Saturday, 27th July 2024

ಸ್ವಾತಂತ್ರ‍್ಯದ ಘಳಿಗೆ; ಏಕತೆಯಲ್ಲೇಕೆ ಭಿನ್ನತೆ ?

ಅಶ್ವತ್ಥಕಟ್ಟೆ

ranjith.hoskere@gmail.com

ದೇವೇಗೌಡ ನಡೆ ಸ್ವಾಗತಾರ್ಹ. ರಾಜಕೀಯ, ತತ್ವ ಸಿದ್ಧಾಂತಗಳ ಭಿನ್ನಾಭಿಪ್ರಾಯವೇನೇ ಇದ್ದರೂ, ದೇಶದ ವಿಷಯಕ್ಕೆ ಬಂದಾಗ ಸರಕಾರ ಕರೆಯನ್ನು ಪೂರೈಸುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಅವರ ‘ಹರ್ ಘರ್ ತಿರಂಗಾ’ ಅಭಿಯಾನದಲ್ಲಿ ಕೈಜೋಡಿಸುವ ಮೂಲಕ ‘ದೊಡ್ಡತನ’ ಮೆರೆದರು.

ಇಡೀ ದೇಶ ಸೋಮವಾರ ಒಂದಾಗಿ ಸ್ವಾತಂತ್ರ್ಯದ ಅಮೃತಮಹೋತ್ಸವದ ಸಂಭ್ರಮದಲ್ಲಿ ತೇಲಿದೆ. 75 ವರ್ಷಗಳ ಹಿಂದೆ ಸಾವಿರಾರು ಸ್ವಾತಂತ್ರ್ಯ ಯೋಧರ ತ್ಯಾಗ ಬಲಿದಾನದ ಮೂಲಕ, ಲಕ್ಷಾಂತರ ಜನರ ಹೋರಾಟ ದೊಂದಿಗೆ ಈ ನೆಲಕ್ಕೆ ಅಂಟಿದ್ದ ಗುಲಾಮಗಿರಿಯನ್ನು ಕೊನೆಯಾಗಿಸಿ, ಸ್ವತಂತ್ರ-ಗಣತಂತ್ರ ರಾಷ್ಟ್ರವನ್ನಾಗಿ ಭಾರತವನ್ನು ಘೋಷಿಸಲು ಶ್ರಮಿಸಿ ದ್ದಾರೆ.

ಈ ಹೋರಾಟದ ಸಮಯದಲ್ಲಿ ಯಾರೊಬ್ಬರೂ ಜಾತಿ, ಭೇದ, ಪಂಥವನ್ನು ಲೆಕ್ಕಿಸದೇ ಹೋರಾಡಿದ್ದು, ಭಾರತವನ್ನು ‘ಸ್ವತಂತ್ರ ದೇಶವನ್ನಾಗಿಸುವ’ ಏಕೈಕ ಉದ್ದೇಶದಿಂದ ಮಾತ್ರ. ಕೋಟಿ ಕೋಟಿ ಜನರ ಈ ಉದ್ದೇಶ ನೆರವೇರಿ ಸೋಮ ವಾರಕ್ಕೆ 75 ವಸಂತಗಳು ಸಂದಿವೆ. ಆದರೆ ಈ ಅಮೃತ ಘಳಿಗೆಯ ಸುಸಂದರ್ಭದಲ್ಲಿ ಎಲ್ಲರೂ ಒಂದಾಗಿ ಸಂಭ್ರಮಾಚರಣೆ ಮಾಡಬೇಕಾಗಿದ್ದು, ಪ್ರತಿಯೊಬ್ಬ ನಾಗರಿಕನ, ಜನಪ್ರತಿನಿಧಿಯ ಕರ್ತವ್ಯ ಎಂದರೂ ತಪ್ಪಾಗುವುದಿಲ್ಲ. ಆದರೆ ಈ ಸಮಯದಲ್ಲಿಯೂ ರಾಜಕೀಯದ ಬೇಳೆ ಬೇಯಿಸಿಕೊಳ್ಳುವ ಅಥವಾ ಪ್ರತಿಪಕ್ಷದಲ್ಲಿದ್ದೇವೆ ಎನ್ನುವ ಕಾರಣಕ್ಕೆ ವಿರೋಧಿಸಬೇಕು ಎನ್ನುವಂತೆ ಕಾಂಗ್ರೆಸ್ ವರ್ತಿಸುತ್ತಿದ್ದು, ಪ್ರತಿಪಕ್ಷಕ್ಕೆ ಟಾಂಗ್ ಕೊಡಲೇಬೇಕು ಎನ್ನುವ ಕಾರಣಕ್ಕೆ ಅವರಿಗೆ ಪ್ರತಿಯಾಗಿ ಬಿಜೆಪಿ ನಾಯಕರು ನಡೆದು ಕೊಳ್ಳುತ್ತಿದ್ದಾರೆಯೇ ಎನ್ನುವ ಅನುಮಾನ ಶುರುವಾಗಿದೆ.

