Friday, 21st June 2024

ಮನೆಮನೆಗೆ ತಿರಂಗ ಸ್ವಾಗತಾರ್ಹ, ಆದರೆ…

ಅಶ್ವತ್ಥಕಟ್ಟೆ

ranjith.hoskere@gmail.com

ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವವನ್ನು ರಾಜಕೀಯ ಪಕ್ಷಗಳ ಮೈಲೇಜ್‌ಗೆ ಮಾಡಲು ಮುಂದಾದರೆ, ಅನಾಹುತ ಗಳಾಗುವುದು ಸಾಮಾನ್ಯ. ರಾಜಕೀಯ ಪಕ್ಷಗಳು, ಈ ವಿಷಯದಲ್ಲಿ ಪಕ್ಷವನ್ನು ನೋಡದೇ ಅಮೃತಮಹೋತ್ಸವದ ಉತ್ಸವ ವನ್ನು ಮಾಡುವ ನಿಟ್ಟಿನಲ್ಲಿ ಯೋಚಿಸಬೇಕಿದೆ.

ಭಾರತ ಇದೀಗ ಸ್ವಾತಂತ್ರ್ಯೋತ್ಸವ ಅಮೃತ ಘಳಿಗೆಯಲ್ಲಿದೆ. ಇನ್ನೊಂದು ವಾರದಲ್ಲಿ 75ನೇ ವರ್ಷದ ಸ್ವಾತಂತ್ರ್ಯದಿನಾ ಚರಣೆಯನ್ನು ಆಚರಿಸಲು ಇಡೀ ದೇಶ ಸಜ್ಜಾಗುತ್ತಿದೆ. ಈ ವಿಶೇಷ ಗಳಿಗೆಗಾಗಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು
ಕಳೆದೊಂದು ವರ್ಷದಿಂದ ಹತ್ತು ಹಲವು ಯೋಜನೆಗಳನ್ನು ಜಾರಿಗೊಳಿಸಿ, ಸ್ಮರಣೀಯವಾಗಿಡುವ ಪ್ರಯತ್ನವನ್ನು ಮಾಡಿದೆ.

ಇದೀಗ ಈ ಎಲ್ಲ ಯೋಜನೆಗಳೊಂದಿಗೆ ಕೇಂದ್ರ ಸರಕಾರ ‘ಹರ್ ಘರ್ ತಿರಂಗ’ ಎನ್ನುವ ಅಭಿಯಾನದ ಮೂಲಕ ದೇಶದ ಮನೆಮನೆಯಲ್ಲಿಯೂ ತಿರಂಗ ಧ್ವಜವನ್ನು ಹಾರಿಸುವ ಅಭಿಯಾನಕ್ಕೆ ಕೈಹಾಕಿದೆ. ಈ ರೀತಿಯ ವಿನೂತನ ಅಭಿಯಾನಕ್ಕೆ ಆರಂಭದಲ್ಲಿ ಕೇಂದ್ರ ಹಾಗೂ ರಾಜ್ಯಾದ್ಯಂತ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಮನೆಮನೆಗೆ ತಿರಂಗದ ಆಲೋ ಚನೆಯ ಮೂಲಕ, ದೇಶದ ಜನರಲ್ಲಿ ಸ್ವಾತಂತ್ರ್ಯ ಹಾಗೂ ದೇಶದ ಅಭಿಮಾ ನವನ್ನು ಹೆಚ್ಚಿಸುವ ಲೆಕ್ಕಾಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸರಕಾರ ಕೈಹಾಕಿರುವುದು ಉತ್ತಮ ಸಂಗತಿ.

