Thursday, 22nd February 2024

ಶಾಂತಿ ನೆಮ್ಮದಿಗೆ ಯೋಗವಷ್ಟೆ ಸಾಲದು

ರಾವ್ ಭಾಜಿ

journocate@gmail.com

ವಿದ್ಯಾರ್ಥಿಗಳು ಒಟ್ಟುಗೂಡಿ ಭಾಗವಹಿಸುವ ವಾರ್ಷಿಕ ಚರ್ಚಾ ಸ್ಪರ್ಧೆ ನಾನೋದಿದ ಬಸವನಗುಡಿ ನ್ಯಾಷನಲ್ ಕಾಲೇಜ್‌ನ ವೈಶಿಷ್ಟ್ಯ. ಅದನ್ನು ಆಯೋಜಿಸುತ್ತಿದ್ದುದು ಇಂಗ್ಲಿಷ್ ಅಸೋಸಿಯೇಷನ್. ನಿಂತುಹೋಗಿದ್ದ ಈ ಕಾರ್ಯಕ್ರಮ ನಾನು ಅಸೋಸಿ ಯೇಷನ್ನಿನ ಕಾರ್ಯದರ್ಶಿಯಾಗಿ ಆಯ್ಕೆಯಾದಾಗ ಮರುಹುಟ್ಟು ಪಡೆಯಿತು. ಹೆಸರಾಂತ ಇಂಗ್ಲಿಷ್ ಪ್ರಾಧ್ಯಾಪಕರಾದ ಕೆಡಿಎನ್ (K Dwarakanath) ಅದರ ಅಧ್ಯಕ್ಷರು. ನಾವಿಬ್ಬರೂ ಕ್ರಿಕೆಟ್ ಪ್ರೇಮಿಗಳು.

ಹಾಗಾಗಿ ಕ್ರಿಕೆಟ್ ಬೇಕೋ ಬೇಡವೋ ಎಂಬ ವಿಷಯವನ್ನೇ ಚರ್ಚೆಯ ವಿಷಯವಾಗಿ ಆಯ್ಕೆ ಮಾಡಿದ್ದೆವು. ವಿಷಯವನ್ನು ವಿರೋಧಿಸಿ ಮಾತನಾಡಿದ ಮುಖ್ಯರಲ್ಲಿ ನನ್ನ ಒಬ್ಬ ಜೂನಿಯರ್ ವಿದ್ಯಾರ್ಥಿ ಇದ್ದ. ಅಂತರ ಕಾಲೇಜ್ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಗೆದ್ದಿದ್ದ. ಅವನ ಮಾತನ್ನು ಮೊದಲ ಬಾರಿಗೆ ಕೇಳುವ ಅವಕಾಶ ನನ್ನದಾಗಿತ್ತು.

ಚರ್ಚಾಸ್ಪರ್ಧೆಯ ಆಯೋಜಕರಲ್ಲಿ ನನ್ನದೊಂದು ಮನವಿ ಎಂದು ತನ್ನ ಆಕರ್ಷಕ ದನಿಯಲ್ಲಿ ಮಾತನ್ನಾರಂಭಿಸಿದ. ಈ ಮುಂದೆ ನೀವು ಆಯೋಜಿಸುವ ಸ್ಪರ್ಧೆಗಳಲ್ಲಿ ವಿಷಯದ ಮುಖ್ಯ ಮಂಡಕರಿಗೆ ವಿಷಯವನ್ನು ಚೆನ್ನಾಗಿ  ಅರ್ಥಮಾಡಿಸುವುದನ್ನು ಮರೆಯದಿರಿ. ಅದನ್ನು ಹೇಳುತ್ತಿದ್ದಂತೆ ಸಭಿಕರಿಂದ ಕರತಾಡನ. ವಿಷಯದ ಮುಖ್ಯ ಪ್ರತಿಪಾದಕರಾಗಿ ಅಂದು ಮಾತನಾ ಡಿದ್ದು ಒಬ್ಬ ವಿದ್ಯಾರ್ಥಿನಿ. ಅವಳನ್ನು ಛೇಡಿಸುವ ಆತನ ಭಾಷಣದ ಸಮಯ ಕಳೆಯಿತು. ಹೇಳಿಕೊಳ್ಳುವಂಥ ಗಟ್ಟಿ ಅಂಶಗಳೇ ನಿರಲಿಲ್ಲ.

