Thursday, 18th April 2024

ಆರ್​ಬಿಐ ಉಪಗವರ್ನರ್ ಹುದ್ದೆಗೆ ಜೂನ್ 1ಕ್ಕೆ ಸಂದರ್ಶನ

ನವದೆಹಲಿ: ಜೂನ್ 1ಕ್ಕೆ ಆರ್​ಬಿಐ ಉಪಗವರ್ನರ್ ಹುದ್ದೆಗೆ ಸಂದರ್ಶನ ನಿಗದಿಯಾಗಿದೆ. ಒಂದು ಉಪ ಗವರ್ನರ್ ಸ್ಥಾನ ಖಾಲಿ ಇದೆ. ಈ ಹುದ್ದೆಗೆ ಐವರು ಅಭ್ಯರ್ಥಿಗಳ ಹೆಸರು ಶಾರ್ಟ್​ಲಿಸ್ಟ್ ಆಗಿರುವುದು ವರದಿಯಾಗಿದೆ.

ಕೇಂದ್ರ ಸಂಪುಟ ಕಾರ್ಯದರ್ಶಿ ನೇತೃತ್ವದಲ್ಲಿ ಹಣಕಾಸು ವಲಯ ನಿಯಂತ್ರಕ ನೇಮಕಾತಿ ಶೋಧ ಸಮಿತಿ  ದೆಹಲಿಯಲ್ಲಿ ಈ 5 ಅಭ್ಯರ್ಥಿಗಳ ಸಂದರ್ಶನ ನಡೆಸಲಿದೆ. ಈ ಸಮಿತಿಯಲ್ಲಿ ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್, ಹಣಕಾಸು ಸೇವೆಗಳ ಕಾರ್ಯದರ್ಶಿ ಹಾಗೂ ಇಬ್ಬರು ಸ್ವತಂತ್ರ ಸದಸ್ಯರಿದ್ದಾರೆ.

ಆರ್​ಬಿಐನ ಉಪಗವರ್ನರ್ ಎಂಕೆ ಜೈನ್ ಅವರ ಅವಧಿ ಜೂನ್ ತಿಂಗಳಲ್ಲಿ ಅಂತ್ಯಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಈ ಹುದ್ದೆ ನೇಮಕಾತಿಗೆ ಅರ್ಜಿ ಕರೆಯಲಾಗಿತ್ತು. ಹಲವು ಅರ್ಜಿಗಳ ಪೈಕಿ ಐವರ ಹೆಸರನ್ನು ಅಂತಿಮ ಗೊಳಿಸಲಾಗಿದೆ. ಜೂನ್ 1ರಂದು ನಡೆಯುವ ಸಂದರ್ಶನದಲ್ಲಿ ಆಯ್ಕೆ ಯಾಗುವ ಅಭ್ಯರ್ಥಿಯ ಹೆಸರನ್ನು ಸಂಪುಟದ ನೇಮಕಾತಿ ಸಮಿತಿಯ ಅನುಮೋದನೆಗಾಗಿ ಕಳುಹಿಸಿಕೊಡಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸಮಿತಿ ಇರುತ್ತದೆ.

ಅರ್​ಬಿಐನಲ್ಲಿ ಒಟ್ಟು ನಾಲ್ವರು ಉಪಗವರ್ನರ್​ಗಳಿರುತ್ತಾರೆ. ಸದ್ಯ ಎಂಕೆ ಜೈನ್, ಮೈಕೇಲ್ ದೇಬಬ್ರತ ಪಾತ್ರ, ರಾಜೇಶ್ವರ್ ರಾವ್ ಮತ್ತು ಟಿ ರಬಿ ಶಂಕರ್ ಅವರು ಉಪಗವರ್ನರ್​ಗಳಾಗಿದ್ದಾರೆ. ಎಂಕೆ ಜೈನ್ ಅವರ ಸ್ಥಾನ ತೆರವುಗೊಳ್ಳುತ್ತಿದೆ. ಇವರ ಸ್ಥಾನಕ್ಕೆ ನೇಮಕವಾಗುವ ನೂತನ ಉಪಗವರ್ನರ್ ಅವರ ಅವಧಿ 3 ವರ್ಷದ್ದಾಗಿರುತ್ತದೆ.

ಆರ್​ಬಿಐ ಉಪಗವರ್ನರ್ ಹುದ್ದೆಗೆ ತಿಂಗಳಿಗೆ 2.25 ಲಕ್ಷ ರೂ ಸಂಬಳ, ಜೊತೆಗೆ ಭತ್ಯೆ ಇರುತ್ತದೆ. ಇವರು ಬ್ಯಾಂಕಿಂಗ್ ಮತ್ತು ಹಣಕಾಸು ಮಾರುಕಟ್ಟೆ ಕಾರ್ಯಾಚರಣೆಯಲ್ಲಿ 15 ವರ್ಷ ಕೆಲಸ ಮಾಡಿದ ಅನುಭವಶಾಲಿಯಾಗಿರಬೇಕು. ಕಮರ್ಷಿಯಲ್ ಬ್ಯಾಂಕರ್​ಗಳನ್ನು ಈ ಹುದ್ದೆಗೆ ಪರಿಗಣಿಸಲಾಗುತ್ತಿದೆ. ಹಣಕಾಸು ವಲಯದಲ್ಲಿ ಅಭ್ಯರ್ಥಿಗಳಾದವರು ಪೂರ್ಣಾವಧಿ ನಿರ್ದೇಶಕ ರಾಗಿರಬೇಕು, ಅಥವಾ ಮಂಡಳಿ ಸದಸ್ಯರಾಗಿರಬೇಕು.

error: Content is protected !!