Saturday, 27th July 2024

ಜನನಿಯು ಜ್ಯೋತಿದೆಡೆಗೆ; ತನುಜಾತೆ ಮಾತ್ರ ತಮಸದೆಡೆಗೆ ?

ತಿಳಿರು ತೋರಣ

srivathsajoshi@yahoo.com

ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ, ಮಕ್ಕಳಿಗೆ ಬಸ್ ಪ್ರಯಾಣ ಉಚಿತ ಅಂತಿದ್ದರೆ ಮೆಚ್ಚತಕ್ಕ ಮಾತು. ಇದೇನಿಲ್ಲ ಕೊರಳಲ್ಲಿ ಕಾಸಿನಸರ ಸೊಂಟಕ್ಕೆ ವಜ್ರಗಳ ವಡ್ಯಾಣ ಕಟ್ಕೊಂಡು ಬೀಗುವ ಹೆಂಗಳೆಯರಿಗೂ ಉಚಿತ ಟಿಕೆಟ್ ಅಂತೆ. ಫಲಾನುಭವಿಗಳಾಗಿ ಅದನ್ನೇ ಸ್ವಾಭಿಮಾನ ಎಂದು ಬಿಂಬಿಸುವ ನಾಚಿಕೆಗೆಟ್ಟ ನಾರಿಯರೂ ಇದ್ದಾರೆಂದರೆ ಆಶ್ಚರ್ಯ ವಾಗುತ್ತದೆ.

‘ಅಮೆರಿಕ ಸಂಯುಕ್ತ ಸಂಸ್ಥಾನ, ಯುನೈಟೆಡ್ ಕಿಂಗ್ ಡಂ, ಜರ್ಮನಿ, ಫ್ರಾನ್ಸ್- ಈ ನಾಲ್ಕು ದೇಶಗಳ ದೈನಂದಿನ ಡಿಜಿಟಲ್ ಟ್ರಾನ್ಸಾಕ್ಷನ್‌ಗಳ ಸಂಖ್ಯೆಗಳನ್ನು ಕೂಡಿಸಿ ಮೊತ್ತವನ್ನು ನಾಲ್ಕರಿಂದ ಗುಣಿಸಿದರೆ ಅದಕ್ಕಿಂತ ಲೂ ಹೆಚ್ಚು ಇದೆ ಭಾರತದಲ್ಲಿ ದಿನವೊಂದರ ಸರಾಸರಿ ಡಿಜಿಟಲ್ ಟ್ರಾನ್ಸಾಕ್ಷನ್‌ಗಳ ಸಂಖ್ಯೆ!’ – ಸುದ್ದಿಯಲ್ಲಿನ ಈ ಅಂಕಿಅಂಶ, ಕೇಂದ್ರಸಚಿವ ಅಶ್ವಿನಿ ವೈಷ್ಣವ್ ಮಾತುಗಳಲ್ಲೇ ಕೇಳಿಸಿದ್ದು, ನನ್ನ ಗಮನವನ್ನು ವಿಶೇಷ ವಾಗಿ ಸೆಳೆಯಿತು.

೨೦೧೭ರ ಫೆಬ್ರವರಿಯಲ್ಲಿ ಲೋಕಸಭೆಯಲ್ಲಿ ಪಿ.ಚಿದಂಬರಂ ಆಡಿದ್ದ ಮಾತುಗಳನ್ನು ಬೇಡವೆಂದರೂ ನೆನಪಿಸಿತು. ‘ಹಳ್ಳೀಲಿ ಸಂತೆಗೆ ಹೋಗಿ. ಆಲೂಗೆಡ್ಡೆ ಮತ್ತು ಟೊಮೆಟೊ ಕೊಂಡುಕೊಳ್ಳಿ. ೭ ರುಪಾಯಿ ೫೦ -ಸೆ ಕ್ರೆಡಿಟ್‌ಕಾರ್ಡ್ ಮೂಲಕ ಕೊಡುತ್ತೇನೆಂದು ಹೇಳಿ. ತರಕಾರಿ ಮಾರುವ ಆ ಬಡಹೆಂಗಸು ಪಾಪ ಏನು ತಾನೆ ಮಾಡಿಯಾಳು? ಅವಳಲ್ಲಿ ಪಿಒಎಸ್ ಮೆಷಿನ್ ಇರುತ್ತದೆಯೆ? ಅದಕ್ಕೆ ವಿದ್ಯುತ್ ಸಂಪರ್ಕ ಇರುತ್ತದೆಯೆ? ವೈ-ಫೈ ಇರುತ್ತದೆಯೆ? ಅಲ್ಲಿ ಇಂಟರ್‌ನೆಟ್ ಸೌಲಭ್ಯವಿದೆಯೆ? ಎಂಥ ಮಿಥ್ಯೆಯನ್ನು ಭ್ರಮಾಲೋಕವನ್ನು ಸೃಷ್ಟಿಸುತ್ತಿದ್ದೀರಿ!?’ ಎಂದು ಚಿದಂಬರಂ ಕುಹಕವಾಡಿದ್ದರು. ಅವರ ಪಕ್ಷದವರೆಲ್ಲ ಮೇಜು ತಟ್ಟುತ್ತ ಗಹಗಹಿಸಿ ನಕ್ಕಿದ್ದರು.

ಈಗ ನಾನು ಪ್ರತಿದಿನವೂ ತಪ್ಪದೇ ವೀಕ್ಷಿಸುವ, ನನಗಿದೊಂದು ಆರೋಗ್ಯಕರ ಎಡಿಕ್ಷನ್ನೇ ಆಗಿಹೋಗಿರುವ ‘ವಾಂಟೇಜ್ ವಿದ್
ಪಲ್ಕಿ ಶರ್ಮಾ’ ವರ್ಲ್ಡ್‌ನ್ಯೂಸ್ ಸುದ್ದಿಸಂಚಿಕೆಯಲ್ಲಿ ಮೊನ್ನೆ ಪ್ರಸಾರವಾದ ‘ದ ಯುಪಿಐ ಸಕ್ಸೆಸ್ ಸ್ಟೋರಿ’ ಎಂಬ ತುಣು
ಕೊಂದರ ವಿಚಾರ ನಾನಿಲ್ಲಿ ಹೇಳುತ್ತಿರುವುದು. ನಾಲ್ಕು ನಿಮಿಷಗಳದಿರಬಹುದು, ಅದು ಹೀಗಿತ್ತು: ‘ನೀವು ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿದ್ದೀರಾದರೆ, ಅಥವಾ ಅಲ್ಲಿಯ ನಿವಾಸಿಯೇ ಆಗಿದ್ದರೆ ನಿಮಗೆ ಯುಪಿಐ ಎಂಬ ಮೂರಕ್ಷರದ ಮಾಯಾವಿಯು
ದೈನಂದಿನ ಬದುಕನ್ನು ಹೇಗೆ ಪರಿವರ್ತನೆಗೊಳಿಸಿದೆ ಎಂದು ಗೊತ್ತಿರುತ್ತದೆ.