ಆದರೆ ಈ ರೀತಿಯ ಬೃಹತ್ ಅಭಿಯಾನಕ್ಕೆ ಕೈಹಾಕುವ ಸಮಯದಲ್ಲಿ, ಕೇಂದ್ರ ಸರಕಾರ ತೆಗೆದುಕೊಂಡಿರುವ ಕೆಲ ನಿಲುವುಗಳು, ರಾಷ್ಟ್ರ ಧ್ವಜ ‘ಘನತೆ’ ಕುಂದು ತರುವ ಆತಂಕವನ್ನು ಅನೇಕರು ವ್ಯಕ್ತಪಡಿಸುತ್ತಿದ್ದಾರೆ. ಒಂದರ್ಥದಲ್ಲಿ ಈ ಆತಂಕದಲ್ಲಿ ನೈಜ ಕಾರಣಗಳು ಇವೆ ಎನ್ನುವುದು ಸ್ಪಷ್ಟ.

ಹಾಗೆ ನೋಡಿದರೆ, ಭಾರತದ ರಾಷ್ಟ್ರ ಧ್ವಜಕ್ಕೆ ತನ್ನದೇಯಾದ ಘನತೆ, ಗೌರವ ಹಾಗೂ ಪಾವಿತ್ರತೆಯಿದೆ. ಅದರಲ್ಲಿಯೂ ಇತ್ತೀಚಿನ ದಿನದಲ್ಲಿ ಪ್ಲಾಸ್ಟಿಕ್ ಧ್ವಜಗಳನ್ನು ನಿರ್ಬಂಧಿಸಿ, ಖಾದಿ ಬಾವುಟವನ್ನೇ ಆದ್ಯತೆ ನೀಡುತ್ತಿದ್ದರಿಂದ ಬಾವುಟಕ್ಕೆ ಹೆಚ್ಚಿನ ಗೌರವ ಸಿಗುತ್ತಿತ್ತು. ಕೆಲ ವರ್ಷಗಳ ಹಿಂದೆ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವದ ಬಳಿಕ ರಸ್ತೆರಸ್ತೆಯಲ್ಲಿ ಪ್ಲಾಸ್ಟಿಕ್ ಬಾವುಟಗಳು ಬಿದ್ದಿರುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿತ್ತು. ಆದರೀಗ ಇದು ಕಡಿಮೆಯಾಗಿತ್ತು. ಇದೀಗ ಪುನಃ ಹರ್ ಘರ್ ತಿರಂಗ ಅಭಿಯಾನದ ಮೂಲಕ, ಬಾವುಟದ ಪರಿಸ್ಥಿತಿ ಪುನಃ ಅದೇ ರೀತಿ ಆದರೂ ಅನುಮಾನವಿಲ್ಲ ಎನ್ನುವ ಆರೋಪ
ಕೇಳಿಬಂದಿದೆ.

ದೇಶದಲ್ಲಿ ಧ್ವಜವನ್ನು ಸಿದ್ಧಪಡಿಸಿ, ಅದಕ್ಕೆ ಸಂವಿಧಾನದತ್ತವಾದ ಗೌರವವನ್ನು ನೀಡಲಾಗಿದೆ. ಈ ರೀತಿ ನೀಡಿರುವ ಗೌರವ ದಲ್ಲಿ, ಬಾವುಟ ಯಾವ ಅಳತೆಯಲ್ಲಿ, ಯಾವ ಬಟ್ಟೆಯಿಂದ ಹಾಗೂ ಯಾವ ರೀತಿ ಬಳಸಬೇಕು ಎನ್ನುವ ಸ್ಪಷ್ಟ ಮಾರ್ಗಸೂಚಿ ಗಳನ್ನು ನೀಡಲಾಗಿದೆ. ಇದರೊಂದಿಗೆ ಬಾವುಟಯನ್ನು ಹಾರಿಸುವುದಕ್ಕೆ ನಿಗದಿತ ಸ್ಥಳವನ್ನು ಸಂವಿಧಾನದಲ್ಲಿ ಸ್ಪಷ್ಟ ಉಲ್ಲೇಖ ವಿದೆ. ಆದರೆ ಹರ್ ಘರ್ ತಿರಂಗ ಅಭಿಯಾನದ ಕಾರಣಕೆ, ಮಾರ್ಗಸೂಚಿಯಲ್ಲಿ ಕೆಲ ವಿನಾಯಿತಿಯನ್ನು ಕೇಂದ್ರ ಸರಕಾರ ವಿನಾಯಿತಿ ನೀಡಿರುವುದರಿಂದ ಬಾವುಟಕ್ಕಿರುವ ಪಾವಿತ್ರತೆಗೆ ಧಕ್ಕೆಯಾದರೂ ಏನು ಮಾಡದ ಸ್ಥಿತಿ ನಿರ್ಮಾಣ ವಾಗುವ ಸಾಧ್ಯತೆ ತಳ್ಳಿಹಾಕುವಂತಿಲ್ಲ.

