Friday, 21st June 2024

ಪ್ರೇಮಗಾನ ಪದ ಲಾಸ್ಯವೋ ಅಥವಾ ತಡ ಲಾಸ್ಯವೋ ?

ತಿಳಿರು ತೋರಣ

ಶ್ರೀವತ್ಸ ಜೋಶಿ

srivathsajoshi@yahoo.com

ಆಗಿನ ಹಾಡುಗಳಲ್ಲಿ ಕೆಲವು ಪದಗಳು ನಮಗೆ ಸರಿಯಾಗಿ ಕೇಳಿಸದಿರಲಿಕ್ಕೆ ಅವು ಹಿಂದಿನ ಕಾಲದ ಮೀಡಿಯಂ ವೇವ್ ರೇಡಿಯೊ ಸ್ಟೇಷನ್‌ ಗಳಿಂದ ಪ್ರಸಾರವಾಗುತ್ತಿದ್ದದ್ದೂ, ಅದನ್ನಷ್ಟೇ ನಾವು ಕೇಳುತ್ತಿದ್ದದ್ದೂ ಮುಖ್ಯ ಕಾರಣ. ಹೊಸ ತಂತ್ರಜ್ಞಾನದಲ್ಲಿರುವ ಡಿಜಿಟಲ್ ಸರೌಂಡ್ ಸೌಂಡ್ ಸಾಧ್ಯತೆಗಳೆಲ್ಲ ಆಗ ಇರಲಿಲ್ಲ. ಎಫ್‌ಎಂ ಸ್ಟೀರಿಯೊ ಬ್ರಾಡ್ ಕಾಸ್ಟಿಂಗ್ ಇರಲಿಲ್ಲ. ರೇಡಿಯೊದಲ್ಲಿ ಮೂಡಿದ ಕೆಲವು ಸ್ವರಗಳು, ಪದಗಳು, ಉಚ್ಚಾರಗಳು ಅಲ್ಪಸ್ವಲ್ಪ ಡಿಸ್ಟಾರ್ಟ್ ಆಗಿ ಕೇಳುತ್ತಿದ್ದವು.

ಅದು ನನ್ನ ತಲೆಯಲ್ಲುಂಟಾದ ಗೊಂದಲ ಅಲ್ಲ. ಬಾಸ್ಟನ್‌ನಿಂದ ವೈಶಾಲಿ ಹೆಗಡೆ ಮೊನ್ನೆ ವಾಟ್ಸಪ್‌ನಲ್ಲಿ ನನ್ನನ್ನು ಕೇಳಿದ್ದರು: ಧರ್ಮಸೆರೆ ಚಿತ್ರದ ‘ಈ ಸಂಭಾಷಣೆ…’ ಹಾಡಿನ ಮೊದಲ ಚರಣದಲ್ಲಿ ‘ತಡ ಲಾಸ್ಯ’ ಎನ್ನುವುದರ ಅರ್ಥ ಏನು? ಅವರ ಮೆಸೇಜು ಕಂಗ್ಲಿಷ್‌ನಲ್ಲಿ ಟೈಪಿಸಿದ್ದರಿಂದ thada lasya ಎಂದು ಇತ್ತು, ನಾನದನ್ನು ತಡ ಲಾಸ್ಯ ಎಂದೇ ಓದಿಕೊಂಡೆ.

ಅಲ್ಲಿಯೇ ನನಗೆ ಒಂದು ತಮಾಷೆ ಹೊಳೆದು ‘ಟ್ಯೂಬ್‌ಲೈಟ್‌ನಂತೆ ಸ್ವಲ್ಪ ತಡವಾಗಿ ಪ್ರೇಮದ ಕಿಡಿ ಬೆಳಗಿದರೆ, ಅಂದರೆ ನಲ್ಲ-ನಲ್ಲೆಯರ ಪ್ರೇಮ ಪರಸ್ಪರರಿಗೆ ತಿಳಿಯುವುದು ತಡವಾದರೆ, ಅದು ತಡ ಲಾಸ್ಯ’ ಅಂತ ಸ್ಮೈಲಿ ಯೊಂದಿಗೆ ಒಂದು ವಕ್ರತುಂಡೋಕ್ತಿಯನ್ನು ತತ್ ಕ್ಷಣದ ಪ್ರತಿಕ್ರಿಯೆಯೆಂದು ಅವರತ್ತ ಎಸೆದೆ. ಅವರ ಪ್ರಶ್ನೆ ಇದ್ದದ್ದು ಆ ಹಾಡಿನ ಚರಣದಲ್ಲಿ ‘ತದ ಲಾಸ್ಯ’ ಎಂದು ಕೇಳಿಸುತ್ತಿದೆ ಆ ಪದದ ಅರ್ಥವೇನು ತಿಳಿಸುವಿರಾ ಎಂದು. ಕಂಗ್ಲಿಷ್‌ನಿಂದಾಗಿ ತದ-ತಡ ಆಗಿತ್ತು. ಅದಿರಲಿ, ಆ ಸುಮಧುರ ಚಿತ್ರಗೀತೆಯನ್ನು ನಾನು ಇದುವರೆಗೆ ಸಾವಿರ ಸರ್ತಿ ಕೇಳಿದ್ದೇನೋ ಏನೋ. ‘ಪ್ರೇಮಗಾನ ಪದಲಾಸ್ಯ ಮೃದುಹಾಸ್ಯ…’ ಎಂದೇ ನನ್ನ ಕಿವಿಗಳಿಗೆ ಕೇಳಿಸುವುದು. ಇವರೇನಪ್ಪಾ ತದ ಲಾಸ್ಯ ಎನ್ನುತ್ತಿದ್ದಾರೆ ಅಂತ ನನಗೆ ಆಶ್ಚರ್ಯ.