ಬೀದಿಬದಿ ಎಳ್ನೀರ್ ಕೊಳ್ಳುತ್ತೀರಾದ್ರೂ ಸರಿ ಏರ್ ಕಂಡೀಷನ್ಡ್ ಅಂಗಡಿಯಲ್ಲಿ ಸೀರೆ-ಒಡವೆ ಕೊಳ್ಳುತ್ತೀರಾದ್ರೂ
ಸರಿ- ಬರೀ ಮೊಬೈಲ್ ಫೋನ್ ಬಳಸಿ, ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ, ಹಣ ಪಾವತಿ ಮಾಡಿ. ಅಷ್ಟೂ ಸರಳ. ಇದೀಗ
ಭಾರತವು ಯುಪಿಐಯನ್ನು ಪ್ರಪಂಚಕ್ಕೆಲ್ಲ ಪರಿಚಯಿಸಲು ಮುಂದಾಗಿದೆ. ಕೆಲವು ದೇಶಗಳು ಈಗಾಗಲೇ ಬಳಸತೊಡಗಿವೆ.
ಕೊಲ್ಲಿ ದೇಶಗಳಾದ ಸೌದಿ ಅರೇಬಿಯಾ ಮತ್ತು ಬಹರೇನ್‌ಗಳಲ್ಲೂ ಯುಪಿಐ ಈಗಿನ್ನು ಜನಜೀವನದ ಒಂದು ಭಾಗವಾಗಲಿದೆ. ಆ ದೇಶಗಳ ಮತ್ತು ಭಾರತದ ಬ್ಯಾಂಕುಗಳು ಯುಪಿಐ ಮೂಲಕ ಹಣ ಲೇವಾದೇವಿ ಮಾಡುವುದು ಸಾಧ್ಯವಾಗಿಸುವುದರ ಬಗ್ಗೆ
ಮಾತುಕತೆ ನಡೆದಿದೆ.

ಕೊಲ್ಲಿ ದೇಶಗಳಲ್ಲಿರುವ ಸುಮಾರು ಏಳು ಮಿಲಿಯಕ್ಕಿಂತಲೂ ಹೆಚ್ಚು ಭಾರತೀಯರಿಗೆ ಇದರಿಂದ ಅನುಕೂಲವಾಗುತ್ತದೆ. ಅವರು ತಾಯ್ನಾಡಿನಲ್ಲಿರುವ ಕುಟುಂಬಸ್ಥರಿಗೆ ಪ್ರತಿ ತಿಂಗಳೂ ಎನ್ನುವಂತೆ ದುಡ್ಡು ಕಳಿಸುತ್ತಾರೆ. ಪ್ರತಿವರ್ಷ ಅವರೆಲ್ಲ ಭಾರತಕ್ಕೆ ಕಳುಹಿಸುವ ಹಣದ ಮೊತ್ತ ಸುಮಾರು ೮೯ ಬಿಲಿಯನ್ ಡಾಲರ್‌ಗಳಷ್ಟು. ಅಂದರೆ ಭಾರತಕ್ಕೆ ಹಾಗೆ ವಿದೇಶ
ಗಳಿಂದ ಬರುವ ದುಡ್ಡಿನಲ್ಲಿ ೬೫%ದಷ್ಟು ಕೊಲ್ಲಿ ದೇಶಗಳಿಂದಲೇ ಬರುತ್ತದೆ. ಇಲ್ಲಿಯವರೆಗೂ ಇದು ಮಾಮೂಲಿ ಬ್ಯಾಂಕ್
ಟ್ರಾನ್ಸಾಕ್ಷನ್‌ಗಳ ಮೂಲಕ ನಡೆಯುತ್ತಿತ್ತು.

ಇನ್ನು ಸ್ಮಾರ್ಟ್ ಫೋನ್‌ನಲ್ಲಿ ಯುಪಿಐ ಬಳಸಿ ಮಾಡುವುದಕ್ಕಾಗುತ್ತದೆ. ಒಂದಿಷ್ಟು ಶುಲ್ಕ ಇರಬಹುದಾದರೂ ಬಳಕೆದಾರರಿಗೆ ಆಗುವ ಅನುಕೂಲ ಅಷ್ಟಿಷ್ಟಲ್ಲ. ಭಾರತದಲ್ಲಿ ಯುಪಿಐ ಮಾಡಿರುವ ಕ್ರಾಂತಿಯನ್ನು ನೋಡಿದರೆ ಅನಿವಾಸಿ ಭಾರತೀಯರನ್ನೂ ಇದು ಆಕರ್ಷಿಸುವುದರಲ್ಲಿ ಅನುಮಾನವಿಲ್ಲ. ದೇಶದ ಯಾವ ಮೂಲೆಗೆ ಹೋದರೂ ಚಿಕ್ಕಪುಟ್ಟ ವ್ಯಾಪಾರಿಗಳೂ ತಮ್ಮ ಅಂಗಡಿಮುಂಗಟ್ಟುಗಳಲ್ಲಿ ಕ್ಯೂಆರ್ ಕೋಡ್ ಡಿಸ್ಪ್ಲೇ ಮಾಡಿರುತ್ತಾರೆ.

ಗಿಜಿಗುಟ್ಟುವ ನಗರ ಪ್ರದೇಶಗಳಲ್ಲಾದರೂ ಅಷ್ಟೇ- ನಿಮಗೆದುರಾಗುವ ವ್ಯಕ್ತಿಯ ಬಳಿ ಐಡೆಂಟಿಟಿ ಕಾರ್ಡ್ ಇರುತ್ತದೋ ಇಲ್ಲವೋ ಆದರೆ ಒಂದು ಯುಪಿಐ ಐಡಿಯಂತೂ ಇದ್ದೇಇರುತ್ತದೆ. ಮೊಬೈಲ್ ಫೋನ್ ನಿಂದಲೇ, ಕೇವಲ ಒಂದು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವುದರ ಮೂಲಕ, ಕ್ಷಣಾರ್ಧದಲ್ಲಿ ಹಣ ಪಾವತಿ ಸಾಧ್ಯವಾಗುತ್ತದೆ. ಯುಪಿಐನ ಶಕ್ತಿಸಾಮರ್ಥ್ಯ ಬಹಳಷ್ಟಿವೆ. ಬಳಸುವುದಕ್ಕೆ ಅತಿಸರಳ, ಅನುಕೂಲಕರ. ನೋಟು-ನಾಣ್ಯ ನಗದು ಬೇಕಿಲ್ಲ, ಅವು ಕೊಳೆಯಾಗುವ ಹರಿದುಹೋಗುವ ಸಮಸ್ಯೆಯಿಲ್ಲ.

