Friday, 2nd June 2023

ಏಕಕಾಲದಲ್ಲಿ ಅಭ್ಯರ್ಥಿ ಹೆಚ್ಚು ಕ್ಷೇತ್ರಗಳಿಂದ ಚುನಾವಣೆಗೆ ಸ್ಪರ್ಧೆಗೆ ತಡೆ: ಅರ್ಜಿ ವಜಾ

ವದೆಹಲಿ: ಒಂದೇ ಹುದ್ದೆಗೆ ಅಭ್ಯರ್ಥಿಯು ಏಕಕಾಲದಲ್ಲಿ ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಿಂದ ಚುನಾವಣೆಗೆ ಸ್ಪರ್ಧಿಸುವುದನ್ನು ನಿರ್ಬಂಧಿಸಲು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಜಾಗೊಳಿಸಿ, ಇದು ‘ಶಾಸಕಾಂಗ ನೀತಿ’ಯ ವಿಷಯವಾಗಿದೆ ಎಂದು ಗುರುವಾರ ಹೇಳಿದೆ.

ಹಲವು ಕಾರಣಗಳಿಗೆ ಅಭ್ಯರ್ಥಿಗಳು ವಿವಿಧ ಸ್ಥಾನಗಳಿಂದ ಚುನಾವಣೆಗೆ ಸ್ಪರ್ಧಿಸಬಹುದು ಮತ್ತು ಅಂತಹ ಆಯ್ಕೆ ಸಂಸತ್ತಿಗೆ ಬಿಟ್ಟಿದ್ದು ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಪೀಠ ಅಭಿಪ್ರಾಯಪಟ್ಟಿದೆ.

ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯ ಮೂರ್ತಿಗಳಾದ ಪಿ.ಎಸ್.ನರಸಿಂಹ, ಜೆ.ಬಿ.ಪರ್ಡಿವಾಲಾ ಪೀಠ ನಡೆಸಿತು.

ಉಪಾಧ್ಯಾಯ ಪರ ಹಾಜರಾದ ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್, ಅಭ್ಯರ್ಥಿಯು ಎರಡು ಕ್ಷೇತ್ರಗಳಿಂದ ಚುನಾವಣೆಯಲ್ಲಿ ಸ್ಪರ್ಧಿಸಿ ಎರಡರಿಂದಲೂ ಆಯ್ಕೆಯಾದರೆ, ಒಂದು ತೆರವು ಮಾಡಬೇಕಾಗುತ್ತದೆ. ಇದು ಉಪಚುನಾವಣೆಗೆ ಕಾರಣ ವಾಗುತ್ತದೆ. ಇದು ಬೊಕ್ಕಸಕ್ಕೆ ಹೆಚ್ಚುವರಿ ಆರ್ಥಿಕ ಹೊರೆಯಾಗಲಿದೆ ಎಂದು ಹೇಳಿದರು.

1996 ರ ತಿದ್ದುಪಡಿಗೆ ಮೊದಲು, ಅಭ್ಯರ್ಥಿಯು ಚುನಾವಣೆಯಲ್ಲಿ ಸ್ಪರ್ಧಿಸಬಹುದಾದ ಕ್ಷೇತ್ರಗಳ ಸಂಖ್ಯೆಗೆ ಯಾವುದೇ ನಿರ್ಬಂಧ ವಿರಲಿಲ್ಲ. ತಿದ್ದುಪಡಿಯು ಆ ಸಂಖ್ಯೆಯನ್ನು ಎರಡಕ್ಕೆ ಸೀಮಿತಗೊಳಿಸಿತು ಎಂದು ಹೇಳಿದರು.

error: Content is protected !!