Thursday, 24th October 2024

ಕೂದಲೆಳೆ ಅಂತರದಲ್ಲಿ ಮತ್ತೊಂದು ರೈಲು ಅಪಘಾತ ಮಿಸ್..!

ಬೊಕಾರೊ: ಭುವನೇಶ್ವರದಿಂದ ದೆಹಲಿಗೆ ಹೋಗುತ್ತಿದ್ದ ರಾಜಧಾನಿ ಎಕ್ಸ್‌ಪ್ರೆಸ್ ಟ್ರ್ಯಾಕ್ಟರ್‌ಗೆ ಡಿಕ್ಕಿ ಹೊಡೆದಿದ್ದು, ಚಾಲಕನ ಸಮಯಪ್ರಜ್ಞೆಯಿಂದ ನೂರಾರು ಜನರ ಪ್ರಾಣ ಉಳಿದಿದೆ. ಸಂತಾಲ್ದಿಹ್ ರೈಲ್ವೇ ಕ್ರಾಸಿಂಗ್​​ನಲ್ಲಿ ಈ ಅಪಘಾತ ಸಂಭವಿಸಿದೆ.

ಗೊಮೊಹ್ ಮತ್ತು ಅದ್ರಾ ನಡುವಿನ ಭೋಜುಡಿಹ್ ರೈಲ್ವೆ ವಿಭಾಗದ ಸಂತಾಲ್ದಿಹ್ ರೈಲ್ವೆ ಕ್ರಾಸಿಂಗ್‌ನಲ್ಲಿ ಅಪಘಾತ ಸಂಭವಿಸಿದೆ. ಅದೃಷ್ಟವಶಾತ್ ಅಪಘಾತದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂಬುದು ತಿಳಿದು ಬಂದಿದೆ.

ಟ್ರ್ಯಾಕ್ಟರ್‌ಗೆ ರಾಜಧಾನಿ ಎಕ್ಸ್‌ಪ್ರೆಸ್‌ ಡಿಕ್ಕಿ ಹೊಡೆದ ಸುದ್ದಿ ತಿಳಿದ ತಕ್ಷಣ ರೈಲ್ವೆ ಸಿಬ್ಬಂದಿ ಭೋಜುಡಿಹ್ ರೈಲು ನಿಲ್ದಾಣದಲ್ಲಿ ಹಾಜರಿದ್ದ ರೈಲ್ವೆ ಸಿಬ್ಬಂದಿ ಮತ್ತು ಅಧಿಕಾರಿಗಳ ನಡುವೆ ಕೋಲಾಹಲ ಉಂಟಾಯಿತು. ಎಲ್ಲರೂ ತರಾತುರಿಯಲ್ಲಿ ಸ್ಥಳಕ್ಕೆ ದೌಡಾಯಿಸಿದರು. ಟ್ರ್ಯಾಕ್ಟರ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.

ಘಟನೆಯ ಗಂಭೀರತೆ ಹಿನ್ನೆಲೆ ರೈಲ್ವೆ ಗೇಟ್​ನಲ್ಲಿ ನಿಯೋಜಿಸಲಾಗಿದ್ದ ಗೇಟ್​ಮನ್​ನನ್ನು ರೈಲ್ವೆ ಇಲಾಖೆ ಅಮಾನತುಗೊಳಿಸಿದೆ. ರಾಜಧಾನಿ ಎಕ್ಸ್‌ಪ್ರೆಸ್‌ ಹಾದು ಹೋಗುವ ಮಾಹಿತಿ ಪಡೆದು ರೈಲ್ವೆ ಗೇಟ್‌ ಮುಚ್ಚಲು ವಿಳಂಬವಾಗಿದೆ. ಅದೇ ಸಮಯಕ್ಕೆ ಟ್ರ್ಯಾಕ್ಟರ್ ಗೇಟ್ ದಾಟುತ್ತಿತ್ತು ಎಂದು ತಿಳಿದು ಬಂದಿದೆ.

ರೈಲು ಬರುವ ಸಮಯ ಮತ್ತು ಟ್ರ್ಯಾಕ್ಟರ್​ ದಾಟುವ ಸಮಯ ಒಂದೇ ಆಗಿತ್ತು. ಆದರೆ ಕೊಂಚದರಲ್ಲೇ ಟ್ರ್ಯಾಕ್ಟರ್​ ಟ್ರಾಲಿ ರೈಲಿನಿಂದ ಪಾಸ್​ ಆಗಿದ್ದು, ಅಷ್ಟರಲ್ಲೇ ರೈಲಿನ ಚಾಲಕ ಬ್ರೇಕ್ ಹಾಕುವ ಮೂಲಕ ಉಗಿಬಂಡಿಯನ್ನು ನಿಲ್ಲಿಸಿದ್ದಾನೆ.

ಘಟನೆಯಲ್ಲಿ ರೈಲ್ವೆಗೆ ಹಾನಿಯಾಗಿಲ್ಲ. ಗೇಟ್ ಮ್ಯಾನ್ ನಿರ್ಲಕ್ಷ್ಯ ಬಯಲಿಗೆ ಬಂದಿದ್ದು, ಅಮಾನತು ಮಾಡಲಾಗಿದೆ. ಈ ಘಟನೆಯಲ್ಲಿ ರೈಲು ಸುಮಾರು 45 ನಿಮಿಷಗಳ ಕಾಲ ತಡವಾಗಿ ಸಂಚರಿಸಿತ್ತು.