ಬ್ಯಾಂಕುಗಳೆಲ್ಲ ಯುಪಿಐಗೆ ಮಾನ್ಯತೆ ನೀಡಿವೆ; ವಿಶ್ವಾಸಾರ್ಹತೆಯಿಂದಾಗಿ ಎಲ್ಲರೂ ಬಳಸುತ್ತಾರೆ. ಈ ವರ್ಷದ ಜನವರಿ
ತಿಂಗಳೊಂದರಲ್ಲೇ ಸುಮಾರು ೮ ಬಿಲಿಯನ್ ಸಂಖ್ಯೆಯಲ್ಲಿ ಯುಪಿಐ ಟ್ರಾನ್ಸಾಕ್ಷನ್ಸ್ ನಡೆದಿವೆ. ಲೇವಾದೇವಿ ಮೊತ್ತ ೨೦೦ ಬಿಲಿಯನ್ ಡಾಲರ್‌ಗೂ ಹೆಚ್ಚು. ೨೦೨೨ರಲ್ಲಿ ಯುಪಿಐ ಲೇವಾದೇವಿ ವಾರ್ಷಿಕ ಮೊತ್ತ ಸರಿಸುಮಾರು ೧.೫ ಟ್ರಿಲಿಯನ್ ಡಾಲರ್. ಈಗ ಸುಮಾರು ೩೦೦ ಮಿಲಿಯನ್ ಸಂಖ್ಯೆಯ ಜನಸಾಮಾನ್ಯರು, ೫೦ ಮಿಲಿಯನ್‌ನಷ್ಟು ವ್ಯಾಪಾರಿಗಳು ಯುಪಿಐ ಬಳಸುತ್ತಾರೆ.

ಇನ್ನೂ ಒಂದು ಗಮನಾರ್ಹ ಅಂಕಿಅಂಶವೆಂದರೆ ೨೦೨೨ರಲ್ಲಿ ಚಿಕ್ಕಪುಟ್ಟ ಪಟ್ಟಣಗಳ ಮತ್ತು ಗ್ರಾಮೀಣ ಪ್ರದೇಶಗಳ ಅಂಗಡಿಗಳಲ್ಲಿ ಯುಪಿಐ ಬಳಕೆ ೬೫೦%ದಷ್ಟು ಏರಿಕೆ ಕಂಡಿದೆ. ತಂತ್ರಜ್ಞಾನದ ವಾಮನನು ಮೂರು ಹೆಜ್ಜೆಯಿಟ್ಟು ತ್ರಿವಿಕ್ರಮ ನಾದ ಕಥೆ ಇದು. ಈ ಹಳ್ಳಿಗಳಲ್ಲಿ ಇದುವರೆಗೆ ಜನರಿಗೆ ಬ್ಯಾಂಕ್ ಖಾತೆ ಸಹ ಇರುತ್ತಿರಲಿಲ್ಲ. ಈಗ ಅವರೆಲ್ಲ ಮೊಬೈಲ್ ಫೋನ್ ಮೂಲಕ ಪೇಮೆಂಟ್ ಮಾಡುತ್ತಾರೆ. ಪ್ರಪಂಚ ಇದನ್ನು ಕುತೂಹಲದ ಕಣ್ಣಿಂದ ನೋಡುತ್ತಿದೆ. ಅನೇಕ ದೇಶಗಳು ಈಗ ಭಾರತದ ಯುಪಿಐಯನ್ನು ಬಳಸುವುದಕ್ಕೆ ಮುಂದಡಿಯಿಟ್ಟಿವೆ.

ಭೂತಾನ್ ೨೦೨೧ರಲ್ಲೇ ಆರಂಭಿಸಿತು. ಕಳೆದ ವರ್ಷ ನೇಪಾಳ ಸೇರಿಕೊಂಡಿತು. ಆಮೇಲೆ ಯುನೈಟೆಡ್ ಅರಬ್ ಎಮಿರೇಟ್ಸ್. ಅಲ್ಲಿಗೆ ಹೋಗುವ ಭಾರತೀಯ ಪ್ರವಾಸಿಗರು ಯುಪಿಐ ಬಳಸಿ ವ್ಯಾಪಾರ ಮಾಡುವುದು ಸಾಧ್ಯವಾಯಿತು. ಈಗ ಮತ್ತಷ್ಟು ಅನಿವಾಸಿ ಭಾರತೀಯರಿಗೆ ಯುಪಿಐ ಸೌಲಭ್ಯ ವಿಸ್ತರಣೆಯಾಗಿದೆ. ಸಿಂಗಾಪುರ, ಆಸ್ಟ್ರೇಲಿಯಾ, ಕೆನಡಾ, ಹಾಂಗ್‌ಕಾಂಗ್, ಒಮಾನ್, ಕತಾರ್, ಯುಎಸ್‌ಎ, ಮತ್ತು ಯುಕೆಗಳಲ್ಲಿ ಯುಪಿಐ ಕೀರ್ತಿಪತಾಕೆ ಈಗಾಗಲೇ ಹಾರುತ್ತಿದೆ. ಈ ಪಟ್ಟಿ ಇನ್ನೂ ಬೆಳೆಯುವುದಿದೆ. ದೇಶದೊಳಗೆ ಸಾರ್ವಜನಿಕ ಬಳಕೆಗೆಂದು ಆರಂಭಿಸಿದ ಸೌಕರ್ಯವೊಂದು ಪ್ರಪಂಚಕ್ಕೆಲ್ಲ ಪಸರಿಸುತ್ತಿದೆಯೆಂದರೆ ಅದರ ಪ್ರಚ್ಛನ್ನ ಶಕ್ತಿಯ ಅಂದಾಜಾಗುತ್ತದೆ.’

