Saturday, 27th July 2024

ಇಷ್ಟಾಗಿಯೂ ಉಭಯತ್ರರೂ ಕಿಸಿದದ್ದೇನು ?

ಬೇಟೆ 

ಜಯವೀರ ವಿಕ್ರಮ ಸಂಪತ್ ಗೌಡ

ಇದರಿಂದ ಏನು ಕಿಸಿದಂತಾಯಿತು? ಈಶ್ವರಪ್ಪನವರಿಗೆ ಪ್ರಾಮುಖ್ಯ ನೀಡಿದಂತಾಯಿತು. ಕಾಂಗ್ರೆಸ್ ಪ್ರತಿಭಟನೆಗೆ ಮಣಿದು, ಅವರನ್ನು ಕೈ ಬಿಟ್ಟರು ಎಂಬ ಸಂದೇಶ ಹೋಗುವುದನ್ನು ತಪ್ಪಿಸಲು, ಅವರನ್ನು ಸಂಪುಟದಲ್ಲಿ ಉಳಿಸಿಕೊಳ್ಳಲೇಬೇಕಾದಂತಾಯಿತು.

ನನಗೆ ರಾಜಕಾರಣಿಗಳನ್ನು ಟೀಕಿಸುವುದೆಂದರೆ, ಒಂಥರಾ ಅಲರ್ಜಿ. ಅದೊಂಥರಾ ಹಂದಿಗಳ ಜತೆ ಕಾದಾಡಿದಂತೆ. ಅದರಿಂದ ಏನೂ ಪ್ರಯೋಜನ ಇಲ್ಲ. ಗೆದ್ದರೂ, ಗೆದ್ದಿದ್ದೇವೆ ಎಂದು ಅಭಿಮಾನದಿಂದ ಹೇಳಿಕೊಳ್ಳಲಾಗುವುದಿಲ್ಲ. ಸೋತರೂ ಒಂದು ವೀರೋಚಿತ ಸೋಲು ಅಥವಾ ರೋಚಕ ಸೆಣಸು ಎಂದು ಹೇಳಿಕೊಳ್ಳಲು ಆಗುವುದಿಲ್ಲ.

ರಾಜಕಾರಣಿಗಳನ್ನು ಎಷ್ಟೇ ಬೈದರೂ, ಬೈದವರ ಬಾಯಿ ಹೊಲಸಾಗುವುದೇ ಹೊರತು, ಅದರಿಂದ ಯಾವುದೇ ಘನ ಕಾರ್ಯವೂ ಆಗುವುದಿಲ್ಲ. ಹೆಚ್ಚೆಂದರೆ, ಕೆಲವು ಜನ ಪುಕ್ಕಟೆ ಮನರಂಜನೆ ತೆಗೆದುಕೊಳ್ಳಬಹುದು. ಇದರಿಂದ ಏನು ಸಾಧಿಸಿದಂತಾ ಯಿತು? ರಾಷ್ಟ್ರ ಧ್ವಜಕ್ಕೆ ಸಂಬಂಧಿಸಿದಂತೆ ಸಚಿವ ಈಶ್ವರಪ್ಪನವರು ನೀಡಿದ್ದಾ ರೆನ್ನಲಾದ ಹೇಳಿಕೆ ಸೃಷ್ಟಿಸಿದ ವಿವಾದವನ್ನು ಆಡಳಿತ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್ ನಿಭಾಯಿಸಿದ ರೀತಿ, ನಮ್ಮ ರಾಜಕಾರಣಿಗಳ ನೈತಿಕ ಅಧಃಪತನವನ್ನು ತೋರಿಸುತ್ತದೆ.

