Sunday, 16th June 2024

ಸ್ಯಾಂಡಿ ಆಲ್ಲೆನ್: ಏಳಡಿ ಏಳಿಂಚು ದಾಖಲೆ ಎತ್ತರದ ಮಹಿಳೆ !

ತಿಳಿರು ತೋರಣ

ಶ್ರೀವತ್ಸ ಜೋಶಿ

srivathsajoshi@yahoo.com

ಅಮಿತಾಭ ಬಚ್ಚನ್ ಲಾವಾರಿಸ್ ಚಿತ್ರಕ್ಕಾಗಿ ಅಭಿನಯಿಸಿ ಹಾಡಿದ ‘ಮೇರೆ ಅಂಗನೇ ಮೇ ತುಮ್ಹಾರಾ ಕ್ಯಾ ಕಾಮ್ ಹೈ…’ ಹಾಡಿನಲ್ಲಿ ಬೇರೆಬೇರೆ ಥರದ ಬೀವೀ (ಹೆಂಡತಿ)ಗಳ ಉಪಯುಕ್ತತೆಯನ್ನು ಬಣ್ಣಿಸುತ್ತಾನೆ. ‘ಜಿಸ್‌ಕೀ ಬೀವೀ ಲಂಬೀ ಉಸ್‌ಕಾ ಭೀ ಬಡಾ ನಾಮ್ ಹೈ… ಕೋಠೇಸೇ ಲಗಾ ದೋಸೀಢೀ ಕಾ ಕ್ಯಾ ಕಾಮ್ ಹೈ… (ಯಾರ ಹೆಂಡತಿ ಅತಿ ಎತ್ತರವಿದ್ದಾಳೋ ಆಕೆಯಿಂದಲೂ ಪ್ರಯೋಜನ ವಿದೆ, ಅಟ್ಟಕ್ಕೆ ಒರಗಿಸಿಟ್ಟರೆ ಹತ್ತಲು ಬೇರೆ ಏಣಿಯ ಅಗತ್ಯವೇ ಇಲ್ಲ!)’ ಎನ್ನುತ್ತಾನೆ.

ಅಮಿತಾಭನೇ ಬಾಲಿವುಡ್ ನಟರಲ್ಲೆಲ್ಲ ‘ಲಂಬೂ’ ಎಂದು ಪ್ರಸಿದ್ಧ. ಇನ್ನು ಆತ ಬಣ್ಣಿಸುವ ಲಂಬೀ ಬೀವೀ ಹೇಗಿರಬಹುದೆಂದು ಕಲ್ಪಿಸಿ. ನಿಮ್ಮ ಕಲ್ಪನೆಗೆ ನೆರವಾಗುವಂತೆ ಪ್ರಪಂಚದಲ್ಲೇ ಅತಿ ಎತ್ತರದ ಮಹಿಳೆ ಎಂದು ಗಿನ್ನೆಸ್ ದಾಖಲೆ ಬರೆದ ಅಮೆರಿಕನ್ ಮಹಿಳೆಯೊಬ್ಬಳ ಬಗೆ ಇಂದು ಇಲ್ಲಿ ಬರೆಯುತ್ತಿದ್ದೇನೆ. ಆಕೆಯ ಹೆಸರು ಸಾಂಡ್ರಾ ಇ ಆಲ್ಲೆನ್; ಪ್ರೀತಿಯಿಂದ ‘ಸ್ಯಾಂಡಿ’. ಅವಳು ಯಾರ ಬೀವೀಯೂ ಆಗಿರಲಿಲ್ಲ, ಏಣಿಯಾಗಿ ಬಳಕೆಯಾಗಲಿಲ್ಲ ಎನ್ನುವುದು ಬೇರೆಮಾತು.

The Sad, Strange, True Story Of Sandy Allen, The Tallest Woman In The World ಎಂಬ ಶೀರ್ಷಿಕೆಯ ವ್ಯಕ್ತಿ ಚಿತ್ರಣವೊಂದು, ಅಮೆರಿಕದ ಆಊಛಿಛಿb ಅಂತರಜಾಲ ಪತ್ರಿಕೆಯಲ್ಲಿ ಕೆಲವರ್ಷಗಳ ಹಿಂದೆ ಪ್ರಕಟವಾಗಿತ್ತು. ಅತ್ಯಂತ ಹೃದಯ ಸ್ಪರ್ಶಿಯಾದ ಆ ವ್ಯಕ್ತಿ ಚಿತ್ರಣದಿಂದ ಆಯ್ದ ಕೆಲ ಭಾಗಗಳನ್ನು ಕನ್ನಡೀಕರಿಸಿ ಇಲ್ಲಿ ನಿಮ್ಮ ಓದಿಗೆ ಒದಗಿಸುತ್ತಿದ್ದೇನೆ.

‘ಸ್ಯಾಂಡಿ ಹುಟ್ಟಿದ್ದು ಶಿಕಾಗೊದಲ್ಲಿ, 1955ರಲ್ಲಿ. ಹುಟ್ಟುವಾಗ ಮಗು ವಿಲಕ್ಷಣವಾಗೇನೂ ಇರಲಿಲ್ಲ. ಆದರೆ ಅಮ್ಮ ಸದ್ಗುಣವಂತೆಯಲ್ಲ. ಗಯ್ಯಾಳಿ. ಕುಡಿಯುವ ಚಟವೂ ಇತ್ತು. ಮಗುವನ್ನು ಇಂಡಿಯಾನಾ ರಾಜ್ಯದ ಶೆಲ್ಬಿವಿಲ್ ಎಂಬ ಹಳ್ಳಿಯಲ್ಲಿ ತನ್ನ ತವರು ಮನೆಯಲ್ಲಿ ಬಿಟ್ಟಳು. ಹಾಗಾಗಿ ಸ್ಯಾಂಡಿಯ ಅಜ್ಜಿ ಎಮ್ಮಾ ವಾರ್‌ಫೀಲ್ಡಳೇ ಸ್ಯಾಂಡಿಗೆ ಸಾಕುತಾಯಿ. ತಂದೆ ಒಬ್ಬ ಟ್ರಕ್  ವರ್ ಆಗಿದ್ದನಂತೆ. ಸ್ಯಾಂಡಿ ಬೆಳೆದ ಅಜ್ಜಿ ಮನೆಸುಸ್ಥಿತಿಯದೇನಲ್ಲ. ಅಜ್ಜಿ ಅವರಿವರಲ್ಲಿ ಕೆಲಸದವಳಾಗಿ ದುಡಿಯುತ್ತಿದ್ದವಳು.