ಪಲ್ಕಿ ಶರ್ಮಾಳ ‘ವಾಂಟೇಜ್…’ ದೈನಿಕ ಸುದ್ದಿಸಂಚಿಕೆಯಲ್ಲಿ ಒಂದು ಗಂಟೆ ಅವಽಯಲ್ಲಿ ಬಹುತೇಕವಾಗಿ ಜಾಗತಿಕ
ವಿದ್ಯಮಾನಗಳ ಬಗ್ಗೆಯಷ್ಟೇ ವರದಿ-ವಿಶ್ಲೇಷಣೆಗಳಿರುತ್ತವೆ. ಈ ವಿದ್ಯಮಾನಗಳು ಭಾರತಕ್ಕೆ ಹೇಗೆ ಮತ್ತು ಎಷ್ಟು ರೆಲವೆಂಟ್
ಎನ್ನುವುದಕ್ಕೆ ಹೆಚ್ಚು ಒತ್ತು. ಎಲ್ಲೂ ವೈಭವೀಕರಣ ಇಲ್ಲ. ಅನಾವಶ್ಯಕ ಕಿರುಚಾಟವಿಲ್ಲ. ಗಂಟಲು ಹರಿಯುವಂತೆ ಬೊಬ್ಬಿರಿ
ಯುವ ಪ್ಯಾನೆಲಿಸ್ಟ್‌ಗಳಿಲ್ಲ. ಒಂದಕ್ಕೊಂದು ತಾಳಮೇಳವಿಲ್ಲದ ಸ್ಕ್ರೋಲಿಂಗ್ ಲೈನುಗಳು ಕಣ್ಣಿಗೆ ರಾಚುವ ಬಣ್ಣಗಳು ಇಲ್ಲವೇ ಇಲ್ಲ.

ಟು-ದ-ಪಾಯಿಂಟ್ ರೀತಿ ಎಷ್ಟು ಬೇಕೋ ಅಷ್ಟೇ ಪ್ರಮಾಣದಲ್ಲಿ, ದಾಖಲೆ ಸಾಕ್ಷಿಗಳ ಸಮೇತ ವಸ್ತುನಿಷ್ಠ ಪ್ರಸ್ತುತಿ. ನಾನಂತೂ
ಒಂದೇಒಂದು ಸಂಚಿಕೆಯನ್ನೂ ತಪ್ಪಿಸಿಕೊಳ್ಳದೇ ವೀಕ್ಷಿಸುತ್ತಿದ್ದೇನೆ. ಪ್ರಪಂಚ ವಿದ್ಯಮಾನಗಳ ಬಗ್ಗೆ ನನ್ನ ಸಾಮಾನ್ಯ ಜ್ಞಾನ ಹೆಚ್ಚಿಸಿ ಕೊಳ್ಳುತ್ತಿದ್ದೇನೆ. ಇದರ ಮುಂದೆ ಬಿಬಿಸಿ, ಸಿಎನ್‌ಎನ್, ಎಬಿಸಿ ವರ್ಲ್ಡ್‌ನ್ಯೂಸ್‌ಗಳೆಲ್ಲ ಅದೆಷ್ಟು ಪಕ್ಷಪಾತಿ ಮತ್ತು ಪೂರ್ವಗ್ರಹ ಪೀಡಿತ, ಅವಕಾಶ ಸಿಕ್ಕಾಗೆಲ್ಲ ಭಾರತವನ್ನು ಹೇಗೆ ತುಚ್ಛವಾಗಿ ನೋಡುತ್ತವೆ ಎಂದು ನನಗೀಗ ಚೆನ್ನಾಗಿ ಅರಿವಾಗಿದೆ.

ವಾಂಟೇಜ್‌ನ ಅದೇ ಸಂಚಿಕೆಯಲ್ಲಿ ಪ್ರಸಾರವಾದ ಇನ್ನೊಂದು ಸುದ್ದಿ ತುಣುಕು ‘ಇಂಡಿಯಾ ದಿ ಓನ್ಲಿ ಬ್ರೈಟ್ ಸ್ಪಾಟ್?’ ಕೂಡ
ಮಹತ್ತ್ವದ್ದೇ. ಪ್ರಸಕ್ತ ಭಾರತದ ಆರ್ಥಿಕ ಸ್ವಾಸ್ಥ್ಯ ಹೇಗಿದೆಯೆಂಬ ವಿಶ್ಲೇಷಣೆ. ಆರ್ಥಿಕತೆಯ ಎರಡು ಪ್ರಮುಖ ಸೂಚ್ಯಂಕಗಳ
ಪ್ರಕಾರ, ಮಿಕ್ಕೆಲ್ಲ ದೇಶಗಳಿಗೆ ಹೋಲಿಸಿದರೆ ಭಾರತ ಅತ್ಯಂತ ಆರೋಗ್ಯವಂತ ಸ್ಥಿತಿಯಲ್ಲಿದೆ. ಮೊದಲನೆಯದಾಗಿ ಭಾರತದಲ್ಲಿ ಗ್ರಾಹಕ ಬೆಲೆ ಸೂಚ್ಯಂಕವು ಮೇ ೨೦೨೩ರಲ್ಲಿ ೪.೨೫%ಗೆ ಇಳಿದಿದೆ.

ಕಳೆದ ೨೫ ತಿಂಗಳುಗಳಲ್ಲೇ ಅತಿ ಕನಿಷ್ಠ ಪ್ರಮಾಣವಿದು. ಕಳೆದವರ್ಷ ಮೇ ತಿಂಗಳಲ್ಲಿ ೭.೦೪% ಇತ್ತು. ಒಟ್ಟಾರೆಯಾಗಿ
ಹಣದುಬ್ಬರ ೬% ನ ಒಳಗಿದ್ದರೆ ಒಳ್ಳೆಯದು. ಬೇರೆ ಕೆಲವು ದೇಶಗಳಲ್ಲಿ ಅದು ಎಷ್ಟಿದೆ ಗೊತ್ತೇ? ಅರ್ಜೆಂಟಿನಾದಲ್ಲಿ ೯೮%,
ತುರ್ಕಿಯೆದಲ್ಲಿ ೫೦%, ಇರಾನ್‌ನಲ್ಲಿ ೪೨%, ಈಜಿಪ್ಟ್‌ನಲ್ಲಿ ೨೧%. ಈ ದೇಶಗಳು ಬೆಲೆಯೇರಿಕೆಯಿಂದ ತತ್ತರಿಸಿವೆ. ಅಭಿವೃದ್ಧಿ
ಹೊಂದಿದ ದೇಶಗಳಲ್ಲಿ ಜೀವನನಿರ್ವಹಣೆ ಮೊದಲೇ ತುಟ್ಟಿಯಾಗಿದ್ದು ಬೆಲೆಯೇರಿಕೆ ಭೂತವೂ ಸೇರಿಕೊಂಡಿದೆ.