ಈ ಹಿಂದೆ ಭಾರತದ ಬಾವುಟವನ್ನು ರಾತ್ರಿ ವೇಳೆ ಹಾರಿಸುವುದಕ್ಕೆ ನಿರ್ಬಂಧವಿತ್ತು. ಇದರೊಂದಿಗೆ ಈ ಹಿಂದೆ ರೇಷ್ಮೆ, ಸ್ಪನ್, ಖಾದಿಯಿಂದ ತಯಾರಿಸಿದ್ದ ಬಾವುಟಗಳ ಪ್ರದರ್ಶನಕ್ಕೆ ಮಾತ್ರ ಅವಕಾಶ ನೀಡಲಾಗಿತ್ತು. ಆದರೀಗ ಪಾಲಿಸ್ಟರ್‌ನಿಂದ ತಯಾ ರಿಸಿರುವ ಬಾವುಟಗಳ ಹಾರಾಟಕ್ಕೂ ಅವಕಾಶ ನೀಡಲಾಗಿದೆ. ಇದರಿಂದಾಗಿ, ಬೇಕಾಬಿಟ್ಟಿಯಾಗಿ ಬಾವುಟಗಳ ತಯಾರಿಕೆ ಹಾಗೂ ಪ್ರದರ್ಶನವಾಗುವ ಆತಂಕ ಅನೇಕರಲ್ಲಿದೆ.

ಅದರಲ್ಲಿಯೂ ಪ್ಲಾಸ್ಟಿಕ್ ಬಾವುಟಗಳ ತಯಾರಿಕೆ ಸುಲಭದ್ದಾಗಿರುವುದರಿಂದ, ಕಡಿಮೆ ಬೆಲೆಗೆ ಈ ಬಾವುಟಗಳು ಮಾರುಕಟ್ಟೆ ಯಲ್ಲಿ ಲಭ್ಯವಾಗುತ್ತದೆ. ಈ ರೀತಿ ಲಭ್ಯವಾಗುತ್ತಿರುವ ಬಹುತೇಕ ಬಾವುಟಗಳಲ್ಲಿ, ಸಂವಿಧಾನದ ‘ಫ್ಲಾಗ್ ಕೋಡ್ 1971’ನಲ್ಲಿ ಹೇಳಿರುವ ಕೇಸರಿ, ಬಿಳಿ, ಹಸಿರಿನ ಬಣ್ಣದಲ್ಲಿ ವ್ಯತ್ಯಾಸ, ಬಾವುಟದಲ್ಲಿರುವ ಅಶೋಕ ಚಕ್ರದಲ್ಲಿ ವ್ಯತ್ಯಾಸ ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ, ಬಾವುಟದ ರಚನೆಯಲ್ಲಿರುವ ೩:೨ ಅನುಪಾತವನ್ನೇ ಮರೆತು ಸಿದ್ಧಪಡಿಸಲಾಗುತ್ತಿದೆ. ಇದರಿಂದಾಗಿ ಧ್ವಜ ಕ್ಕಿರುವ ಪಾವಿತ್ರ್ಯವೇ ಹಾಳಾಗಲಿದೆ.