ವಿಧಾನಮಂಡಲ ಕಾರ್ಯಕಲಾಪವನ್ನೇ ಈ ಒಂದು ಯಕಃಶ್ಚಿತ ಪ್ರಸಂಗ ನುಂಗಿ ಹಾಕಿತು. ಅದರಿಂದ ಕಾಂಗ್ರೆಸ್ ಏನು ಸಾಧಿಸಿತು ಎಂಬುದನ್ನು ಆ ಪಕ್ಷದ ನಾಯಕರೇ ಹೇಳಬೇಕು. ಇದರಿಂದ ರಾಜ್ಯದ ಜನತೆಗೆ ಏನು ಪ್ರಯೋಜನವಾಯಿತು? ಇಂಥ ಸಣ್ಣಸಣ್ಣ ಘಟನೆ ಗಳಿಗೆ ವಿಧಾನಸಭೆಯಲ್ಲಿ ಅಹೋರಾತ್ರಿ ಪ್ರತಿಭಟನೆ ಮಾಡುವ ಸಂಪ್ರದಾಯವನ್ನು ಆರಂಭಿಸಿದರೆ, ವಿಧಾನಸಭೆಯಾದರೂ ಏಕಿರ ಬೇಕು? ವಿಧಾನ ಮಂಡಲವೆನ್ನುವುದು ಮಾತಿನ, ಅರಿವಿನ ಮಹಾ ಮಂಟಪ. ಅದು ಚರ್ಚೆ, ಸಂವಾದ, ಸಮಾಲೋಚನೆ ಮಾಡಲೆಂದೇ ಇರುವ ಅತ್ಯಂತ ಉನ್ನತ ವೇದಿಕೆ. ಅಲ್ಲಿ ಅದೆಂಥ ಗಹನ ವಿಚಾರ ವನ್ನಾದರೂ ವಾದ-ಸಂವಾದಗಳ ಮೂಲಕ ಬಗೆಹರಿಸಿಕೊಳ್ಳಬಹುದು. ಒಂದೇ ವಿಷಯದ ಮೇಲೆ ಅಲ್ಲಿ ಹತ್ತು-ಹದಿನೈದು ದಿನಗಳ ಕಾಲ ಚರ್ಚೆ ನಡೆದಿದ್ದಿದೆ.

ಅಂಥ ಚರ್ಚೆಗಳೇ ಪ್ರಜಾಪ್ರಭುತ್ವದ ಪ್ರತಿಬಿಂಬಗಳು. ಒಂದು ನಿರ್ಧಾರಕ್ಕೆ ಬರುವ ಮುನ್ನ ಸುದೀರ್ಘ ಚರ್ಚೆ ನಡೆಯಬೇಕು ಎನ್ನುವುದು ಪ್ರಜಾಪ್ರಭುತ್ವದ ಆಶಯ. ಈ ಹಿನ್ನೆಲೆಯಲ್ಲಿಯೇ ಎಂಥ ಜಟಿಲ ಪ್ರಶ್ನೆಗಳಿಗಾದರೂ ಉತ್ತರ ಕಂಡುಕೊಳ್ಳಬಹುದು, ವಿವಾದಗಳನ್ನಾದರೂ ಬಗೆಹರಿಸಿಕೊಳ್ಳಬಹುದು. ಈಶ್ವರಪ್ಪ ಪ್ರಣೀತ ರಾಷ್ಟ್ರಧ್ವಜ ವಿವಾದವನ್ನೂ ಅದೇ ರೀತಿ ಯಲ್ಲಿ ಇತ್ಯರ್ಥಪಡಿಸಬಹುದಿತ್ತು. ಆ ವಿವಾದಕ್ಕೆ ಉತ್ತರ ಕಂಡುಕೊಳ್ಳಲು ಅದೇ ಸರಿಯಾದ ಮಾರ್ಗವೂ ಆಗಿತ್ತು. ಆದರೆ ಕಾಂಗ್ರೆಸ್ ನಾಯಕರು ನಡೆದುಕೊಂಡ ರೀತಿ ನಾಚಿಕೆಗೇಡು. ಕಾಂಗ್ರೆಸ್ ಅಧ್ಯಕ್ಷರೂ ಆಗಿರುವ ಡಿ.ಕೆ.ಶಿವಕುಮಾರ ಅವರು ತೋಳೇರಿಸಿ ಈಶ್ವರಪ್ಪನವರ ಮೇಲೆ ಎಗರಿ ಹೋಗಿದ್ದು, ನಂತರ ಅಹೋರಾತ್ರಿ ಧರಣಿ ಘೋಷಿಸಿದ್ದು ಅಪ್ರಬುದ್ಧತೆಯ ಸಂಕೇತ.

