Sunday, 19th May 2024

ವಿವಿಧೆಡೆ ಸಿಲುಕಿರುವ ಲಡಾಕ್ ಜನರಿಗೆ ಸರಕಾರ ನೆರವಾಗಿಲ್ಲ ಎಂಬ ಆರೋಪ: ಬಿಜೆಪಿ ಅಧ್ಯಕ್ಷ ದೋರ್ಜೆ ರಾಜೀನಾಮೆ

ಜಮ್ಮು:

ಹಠಾತ್ ಬೆಳವಣಿಗೆಯೊಂದರಲ್ಲಿ ಬಿಜೆಪಿಯ ಲಡಾಕ್ ಘಟಕದ ಅಧ್ಯಕ್ಷ ಚೆರಿಂಗ್ ದೋರ್ಜೆ ಸೋಮವಾರ ತನ್ನ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಲಾಕ್‌ಡೌನ್‌ನಿಂದಾಗಿ ದೇಶದ ವಿವಿಧೆಡೆ ಸಿಲುಕಿರುವ ಲಡಾಕ್‌ನ ಜನತೆಯನ್ನು ಕರೆತರಲು ಆಡಳಿತವು ವಿಫಲವಾಗಿರುವುದಕ್ಕಾಗಿ ರಾಜೀನಾಮೆ ಸಲ್ಲಿಸಿರುವುದಾಗಿ ಅವರು ತಿಳಿಸಿದ್ದಾರೆ.

ಲಾಕ್‌ಡೌನ್‌ನಿಂದಾಗಿ ದೇಶದ ವಿವಿಧೆಡೆ ಸಿಲುಕಿಕೊಂಡಿರುವ ಲಡಾಕ್ ಜನರ ಬಗ್ಗೆ ಆಡಳಿತವು ಸಂವೇದನಾರಹಿತವಾಗಿ ವರ್ತಿಸುತ್ತಿದೆ ಎಂದು ಚೆರಿಂಗ್ ದೋರ್ಜೆ ಅವರು ಪಕ್ಷದ ಅಧ್ಯಕ್ಷ ಜೆ.ಪಿ. ನಡ್ಡಾ ಅವರಿಗೆ ಸಲ್ಲಿಸಿದ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ. ಪ್ರವಾಸಿಗರು, ರೋಗಿಗಳು, ಯಾತ್ರಿಕರು ಹಾಗೂ ವಿದ್ಯಾರ್ಥಿಗಳು ಸೇರಿದಂತೆ ಲಡಾಕ್‌ನ ಸುಮಾರು 2 ಸಾವಿರ ಮಂದಿ ದೇಶದ ವಿವಿಧೆಡೆ ಸಿಕ್ಕಿಹಾಕಿಕೊಂಡಿದ್ದಾರೆಂದು ಅವರು ತಿಳಿಸಿದ್ದಾರೆ.

‘‘ದೇಶಭಕ್ತ ಲಡಾಕ್ ಜನತೆ 1948ರಿಂದೀಚೆಗೆ ನಡೆದ ಎಲ್ಲಾ ಯುದ್ಧಗಳಲ್ಲೂ ಭಾರತೀಯ ಸಶಸ್ತ್ರ ಪಡೆಗಳ ಬೆಂಬಲಕ್ಕೆ ನಿಂತಿದ್ದರು. ಆದರೆ ಅವರನ್ನು ಕೇಂದ್ರಾಡಳಿತದ ಅಧಿಕಾರಿಗಳು ತುಚ್ಛವಾಗಿ ಹಾಗೂ ಅಗೌರವದಿಂದ ನಡೆಸಿಕೊಳ್ಳುತ್ತಿದ್ದಾರೆ ’’ ಎಂದು ದೋರ್ಜೆ ಅವರು ಬಿಜೆಪಿ ಅಧ್ಯಕ್ಷ ನಡ್ಡಾ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಈ ವಿಷಯವನ್ನು ಲಡಾಕ್‌ನ ಲೆಫ್ಟಿನೆಂಟ್ ಗವರ್ನರ್ ರಾಧಾ ಕೃಷ್ಣ ಮಾಥುರ್ ಹಾಗೂ ಬಿಜೆಪಿಯ ಉಪಾಧ್ಯಕ್ಷ ಮತ್ತು ಲಡಾಕ್‌ನಲ್ಲಿ ಪಕ್ಷದ ಉಸ್ತುವಾರಿಯಾದ ಅವಿನಾಶ್ ರಾಯ್ ಖನ್ನಾ ಅವರಿಗೆ ತಿಳಿಸಿದ್ದೆ. ಅದರೆ ಈ ಬಗ್ಗೆ ಪಕ್ಷದ ಹೈಕಮಾಂಡ್‌ನಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ತನಗೆ ಪಕ್ಷಾಧ್ಯಕ್ಷ ಹುದ್ದೆ ಹಾಗೂ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡದೆ ಬೇರೆ ಆಯ್ಕೆ ಇರಲಿಲ್ಲ ಎಂದು ದೋರ್ಜೆ ತಿಳಿಸಿದ್ದಾರೆ.

#Resignation #Dhorje #INCKarnataka #BJP4Karnataka #EconomicTsunami

Leave a Reply

Your email address will not be published. Required fields are marked *

error: Content is protected !!