ಇನ್ನು ಕೇಂದ್ರ ಸರಕಾರ ಈ ಬಾರಿ ಪಾಲಿಸ್ಟರ್ ಬಾವುಟ ರಚಿಸುವುದಕ್ಕೆ ಅವಕಾಶ ನೀಡಿರುವುದರಿಂದ, ಇಷ್ಟು ದಿನ ನಿಷ್ಠೆಯಿಂದ ಬಾವುಟ ತಯಾರಿಕೆಯಲ್ಲಿ ತೊಡಗಿರುವ ಖಾದಿ ಉದ್ಯಮಕ್ಕೆ ಭಾರಿ ಪೆಟ್ಟು ಬೀಳಲಿದೆ ಹಾಗೂ ಚೀನಾದಂತಹ ರಾಷ್ಟ್ರಗಳು, ಭಾರತದ ಬಾವುಟವನ್ನು ತಯಾರಿಸಿ ರಫ್ತು ಮಾಡುವ ಸಾಧ್ಯತೆಯೂ ದಟ್ಟವಾಗಿದೆ. ಈ ರೀತಿ ರಫ್ತು ಮಾಡುವಾಗ ದೇಶಗಳಿಗೆ ನಮ್ಮ ರಾಷ್ಟ್ರ ಬಾವುಟದ ಬಗ್ಗೆ ಮಾಹಿತಿಯಾಗಲಿ, ಗೌರವವಾಗಲಿ ಇರುವುದಿಲ್ಲ.

ಆದ್ದರಿಂದ ಕಡು ಕೇಸರಿ ಇರುವ ಕಡೆ ಇನ್ನೊಂದು ಬಣ್ಣ, ಅಶೋಕ ಚಕ್ರದಲ್ಲಿರಬೇಕಾದ 24 ಬಾಣಗಳ ಬದಲಿಗೆ 28 ಅಥವಾ 22 ಬಾಣಗಳನ್ನು ಹಾಕುವ ಮೂಲಕ, ಬಾವುಟ ತಯಾರಿಸುವ ಸಾಧ್ಯತೆಯಿರುತ್ತದೆ. ಮನೆಮನೆಯಲ್ಲಿ ತಿರಂಗ ಹಾರಿಸಬೇಕು ಎನ್ನುವ ಕೇಂದ್ರ ಸರಕಾರ ಈ ವಿಷಯದಲ್ಲಿ ಎಚ್ಚರವಹಿಸಬೇಕಾಗಿತ್ತು. ಈಗಾಗಲೇ ರಾಜ್ಯ ಹಾಗೂ ಕೇಂದ್ರ ಸರಕಾರದ ಇಲಾಖೆಯ ವತಿಯಿಂದಲೇ ಬಾವುಟಗಳನ್ನು ಹಂಚಲಾಗುತ್ತಿದೆಯಾದರೂ ಅದು ಈವರೆಗೆ ಸಮಪರ್ಕವಾಗಿ ತಲುಪಿಲ್ಲ. ಇನ್ನು ಅನೇಕ ಭಾಗದಲ್ಲಿ ಸರಕಾರದ ವತಿಯಿಂದಲೇ ಹಂಚಿಕೆಯಾಗುತ್ತಿರುವ ಬಾವುಟದಲ್ಲಿಯೇ ಲೋಪವಿರುವ ಆರೋಪಗಳು ಕೇಳಿಬರುತ್ತಿದೆ. ಆದ್ದರಿಂದ ಈ ವಿಷಯದಲ್ಲಿ ಸರಕಾರಗಳು ಎಚ್ಚೆತ್ತುಕೊಳ್ಳದಿದ್ದರೆ, ದೇಶದ ಧ್ವಜಕ್ಕೆ, ಧ್ವಜದ ಮೂಲಕ ದೇಶಕ್ಕೆ ಅಪಮಾನವಾಗುವುದರಲ್ಲಿ ಅನುಮಾನವೇ ಇಲ್ಲ.