ತನ್ನ ಜಿಜ್ಞಾಸೆಯ ಮತ್ತಷ್ಟು ವಿವರಗಳನ್ನು ವೈಶಾಲಿ ನನಗೆ ಒದಗಿಸಿದರು. ಅವರ ಸ್ನೇಹಿತೆಯೊಬ್ಬರು ಬಹುಶಃ ಅಲ್ಲಿನ ಕನ್ನಡ ಕೂಟದ ಕಾರ್ಯಕ್ರಮದಲ್ಲಿ ಆ ಹಾಡನ್ನು ಹಾಡಲಿಕ್ಕೆ ತಯಾರಿ ನಡೆಸಿದ್ದಾರೆ. ಇಂಟರ್‌ನೆಟ್‌ನಲ್ಲಿ ಹಾಡಿನ ಲಿರಿಕ್ಸ್ ಸಂಗ್ರಹಿಸಿ ಎಲ್ಲ ಸರಿಯಿದೆಯೇ ಒಮ್ಮೆ ನೋಡಿ ಎಂದು ವೈಶಾಲಿಯನ್ನು ಕೇಳಿದ್ದಾರೆ. ಅದರಲ್ಲಿ ಪ್ರೇಮಗಾನ ತದಲಾಸ್ಯ ಎಂದು ಇರುವುದನ್ನು ಓದಿದ ವೈಶಾಲಿ ಯುಟ್ಯೂಬ್‌ನಲ್ಲಿ ಹಾಡನ್ನೊಮ್ಮೆ ಕೇಳಿಸಿ ಕೊಂಡಿದ್ದಾರೆ.

ಅವರಿಗೂ ಪ್ರೇಮಗಾನ ತದಲಾಸ್ಯ ಎಂದೇ ಕೇಳಿಬಂದಿದೆ. ಸಾಲದೆಂಬಂತೆ, ಯುಟ್ಯೂಬ್ ವಿಡಿಯೊದಲ್ಲಿ ಇಂಗ್ಲಿಷ್ ಅಕ್ಷರಗಳಲ್ಲಿ ಹಾಡಿನ ಸಾಹಿತ್ಯ ಕೊಟ್ಟಿದ್ದರಲ್ಲೂ thada lasya ಎಂದೇ ಇದೆ. ವೈಶಾಲಿ ತನ್ನ ಪತಿಮಹಾಶಯರನ್ನು ಕೇಳಿದಾಗ ಅವರು ‘ತದನಂತರ, ತದನುಸಾರ, ತದರ್ಥ ಅಂತೆಲ್ಲ ಇದ್ದಂತೆ ತದಲಾಸ್ಯ ಇರಬಹುದು. ಎರಡಕ್ಷರದ ಲಾಸ್ಯವನ್ನು ನಾಲ್ಕಕ್ಷರಗಳದ್ದಾಗಿಸುವುದಕ್ಕಾಗಿ ತದಲಾಸ್ಯ ಮಾಡಿರಬಹುದು’ ಎಂದು ವ್ಯಾಖ್ಯಾನಿಸಿ ದ್ದಾರೆ. ಅಂತೂ ಗೊಂದಲ ಪರಿಹಾರವಾಗದೆ ವೈಶಾಲಿ ನನಗೆ ಮೆಸೇಜು ಕಳುಹಿಸಿದ್ದಾರೆ.

ಯುಟ್ಯೂಬ್‌ನಲ್ಲಿ ಧರ್ಮಸೆರೆ ಚಿತ್ರದ ಆ ಹಾಡಿನ ಒರಿಜಿನಲ್ ಸೌಂಡ್ ಟ್ರ್ಯಾಕ್ ಆವೃತ್ತಿಯನ್ನೂ, ರೇಡಿಯೊದಲ್ಲಿ ಬರುವ ಆವೃತ್ತಿಯನ್ನೂ ನಾನು ಮತ್ತೊಮ್ಮೆ ಕೇಳಿದೆ. ಸೂಕ್ಷ್ಮವಾಗಿ ಗಮನಿಸೋಣವೆಂದು ಹೆಡ್‌ಫೋನ್ಸ್ ಹಾಕಿಕೊಂಡು ಕೇಳಿದೆ. ಹೌದಲ್ಲ! ಈಗ ನನಗೂ ಅದು ‘ಪ್ರೇಮಗಾನ ತದಲಾಸ್ಯ…’ ಎಂದೇ ಕೇಳಿಸುತ್ತಿದೆ! ಗೂಗಲ್‌ನಲ್ಲಿ ಹುಡುಕಿದರೆ ಅನೇಕ ವೆಬ್ ಪುಟಗಳಲ್ಲೂ ಆ ಹಾಡಿನ ಸಾಹಿತ್ಯದಲ್ಲಿ ತದಲಾಸ್ಯ ಎಂದೇ ದಾಖಲಾಗಿದೆ! ಈಗ ಗೊಂದಲದ ಗುಂಗಿಹುಳ ನನ್ನ ತಲೆಯನ್ನೂ ಹೊಕ್ಕಿತು. ತದಲಾಸ್ಯ ಎಂಬ ಪದ ಹೇಗೆ ಬಂತು? ತದರ್ಥ, ತದನುಸಾರ, ತದನಂತರ ಮುಂತಾದುವುಗಳಲ್ಲಿ ‘ತತ್’ ಎನ್ನುವುದು ಜಶ್ತ್ವಸಂಧಿಯಿಂದಾಗಿ ‘ತದ್’ ಆಗಿರುವುದು.

ಆ ಜಾಡನ್ನು ಹಿಡಿದರೆ ತದ್ರೂಪ, ತದ್ವಿರುದ್ಧ ಇತ್ಯಾದಿಯಂತೆ ತದ್ಲಾಸ್ಯ ಆಗುತ್ತದೆಯೇ ವಿನಾ ತದಲಾಸ್ಯ ಆಗದು. ಚಿತ್ರಸಾಹಿತಿ ವಿಜಯ ನಾರಸಿಂಹ ಹಾಗೆಲ್ಲ ಅಬದ್ಧಗಳನ್ನು ಬರೆಯುವವರೇ ಅಲ್ಲ. ಮತ್ತೆಲ್ಲಿಂದ ಬಂತಿದು ತದಲಾಸ್ಯ? ನನ್ನ ಮನಸ್ಸು ಸುಲಭದಲ್ಲಿ ಒಪ್ಪಿ ಕೊಳ್ಳುತ್ತಿಲ್ಲ. ‘ಪ್ರೇಮಗಾನ ಪದಲಾಸ್ಯ’ ಎಂದು ಗೂಗಲ್‌ನಲ್ಲಿ ಹುಡುಕಿದಾಗ ಭರವಸೆಯ ಕಿರಣವೊಂದು ಗೋಚರಿಸಿತು. ಅದು ವಿಜಯಕರ್ನಾಟಕದಲ್ಲಿ ‘ಹಾಡು ಹುಟ್ಟಿದ ಸಮಯ’ ಅಂಕಣ ಬರೆಯುತ್ತಿದ್ದ ಮಣಿಕಾಂತ್ ಅವರ ಬ್ಲಾಗ್ ಪುಟ. ಧರ್ಮಸೆರೆ ಚಿತ್ರದ ಈ ಸಂಭಾಷಣೆ… ಹಾಡು ಹೇಗೆ ಹುಟ್ಟಿತು ಎಂಬ ಲೇಖನ. ಅಲ್ಲಿ ಅಚ್ಚುಕಟ್ಟಾಗಿ ‘ಪ್ರೇಮಗಾನ ಪದಲಾಸ್ಯ’ ಎಂದು, ನಾನೂ ಇ ದುವರೆಗೆ ಅಂದುಕೊಂಡಿದ್ದ ರೀತಿಯಲ್ಲೇ, ಬರೆದಿದ್ದಾರೆ.