ಸ್ಯಾಂಡಿಯು ಶಾಲೆಗೆ ಹೋಗತೊಡಗಿದಾಗ ಅಮ್ಮ ಮತ್ತೆ ಅದೇ ಮನೆಗೆ ಬಂದಳು. ಸ್ಯಾಂಡಿಗೆ ಮಲಸೋದರನಾದ ಮೈಕೇಲ್ ಎಂಬ ಹುಡುಗನನ್ನೂ ಕರೆತಂದಳು. ಆ ಮಗುವನ್ನೂ ಆ ಘಟವಾಣಿ ಹೆಂಗಸು ಬಯ್ಯುತ್ತಲೇ ಇರುತ್ತಿದ್ದಳು. ಚಿಕ್ಕ ಊರಾದ್ದರಿಂದ ಎಲ್ಲರೂ ಆ ಬಗ್ಗೆ ಮಾತಾಡುತ್ತಿದ್ದರು. ಸ್ಯಾಂಡಿಯ ಮನಸ್ಸನ್ನೂ ಅದು ಸಾಕಷ್ಟು ಕುಗ್ಗಿಸುತ್ತಿತ್ತು, ದೇಹವನ್ನಲ್ಲ. ಐದನೆಯ ತರಗತಿಯಲ್ಲಿದ್ದಾಗ ಸ್ಯಾಂಡಿಯ ಎತ್ತರ ಆರಡಿ ಮೂರಿಂಚು. ಅವಳಿಗೆ ಬಟ್ಟೆ ಹೊಲಿಸುವುದು ಅಜ್ಜಿಗೆ ಕಷ್ಟವಾಗುತ್ತಿತ್ತು. ಎಂಟಡಿ ಉದ್ದದ ಮಂಚ ಬೆಡ್‌ರೂಮ್‌ನಲ್ಲಿ ಹಿಡಿಸು ತ್ತಿರಲಿಲ್ಲ.

ಸ್ಯಾಂಡಿ ಡೈನಿಂಗ್‌ಹಾಲ್‌ನಲ್ಲಿ ಮಲಗುವಳು. ಶಾಲೆಯಲ್ಲಿ ಓರಗೆಯವರು ದಿಟ್ಟಿಸಿನೋಡುತ್ತಿದ್ದರು. ಆಟ ಪಾಠಗಳಲ್ಲಿ ಸೇರಿಸಿಕೊಳ್ಳು ತ್ತಿರಲಿಲ್ಲ. ಹೈಸ್ಕೂಲ್‌ನಲ್ಲಿರುತ್ತ ಬ್ಯಾಸ್ಕೆಟ್‌ಬಾಲ್‌ಗೆ ತಕ್ಕವಳು ಎಂದು ಕೋಚ್‌ಗಳು ಅಂದುಕೊಂಡರೂ ಆಕೆಯ ಶರೀರ ಕ್ರೀಡೆಗಳಿಗೆ ಆಗುವಂತಿರಲಿಲ್ಲ. ಎರಡೆರಡು ಶಸ್ತ್ರಚಿಕಿತ್ಸೆಗಳಾದ ಮೇಲೂ ಸ್ವಲ್ಪ ಕುಂಟುತ್ತಲೇ ನಡೆಯುತ್ತಿದ್ದಳು. ಹಾಗೂ ಹೀಗೂ ಪದವಿ ಶಿಕ್ಷಣ ಮುಗಿಸಿದ ಸ್ಯಾಂಡಿ ಒಂದು ಖಾಸಗಿ ಕಂಪನಿಯಲ್ಲಿ ಸೆಕ್ರೆಟರಿಯಾಗಿ ಕೆಲಸಕ್ಕೆ ಸೇರಿದಳು.

ಆಮೇಲೆ ಸ್ವಲ್ಪಕಾಲ ಇಂಡಿಯಾನಾ ಪೊಲಿಸ್ ನಗರದ ಸಾರಿಗೆ ಕಚೇರಿಯಲ್ಲಿ ಕೆಲಸ. ಮೂರನೆಯ ಉದ್ಯೋಗ ಪಶುವೈದ್ಯಕೀಯ
ಇಲಾಖೆಯಲ್ಲಿ ಸೆಕ್ರೆಟರಿಯಾಗಿ. ಆಗ, 1974ರಲ್ಲಿ ಕೆಲಸ ಸಹೋದ್ಯೋಗಿಗಳು ಅವಳ ಅಪರೂಪದ ಎತ್ತರವನ್ನು ಗಮನಿಸಿ ಅವಳನ್ನು ಟೇಪಲ್ಲಿ ಅಳೆದು ಆ ಸಂಖ್ಯೆಯನ್ನು ಲಂಡನ್‌ನಲ್ಲಿ ಗಿನ್ನೆಸ್ ದಾಖಲೆಗಳ ಆಫೀಸಿಗೆ ಕಳುಹಿಸಿದರು. ‘ಆಕೆಯಷ್ಟು ಎತ್ತರದವರು ನಮ್ಮ ದಾಖಲೆಗಳಲ್ಲಿಲ್ಲ, ಆದರೆ ಅಽಕೃತ ವೈದ್ಯರೊಬ್ಬರಿಂದ ಆಕೆಯ ಎತ್ತರವನ್ನು ಪ್ರಮಾಣೀಕರಿಸಿ ಕಳುಹಿಸಿ’ ಎಂದರು ಗಿನ್ನೆಸ್‌ನವರು. ಕೊನೆಗೂ 1976ರ ಆವೃತ್ತಿ ಯಲ್ಲಿ ಗಿನ್ನೆಸ್ ಪುಸ್ತಕದಲ್ಲಿ ಸ್ಯಾಂಡಿಯ ಭಾವಚಿತ್ರ ಮತ್ತು ವಿವರ ಪ್ರಕಟವಾದುವು.