ಆಶ್ಚರ್ಯಕರವಾಗಿ, ಮೊದಲ ಬಹುಮಾನ ಆತನೇ ಗಿಟ್ಟಿಸಿಕೊಂಡಿದ್ದ. ವಿರೋಧಿಗಳ ಮಣಿಸಲು ವಿಚಾರದ ಅಗತ್ಯವಿಲ್ಲ ಎಂಬ
ಅನಾಹುತವನ್ನು ಎಳೆಯದರಿಂದಲೂ ಕಂಡಿದ್ದೇನೆ. ವೃತ್ತಿ ಜೀವನಕ್ಕೆ ಕಾಲಿಟ್ಟ ಮೇಲೆ ಆಡುನುಡಿಗಿರುವ ವಿಧ್ವಂಸಕಕಾರೀ
ಅಂಶಗಳ ಪರಿಚಯವಾಯಿತು. ತೋಳ್ಬಲ, ಜಾತಿ ಬಲ, ಆಕ್ರಮಣಕಾರಿ ಪ್ರವೃತ್ತಿ, ಮದ, ಸ್ವಾರ್ಥ, ದಗಲ್ಬಾಜಿತನ, ಹೊಲಸು ಭಾಷೆ, ಕಿಡಿಗೇಡಿತನ, ಕುತರ್ಕ, ಎಂದೋ ಗಳಿಸಿದ ಪ್ರಭಾವ, ಪ್ರಭಾವದಿಂದ ಗಳಿಸಿದ ಪಾಪದ ಹಣ, ಹಣದಿಂದಲೋ ಅಥವಾ ಹಾಗೆಯೋ ಸಿಗುವ ಮಾಧ್ಯಮ ಬೆಂಬಲ, ಇವೆಲ್ಲವುಗಳಿಂದ ಗೆಲ್ಲಬನೆಂಬ ದುಷ್ಟ ವಿಶ್ವಾಸ – ಇವುಗಳಲ್ಲಿ ಒಂದೋ ಎರಡೋ ಇದ್ದರು ವಿರೋಧೀಗಳ ನ್ನೇನು, ಇಡೀ ವ್ಯವಸ್ಥೆ ಬುಡಮೇಲು ಮಾಡಬಹುದು.

ಇನ್ನು, ಇವೆಲ್ಲವೂ ಒಂದೇ ಕಡೆ ಸೇರಿಕೊಂಡರೆ ಗತಿ ಏನು? ಇಂದು ಕಾಣುತ್ತಿರುವುದು ಅದನ್ನೇ. ಇವುಗಳಲ್ಲಿ ಒಂದೇ ಒಂದು ಅಂಶವೂ ಪ್ರಜಾಸತ್ತೆಯ ಏಳಿಗೆಗೆ/ಉಳಿವಿಗೆ ಪೂರಕವಲ್ಲ, ಮಾರಕ. ಮಾತಿನ ಮೂಲಕ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಪ್ರಜಾಸತ್ತೆಯ ಆಶಯಗಳಂದು. ಆದರೆ, ವಿವಾದಸೃಷ್ಟಿಯೇ ಉಸಿರಾಟವಾದಾಗ ತಂಟೆಕೋರರೇ ಸಾರ್ವ ಜನಿಕ ಸ್ಥಳಗಳನ್ನಾಕ್ರಮಿಸಿಬಿಡುತ್ತಾರೆ.