ಅಂದರೆ, ವಿಜಯನಾರಸಿಂಹ ಅವರು ಪದಲಾಸ್ಯ ಅಂತಲೇ ಬರೆದಿರೋದು, ಬಹುಶಃ ಧ್ವನಿಮುದ್ರಣದ ವೇಳೆ ಎಸ್.ಜಾನಕಿಯವರ ಕಂಠದಲ್ಲಿ ಅದು ತದಲಾಸ್ಯ ಆಗಿದೆ! ನನ್ನ ಸೀಮಿತ ಸಂಶೋಧನೆಯನ್ನು ವೈಶಾಲಿಗೆ ಒಪ್ಪಿಸಿದೆ. ಈಗಿನ್ನು ಪದಲಾಸ್ಯ ಎಂದು ಹಾಡುವುದೋ ತದಲಾಸ್ಯ ಎಂದು ಹಾಡುವುದೋ ಅವರ ಸ್ನೇಹಿತೆಗೆ ಬಿಟ್ಟ ವಿಚಾರ. ನೆನಪು ನಾಲ್ಕೈದು ವರ್ಷಗಳ ಹಿಂದಕ್ಕೋಡಿತು. ಇದೇ ಅಂಕಣದಲ್ಲಿ ಹಿಂದೊಮ್ಮೆ (೧೮ಜೂನ್೨೦೧೭) ‘ಓಬವ್ವ ವೀರ ರಮಣಿಯೋ ವೀರರ ಮಣಿಯೋ?’ ಎಂಬ ಶೀರ್ಷಿಕೆಯ ಲೇಖನ ಬರೆದಿದ್ದೆ. ನಾಗರಹಾವು ಚಿತ್ರದ ಆ ಸುಪ್ರಸಿದ್ಧ ಗೀತೆಯಲ್ಲಿ ಓಬವ್ವಳನ್ನು ಕನ್ನಡನಾಡಿನ ‘ವೀರ ರಮಣಿ’ ಎಂದಿದ್ದೋ ಅಥವಾ ‘ವೀರರ ಮಣಿ’ ಎಂದಿದ್ದು? ಅದು ನನ್ನದೇ ತಲೆಯಲ್ಲಿ ವರ್ಷಗಳ ಕಾಲ ಬೀಡುಬಿಟ್ಟಿದ್ದ ಜಿeಸೆ.

ಅಂಥದ್ದೇ ಮತ್ತೂ ಒಂದಿಷ್ಟು ಉದಾಹರಣೆಗಳನ್ನು ಪೋಣಿಸಿ ಪ್ರಸ್ತುತಪಡಿಸಿದ್ದೆ. ನಾ ಮೆಚ್ಚಿದ ಹುಡುಗ ಚಿತ್ರದ ಶೀರ್ಷಿಕೆ ಗೀತೆಯ ಮೊದಲ ಚರಣದ ಮೊದಲ ಸಾಲಿನಲ್ಲಿ ‘ಪದಗಳು ತುಂಬಿದ ಕವನ ಇದಲ್ಲ ಹೃದಯವೆ ಅಡಗಿದೆ ಇದಲಿ’ ಅಂತಿದೆ, ‘ಇದಲಿ’ ಪದದ ಅರ್ಥ ಏನು? ಬಂಧನ ಚಿತ್ರದ ‘ಪ್ರೇಮದ
ಕಾದಂಬರಿ ಬರೆದನು ಕಣ್ಣೀರಲಿ…’ ಗೀತೆಯನ್ನು ಅನೇಕರು ‘ಪ್ರೇಮದ ಕಾದಂಬರಿ ಬರೆದೆನು ಕಣ್ಣೀರಲಿ…’ ಎಂದೇಕೆ ತಪ್ಪಾಗಿ ಹಾಡುತ್ತಾರೆ? ವೀರಕೇಸರಿ ಚಿತ್ರದ ‘ಮೆಲ್ಲುಸಿರೀ ಸವಿಗಾನ…’ವನ್ನೇಕೆ ಎಲ್ಲರೂ ‘ಮೆಲ್ಲುಸಿರೇ ಸವಿಗಾನ…’ ಎಂದು ತಪ್ಪಾಗಿ ಹಾಡುತ್ತಾರೆ? ಪ್ರೇಮಲೋಕದ ‘ಚೆಲುವೆ ಒಂದು ಕೇಳ್ತೀನಿ ಇಲ್ಲ ಅನ್ದೇ ಕೊಡ್ತೀಯಾ?’ ನನಗೇಕೆ ‘ಚೆಲುವೆ ಒಂದು ಕೇಳ್ತೀನಿ ಇಲ್ಲ ಅಂದ್ರೆ ಕೊಡ್ತೀಯಾ?’ ಅಂತ ಕೇಳಿಸ್ತದೆ? ಹಾಗೆಯೇ ಬಭ್ರುವಾಹನ ಚಿತ್ರದ ಗೀತೆ ಯಲ್ಲಿ ‘ನಿನ್ನ ನಡೆಯ ಕಂಡ ಹಂಪೆ(ಹಂಸೆ ಎಂದಿರುವುದು) ನಾಚಿ ಓಡಿತು’ ಅಂತ, ಮೊಗ್ಗಿನ ಮನಸ್ಸು ಚಿತ್ರದ ನನಗೂ ಒಬ್ಬ ಗೆಳೆಯ ಬೇಕು ಹಾಡಿ ನಲ್ಲಿ ‘ಚಂದಿರನ ಚಟ್ನಿಯಲ್ಲಿ(ತಟ್ಟೆಯಲ್ಲಿ ಎಂದಿರುವುದು) ಸೇರಿ ತಿನಬೇಕು’ ಅಂತ, ಬೆಳುವಲದ ಮಡಿಲಲ್ಲಿ ಚಿತ್ರದ ಹಾಡಿನಲ್ಲಿ ‘ಬೇಸಾಯ ಬದ್ಕು ಬ್ಯಾಡ್ದೇ ಹೋದ್ರೂ ಭೂಮಿಲ್ ಬಾಳ್ಬೇಕು’(ಪಾಲ್‌ಬೇಕು ಎಂದಿರುವುದು), ದೇವರ ಗುಡಿ ಚಿತ್ರದ ಮಾಮರವೆಲ್ಲೋ ಹಾಡಿನಲ್ಲಿ ‘ದಿನರಾತ್ರಿಯಲ್ಲಿ ಏಕಾಂತದಲಿ ಏಕೋ ಹೇನೋ(ಏನೋ ಎಂದಿರುವುದು) ನೋವಾಗುವುದು’ ಅಂತ ಕೇಳ್ಸೋದು ನನ್ಗೊಬ್ನಿಗೇನಾ? ಎಂದೆಲ್ಲ ಪ್ರಶ್ನೆಗಳನ್ನೆಸೆದಿದ್ದೆ.

