Friday, 26th July 2024

ವೈದ್ಯಕೀಯ ಮಾಹಿತಿ ಸೋರಿಕೆ ತಡೆಗೆ ಪ್ರಬಲ ಕಾನೂನು ಅಗತ್ಯ

ಕಳಕಳಿ

ಪವನ್ ವಶಿಷ್ಠ

ಇತ್ತೀಚಿಗೆ ಎರಡು ತಿಂಗಳ ಹಿಂದೆ ಮಾರ್ಚ್‌ನಲ್ಲಿ ಪೆನ್ಸಿಲ್ವೇನಿಯಾದ ಲೆಹೈ ವ್ಯಾಲಿ ಹಾಸ್ಪಿಟಲ್ (ಎಲ್‌ವಿಎಚ್‌ಎನ್)
ಸಮೂಹ ಆಸ್ಪತ್ರೆಯಲ್ಲಿನ ರೋಗಿಗಳ ವೈದ್ಯಕೀಯ ಮಾಹಿತಿಯನ್ನು ಸೈಬರ್ ಖದೀಮರು ದೋಚಿ ಹಣಕ್ಕೆ ಬೇಡಿಕೆ ಇಟ್ಟ ಘಟನೆ ಇಡೀ ಸೈಬರ್ ಲೋಕ ಮಾತ್ರವಲ್ಲದೆ ಮನುಕುಲ ಕೂಡ ಬೆಚ್ಚಿ ಬೀಳಿಸಿದೆ.

ಲೆಹೈ ಸಮೂಹ ಆಸ್ಪತ್ರೆಗಳಲ್ಲಿ ಸ್ತನ ಕ್ಯಾನ್ಸರ್ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳ ಮಾಹಿತಿ ಸೈಬರ್ ಖದೀಮರ ಪಾಲಾಗಿದೆ. ಅದು ಅಷ್ಟೇ ಆಗಿದ್ದರೆ ತಲೆ ನೋವಿರಲಿಲ್ಲ. ಸ್ತನ ಕ್ಯಾನ್ಸರ್ ಪರೀಕ್ಷೆಗೆ ಬರುವ ರೋಗಿಗಳ ಸ್ಕ್ಯಾನಿಂಗ್ ಸಲುವಾಗಿ ಒಳ ಉಡುಪು ತೆಗೆದು ಸೆರೆ ಹಿಡಿದಿರುವ ಫೋಟೋವನ್ನು ಕದಿಯುವ ಮೂಲಕ ಸೈಬರ್ ಕಳ್ಳರು ಕೈಚಳಕ ತೋರಿಸಿದ್ದಾರೆ. ಅಷ್ಟೇ ಅಲ್ಲದೇ ಬಹು ಕೋಟಿ ಹಣಕ್ಕೆ ಬೇಡಿಕೆ ಇಟ್ಟು ಹಣ ನೀಡದಿದ್ದರೆ ರೋಗಿಗಳ ನಗ್ನಚಿತ್ರ ಆನ್‌ಲೈನ್ ಮೂಲಕ ಸೋರಿಕೆ ಮಾಡುವುದಾಗಿ ಬೆದರಿಕೆ ಒಡ್ಡಿದ್ದಾರೆಂದು ವರದಿಯಾಗಿದೆ.

ಇಷ್ಟು ದಿನ ನಮ್ಮ ಮೊಬೈಲ್ ನಂಬರ್ ಬ್ಯಾಂಕ್ ಖಾತೆಗೆ ಕನ್ನ ಹಾಕುತಿದ್ದ ಸೈಬರ್ ಖದೀಮರು, ಈಗ ರೋಗಿಗಳ ವೈದ್ಯಕೀಯ ಮಾಹಿತಿ ಎಗರಿಸುವ ಕೆಲಸಕ್ಕೆ ಕೈ ಹಾಕಿರುವುದು ಪ್ರಪಂಚದ ವೈದ್ಯಕೀಯ ಲೋಕಕ್ಕೆ ಸವಾಲಾಗಿ ಪರಿಣಮಿ ಸಿದೆ. ಭಾರತದಲ್ಲಿ ವೈದ್ಯಕೀಯ ಮಾಹಿತಿ ಸೋರಿಕೆ ಕುರಿತು ಇನ್ನು ಗಂಭೀರವಾಗಿ ಪರಿಗಣಿಸಿಲ್ಲ. ಕಳೆದ ವರ್ಷ ನವೆಂಬರ್ ೨೦೨೨ ರಲ್ಲಿ ಎಮ್ಸ್‌ನ ೫ ಸರ್ವರ್‌ ನಿಂದ ೧.೩ ಟಿಬಿ ಅಷ್ಟು ಮಾಹಿತಿ ಸೈಬರ್ ಕಳ್ಳರ ಪಾಲಾಗಿತ್ತು. ಪ್ರಮುಖವಾಗಿ ಮಾಜಿ ಪ್ರಧಾನ ಮಂತ್ರಿಗಳು, ವಿವಿಐಪಿಗಳು, ನ್ಯಾಯಮೂರ್ತಿಗಳ ವೈದ್ಯಕೀಯ ಮಾಹಿತಿ ಸರ್ವರ್‌ನಲ್ಲಿ ಅಡಗಿತ್ತು. ಸುಮಾರು ೩-೪ ರೋಗಿಗಳ ಮಾಹಿತಿ ಇದರಿಂದ ಸೋರಿಕೆಯಾಗಿರುವುದಾಗಿ ಅಂದಾಜಿಸಲಾಗಿದೆ.