ಗದ್ದಲವೇ ಬದುಕು, ಪುಂಡಾಟಿಕೆಯೇ ಪುರುಷಾರ್ಥವಾಗುತ್ತದೆ, ಅಪರಾಧಕ್ಕೆ ಮುಕ್ತ ಪರವಾನಗಿ ಸಿಗುತ್ತದೆ. ದುಷ್ಕೃತ್ಯವೇ ನಿತ್ಯ ಆಲೋಚನೆ, ಬದುಕಾಗಿ ಕೃತಿಗೆ ತಕ್ಕ ಮಾತು – ಬೆಳಂದೂರು ಕೆರೆಯಂತೆ ಉಕ್ಕುತ್ತದೆ. ಅದನ್ನು ಜುಳುಜುಳು ನಾದವೆಂಬಂತೆ ಆಲಿಸುವ ಶ್ರೋತೃಗಳಿಗೂ ಬರವಿಲ್ಲ. ಮೈತುಂಬ ಶರಾಬು ತುಂಬಿಕೊಂಡ ಲಾರಿ ಹೆದ್ದಾರಿಯಲ್ಲಿ ಮಗುಚಿ ಬಿದ್ದಾಗ ಹತ್ತಿರದ ಊರಿನವರೆಲ್ಲ ಜಮಾಯಿಸಿ ಕೈಗೆ ಸಿಕ್ಕಷ್ಟು ಎತ್ತಿಕೊಂಡು ಕಾಲ್ಕೀಳುವ ದೃಶ್ಯವನ್ನು ನೆನಪಿಸಿಕೊಳ್ಳಿ.

ಕಾಂಗ್ರೆಸ್ ದುರಾಡಳಿತದಿಂದ ಮತ್ತು ಅದನ್ನೇ ಮಾದರಿಯನ್ನಾಗಿ ಮಾಡಿಕೊಂಡ ಇತರ ಪಕ್ಷಗಳಿಂದ ನಜ್ಜುಗುಜ್ಜಾದ ನಮ್ಮ
ಪ್ರಜಾತಂತ್ರ ವ್ಯವಸ್ಥೆಯಲ್ಲಿ ತಮ್ಮದಲ್ಲದ್ದನ್ನು ಲಪಟಾಯಿಸಲು ಪೈಪೋಟಿ ನಡೆಸುವ ನಮ್ಮ ರಾಜಕಾರಣಿಗಳು ವಿಸ್ಕಿ ಬಾಟಲ್
ಕದಿಯಲು ನಿಂತ ಹಳ್ಳಿಗರಂತೆಯೇ ಕಾಣುತ್ತಾರೆ. ಹೆಂಡ ಮುಟ್ಟದ ಬಹುತೇಕರು, ಕುಡಿದು ದಾಂಧಲೆ ಎಬ್ಬಿಸುವವರನ್ನು ಒಂದು ಮಟ್ಟದವರೆಗೂ ಸಹಿಸಿಕೊಂಡಿರುತ್ತಾರೆ. ಪ್ರಜಾಸತ್ತೆ ಈ ಮಟ್ಟಕ್ಕೆ ಕುಸಿದಿರುವುದಕ್ಕೆ ರಾಜಕಾರಣಿಗಳಷ್ಟೇ ಕಾರಣರಲ್ಲ. ಅವರಿಗೆ ಸಾಥ್ ಕೊಡುತ್ತಲೇ ಅವರಿಂದ ಗೆಬರಿಕೊಂಡು ಬದುಕಿಗೆ ಒಂದಷ್ಟು ಮಾಡಿಕೊಳ್ಳುವ ಅಕ್ಷರ ಘಾತಕರೂ ಕಾರಣ.

ನನಗೆ ಮನೆಯಲ್ಲಿಟ್ಟ ಹೆಸರು ಅರ್ಜುನನದ್ದು. ನನಗೆ ಚಿಕ್ಕಂದಿನಲ್ಲಿ ಸೂರ್ತಿ ಸಿಕ್ಕಿದ್ದು ಕೃಷ್ಣನ ಹೆಸರಿನ ನನ್ನ ಅಣ್ಣನಿಂದ. ಆದರೆ, ಯುದ್ಧಭೂಮಿ ಪ್ರವೇಶಿಸಿ ಅರ್ಜುನನಂತೆ ಹೋರಾಡುವ ಮುನ್ನ ಅವನಂತೆಯೇ ಸಂಭವಿಸಲಿರುವ ಸಾಮೂಹಿಕ ಜೀವ ಹಾನಿಯ ಬಗ್ಗೆ ವಿಷಣ್ಣನಾಗಿದ್ದು ಅಣ್ಣನೇ. ಎದುರು ಪಾಳಯದಲ್ಲಿಂದು ನನಗೆ ಇಂಗ್ಲಿಷ್ ಪಾಠ ಮಾಡಿದ ದ್ರೋಣಾಚಾರ್ಯ ಸ್ವರೂಪಿ ಡಾ. ಜಿ. ರಾಮಕೃಷ್ಣ ಇದ್ದಾರೆ.