ಮತ್ತೆ ಕೆಲವು ಚಿತ್ರಗೀತೆಗಳಲ್ಲಿ ನಿಜವಾಗಿಯೂ ನುಸುಳಿರುವ ಚಿಕ್ಕಪುಟ್ಟ ತಪ್ಪುಗಳ ಪಟ್ಟಿ ಮಾಡಿದ್ದೆ. ಬಯಲು ದಾರಿ ಚಿತ್ರದ ‘ಬಾನಲ್ಲು ನೀನೇ ಭುವಿ ಯಲ್ಲೂ (ಬುವಿಯಲ್ಲೂ ಆಗಬೇಕಿತ್ತು) ನೀನೇ…’, ಪ್ರೇಮಲೋಕದ ನಿಂಬೆಹಣ್ಣಿನಂಥ ಹುಡುಗಿಯಲ್ಲಿ ‘ತಲೆಯಿಂದ ಗುಷ್ಠದವರೆಗೆ(ಅಂಗುಷ್ಠದವ
ರೆಗೆ ಆಗಬೇಕಿತ್ತು), ಬೂತಯ್ಯನ ಮಗ ಅಯ್ಯು ಚಿತ್ರದ ಮಲೆನಾಡ ಹೆಣ್ಣ ಹಾಡಿನಲ್ಲಿ ‘ಮಾತು ನಿನ್ದು ಹುರಿದ ಹರಳು (ಅರಳು ಆಗಬೇಕಿತ್ತು) ಸಿಡಿದ್ಹಂಗೆ’, ಋತುಗಾನ ಚಿತ್ರದ ಗೀತೆ ಯಲ್ಲಿ ‘ಶಶಿಯು(ಸಸಿಯು ಆಗಬೇಕಿತ್ತು) ಮರವಾಗಿ ಮೊಗ್ಗು ಹೂವಾಗಿ…’ ಇತ್ಯಾದಿ.

ಜೊತೆಯಲ್ಲೇ ಒಂದು ಡಿಸ್‌ಕ್ಲೇಮರನ್ನೂ ಸೇರಿಸಿದ್ದೆ: ‘ಕನ್ನಡ ಚಿತ್ರಗೀತೆಗಳಲ್ಲಿ ಇಂತಹ ವಿಶಿಷ್ಟ ಸ್ವಾರಸ್ಯಗಳನ್ನು ನಾನು ಗಮನಿಸಿಸುತ್ತಿರುತ್ತೇನೆ. ಕೆಲವೊಮ್ಮೆ ಸಮಾನಾಸಕ್ತ ಸ್ನೇಹಿತರು ಸಿಕ್ಕಾಗ ಇವು ಚರ್ಚೆಗೊಳಗಾಗುವುದೂ ಇದೆ. ಹಾಗಂತ ಇದು ಸರಿ-ತಪ್ಪುಗಳ ವಿಶ್ಲೇಷಣೆ ಅಲ್ಲ. ರಂಧ್ರಾನ್ವೇಷಣೆ ಮೊದಲೇ ಅಲ್ಲ. ಸಣ್ಣ ಸೋಜಿಗಗಳ ಸುತ್ತ ಸಣ್ಣ ಸಂಭ್ರಮ ಅಷ್ಟೇ. ಇವತ್ತು ನಿಮ್ಮ ತಲೆಯೊಳಗೆ ಈ ಸ್ವಾರಸ್ಯಗಳ ಗುಂಗಿಹುಳ ಬಿಡುವವನಿದ್ದೇನೆ, ಒಪ್ಪಿಸಿಕೊಳ್ಳಿ’ ಎಂದು.