ಕೇಂದ್ರ ಸರಕಾರ ಮನೆಗಳಲ್ಲಿ ಬಾವುಟ ಹಾರಿಸುವ ಅಭಿಯಾನ ಆರಂಭಿಸಿದ್ದ ಸಮಯದಲ್ಲಿ ಇಡೀ ಬಾವುಟವನ್ನು ಹಾರಾಟ ಮಾಡುವುದಕ್ಕೆ ಅವಕಾಶವನ್ನು ಮಾಡಿಕೊಟ್ಟಿದೆ. ಇದರಿಂದಾಗಿ, ಸಾರ್ವಜನಿಕರಿಗೆ ನಿತ್ಯ ಧ್ವಜ ಹಾರಿಸುವ, ಕೆಳಗೆ ಇಳಿಸುವ ಕಿರಿಕಿರಿ ಇರುವುದಿಲ್ಲ ಎನ್ನುವುದು ಒಪ್ಪುವ ಸಂಗತಿ. ಆದರೆ ಈ ರೀತಿ ರಾತ್ರಿ ವೇಳೆ ಹಾರಿಸಿದ ಧ್ವಜವನ್ನು ಕಿಡಿಗೇಡಿಗಳು, ವಿಕೃತಗೊಳಿಸಿದರೆ ಅದರಿಂದ ಮತ್ತೊಂದು ಸಮಸ್ಯೆಯಾಗುವುದು ನಿಶ್ಚಿತ. ಆದ್ದರಿಂದ ಈ ರೀತಿಯ ಸಮಸ್ಯೆಯನ್ನು ಬಗೆಹರಿ ಸುವ ಬಗ್ಗೆ ಸರಕಾರ ಈಗಿನಿಂದಲೇ ಯೋಚಿಸಬೇಕಿದೆ.

ರಾಷ್ಟ್ರಭಕ್ತಿಯನ್ನು ಜನರಲ್ಲಿ ಎಚ್ಚರಿಸುವ ನಿಟ್ಟಿನಲ್ಲಿ ಈ ರೀತಿಯ ಅಭಿಯಾನವನ್ನು ಆರಂಭಿಸಿದ್ದರೂ, ಇದರಿಂದ ಆಗುವ ಅನಾಹುತಗಳ ಬಗ್ಗೆಯೂ ಯೋಚಿಸಲೇಬೇಕಾಗಿದೆ. ಈ ಎಲ್ಲ ಸವಾಲುಗಳನ್ನು ಮೀರಿ ನಿಲ್ಲುವ ವಿಶ್ವಾಸದಲ್ಲಿ ಸರಕಾರ ಗಳಿರಬಹುದು. ಸ್ವಾತಂತ್ರ್ಯ ದಿನಾಚರಣೆಯ ತನಕ ಈ ಎಲ್ಲವನ್ನು ಮೀರಿ, ಉತ್ತಮ ಗುಣಮಟ್ಟದ ಹಾಗೂ ಕಾನೂನು ಬದ್ಧವಾಗಿರುವ ಬಾವುಟಗಳನ್ನೇ ದೇಶದ ಎಲ್ಲ ಮನೆಗಳ ಮೇಲೆ ಹಾರಿಸಿದರು ಎಂದಿಟ್ಟುಕೊಳ್ಳಬಹುದು.

ಆದರೆ ಸ್ವಾತಂತ್ರ್ಯ ದಿನಾಚರಣೆ ಬಳಿಕ, ಈ ಬಾವುಟಗಳನ್ನು ತೆಗೆಯುವಾಗ ಅವುಗಳನ್ನು ಯಾವ ರೀತಿ ವಿಸರ್ಜನೆ ಮಾಡ ಲಾಗುತ್ತದೆ ಎನ್ನುವುದು ಮುಖ್ಯವಾಗುತ್ತದೆ. ಏಕೆಂದರೆ ಯಾವುದೇ ಬಾವುಟವನ್ನು ಹೇಗೆಂದರೆ ಹಾಗೇ, ಬಿಸಾಕು ವಂತಿಲ್ಲ. ಯಾವುದೇ ಬಾವುಟವನ್ನು ವಿರ್ಸಜನೆ ಮಾಡುವುದಕ್ಕೆ ಕಾನೂನಾತ್ಮಕ ಕ್ರಮಗಳಿವೆ. ಒಂದು ವೇಳೆ ಬಾವುಟ ಹರಿದು ಹೋದರೆ ಅಥವಾ ಹಾರಿಸುವುದಕ್ಕೆ ಯೋಗ್ಯವಿಲ್ಲದೇ ಇದ್ದಾಗ ಅವುಗಳನ್ನು ಕರ್ಪೂರದಿಂದ ಸಕಲ ಸರಕಾರಿ ಗೌರವದೊಂದಿಗೆ ಸುಡಬೇಕು ಎನ್ನುವ ಕಾನೂನಿದೆ.