ಆ ಮೇಲೆ ಇಂಡಿಯಾನಾ ಪೊಲಿಸ್‌ನ ಟಿವಿ ವಾಹಿನಿಯೊಂದು ಆಕೆಯನ್ನು ಸಂದರ್ಶಿಸಿತು. ಗಿನ್ನೆಸ್‌ನಲ್ಲಿ ಹೆಸರು ಬಂದದ್ದು ಆಕೆಗೆ ಹೆಮ್ಮೆಯಿತ್ತು. ‘ಹೈಸ್ಕೂಲಲ್ಲಿ ಹುಡುಗರು ನನ್ನನ್ನು ಮೂದಲಿಸುತ್ತಿದ್ದರು. ಆದರೆ ಈಗ ನನಗೆ ಪ್ರಚಾರಸಿಕ್ಕಿದ್ದು ಖುಷಿಯಾಗಿದೆ. ಆತ್ಮ ವಿಶ್ವಾಸ ಹೆಚ್ಚಿದೆ. ಇನ್ನಷ್ಟುಎತ್ತರಕ್ಕೆ ಬೆಳೆಯುತ್ತೇನೆ!’ ಎಂದಿದ್ದಳು ಸಂದರ್ಶನದಲ್ಲಿ.

ಗಿನ್ನೆಸ್ ದಾಖಲೆಯಿಂದಾಗಿ ಸ್ಯಾಂಡಿಗೆ ಅಷ್ಟಿಷ್ಟು ಪ್ರಸಿದ್ಧಿ ಸಿಗತೊಡಗಿತು. ಮಿನಿಯಾ ಪೊಲಿಸ್‌ನಲ್ಲಿ ಭವ್ಯವಾದ ಮೇರಿಯಟ್ ಹೊಟೇಲಿನ ಉದ್ಘಾಟನೆಗೆ ಅವಳನ್ನು ಮುಖ್ಯ ಅತಿಥಿ ಯಾಗಿ ಕರೆದರು. ಅದು ಕಾರ್‌ನಲ್ಲಿ ಡ್ರೈವಿಂಗ್ ಟ್ರಿಪ್. ಆಮೇಲೆ ಮೊತ್ತಮೊದಲ ಬಾರಿ ವಿಮಾನ ಹತ್ತಿ ಲಾಸ್‌ಏಂಜಲೀಸ್‌ಗೆ ಹೋದಳು, ಅಲ್ಲಿ ‘ದ ಡೇವಿಡ್ ಫ್ರಾಸ್ಟ್ ಶೋ’ ಟಿವಿ ಕಾರ್ಯಕ್ರಮ  ಲ್ಲಿ ಕಾಣಿಸಿಕೊಳ್ಳುವುದಕ್ಕೆ. ಅದಾದ ಮೇಲೆ ಇಟಲಿಯಿಂದ ಸಿನೆಮಾ ನಿರ್ದೇಶಕ ಫೆಡೆರಿಕೊ ಫೆಲ್ಲಿನಿಯಿಂದ ಕರೆಬಂತು, ಫೆಲ್ಲಿನಿಸ್ ಕ್ಯಾಸನೊವಾ ಎಂಬ ಸಿನೆಮಾದಲ್ಲಿ ಅತಿ ಎತ್ತರದ
ಹೆಂಗಸಿನ ಪಾತ್ರ ಅಭಿನಯಿಸಲಿಕ್ಕೆ.

ಸ್ಯಾಂಡಿ ಕೆಲಸ ಮಾಡುತ್ತಿದ್ದ ಪಶುವೈದ್ಯಕೀಯ ಇಲಾಖೆ ಮೊದಲಿಗೆ ರಜೆ ಮಂಜೂರು ಮಾಡಲಿಲ್ಲ. ಇಂಡಿಯಾನಾ ರಾಜ್ಯದ ಗವರ್ನರ್‌ನ ಮಧ್ಯಪ್ರವೇಶ ದಿಂದ ರಜೆ ದೊರೆತು ಸ್ಯಾಂಡಿ ಇಟಲಿಗೆ ಹಾರಿದಳು. ವಿಮಾನದಲ್ಲೂ, ಇಳಿದಾಕ್ಷಣ ವಿಮಾನ ನಿಲ್ದಾಣದಲ್ಲೂ, ಎಲ್ಲರೂ ದಿಟ್ಟಿಸಿ ನೋಡುವವರೇ. ‘ಇಟಲಿಯ ಗಂಡಸರು ಪರಿಚಯ ಮಾಡಿಕೊಳ್ಳಲಿಕ್ಕೆ ಹೆಂಗಸರ ಪೃಷ್ಠ ಚಿವುಟುವ ಅಭ್ಯಾಸದವರು, ಸ್ವಲ್ಪ
ಹುಷಾರಾಗಿರು’ ಎಂದು ಅವಳ ಬಾಸ್ ಮೊದಲೇ ಎಚ್ಚರಿಸಿದ್ದರಂತೆ.

ಸ್ಯಾಂಡಿ ತನ್ನ ಬ್ಯಾಗ್‌ನಿಂದ ಪೃಷ್ಠ ಕವರ್ ಮಾಡ್ಕೊಂಡು ನಡೆಯುತ್ತಿದ್ದಳು; ಇಲ್ಲದಿದ್ದರೂ ಕೆಲಗಂಡಸರ ಕೈಗೆ ಅವಳ ಪೃಷ್ಠ ಎಟಕುವುದು ಕಷ್ಟವೇ ಇತ್ತೆನ್ನಿ. ಮೂರು ವಾರಗಳ ಕಾಲ ಚಿತ್ರೀಕರಣ ಆದಮೇಲೆ ಮತ್ತೂ ಮೂರು ವಾರ ಸ್ಯಾಂಡಿಯನ್ನು ಇಟಲಿಯಲ್ಲೇ ಉಳಿಸಿ ನಿರ್ದೇಶಕ ಫೆಲ್ಲಿನಿ ಮತ್ತು ಆತನ ಹೆಂಡತಿ ಆಕೆಯನ್ನು ಇಟಲಿಯೆಲ್ಲ ಸುತ್ತಾಡಿಸಿದರು. ಅವಳಿಗೆಂದೇ ಒಂದು ಲಿಮೊಸಿನ್ ವಾಹನ
ವ್ಯವಸ್ಥೆ ಮಾಡಿದ್ದರು. ಅಲ್ಲಿಯ ದುಬಾರಿ ವೈನ್ ಸೇವನೆಯೂ ಆಯ್ತು. ರೋಮನ್ ಪೋಲನ್ಸ್‌ಕಿಯ ಬಂಗಲೆಯಲ್ಲಿ ವಾಸ್ತವ್ಯವೂ ಆಯ್ತು. ವ್ಯಾಟಿಕನ್‌ನ ಭೇಟಿಯ ವೇಳೆ ಅಲ್ಲಿ ಸೈನಿಕರು ಮತ್ತು ಪ್ರವಾಸಿಗಳಿಗೂ ಸ್ಯಾಂಡಿ ಪ್ರಮುಖ ಆಕರ್ಷಣೆಯಾದಳು.