ಇದರ ಫಲವಾಗಿ, ಇಡೀ ಅಧಿವೇಶನವೇ ಹಳ್ಳ ಹಿಡಿದು ಹೋಯಿತು. ಬೇರೆ ಯಾವ ವಿಷಯವೂ ಚರ್ಚೆ ಆಗಲೇ ಇಲ್ಲ. ಹತ್ತು ದಿನಗಳ ಕಾಲ ಇಡೀ ವಿಧಾನಮಂಡಲದ ಗಮನವೆಲ್ಲ ಆ ವಿಷಯದ ಬಗ್ಗೆಯೇ ಕೇಂದ್ರೀಕರಿಸಿ, ನಿಷಲವಾಯಿತು. ಕಡೆಗೂ ಕಡಿದು ಕಟ್ಟೆ ಹಾಕಿದ್ದೇನು? ಏನೇನೂ ಇಲ್ಲ. ಈಶ್ವರಪ್ಪನವರು ರಾಜೀನಾಮೆ ಕೊಡಲಿಲ್ಲ. ಕಾಂಗ್ರೆಸ್ ನಾಯಕರು ಮನೆ ಊಟ ಬಿಟ್ಟು ಸದನದಲ್ಲಿ ತಿಂದು, ಊಟ ಮಾಡಿ, ಮಲಗಿ ಎದ್ದಿದ್ದಷ್ಟೇ ಬಂತು. ಇದರಿಂದ ರಾಜ್ಯ ಬೊಕ್ಕಸಕ್ಕಾದ ನಷ್ಟವನ್ನು ಯಾರು ಭರಿಸುತ್ತಾರೆ? ಚರ್ಚಿಸಲೇ ಬೇಕಾದ ಹಲವು ಪ್ರಮುಖ ವಿಷಯಗಳನ್ನು ಈ ಕಾರಣದಿಂದ ಚರ್ಚಿಸದೇ, ಅದರಿಂದ ಆದ ಹಾನಿಯನ್ನು ತುಂಬಿಕೊಡುವವರು ಯಾರು? ಅದಕ್ಕಿಂತ ಮುಖ್ಯವಾಗಿ ಎರಡೂ ಪಕ್ಷಗಳ ನಾಯಕರು ಜನರ ಕಣ್ಣಿನಲ್ಲಿ ಸಣ್ಣವರಾಗಿ, ಹೊಣೆಗೇಡಿಗಳಾಗಿ ಕಂಡಿದ್ದು ಸುಳ್ಳಲ್ಲ. ಇಂಥ ಘಟನೆ ಗಳಾದಾಗ, ಜನಸಾಮಾನ್ಯರು ಶಾಸನಸಭೆಗಳ ಮೇಲೆ ಇರಿಸಿದ ಭರವಸೆ, ವಿಶ್ವಾಸಕ್ಕೆ ಧಕ್ಕೆಯುಂಟಾಗುತ್ತದೆ.

ಜನಪ್ರತಿನಿಧಿಗಳ ಬಗ್ಗೆ ಲಘುವಾದ ಅಭಿಪ್ರಾಯ ಮೂಡುವಂತಾಗುತ್ತದೆ. ಇದರಿಂದ ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆಯೇ ಜನರಲ್ಲಿ
ಅಪನಂಬಿಕೆ ಬಲವಾಗುತ್ತದೆ. ಇಂಥ ಅಪ್ರಮುಖ ಪ್ರಕರಣಗಳು ಜನರಲ್ಲಿ ವಿನಾಕಾರಣ ತಲ್ಲಣಗಳನ್ನು ಎಬ್ಬಿಸುತ್ತವೆ. ಇವು ನಮ್ಮ ನಂಬಿಕೆಯನ್ನು ಜಾಲಾಡುತ್ತವೆ. ಇಂಥ ಘಟನೆಗಳಿಂದ ಸುಧಾರಿಸಿಕೊಳ್ಳಲು ಕೆಲ ದಿನಗಳು ಬೇಕಾದರೂ, ಆಗಿ ಹೋದ ಹಾನಿಯನ್ನಂತೂ ಮರೆಯುವಂತೆಯೇ ಇಲ್ಲ. ಕಾಂಗ್ರೆಸ್ ನಾಯಕರು ಪ್ರತಿಭಟನೆಯಂಥ ಪ್ರಬಲ ಅಸವನ್ನು ವೃಥಾ ಹಾಳುಗೆಡವಿತು.