ಹೌದು, ಈ ರೀತಿಯ ಅನುಮಾನ ಶುರುವಾಗಿರುವುದು ಕಳೆದೊಂದು ವಾರದಿಂದ. ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ಘಟನಾವಳಿ, ಆರೋಪ-ಪ್ರತ್ಯಾರೋಪ ಹಾಗೂ ಸ್ವಾತಂತ್ರ್ಯೋತ್ಸವದಂದು ಕಾಂಗ್ರೆಸ್ ನಾಯಕರು ನಡೆದುಕೊಂಡ ರೀತಿ ಪುಷ್ಟಿ ನೀಡುತ್ತಿದೆ. ಒಗ್ಗಟ್ಟಿನ ಮಂತ್ರ ಜಪಿಸಬೇಕಿದ್ದ ಸಮಯದಲ್ಲಿ, ಒಡಕಿನ ಮಾತನ್ನು ಕಾಂಗ್ರೆಸ್ ಹಾಗೂ ಬಿಜೆಪಿಯ ನಾಯಕರು ಆಡುತ್ತಿರುವುದು, ಸ್ವಾತಂತ್ರ್ಯದಿನಕ್ಕೆ ಮಾಡಿದ ಅಪಮಾನವೆಂದರೂ ತಪ್ಪಾಗುವುದಿಲ್ಲ.

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಮಯದಲ್ಲಿ ಒಡಕಿನ ಮಾತುಗಳು ಕೇಳಿಬರಲು ಶುರುವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ‘ಹರ್ ಘರ್ ತಿರಂಗ’ ಅಭಿಯಾನವನ್ನು ಘೋಷಿಸಿದ ಬಳಿಕ. ಮೋದಿ ಅವರು ಈ ಅಭಿಯಾನವನ್ನು ಪಕ್ಷಾತೀತ ವಾಗಿ ಮಾಡಬೇಕು ಎನ್ನುವ ಕರೆಯನ್ನು ನೀಡಿದರೂ, ಬರಬರುತ್ತಾ ಈ ಅಭಿಯಾನ ಬಿಜೆಪಿ ಅಭಿಯಾನವಾಗಿ ಪರಿವರ್ತನೆ ಯಾಗುತ್ತ ಸಾಗಿತ್ತು. ಆದರೆ ದೇಶದ ಬಾವುಟ ಹಾರಿಸುವ ವಿಷಯದಲ್ಲಿಯೂ, ಈ ರೀತಿ ರಾಜಕೀಯ ಮಾಡಿಕೊಂಡು ಹೋಗು ವುದು ದೇಶದ ದೃಷ್ಟಿಯಿಂದ ಒಳಿತಲ್ಲ.

ಮನೆಮನೆಗೂ ತಿರಂಗ ಅಭಿಯಾನದಲ್ಲಿ ಕೆಲ ನ್ಯೂನತೆಗಳಿದ್ದರೂ, ಒಟ್ಟಾರೆಯಾಗಿ ಎಲ್ಲರೂ ಒಂದಾಗಿ ಮಾಡಬೇಕಾದ ಅಭಿಯಾನವಾಗಿತ್ತು. ಏಕೆಂದರೆ ಪ್ರಧಾನಿ ನರೇಂದ್ರ ಮೋದಿ ಅವರು ‘ರಾಷ್ಟ್ರ ಧ್ವಜವನ್ನು ಹಾರಿಸಲು ಕರೆ ನೀಡಿದ್ದರೇ ಹೊರತು, ಯಾವುದೇ ಪಕ್ಷದ ಅಥವಾ ಧರ್ಮದ ಬಾವುಟ’ವನ್ನಲ್ಲ.