ಇಟಲಿಯಿಂದ ಅಮೆರಿಕಕ್ಕೆ ಹಿಂದಿರುಗಿದ ಮೇಲೆ ಸ್ಯಾಂಡಿ ಮೊದಲ ಬಾರಿಗೆ ಎಂಡೊಕ್ರಿನೊಲೊಜಿ ಸ್ಪೆಷಲಿಸ್ಟ್ ವೈದ್ಯರನ್ನು ಭೇಟಿಯಾ ದಳು. ಇನ್ನೂ ಇಪ್ಪತ್ತೈದು ವಯಸ್ಸಾಗಿರದ ಆಕೆ ಎತ್ತರಕ್ಕೆ ಬೆಳೆಯುತ್ತಲೇ ಇದ್ದಳು. ಆಕೆಯದು ‘ಎಕ್ರೋಮೆಗಲಿ’  ಎಂಬ ಕಾಯಿಲೆ ಅಂತ ಗೊತ್ತಾಯಿತು. ಪಿಟ್ಯೂಟರಿ ಗ್ರಂಥಿಯಲ್ಲಿ ಗೆಡ್ಡೆ ಬೆಳೆದು ಹಾರ್ಮೋನ್ ಸ್ರಾವ ವಿಪರೀತವಾಗಿ ದೇಹದ ಬೆಳವಣಿಗೆಯಲ್ಲಿ ಏರುಪೇರಾ ಗುವುದು. ‘ಜೈ ಜಾಂಟಿಸಮ್’ ಎಂದು ಅದರ ತೀವ್ರಸ್ವರೂಪ. ಹಿಂದೊಮ್ಮೆ ಹದಿಹರೆಯದಲ್ಲಿ ಸ್ಯಾಂಡಿಯನ್ನು ಅಜ್ಜಿ ಒಬ್ಬ ವೈದ್ಯರಲ್ಲಿ ತೋರಿಸಿದ್ದಳು; ಸ್ಯಾಂಡಿಯ ಮಿದುಳಿಗೆ ಸರ್ಜರಿ ಮಾಡಬೇಕಾಗುತ್ತದೆಂದು ಅವರು ಶಿಫಾರಸು ಮಾಡಿದ್ದರು. ಕೈಯಲ್ಲಿ ದುಡ್ಡಿರಲಿಲ್ಲವಾಗಿ ಅಜ್ಜಿ ಆ ಚಿಕಿತ್ಸೆಯನ್ನು ಮುಂದೂಡಿದ್ದಳು.

ಈಗ ಎಂಡೊಕ್ರಿನಾಲಜಿಸ್ಟ್ ವೈದ್ಯರು ಸ್ಯಾಂಡಿಯ ದೃಷ್ಟಿ ನರಗಳ ಹತ್ತಿರವೇ ಗೆಡ್ಡೆ ಉಂಟಾಗಿರುವುದರಿಂದ ಅವಳು ಸದ್ಯದಲ್ಲೇ ದೃಷ್ಟಿ ಹೀನಳಾಗ ಬೇಕಾದೀತು ಎಂದು ಎಚ್ಚರಿಸಿದರು. ಜೈ ಜಾಂಟಿಸಮ್‌ನ ತೊಂದರೆಯೇ ಅದು. ದೇಹ ಹಿಗ್ಗುವುದಷ್ಟೇ ಅಲ್ಲ, ಹೃದಯ, ಮೇದೋಜೀರಕ ಗ್ರಂಥಿ, ಮತ್ತು ಕರುಳಿನ ಮೇಲೂ ದುಷ್ಪರಿಣಾಮ. ಹೆಣ್ಮಕ್ಕಳಿಗೆ ಋತು ಸ್ರಾವಕ್ಕೂ ಅಡ್ಡಿ. ಅವೆಲ್ಲ ತೊಂದರೆಗಳು ಸ್ಯಾಂಡಿಗೂ ಇದ್ದವು. ಸ್ಯಾಂಡಿ ೩೦ನೆಯ ಜನ್ಮದಿನ ಆಚರಿಸುವುದೂ ಅನುಮಾನವೇ ಎಂದು ವೈದ್ಯರು ಷರಾ ಬರೆದಿದ್ದರು. ಸ್ಯಾಂಡಿಯ ಮುಂದೆ ಎರಡು ಆಯ್ಕೆಗಳಿದ್ದವು: ಒಂದೋ ಸೆಲೆಬ್ರಿಟಿಯಾಗಿ ಪಬ್ಲಿಕ್ ಜೀವನ; ಇಲ್ಲವೇ ಖಾಸಗಿಯಾಗಿ ತನ್ನ ಪಾಡಿಗೆ ತಾನು ಕೊರಗುತ್ತ ಬದುಕು.