ರಾಮಕೃಷ್ಣರು ಪಳಗಿದ ಉಪನ್ಯಾಸಕರೇ. ಅವರ ಉಪನ್ಯಾಸವನ್ನು ನಾನು ತಪ್ಪಿಸಿಕೊಂಡದ್ದಿಲ್ಲ. ನನ್ನಲ್ಲಿ ಷೇಕ್ಸ್ ಪಿಯರನ ರುಚಿ ಹತ್ತಿಸಿದ್ದೇ ಅವರು. ಅಟೆಂಡೆನ್ಸ್ ಆದ ನಂತರ ಹಲವು ಅನಾಸಕ್ತ ವಿದ್ಯಾರ್ಥಿಗಳು ತರಗತಿಯಿಂದ ಹೊರ ಬೀಳುತ್ತಿದ್ದರು. ಅವರ ಮುಂದೆಯೇ ಬಿಡುಬೀಸಾಗಿ ನಡೆದುಹೋಗುತ್ತಿದ್ದರೂ ರಾಮಕೃಷ್ಣ ಅದರ ಬಗ್ಗೆ ಚಕಾರ ಎತ್ತುತ್ತಿರಲಿಲ್ಲ. ಅವರ ಅಂದು ತೋರಿದ ನಿರ್ಲಿಪ್ತತೆಯೇ ಇಂದು ನಾನು ಅವರ ವಿರುದ್ಧ ದನಿ ಎತ್ತಲು ನನ್ನನ್ನು ಶಕ್ತನನ್ನಾಗಿಸಿದೆ.

ರಾಮಕೃಷ್ಣ ಇಂಗ್ಲಿಷ್ ಜತೆಗೆ ಸಂಸ್ಕೃತದಲ್ಲೂ ವಿದ್ವಾಂಸರು. ಅದೇ ಕಾರಣಕ್ಕೆ ಅವರಿಂದು ಸುಸಂಸ್ಕೃತರಲ್ಲದವರ ಜತೆ ಕೈ ಜೋಡಿಸಿ ಪಠ್ಯಪುಸ್ತಕ ಪರಿಷ್ಕರಣೆಯ ವಿರೋಧ ಮಾಡುವುದು, ಭಗವದ್ಗೀತೆಯನ್ನು ಶಾಲೆಗಳಲ್ಲಿ ಪರಿಚಯಿಸುವುದು ಬೇಡ ಎಂದಾಗ ಆತಂಕವಾಗುತ್ತದೆ. ಸಹವಾಸ ಸನ್ಯಾಸಿಯನ್ನು ಕೆಡಿಸಿದಂತೆ ಬ್ರಹ್ಮಚಾರಿಯಾದ ರಾಮಕೃಷ್ಣರು ತಮ್ಮ ಘನತೆಗೆ ಚ್ಯುತಿ ತರಬಲ್ಲ ಪರಾವಲಂಬಿಗಳ ಗುಂಪಿನೊಂದಿಗೆ ಗುರುತಿಸಿಕೊಂಡಿರುವುದು ವಿಷಾದನೀಯ.

