೆ. ಇಲ್ಲೊಂಚೂರು ವಿಷಯಾಂತರ ಎನಿಸಿದರೂ ಒಂದು ಸ್ವಾರಸ್ಯಕರ ಕವಿತೆಯನ್ನು ಉಲ್ಲೇಖಿಸುತ್ತೇನೆ. ವಿಷಯಾಂತರವೇನಿಲ್ಲ, ಕವಿತೆಯ ಶೀರ್ಷಿಕೆಯೇ ‘ತೇಜಸ್ವಿನಿ’ ಆದ್ದರಿಂದ ಔಚಿತ್ಯಪೂರ್ಣವಾಗಿಯೇ ಇದೆ. ಇದನ್ನು ಬರೆದವರು ಅಮೆರಿಕನ್ನಡಿಗ ಸಾಹಿತಿ, ನನ್ನೊಬ್ಬ ಹಿರಿಯ ಹಿತೈಷಿ, ಡಾ. ಮೈಸೂರು ನಟರಾಜ್. ನಮ್ಮ ವಾಷಿಂಗ್ಟನ್ ಡಿಸಿ.

ಕನ್ನಡಿಗರ ಪೈಕಿಯವರೇ ಆಗಿರುವ ಶೈಲಜಾ-ಗುಂಡೂರಾವ್ ದಂಪತಿಯ ಮಗಳು ತೇಜಸ್ವಿನಿಯ ಶುಭವಿವಾಹದಂದು ಉಡುಗೊರೆಯ ರೂಪದಲ್ಲಿ ಬರೆದು ಓದಿದ ಕವಿತೆಯಿದು. ಅಂದಹಾಗೆ ಈ ವಿವಾಹ ಸಮಾರಂಭ ನಡೆದಿದ್ದು ೧೯೯೯ರ ನವೆಂಬರ್‌ನಲ್ಲಿ. ಆಗಿನ್ನೂ ನಾನು ಅಮೆರಿಕಕ್ಕೆ ವಲಸೆ ಬಂದಿರಲಿಲ್ಲ. ಹಾಗಾಗಿ ನಾನು ಈ ಕವಿತೆಯನ್ನೋದಿದ್ದು ನಟರಾಜರ ಪ್ರಶಸ್ತಿವಿಜೇತ ಕವನಸಂಕಲನ ‘ಮಧುಚಂದ್ರ-ಸಿರಿಕೇಂದ್ರ’ದಲ್ಲಿ. ಕವಿತೆ ಹೀಗಿದೆ (ಅಂಕಣದ ಸ್ಥಳಮಿತಿಯಿಂದಾಗಿ ಉದ್ದುದ್ದಕ್ಕೆ ಬರೆದಿಲ್ಲ, ಸ್ವಲ್ಪ ಎಡ್ಜಸ್ಟ್ ಮಾಡ್ಕೊಂಡು ಓದಬೇಕಾಗಿ ವಿನಂತಿ): ‘ಇವಳು: ತರ್ಕಶಾಸ್ತ್ರದಲಿ ನುರಿತವಳು| ನ್ಯಾಯಶಾಸ್ತ್ರ ವನರಿತವಳು| ಪೂರ್ವದಲಿ ಹುಟ್ಟಿದರೂ ಪಶ್ಚಿಮಕೆ ಬಂದವಳು|| ಇವನು: ಗಣಕಯಂತ್ರದಲಿ ಪ್ರವೀಣ| ಅಂತರ ಜಾಲ ತಂತ್ರದಲಿ ಧುರೀಣ| ಪಶ್ಚಿಮದಲ್ಲಿದ್ದರೂ ಪೂರ್ವಕೆ ತಿರುಗಿದವನು|| ಇವರು: ಪ್ರೀತಿಯಲಿ ‘ಬಿದ್ದವರು’| ಪರಸ್ಪರ ಗೆದ್ದವರು|| ಇವರಿಗಿದೆ: ತೇಜಸ್ವಿನಿಯ ಹೊಳಪು| ಮೈಕಳೆಯ ಬಿಳುಪು|| ಇದು: ಹಾಲು-ಜೇನಿನ ಜೋಡಿ| ಪ್ರೇಮ ತಂದಿಹ ಮೋಡಿ|| ನಾವು: ಪ್ರಾರ್ಥಿಸುವ ಇಂದು| ‘ಕಾಯಲಿವರ ನಂಜುಂಡ’ ಎಂದು| ಇಂದು-ಮುಂದು-ಎಂದೆಂದು||’ – ಈ ಕವಿತೆ ಯನ್ನೇಕೆ ನಾನಿಲ್ಲಿ ಪ್ರಸ್ತಾವಿಸಿದೆ ಎಂದು ನಿಮಗೆ ಅಂದಾಜಾಗಿರಲಿಕ್ಕಿಲ್ಲ. ಅದನ್ನೂ ವಿವರಿಸುತ್ತೇನೆ.