ವರ್ಷಕ್ಕೆ ಏನಿಲ್ಲವಾದರೂ ೩೮ ಲಕ್ಷ ಮಂದಿ ಏಮ್ಸ್‌ನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಾರೆ. ಅವರೆಲ್ಲರ ಮಾಹಿತಿ ಈ ಸರ್ವರ್‌ ನಲ್ಲಿರುತ್ತದೆ. ಅದೃಷ್ಟವಶಾತ್ ಡೇಟಾ ಖದೀಮರು ಯಾವ ಹಣದ ಬೇಡಿಕೆ ಇಟ್ಟಿರಲಿಲ್ಲ. ಆದರೆ ಇದು ವೈದ್ಯಕೀಯ ಸಂಸ್ಥೆಗಳಿಗೆ ಎಚ್ಚರಿಕೆ ಗಂಟೆ ಆಗಿದ್ದು ಮಾತ್ರ ಸುಳ್ಳಲ್ಲ. ಪ್ರಪಂಚಾದ್ಯಂತ ವೈದ್ಯಕೀಯ ವಲಯದಲ್ಲಿ ನಡೆಯುತ್ತಿರುವ ಸೈಬರ್ ದಾಳಿ ಇತ್ತೀಚಿನ ವರ್ಷದಲ್ಲಿ ಶೇ. ೯೫.೩೫% ರಷ್ಟು ಹೆಚ್ಚಾಗಿದೆ.

ರೋಗಿಗಳ ಮಾಹಿತಿ ಸೈಬರ್ ದಾಳಿಗೆ ತುತ್ತಾಗಿದ್ದು, ಅವರೆಲ್ಲರ ಮಾಹಿತಿ ಡೇಟಾ ಕಳ್ಳರ ಪಾಲಾಗುತ್ತಿದೆ. ವೈದ್ಯಕೀಯ ಸಂಸ್ಥೆಗಳಲ್ಲಿ ಹೇಗೆ ಪರೀಕ್ಷಾ ಯಂತ್ರಗಳಿಗೆ ರಕ್ಷಣೆ ನೀಡುತ್ತಾರೋ, ಅದಕ್ಕೆ ದುಪ್ಪಟ್ಟು ರಕ್ಷಣೆ ಅಲ್ಲಿನ ರೋಗಿಗಳ ಮಾಹಿತಿಗೆ
ನೀಡಬೇಕಾದ ಅನಿವಾರ್ಯತೆ ಆಸ್ಪತ್ರೆಗಳ ಮೇಲಿದೆ. ಭಾರತದಂಥ ಬಹು ಜನಸಂಖ್ಯಾ ರಾಷ್ಟ್ರದಲ್ಲಿ ಅಂದಾಜಿನ ಪ್ರಕಾರ ಶೇ.೭೭% ಜನರು ಇಂಟರ್ ನೆಟ್ ಬಳಸುತ್ತಿದ್ದಾರೆ. ಗ್ರಾಹಕರು ಎಲ್ಲಿಯೇ ಹೋದರು ಅವರ ಮೊಬೈಲ್ ನಂಬರ್ ನೋಂದಣಿ
ಮಾಡಿಸಿಕೊಳ್ಳುವುದು ಸರ್ವೇ ಸಾಮಾನ್ಯ.

ಮೊಬೈಲ್ ನಂಬರ್ ಬೇರೊಬ್ಬರಿಗೆ ನೀಡುವುದು ಸದ್ಯಕ್ಕೆ ಅಷ್ಟು ಅಪಾಯಕಾರಿ ಅಲ್ಲ. ಆದರೆ ಮುಂದೊಂದು ದಿನ ಇದರ ಕುರಿತು ಕಾಳಜಿ ಇಲ್ಲದಿದ್ದರೆ ಕ್ರೈಂ ಲೋಕದ ಹೊಸ ಮಜಲಿಗೆ ಈ ಪೀಳಿಗೆ ತತ್ತರಿಸಿ ಹೋಗಬೇಕಾಗುತ್ತದೆ. ೨೦೨೦ ರಲ್ಲೇ ಸೈಬರ್ ಸೆಕ್ಯುರಿಟಿ ಕುರಿತು ನೂತನ ನೀತಿ ಜಾರಿ ಮಾಡುವುದಾಗಿ ಕೇಂದ್ರ ಸರ್ಕಾರ ಹೇಳಿದ್ದರೂ ಅದು ಇನ್ನೂ ಜಾರಿಗೆ ಬಂದಿಲ್ಲ.