ಇದರಿಂದ ಜನರಿಗೆ ದಮಡಿ ಪ್ರಯೋಜನ ಆಗಲಿಲ್ಲ. ರಾಜ್ಯದ ಜನರ ಹಿತಾಸಕ್ತಿ, ಹಿತರಕ್ಷಣೆ, ನೆಲ, ಜಲ, ಭಾಷೆ ಬಗ್ಗೆ ಈ ರೀತಿಯ
ಪ್ರತಿಭಟನೆ ಮಾಡಿದ್ದರೆ, ಅದಕ್ಕೊಂದು ಅರ್ಥವಿರುತ್ತಿತ್ತು. ಜನರೂ ಪರೋಕ್ಷವಾಗಿ, ನೈತಿಕ ಬೆಂಬಲ ನೀಡುತ್ತಿದ್ದರು. ಅದರಿಂದ ಜನರಿಗೂ ಒಂದಷ್ಟು ಪ್ರಯೋಜನವಾದರೂ ಆಗುತ್ತಿತ್ತು. ಆದರೆ ಇದರಿಂದ ಏನು ಕಿಸಿದಂತಾಯಿತು? ಈಶ್ವರಪ್ಪನವರಿಗೆ ಪ್ರಾಮುಖ್ಯ ನೀಡಿ ದಂತಾಯಿತು. ಅವರನ್ನು ಸಂಪುಟದಿಂದ ಕೈಬಿಡುತ್ತಾರೆ ಎಂಬ ಊಹಾಪೋಹಗಳಿದ್ದವು.

ಈಗಂತೂ ಅವರ ಸ್ಥಾನ ಭದ್ರವಾದಂತಾಯಿತು. ಒಂದು ವೇಳೆ ಕೈಬಿಡುವ ಯೋಚನೆಯಿದ್ದರೂ, ಕಾಂಗ್ರೆಸ್ ಪ್ರತಿಭಟನೆಗೆ ಮಣಿದು, ಕೈ ಬಿಟ್ಟರು ಎಂಬ ಸಂದೇಶ ಹೋಗುವುದನ್ನು ತಪ್ಪಿಸಲು, ಅವರನ್ನು ಸಂಪುಟದಲ್ಲಿ ಉಳಿಸಿಕೊಳ್ಳಲೇ ಬೇಕಾದಂತಾಯಿತು. ಒಟ್ಟಾರೆಯಾಗಿ ಕಾಂಗ್ರೆಸ್ ಪಕ್ಷ ಯಾವ ಉದ್ದೇಶವನ್ನಿಟ್ಟುಕೊಂಡು ವಿಧಾನಮಂಡಲದಲ್ಲಿ ಅಹೋರಾತ್ರಿ ಧರಣಿ ಹೂಡಿದ್ದು ಸಂಕುಚಿತ ಮನೋಭಾವ ಕ್ಕೊಂದು ನಿದರ್ಶನ ಎಂದು ಹೇಳಬಹುದು. ಇಂದಿನ ದಿನಗಳಲ್ಲಿ ಮುಷ್ಕರ ಮತ್ತು ಪ್ರತಿಭಟನೆಗಳಿಗೆ ಹೆದರಿ ಯಾವ ರಾಜಕಾರಣಿಯೂ ರಾಜೀನಾಮೆ ಕೊಡುವುದಿಲ್ಲ. ತಾವು ಮಾಡಿದ ಮುಷ್ಕರದಿಂದ ಈಶ್ವರಪ್ಪ ರಾಜೀನಾಮೆ ಕೊಡುತ್ತಾರೆ ಎಂದು ಭಾವಿಸುವಷ್ಟು ಕಾಂಗ್ರೆಸ್ ನಾಯಕರು ಅಮಾಯಕರಾ? ಅಸಲಿಗೆ, ಕಾಂಗ್ರೆಸ್ ನಾಯಕರಿಗೆ ಹಿಜಾಬ್ ವಿವಾದದ ಬಗ್ಗೆ ಸದನದಲ್ಲಿ ಚರ್ಚೆ ಆಗುವುದು ಬೇಕಿರಲಿಲ್ಲ. ಯಾಕೆಂದರೆ ಹಿಜಾಬ್ ಪರವಾಗಿ ಮಾತಾಡಿದರೆ, (ಮಾತಾಡಲೇ ಬೇಕಿತ್ತು, ಅದನ್ನು ಬಿಟ್ಟು ಕಾಂಗ್ರೆಸ್ ನಾಯಕರಿಗೆ ಬೇರೆ ಮಾರ್ಗ ವಿರಲಿಲ್ಲ) ಬಹುಸಂಖ್ಯಾತ ಹಿಂದೂಗಳ ಕೋಪಕ್ಕೆ ತುತ್ತಾಗುವ ಅಪಾಯದ ಸಂದೇಶಗಳು ಕಾಂಗ್ರೆಸ್ ನಾಯಕರಿಗೆ ಸಿಕ್ಕಿದ್ದವು.