ವಧುವಿನ ಹೆಸರು ತೇಜಸ್ವಿನಿ ಎಂದು ಆಗಲೇ ಹೇಳಿದೆನಷ್ಟೆ? ವರ, ‘ಮೈಕೇಲ್’ ಎಂಬ ಹೆಸರಿನವನು ಅಮೆರಿಕನ್ ಹುಡುಗ. ಆತನ ಹೆಸರನ್ನು ಕವಿತೆಯಲ್ಲಿ ‘ಮೈಕಳೆ’ ಎಂದು ಅತಿಸಮಂಜಸ ಶ್ಲೇಷೆಯಾಗಿಸಿದ ನಟರಾಜರ ಕಾವ್ಯಶಕ್ತಿಯಷ್ಟೇ ಅಲ್ಲ ಪನ್-ಪಾಂಡಿತ್ಯದ ಬಗ್ಗೆಯೂ ನನಗೆ ಆರೋಗ್ಯಕರವಾದೊಂದು ಅಸೂಯೆಯಿದೆ! ಈಗ ತೇಜಸ್ವಿನಿ-ಮೈಕೇಲ್ ನನಗೂ ಪರಿಚಿತರೇ. ಮೈಕೇಲ್ ‘ಪಶ್ಚಿಮದಲ್ಲಿದ್ದರೂ ಪೂರ್ವಕೆ ತಿರುಗಿದವನು’ ಆಗಲೂ ಈಗಲೂ.

ಭಾರತೀಯ ಸಂಸ್ಕೃತಿಯ ಬಗೆಗಿನ ಗೌರವದಿಂದಲೇ ಮೈಕಳೆ ಹೆಚ್ಚಿಸಿಕೊಂಡವನು. ಗ. ದಿ. ಮಾಡಗೂಳಕರ್ ಏನಾದರೂ ಈ
ಜೋಡಿಯನ್ನು ನೋಡಿದ್ದರೆ ಮತ್ತೊಮ್ಮೆ ‘ತೇಜಾಚೀ ಆರತಿ…’ ಎಂದೇ ಉದ್ಗರಿಸುತ್ತಿದ್ದರೇನೋ. ಇರಲಿ, ಮತ್ತೆ ತೇಜಸ್ಸಿನ ಮೇಲೆಯೇ ಫೋಕಸ್ ಮಾಡೋಣ. ‘ಹಮಾರೇ ಪಾಸ್ ತೇಜಸ್ವೀ ಲೋಗ್ ಹೈಂ’ ಎಂದು ಪ್ರಧಾನಿ ಮೋದಿಯವರು ಆಗಾಗ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಬಗ್ಗೆಯಷ್ಟೇ ಅಲ್ಲ ಆ ಮಾತು. ಭಾರತ ದೇಶದಲ್ಲಿ ವಿಪುಲವಾಗಿರುವ ಯುವಶಕ್ತಿ, ಮತ್ತು ಅದರ ತೇಜಸ್ಸಿನ ಬಗ್ಗೆ ಮೋದಿಯವರಿಗೆ ಎಲ್ಲಿಲ್ಲದ ಅಭಿಮಾನ.