ನನ್ನ ನಿರೀಕ್ಷೆ ಸುಳ್ಳಾಗಿರಲಿಲ್ಲ. ಆ ಅಂಕಣಬರಹಕ್ಕೆ ಅಭೂತ ಪೂರ್ವ ಪ್ರಮಾಣದಲ್ಲಿ ಪ್ರತಿಕ್ರಿಯೆಗಳು ಬಂದಿದ್ದವು. ಬರೀ ಸಂಖ್ಯೆಯಷ್ಟೇ ಅಲ್ಲ, ಅನೇಕ ಓದುಗಮಿತ್ರರು ತಾವು ತಪ್ಪಾಗಿ ಕೇಳಿಸಿಕೊಂಡ/ಅರ್ಥೈಸಿಕೊಂಡ ಚಿತ್ರಗೀತೆ ಸಾಲುಗಳನ್ನು, ಚಿತ್ರಗೀತೆಗಳಲ್ಲಿ ನಿಜವಾಗಿಯೂ ಇರುವ ತಪ್ಪುಗಳನ್ನು  ವುಗುರುತಿಸಿದ ಉದಾಹರಣೆಗಳನ್ನು, ಪರಿಹಾರವಾಗದೆ ಈಗಲೂ  ಉಳಿದುಕೊಂಡಿರುವ ಜಿeಸೆಗಳನ್ನು ಹಂಚಿಕೊಂಡರು. ನಾನು ಉಲ್ಲೇಖಿಸಿದ್ದಕ್ಕಿಂತ ಹತ್ತು ಪಟ್ಟು ಹೆಚ್ಚು ಹಾಡುಗಳು ಉಲ್ಲೇಖವಾದುವು. ಸ್ವಾರಸ್ಯವೆಂದರೆ ಅವೆಲ್ಲವೂ ಸರಿಸುಮಾರು ೧೯೫೦ರಿಂದ ೧೯೯೦ವರೆಗಿನ ಸ್ವರ್ಣಯುಗದ ಸ್ವೀಟ್ ಹಾಡುಗಳು.

ಈಗಿನ ಕರ್ಣಕಠೋರ ಯುಗದ ಹಾಡುಗಳನ್ನು ಯಾರೂ ಅಷ್ಟೇನೂ ನೆಚ್ಚಿಕೊಂಡಂತಿರಲಿಲ್ಲ. ‘ಗಾಯಕ ಗಾಯಕಿಯರು ಅಪರೂಪಕ್ಕೆಲ್ಲೋ ತಪ್ಪು ಉಚ್ಚರಿಸಿರುವುದನ್ನು ನಾವು ಅಂದಿನ ಕಾಲಘಟ್ಟದಲ್ಲಿ ನಿಂತು ನೋಡಿದರೆ ಅದು ಕನಿಷ್ಠದಲ್ಲಿ ಕನಿಷ್ಠ ಎನ್ನಬಹುದು. ತಂತ್ರಜ್ಞಾನ ಅಷ್ಟೇನೂ ಬೆಳೆದಿರದಿದ್ದ ಕಾಲವದು. ಜೊತೆಗೆ ಹಿನ್ನೆಲೆಗಾಯನದಲ್ಲಿ ಹೆಚ್ಚಿನವರೆಲ್ಲ ಬೇರೆ ಭಾಷೆಯವರು. ಪೂರ್ತಿ ಹಾಡಿನಲ್ಲಿ ಒಂದೆರಡು ಕಡೆ ತಪ್ಪಾದರೆ ರೀರೆಕಾರ್ಡಿಂಗ್ ಮಾಡುವುದೂ ದುಬಾರಿ ಕೆಲಸ. ನಾವಾದರೂ ಆ ತಪ್ಪುಗಳನ್ನೆಲ್ಲ ಒಂದೋ ಗಮನಿಸಲೇ ಇಲ್ಲ, ಗಮನಿಸಿದರೂ ನಾದಮಾಧುರ್ಯವೇ ಮುಖ್ಯವಾಗುತ್ತಿತ್ತು.

ಇಂದಿನ ಕೆಟ್ಟ ಸಾಹಿತ್ಯವಾದ ಅಮ್ಮ ಲೂಸಾ ಅಪ್ಪ ಲೂಸಾ.., ಕತ್ಲಲ್ಲಿ ಕರಡಿಗೆ ಜಾಮೂನು…, ಜಿಂಕೆ ಮರೀನಾ… ಮುಂದೆ ಅಂದಿನ ಹಾಡುಗಳಲ್ಲಿ ಅಪರೂಪಕ್ಕೆ ನುಸುಳುತ್ತಿದ್ದ ಆಭಾಸಗಳು ನಗಣ್ಯ’ ಎಂದು ಬರೆದಿದ್ದರು ಓದುಗಮಿತ್ರ ಸುರೇಂದ್ರ ರಾಮಯ್ಯ. ಅವರ ಅಭಿಪ್ರಾಯ ಶತಪ್ರತಿಶತ ನಿಜ. ಅದಕ್ಕೆ ಇನ್ನೊಂದು ಆಯಾಮವೂ ಇದೆ. ಆಗಿನ ಹಾಡುಗಳಲ್ಲಿ ಕೆಲವು ಪದಗಳು ನಮಗೆ ಸರಿಯಾಗಿ ಕೇಳಿಸದಿರಲಿಕ್ಕೆ ಅವು ಹಿಂದಿನ ಕಾಲದ
ಮೀಡಿಯಂ ವೇವ್ ರೇಡಿಯೊ ಸ್ಟೇಷನ್‌ಗಳಿಂದ ಪ್ರಸಾರವಾಗುತ್ತಿದ್ದದ್ದೂ, ಅದನ್ನಷ್ಟೇ ನಾವು ಕೇಳುತ್ತಿದ್ದದ್ದೂ ಮುಖ್ಯ ಕಾರಣ. ಈಗಿನ ಹೊಸ ತಂತ್ರಜ್ಞಾನದಲ್ಲಿರುವ ಡಿಜಿಟಲ್ ಸರೌಂಡ್ ಸೌಂಡ್ ಸಾಧ್ಯತೆಗಳೆಲ್ಲ ಆಗ ಇರಲಿಲ್ಲ. ಎಫ್‌ಎಂ ಸ್ಟೀರಿಯೊ ಬ್ರಾಡ್‌ಕಾಸ್ಟಿಂಗ್ ಇರಲಿಲ್ಲ. ವಾಕ್‌ಮನ್, ಹೆಡ್
ಫೋನ್ಸ್ ಎಲ್ಲ ಲಕ್ಷುರಿ ಎಂದೇ ತಿಳಿಯಲಾಗುತ್ತಿತ್ತು.