ಅಲ್ಪಸಂಖ್ಯಾತರನ್ನು ಹೆಚ್ಚು ಹೆಚ್ಚು ಸಂತೈಸುವುದರಿಂದ, ಒಂದು ಹಂತದ ನಂತರ, ಹೆಚ್ಚು ಪ್ರಯೋಜನ ಆಗುವುದಿಲ್ಲ. ಹಿಜಾಬ್ ವಿಷಯ ದಲ್ಲಿ ಖುದ್ದು ಕಾಂಗ್ರೆಸಿನಲ್ಲಿದ್ದವರಿಗೇ, ಇದು ಯಾಕೋ ಅತಿಯಾಯಿತು ಎಂದು ಅನಿಸಿತ್ತು. ಹಾಗಂತ ಹಿಜಾಬ್ ವಿರುದ್ಧ ಮಾತಾಡ ಲಾಗದ ಅಸಹಾಯಕ ಸ್ಥಿತಿ. ಇಂಥ ಅಕರಾಳ-ವಿಕರಾಳ ಸ್ಥಿತಿಯಲ್ಲಿ ಕಾಂಗ್ರೆಸ್ ಈ ವಿಷಯದಲ್ಲಿ ಮುಗ್ಗರಿಸಿ ಬಿದ್ದಿತು. ಕಾಂಗ್ರೆಸ್ ನಡೆಸಿದ ಈ ಮುಷ್ಕರಕ್ಕೆ ಪ್ರಶಂಸೆ ವ್ಯಕ್ತಪಡಿಸಿದವರಿದ್ದರೆ, ಅಂಥವರು ಕೈ ಎತ್ತಿದರೆ ಉಪಕಾರವಾಗುತ್ತದೆ.

ಹಾಗಂತ ಇದರಿಂದ ಬಿಜೆಪಿಗೂ ಏನೂ ಲಾಭವಾಗಿದ್ದು ಕಾಣೆ. ಒಂದು ವೇಳೆ ಈಶ್ವರಪ್ಪನವರು ಹಾಗೆ ಮಾತಾಡಿದ್ದರೆ, ಅದು ಸಹ ಶುದ್ಧ ತಪ್ಪು. ಕೆಂಪುಕೋಟೆ ಮೇಲೆ ಕೇಸರಿ ಧ್ವಜ ಹಾರಿಸುವುದು ಆ ಪಕ್ಷದ ಮುಂದೆ ಇರುವ ಗುರಿಯಲ್ಲ. ಮಾಡಲು ಬೆಟ್ಟದಷ್ಟು ಕೆಲಸಗಳಿವೆ. ಜನರ ಸಮಸ್ಯೆಗಳು ನೂರಾರಿವೆ. ಅವೆಲ್ಲವನ್ನು ಬಿಟ್ಟು ಇಂಥ ಕೆಲಸಕ್ಕೆ ಬಾರದ ವಿಷಯಗಳ ಬಗ್ಗೆ ಯೋಚಿಸುವುದು, ಮಾತಾಡುವುದು
ಯಾರಿಗೂ ಶೋಭೆ ತರುವಂಥದ್ದಲ್ಲ.