ಆಯುಷ್ಯ ಇದ್ದಷ್ಟು ಕಾಲ ಖುಷಿಯಿಂದಲೇ ಇರುವೆನೆಂದು ಸ್ಯಾಂಡಿ ಮೊದಲನೆಯದನ್ನೇ ಆಯ್ದು ಕೊಂಡಳು. ಸ್ಕಾಟ್ ಲ್ಯಾಂಡ್‌ನ ನಾರ್ಮನ್ ಆಡೀ ಎಂಬಾತ ಆಕೆಯನ್ನು ಆಸ್ಟ್ರೇಲಿಯಾಕ್ಕೆ ‘ಪ್ರದರ್ಶನ’ಕ್ಕಾಗಿ ಕರೆದುಕೊಂಡು ಹೋದನು. ಆಮೇಲೆ ಆತನೇ ನ್ಯೂಜೆರ್ಸಿ ಯಲ್ಲಿ ‘ಆಡೀಸ್ ಫ್ಯಾಂಟಾಸ್ಟಿಕ್ ಫ್ಯಾಕ್ಟ್ಸ್ ಏಂಡ್ ಫೀಟ್ಸ್’ನಲ್ಲಿ ಪ್ರದರ್ಶನಕ್ಕಿಟ್ಟನು. ಸ್ಯಾಂಡಿ ತನ್ನ ಮಲ ಸೋದರ ಮೈಕೆಲ್‌ನನ್ನೂ ಅಲ್ಲಿಗೆ ಕರೆಸಿದಳು. ಒಂದು ನಾಯಿ ಯನ್ನೂ ಸಾಕಿದಳು. ಅದಕ್ಕೆ ಆಡೀ ಎಂದೇ ಹೆಸರಿಟ್ಟಳು. ಎರಡು ವರ್ಷಗಳ ಬಳಿಕ ಕೆನಡಾದ ನಯಾಗರಾ ಫಾಲ್ಸ್ ಬಳಿ ಗಿನ್ನೆಸ್ ಮ್ಯೂಸಿಯಂನಲ್ಲಿ ಪ್ರದರ್ಶನದ ವಸ್ತುವಾಗಿ ಸೇರಿಕೊಂಡಳು.

ಅಲ್ಲಿ ಪ್ರೇಕ್ಷಕರನ್ನು ರಂಜಿಸಲಿಕ್ಕಾಗಿ ಹಾಸ್ಯಭರಿತ ಸಂಭಾಷಣೆಗಳನ್ನು- ‘ಈದಿನ ಬ್ರೇಕ್‌ಫಾಸ್ಟ್‌ಗೆ ನಾನು ಮೂರು ಗಿಡ್ಡಮನುಷ್ಯರನ್ನು ತಿಂದೆ!’ ರೀತಿಯವನ್ನು-ಕಂಠಪಾಠ ಒಪ್ಪಿಸುವಳು. ಜತೆ ಯಲ್ಲೇ ‘ನನ್ನ ವಿಲಕ್ಷಣ ಎತ್ತರದಿಂದಾಗಿ ಉಂಟಾದ ಸಮಸ್ಯೆಗಳನ್ನೆಲ್ಲ ಮೆಟ್ಟಿ ನಿಂತಿದ್ದೇನೆ, ಅಂದಮೇಲೆ ನೀವೂ ನಿಮ್ಮ ಸಮಸ್ಯೆಗಳನ್ನು ಜಯಿಸಬಲ್ಲಿರಿ!’ ಅಂತ ಪ್ರೇರಣಾದಾಯಕ ನುಡಿಮುತ್ತುಗಳನ್ನು ಉದುರಿ ಸುವಳು. ಗಿನ್ನೆಸ್ ಮ್ಯೂಸಿಯಂನಲ್ಲಿ ಸ್ಯಾಂಡಿ ಚೆನ್ನಾಗಿಯೇ ಸಂಪಾದನೆ ಮಾಡಿದಳು. ಪಶುವೈದ್ಯಕೀಯ ಇಲಾಖೆ ಸೆಕ್ರೆಟರಿ ಕೆಲಸಕ್ಕಿಂತ ಅದು ಉತ್ತಮವಾಗಿಯೇ ಇತ್ತು. ಆ ಅವಧಿಯಲ್ಲೇ ಸ್ಯಾಂಡಿ ಒಮ್ಮೆ ಪೋರ್ಟರಿಕೊಗೆ, ಮತ್ತೊಮ್ಮೆ ವೆನಿಝುವೆಲಾ ದೇಶಕ್ಕೆ, ಹಾಗೆಯೇ ಜಪಾನ್ ಮತ್ತು ಥೈಲ್ಯಾಂಡ್ ಗೂ ಪ್ರವಾಸ ಹೋಗಿಬಂದಳು. ಜಪಾನ್‌ನಲ್ಲಿ ಮಾಧ್ಯಮದವರು ಆಕೆಗೊಂದು ಉದ್ದದ ಬ್ರೈಡಲ್ ಗೌನ್ ತೊಡಿಸಿ ಆಕೆ ಇಚ್ಛಿಸುವ ಯಾವುದೇ ‘ಅತಿ ಎತ್ತರದ ಗಂಡಸು’ ವ್ಯಕ್ತಿಯೊಡನೆ ಫೇಕ್ ವಿವಾಹದ ಪ್ರದರ್ಶನ ಏರ್ಪಡಿಸಿದರು. ಎಲ್ಲ ತಮಾಷೆಗಾಗಿ. ಆ ಗೌನ್ ಅನ್ನೂ ಅವರೇನೂ ಅವಳಿಗೇ ಕೊಟ್ಟುಬಿಡಲಿಲ್ಲ.

ಸ್ಯಾಂಡಿಗೆ ಯಾವುದೇ ಪುರುಷನ ಮೇಲೆ ಒಲವು ಮೂಡಿದ್ದೂ ಇಲ್ಲ. ಗಿನ್ನೆಸ್ ಮ್ಯೂಸಿಯಂನಲ್ಲಿ ಎಂಟು ವರ್ಷಗಳ ದುಡಿಮೆಯ ಬಳಿಕ ಸ್ಯಾಂಡಿ ಇಂಡಿಯಾನಾಕ್ಕೆ ಮರಳಿದಳು. ಇಂಡಿಯಾನಾ ಪೊಲಿಸ್‌ನ ಮೇಯರ್ ವಿಲಿಯಂಹಡ್ನಟ್‌ನ ಕಚೇರಿಯಲ್ಲಿ ಸೆಕ್ರೆಟರಿಯಾಗಿ ಸೇರಿಕೊಂಡಳು. ಅವಳಿಗೋಸ್ಕರವೇ ವಿಶೇಷ ಡೆಸ್ಕ್ ಮತ್ತು ಕುರ್ಚಿ ನಿರ್ಮಿಸಲಾಗಿತ್ತು. ನಿಮಿಷಕ್ಕೆ ೯೦ ಪದಗಳಷ್ಟು ಟೈಪ್ ಮಾಡುವ ಕ್ಷಮತೆ ಅವಳಿಗಿತ್ತು. ಇಂಡಿಯಾನಾಪೊಲಿಸ್‌ನ ಫುಟ್ಬಾಲ್ ತಂಡದವರು ಮೇಯರ್‌ನ ಭೇಟಿಗೆ ಬಂದವರು ಮೇಯರ್‌ಗಿಂತ ಹೆಚ್ಚು ಹೊತ್ತು ಸ್ಯಾಂಡಿಯೊಂದಿಗೇ ಕಳೆದಿದ್ದರು.