ಕಾಂಗ್ರೆಸ್ ನಾಯಕರು ಈ ಅಭಿಯಾನದ ವಿಷಯದಲ್ಲಿ ಆರಂಭದಿಂದಲೂ ಅನ್ಯಮಸ್ಕರಾಗಿಯೇ ಇದ್ದರು. ರಾಜ್ಯದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತ್ರವಲ್ಲದೇ ಕೇಂದ್ರದ ನಾಯಕರೂ ಈ ಅಭಿಯಾನವನ್ನು ಒಪ್ಪಿಕೊಳ್ಳುವ ಮನಃಸ್ಥಿತಿಯಲ್ಲಿ ಇರಲಿಲ್ಲ. ಆದರೆ ರಾಷ್ಟ್ರಧ್ವಜವನ್ನು ಹಾರಿಸಬೇಕು ಎನ್ನುವುದರಲ್ಲಿ ಆಗುವ ಸಮಸ್ಯೆ ಏನು ಎನ್ನುವುದನ್ನು ಕಾಂಗ್ರೆಸ್ ನಾಯಕರೇ ಸ್ಪಷ್ಟಪಡಿಸಬೇಕು. ಈ ಅಭಿಯಾನದ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದಂತೆ, ಇದಕ್ಕೆ ಪ್ರತಿಯಾಗಿ ಎಐಸಿಸಿ ವತಿಯಿಂದ ‘ಸ್ವಾತಂತ್ರ್ಯದ ನಡಿಗೆ’ ಎನ್ನುವ ಪಾದಯಾತ್ರೆಯನ್ನು ದೇಶಾದ್ಯಂತ ಹಮ್ಮಿಕೊಳ್ಳಲು ಎಲ್ಲ ರಾಜ್ಯ ಪ್ರದೇಶ ಕಾಂಗ್ರೆಸ್ ನಾಯಕರಿಗೆ ಸೂಚನೆ ಬಂತು. ಈ ಸೂಚನೆ ಬರುತ್ತಿದ್ದಂತೆ, ‘ನಾವೂ ಸಹ ಪಕ್ಷಾತೀತವಾಗಿ ಪಾದಯಾತ್ರೆ’ ಮಾಡುತ್ತೇವೆ ಎನ್ನುವ ಮಾತನ್ನು ಕಾಂಗ್ರೆಸ್ ನಾಯಕರು ಹೇಳಿಕೊಂಡು, ಹರ್ ಘರ್ ತಿರಂಗಕ್ಕೆ ಪ್ರತಿಯಾಗಿ ಸ್ವಾತಂತ್ರ್ಯ ನಡಿಗೆಗೆ ಸಿದ್ಧತೆ ನಡೆಸಿಕೊಂಡರು.

ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಸ್ವಾತಂತ್ರ್ಯ ನಡಿಗೆಯ
ಮೂಲಕ ತಮ್ಮ ಬಲಪ್ರದರ್ಶನಕ್ಕೆ ಮುಂದಾದರು. ಈ ರೀತಿ ಬಲಪ್ರದರ್ಶನ ಮಾಡುವ ಮೂಲಕ, ಬಿಜೆಪಿಗೆ ಟಾಂಗ್
ಕೊಡುವುದು ಒಂದು ವಿಷಯವಾದರೆ, ಸ್ವಪಕ್ಷದಲ್ಲಿಯೇ ಸಿದ್ದರಾಮಯ್ಯ ಅವರಿಗೆ ಟಾಂಗ್ ಕೊಡುವುದು ಹಾಗೂ ಆ.೩ರಂದು ನಡೆದಿದ್ದ ಸಿದ್ದರಾಮೋತ್ಸವಕ್ಕೆ ಪ್ರತಿಯಾಗಿ ತಾವೂ ಬಲಿಷ್ಠ ಎನ್ನುವುದನ್ನು ಕೇಂದ್ರ ಹಾಗೂ ರಾಜ್ಯ ನಾಯಕರಿಗೆ ಸಂದೇಶ ರವಾನಿಸಲು ಈ ಸ್ವಾತಂತ್ರ್ಯ ನಡಿಗೆಯನ್ನು ಬಳಸಿಕೊಂಡರು ಎನ್ನುವುದು ಸ್ಪಷ್ಟ.

ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ಮನೆಮನೆಗೂ ತಿರಂಗ, ಕಾಂಗ್ರೆಸ್‌ನಿಂದ ಸ್ವಾತಂತ್ರ್ಯ ನಡಿಗೆ. ಈ ಎರಡೂ
ಅಭಿಯಾನವೂ ದೇಶದ ಸ್ವಾತಂತ್ರ್ಯದ ಸಂಭ್ರಮವನ್ನು ತೋರಿಸುವುದಕ್ಕೆ ಅಲ್ಲವೇ. ಇವುಗಳಿಂದ ಆದ ಸಮಸ್ಯೆಯೇನು ಎನ್ನುವ ಪ್ರಶ್ನೆಗಳು ಸಹಜವಾಗಿ ಮೂಡುತ್ತವೆ. ಈ ರೀತಿ ಎರಡೂ ಅಭಿಯಾನವನ್ನು ತಮ್ಮಷ್ಟಕ್ಕೆ ತಾವು ಮಾಡಿಕೊಂಡಿದ್ದರೆ, ಏನು ಸಮಸ್ಯೆಯಾಗುತ್ತಿರಲಿಲ್ಲ. ಆದರೆ ಎರಡೂ ಪಕ್ಷದವರು ತಮ್ಮ ಅಭಿಯಾನವನ್ನು ಯಶಸ್ವಿಗೊಳಿಸುವ ಜತೆಜತೆಗೆ ತಮ್ಮ ಅಜೆಂಡಾವನ್ನು ತೇಲಿಬಿಡುವ ಪ್ರಯತ್ನ ಮಾಡಿದರು.

ಈ ರೀತಿಯ ಪ್ರಯತ್ನದಲ್ಲಿ ಬಿಜೆಪಿಯವರು, ಕಾಂಗ್ರೆಸ್ ಅನ್ನು ಟೀಕಿಸಿದರೆ, ಕಾಂಗ್ರೆಸಿಗರು ಬಿಜೆಪಿ ಸರಕಾರದ ನಡೆಯನ್ನು ಟೀಕಿಸಿದರು. ಈ ರೀತಿಯ ಆರೋಪ-ಪ್ರತ್ಯಾರೋಪದಲ್ಲಿ ದೇಶದ ಐಕತ್ಯೆಯನ್ನೇ ಮರೆಯುವ ಹಂತಕ್ಕೆ ಎರಡೂ ಕಡೆಯವರು ತಂದುಕೊಂಡರು. ಉದಾಹರಣೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಂತೆ, ಕಾಂಗ್ರೆಸ್ ನಾಯಕರಿಗೆ ತಮ್ಮ ಮನೆಯ ಮೇಲೆ ಬಾವುಟವನ್ನು ಹಾರಿಸಲು ಮನಸ್ಸಿಲ್ಲದಿದ್ದರೆ, ಈ ಹಿಂದೆ ಸ್ವಾತಂತ್ರ್ಯ ದಿನಾಚರಣೆಯನ್ನು ಮಾಡಿಕೊಂಡು ಹೋಗಬಹು ದಾಗಿತ್ತು ಅಥವಾ ಧ್ವಜವನ್ನು ತಮ್ಮ ಮನೆಗಳ ಮೇಲೆ ಹಾರಿಸಬಹುದಾಗಿತ್ತು.

ಆದರೆ ಅದನ್ನು ಮಾಡದೇ, ‘ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದು ಕಾಂಗ್ರೆಸ್. ಈಗ ಇದನ್ನು ಬಿಜೆಪಿಯವರು ಹೈಜಾಕ್ ಮಾಡುತ್ತಿದ್ದಾರೆ. ಇವರನ್ನು ನಕಲಿ ದೇಶಪ್ರೇಮ’ವೆಂದು ಟೀಕಿಸಿದರು. ಇದಕ್ಕೆ ಪ್ರತ್ಯಾರೋಪವಾಗಿ ಬಿಜೆಪಿಯವರು, ನೆಹರು ಇಂದಲೇ ದೇಶ ವಿಭಜನೆಯಾಗಿದ್ದು ಎಂದು ಸ್ವಾತಂತ್ರ್ಯ ದಿನಾಚರಣೆಯ ಹಿಂದಿನ ದಿನ ಕರಾಳ ದಿನವನ್ನು ಆಚರಿಸುವ ಮೂಲಕ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಕರ್ನಾಟಕದಲ್ಲಿರುವ ಬಿಜೆಪಿ ಸರಕಾರವಂತೂ, ಸರಕಾರದ ವತಿಯಿಂದ ನೀಡುವ ಜಾಹೀರಾತಿನಲ್ಲಿ ನೆಹರು ಅವರನ್ನೇ ಕೈಬಿಟ್ಟು ಜಾಹೀರಾತು ನೀಡಿತು. ಇದಕ್ಕೆ ಪ್ರತಿಯಾಗಿ ರಾಜಸ್ತಾನದಲ್ಲಿರುವ ಕಾಂಗ್ರೆಸ್ ಸರಕಾರ, ಜವಾಹರ್ ಲಾಲ್ ನೆಹರು ಅವರ ಭಾವಚಿತ್ರವಷ್ಟೇ ಇರುವ ಫೋಟೋವನ್ನು ಎಲ್ಲ ಪತ್ರಿಕೆಗಳಿಗೆ ಜಾಹೀರಾತು ನೀಡುವ, ಇತರ ಸ್ವಾತಂತ್ರ್ಯ ಹೋರಾಟ ಗಾರರಿಗೆ ಅಗೌರವ ತೋರಿತು. ಹಾಗೇ ನೋಡಿದರೆ, ಕರ್ನಾಟಕದಲ್ಲಿ ನೆಹರು ಅವರನ್ನು ಕೈಬಿಟ್ಟು ಜಾಹೀರಾತು ನೀಡಿದನ್ನು ತಪ್ಪು ಎನ್ನುವುದಾದರೆ, ರಾಜಸ್ತಾನದಲ್ಲಿ ಕೇವಲ ನೆಹರು ಅವರ ಫೋಟೋವನ್ನಷ್ಟೆ ತೋರಿಸಿ ಸ್ವಾತಂತ್ರ್ಯ ಭಾರತಕ್ಕೆ ನೆಹರು ಕೊಡುಗೆ ಎಂದು ಹೇಳಿದ್ದು ತಪ್ಪು.