ಆದರೆ 75ನೇ ಸ್ವಾತಂತ್ರ್ಯ ಸಂಭ್ರಮದ ಬಳಿಕ ಎಷ್ಟು ಮಂದಿ ಈ ರೀತಿಯ ಗೌರವದೊಂದಿಗೆ ಬಾವುಟಗಳನ್ನು ವಿಸರ್ಜನೆ ಮಾಡುತ್ತಾರೆ? ತಮ್ಮ ಮನೆಯಲ್ಲಿ ಬಾವುಟ ಹಾರಿಸಿದ ಬಳಿಕ, ಅದನ್ನು ರಸ್ತೆಯಲ್ಲಿಯೋ, ಕಸದ ಬುಟ್ಟಿಯಲ್ಲಿಯೇ ಬಿಸಾಕು ವುದು ನಿಶ್ಚಿತ. ಆದ್ದರಿಂದ ಈ ವಿಷಯಗಳ ಸರಕಾರಗಳು ಈಗಲೇ ಎಚ್ಚರವಹಿಸಬೇಕಿದೆ. ಅಮೃತಮಹೋತ್ಸವದ ಹಿನ್ನಲೆಯಲ್ಲಿ ಕೇಂದ್ರ ಸರಕಾರ ಮಾಡಿರುವ ಮನೆಮನೆಯಲ್ಲಿ ತಿರಂಗ ಹಾರಿಸುವ ಅಭಿಯಾನದಿಂದ ಈ ರೀತಿಯ ಕೆಲವು ತೊಂದರೆಗಳಿವೆ.
ಆದರೆ ಇದನ್ನು ಮೀರಿದ ತೊಂದರೆ ಎಂದರೆ, ಈ ವಿಷಯವನ್ನು ರಾಜಕೀಯಗೊಳಿಸಿರುವುದು.

ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು, ಈ ವಿಷಯದಲ್ಲಿಯೂ ರಾಜಕೀಯವನ್ನು ತಂದಿಟ್ಟಿವೆ. ಅದರಲ್ಲಿಯೂ ರಾಜ್ಯದಲ್ಲಿ
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು, ಕೇಂದ್ರದ ಈ ಅಭಿಯಾನವನ್ನು ಮೀರಿಸುವಂತೆ ಬೃಹತ್ ರ‍್ಯಾಲಿ ಮಾಡಲು, ಈ ರ‍್ಯಾಲಿಯಲ್ಲಿ ಭಾರತದ ಧ್ವಜವನ್ನು ಪ್ರದರ್ಶನ ಮಾಡುವ ಲೆಕ್ಕಾಚಾರದಲ್ಲಿದ್ದಾರೆ. ಇದಕ್ಕಾಗಿ ಬಿಬಿಎಂಪಿ ವಾರ್ಡ್‌ನ ನಾಯಕರಿಗೆ ಟಾರ್ಗೆಟ್ ಕೊಟ್ಟಿದ್ದು, ಹೆಚ್ಚೆಚ್ಚು ಜನರನ್ನು ಸೇರಿಸಿದವರಿಗೆ, ಮುಂದಿನ ಬಿಬಿಎಂಪಿ ಚುನಾವಣಾ ಟಿಕೆಟ್ ಎನ್ನುವ ಆಫರ್ ಅನ್ನು ನೀಡಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ.