ತೇಜಸ್ಸು ಎಂದರೆ ಪ್ರಕಾಶ, ಪರಾಕ್ರಮ, ಶಕ್ತಿ, ವರ್ಚಸ್ಸು, ದೇಹದ ಕಾಂತಿ, ದೇಹಕ್ಕೆ ಶಕ್ತಿಯನ್ನು ಕೊಡುವ ಪಿತ್ತದಲ್ಲಿರುವ ಸಾಮರ್ಥ್ಯ, ಮೊನಚು, ಚೂಪು, ತೀಕ್ಷ್ಣ, ಹರಿತ, ವೇಗ, ಧೈರ್ಯ ಇತ್ಯಾದಿ ಹಲವು ಅರ್ಥಗಳಿವೆ. ಉತ್ತೇಜನ ಎಂಬ ಶಬ್ದವನ್ನು ನಾವೆಲ್ಲ ಉಪಯೋಗಿಸ್ತೇವಲ್ಲ, ಅದರ ಮೂಲವೂ ತೇಜಸ್ಸೇ. ಸಂಸ್ಕೃತದ ತೇಜಸ್ ಇತರ ಭಾರತೀಯ ಭಾಷೆಗಳಿಗೂ
ಪದಸಂಪತ್ತನ್ನು ಕೊಟ್ಟಿದೆ. ಮರಾಠಿಯಲ್ಲಿ ದವಸಧಾನ್ಯಗಳ ಬೆಲೆ ಏರಿಕೆಗೆ ‘ತೇಜಿ’ ಎನ್ನುತ್ತಾರೆ (ಯುಗಾದಿ ಪಾಡ್ಯದ ದಿನ ಪಂಚಾಂಗ ಶ್ರವಣದಲ್ಲಿ ಈವರ್ಷ ಯಾವ್ಯಾವ ಬೆಳೆಗಳಿಗೆ ತೇಜಿಯಿದೆ ಎಂದು ರೈತರಿಗೆ ಕುತೂಹಲವಿರುತ್ತದೆ).

ಮುಂಬಯಿಯಲ್ಲಿ ಲೋಕಲ್ ಟ್ರೈನ್‌ಗಳ ಎನೌನ್ಸ್‌ಮೆಂಟ್‌ನಲ್ಲಿ ಎಕ್ಸ್‌ಪ್ರೆಸ್ ರೈಲಿಗೆ ‘ತೇಜ್’ ಗಾಡಿ ಎನ್ನುತ್ತಾರೆ. ಅಂತೂ ಯಾವ ಅರ್ಥವನ್ನೇ ತೆಗೆದುಕೊಂಡರೂ ತೇಜಸ್ಸೆಂದರೆ ವೇಗೋತ್ಕರ್ಷವುಳ್ಳದ್ದು, ಪ್ರಖರವಾದುದು, ಪ್ರಜ್ವಲ ವಾದುದು. ಅಲ್ಲಿ ಕತ್ತಲೆಯಿಲ್ಲ, ಕೊರತೆಯಿಲ್ಲ, ಡಲ್‌ನೆಸ್ ಎಂಬುದಿಲ್ಲ. ಯಾವುದೇ ರೀತಿಯ ಋಣಾತ್ಮಕತೆಯೂ ಇಲ್ಲ. ಬಹುಶಃ ದೇವರು ಎಂಬ ನಮ್ಮ ಕಲ್ಪನೆಯ ವ್ಯಾಖ್ಯೆಯೂ ಇದೇ ರೀತಿಯದಿರುವುದರಿಂದ ದೇವರ ಫೊಟೊ ಯಾವಾಗಲೂ ತೇಜೋಮಯ!

ಇದಕ್ಕೆ ಪೂರಕವಾಗಿ, ವಿಜ್ಞಾನವೆಂಬ ಕನ್ನಡಕದಿಂದ ನೋಡುವುದಾದರೆ, ಅZ Peಟಠಿಟಜ್ಟZmeqs ಅಂತೊಂದು ವಿಸ್ಮಯಕರ ಸಂಗತಿಯಿದೆ. ಅZ ಎಂದರೆ ತೇಜಸ್ಸು. ಛಾಯಾಚಿತ್ರದಲ್ಲಿ ದೇವರಿಗೆ ಮಾತ್ರವಲ್ಲ, ಮನುಷ್ಯರಿಗೂ ತೇಜೋ ವಲಯವೊಂದಿರುತ್ತದೆ, ಮಾನವದೇಹವು ಮಿತವಾದ ಪ್ರಮಾಣದಲ್ಲಿ ಕಾಂತಿಯುತವಾಗಿರುತ್ತದೆ, ಫೊಟೊಗ್ರಫಿಯಲ್ಲಿ ಇದು ಸ್ಪಷ್ಟವಾಗಿ ಗೊತ್ತಾಗುತ್ತದೆ ಎಂಬ ವಿಚಾರದ ಮೇಲೆ ಬೆಳಕು ಚೆಲ್ಲುವ ಪ್ರಯೋಗಗಳು ಕಳೆದ ಶತಮಾನದಿಂದೀಚೆಗೆ ವಿವಿಧೆಡೆಗಳಲ್ಲಿ ನಡೆದಿವೆ. ಕೆಲವರು ಇದನ್ನು ದುಡ್ಡು ಮಾಡುವ ದಂಧೆಯಾಗಿಯೂ ಉಪಯೋಗಿಸಿಕೊಂಡಿದ್ದಾರೆ.