ಈಶ್ವರಪ್ಪನವರು ಹಿರಿಯ ನಾಯಕರು. ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿದ ಮೂವರು ಪ್ರಮುಖ ನಾಯಕರಲ್ಲಿ ಅವರೂ ಒಬ್ಬರು. ಹೀಗಾಗಿ ಪಕ್ಷ ಮತ್ತು ಜನ ಅವರಿಂದ ಯಾವುತ್ತೂ ಸಾರ್ವಜನಿಕ ಬದುಕಿಗೆ ಘನತೆ ತರುವ ಮಾತು- ನಡೆಗಳನ್ನು ಬಯಸುತ್ತಾರೆ. ಅವರು ಇಂಥ ಉಪಯೋಗಕ್ಕೆ ಬಾರದ ಚರ್ಚೆಗೆ ಗ್ರಾಸ ಒದಗಿಸಬಾರದು. ಇಂಥ ವಿಷಯಗಳಲ್ಲಿ ಸಂಯಮ ಪ್ರದರ್ಶಿಸಬೇಕು. ಹಾಗಂತ ಅವರು
ರಾಜೀನಾಮೆ ನೀಡುವಂಥ ಘನ-ಘೋರ ಅಪರಾಧವನ್ನೇನನ್ನೂ ಮಾಡಿಲ್ಲ. ಇವೆಲ್ಲವೂ ಚರ್ಚೆಯಿಂದ ಬಗೆಹರಿಸಿಕೊಳ್ಳುವಂಥದ್ದು. ಉಗುರಿನಿಂದ ಆಗುವ ಕೆಲಸಕ್ಕೆ ಕೊಡಲಿಯನ್ನು ತೆಗೆದುಕೊಳ್ಳಬಾರದು.

ಈ ವಿಷಯದಲ್ಲಿ ಅತ್ಯಂತ ಸಮಚಿತ್ತ ಪ್ರದರ್ಶಿಸಿದ್ದು ಜೆಡಿಎಸ್. ಜೆಡಿಎಸ್ ನಾಯಕರು ಈ ವಿಷಯದಲ್ಲಿ ಹರ ಅಂತನೂ ಹೇಳಲಿಲ್ಲ. ಶಿವ ಅಂತನೂ ಹೇಳಲಿಲ್ಲ. ನಿಜವಾಗಿ ಜೆಡಿಎಸ್ ತೋರಿದ ಪ್ರತಿಕ್ರಿಯೆಯೇ ಅತ್ಯಂತ ಸಮಂಜಸವಾದುದು. ಇಂಥ ವಿವಾದಗಳಿಂದ ಏನೂ ಆಗುವುದಿಲ್ಲ ಎಂಬುದು ಆ ಪಕ್ಷದ ನಾಯಕರಿಗೆ ಅರಿವಾಗಿದೆ. ಹೀಗಾಗಿ ಅವರು ಅವರ ಪಾಡಿಗೆ ಇದ್ದುಬಿಟ್ಟರು. ಇತ್ತೀಚಿನ ದಿನಗಳಲ್ಲಿ, ಸದ
ದಲ್ಲಿ ಯಾವ ಚರ್ಚೆಯೂ ಆಗುತ್ತಿಲ್ಲ. ಇದು ಶಾಸನ ಸಭೆಗೆ ಬಗೆಯುವ ಅಪಚಾರ. ಸಭಾತ್ಯಾಗ, ಕೋಲಾಹಲ ಯಾರಿಗೂ ಭೂಷಣವಲ್ಲ. ಚರ್ಚೆಯೊಂದೇ ಸತ್ಯ. ಸಂವಾದದ ಬೆಳಕಿನಲ್ಲಿಯೇ ಸತ್ಯದರ್ಶನ ಮಾಡಿಕೊಳ್ಳಬೇಕು. ಅದು ಬಿಟ್ಟು ಈ ರೀತಿ ದುಂಡಾವರ್ತಿ ಮಾಡು ವುದು ಜನಪ್ರತಿನಿಧಿಗಳ ಘನತೆಗೆ ತಕ್ಕುದಾದ ನಡೆಯಲ್ಲ. ಎತ್ತರ ಸ್ಥಾನದಲ್ಲಿರುವವರು ಕೆಳಗಿರುವವರಿಂದ ಬುದ್ಧಿ ಮಾತು ಹೇಳಿಸಿಕೊಳ್ಳ ಬಾರದು.

error: Content is protected !!