ಅಕ್ಷರಘಾತಕರ ಸಕ್ರಿಯ ಬೆಂಬಲದಿಂದಲೇ ಡಿಕೆ ಶಿವಕುಮಾರ್ ಅಂತಹ ಅಕ್ಷರವೈರಿಯು ಸರಸ್ವತಿಯೆಂದು ಪರಿಗಣಿಸಲಾದ ಪುಸ್ತಕವನ್ನು ಪರಪರನೆ ಹರಿದದ್ದು. ಇದಕ್ಕೆ ರಾಮಕೃಷ್ಣರ ಪರೋಕ್ಷವಾದ ಕುಮ್ಮಕ್ಕೂ ಇದೆ ಎನ್ನಲು ಅಡ್ಡಿಯಿಲ್ಲ. ಏಕೆಂದರೆ ಅವರು ಅಂದಿನಿಂದಲೂ ಕಮ್ಯುನಿಷ್ಟರು. ಪರಿಷ್ಕರಣೆಯ ವಿರೋಽಗಳೆಲ್ಲರೂ ಅನಕ್ಷರಸ್ಥರಲ್ಲ ಎಂಬುದಕ್ಕೆ ರಾಮಕೃಷ್ಣರ ಉದಾಹರಣೆಯೇ ಸಾಕು. ವಿವೇಕವುಳ್ಳವರೂ ಆದ ಅವರೂ ಅದೇಕೆ ವಿತ್ತಂಡವಾದ ಮಂಡಿಸಿದ, ವಾದದಲ್ಲಿ ಸೋತನಂತರವೂ ಪೊಳ್ಳುವಾದವನ್ನೇ ಮುಂದುವರಿಸಿರುವ ತಮ್ಮ ಪರಿವಾರದವರಿಂದ ದೂರವಾಗಲಿಲ್ಲ ಎನ್ನುವುದಕ್ಕಿಂತ ಅವರು ಹೇಗೆ ಅಲ್ಲಿ ಸಂದರು ಎನ್ನುವುದೇ ಉತ್ತರವಿಲ್ಲದ ಪ್ರಶ್ನೆ.

ವಿವೇಕಕ್ಕಿಂತ ಮುಖ್ಯ ಕಮ್ಯುನಿಸಂ ತತ್ವ ಮುಖ್ಯವಾಯಿತೇ? ಸಂಸ್ಕೃತ ಬಲ್ಲವರಾದ್ದರಿಂದ ಅವರು ಗೀತೆಯನ್ನೂ ಓದಿಕೊಂಡಿರ ಬಹುದೆಂದು ಭಾವಿಸಿದ್ದೇನೆ. ಕೃಷ್ಣ ಹೇಳಿದ್ದೂ ಬುದ್ಧಿನಾಶದೊಂದಿಗೆ ಸರ್ವಸ್ವವೂ ನಾಶ ಎಂದು. ಅವರು ಓದಿಕೊಂಡಿರುವ ಮತ್ತು ನನಗೆ ಬೋಧಿಸಿದ ಷೇಕ್ಸ್‌ಪಿಯರ್ ನುಡಿದದ್ದೂ: ದೇವರು ಯಾರ ಬಾಳನ್ನು ಸಂಪೂರ್ಣವಾಗಿ ನಾಶಮಾಡಬೇಕೆಂದು
ತೀರ್ಮಾನಿಸುತ್ತಾನೋ ಅವರನ್ನು ಹುಚ್ಚರನ್ನಾಗಿಸುತ್ತಾನೆ.

ಮಾನವ ಸ್ವಾವಲಂಬಿಯಾಗಲು ಗೀತೆ ಉತ್ತೇಜಿಸುತ್ತದೆ. ಪರಾವಲಂಬಿಗಳ ಸಹವಾಸದಿಂದ ಕೆಟ್ಟಂತೆ ಕಾಣುವ ರಾಮಕೃಷ್ಣರು ಗೀತೆಯನ್ನು ಶಾಲೆಗಳಲ್ಲಿ ಪರಿಚಯಿಸುವುದನ್ನು ವಿರೋಧಿಸುವ ಮೂಲಕ ಮುಂದಿನ ಪೀಳಿಗೆ ಸ್ವಾವಲಂಬಿಯಾಗುವುದನ್ನು ತಡೆಯುತ್ತಾರೇಕೆ? ಖ್ಯಾತ ವಿಜ್ಞಾನಿಗಳೂ, ದಾರ್ಶನಿಕರೂ, ನೊಬೆಲ್ ಪುರಸ್ಕೃತರೂ, ಇತರೆ ಮೇಧಾವಿಗಳೂ ಗೀತೆಯ ಮಹತ್ವ ವನ್ನು ಪ್ರಶಂಸಿಸಿದ್ದಾರೆ.