ರೇಡಿಯೊದಲ್ಲಿ ಮೂಡಿದ ಕೆಲವು ಸ್ವರಗಳು, ಪದಗಳು, ಉಚ್ಚಾರಗಳು ಅಲ್ಪಸ್ವಲ್ಪ ಡಿಸ್ಟಾರ್ಟ್ ಆಗಿ ಕೇಳುತ್ತಿದ್ದವು. ಅಷ್ಟಾದರೂ ಆಗಿನ ಕಾಲದ ಕಲಾವಿದರು, ತಾಂತ್ರಿಕವರ್ಗದವರು ಗುಣಮಟ್ಟಕ್ಕೆ ಕೊಡುತ್ತಿದ್ದ ಪ್ರಾಧಾನ್ಯ ಕಡಿಮೆಯದೇನಲ್ಲ. ಫೇಸ್‌ಬುಕ್‌ನಲ್ಲಿ ಬಂದಿದ್ದ ಪ್ರತಿಕ್ರಿಯೆಗಳ ಮೇಲೊಮ್ಮ ಕಣ್ಣಾಡಿಸಿದೆ. ಭಲೇ ಸ್ವಾರಸ್ಯಕರ ಮನೋರಂಜನೆಯ ವಿಚಾರವಿನಿಮಯ ಅಲ್ಲಿ ನಡೆದಿತ್ತು. ಆಯ್ದ ಕೆಲವನ್ನು ಇಲ್ಲಿ ಎತ್ತಿಕೊಂಡು
ಬಂದಿದ್ದೇನೆ ನೋಡಿ. ದೂರದ ಬೆಟ್ಟ ಚಿತ್ರದ ಪ್ರೀತಿನೇ ಆ ದ್ಯಾವ್ರು ತಂದ… ಹಾಡಿನಲ್ಲಿ ‘ಹಸಿವಿನಲ್ಲೂ ಹಬ್ಬನೇ ದಿನವು ನಿತ್ಯ ಉಗಾದಿನೇ…’ ಅಂತಿರು ವುದು ‘ದಿನವು ನಿತ್ಯವು ಗಾದಿನೇ (ಹಾಸಿಗೆನೇ)’ ಅಂತನೇ ಕೇಳಿಸುತ್ತಂತೆ ಸುದರ್ಶನ ರೆಡ್ಡಿಯವರಿಗೆ.

ಅದೇ ಹಾಡಿನಲ್ಲಿ ನನಗೆ ‘ಏಸೇ ಕಷ್ಟ ಬಂದ್ರೂ ನಮ್ಗೆ ಮೀಸೇ ಬುಡ್ತೀನ್ ಸುಮ್ಗೆ…’ ಅಂತ ಕೇಳಿಸುತ್ತದೆ. ಅದು ‘ಮೀರ್ಸೇ ಬುಡ್ತೀನ್ ಸುಮ್ಗೆ’ ಇರಬಹುದು ಎಂದು ನಾನಂದುಕೊಂಡಿದ್ದೆ. ಆದರೆ ನಿಜವಾಗಿ ಅದು ‘ನೀಸೇ ಬುಡ್ತೀನ್ ಸುಮ್ಗೆ…’ ಅಂತೆ. ನೀಸುವುದು ಅಂದರೆ ಕಳೆಯುವುದು ಎಂಬರ್ಥದ ಗ್ರಾಮ್ಯ ಪದ ಮೈಸೂರು ಸುತ್ತಮುತ್ತ ಬಳಕೆಯಲ್ಲಿದೆ ಎಂದು ಮಾಹಿತಿ ಒದಗಿಸಿದರು ಇನ್ನೊಬ್ಬ ಓದುಗಮಿತ್ರ ಕೃಷ್ಣಪ್ರಸಾದ್. ಅವರು ಚಿತ್ರರಂಗದ ನಿಕಟ ಸಂಪರ್ಕ ಇರುವವರು.

ಖಾಸಗಿ ಟಿವಿವಾಹಿನಿಗಳಲ್ಲಿ ಸ್ಕ್ರಿಪ್ಟ್ ಬರೆಯುವವರು. ಇಂಥ ವಿಚಾರಗಳ ಹೆಚ್ಚು ಅರಿವುಳ್ಳವರು. ಮನಮೆಚ್ಚಿದ ಮಡದಿ ಚಿತ್ರದ ತುಟಿಯ ಮೇಲೆ ತುಂಟ ಕಿರುನಗೆ ಹಾಡಿನಲ್ಲಿ ‘ನಿನ್ನ ಮೊಗ ಕಂಡ ಕ್ಷಣ ಹಿಗ್ಗಿನೌತಣ’ ಎಂದಿರುವುದನ್ನು ‘ಹಿಗ್ಗಿನೂತನ’ ಎಂದುಕೊಂಡಿದ್ದಾರೆ ಅನೇಕರು ಅಂತ ಅವರ ಅಭಿಪ್ರಾಯ. ಗೆಜ್ಜೆಪೂಜೆ ಚಿತ್ರದ ‘ಗಗನವು ಎಲ್ಲೋ ಭೂಮಿಯು ಎಲ್ಲೋ…’ ಹಾಡು ಕೂಡ ಚರ್ಚಿತವಾಗಿತ್ತು. ‘ನೂತನ ಜಗದ ಬಾಗಿಲು ತೆರೆಯಿತು…’ ಎಂದು ಆರಂಭವಾಗುವ ಚರಣದಲ್ಲಿ ಆಮೇಲೆ ‘ಕಂಗಳು ಒಲವಿನ ಕಥೆಯ ಬರೆಯಿತು… ಕಾಲ್ಗಳು ಹರುಷದಿ ಕುಣಿಕುಣಿದಾಡಿತು’ ಎಂದು ಬರುತ್ತದೆ.

ಕಂಗಳು ಮತ್ತು ಕಾಲ್ಗಳು ಎರಡೂ ಬಹುವಚನ ನಾಮಪದಗಳಿರುವಾಗ ಬರೆಯಿತು ಕುಣಿದಾಡಿತು ಎಂದು ಏಕವಚನ ಕ್ರಿಯಾಪದ ಹೇಗೆ ಸಾಧ್ಯ? ಸುದರ್ಶನ ರೆಡ್ಡಿ ಯವರ ಪ್ರಶ್ನೆ. ಅದೇರೀತಿಯ ವಚನಭ್ರಷ್ಟತೆ ನಾ ಮೆಚ್ಚಿದ ಹುಡುಗ ಚಿತ್ರಗೀತೆಯಲ್ಲೂ ಆಗಿದೆ. ‘ನನ್ನಯ ದೇಹದ ನರನಾಡಿಗಳು ಮಿಡಿದಿದೆ ನಿನ್ನಯ ಹೆಸರು…’ ಎಂದು ಬರುತ್ತದೆ. ನರನಾಡಿಗಳು ಅಂದ್ಮೇಲೆ ‘ಮಿಡಿದಿವೆ’ ಆಗ್ಬೇಕು ಅಲ್ವಾ? ಮುಗಿಯದ ಕಥೆ ಚಿತ್ರದ ‘ಕಂಗಳು ವಂದನೆ ಹೇಳಿದೆ…’ ಸಹ ಹಾಗೆಯೇ. ಕಂಗಳು ಬಹುವಚನ, ಹೇಳಿದೆ ಏಕವಚನ!