ಆಕೆ ಆ ತಂಡದ ದೊಡ್ಡ(ಎತ್ತರದ!) ಫ್ಯಾನ್ ಆಗಿದ್ದಳು. ಅವಳಿಗೆ ವಿಶೇಷ ಪಾದರಕ್ಷೆಗಳನ್ನು ಕೊಳ್ಳುವುದಕ್ಕೆ ಆ ಕ್ರೀಡಾಳುಗಳು  ನೆರವಾ ಗಿದ್ದರು. ಕ್ರಮೇಣ ಆಕೆಯ ಆರೋಗ್ಯ ಮತ್ತಷ್ಟು ಹದಗೆಟ್ಟಿತು. ಸರಕಾರದ ವೈದ್ಯಕೀಯ ನೆರವಿನ ಮೊರೆ ಹೊಗಬೇಕಾಯಿತು. ಈ ನಡುವೆ ಜಾನ್ ಕ್ಲೈಮನ್ ಎಂಬಾತ ಸ್ಯಾಂಡಿಯ ಮ್ಯಾನೇಜರ್ ಆಗಿ ಅವಳನ್ನು ಓಪ್ರಾ ವಿನ್‌ಫ್ರೇ ಸೇರಿದಂತೆ ಹಲವಾರು ಟಾಕ್ ಶೋಗಳಲ್ಲಿ ಭಾಗವಹಿಸುವಂತೆ ಪ್ರಚೋದಿಸಿದನು.

ಕೆಲವು ಶೋಗಳಲ್ಲಿ ಆತಿಥೇಯರು, ಪ್ರೇಕ್ಷಕರೂ ಮುಜುಗರತರಿ ಸುವಂಥ ಪ್ರಶ್ನೆಗಳನ್ನು ಕೇಳಿದ್ದುಂಟು. ಒಬ್ಬ ಭೂಪನಂತೂ ‘ನನ್ನನ್ನು ಮದುವೆಯಾಗಿ ಎತ್ತರೆತ್ತರ ಬೆಳೆಯುವ ಮಕ್ಕಳನ್ನು ಹೆತ್ತುಕೊಡುತ್ತೀಯಾ?’ ಎಂದು ಕೇಳಿದ್ದನಂತೆ! ಬೇರೆ ಕೆಲವು ಶೋಗಳಲ್ಲಿ ನಿಜವಾ ಗಿಯೂ ಸ್ಯಾಂಡಿಯಂಥ ವಿಲಕ್ಷಣ ಶರೀರ ಅಥವಾ ಬೇರಾವುದೋ ವಿಶಿಷ್ಟ ಸಾಮರ್ಥ್ಯವುಳ್ಳ ನತದೃಷ್ಟರನ್ನು ಪರಿಚಯಿಸುವ, ಅವರ ಸುಖಕಷ್ಟಗಳನ್ನು ಜನಸಾಮಾನ್ಯರು ಅರಿಯುವಂತೆ ಮಾಡುವ ಪ್ರಾಮಾಣಿಕ ಯತ್ನಗಳಿದ್ದವು.

ಅವು ಸ್ಯಾಂಡಿಗೆ ಹೆಚ್ಚು ಇಷ್ಟವಾಗುತ್ತಿದ್ದವು. ಚರ್ಚ್‌ಗಳಿಗೆ, ಶಾಲೆಗಳಿಗೆ ಹೋಗಿ ಅವಳು ಉಪನ್ಯಾಸ ಮಾಡುತ್ತಿದ್ದಳು. ದುಡ್ಡಿಗಾಗಿ ಅಲ್ಲ, ಸಮಾಜದಲ್ಲಿ ‘ವ್ಯತ್ಯಾಸ ಸಹಿಷ್ಣುತೆ’ ಬೆಳೆಸುವುದಕ್ಕೆ. It’s Okay to Be Different ಹೆಸರಿನ ಒಂದು ಪ್ರೇರಣಾ ದಾಯಿ ಉಪನ್ಯಾಸದ ವಿಡಿಯೊ ಸಹ ಬಿಡುಗಡೆ ಮಾಡಿದ್ದಳು. ತಾನು ಕಷ್ಟಪಟ್ಟಂತೆ ಬೇರೆಯವರು ಕಷ್ಟಪಡಬಾರದು. ವಿಲಕ್ಷಣ ಶರೀರವಿದ್ದ ಮಾತ್ರಕ್ಕೆ ಸಮಾಜದ ದಿಟ್ಟಿಸುವ ಕಣ್ಣುಗಳಿಗೆ ಬಲಿಯಾಗಬೇಕಿಲ್ಲ. ಅಷ್ಟರ ಮಟ್ಟಿಗೆ ಸಮಾಜದಲ್ಲೂ ಅರಿವು ಮೂಡಬೇಕು ಎಂಬ ತುಡಿತ ಸ್ಯಾಂಡಿಗೆ ತೀವ್ರವಾಗಿತ್ತು.