ತೇಜಸ್ಸಿನ ಫೊಟೊ ತೆಗೆದುಕೊಡುತ್ತೇವೆ ಎಂದು ಅರೆವೈಜ್ಞಾನಿಕ ಉಪಕರಣಗಳನ್ನು ಬಳಸಿ ಜನರನ್ನು ನಂಬಿಸಿದ್ದಾರೆ.
ಅವರದೇನಿದ್ದರೂ ಲೋಕೋಪಯೋಗಿ ತೇಜಸ್ಸಲ್ಲ, ಬರೀ ಸ್ವಾರ್ಥ. ೧೯೩೯ರಲ್ಲಿ ರಷ್ಯಾದ ಸೆಮಿಯೊನ್ ಡೆವಿಡೊವಿಚ್ ಕಿರ್ಲಿಯನ್ ಎಂಬೊಬ್ಬ ಎಲೆಕ್ಟ್ರೀಷಿಯನ್ ತನ್ನ ಪ್ರಯೋಗಾಲಯದಲ್ಲಿ ಒಂದು ವಿಚಿತ್ರ ಸಂಗತಿಯನ್ನು ಗಮನಿಸಿದನು. ಕತ್ತಲಲ್ಲಿ ವಿದ್ಯುದುಪಕರಣ ಗಳನ್ನು ಮುಟ್ಟಿದಾಗ ತನ್ನ ದೇಹದಿಂದ ಒಂಥರದ ಬೆಳಕು ಹೊರ ಸೂಸುವುದನ್ನು ಕಂಡು ಚಕಿತನಾದನು. ಅವನ ಹೆಂಡತಿ ವೆಲೆಂಟಿನಾ ಜೀವಶಾಸ್ತ್ರಜ್ಞೆ. ಅವರಿಬ್ಬರೂ ಸೇರಿ ಈ ಚಮತ್ಕಾರದ ಕುರಿತು ವರ್ಷಗಟ್ಟಲೆ ಸಂಶೋಧನೆ ನಡೆಸಿ ೧೯೬೧ರಲ್ಲಿ ರಷ್ಯಾದ ಸೈಂಟಿಫಿಕ್  ಜರ್ನಲ್‌ನಲ್ಲಿ ಒಂದು ಪ್ರೌಢಪ್ರಬಂಧ ಮಂಡಿಸಿದರು.

ಕಿರ್ಲಿ ಯನ್‌ನ ಪ್ರತಿಪಾದನೆಯೇನೆಂದರೆ ತೇಜಸ್ಸನ್ನು ಚಿತ್ರೀಕರಿಸಬಹುದು, ಮಾತ್ರವಲ್ಲ ಅದನ್ನು ರೋಗತಪಾಸಣೆ ಮತ್ತು ಚಿಕಿತ್ಸಾ ವಿಧಾನವಾಗಿಯೂ ಉಪಯೋಗಿಸಬಹುದು; ಮನುಷ್ಯರಲ್ಲಷ್ಟೇ ಅಲ್ಲದೆ ಪ್ರಾಣಿಗಳಲ್ಲೂ ಸಸ್ಯಗಳಲ್ಲೂ ತೇಜಸ್ಸಿರುವು ದರಿಂದ ವೈದ್ಯ ಕೀಯ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ತರಬಹುದು ಎಂದು. ಕಿರ್ಲಿಯನ್ ಏನೋ ಪ್ರಾಮಾಣಿಕವಾಗಿ ಅಧ್ಯಯನ ಮಾಡಿ ತಾನು ಕಂಡುಕೊಂಡಿದ್ದನ್ನು ಜಗತ್ತಿಗೆ ತಿಳಿಸಿದನು. ಆದರೆ ಕೆಲ ಚಾಣಾಕ್ಷ ಮೇಧಾವಿಗಳು ಅದನ್ನು ‘ಕಿರ್ಲಿಯನ್ ಫೊಟೊಗ್ರಫಿ’ ಎಂಬ ಹೊಸದೊಂದು ತಂತ್ರಜ್ಞಾನವನ್ನಾಗಿ ಅಳವಡಿಸಿಕೊಂಡರು.