ಅಮೆರಿಕ (೪.೫%), ಕೆನಡಾ(೩.೯%), ಫ್ರಾನ್ಸ್(೫%), ಇಟಲಿ(೪.೫%)ಗಳಲ್ಲಿ ಸ್ವಲ್ಪಮಟ್ಟಿಗೆ ಹದ್ದುಬಸ್ತಿನಲ್ಲಿದೆಯಾದರೂ ಜರ್ಮನಿ(೬.೨%) ಮತ್ತು ಯುಕೆ(೬.೮%) ಈಗಲೂ ಸಂಕಷ್ಟದಲ್ಲಿಯೇ ಇವೆ. ಎರಡನೆಯ ಸೂಚ್ಯಂಕವಾದ ಔದ್ಯೋಗಿಕ ಉತ್ಪತ್ತಿಯು ಐಐಪಿ ಅಥವಾ ಇಂಡೆಕ್ಸ್ ಆಫ್ ಇಂಡಸ್ಟ್ರಿಯಲ್ ಪ್ರೊಡಕ್ಷನ್‌ನಿಂದ ಅಳೆಯಲ್ಪಡುತ್ತದೆ. ಭಾರತದಲ್ಲಿ ಈ ವರ್ಷ ಮಾರ್ಚ್‌ನಲ್ಲಿ ಅದು ೧.೧% ಇತ್ತು. ಏಪ್ರಿಲ್‌ನಲ್ಲಿ ಸ್ವಲ್ಪ ಮೇಲಕ್ಕೆ ಜಿಗಿದು ಸದ್ಯಕ್ಕೆ ೪.೨%ನ ಉತ್ತಮ ಮಟ್ಟದಲ್ಲಿದೆ. ಅಕ್ಟೋಬರ್ ೨೦೨೨ರಲ್ಲಿ ಮೈನಸ್ ೪ಕ್ಕೆ ಕುಸಿದಿದ್ದದ್ದು ಈಗ ಈ ಮಟ್ಟಕ್ಕೆ ಏರಿರುವುದು ಮಹತ್ಸಾಧನೆಯೇ.

ಬೇರೆ ದೇಶಗಳಲ್ಲಿ ಹೇಗಿದೆ ಪರಿಸ್ಥಿತಿ? ಚೈನಾದಲ್ಲಿ ಐಐಪಿ ೫.೫%ನಷ್ಟು ಇದೆಯಾದರೂ ಅಲ್ಲಿ ೧೦% ತಲುಪುವ ನಿರೀಕ್ಷೆಯಿತ್ತು. ಅಂದರೆ ಅಲ್ಲಿ ಪ್ರಗತಿ ಕುಂಠಿತವಾಗಿದೆ. ಅದು ಭಾರತಕ್ಕೆ ಅನುಕೂಲವಾಗುವ ಸಾಧ್ಯತೆಯಿದೆ- ರಿಸರ್ವ್ ಬ್ಯಾಂಕ್ ಬಡ್ಡಿದರಗಳನ್ನು ಕಡಿಮೆಗೊಳಿಸಿದರೆ, ಅಥವಾ ಕನಿಷ್ಠಪಕ್ಷ ಇನ್ನಷ್ಟು ಏರಿಸದಿದ್ದರೆ. ಪ್ರಗತಿ ಹೆಚ್ಚಬೇಕಿದ್ದರೆ ಬಡ್ಡಿದರ ಗಳು ಕಡಿಮೆ ಇರಬೇಕು, ಸಾಲ ಪ್ರಕ್ರಿಯೆ ಸುಲಭವಾಗಬೇಕು. ಆರ್‌ಬಿಐ ಇದಕ್ಕೆ ಸಿದ್ಧವಿದೆಯೇ? ಬಹುಶಃ ಹಣದುಬ್ಬರ ೪%ಗಿಂತಲೂ ಕಡಿಮೆಯಾಗಲಿ ಎಂದು ಕಾಯುತ್ತಿದೆ.

ಅಮೆರಿಕದ ಫೆಡರಲ್ ಬ್ಯಾಂಕ್ ಕಳೆದೆರಡು ವರ್ಷಗಳಲ್ಲಿ ಹತ್ತು ಸಲ ಬಡ್ಡಿದರ ಏರಿಸಿದೆ. ಮೊದಲಿಗೆ ಅಲ್ಲಿನ ಏರಿಕೆ ನಿಲ್ಲಲಿ ಎಂದು ಬೇರೆ ದೇಶಗಳು ಕಾಯುತ್ತಿವೆ. ಭಾರತವಂತೂ ರೆಡಿ-ಗೆಟ್-ಸೆಟ್-ಗೋ ಎನ್ನುವಷ್ಟು ಸಿದ್ಧವಾಗಿ ನಿಂತಿದೆ. ಬೇರೆ ದೇಶಗಳು ಈ ರೇಸ್‌ನಲ್ಲಿ ಭಾಗವಹಿಸಲಾರದಷ್ಟು ಹಿಂದೆ ಬಿದ್ದಿವೆ ಏಕೆಂದರೆ ಅವು ರಿಸೆಷನ್ ಭೀತಿಯಲ್ಲಿವೆ. ಜರ್ಮನಿಗೆ ಈಗಾಗಲೇ ರಿಸೆಷನ್ ಬಿಸಿ ತಟ್ಟಿದೆ. ಯುಕೆಯಲ್ಲಿ ರಿಸೆಷನ್ ಸಂಭವನೀಯತೆ ೭೫% ಇದೆ. ನ್ಯೂಝೀಲ್ಯಾಂಡ್‌ನಲ್ಲಿ ಇದು ೭೦%, ಅಮೆರಿಕದಲ್ಲಿ ೬೫%, ಆಸ್ಟ್ರೇಲಿಯಾದಲ್ಲಿ ೫೦%, ಕೆನಡಾದಲ್ಲಿ ೬೦%, ಚೈನಾದಲ್ಲಿ ೧೨%, ಮತ್ತು ಬ್ರೆಝಿಲ್‌ನಲ್ಲಿ
೧೫% ಇದೆ. ತೈಲ ತಿಜೋರಿ ಎನಿಸಿದ ಸೌದಿ ಅರೇಬಿಯಾದಲ್ಲೂ ೫%ನಷ್ಟು ಇದೆ. ಆದರೆ ಭಾರತದಲ್ಲಿ? ಸದ್ಯದ ಪರಿಸ್ಥಿತಿ ಯಲ್ಲಿ ಭಾರತ ದಲ್ಲಿ ರಿಸೆಷನ್ ಸಾಧ್ಯತೆ ಸೊನ್ನೆ!