ಈ ರೀತಿ ಬಿಜೆಪಿ-ಕಾಂಗ್ರೆಸ್ ನಾಯಕರು ತಮ್ಮ ಪಕ್ಷಗಳ ಮೈಲೇಜ್ ಪಡೆಯುವುದಕ್ಕೆ ಇಡೀ ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನೇ ತಲೆಕೆಳಗೆ ಮಾಡುವುದು ಸರಿಯಲ್ಲ. ಬಿಜೆಪಿಯವರ ವಾದದಂತೆ ನೆಹರು ಅವರಿಂದಲೇ ಸ್ವಾತಂತ್ರ್ಯ ಬಂದಿಲ್ಲ. ಆದರೆ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ನೆಹರು ಕುಟುಂಬದ ಪಾತ್ರವನ್ನೂ ಮರೆಯುಂತಿಲ್ಲ ಎನ್ನುವುದು ಅಷ್ಟೇ ನಿಜ. ಇನ್ನು ಸೋಮವಾರ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ನಡೆದ ಸರಕಾರಿ ಕಾರ್ಯಕ್ರಮದಲ್ಲಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ‘ಸಂವಿ ಧಾನ ಬರೆದ ಅಂಬೇಡ್ಕರ್, ದೇಶವನ್ನು ಒಂದು ಮಾಡಿದ ಪಟೇಲರನ್ನು ಮರೆಯಲು ಸಾಧ್ಯವೇ? ಕೆಲವರಿಂದಲೇ ತಮ್ಮಿಂದಲೇ ಸ್ವಾತಂತ್ರ್ಯ ಬಂದಿಲ್ಲ. ಅಸಂಖ್ಯಾತ ಅನಾಮಧೇಯ ಹೋರಾಟಗಾರರಿಂದ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದೆ’ ಎನ್ನುವ ಮಾತನ್ನು ಹೇಳಿದರು.

ಆದರೆ ಎಲ್ಲಿಯೂ ನೆಹರು ಅವರ ಹೆಸರನ್ನು ಉದ್ದೇಶ ಪೂರ್ವಕವಾಗಿಯೇ ಉಲ್ಲೇಖಿಸಲಿಲ್ಲ. ಇದೇ ರೀತಿ ಕಾಂಗ್ರೆಸಿಗರು ಸಹ, ವೀರ ಸಾರ್ವಕರ್ ರಂತ ಹೋರಾಟಗಾರರ ವಿರುದ್ಧ ವಾಗ್ದಾಳಿ ನಡೆಸುವ ಮೂಲಕ, ತಮ್ಮ ರಾಜಕೀಯ ಬೇಳೆ ಬೇಯಿಸಿ ಕೊಳ್ಳುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಹಾಗೇ ನೋಡಿದರೆ, ಜೆಡಿಎಸ್ ವರಿಷ್ಠ ದೇವೇಗೌಡ ನಡೆ ಸ್ವಾಗತಾರ್ಹ. ರಾಜಕೀಯ, ತತ್ವ ಸಿದ್ಧಾಂತಗಳ ಭಿನ್ನಾಭಿಪ್ರಾಯವೇನೇ ಇದ್ದರೂ, ದೇಶದ ವಿಷಯಕ್ಕೆ ಬಂದಾಗ ಸರಕಾರ ಕರೆಯನ್ನು ಪೂರೈಸುತ್ತಾರೆ. ಬಿಜೆಪಿ ವಿರುದ್ಧ ಜೆಡಿಎಸ್ ವಾಗ್ದಾಳಿ ನಡೆಸಿದರೂ, ಪ್ರಧಾನಿ ನರೇಂದ್ರ ಮೋದಿ ಅವರ ‘ಹರ್ ಘರ್ ತಿರಂಗಾ’ ಅಭಿಯಾನದಲ್ಲಿ ದೇವೇಗೌಡರೂ ಕೈಜೋಡಿಸುವ ಮೂಲಕ ‘ದೊಡ್ಡತನ’ ಮೆರೆದರು.

ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ಈ ರೀತಿ ಒಡಕಿನ ಧ್ವನಿಯನ್ನು ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ, ಇಡೀ ದೇಶದಲ್ಲಿ ಮಾಡಿದ್ದಾರೆ. ಆಡಳಿತ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಬೇಕೆಂದು ಕಾಂಗ್ರೆಸ್‌ನವರು, ಅವರಿಗೆ ಟಾಂಗ್ ನೀಡಬೇಕೆಂದು ಬಿಜೆಪಿಯವರು ಆರೋಪಗಳನ್ನು ಮಾಡುತ್ತಾ ಸಾಗಿದರೆ, ಕೊನೆಯಲ್ಲಿ ಬಲಿಪಶುವಾಗುವುದು ಭಾರತದ ‘ಏಕತೆ’ ಎನ್ನುವುದನ್ನು ಯಾರೊಬ್ಬರೂ ಮರೆಯಬಾರದು. ವಿವಿಧತೆಯಲ್ಲಿ ಏಕತೆಗೆ ಹೆಸರಾಗಿರುವ ದೇಶದಲ್ಲಿ, ಈ ರೀತಿಯ ಭಿನ್ನರಾಗಗಳು ಇಂತಹ ಸಮಯದಲ್ಲಿ ಬರಲೇಬಾರದು. ರಾಜಕೀಯ ಕಾರಣಕ್ಕಾಗಿ, ಇಡೀ ರಾಷ್ಟ್ರವೇ ಸಂಭ್ರಮಿಸುವ ಸಮಯದಲ್ಲಿ ರಾಜಕಾರಣಿಗಳು ಕಿತ್ತಾಟ ಮಾಡಿಕೊಂಡು ಹೋದರೆ, ದೇಶಕ್ಕೆ ಸಮಸ್ಯೆಯಾಗುವ ಆತಂಕವನ್ನು ತಳ್ಳಿಹಾಕುವಂತಿಲ್ಲ.

ಈ ರೀತಿ ದೇಶದ ಏಕತೆ ಹಾಗೂ ಸಾರ್ವಭೌಮತ್ವದ ವಿಚಾರಗಳು ಬಂದಾಗ ರಾಜಕೀಯ ಲಾಭ, ನಷ್ಟವನ್ನು ಮೀರಿ ಯೋಚಿಸ ಬೇಕಿದೆ. ಅಮೃತಮಹೋತ್ಸವದ ಹೊಸ್ತಿಲಲ್ಲಿರುವಾಗ ದೇಶದ ಜನರಿಗೂ ಸ್ವಾತಂತ್ರ ಸಂಗ್ರಾಮದ ಬಗ್ಗೆ ತಿಳಿವಳಿಕೆಯಿದೆ. ರಾಜಕೀಯ ಬೇಳೆ ಬೇಯಿಸಿಕೊಳ್ಳುವುದಕ್ಕೆ, ಯಾರದ್ದೋ ಹೆಸರನ್ನು ಹೇಳದೇ ಹೋದರೆ ಅವರನ್ನು ಸ್ವಾತಂತ್ರ್ಯ ಸಂಗ್ರಾಮದ ವೀರರಲ್ಲ ಎಂದೇನು ಪರಿಗಣಿಸುವುದಿಲ್ಲ. ದೇಶದ ವಿಷಯಗಳು ಬಂದಾಗಲಾದರೂ, ರಾಜಕೀಯ ಪಕ್ಷಗಳು ಒಂದಾಗಬೇಕಿದೆ.

error: Content is protected !!