ತೇಜಸ್ಸಿನ ಫೊಟೊ ತೆಗೆದುಕೊಡುತ್ತೇವೆಂದು ಅಮಾಯಕರಿಂದ ಹಣ ವಸೂಲಿ ಮಾಡತೊಡಗಿದರು. ಕೆಲ ಮಂದಿ ನಂಬಿದರು, ಇನ್ನು ಕೆಲವರು ವಿರೋಧಿಸಿದರು. ವ್ಯಕ್ತಿಯ ತೇಜಸ್ಸನ್ನು ಬರಿಗಣ್ಣಿಂದ ನೋಡಲಿಕ್ಕಾಗುತ್ತದೆಯೇ, ಛಾಯಾಚಿತ್ರದಲ್ಲಿ ಅದು ಗೋಚರಿಸು ವುದು ಹೌದೇ ಎಂಬ ಬಗ್ಗೆ ವಾದವಿವಾದ ಚರ್ಚೆಗಳು ನಡೆದವು. ಅಮೆರಿಕದ ಜೇಮ್ಸ್ ರ‍್ಯಾಂಡಿ ಎಂಬ ವಿeನಿಯಂತೂ ಈ ಸಂಶೋಧನೆಯನ್ನು ಸಾರಾಸಗಟಾಗಿ ತಿರಸ್ಕರಿಸಿದ್ದಷ್ಟೇ ಅಲ್ಲ, ಯಾರಾದರೂ ತೇಜಸ್ಸನ್ನು ಗ್ರಹಿಸಬಲ್ಲೆವು ಎಂದು ಸಾಧಿಸಿ ತೋರಿಸಿದರೆ ಮಿಲಿಯನ್ ಡಾಲರ್ ಬಹುಮಾನ ಕೊಡುವೆನೆಂದು ಘೋಷಿಸಿದ!

ಹಾಗಿದ್ದರೆ ತೇಜೋವಲಯವೆಂಬುದು ಸುಳ್ಳೇ? ಬಯೋಪ್ಲಾಸ್ಮಾ ಶಕ್ತಿಕ್ಷೇತ್ರ ಎಂಬಿತ್ಯಾದಿ ಅದರ ವಿವರಣೆಗಳು ಬರೀ ಟೊಳ್ಳೇ? ಅಸಲಿ ಸಂಗತಿಯೇನೆಂದರೆ ಕಿರ್ಲಿಯನ್ ಫೊಟೊಗ್ರಫಿ ಜಾದೂಗಾರರು ಉಪಯೋಗಿಸುವ ಹೈ-ವೋಲ್ಟೇಜ್ ಹೈ-ಫ್ರೀಕ್ವೆನ್ಸಿ ವಿದ್ಯುತ್ತಿಗೆ ವಸ್ತುವಿನ ಅಣುಗಳಿಂದ ಎಲೆಕ್ಟ್ರಾನ್‌ಗಳನ್ನು ಪ್ರತ್ಯೇಕಿಸುವ ಶಕ್ತಿಯಿರುತ್ತದೆ. ಇದರಿಂದ ವಸ್ತುವಿನ ಸುತ್ತಲಿನ ಗಾಳಿ ಎಲೆಕ್ಟ್ರಾನ್ ಮಯವಾಗುತ್ತದೆ. ಒಂದುವೇಳೆ ಅದರಲ್ಲಿ ತೇವಾಂಶವೂ ಇದ್ದರೆ ಮಂದ ವಾದ ಬೆಳಕನ್ನು ಚೆಲ್ಲಲಾರಂಭಿಸುತ್ತದೆ.