ವಿಜ್ಞಾನದ ವಿದ್ಯಾರ್ಥಿಯಲ್ಲದಿದ್ದರೂ (ವಿಜ್ಞಾನದ ಗಂಧವಿಲ್ಲದ ಸಹ-ಪ್ರತಿಭಟನಾಕಾರರ ಒಡನಾಟವಿದ್ದೂ) ರಾಮಕೃಷ್ಣರು ಭಾರತೀಯ ವಿಜ್ಞಾನದ ಹಾದಿ ಎಂಬ ಪುಸ್ತಕವನ್ನು ಬರೆದಿದ್ದಾರೆ. ಕಮ್ಯುನಿಸಮ್ ಕೊಂಪೆಯ ಕಾರ್ಗತ್ತಲಲ್ಲಿ ಮುಳುಗಿದ ಕೋಲ್ಕತಾ ದಲ್ಲೂ ಹಿರಿಯ ಕಾಮ್ರೇಡ್‌ಗಳ ಜತೆ ಸಂಪರ್ಕವಿರುವ ಅವರಿಗೆ ಗೀತೆಯ ಬೆಳಕು ಬೇಡವಾದರೆ ಪರವಾಗಿಲ್ಲ, ಭವಿತ ವ್ಯದ ನಾಗರಿಕರನ್ನೂ ಅಡ್ಡದಾರಿಗೆ ಎಳೆಯಲು ಅವರಿಗೇನು ಹಕ್ಕು? ಹಾಜರಾತಿ ಪಡೆದು, ಅನಾಸಕ್ತರು ಕ್ಲಾಸಿನಿಂದ ಜಬರ್ದಸ್ತಿ ನಿಂದ ಎದ್ದುಹೋಗುತ್ತಿದ್ದುದಕ್ಕೆ ಅಭ್ಯಂತರ ವ್ಯಕ್ತಪಡಿಸದಿದ್ದ ರಾಮಕೃಷ್ಣರು ಅವರ ಮಾಜಿ ವಿದ್ಯಾರ್ಥಿಯಾದ ನನ್ನ
ಒಂದೆರಡೇ ಪ್ರಶ್ನೆಗಳನ್ನು ಕಡೆಗಣಿಸಲಾರರೆಂಬ ಭರವಸೆ ನನ್ನದು.

ಪರಿಷ್ಕರಿಸಲಾದ ಪಠ್ಯದ ಬಗ್ಗೆ ನಿಮ್ಮ ಪರಿವಾರದವರು ಎತ್ತಿದ ಆಕ್ಷೇಪಣೆಗಳನ್ನು ಸಂಬಂಧಪಟ್ಟವರು ಸಮರ್ಪಕವಾಗಿ ಉತ್ತರಿಸಿದ ನಂತರವೂ ನಿಮ್ಮ ಶೋಕ ಶಮನವಾಗಲಾರದೇಕೆ? ನಿಮಗೆ ಬೇಡವಾದ ಪುಸ್ತಕವನ್ನು ಹರಿದದ್ದಕ್ಕೆ, ಅದರಲ್ಲಿರುವ ಬೇಕಾದ ಗಣ್ಯರನ್ನು ಅವಮಾನಿಸಿದಂತೆಂದು ನಿಮಗೆ ಅನಿಸುವುದಿಲ್ಲವೇ? ಉತ್ತರಿಸಿದ ನಂತರವೂ ಪ್ರತಿಭಟನೆ ನಡೆಸುವುದು, ಸಮರ್ಥನೆಯೇ ಇಲ್ಲದ ವಿವಾದಗಳನ್ನು ಸೃಷ್ಟಿಸುವುದು, ಬೀದಿ ರಂಪ ಮಾಡುವುದು, ಇವುಗಳೇ ಪ್ರಜಾಸತ್ತೆಯಾದರೆ ಈ
ಪ್ರಜಾ ಸತ್ತೆ ನಮಗೆ ಬೇಡ.