ತಾತ್ಪರ್ಯ ಇಷ್ಟೇ: ತಥಾಕಥಿತ ಅಭಿವೃದ್ಧಿ ಹೊಂದಿದ ದೇಶಗಳೆಲ್ಲ ಪತರಗುಟ್ಟುತ್ತಿರುವಾಗ ಭಾರತ ಮಾತ್ರ ಭದ್ರವಾಗಿ ತಲೆಯೆತ್ತಿ ನಿಂತಿದೆ. ಇದು ಹೇಗೆ ಸಾಧ್ಯವಾಯಿತು? ಒಬ್ಬ ವ್ಯಕ್ತಿಯಿಂದಾಗಲೀ, ಒಂದು ಕಾರಣದಿಂದಾಗಲೀ ಆಗಿದ್ದೆನ್ನಲಾಗದು. ಭಾರತ ಸರಕಾರವು ವಿವಿಧ ಪರಿಸ್ಥಿತಿಗಳಲ್ಲಿ ಕೈಗೊಂಡ ವಿವಿಧ ನಿರ್ಣಯಗಳು ಧೋರಣೆಗಳು ಈ ಸುಸ್ಥಿತಿಗೆ ಹೇತುವಾಗಿವೆ. ಒಂದನೆಯದಾಗಿ ರಷ್ಯಾದಿಂದ ಅಗ್ಗದ ಬೆಲೆಯಲ್ಲಿ ಕಚ್ಚಾ ತೈಲ ಆಮದು.

ಪ್ರಚಲಿತ ಯುದ್ಧದಲ್ಲಿ ಯಾವೊಂದು ಪಕ್ಷದ ಪರವಾಗಿ ನಿಲ್ಲದೆ ತಟಸ್ಥ ವಾಗಿದ್ದುದರಿಂದ ರಷ್ಯಾದಿಂದ ಭಾರತಕ್ಕೆ ತೈಲ ಆಮದು ಅವ್ಯಾಹತವಾಗಿ ಮುಂದುವರಿಯಿತು (ಪಾಶ್ಚಾತ್ಯ ದೇಶಗಳು ಕೆಂಗಣ್ಣು ತೋರಿದರೂ). ಹಣದುಬ್ಬರ ಕೈಮೀರಿ ಹೋಗಲಿಲ್ಲ. ಎರಡನೆಯದಾಗಿ ಪ್ಯಾಂಡೆಮಿಕ್‌ನಿಂದಾದ ತಲ್ಲಣವನ್ನು ಎದುರಿಸಿದ ರೀತಿ. ಬೇರೆ ಕೆಲವು ದೇಶಗಳು ಆಗ ತಮ್ಮ ಪ್ರಜೆಗಳಿಗೆ ನಗದು ಸಹಾಯದ ಸ್ಟಿಮ್ಯುಲಸ್ ಪ್ಯಾಕೇಜ್‌ಗಳನ್ನು ನೀಡಿದುವು.

ಅಮೆರಿಕ ಇದಕ್ಕೆಂದೇ ಸುಮಾರು ೨೫೦ ಬಿಲಿಯನ್ ಡಾಲರ್ ಗಳಷ್ಟು ಖರ್ಚು ಮಾಡಿತು. ತತ್ಕಾಲಕ್ಕೊಮ್ಮೆ ಹಾಗೆ ನಗದು ಸಿಕ್ಕಿದ್ದು ಪ್ರಜೆಗಳಿಗೆ ಅನುಕೂಲವಾಗಿರಬಹುದಾದರೂ ದೇಶದ ಆರ್ಥಿಕತೆ ದೃಷ್ಟಿಯಿಂದ ಅದು ಒಳ್ಳೆ ಕ್ರಮವಲ್ಲ. ಕ್ಯಾಷ್ ಹರಿವು ಜಾಸ್ತಿಯಾದಾಗಲೂ ಹಣದುಬ್ಬರ ಹೆಚ್ಚಬಹುದು. ಭಾರತ ಬೇರೆ ಮಾರ್ಗವನ್ನು ಆಯ್ದುಕೊಂಡಿತು. ಆಹಾರಪೊಟ್ಟಣಗಳನ್ನು
ವಿತರಿಸಿತು. ಸಾಲ ನಿಯಮಗಳನ್ನು ಒಂದೊಮ್ಮೆ ಸಡಿಲಿಸಿತು.

ಪ್ಯಾಂಡೆಮಿಕ್ ಬಾಧಿತ ಕ್ಷೇತ್ರಗಳಲ್ಲಿ ಹೂಡಿಕೆ ಹೆಚ್ಚಿಸಿತು. ಆ ರೀತಿಯ ಕ್ಯಾಷ್‌ಲೆಸ್ ವಿಧಾನಗಳು ಫಲ ಕೊಟ್ಟವು. ಅಭಿವೃದ್ಧಿ
ಹೊಂದಿದ ದೇಶಗಳು ಬಡ್ಡಿದರಗಳನ್ನು ಹೆಚ್ಚಿಸಿ ಹಣದುಬ್ಬರ ಹತೋಟಿಯಲ್ಲಿಟ್ಟವು. ಬಡ್ಡಿದರ ಏರಿಕೆ ಸ್ಥಗಿತಗೊಂಡರೆ ಹಣ
ದುಬ್ಬರ ಹೆಚ್ಚುವ ಅಪಾಯವಿದೆ. ಭಾರತದಲ್ಲಿ ರಿಸರ್ವ್ ಬ್ಯಾಂಕ್ ಏಪ್ರಿಲ್‌ನಿಂದ ಬಡ್ಡಿದರ ಏರಿಸಿಲ್ಲವಾದರೂ ಹಣದುಬ್ಬರ
ತಿಂಗಳಿಂದ ತಿಂಗಳಿಗೆ ಕಡಿಮೆಯಾಗುತ್ತ ಸಾಗಿದೆ.