ಈ ರೀತಿಯ ಆಫರ್ ನಿಂದ ಪ್ರೇರಿತರಾಗಿ ಜನರನ್ನು ಕರೆದುಕೊಂಡು ಬಂದರೆ, ಬರುವ ಜನರು ರಾಷ್ಟ್ರ ಧ್ವಜದ ಮೇಲಿನ ಪ್ರೀತಿ, ಗೌರವದಿಂದ ಬರುವುದಿಲ್ಲ. ಬದಲಿಗೆ ಜನರನ್ನು ಸೇರಿಸಲು ನಾಯಕರು ನೀಡುವ ‘ಆಫರ್’ ನೋಡಿಕೊಂಡು ಬರುತ್ತಾರೆ.
ಬಂದವರು, ಪಾದಯಾತ್ರೆ ಮುಗಿಯುವ ತನಕ ಕೈಯಲ್ಲಿ ರಾಷ್ಟ್ರಧ್ವಜ ಹಿಡಿದು ಬಳಿಕ ಅದನ್ನು ಅಲ್ಲಿಯೇ ಬಿಸಾಡಿ ಹೋಗುತ್ತಾರೆ. ಇದು ಕೇವಲ ಕಾಂಗ್ರೆಸ್‌ನವರು ಮಾಡುವ ಪಾದಯಾತ್ರೆಯಲ್ಲಿ ಮಾತ್ರವಲ್ಲ, ಬಿಜೆಪಿಯವರು ನಡೆಸುವ ಅಭಿಯಾನ ಸೈಡ್ ಎಫೆಕ್ಟ್ ಕೂಡ ಆಗಿರಲಿದೆ.

ರಾಷ್ಟ್ರದ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವವನ್ನು ರಾಜಕೀಯ ಪಕ್ಷಗಳ ಮೈಲೇಜ್‌ಗೆ ಮಾಡಲು ಮುಂದಾದರೆ,
ಈ ರೀತಿಯ ಅನಾಹುತಗಳಾಗುವುದು ಸಾಮಾನ್ಯ. ರಾಜಕೀಯ ಪಕ್ಷಗಳು, ಈ ವಿಷಯದಲ್ಲಿ ಪಕ್ಷವನ್ನು ನೋಡದೇ ಅಮೃತ ಮಹೋತ್ಸವದ ಉತ್ಸವವನ್ನು ಮಾಡುವ ನಿಟ್ಟಿನಲ್ಲಿ ಯೋಚಿಸಬೇಕಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷಗಳು ತಮ್ಮ ರಾಜಕೀಯ ಮೇಲಾಟಕ್ಕೆ ಅಮೃತ ಮಹೋತ್ಸವದ ಸಂಭ್ರಮವನ್ನು ಬಳಸಿಕೊಳ್ಳದೇ, ಜನರಲ್ಲಿ ದೇಶ ಬಗ್ಗೆ, ದೇಶಕ್ಕಾಗಿ ಹೋರಾಡಿದವರ ಬಗ್ಗೆ ಮಾಹಿತಿ ನೀಡುವುದಕ್ಕೆ ಬಳಸಿಕೊಂಡರೆ ಅದಕ್ಕೊಂದು ಸಾರ್ಥಕತೆ ಬರುತ್ತದೆ ಎಂದರೆ ತಪ್ಪಾಗುವು ದಿಲ್ಲ.

ದೇಶದಲ್ಲಿ 75ನೇ ವರ್ಷದ ಸ್ವಾತಂತ್ರ್ಯ ಸಂಭ್ರಮವನ್ನು ಅದ್ಧೂರಿಯಿಂದ ಆಚರಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಆರಂಭಿಸಿದ್ದ ‘ಘರ್ ಘರ್ ತಿರಂಗ’ ಅಭಿಯಾನದಿಂದ ದೇಶಾದ್ಯಂತ ಭಾರತದ ರಾಷ್ಟ್ರಧ್ವಜ ರಾರಾಜಿಸುತ್ತದೆ ಎನ್ನುವುದು ಹೆಮ್ಮೆಯ ವಿಷಯ ಎನ್ನುವುದರಲ್ಲಿ ಎರಡನೇ ಮಾತಿಲ್ಲ. ಆದರೆ ಈ ಕಾರಣಕ್ಕಾಗಿ ಧ್ವಜಕ್ಕಿರುವ ಘನತೆಗೂ ಕುಂದುಬರುವಂತಹ ಘಟನೆಗಳು ನಡೆಯಬಾರದಷ್ಟೆ.

error: Content is protected !!