ಕೋವಿಡ್ ಲಸಿಕೆ, ಸಿಎಎ ಕಾನೂನು, ಕೃಷಿ ನೀತಿ, ನೂಪುರ್ ಶರ್ಮಾ, ಸೋನಿಯಾ- ರಾಹುಲ್‌ಗೆ ಇಡಿ ಸಮನ್ಸ್, ಇದೀಗ ಅಗ್ನಿಪಥ್. ಎಲ್ಲದಕ್ಕೂ ಉಗ್ರ ಪ್ರತಿಭಟನೆ. ಸಂಸತ್ ಹೊರಗೂ, ಒಳಗೂ ಗಲಭೆ, ಉದ್ದೇಶಪೂರ್ವ ಗೊಂದಲ. ಕಲ್ಲು ತೂರು, ಬೆಂಕಿ ಹಚ್ಚು.
ಇವೆಲ್ಲದರ ಹಿಂದೆ ಮೋದಿಯ ತಲೆ ಉರುಳಲೆಂಬ ಹುನ್ನಾರ. ಇವೆಲ್ಲ ಹಿಂಸೆ, ಅರೆಹಿಂಸೆಯ ವರ್ತಕರಿಗೆ ಪ್ರಜಾಸತ್ತೆ ಕಾಲಕಸ. ಈ ವಿದ್ಯಮಾನ ಇಂದು ನೆನ್ನೆಯದಲ್ಲ ಎಂಬುದು ಕಾಂಗ್ರೆಸ್ ಇತಿಹಾಸವನ್ನೋದಿದ ಎಲ್ಲರಿಗೂ ಸರ್ವವಿದಿತ.

ದೇಶದ ನೇತೃತ್ವವನ್ನು ಜನಾದೇಶದಿಂದ ಹೊತ್ತ ನರೇಂದ್ರ ಮೋದಿಗೇಕೆ ಇನ್ನೂ ಪ್ರಜಾಪ್ರಭುತ್ವದ ಮೌಲ್ಯಗಳಲ್ಲಿ ಅಚಲ
ವಿಶ್ವಾಸ. ಇದೇ ವಿಶ್ವಾಸ ಮುಂದುವರಿದರೆ ಅದು ಅಸಹಜ ವೆಂಬಂತೆ ಕಾಣುವ ಸಾಧ್ಯತೆ ಇದೆ. ಸಾವಿರ ಅಪರಾಧಿಗಳು ಖುಲಾಸೆ ಗೊಂಡರೂ ಸರಿ, ಒಬ್ಬ ನಿರಪರಾಧಿಗೆ ಶಿಕ್ಷೆಯಾಗಬಾರದೆಂಬ ನ್ಯಾಯನಿರ್ಣಯದ ಮೂಲಭೂತ ಪರಿಕಲ್ಪನೆಯನ್ನು ಮೋದಿ ಎಲ್ಲ ಸಂದರ್ಭಕ್ಕೂ ವಿಸ್ತರಿಸುತ್ತಿದ್ದಾರೆಯೇ? ಅದಕ್ಕನುಗುಣವಾಗಿ, ಶಿಕ್ಷಾರ್ಹ ಅಪರಾಧವನ್ನೆಸಗಿದ ನೂರು ಮುಸ್ಲಿಮರು ಶಿಕ್ಷೆ ಗೊಳಗಾಗ ದಿದ್ದರೂ ಸರಿ, ಒಬ್ಬನೇ ಒಬ್ಬ ಸಂತ್ರಸ್ತ ಹಿಂದೂವಿಗೆ ನ್ಯಾಯ ದೊರಕಬಾರದೆಂಬ ಅಲಿಖಿತ ನಿಯಮ ಜಾರಿಯಲ್ಲಿ ದ್ದಂತಿದೆ.