ಹಾಗಂತ ಪ್ರಪಂಚದ ಆರ್ಥಿಕತೆಯ ಪರಿಣಾಮ ಭಾರತದ ಮೇಲೆ ಅಷ್ಟಿಷ್ಟಾದರೂ ಇದ್ದೇಇರುತ್ತದೆಂಬ ಎಚ್ಚರ ಸದಾ ಇರಬೇಕು. ಅದೃಷ್ಟವಶಾತ್ ಮಾನ್ಸೂನ್ ಮತ್ತು ಎಲ್-ನಿನೊದಂಥ ಭೌಗೋಳಿಕ ವಿದ್ಯಮಾನಗಳೂ ಈವರ್ಷ ಭಾರತಕ್ಕೆ ಅಂಥದೇನೂ ಬಾಧೆ ತಂದಿಟ್ಟಿಲ್ಲ. ಈ ಅಂಕಿಅಂಶಗಳೆಲ್ಲ ಬರೀ ಕಾಗದದ ಮೇಲೆ ಕಂಪ್ಯೂಟರ್ ಗಳಲ್ಲಿ ಮಾತ್ರ ಎಂದು ನಿರಾಶಾವಾದಿಗಳು ಅಳುಮುಂಜಿಗಳು ಹೇಳಿಕೊಳ್ಳಲಿ. ಗ್ರೌಂಡ್ ರಿಯಾಲಿಟಿಯಲ್ಲಿ ಗೊತ್ತಾಗುತ್ತದಲ್ಲ ದೇಶದ ಪ್ರಗತಿ ಮತ್ತು ಸುಸ್ಥಿರತೆ? ಸಂಪರ್ಕ, ಸಾರಿಗೆ (ನೆಲ ಜಲ ವಾಯು ಮತ್ತು ರೈಲ್ವೇ), ಪ್ರವಾಸೋದ್ಯಮ ಮುಂತಾದ ಕ್ಷೇತ್ರಗಳಲ್ಲಿ ಈಗ್ಗೆ ಒಂದು ದಶಕದಲ್ಲಾಗಿರುವ ಕ್ರಾಂತಿ ಎಂಥವರೂ ನಿಬ್ಬೆರಗಾಗುವಂಥದ್ದು.

ಅಂತೆಯೇ ನೆರೆರಾಷ್ಟ್ರಗಳಿಂದ ಆರಂಭಿಸಿ (ಪಾಕಿಸ್ತಾನವೊಂದನ್ನು ಬಿಟ್ಟು) ದೂರದೂರದ ದೇಶಗಳೊಟ್ಟಿಗೆ ಭಾರತದ ಬಾಂಧವ್ಯ. ಅದನ್ನು ನಾವು ಅನಿವಾಸಿ ಭಾರತೀಯರು ಚೆನ್ನಾಗಿ ಬಲ್ಲೆವು. ಪ್ರಧಾನಿ ಮೋದಿ ವಿದೇಶಗಳಿಗೆ ಭೇಟಿ ನೀಡಿದಾಗೆಲ್ಲ ಅವರಿಗೆ ಸಿಗುವ ಗೌರವಾದರಗಳು ನಿಜವಾಗಿ ಭಾರತೀಯರೆಲ್ಲರಿಗೆ ಹೆಮ್ಮೆ. ಇತ್ತೀಚೆಗೆ ಪಪುವಾ ನ್ಯೂಗಿನಿಯ ಪ್ರಧಾನಿ ಜೇಮ್ಸ್ ಮರಪೆ ಅವರು ವಿಮಾನ ನಿಲ್ದಾಣಕ್ಕೇ ಬಂದು ಮೋದಿಯವರ ಕಾಲು ಮುಟ್ಟಿ ನಮಸ್ಕರಿಸಿದರೆಂದರೆ ಮೋದಿ
ದೈವೀಪುರುಷ ಅಂತಲ್ಲ, ಮೋದಿಯವರಿಂದಾಗಿ ಭಾರತಕ್ಕೆ ಸಿಕ್ಕಿರುವ ಸ್ಥಾನಮಾನದ ಸಂಕೇತವದು.

ಬರೀ ಮೋದಿ ಅಷ್ಟೇ ಅಲ್ಲ ಅವರ ಸಮರ್ಥ ತಂಡದಲ್ಲಿರುವ ಜೈಶಂಕರ್, ಅಜಿತ್ ದೋವಲ್, ಅಶ್ವಿನಿ ವೈಷ್ಣವ್, ನಿತಿನ್ ಗಡ್ಕರಿ, ನಿರ್ಮಲಾ ಸೀತಾ ರಾಮನ್… ತೆರೆಮರೆಯಲ್ಲಿ ಅತಿ ದಕ್ಷತೆಯಿಂದ ಕೆಲಸ ಮಾಡುವ ಇನ್ನೂ ಅನೇಕರು, ತೀರ ಇತ್ತೀಚಿನ ಬಾಲಸ್ಸೋರ್ ರೈಲು ದುರ್ಘ ಟನೆಯೂ ಸೇರಿದಂತೆ ಪ್ರತಿಯೊಂದು ಅಗ್ನಿಪರೀಕ್ಷೆಯಲ್ಲೂ ಪುಟವಿಟ್ಟ ಚಿನ್ನವಾಗಿ ಹೊರ ಬಂದವರು… ಇಂದು ನಾವು ಭಾರತೀಯರು ವಿದೇಶಿ ನೆಲದಲ್ಲೂ ತಲೆಯೆತ್ತಿ ನಡೆದಾಡುವ ಅಭಿಮಾನ ತುಂಬಿತುಳುಕುವ ಸ್ಥಿತಿಯನ್ನು ತಲುಪಿದ್ದೇವೆಂದರೆ ಇವರೇ ಮುಖ್ಯ ಕಾರಣ.

ಇದಿಷ್ಟು ‘ಭಾರತ ಜನನಿ’ಯ ವಿಚಾರ. ಆದರೆ ‘ತನುಜಾತೆ ಕರ್ನಾಟಕ’ಕ್ಕೆ ಇದೇನು ಗರಬಡಿದಿದೆ? ಯಾಕೆ ಹೀಗೆ ಕಗ್ಗತ್ತಲಿನತ್ತ
ಸಾಗುವ ವಿದ್ಯಮಾನಗಳು ನಡೆಯುತ್ತಿವೆ? ಬಿಟ್ಟಿಭಾಗ್ಯದ ಗ್ಯಾರಂಟಿಗಳನ್ನು ಪ್ರಲೋಭನೆಯಾಗಿಸಿ ಗೆದ್ದುಬಂದವರು ಈಗ ಷರತ್ತಿನ ಮೇಲೆ ಷರತ್ತು ಕಲ್ಪಿಸಿ, ಕೇಂದ್ರಸರ್ಕಾರ ಸಹಕರಿಸಲಿಲ್ಲವೆಂದೋ, ಇನ್ನೇನೋ ನೆಪ ಹೂಡಿಯೋ ಜನಸಾಮಾನ್ಯರಿಗೆ ತೆಂಗಿನ ಗೆರಟೆಯೇ ಗ್ಯಾರಂಟಿ ಎನ್ನುವ ಹಂತಕ್ಕೆ ಬಂದಿದ್ದಾರೆ. ಆರ್ಥಿಕ ವಾಗಿ ಹಿಂದುಳಿದ ಮಹಿಳೆಯರಿಗೆ, ಮಕ್ಕಳಿಗೆ ಬಸ್ ಪ್ರಯಾಣ ಉಚಿತ ಅಂತಿದ್ದರೆ ಮೆಚ್ಚತಕ್ಕ ಮಾತು.