ಕಿರ್ಲಿಯನ್ ಫೊಟೊ ಗ್ರಾಫರನ ಸ್ಟುಡಿಯೊದಲ್ಲಿ ಏನಾಗುತ್ತದೆಯೆಂದರೆ ಪ್ರಖರವಾದ ಬೆಳಕಿನಲ್ಲಿ, ತೇಜಸ್ಸಿನ ಚಿತ್ರ ತೆಗೆಸಿಕೊಳ್ಳುತ್ತಿರುವ ಉದ್ವಿಗ್ನತೆಯಲ್ಲಿ ವ್ಯಕ್ತಿ ಸಹಜವಾಗಿಯೇ ಸ್ವಲ್ಪವಾದರೂ ಬೆವರುತ್ತಾನೆ. ದೇಹದ ಮೇಲಿನ ಅಷ್ಟು ಪಸೆ ಸಾಕಾಗುತ್ತದೆ, ಕಿರ್ಲಿಯನ್ ಕಾಂತಿ ಕಂಗೊಳಿಸುವುದಕ್ಕೆ. ಒಂದೊಮ್ಮೆಗೆ ನಿರ್ವಾತದಲ್ಲಿ ವ್ಯಕ್ತಿಯನ್ನಿರಿಸಿ ಫೊಟೊ ತೆಗೆದದ್ದೇ ಆದರೆ ಅಲ್ಲಿ ತೇವಾಂಶವಿಲ್ಲದೆ ಎಲೆಕ್ಟ್ರಾನ್ ಪ್ರಸರಣ ನಡೆಯುವುದಿಲ್ಲ, ಕಿರ್ಲಿಯನ್ ಎಫೆಕ್ಟ್ ಬರುವುದು ಸಾಧ್ಯವೇ ಇಲ್ಲ.

ಇಷ್ಟಾದರೂ ಈಗಿನ ಆಧುನಿಕ ಯುಗದಲ್ಲಿ ಪ್ರಾಣಿಕ್ ಹೀಲಿಂಗ್, ರೇಕಿ ಮೊದಲಾದ ವಿಶೇಷ ವೈದ್ಯಪದ್ಧತಿಗಳು ಜನಪ್ರಿಯ ವಾಗುತ್ತಲೇ ಇವೆ. ತೇಜೋವಲಯದ ಅಸ್ತಿತ್ವವನ್ನು ಅನುಮೋದಿಸುತ್ತಲೇ ಇವೆ. ಯೋಗ, ಆಯುರ್ವೇದಗಳಲ್ಲೂ ಆತ್ಮ ಶಕ್ತಿಯ ಕಂಪನ ಚಕ್ರಗಳು, ಅದರ ಮೂಲಕ ಶಕ್ತಿಯ ಹೊರ ಹೊಮ್ಮುವಿಕೆ ಇತ್ಯಾದಿ ವಿವರಣೆಗಳಿವೆ. ಅವೆಲ್ಲ ಪೊಳ್ಳು ಎಂದೇನಿಲ್ಲ, ಒಂಚೂರು ವಿಜ್ಞಾನ ಮಿಕ್ಕಿದ್ದೆಲ್ಲ ನಂಬಿಕೆ ವಿಶ್ವಾಸಗಳದೇ ತಳಹದಿ.

ಇನ್ನೊಂದೆಡೆ ‘ನಿಮ್ಮ ಮೈಕಾಂತಿಯನ್ನು ಹೆಚ್ಚಿಸುವುದಕ್ಕಾಗಿ…’ ಎಂದು ಪ್ರಸಾಧನ ಸಾಮಗ್ರಿಗಳ ಜಾಹಿರಾತುಗಳು, ಅದಕ್ಕೆ ಗ್ಲಾಮರ್ ಜಗತ್ತಿನ ಮಿನುಗುತಾರೆಯರಿಂದ ಶಿಫಾರಸುಗಳು. ಯಾವುದನ್ನು ನಂಬಬೇಕು ಯಾವುದನ್ನು ನಂಬಬಾರದೆಂಬ ಗೊಂದಲ. ಅದಕ್ಕೇ ಕಠೋಪನಿಷತ್‌ನಲ್ಲಿ ಹೇಳಿರುವುದು ‘ತೇಜಸ್ವಿನಾವಧಿತಮಸ್ತು…’ – ನಮ್ಮ ನಿರಂತರ ಜ್ಞಾನಾರ್ಜನೆಯೇ ನಮ್ಮ ತೇಜಸ್ಸನ್ನು ಹೆಚ್ಚಿಸಬೇಕು, ನಮ್ಮನ್ನು ತೇಜಸ್ವಿಗಳಾಗಿಸಬೇಕು. ಈಗ, ಈ ತಿಳಿವಳಿಕೆಯ ತೇಜಸ್ಸಿಂದ ಶ್ರೀರಾಮ-ಲವಕುಶರ ತೇಜಾಚೀ ಆರತಿ ಹೇಗಿದ್ದಿರಬಹುದೆಂದು ಇನ್ನೊಮ್ಮೆ ಊಹಿಸಿ!

error: Content is protected !!