ಹಿಂದೂಗಳು ಬಹುಸಂಖ್ಯಾತರಿರುವ ಭಾರತದಲ್ಲಿ ಕಾನೂನುಪರಿಪಾಲಕ ಹಿಂದೂಗಳ ಹಿತರಕ್ಷಣೆ ಮಾಡುವುದು ಸೆಕ್ಯುಲರ್ ಅಲ್ಲವಾದರೆ, ಅಂತಹ ಸೆಕ್ಯುಲರಿಸಮ್ಮನ್ನು ಕಿತ್ತೊಗೆಯಿರಿ. ಜನಕ್ಕೆ ದ್ರೋಹ ಬಗೆದ ವಂಚಕ ನಾಯಕರನ್ನು ಇಡಿ (ED) ವಿಚಾರಣೆ ಮಾಡುವುದನ್ನು ವಿರೋಧಿಸುವವರನ್ನು ಬಂಧಿಸುವುದು ಪ್ರಜಾಸತ್ತೆಯಲ್ಲದಿದ್ದರೆ ನಮಗೆ ಅಂತಹ ಪ್ರಜಾಸತ್ತೆ ಬೇಕು. ತರುಣರು ಸಾರ್ವಜನಿಕ ಆಸ್ತಿಪಾಸ್ತಿಗೆ ಕೊಳ್ಳಿ ಇಡದಂತೆ ಅವರನ್ನು ಅಗ್ನಿಪಥದಲ್ಲಿ ನಡೆಸಿ ಜವಾಬ್ದಾರಿ ಪ್ರಜೆಗಳಾಗಿ ರೂಪಿಸುವ ಕ್ರಮದ ಅಗತ್ಯವನ್ನು ಅದರ ವಿರೋಧಿಗಳು ಪರೋಕ್ಷವಾಗಿ ಸಮರ್ಥಿಸಿದ್ದಾರೆ.

ಮೋದಿಯವರೇ, ನನ್ನೂರಿಗೆ ಬಂದಿದ್ದೀರಿ. ನಿಸ್ವಾರ್ಥದಿಂದ, ದೇಶದ ಹಿತಕ್ಕಾಗಿ ನೀವು ತೆಗೆದುಕೊಳ್ಳುವ ಪ್ರತಿ ಹೆಜ್ಜೆಗೂ ಅಡೆತಡೆ ಒಡ್ಡುವ ದುಷ್ಟರನ್ನು ಇನ್ನೆಷ್ಟು ದಿನ ಸಹಿಸುತ್ತೀರಿ? ಅಂತರ ರಾಷ್ಟ್ರೀಯ ಯೋಗ ದಿನ ಘೋಷಿತವಾಗಿದ್ದೇ ನಿಮ್ಮಿಂದ. ಸ್ವಯಂ ಯೋಗಪಟುವಾದ ನೀವು ಈ ಶುಭದಿನದಂದು ಮತ್ತಷ್ಟು ಯೋಗಶಕ್ತಿಯನ್ನು ಪಡೆಯಿರಿ. ಆ ಸಾತ್ವಿಕ ಶಕ್ತಿಯಿಂದ ದುಷ್ಟರನ್ನೂ, ಅಯೋಗ್ಯರನ್ನೂ ನಿರ್ದಾಕ್ಷಿಣ್ಯ ಸದೆಬಡಿಯಿರಿ. ತಾಯಿ ಚಾಮುಂಡಿ ಆ ಚೈತನ್ಯ, ಮನೋಬಲವನ್ನೂ ನೀಡಲಿ. ಶಾಂತಿ, ನೆಮ್ಮದಿ ನೆಲೆಸಲು ಯೋಗವೊಂದೇ ಸಾಲದು, ಪ್ರಜಾಸತ್ತೆಯ ಆಶಯವನ್ನು ಉಲ್ಲಂಘಿಸಿ ಬೀದಿಗಿಳಿಯುವ ಪುಂಡರನ್ನು ಹತ್ತಿಕ್ಕುವ
ಛಲವೂ ಬೇಕು. ಅದು ನಿಮ್ಮಲ್ಲಿಲ್ಲದಿದ್ದರೆ ಬೇರಾರಲ್ಲಿ ಕಂಡೇವು?

error: Content is protected !!