ಇದೇನಿಲ್ಲ ಕೊರಳಲ್ಲಿ ಕಾಸಿನಸರ ಸೊಂಟಕ್ಕೆ ವಜ್ರಗಳ ವಡ್ಯಾಣ ಕಟ್ಕೊಂಡು ಬೀಗುವ ಹೆಂಗಳೆಯರಿಗೂ ಉಚಿತ ಟಿಕೆಟ್ ಅಂತೆ. ಫಲಾನುಭವಿಗಳಾಗಿ ಅದನ್ನೇ ಸ್ವಾಭಿಮಾನ ಎಂದು ಬಿಂಬಿಸುವ ನಾಚಿಕೆಗೆಟ್ಟ ನಾರಿಯರೂ ಇದ್ದಾರೆಂದರೆ ಆಶ್ಚರ್ಯವಾಗುತ್ತದೆ. ದೇಶದ ಅತ್ಯುತ್ತಮ ರಸ್ತೆಸಾರಿಗೆ ಸಂಸ್ಥೆಗಳ ಪೈಕಿ ಮುಂಚೂಣಿಯಲ್ಲಿದ್ದ ಕೆಎಸ್ಸಾರ್ಟಿಸಿ ಈಗಿನ್ನು ಕಷ್ಟನಷ್ಟ ಅನುಭವಿಸುವುದೊಂದೇ ಗ್ಯಾರಂಟಿ.

ಗ್ಯಾರಂಟಿಗಳು ಹಾಳಾಗಿಹೋಗಲಿ (ಅವುಗಳನ್ನು ಪಾಲಿಸಿದರೆ ರಾಜ್ಯವೇ ಹಾಳಾಗಿಹೋಗುತ್ತದೆ), ಸಮರ್ಥ ಆಡಳಿತವನ್ನಾ
ದರೂ ನಿರೀಕ್ಷಿಸಬಹುದೇ? ‘ಬೇಲ್’ಪುರಿ ಗಿರಾಕಿ, ಯಾವ ಕ್ಷಣದಲ್ಲೂ ಬಂಧನಕ್ಕೊಳಗಾಗಬಹುದಾದ ವ್ಯಕ್ತಿ ರಾಜ್ಯದ ಉಪ
ಮುಖ್ಯಮಂತ್ರಿ ಅಂತೆ! ಸರಿಯಾಗಿ ಕನ್ನಡ ಓದಲಿಕ್ಕೆ (ಬರೆಯಲಿಕ್ಕಂತೂ ದೂರದ ಮಾತು) ಕೂಡ ಬಾರದ ವ್ಯಕ್ತಿ ಶಿಕ್ಷಣಸಚಿವ
ಅಂತೆ! ತಂದೆಯ ಪ್ರಭಾವಲಯದಲ್ಲಿ ಅಹಂಕಾರ ದರ್ಪಗಳನ್ನೇ ಬಂಡವಾಳವಾಗಿಟ್ಟುಕೊಂಡ, ಪಿಯುಸಿಯಷ್ಟೇ ಓದಿರುವಾತ
ಐಟಿ-ಬಿಟಿ ಸಚಿವ ಅಂತೆ! ಇವರೆಲ್ಲರ ದ್ವೇಷರಾಜಕಾರಣವೋ ಅತ್ಯಂತ ಅಪಾಯಕಾರಿ, ಚಿಂತಾಜನಕ, ಕೀಳು ಮಟ್ಟದ್ದು.
ಗೋಹತ್ಯೆ ನಿಷೇಧ, ಮತಾಂತರ ನಿಷೇಧಗಳನ್ನೆಲ್ಲ ಕಿತ್ತುಹಾಕುತ್ತಾರಂತೆ.

ತಮಗಾಗದ ವ್ಯಕ್ತಿಗಳ ವಿಚಾರಗಳು ಅಲ್ಲ ಅವರ ಹೆಸರು ಇದ್ದರೂ ಅಂತಹ ಪಾಠಗಳನ್ನು ಪಠ್ಯಪುಸ್ತಕದಿಂದ ತೆಗೆದುಬಿಡು
ತ್ತಾರಂತೆ. ಚಕ್ರವರ್ತಿ ಸೂಲಿಬೆಲೆ ಬರೆದದ್ದೆಂಬ ಒಂದೇ ಕಾರಣಕ್ಕಾಗಿ ಸ್ವಾತಂತ್ರ್ಯಯೋಧರನ್ನು ಕುರಿತ ಪಾಠಕ್ಕೆ ಖೊಕ್. ಡಾ.
ಹೆಡಗೇವಾರ್ ಬರೆದದ್ದೆಂಬ ಒಂದೇ ಕಾರಣಕ್ಕಾಗಿ ‘ನಿಜವಾದ ಆದರ್ಶ ಪುರುಷ ಯಾರಾಗಬೇಕು?’ ಪಾಠವನ್ನೂ ಕಿತ್ತು
ಹಾಕೋಣ.

ಅಂದರೆ, ತಾವಂತೂ ಆದರ್ಶ ಪುರುಷರಾಗುವುದಿಲ್ಲ, ಶಾಲಾಮಕ್ಕಳಲ್ಲೂ ಅಪ್ಪಿತಪ್ಪಿಯೂ ಆದರ್ಶ ಮೈಗೂಡಬಾರದೆಂಬ ದುರಾಲೋಚನೆ. ಇನ್ನೊಂದೆಡೆ ಸ್ವಯಂಕೃತಾಪರಾಧದಿಂದ ಚುನಾವಣೆಯಲ್ಲಿ ಹೀನಾಯ ಸೋಲುಂಡು ಆಘಾತದಿಂದ ಮೇಲೇಳಲಾಗದೆ ದೈನೇಸಿ ಸ್ಥಿತಿಯಲ್ಲಿ ಬಿದ್ದುಕೊಂಡಿರುವುದೊಂದು ವಿರೋಧ ಪಕ್ಷ ಅಂತೆ! ಕರ್ನಾಟಕದ ಅಧೋಗತಿಗೆ
ಇದಕ್ಕಿಂತ ಸಮರ್ಪಕ ರೆಸಿಪಿ ಇನ್ನೇನು ಬೇಕು? ಹಾಗಾಗದಿರಲೆಂದೇ ನನ್ನ ಆಶಯ. ಆದರೆ ಅಂಧಕಾರ ಕವಿಯುತ್ತಿರುವುದು
ನಿಮ್ಮಲ್ಲಿ ಕೆಲವರಿಗಾದರೂ ಅರಿವಿದೆಯೆಂದುಕೊಂಡಿದ್ದೇನೆ.

error: Content is protected !!