ಆ ಹಾಡಿನಲ್ಲಿ ಇನ್ನೂ ಒಂದು ಗಮನಾರ್ಹ ಅಂಶವಿದೆಯೆಂದು ತೋರಿಸಿಕೊಟ್ಟವರು ಕೃಷ್ಣಪ್ರಸಾದ್. ‘ಕಂಗಳು ಒಂದನೇ ಹೇಳಿವೆ, ಹೃದಯವು ತುಂಬಿ ಹಾಡಿದೆ, ಆಡದೇ ಉಳಿದಿಹ ಮಾತು ನೂರಿವೆ’ ಎಂದು ಇರಬೇಕಾದ್ದು. ಅಂದರೆ ಕಂಗಳು ಒಂದು ಮಾತನ್ನಷ್ಟೇ ಹೇಳಿವೆ ಎಂದು. ಒಂದು ಎನ್ನಲು ವಂದು ಅಂತ ಹೇಳುವುದರಿಂದಾಗಿ ಒಂದನೆ ವಂದನೆ ಆಗಿರುವುದಂತೆ! ಇರಲೂಬಹುದು, ಏಕೆಂದರೆ ಶಂಕರ್‌ಗುರು ಚಿತ್ರದ ಹಾಡಿನಲ್ಲಿ ಅಣ್ಣಾವ್ರು ‘ಚೆಲುವೆಯ ನೋಟ ಚೆನ್ನ ವಲವಿನ ಮಾತು ಚೆನ್ನ…’ ಎಂದು ಹಾಡಿದ್ದಾರೆ, ಒಲವು ಎನ್ನಲು ವಲವು ಎಂದಿದ್ದಾರೆ.

ಎಡಕಲ್ಲು ಗುಡ್ಡದ ಮೇಲೆ ಚಿತ್ರದ ‘ವಿರಹ ನೋವು ನೂರು ತರಹ…’ ಹಾಡನ್ನು ಹೆಚ್ಚಿನವರೆಲ್ಲ ‘ವಿರಹ ನೂರು ನೂರು ತರಹ…’ ಎಂದೇ ಹಾಡುತ್ತಾರೆ ಎಂದು ಬರೆದಿದ್ದರು ಡಾ. ರಾಮಪ್ರಸಾದ್ ಕೊಣನೂರು. ‘ಅದು ಇರುವುದೇ ನೂರು ನೂರು ತರಹ ಅಂತ; ನೋವು ನೂರು ತರಹ ಅಂತಲ್ಲ’ ಎಂದು
ಹಲವರ ಅಂಬೋಣ. ಶರಪಂಜರ ಚಿತ್ರದ ‘ಉತ್ತರ ಧ್ರುವದಿಂದಕ್ಷಿಣ ಧ್ರುವಕು..’ ಪಿಬಿಎಸ್ ಧ್ವನಿಯಲ್ಲಿ ಉತ್ತದ ಧ್ರುವದಿಂ… ಆಗಿದೆ ಎಂದಿದ್ದರು ಭಾರತೀಶ್ ಫಾಟಕ್. ನನಗೆ ಉತ್ತದ ಎಂದೇನೂ ಕೇಳಿಸುವುದಿಲ್ಲ, ಆದರೆ ‘ಧ್ರುವದಿಂ’ ಎನ್ನಲು ಪಿಬಿಎಸ್ ‘ಧೃವದಿಂ’ ಎಂದಿದ್ದಾರೆ.

ಸಂಸ್ಕೃತ ಪಾಂಡಿತ್ಯವಿದ್ದ ಅವರಿಂದ ಆ ಉಚ್ಚಾರ ಸ್ವಲ್ಪ ಆಶ್ಚರ್ಯಕರವೇ! ವಿಜಯನಗರದ ವೀರಪುತ್ರ ಚಿತ್ರದ ಹಾಡನ್ನು ನೆನಪಿಸಿಕೊಂಡವರು ಪಿಬಿಎಸ್ ಪರಮಭಕ್ತ ಚಿದಂಬರ ಕಾಕತ್ಕರ್. ‘ಅಪಾರ ಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು’ ಹಾಡಿನಲ್ಲಿ ಬರುವ ‘ದೇವ ವಿರೂಪಾಕ್ಷ ಈವ ನಮಗೆ ರಕ್ಷ ಜೀವಿಗೆ ತಾ ನೀಡುವನು ಧರ್ಮದ ದೀಕ್ಷ’ ಎಂಬುದನ್ನು ಬಹಳಷ್ಟು ಕಾಲ ‘ಜೀವಿಗೆ ತಾ ನೀಡುವನು ಧರ್ಮ ದಧಿಕ್ಷ’ ಎಂದೇ ಕೇಳಿಸಿಕೊಳ್ಳುತ್ತಿದ್ದೆ.