ಆದ್ದರಿಂದಲೇ ಅವಳು ಕಷ್ಟಪಟ್ಟಾದರೂ ಎಲ್ಲೆಡೆ ಸಂಚರಿಸಿದಳು. ಅವಳನ್ನು ಕರೆಸುವ ಟಿವಿ ನಿರ್ಮಾಪಕರು ಆಕೆ  ಪ್ರಯಾಣಕ್ಕೆ
ವಿಶೇಷ ವ್ಯವಸ್ಥೆ-ಉದಾಹರಣೆಗೆ ವಿಮಾನದಲ್ಲಿ ಬಲ್ಕ್‌ಹೆಡ್ ಆಸನ, ವಿಮಾನ ಇಳಿದ ಮೇಲೆ ಲಿಮೊಸಿನ್ ಕಾರು ಇತ್ಯಾದಿ- ಬೇಕಾಗುತ್ತ ದೆಂದು ಮನಗಾಣುತ್ತಿರಲಿಲ್ಲ. ಪರವೂರಿನಲ್ಲಿ ಹೊಟೇಲ್‌ನಲ್ಲಿ ಉಳಿಯಬೇಕಾಗಿ ಬಂದರೆ ಅವಳಿಗೆ ಅಲ್ಲಿ ಚಿಕ್ಕ ಬಾತ್‌ಟಬ್‌ನಲ್ಲಿ ಸ್ನಾನ ಮಾಡಿಸಲಿಕ್ಕೆ, ಡ್ರೆಸ್ ತೊಡಿಸಲಿಕ್ಕೆ ಹೆಣ್ಣಾಳುವೊಬ್ಬಳ ಸಹಾಯ ಬೇಕಾಗುತ್ತಿತ್ತು. ವಿಮಾನಗಳ ಸಿಬ್ಬಂದಿ ಯಂತೂ ಆಕೆಯನ್ನು ವಿಚಿತ್ರವಾಗಿ ನೋಡುತ್ತಿದ್ದರು.

ಟ್ಯಾಬ್ಲೊಯ್ಡ್‌ಗಳು ಅವಳ ಎತ್ತರವನ್ನೇ ಲೇವಡಿ ಮಾಡುತ್ತಿದ್ದವು. ಇದೆಲ್ಲ ಈಗಿನ ಇಂಟರ್‌ನೆಟ್, ಸೋಷಿಯಲ್ ಮೀಡಿಯಾ, ರಿಯಾಲಿಟಿ ಶೋಗಳು ಇಲ್ಲದಿದ್ದ ಕಾಲ. ಈಗಲಾದರೆ ಸ್ಯಾಂಡಿಯ ಅವಸ್ಥೆ ಇನ್ನೂ ಕೆಟ್ಟದಾಗಿರುತ್ತಿತ್ತೋ ಅಥವಾ ಈ ಹೊಸ ತಂತ್ರಜ್ಞಾನವನ್ನೂ ಆಕೆತನಗೆ ಅನುಕೂಲಕರವಾಗಿ ಮಾಡಿಕೊಳ್ಳುತ್ತಿದ್ದಳೋ ಗೊತ್ತಿಲ್ಲ. ಅಂತೂ ಆ ಕಾಲದಲ್ಲಿ ಅವಳು ಎಲ್ಲರ ವಿಶೇಷ ಕುತೂಹಲಕ್ಕೆ ಕಾರಣಳಾದದ್ದು ಹೌದು. ಸ್ಯಾನ್‌ಫ್ರಾನ್ಸಿಸ್ಕೊ ಮ್ಯೂಸಿಯಂ ನಲ್ಲೊಮ್ಮೆ ಸ್ವತಃ ಮೈಕೇಲ್ ಜಾಕ್ಸನ್‌ನೇ ಸ್ಯಾಂಡಿಯ ಬಳಿ ಬಂದು ತಾನು ಅವಳ ಅಭಿಮಾನಿ ಎನ್ನುತ್ತ ಕೈಕುಲುಕಿ, ಸಹಿ ಹಾಕಿದ ತನ್ನದೊಂದು ವಿಡಿಯೊ ರೆಕಾರ್ಡ್ ಅನ್ನು ಆಕೆಗೆ ಉಡುಗೊರೆಯಾಗಿ ಕೊಟ್ಟಿದ್ದನು. ಸ್ಯಾಂಡಿ ಇಂಥ ಕೀರ್ತಿಗಳ್ಯಾವುವನ್ನೂ ತಲೆಗೇರಿಸಿಕೊಳ್ಳಲಿಲ್ಲ.

ಅವಳು ಯಾರನ್ನೇ ಹೀಗಳೆದದ್ದಾಗಲೀ, ಯಾರ ಮೇಲಾದರೂ ದರ್ಪತೋರಿದ್ದಾಗಲೀ ಇಲ್ಲವೇ ಇಲ್ಲ ಎನ್ನುತ್ತಿದ್ದರು ಹತ್ತಿರದಿಂದ ಬಲ್ಲವರು. ಅಕ್ಷರಶಃ ಎತ್ತರಕ್ಕೆ ಬೆಳೆದರೂ ‘ಮಗುವಿನಂಥ ಹೃದಯ’ ಅವಳದು. ಜೈ ಜಾಂಟಿಸಮ್ ಕಾಯಿಲೆ ಸ್ಯಾಂಡಿಯನ್ನು ಎಲ್ಲ ರೀತಿಯಲ್ಲಿ ಹೈರಾಣಾಗಿಸುತ್ತಿತ್ತು. ಶ್ವಾಸಕೋಶ ತೊಂದರೆ, ಆರ್ಥೈಟಿಸ್, ಮೂತ್ರಜನಕಾಂಗ ಸೋಂಕು, ಸೈನಸ್ ಮುಂತಾದುವು ಒಂದೆಡೆ
ಯಾದರೆ ಓಡಾಡುವಾಗ ಎಲ್ಲಿಲ್ಲದ ಎಚ್ಚರ ಬೇಕಾಗುತ್ತಿತ್ತು. ಬಾಗಿಲು, ಸೀಲಿಂಗ್ ಫ್ಯಾನ್ ಇತ್ಯಾದಿಗೆ ತಲೆತಾಗದಂತೆ ತಗ್ಗಿಬಗ್ಗಿ ನಡೆದೇ ಸೋತು ಹೋಗುತ್ತಿದ್ದಳು. ಡಿಸ್ನಿ ವರ್ಲ್ಡ್‌ನಲ್ಲೊಮ್ಮೆ ಒಂದಿಡೀ ದಿನ ನಡೆದೂ ನಡೆದೂ ಪಾದಗಳಲ್ಲಿ ಬೊಕ್ಕೆ ಎದ್ದಿತು.