ಸೈಬರ್ ಸೆಕ್ಯುರಿಟಿ ಕುರಿತು ನಮ್ಮ ದೇಶದದಲ್ಲಿ ಜನರಿಗೆ ಹೆಚ್ಚಿನ ಜಾಗೃತಿ ಅಗತ್ಯವಿದೆ. ಇದರ ಕುರಿತು ಬಲವಾದ ಕಾನೂನು ರೂಪಿಸುವ ಹೊಣೆ ಸರ್ಕಾರದ ಮೇಲಿದೆ. ಪ್ರಮುಖ ಸಂಸ್ಥೆಗಳಲ್ಲಿ ಗ್ರಾಹಕರ ಡೇಟಾ ಖದೀಮರ ಪಾಲಾದರೆ ಅದು ಹೊರಗೆ ಬರುವುದೇ ಇಲ್ಲ. ಒಂದೊಮ್ಮೆ ಬಂದರೂ ಕಠಿಣ ಶಿಕ್ಷೆ ನೀಡುವಂತಹ ಕಾನೂನಿನ ಕೊರತೆ ಭಾರತದಲ್ಲಿ ಎದ್ದು ಕಾಣುತ್ತಿದೆ.
ಈಗಿರುವ ಕಾನೂನಿನಡಿ ಕ್ರಿಮಿನಲ್ ಪ್ರಕರಣ ದಾಖಲಾದರೂ ಅದರಿಂದ ಸುಲಭವಾಗಿ ಶಿಕ್ಷೆಯಿಂದ ತಪ್ಪಿಸಿಕೊಂಡು ಬರಬಹುದು.

ಕಾರಣ ಇಷ್ಟೇ, ನಮ್ಮಲ್ಲಿರುವ ಭಾರತೀಯ ದಂಡ ಸಂಹಿತೆ (ಐಪಿಸಿ) ೧೫೦ ವರ್ಷಗಳ ಪುರಾತನದ್ದು. ಈಗಿನ ಸೈಬರ್ ಲೋಕಕ್ಕೆ ಅನುಗುಣವಾಗಿ ಕ್ರಿಮಿನಲ್ ಕಾನೂನು ರೂಪಿಸಬೇಕಾದ ಅನಿವಾರ್ಯತೆ ಕೇಂದ್ರ ಸರ್ಕಾರದ ಹೆಗಲ ಮೇಲಿದೆ. ಆಧಾರ್, ಪಾನ್, ಬ್ಯಾಂಕಿನ ಖಾತೆ ವಿವರ ಇವೆಲ್ಲವೂ ನಮ್ಮ ಮೊಬೈಲ್ ನಂಬರ್ ಜತೆ ಸೇರಿಕೊಂಡಿದೆ. ಹಿಂದೆಲ್ಲಾ ಪಿಕ್ ಪ್ಯಾಕೆಟ್ ಮೂಲಕ ನಮ್ಮ ಹಣ ಎಗರುಸುತ್ತಿದ್ದ ಖದೀಮರು ಈಗ ಕೂತಲ್ಲೇ ನಮ್ಮ ಖಾತೆಯಿಂದ ಹಣ ಎಗರಿಸುವ ಕಲೆ ಕರಗತ ಮಾಡಿಕೊಂಡಿದ್ದಾರೆ. ಆದರೆ ಇಷ್ಟು ದಿನ ನಮ್ಮ ಖಾತೆ ಮೇಲೆ ಮಾತ್ರ ಕಣ್ಣು ಹಾಕುತ್ತಿದ್ದ ಖದೀಮರು ಈಗ ನಮ್ಮ ಬೆಡ್ ರೂಂವರೆಗೂ ಕಾಲಿಟ್ಟು ನಮ್ಮ ಖಾಸಗಿ ವಿಚಾರಗಳನ್ನು ಸಹ ಕದಿಯಲು ಆರಂಭಿಸಿದ್ದಾರೆ.

ಖಾಸಗಿ ಡೇಟಾ ಎಂಬುದು ಪೆಟ್ರೋಲಿಯಂ ಮತ್ತು ಶಸಾಸಕ್ಕೆ ಸಮನಾದ ಆಧುನಿಕ ಆಯುಧ ಎಂದರೆ ತಪ್ಪಲ್ಲ. ಖಾಸಗಿ ಮಾಹಿತಿ ರಕ್ಷಣೆ ಕುರಿತು ಪ್ರತಿಯೊಬ್ಬರು ಗಂಭೀರವಾಗಿ ಪರಿಗಣಿಸಬೇಕಾದ ಕಾಲ ಸನ್ನಿಹಿತವಾಗಿದೆ. ಇಲ್ಲವಾದಲ್ಲಿ ಮುಂದೊಂ ದು ದಿನ ನಮ್ಮ ವೈಯಕ್ತಿಕ ಮಾಹಿತಿಗೆ ನಾವೇ ಹೆಚ್ಚು ಬೆಲೆ ತರಬೇಕಾದ ಸಂದರ್ಭ ಬಂದರೂ ಆಶ್ಚರ್ಯವಿಲ್ಲ.

error: Content is protected !!