ಇಂದ್ರನಿಗೆ ವಜ್ರಾಯುಧ ತಯಾರಿಸಲು ಬೆನ್ನೆಲುಬು ನೀಡಿದ ದಧಿಚಿಗೆ ದಧಿಕ್ಷನೆಂಬ ಒಬ್ಬ ತಮ್ಮನಿರಬೇಕು. ಆತ ಜೀವಿಗಳಿಗೆ ಧರ್ಮ ನೀಡುತ್ತಾನೆ ಎಂಬ
ಅರ್ಥವನ್ನೂ ಕಲ್ಪಿಸಿಕೊಳ್ಳುತ್ತಿದ್ದೆ! ದೀಕ್ಷೆ ಅಕಾರಾಂತವಾಗಿ ದೀಕ್ಷ ಆಗಿರುವುದು ನನ್ನ ತಲೆಗೆ ಹೊಳೆಯುತ್ತಿರಲಿಲ್ಲ’ ಎಂದು ತಮ್ಮ ಬಾಲ್ಯದ ಮುಗ್ಧತೆಯನ್ನು ನೆನಪಿಸಿಕೊಂಡಿದ್ದರು. ಮಯೂರ ಚಿತ್ರದ ಹಾಡನ್ನು ‘ನಾನಿರುವುದೇ ನಿಮಗಾಗಿ ನಾಡಿರುವುದೇ ನಮಗಾಗಿ… ತಣ್ಣೀರೇಕೆ ಬಿಸಿಯುಸಿರೇಕೆ…’ ಅಂತ ಕೇಳಿಸಿಕೊಂಡವರು ಎಷ್ಟು ಜನರಿಲ್ಲ! ‘ಬಭ್ರುವಾಹನ ಚಿತ್ರದ ಆರಾಽಸುವೇ ಮದನಾರಿ…ಯಲ್ಲಿ ಮದನ + ಅರಿ (ಮನ್ಮಥನ ಶತ್ರು ಈಶ್ವರ) ಇರುವುದೇ ಅಥವಾ ಮದವೇರಿದ ನಾರಿ? ಮೈಸೂರು ನರೇಂದ್ರನಾಥರ ಪ್ರಶ್ನೆ.

‘ಈ ಶ್ಲೇಷೆಗೆ ಮೂಲ, ಸಾಲಿ ರಾಮಚಂದ್ರರಾಯರ ಒಂದು ಕವನ. ಇವನೊಬ್ಬ ಸ್ವಾಮಿ ಮದನಾರಿ ಪ್ರೇಮಿ ಎಂದು ಪ್ರಾರಂಭವಾಗುವ ಆ ಕವನ ಭಾರಿ ವಿವಾದವನ್ನು ಹುಟ್ಟುಹಾಕಿತ್ತು…’ ಎಂಬ ವ್ಯಾಖ್ಯಾನ ಡಾ.ವಿ.ಎಸ್.ಕಿರಣ್ ಅವರಿಂದ. ಇನ್ನೊಬ್ಬ ಓದುಗಮಿತ್ರ ಜಾಲ್ಸೂರು ಸುಬ್ರಹ್ಮಣ್ಯ ಭಟ್ಟರಿಂದ ಇನ್ನೊಂದಿಷ್ಟು ಕುತೂಹಲಗಳು. ಮಧುರ ಸಂಗಮ ಚಿತ್ರದ ‘ಹದಿನಾರರ ಹರೆ ಬಂದಾಗ’ ಹಾಡಿನಲ್ಲಿ ಹರೆಯವನ್ನು ಸೂಚಿಸಲು ‘ಹರೆ’ ಅಂತ ಬಳಸಿದ್ದಾರೆ. ವಾಸ್ತವವಾಗಿ ಆ ಪದಕ್ಕೆ ಪ್ರಾಯ ಅನ್ನುವ ಅರ್ಥ ಇಲ್ಲವೇಇಲ್ಲ! ‘ಕುಡಿನೋಟದ ಕರೆ’ಗೆ ಪ್ರಾಸವಾಗಿಯಷ್ಟೇ ಅದು ಬಂದಿದೆ. ಸಾಕ್ಷಾತ್ಕಾರ ಚಿತ್ರದ ‘ಒಲವೇ ಜೀವನ ಸಾಕ್ಷಾತ್ಕಾರ’ದಲ್ಲಿ ಬರುವ ‘ವಸಂತ ಕೋಗಿಲೆ ಪಂಚಮನೂಂಚರ….’ ಇಲ್ಲಿ ಊಂಚರ/ನೂಂಚರ ಅಂದ್ರೆ ಏನು? ಮಾಗಿಯ ಕನಸು ಚಿತ್ರದ ಹಾಡಿನಲ್ಲಿ ಪಲ್ಲವಿಯ ಕೊನೆಯ ಸಾಲನ್ನು ಎಸ್ಪಿಬಿ ಒಮ್ಮೆ ‘ಕರುನಾಡ ಸಿರಿದೇವಿ ಐಸಿರಿಯ ತೋರೆ’ ಅಂತ ಹಾಡ್ತಾರೆ.

ಆಮೇಲೆ ಅದು ‘ಸೋರೆ’ನೋ ‘ಸೋಲೆ’ನೋ ಏನು ಅಂತ ಸ್ಪಷ್ಟ ಆಗುವುದಿಲ್ಲ. ‘ತೋರೆ’ ಅಂತೂ ಖಂಡಿತ ಅಲ್ಲ! ಹಾಗೆಯೇ ಇನ್ನೂ ಒಂದು ಗೊಂದಲ ಅದು ‘ಎಲ್ಲೆಲ್ಲೂ ನೀನೇ ಚೆಲ್ಲಿರುವೆ ಜಾಣೆ’? ಅಥವಾ ‘ಎಲ್ಲೆಲ್ಲೂ ನೀನೇ ಎಲ್ಲಿರುವೆ ಜಾಣೆ’? ಹೀಗೆ, ಚಿತ್ರಗೀತೆಗಳ ಸಾಹಿತ್ಯರಸಸ್ವಾರಸ್ಯ ಹೀರುತ್ತ ಹೋದರೆ,
ಹಂತಕನ ಸಂಚು ಚಿತ್ರಕ್ಕಾಗಿ ಅಳವಡಿಸಿಕೊಂಡ ಕುವೆಂಪು-ಕವನದಲ್ಲಿ ಹೇಳಿದಂತೆ ಜೀವನ ಸಂಜೀವನ… ತಂಪಲಾ ತಂಪು ಅಲ್ಲವಾ? ಸೊಂಪಲಾ ಸೊಂಪು ಅಲ್ಲವಾ? ಇಂಪಲಾ ಇಂಪು ಅಲ್ಲವಾ? ಕಂಪಲಾ ಕಂಪು ಅಲ್ಲವಾ? ನೀನಪ್ಪಲಾನ್ ಅಮೃತಾ = ನೀನು ಅಪ್ಪಲು ಆನು(ನಾನು) ಅಮೃತ! ಆ ಸಾಲುಗಳ ಅರ್ಥ ಅದೆಂದು ನಿಮಗೆ ಗೊತ್ತಿತ್ತೇ ?

error: Content is protected !!