ಅದರಿಂದಾಗಿ ಕಾಲಿನ ಹೆಬ್ಬೆರಳನ್ನೇ ಕತ್ತರಿಸಬೇಕಾಯಿತು. ನಡೆದಾಡುವುದಕ್ಕೆ ಮತ್ತೂ ಕಷ್ಟವಾಯಿತು. ಇದೆಲ್ಲದರಿಂದ ಸ್ಯಾಂಡಿಗೆ ಅಂತರಂಗದಲ್ಲಿ ಖಿನ್ನತೆ ಆವರಿಸಿತ್ತು. ಹೊರಗೆ ಅದನ್ನವಳು ತೋರಗೊಡುತ್ತಿರಲಿಲ್ಲ ಅಷ್ಟೇ. ಆಸ್ಪತ್ರೆಗೆ ಹೋಗುವುದೆಂದರೆ ಅವಳಿಗೆ ಇಷ್ಟವಿಲ್ಲ. ಒಮ್ಮೆಯಂತೂ ಅವಳನ್ನು ಒತ್ತಾಯ ದಿಂದ ಆಂಬುಲೆನ್ಸ್‌ನೊಳಗೆ ತುರುಕಿಸಿ ಅವಳ ಕಾಲುಗಳು ಆಂಬುಲೆನ್ಸ್‌ನ ಹಿಂಬಾಗಿ ನಿಂದ ನೇತಾಡುತ್ತಿರುವಂತೆಯೇ ಆಸ್ಪತ್ರೆಗೆ ಒಯ್ಯಲಾಗಿತ್ತು. ಹಾಗೆಯೇ ಒಂದೆರಡು ಸಲ ಮಾನಸಿಕ ತಜ್ಞರ ಬಳಿ ಒಯ್ದದ್ದೂ ಇದೆ. ಸ್ಯಾಂಡಿಯ ಪ್ರವಾಸಗಳೆಲ್ಲ ನಿಂತು ಹೋದ ಮೇಲೆ ಜಾನ್ ಕ್ಲೈಮನ್ ಆಕೆಯ ಬಗ್ಗೆ Cast a Giant Shadow ಎಂಬ ಹೆಸರಿನ ಪುಸ್ತಕ ಬರೆದನು. ಅದರ ಮೊದಲ ಭಾಗ ಸ್ಯಾಂಡಿಯದೇ ನಿರೂಪಣೆ ರೀತಿಯಲ್ಲಿದೆ.

ಉಳಿದ ಅರ್ಧ ಭಾಗ ‘ಉಳಿದವರು ಕಂಡಂತೆ ಸ್ಯಾಂಡಿ’ ಕ್ಲೈಮನ್‌ನ ನಿರೂಪಣೆಯಲ್ಲಿ. ಕೊನೆಯ ವರ್ಷಗಳಲ್ಲಿ ಸ್ಯಾಂಡಿ ತನ್ನ ಜೀವನವನ್ನು
ವೃದ್ಧಾಶ್ರಮಗಳಲ್ಲಿ ಕಳೆದಳು. ಆಕೆ ಬಾಲ್ಯದಲ್ಲಿ ಬೆಳೆದ ಶೆಲ್ಬಿವಿಲ್ ಪಟ್ಟಣದ ನರ್ಸಿಂಗ್‌ಹೋಮ್‌ನಲ್ಲಿ, ಅವಳ ಅಜ್ಜಿ ತೀರಿಹೋದಲ್ಲಿಯೇ ಸ್ಯಾಂಡಿ ಸೇರಿಕೊಂಡಳು. ಕಾಕತಾಳೀಯವಾಗಿ ಆಗ ಆಕೆಯೊಡನೆ ಪ್ರಪಂಚದ ಆಗಿನ ಅತಿ ಹಿರಿಯ ಮಹಿಳೆ, 115 ವರ್ಷಗಳ ಎಡ್ನಾ ಪಾರ್ಕರ್ ಸಹ ಇದ್ದಳು. 13 ಆಗಸ್ಟ್ 2008ರಂದು ಸ್ಯಾಂಡಿ ಅದೇ ನರ್ಸಿಂಗ್‌ಹೋಮ್‌ನಲ್ಲಿ ಕೊನೆಯುಸಿರೆಳೆದಳು. ಆಗ ಅವಳ ವಯಸ್ಸು 53. ಸ್ಯಾಂಡಿಯ ಅಂತಿಮ ಯಾತ್ರೆಯಲ್ಲಿ ಶೆಲ್ಬಿವಿಲ್ ಪಟ್ಟಣದ ಜನರೆಲ್ಲ ಭಾಗಿಯಾದರು. ಆಕೆಯ ಮೇಲಿನ ಪ್ರೀತ್ಯಭಿಮಾನ ದಿಂದ ಅವಳಿಗೊಂದು ಅನನ್ಯವಾದ ಸಮಾಽ ನಿರ್ಮಿಸಿದರು.

ಸಮಾಧಿ ಯೇನು ಅವಳ ಮೃತಶರೀರವಿಡಲು ಕ್ಯಾಸ್ಕೆಟ್ ಸಹ ವಿಶೇಷವಾಗಿ ಮಾಡಬೇಕಾಗಿ ಬಂದಿತ್ತು. ಕಣ್ಣೀರ ಹನಿಯ ಆಕಾರದ ಸಮಾಕಲ್ಲು (ಟೂಂಬ್ ಸ್ಟೋನ್), ಅದರ ಮೇಲೆ ಸಾಂಡ್ರಾ ಇ ಆಲ್ಲೆನ್ ಎಂದು ಹೆಸರು, ಕೆಳಗೆ Gentle Giant: World’s Tallest
Woman: 7′ 7″ ಎಂದು ಕೆತ್ತನೆ. ಸ್ಯಾಂಡಿಯ ಬದುಕಿನಂತೆಯೇ ಆ ಗೋರಿಯೂ: ಅನನ್ಯ, ಆಕರ್ಷಣೀಯ; ವಿಭಿನ್ನವಾಗಿಯೂ
ಸುಂದರ; ಏಕಾಂಗಿಯಾಗಿಯೂ ಎಲ್ಲರೊಳಗೊಂದಾಗುವ ರೀತಿಯದು. ಆ ಸ್ಮಶಾನದಲ್ಲಿ ಉಳಿದ ಗೋರಿಗಳೆಲ್ಲ ಇದರೆದುರಿಗೆ ಬಹಳ ಕುಬ್ಜವಾಗಿಯೇ ಕಾಣುತ್ತವೆ.

error: Content is protected !!